ಡಿಜಿಐಜಿಪಿ ಅಭಿಪ್ರಾಯ ಬದಿಗಿರಿಸಿ ನೂರಾರು ಕ್ರಿಮಿನಲ್‌ ಪ್ರಕರಣ ಹಿಂತೆಗೆತ; ಶಾಂತಿ ಸುವ್ಯವಸ್ಥೆಗೆ ಭಂಗ

Photo Credit;vijayakarnataka

ಬೆಂಗಳೂರು; ಕಾನೂನು ಪರಿಪಾಲನೆ ಮತ್ತು ಸಾರ್ವಜನಿಕ ಹಿತಾಸಕ್ತಿ ಮತ್ತು ಪೊಲೀಸರ ಆತ್ಮಸ್ಥೈರ್ಯಕ್ಕೆ ಧಕ್ಕೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡಲಿದೆ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗುತ್ತದೆ. ಮುಂದೆಯೂ ಸಹ ಆರೋಪಿಗಳು ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವ ಸಂಭವವಿರುತ್ತದೆ ಎಂದು ಡಿಜಿಐಜಿಪಿ ಸ್ಪಷ್ಟವಾಗಿ ನೀಡಿದ್ದ ಅಭಿಪ್ರಾಯವನ್ನು ಬದಿಗಿರಿಸಿ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು ಆರ್‌ಟಿಐ ದಾಖಲೆಯಿಂದ ಬಹಿರಂಗವಾಗಿದೆ.

 

ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿತ್ರದುರ್ಗ, ಮಂಡ್ಯ, ನಾಗಮಂಗಲ, ಉಪ್ಪಿನಂಗಡಿ, ಶ್ರೀರಂಗಪಟ್ಟಣ, ಬೆಳ್ಳೂರು, ಉಳ್ಳಾಲ, ಬಂಟ್ವಾಳ, ಕಡಬ, ವಿರಾಜಪೇಟೆ, ಮಡಿಕೇರಿ, ಸಿದ್ದಾಪುರ, ಸೋಮವಾರಪೇಟೆ, ದಾವಣಗೆರೆ, ಆಜಾದ್‌ ನಗರ, ಶಿವಮೊಗ್ಗ, ಬಸವನಬಾಗೇವಾಡಿ, ಇಲಕಲ್ಲ, ಅಫಜಲಪುರ, ಜೇವರ್ಗಿ, ಗೋಣಿಕೊಪ್ಪ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಧಾರ್ಮಿಕ ದ್ವೇಷ ಹರಡಿರುವುದು ಮತ್ತು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರಕರಣಗಳೂ ಈ ಪಟ್ಟಿಯಲ್ಲಿವೆ.

 

 

 

ಈ ಸಂಬಂಧ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ಪ್ರಕರಣವಾರು ನೀಡಿರುವ ಅಭಿಪ್ರಾಯದ ಪ್ರತಿಗಳನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಡಿಜಿಐಜಿಪಿ ಅಭಿಪ್ರಾಯ ಬದಿಗಿರಿಸಿ ಪ್ರಕರಣ ಹಿಂಪಡೆದಿರುವ ಪ್ರತಿ

 

ಸಂಸದ ಅನಂತಕುಮಾರ್‌ ಹೆಗಡೆ, ಶ್ರೀರಾಮಸೇನೆ ಸೇರಿದಂತೆ ಹಲವರ ವಿರುದ್ಧದ ಪೊಲೀಸ್‌ ಠಾಣೆಗಳಲ್ಲಿ ಮೊಕದ್ದಮೆಗಳು ದಾಖಲಾಗಿದ್ದವು. ಈ ಪೈಕಿ ಬಹುತೇಕ ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿದ್ದವು. ಇಂತಹ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆಯಬಾರದು ಎಂದು ಡಿಜಿಐಜಿಪಿ ಅವರು ನೀಡಿದ್ದ ಅಭಿಪ್ರಾಯವನ್ನು ನೀಡಿದ್ದರು. ಆದರೆ ಈ ಅಭಿಪ್ರಾಯವನ್ನು ಬದಿಗಿರಿಸಿದ ರಾಜ್ಯ ಬಿಜೆಪಿ ಸರ್ಕಾರವು ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡಲು ಕಾರಣವಾಗಿದೆ.

 

ಈ ಅವಧಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದರು. ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಹ ಇಂತಹದ್ದೇ ಪ್ರಕರಣಗಳನ್ನು ಹಿಂಪಡೆಯಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಬೆಳಗಾವಿ ನಗರ ಸೇರಿದಂತೆ ಒಟ್ಟು 13 ನಗರಗಳ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 91 ಪ್ರಕರಣಗಳ ಪೈಕಿ 65 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದವು. 5 ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. 7 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿರುವ ತೀರ್ಪು ಪ್ರಕಟವಾಗಿವೆ ಎಂಬ ಮಾಹಿತಿ ಆರ್‌ಟಿಐ ನಿಂದ ಗೊತ್ತಾಗಿದೆ.

 

ಅಭಿಪ್ರಾಯದಲ್ಲೇನಿದೆ?

 

‘ಒಟ್ಟು 70 ಪ್ರಕರಣಗಳಲ್ಲಿ 65 ಪ್ರಕರಣಗಳು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಲ್ಲಿದ್ದು, 05 ಪ್ರಕರಣಗಳು ತನಿಖೆಯಲ್ಲಿದೆ. ಈ ಹಂತದಲ್ಲಿ ಪ್ರಕರಣಗಳನ್ನು ಹಿಂಪಡೆದಲ್ಲಿ ಕಾನೂನು ಪರಿಪಾಲನೆ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟಾಗುತ್ತದೆ. ಪೊಲೀಸರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ. ಹಾಗೂ ಕಾರ್ಯನಿರ್ವಹಣೆಯ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ. ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದರಿಂದ ಮುಂದೆಯೂ ಸಹ ಇದೇ ರೀತಿಯ ಘಟನೆಗಳು ಮರುಕಳಿಸಿ ನ್ಯಾಯಾ ಪ್ರಕ್ರಿಯೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗುತ್ತದೆ. ಮುಂದೆಯೂ ಸಹ ಆರೋಪಿಗಳು ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವ ಸಂಭವವಿರುತ್ತದೆ. ಆದ್ದರಿಂದ ಈ ಪ್ರಕರಣಗಳನ್ನು ಹಿಂಪಡೆಯಬಾರದು,’ ಎಂದು ಎಐಜಿಪಿ ರಾಧಿಕಾರ ಜಿ ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2019ರ ಆಗಸ್ಟ್‌ 17ರಂದು ಅಭಿಪ್ರಾಯ ನೀಡಿದ್ದರು.

 

 

ಟಿಪ್ಪು ಜಯಂತಿ ಆಚರಣೆ ಮತ್ತು ಬಿಜೆಪಿ ಕಾರ್ಯಕರ್ತ ರುದ್ರೇಶ, ರವಿ ಹತ್ಯೆ ಖಂಡಿಸಿ 2015ರಿಂದ 2018ನೇ ಸಾಲಿನವರೆಗೆ ಬೆಳಗಾವಿ ನಗರದ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರತಿಭಟನೆ ನಡೆದಿದ್ದವು. ಇದರಲ್ಲಿ ಸಂಸದ ಅನಂತಕುಮಾರ್‌ ಹೆಗಡೆ, ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ, ಶ್ರೀರಾಮಸೇನಾ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ಸ್ವರೂಪ ಕಾಲಕುಂದ್ರಿ, ಶಾಸಕ ಸಂಜಯ ಪಾಟೀಲ್‌ ಅವರ ವಿರುದ್ಧ ಐಪಿಸಿ 404, 143,147, 188, 149, 153, 283, 298 ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದವು. ಈ ಪ್ರಕರಣಗಳ ಕುರಿತು ಬೆಳಗಾವಿಯ ಜೆಎಂಎಫ್‌ಸಿ 2ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದವು ಎಂಬುದು ಆರ್‌ಟಿಐ ದಾಖಲೆಯಿಂದ ತಿಳಿದು ಬಂದಿದೆ.

 

ಅದೇ ರೀತಿ ಶ್ರೀರಂಗಪಟ್ಟಣದಲ್ಲಿ 2016ರ ನವೆಂಬರ್‌ 10ರಂದು ಪುರಸಭೆ ಸದಸ್ಯ ಉಮಾಶಂಕರ್‌ ಮತ್ತಿತರರು ಪಟ್ಟಣದಲ್ಲಿ 25ರಿಂದ 30 ಜನರ ಅಕ್ರಮ ಗುಂಪುಕಟ್ಟಿಕೊಂಡು ಟಿಪ್ಪುವಿನ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮಾಡಿದ್ದರು. ಜಿಲ್ಲಾಧಿಕಾರಿಗಳ ಆದೇಶದ ನಡುವೆಯೂ ಗುಂಪು ಸೇರಿ ಕಾನೂನುಬಾಹಿರವಾಗಿ ಘೋಷಣೆ ಕೂಗುತ್ತಿದ್ದರು. ಈ ಸಂಬಂಧ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಐಪಿಸಿ 558, 143, 188, 149, 108 ಕೆಪಿ ಆಕ್ಟ್‌ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ಈ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆ (ಸಿಸಿ ನಂಬರ್‌ 191/2019) ಹಂತದಲ್ಲಿತ್ತು.

 

ಮಡಿಕೇರಿ ಪಟ್ಟಣದಲ್ಲಿ 2015ರ ನವೆಂಬರ್‌ 10ರಂದು ಬಿಜೆಪಿ ಪಕ್ಷ ಹಾಗೂ ಹಿಂದೂಪರ ಸಂಘಟನೆಗಳು ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್‌ ನೀಡಿದ್ದವು. ಆ ವೇಳೆ ಆರೋಪಿಗಳು ಕಾನೂನುಬಾಹಿರವಾಗಿ ಕಬ್ಬಿಣದ ರಾಡು ಮತ್ತು ಕಲ್ಲುಗಳನ್ನು ಹಿಡಿದು ಪೊಲೀಸರ ಮೇಲೆ ಎಸೆದು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದರು. ಅಲ್ಲದೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕಟ್ಟಡ ಗ್ಲಾಸಿಗೆ ಕಲ್ಲು ಹೊಡೆದು ಜಖಂಗೊಳಿಸಿದ್ದರು. ಈ ಸಂಬಂಧ ಐಪಿಸಿ 143, 144,1 45, 147, 427, 149 ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಸಗಿತ್ತು. ಈ ಪ್ರಕರಣವು ಮಡಿಕೇರಿ ಪ್ರಧಾನ ಸಿವಿಲ್‌ ಜಡ್ಜ್‌ ಮತ್ತು ಜೆಎಫ್‌ಎಫ್‌ಸಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

the fil favicon

SUPPORT THE FILE

Latest News

Related Posts