ಮುಖ್ಯಮಂತ್ರಿ ವಿಶೇಷ ವಿಮಾನ ಹಾರಾಟ ; 18 ತಿಂಗಳಲ್ಲಿ 23.67 ಕೋಟಿ ಖರ್ಚು

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಬ್ಬರೇ  18 ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ  ಸರ್ಕಾರಿ ಬೊಕ್ಕಸದ  23.67 ಕೋಟಿ ರು. ಖರ್ಚು ಮಾಡಿದ್ದಾರೆ. ಕಳೆದ 10 ವರ್ಷದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಸಚಿವರ ವೈಮಾನಿಕ ಹಾರಾಟಕ್ಕೆ ಒಟ್ಟಾರೆ 96.65 ಕೋಟಿ ರು. ವೆಚ್ಚವಾಗಿದೆ.

 

2013-14ನೇ ಸಾಲಿನಿಂದ 2023 ಜನವರಿ ಅಂತ್ಯದವರೆಗೆ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಚಿವರು ವೈಮಾನಿಕ ಹಾರಾಟಕ್ಕೆ ಮಾಡಿರುವ ಖರ್ಚಿಗೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲ-­ಸಾರಿಗೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ (ಕಟ್ಟಡಗಳ ವಿಭಾಗ) 2023ರ ಮಾರ್ಚ್‌ 13ರಂದು ಮಾಹಿತಿ ನೀಡಿದ್ದಾರೆ.

 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 2017-18ರ (ಚುನಾವಣೆ ವರ್ಷ)ಲ್ಲಿ 17,73, 25,113 ರು.ಗಳನ್ನು ವೈಮಾನಿಕ ಹಾರಾಟಕ್ಕೆ ಖರ್ಚು ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರು 2022-23ರ (ಚುನಾವಣೆ ವರ್ಷ)ಲ್ಲಿ 23.67 ಕೋಟಿ ರು. ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಚುನಾವಣೆ ವರ್ಷದಲ್ಲಿ ವೈಮಾನಿಕ ಹಾರಾಟಕ್ಕೆ ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ 7.25 ಕೋಟಿ ಹೆಚ್ಚಿಗೆ ಖರ್ಚು ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ಹೊರರಾಜ್ಯಗಳಿಗಿಂತಲೂ ರಾಜ್ಯದೊಳಗೇ ಅತಿ ಹೆಚ್ಚು ಬಾರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು. ಬೆಂಗಳೂರಿನಿಂದ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದಾದ ತುಮಕೂರಿಗೂ ಹೆಲಿಕಾಪ್ಟರ್‌ನಲ್ಲಿ ತೆರಳಿರುವುದು ಆರ್‌ಟಿಐ ದಾಖಲೆಯಿಂದ ಗೊತ್ತಾಗಿದೆ.

 

ಸಿದ್ದರಾ­ಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 18 ತಿಂಗಳ ಅವಧಿಯಲ್ಲಿ  ವೈಮಾನಿಕ ಹಾರಾಟಕ್ಕೆ 13.07 ಕೋಟಿ ಖರ್ಚು ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರು 18 ತಿಂಗಳಲ್ಲಿ  23.67 ಕೋಟಿ ರು. ವೆಚ್ಚ ಮಾಡಿದ್ದಾರೆ.  2019-20ರಲ್ಲಿ 5,80,5,600.00, 2020-21ರಲ್ಲಿ 6,99,89,732.00 ರು, 2021-22ರಲ್ಲಿ 4,31,2,508.00 ರು, 2022-23ರಲ್ಲಿ 24,99,14, 796.00 ರು. ಸೇರಿದಂತೆ ಒಟ್ಟು  38,02,2,730.36 ರು. ಖರ್ಚಾಗಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ. ಈ ಅವಧಿಯಲ್ಲಿ ಬಿ ಎಸ್‌ ಯಡಿಯೂರಪ್ಪ ಅವರೂ ಮುಖ್ಯಮಂತ್ರಿಯಾಗಿದ್ದರು.

 

ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗಾ, ಮೈಸೂರು, ಕಬಿನಿ, ಕೆಆರ್‌ಎಸ್‌, ಗಜೇಂದ್ರಗಢ, ತಿರುಪತಿ, ಹೊನ್ನಾಳಿ, ವಿಜಯವಾಡ, ಚೆನ್ನೈ, ಹೈದರಾಬಾದ್‌, ಶಿಕಾರಿಪುರ, ರಾಣೆಬೆನ್ನೂರು, ಹಿರೇಕೆರೂರು, ಅಹಮದಾಬಾದ್‌, ಬೀದರ್‌, ಶಿವಮೊಗ್ಗ, ದಾವಣಗೆರೆ, ತುಮಕೂರು, ಶಂಶಬಾದ್‌, ನರಗುಂದ, ಶೃಂಗೇರಿ, ಹರಿಹರಪುರ, ಚಿಕ್ಕನಾಯಕನಹಳ್ಳಿ, ದಾವಣಗೆರೆ, ಬದಾಮಿ, ಮುಧೋಳ, ಮೂಡಬಿದರೆ, ಮುಂಬೈ, ಬೆಳಗಾವಿ, ಆದಿಚುಂಚನಗಿರಿ, ತುಮಕೂರು, ನವದೆಹಲಿ, ಹೊಸದುರ್ಗ, ಹಿರಿಯೂರು, ಚಿತ್ರದುರ್ಗ, ಆನೆಗುಂದಿ, ಗೋವಾ, ಕೊಯಮತ್ತೂರು, ಮಳವಳ್ಳಿ, ಸಿರಿಗೆರೆ, ವಿಜಯಪುರ, ಆಲಮಟ್ಟಿ, ಹೊಸದುರ್ಗ, ಔರಾದ್‌, ಹುಣಸಗಿ, ಕಮಲಾಪುರ, ಕೊಚ್ಚೀನ್‌, ಕೆಆರ್‌ ಪೇಟೆ, ತಿರುಪತಿ, ಮಂಗಳೂರು, ಉಡುಪಿ, ಸಾಣೆಹಳ್ಳಿ, ರಾಯಭಾಗ, ಕೊಪ್ಪಳ, ಬಳ್ಳಾರಿ, ಭದ್ರಾವತಿ, ಜೈಪುರ, ಪಾಂಡವಪುರ, ಮದ್ದೂರು, ಬಿಜಾಪುರ, ಕಾರ್ಕಳ, ಹಂಪಿ, ಹೊಳೆನರಸೀಪುರ, ಮಡಿಕೇರಿಗೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣ ಬೆಳೆಸಿದ್ದರು ಎಂಬುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

2013-14ರಲ್ಲಿ 9,69,50,098 ರು., 2014-15ರಲ್ಲಿ 6,10,40,773 ರು., 2015-16ರಲ್ಲಿ 6,89,45,646 ರು., 2016-17ರಲ್ಲಿ 8,29,04,994 ರು., 2017-18ರಲ್ಲಿ 17,73,25,113 ರು., 2018-19ರಲ್ಲಿ 5,83,14,951 ರು. ಸೇರಿ 5 ವರ್ಷದಲ್ಲಿ ಒಟ್ಟು 54,54,81, 575.00 ರು., ವೆಚ್ಚವಾಗಿರುವುದು ತಿಳಿದು ಬಂದಿದೆ.

 

ಬಿಜೆಪಿ ಸರಕಾರದ ಕೊನೆ ಅವಧಿಯಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಕೇವಲ  ಎಂಟು ತಿಂಗಳಲ್ಲಿ  ವೈಮಾನಿಕ ಹಾರಾಟಕ್ಕೆ  12.77 ಕೋಟಿ ರೂ. ಖರ್ಚು ಮಾಡಿದ್ದರು.  ಚುನಾವಣೆ ಘೋಷಣೆಯಾಗುವ ಮುನ್ನ  ಪಕ್ಷದ ಕಾರ್ಯಕ್ರಮಗಳಿಗಾಗಿ 2013 ಮಾರ್ಚ್‌ನಲ್ಲಿ  ವಿಶೇಷ ವಿಮಾನಕ್ಕಾಗಿ 42,66,815ರೂ. ಪಾವತಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts