ತುಂಗಾ ಮೇಲ್ದಂಡೆ ಯೋಜನೆ; ಅನುಮೋದನೆಯಿಲ್ಲದೆಯೇ 702 ಕೋಟಿ ಹೆಚ್ಚುವರಿ ವೆಚ್ಚ

ಬೆಂಗಳೂರು; ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ 80,494 ಹೆಕ್ಟೇರ್‌ ಪ್ರದೇಶಕ್ಕೆ ವಾರ್ಷಿಕ 12.24 ಟಿಎಂಸಿ ನೀರನ್ನು ಉಪಯೋಗಿಸುವ ಉದ್ದೇಶದಿಂದ ಜಾರಿಯಾಗಿರುವ ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರದೇ ಮತ್ತು ಸರ್ಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿಯಾಗಿ 702.12 ಕೋಟಿ ರು.ಗೂ ಅಧಿಕ ವೆಚ್ಚ ಮಾಡಿರುವುದನ್ನು ಇದೀಗ ‘ದಿ ಫೈಲ್‌’ ಹೊರಗೆಡವುತ್ತಿದೆ.

 

ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದೆ. ಈ ದಾಖಲೆಗಳ ಪ್ರಕಾರ ತುಂಗಾ ಮೇಲ್ದಂಡೆ ಯೋಜನೆಗೆ ಹೆಚ್ಚುವರಿಯಾಗಿ 702.12 ಕೋಟಿ ವೆಚ್ಚ ಮಾಡಿರುವ ಕರ್ನಾಟಕ ನೀರಾವರಿ ನಿಗಮವು ಬಹುದೊಡ್ಡ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.

 

ಕರ್ತವ್ಯಲೋಪ ಎಸಗಿರುವುದನ್ನು ಇಲಾಖೆ ಅಧಿಕಾರಿ ಪತ್ತೆ ಹಚ್ಚಿದ್ದರೂ  ಪರಿಷ್ಕೃತ ಯೋಜನಾ ವರದಿಗೆ ಸಚಿವ ಸಂಪುಟವು ಅನುಮತಿ ನೀಡಿದೆ.  702.12 ಕೋಟಿ ರು ಹೆಚ್ಚುವರಿ ವೆಚ್ಚವನ್ನು ಒಳಗೊಂಡಂತೆ ಒಟ್ಟಾರೆ 3,395.02 ಕೋಟಿ ರು. ಪರಿಷ್ಕೃತ ವಿವರವಾದ ಯೋಜನೆ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿ 2023ರ ಮಾರ್ಚ್‌ 16ರಂದು ಜಲಸಂಪನ್ಮೂಲ ಇಲಾಖೆಯು ಆದೇಶ ಹೊರಡಿಸಿದೆ.

 

ನಾರಾಯಣಪುರ ಎಡದಂಡೆ ಕಾಲುವೆಗಳ ಆಧುನೀಕರಣ, ವಿಸ್ತರಣೆಗೆ ನಿಯಮ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಕಾಮಗಾರಿಗೆ ಗುತ್ತಿಗೆ ನೀಡಿರುವ ಬೆನ್ನಲ್ಲೇ ತುಂಗಾ ಮೇಲ್ದಂಡೆ ಯೋಜನೆಗೆ 702.12 ಕೋಟಿ ರು.ಗಳನ್ನು ಸರ್ಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿಯಾಗಿ ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.

 

‘ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೆ 3,264.00 ಕೋಟಿಗಳ ವೆಚ್ಚ ಭರಿಸಲಾಗಿದೆ ಎಂದು ತಿಳಿಸಲಾಗಿದೆ. ಅದರಂತೆ ಅನುಮೋದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಭರಿಸಿರುವ 702.12 ಕೋಟಿ ರು.ಗಳಿಗೆ karnataka government transaction of business rules 1977ರ 17ರಂತೆ ಸಕ್ಷಮ ಪ್ರಾಧಿಕಾರ (ಸಚಿವ ಸಂಪುಟ)ದ ಅನುಮೋದನೆ ಇಲ್ಲದೆಯೇ ವೆಚ್ಚ ಮಾಡಿರುವ ಕುರಿತು ಸ್ಪಷ್ಟೀಕರಣ ನೀಡಬೇಕು.

 

 

ಲೋಕೋಪಯೋಗಿ ಇಲಾಖೆಯ ಸಂಹಿತೆ ಪ್ಯಾರಾ 191ರ ಅನ್ವಯ ಮೂಲ ಅಂದಾಜಿನಲ್ಲಿ ಶೇ.5ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದಲ್ಲಿ ಅಂದಾಜನ್ನು ಪರಿಷ್ಕೃತಗೊಳಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಾಗಿರುತ್ತದೆ. ಅದರಂತೆ ಕ್ರಮ ಕೈಗೊಳ್ಳದೇ ಇರುವ ಕುರಿತು ಮಾಹಿತಿ ಒದಗಿಸಬೇಕು,’ ಎಂದು 2022ರ ಜನವರಿ 19ರಂದೇ ಜಲಸಂಪನ್ಮೂಲ ಇಲಾಖೆಯು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರದಲ್ಲಿ ನಿರ್ದೇಶಿಸಿತ್ತು.

 

ಅದೇ ರೀತಿ ‘ಒಟ್ಟಾರೆಯಾಗಿ ಸರ್ಕಾರದ ಅನುಮೋದನೆ ಪಡೆಯದೇ/ಸರ್ಕಾರದ ಗಮನಕ್ಕೆ ತರದೇ ಹೆಚ್ಚುವರಿಯಾಗಿ 702.12 ಕೋಟಿಗಳ ವೆಚ್ಚ ಮಾಡಿರುವುದು ನಿಗಮದ ಕರ್ತವ್ಯ ಲೋಪವಾಗಿರುತ್ತದೆ,’ ಎಂದು ಜಲಸಂಪನ್ಮೂಲ ಇಲಾಖೆಯ ಶಾಖಾಧಿಕಾರಿಯು 2022ರ ಜೂನ್‌ 16ರಂದೇ ಲಿಖಿತವಾಗಿ ದಾಖಲಿಸಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ಜಲಸಂಪನ್ಮೂಲ ಇಲಾಖೆಯ ಶಾಖಾಧಿಕಾರಿಯು ನಿಗಮದ ಕರ್ತವ್ಯಲೋಪವನ್ನು ಬಹಿರಂಗಪಡಿಸಿದ ನಂತರ ಆರ್ಥಿಕ ಇಲಾಖೆಯೂ ಸಹ ಬಲವಾಗಿ ಆಕ್ಷೇಪಿಸಲಿಲ್ಲ. ಬದಲಿಗೆ ‘ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಮೊತ್ತವು ಪರಿಷ್ಕೃತವಾಗಿರುವುದಕ್ಕೆ ಸಕಾರಣಗಳನ್ನು ಸಚಿವ ಸಂಪುಟಕ್ಕೆ ಒದಗಿಸಬೇಕು. ಸಚಿವ ಸಂಪುಟದ ಅನುಮತಿಯಿಲ್ಲದೆಯೇ ಹೆಚ್ಚುವರಿಯಾಗಿ ವೆಚ್ಚ ಮಾಡಿರುವುದಕ್ಕೂ ಕಾರಣಗಳನ್ನು ಒದಗಿಸಬೇಕು,’ ಎಂದು ಅರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಗಾಯತ್ರಿ ಅವರು 2022ರ ನವೆಂಬರ್‌ 21ರಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಲಿಖಿತ ಅಭಿಪ್ರಾಯವನ್ನು ತಿಳಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅಲ್ಲದೇ ನಾರಾಯಣಪುರ ಎಡದಂಡೆ ಕಾಲುವೆ ಕಾಮಗಾರಿ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ಕಾಮಗಾರಿ ಗುತ್ತಿಗೆ ನೀಡಿದ್ದ ಅಧಿಕಾರಿಗಳ ಪಟ್ಟಿ ಕೇಳಿದ್ದ ಆರ್ಥಿಕ ಇಲಾಖೆಯು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗೆಯೇ ನಿಯಮ ಉಲ್ಲಂಘಿಸಿದ್ದ ಕೆಬಿಜೆಎನ್‌ಎಲ್‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಷರತ್ತಿಗೆ ಒಳಪಟ್ಟು 465 ಕೋಟಿ ರು. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲು ಸಮ್ಮತಿಸಿತ್ತು.

 

ನಾರಾಯಣಪುರ ಎಡದಂಡೆ ಕಾಲುವೆ ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅರ್ಥಿಕ ಇಲಾಖೆಯು ತುಂಗಾ ಮೇಲ್ದಂಡೆ ಯೋಜನೆಯಲ್ಲಿನ ಹೆಚ್ಚುವರಿ ವೆಚ್ಚದ ಪ್ರಕರಣದ ಕುರಿತು ಆಸಕ್ತಿ ವಹಿಸಿಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಸರ್ಕಾರದ ಅನುಮೋದನೆ ಪಡೆಯದೇ 702.12 ಕೋಟಿ ರು ಹೆಚ್ಚುವರಿ ವೆಚ್ಚ ಮಾಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಶಾಖಾಧಿಕಾರಿ ಬೆಳಕಿಗೆ ತಂದಿದ್ದರೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ನಿಗಮದ ಯಾವೊಬ್ಬ ಅಧಿಕಾರಿಗಳ ಪಟ್ಟಿಯನ್ನೂ ಆರ್ಥಿಕ ಇಲಾಖೆಯು ಕೇಳಿಲ್ಲ. ಈ ಪ್ರಕರಣದಲ್ಲಿ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಕರಣದಲ್ಲಿನ ಹೆಚ್ಚುವರಿ ವೆಚ್ಚದ ಕುರಿತು ಅರ್ಥಿಕ ಇಲಾಖೆಯು ಗಂಭೀರವಾಗಿ ಪರಿಗಣಿಸದ ಕಾರಣ ಜಲಸಂಪನ್ಮೂಲ ಇಲಾಖೆಯು 2023ರ ಫೆಬ್ರುವರಿಯಲ್ಲಿ ನಡೆದಿದ್ದ ಸಚಿವ ಸಂಪುಟದ ಮುಂದೆ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ಕೋರಿತ್ತು.

 

‘ತುಂಗಾ ಮೇಲ್ದಂಡೆ ಯೋಜನೆಯು ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಸೇರ್ಪಡೆಯಾಗಿದೆ. ಈ ಯೋಜನೆಯನ್ನು ಪಿಎಂಕೆಎಸ್‌ವೈ ಕಾರ್ಯಕ್ರಮದಡಿ ಪರಿಗಣಿಸಲಾಗಿತ್ತಲ್ಲದೇ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕಿತ್ತು. ಕೇಂದ್ರ ಸರ್ಕಾರದಿಂದ ಮರು ಪಾವತಿಯನ್ನೂ ಪಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ 3,395.02 ಕೋಟಿ ರು.ಮೊತ್ತದ ವಿವರವಾದ ಯೋಜನಾ ವರದಿಗೆ ಅನುಮೋದನೆ ನಿರೀಕ್ಷಿಸಿ ಕಾಮಗಾರಿಗಳಿಗೆ ವೆಚ್ಚ ಭರಿಸಲಾಗಿರುತ್ತದೆ,’ ಎಂದು ಸಚಿವ ಸಂಪುಟದ ಮುಂದೆ ಪ್ರಸ್ತಾವಿಸಿತ್ತು. ಇದನ್ನು ಸಚಿವ ಗೋವಿಂದ ಕಾರಜೋಳ ಅವರು ಅನುಮೋದಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದುಬಂದಿದೆ.

 

ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಇದರಿಂದ ರೈತರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧಿಸುವುದು ಹಾಗೂ ನೀರನ್ನು ಮಿತವಾಗಿ ಪೋಲಾಗದಂತೆ ಉಪಯೋಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.

the fil favicon

SUPPORT THE FILE

Latest News

Related Posts