ಭ್ರಷ್ಟಾಚಾರ, ಅಧಿಕಾರ-ಹಣ ದುರುಪಯೋಗ, ಅಕ್ರಮಗಳ ಸುತ್ತ ‘ದಿ ಫೈಲ್‌’ನ ಪ್ರಮುಖ 130 ವರದಿಗಳು

photo credit;thenewsminute

ಬೆಂಗಳೂರು; ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರ ಗದ್ದುಗೆ ಹಿಡಿದಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿರಿಸಿಕೊಂಡು ಪ್ರಜಾಧ್ವನಿ ಯಾತ್ರೆ ನಡೆಸಿದ್ದ ಕಾಂಗ್ರೆಸ್‌ 136 ಸ್ಥಾನ ಗೆದ್ದ ನಂತರವೂ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರ, ದುರಾಡಳಿತದಿಂದಾಗಿಯೇ ಜನರು ಕಾಂಗ್ರೆಸ್‌ಗೆ ಮತ ನೀಡಿ ಬೆಂಬಲಿಸಿವೆ ಎಂದು ಘೋಷಿಸಿದೆ.

 

ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಅವಧಿ ಪೂರ್ವದಲ್ಲಿಯೇ ಆಪರೇಷನ್‌ ಕಮಲದ ಮೂಲಕ ಅಧಿಕಾರ ಗದ್ದುಗೆ ಹಿಡಿದಿದ್ದ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆರಂಭದ ಎರಡು ವರ್ಷದಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರ ಅವಧಿಯವರೆಗೂ ‘ದಿ ಫೈಲ್‌’ ನಿರಂತರವಾಗಿ ಈ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ನೀತಿನಿರೂಪಣೆಯಲ್ಲಿನ ದೋಷಗಳು, ಸಾಮಾಜಿಕ ಅನ್ಯಾಯ ಹೀಗೆ ಹತ್ತಾರು ವಿಚಾರಗಳಿಗೆ ಸಂಬಂಧಿಸಿದಂತೆ ಆರ್‌ಟಿಐ ಸೇರಿದಂತೆ ವಿವಿಧ ದಾಖಲೆ ಸಹಿತ ವರದಿಗಳನ್ನು ಪ್ರಕಟಿಸಿತ್ತು.

 

ಇದೀಗ ಕಾಂಗ್ರೆಸ್‌ ಕೂಡ ಇದೇ ವಿಚಾರಗಳನ್ನೇ ಮತ್ತೆ ಮತ್ತೆ ಪುನರುಚ್ಛರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದಲೂ ‘ದಿ ಫೈಲ್‌’ ಪ್ರಮುಖವಾಗಿ ಭ್ರಷ್ಟಾಚಾರ ಕುರಿತಂತೆ ಪ್ರಕಟಿಸಿರುವ ವರದಿಗಳನ್ನು ಕ್ರೋಢೀಕರಿಸಿ ಇಲ್ಲಿ ಮತ್ತೊಮ್ಮೆ ಕೊಡಲಾಗಿದೆ.

 

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೊದಲ ವರ್ಷದಲ್ಲೇ ಕೋವಿಡ್‌ ಮೊದಲ ಅಲೆ ಅಪ್ಪಳಿಸಿತ್ತು. ಮೊದಲ ಅಲೆ ಮತ್ತು ಎರಡನೇ ಅಲೆ ಅವಧಿಯವರೆಗೂ ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಬಿ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್‌ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

 

ಇದೇ ಅವಧಿಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ‘ದಿ ಫೈಲ್‌’ 2020ರಿಂದ 2021ರವರೆಗೂ ನಿರಂತರವಾಗಿ ಬೆನ್ನೆತ್ತಿ ದಾಖಲೆಗಳ ಸಮೇತ 50 ವರದಿಗಳನ್ನು ಪ್ರಕಟಿಸಿತ್ತು.

 

‘ದಿ ಫೈಲ್‌’ ಹೊರಗೆಡವಿದ ಕೋವಿಡ್‌ ಭ್ರಷ್ಟಾಚಾರದ 50 ಮುಖಗಳು

 

ಕೋವಿಡ್‌ ಲಸಿಕೆ ಖರೀದಿ ಕುರಿತು ದಿ ಫೈಲ್‌ 26 ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿತ್ತು.

 

ಕೋವಿಡ್‌ ಲಸಿಕೆ ಖರೀದಿ ಹಿಂದಿನ ವ್ಯವಹಾರಗಳ ಸುತ್ತ ‘ದಿ ಫೈಲ್‌’ನ 26 ವರದಿಗಳು

 

ಕೋವಿಡ್‌ ಅವಧಿಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ‘ದಿ ಫೈಲ್‌’ ವರದಿ ಪ್ರಕಟಿಸಿದ ನಂತರ ಕರ್ನಾಟಕ ರಾಷ್ಟ್ರಸಮಿತಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ದಾಖಲಿಸಿತ್ತು. ಸಮಿತಿಯ ಅಧ್ಯಕ್ಷರಾಗಿದ್ದ ಹೆಚ್‌ ಕೆ ಪಾಟೀಲ್‌ ಅವರು ದೂರಿನ ವಿಚಾರಣೆ ಕೈಗೆತ್ತಿಕೊಂಡಿದ್ದರು. ಇವರ ನಂತರ ರಾಮಲಿಂಗಾರೆಡ್ಡಿ ಅವರೂ ಸಹ ಇದೇ ದೂರನ್ನು ಪರಿಶೀಲಿಸಿದ್ದರು. ಇವರಿಬ್ಬರೂ ಮಧ್ಯಂತರ ವರದಿಯನ್ನು ಸಿದ್ಧಪಡಿಸಿದ್ದರು. ಅದರೆ ಈ ಎರಡೂ ವರದಿಗಳನ್ನು ವಿಧಾನಸಭೆಗೆ ಮಂಡಿಸಲು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುಮೋದನೆ ನೀಡಿರಲಿಲ್ಲ. ಈ ಕುರಿತು ‘ದಿ ಫೈಲ್‌’ ವರದಿಯನ್ನು ಪ್ರಕಟಿಸಿತ್ತು.

 

ಕೋವಿಡ್‌ ಭ್ರಷ್ಟಾಚಾರ; ಮಧ್ಯಂತರ ವರದಿ ಮಂಡನೆಗೆ ಎರಡನೇ ಬಾರಿಯೂ ಸಿಗದ ಅನುಮತಿ

 

ಕೋವಿಡ್‌ನಿಂದ ಬಾಧಿತರಾಗಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಶುಲ್ಕವನ್ನು ಸರ್ಕಾರವೇ ನಿಗದಿಪಡಿಸಿತ್ತು. ಆದರೆ ಬೆಂಗಳೂರು ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ಸರ್ಕಾರ ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಅಧಿಕ ಶುಲ್ಕವನ್ನು ವಸೂಲಿ ಮಾಡಿದ್ದವು. ಆದರೂ ಸರ್ಕಾರವು ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ. ‘ದಿ ಫೈಲ್‌’ ಅರ್‌ಟಿಐ ಮೂಲಕ ಅಧಿಕ ಶುಲ್ಕ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಬಹಿರಂಗಗೊಳಿಸಿತ್ತು.

 

ಕೋವಿಡ್‌ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ; ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪಟ್ಟಿ ಬಹಿರಂಗ

 

ಚಾಮರಾಜನಗರದಲ್ಲಿ ಸಕಾಲದಲ್ಲಿ ಆಮ್ಲಜನಕ ದೊರಕದೇ ಇದ್ದ ಕಾರಣ 24ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಸಾವಿಗೆ ಆಕ್ಸಿಜನ್‌ ಕೊರತೆಯೇ ಕಾರಣ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿನ ಸಮಿತಿಯೇ ವರದಿ ನೀಡಿದ್ದರು. ಈ ವರದಿಯನ್ನು ಲೋಕಸಭೆಗೆ ನೀಡದೇ ಮುಚ್ಚಿಡಲಾಗಿತ್ತು. ಇದನ್ನು ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಆಕ್ಸಿಜನ್‌ ಕೊರತೆಯಿಂದಾದ ಸಾವುಗಳು; ಕೇಂದ್ರಕ್ಕೆ ಎರಡನೇ ಬಾರಿಯೂ ಮಾಹಿತಿ ನೀಡದ ರಾಜ್ಯ

 

ನೀರಾವರಿ ನಿಗಮಗಳಲ್ಲಿ 874 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿತ್ತು ಎಂದು ‘ದಿ ಫೈಲ್‌’ ಆರ್‌ಟಿಐ ದಾಖಲೆಗಳ ಮೂಲಕ ಹೊರಗೆಡವಿತ್ತು.

 

ನೀರಾವರಿ ನಿಗಮಗಳಲ್ಲಿ 874.44 ಕೋಟಿ ರು. ಅಕ್ರಮ; ವಿಚಕ್ಷಣಾ ದಳದ ತನಿಖೆಗೆ ಆದೇಶ

 

ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ಗೆ ಒತ್ತಾಯ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಪ್ರಧಾನಿಗೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ವಿಚಾರಣೆ ನಡೆಸಬೇಕು ಎಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಇಲಾಖೆಗೆ ಸೂಚಿಸಿದ್ದರು. ಆದರೆ ಇಂತಹ ಯಾವುದೇ ಪ್ರಕರಣವು ನಡೆದಿಲ್ಲ ಎಂದು ಇಲಾಖೆಯು ವರದಿ ಸಲ್ಲಿಸಿತ್ತು. ಇದನ್ನೂ ಸಹ ಅರ್‌ಟಿಐ ಮೂಲಕ ‘ದಿ ಫೈಲ್‌’ ಹೊರಗೆಳೆದಿತ್ತು.

 

40 ಪರ್ಸೆಂಟ್‌ ಕಮಿಷನ್‌ ಹಗರಣಕ್ಕೆ ಕ್ಲೀನ್‌ ಚಿಟ್‌; ತನಿಖೆ ನಡೆಸದೆಯೇ ಮಣ್ಣೆಳೆದು ಮುಚ್ಚಿ ಹಾಕಿದ ಸರ್ಕಾರ

 

ನಾರಾಯಣಪುರ ಎಡದಂಡೆ ನಾಲೆ ಆಧುನೀಕರಣ, ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಗುತ್ತಿಗೆಯನ್ನು ನೀಡಲಾಗಿದ್ದನ್ನು ‘ದಿ ಫೈಲ್‌’ ಆರ್‌ಟಿಐ ಮೂಲಕ ಹೊರಗೆಳೆದಿತ್ತು.

 

ನಾರಾಯಣಪುರ ಎಡದಂಡೆ ಕಾಲುವೆ; ನಿಯಮ ಉಲ್ಲಂಘಿಸಿ 465 ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆ

 

ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಅನುಮೋದನೆಯಿಲ್ಲದೆಯೇ 702 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಿತ್ತು. ಇದನ್ನೂ ಸಹ ‘ದಿ ಫೈಲ್‌’ ದಾಖಲೆ ಸಹಿತ ಸರಣಿ ವರದಿ ಪ್ರಕಟಿಸಿತ್ತು.

 

ತುಂಗಾ ಮೇಲ್ದಂಡೆ ಯೋಜನೆ; ಅನುಮೋದನೆಯಿಲ್ಲದೆಯೇ 702 ಕೋಟಿ ಹೆಚ್ಚುವರಿ ವೆಚ್ಚ

 

ಅಧಿಕಾರಿ ನೌಕರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಅರೋಪಕ್ಕೆ ಬಿಜೆಪಿ ಸರ್ಕಾರದಲ್ಲಿ 3 ಸಚಿವರು ಗುರಿಯಾಗಿದ್ದರು. ಈ ಸಂಬಂಧ ‘ದಿ ಫೈಲ್‌’ ದಾಖಲೆ ಸಹಿತ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಲಂಚ; ಗೋಪಾಲಯ್ಯ ಒಬ್ಬರೇ ಅಲ್ಲ, 3 ಸಚಿವರ ವಿರುದ್ಧ ಇವೆ ಗಂಭೀರ ಆರೋಪ

 

ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮೈಗಳ್ಳತನ ತೋರಿದ್ದರು. ಹೀಗಾಗಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಧೂಳು ಹಿಡಿಸಿದ್ದರು. ಈ ಸಂಬಂಧ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

 

ಜಲಸಂಪನ್ಮೂಲ ಇಲಾಖೆ ಸೇರಿ ಹಲವು ಇಲಾಖೆಗಳಲ್ಲಿ ಪ್ರಗತಿ ಕುಂಠಿತವಾಗಿದೆ ಎಂದು ಕೆಡಿಪಿ ಸಭೆಯ ನಡವಳಿಗಳನ್ನಾಧರಿಸಿ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಪ್ರಗತಿ ಕುಂಠಿತ; ಜಲಸಂಪನ್ಮೂಲ, ಕೃಷಿ ಸೇರಿ 13 ಇಲಾಖೆಗಳಿಗೆ ಶೇ. 40ಕ್ಕಿಂತ ಕಡಿಮೆ ಅನುದಾನ ಬಿಡುಗಡೆ

 

2022-23ನೇ ಸಾಲಿನ ಆರ್ಥಿಕ ವರ್ಷಾಂತ್ಯದಲ್ಲಿದ್ದರೂ 79,555 ಕೋಟಿಗೂ ಹೆಚ್ಚು ಹಣ ಖರ್ಚಾಗಿರಲಿಲ್ಲ ಎಂದೂ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

2022-23ನೇ ಬಜೆಟ್; ಆರ್ಥಿಕ ವರ್ಷಾಂತ್ಯದಲ್ಲಿದ್ದರೂ 79,255 ಕೋಟಿ ರು. ವೆಚ್ಚವೇ ಆಗಿಲ್ಲ

 

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಿಡಿಗಾಸು ಕೂಡ ಬಂದಿರಲಿಲ್ಲ. ಇದನ್ನು ದಾಖಲೆ ಸಹಿತ ‘ದಿ ಫೈಲ್‌’ ವರದಿ ಮೂಲಕ ಬಹಿರಂಗಗೊಳಿಸಿತ್ತು.

 

ಕೇಂದ್ರ ಪುರಸ್ಕೃತ ಯೋಜನೆ; 8 ಇಲಾಖೆಗಳಿಗಿಲ್ಲ ಬಿಡಿಗಾಸು, ಕೇಂದ್ರದಿಂದಲೇ 16,534 ಕೋಟಿ ಬಾಕಿ

 

ವರ್ಷ ಉರುಳಿದರೂ 122 ಯೋಜನೆಗಳಿಗೆ ಚಾಲನೆಯೇ ಸಿಕ್ಕಿರಲಿಲ್ಲ. ದಾಖಲೆ ಸಹಿತ ದಿ ಫೈಲ್‌ ವರದಿ ಪ್ರಕಟಿಸಿತ್ತು.

 

 

ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ

ಕೇಂದ್ರ ಪುರಸ್ಕೃತ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 22 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದ್ದನ್ನೂ ದಿ ಫೈಲ್‌ ಹೊರಗೆಳೆದಿತ್ತು.

 

ಕೇಂದ್ರ ಪುರಸ್ಕೃತ ಯೋಜನೆ; 20,111.36 ಕೋಟಿ ರು. ಬಾಕಿ ಉಳಿಸಿಕೊಂಡ ಕೇಂದ್ರ, ರಾಜ್ಯ ಸರ್ಕಾರ

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿ ಸೇರಿದಂತೆ ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ಕಾನೂನುಬಾಹಿರವಾಗಿ ಗೋಮಾಳವನ್ನು ಮಂಜೂರು ಮಾಡಿದ್ದನ್ನು ‘ದಿ ಫೈಲ್‌’ ಆರ್‌ಟಿಐ ದಾಖಲೆ ಮೂಲಕ ಜಗಜ್ಜಾಹೀರುಗೊಳಿಸಿತ್ತು. ಈ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಅಬಕಾರಿ ಸಚಿವರಾಗಿದ್ದ ಹೆಚ್‌ ನಾಗೇಶ್‌ ಅವರು ಜಂಟಿ ಆಯುಕ್ತರ ವರ್ಗಾವಣೆಗೆ ಒಂದು ಕೋಟಿ ರು ಲಂಚಕ್ಕೆ ಬೇಡಿಕೆ ಇರಿಸಿದ್ದರು. ಪ್ರಧಾನಿ ಕಚೇರಿಗೆ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

1 ಕೋಟಿ ಬೇಡಿಕೆ; ಸಚಿವ ನಾಗೇಶ್‌ ವಿರುದ್ಧ ಪ್ರಧಾನಿಗೆ ದೂರು ಸಲ್ಲಿಕೆ

 

ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ನಾಗೇಶ್‌ ಅವರು ‘ದಿ ಫೈಲ್‌’ ಜಾಲತಾಣವನ್ನು ಉಲ್ಲೇಖಿಸಿ ಸುದ್ದಿಗೋಷ್ಠಿ ನಡೆಸಿದ್ದರು. ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದರು. ಆದರೆ ಈ ಸಂಬಂಧ ಯಾವುದೇ ಅಧಿಕೃತವಾಗಿ ಆದೇಶ ಹೊರಬಿದ್ದಿರಲಿಲ್ಲ.

 

ಸಚಿವ ನಾಗೇಶ್‌ರನ್ನು ತಲ್ಲಣಗೊಳಿಸಿದ ‘ದಿ ಫೈಲ್‌’ ವರದಿ; ಪ್ರಕರಣ ತನಿಖೆಗೆ ಆದೇಶ

ಇದಾದ ಕೆಲವೇ ದಿನಗಳಲ್ಲಿ ಪಕ್ಷವು ಅವರಿಂದ ರಾಜೀನಾಮೆಯನ್ನೂ ಪಡೆದುಕೊಂಡಿತ್ತು.

 

‘ದಿ ಫೈಲ್‌’ ವರದಿ ಪರಿಣಾಮ; ಸಚಿವ ನಾಗೇಶ್‌ರಿಂದ ರಾಜೀನಾಮೆ ಪಡೆದ ಮುಖ್ಯಮಂತ್ರಿ

 

ಈ ಮಧ್ಯೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ರೋಹಿತ್‌ ಚಕ್ರತೀರ್ಥ ಎಂಬುವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿಸಿ ವರದಿ ಪಡೆದುಕೊಂಡಿದ್ದರು. ವರದಿ ಆಧರಿಸಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿದ್ದರು. ಈ ಕುರಿತು ‘ದಿ ಫೈಲ್‌’ 10 ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಪಠ್ಯ ಪರಿಷ್ಕರಿಸಿದ ರೋಹಿತ್‌ ಚಕ್ರತೀರ್ಥ ವರದಿ ಸುತ್ತ ‘ದಿ ಫೈಲ್‌’ನ 10 ವರದಿಗಳು

 

ಶೈಕ್ಷಣಿಕ ಸೇವೆಗಳನ್ನು ಒದಗಿಸುವ ಹಿನ್ನಲೆ ಹೊಂದಿರುವ ಖಾಸಗಿ ಕಂಪನಿಯೊಂದಕ್ಕೆ ಆರೋಗ್ಯ ಇಲಾಖೆಯು ಆರೋಗ್ಯ ಕವಚ ಟೆಂಡರ್‌ ನೀಡಲು ಮುಂದಾಗಿತ್ತು. ಆರೋಗ್ಯ ಕವಚ ಟೆಂಡರ್‌ನಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ದಿ ಫೈಲ್‌ ಹೊರಗೆಳೆದಿತ್ತು.

 

ಆಂಬ್ಯುಲೆನ್ಸ್; ಶೈಕ್ಷಣಿಕ ಹಿನ್ನೆಲೆ ಕಂಪನಿಗೆ 1,260 ಕೋಟಿ ಮೊತ್ತದ ಟೆಂಡರ್‌,100 ಕೋಟಿ ಲಂಚದ ಆರೋಪ

 

ವರದಿ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ಲೋಕಾಯುಕ್ತಕ್ಕೆ ದೂರು ದಾಖಲಿಸಿತ್ತು.

 

ಆರೋಗ್ಯಕವಚ ಟೆಂಡರ್‍‌ನಲ್ಲಿ ಭಾರೀ ಅಕ್ರಮ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಫೋಟೋ ಸಹಿತ ಲೋಕಾಯುಕ್ತಕ್ಕೆ ದೂರು

 

ಕೋವಿಡ್‌ ಸಂದರ್ಭದಲ್ಲಿ ವಿಧಾನಸಭೆ ಸಚಿವಾಲಯಕ್ಕೆ ಸೇರಿದ ವಿಧಾನಸೌಧದ ಕೊಠಡಿಗಳು ಮತ್ತು ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವಲ್ಲಿ ಅಕ್ರಮ ನಡೆದಿದೆ ಎಂದು ‘ದಿ ಫೈಲ್‌’ ವರದಿ ಬಹಿರಂಗಗೊಳಿಸಿತ್ತು. ವರದಿಯನ್ನು ಸಿಎಜಿಯೂ ಕೂಡ ಎತ್ತಿ ಹಿಡಿದಿತ್ತು.

 

ಸ್ಯಾನಿಟೈಸೇಷನ್‌; ದುಪ್ಪಟ್ಟು ದರಕ್ಕೆ ಗುತ್ತಿಗೆ, ಕೆಟಿಪಿಪಿ ಕಾಯ್ದೆ ಉಲ್ಲಂಘನೆ, 25.28 ಲಕ್ಷ ನಷ್ಟವೆಂದ ಸಿಎಜಿ

 

ಪೊಲೀಸ್‌ ಮಹಾನಿರ್ದೇಶಕರ ವರದಿ ಮತ್ತು ಅಭಿಪ್ರಾಯವನ್ನೂ ಬದಿಗಿರಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು 300ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳನ್ನು ತನಿಖೆಯಿಂದಲೇ ಹಿಂಪಡೆದು ಆದೇಶ ಹೊರಡಿಸಿತ್ತು. ಈ ಆದೇಶಗಳನ್ನು ‘ದಿ ಫೈಲ್‌’ ಆರ್‌ಟಿಐ ಮೂಲಕ ಪಡೆದು ವರದಿಗಳನ್ನು ಪ್ರಕಟಿಸಿತ್ತು.

 

ಡಿಜಿಐಜಿಪಿ ಅಭಿಪ್ರಾಯ ಬದಿಗಿರಿಸಿ ನೂರಾರು ಕ್ರಿಮಿನಲ್‌ ಪ್ರಕರಣ ಹಿಂತೆಗೆತ; ಶಾಂತಿ ಸುವ್ಯವಸ್ಥೆಗೆ ಭಂಗ

 

ವಿಧಾನಪರಿಷತ್‌ನಲ್ಲಿ ವೇತನ ಹಗರಣ ನಡೆದಿದೆ ಎಂದು ಲಾಕ್‌ ಡೌನ್‌ ಅವಧಿಯಲ್ಲೇ ದಿ ಫೈಲ್‌ ವರದಿಯನ್ನು ಪ್ರಕಟಿಸಿತ್ತು. ಆ ನಂತರ ಲೆಕ್ಕ ಪರಿಶೋಧನೆ ನಡೆಸಿದ್ದ ಸಿಎಜಿಯು ವರದಿಯನ್ನು ಎತ್ತಿ ಹಿಡಿದಿತ್ತು.

 

‘ದಿ ಫೈಲ್‌’ ಹೊರಗೆಳೆದಿದ್ದ ವೇತನ ಹಗರಣ; ಸಿಎಜಿಗೂ ವಿವರಣೆ ಒದಗಿಸದ ಸಚಿವಾಲಯ

 

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರವು 3,092 ಎಕರೆ ವಿಸ್ತೀರ್ಣದ ಅಮೃತ್‌ ಮಹಲ್‌ ಕಾವಲ್‌ ಜಮೀನುಗಳನ್ನು ಡಿ ನೋಟಿಫಿಕೇಷನ್‌ ಮಾಡಿ ಆದೇಶ ಹೊರಡಿಸಿತ್ತು. ಅದೇಶ ಹೊರಡಿಸುವ ಮುನ್ನವೇ ಲಭ್ಯವಾಗಿದ್ದ ದಾಖಲೆ ಆಧರಿಸಿ ‘ದಿ ಫೈಲ್‌’ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

 

ಆರ್ಥಿಕ ಇಲಾಖೆ ಅಭಿಪ್ರಾಯ ಬದಿಗೊತ್ತಿ 3,092 ಎಕರೆ ಅಮೃತ್‌ ಮಹಲ್‌ ಕಾವಲ್‌ ಡಿನೋಟಿಫಿಕೇಷನ್‌

 

ಸಂಘ ಪರಿವಾರದ ಜನಸೇವಾ ಟ್ರಸ್ಟ್‌ಗೆ 35 ಎಕರೆ ಗೋಮಾಳ ಹಂಚಿಕೆ ಮಾಡಿದ್ದಲ್ಲದೇ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಶೇ. 5ರಷ್ಟು ದರವನ್ನು ನಿಗದಿಪಡಿಸಿ ಸರ್ಕಾರದ ಬೊಕ್ಕಸಕ್ಕೆ 139 ಕೋಟಿ ರು. ಅಧಿಕ ಮೊತ್ತವನ್ನು ನಷ್ಟದ ಹೊರೆಯನ್ನು ಹೊರಿಸಿತ್ತು. ಈ ಸಂಬಂಧ ದಾಖಲೆ ಸಹಿತ ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ; ಎಕರೆಗೆ ಶೇ. 5ರಷ್ಟು ದರ ನಿಗದಿ, 139.21 ಕೋಟಿ ನಷ್ಟದ ಹೊರೆ

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 18 ತಿಂಗಳಲ್ಲಿ ನಡೆಸಿದ್ದ ವಿಮಾನ ಹಾರಾಟಕ್ಕೆ 23.67 ಕೋಟಿ ರು. ಖರ್ಚಾಗಿತ್ತು. ಇದನ್ನು ಆರ್‌ಟಿಐ ಮೂಲಕ ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ಮುಖ್ಯಮಂತ್ರಿ ವಿಶೇಷ ವಿಮಾನ ಹಾರಾಟ ; 18 ತಿಂಗಳಲ್ಲಿ 23.67 ಕೋಟಿ ಖರ್ಚು

 

ಲಾಕ್‌ಡೌನ್‌ ಅವಧಿಯಲ್ಲಿ 612 ಎಕರೆ ವಿಸ್ತೀರ್ಣದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದನ್ನು ದಿ ಫೈಲ್‌ ಹೊರಗೆಳೆದಿತ್ತು. ಅದರೆ ಈ ವರದಿಯನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಮುಚ್ಚಿಟ್ಟಿತ್ತು.

 

ಕೋವಿಡ್‌ ಅವಧಿಯಲ್ಲಿ ವ್ಯಾಪಕ ಅರಣ್ಯನಾಶ; ಸಮೀಕ್ಷಾ ವರದಿಯನ್ನೇ ಮುಚ್ಚಿಟ್ಟ ಜೀವವೈವಿಧ್ಯ ಮಂಡಳಿ

 

ಆ ನಂತರ ದಿ ಫೈಲ್‌ ಆರ್‌ಟಿಐ ಮೂಲಕ ಬಹಿರಂಗಗೊಳಿಸಿತ್ತು.

 

ಲಾಕ್‌ಡೌನ್‌ನಲ್ಲಿ 612 ಎಕರೆ ಅರಣ್ಯ ಪ್ರದೇಶ ಅತಿಕ್ರಮಣ; ಮುಚ್ಚಿಟ್ಟಿದ್ದ ವರದಿ ಹೊರತೆಗೆದ ‘ದಿ ಫೈಲ್‌’

 

260 ಕೋಟಿ ರು. ಮೌಲ್ಯದ ಕಾಕಂಬಿಯನ್ನು ನಿಯಮಬಾಹಿರವಾಗಿ ಮಹಾರಾಷ್ಟ್ರ ಮೂಲದ ಕಂಪನಿಯೊಂದಕ್ಕೆ ರಫ್ತು ಮಾಡಲು ಅನುಮತಿ ನೀಡಿ ಆದೇಶಿಸಿತ್ತು. ಇದನ್ನು ದಿ ಫೈಲ್‌ ಆರ್‌ಟಿಐ ದಾಖಲೆ ಮತ್ತು ಆಡಿಯೋ ಸೇರಿದಂತೆ ಮತ್ತಿತರೆ ದಾಖಲೆಗಳ ಸಹಿತ ಹೊರಗೆಡವಿತ್ತು. ಆ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ಈ ಹಗರಣದ ಬಗ್ಗೆ ದನಿ ಎತ್ತಿತ್ತು.

 

260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್‌’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್‌

 

ಅಲ್ಲದೇ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾತ್ರವೂ ಇದೆ ಎಂದು ಪುಷ್ಠೀಕರಿಸುವಂತಹ ಆಡಿಯೋ ಸಂಭಾಷಣೆ ಆಧರಿಸಿ ವರದಿಯನ್ನು ಪ್ರಕಟಿಸಿತ್ತು.

 

ಅಬಕಾರಿ ಹಗರಣ; ‘ಎನ್‌ಒಸಿಗೆ ತೊಂದರೆ ಆಗಬಾರದೆಂದು ಕಮಿಷನರ್‌ಗೂ ಬೊಮ್ಮಾಯಿ ಅವರೇ ಫೋನ್‌ ಮಾಡಿದ್ದು,’

 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ಗುತ್ತಿಗೆದಾರರಿಗೆ 1,120 ಕೋಟಿಗೂ ಹೆಚ್ಚು ಹಣವನ್ನು ಗುತ್ತಿಗೆದಾರರಿಗೆ ಅಕ್ರಮವಾಗಿ ಲಾಭ ಮಾಡಿಕೊಡಲು ಹೊರಟಿದ್ದನ್ನು ದಿ ಫೈಲ್‌ ದಾಖಲೆ ಸಹಿತ ಹೊರಗೆಳೆದಿತ್ತು.

 

ಗುತ್ತಿಗೆದಾರರಿಗೆ 1,120 ಕೋಟಿ ಅಕ್ರಮ ಲಾಭ!; ಆರೋಪಿತ ಅಧಿಕಾರಿಗಳ ರಕ್ಷಣೆಗೆ ನಿಂತ ಸರ್ಕಾರ

 

ಹೀಗೆ ದಿ ಫೈಲ್‌ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ, ಅಧಿಕಾರಿಗಳ ಕರ್ತವ್ಯಲೋಪ, ಹಣಕಾಸಿನ ದುರುಪಯೋಗ, ನೀತಿ, ನಿಯಮಗಳ ಉಲ್ಲಂಘನೆ, ಅನಗತ್ಯ ಮತ್ತು ದುಂದುವೆಚ್ಚ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಕೋಟ್ಯಂತರ ರುಪಾಯಿ ನಷ್ಟಕ್ಕೆ ಸಂಬಂಧಿಸಿದಂತೆ ದಾಖಲೆ ಸಹಿತ ವರದಿಗಳನ್ನು ಪ್ರಕಟಿಸುತ್ತಲೇ ಬಂದಿದೆ. ಮುಂದೆಯೂ ಇದೇ ಹಾದಿಯಲ್ಲಿಯೇ ದಿ ಫೈಲ್‌ ಕ್ರಮಿಸಲಿದೆ.

SUPPORT THE FILE

Latest News

Related Posts