Sunday | October 11, 2026 |

ನಾರಾಯಣಪುರ ಎಡದಂಡೆ ಕಾಲುವೆ; ನಿಯಮ ಉಲ್ಲಂಘಿಸಿ 465 ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆ

ಬೆಂಗಳೂರು; ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ವಿಸ್ತರಣೆ, ನವೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜಿಸಿದ್ದ ಯೋಜನಾ ಮೊತ್ತವನ್ನು ಸರ್ಕಾರದ ಅನುಮೋದನೆ ಪಡೆಯದೇ ಮತ್ತು ನಿಯಮ ಉಲ್ಲಂಘಿಸಿ  465 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆ ನೀಡಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ನಾರಾಯಣಪುರ ಎಡದಂಡೆ ಕಾಲುವೆಯ ನೀರಿನ ಬಳಕೆಯಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕಾಲುವೆ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣದ ಪ್ರಸ್ತಾವನೆ, ಅಂದಾಜು ಮೊತ್ತವನ್ನು ಎರಡೆರಡು ಬಾರಿ ಪರಿಷ್ಕರಿಸಿರುವ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಬಹುದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಹಾಗೆಯೇ ನೀರಾವರಿ ಯೋಜನೆಗಳ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಗುರುತರವಾದ ಆರೋಪಗಳು ಸರ್ಕಾರದ ವಿರುದ್ಧ ಕೇಳಿ ಬಂದಿರುವ ನಡುವೆಯೇ ನಿಯಮಗಳ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಗುತ್ತಿಗೆ ನೀಡಿರುವ ಈ ಪ್ರಕರಣವು ಹೆಚ್ಚು ಮಹತ್ವ ಪಡೆದುಕೊಂಡಿದೆ.

 

ಈ ಕುರಿತು ‘ದಿ ಫೈಲ್‌’ 500 ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿರುವ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಅಲ್ಲದೆ ಜಲಸಂಪನ್ಮೂಲ ಇಲಾಖೆ ಮತ್ತು ಇದರ ಅಡಿಯಲ್ಲಿ ಬರುವ ಕೃಷ್ಣಭಾಗ್ಯ ಜಲನಿಗಮದ ಅಧಿಕಾರಿಗಳು ಸರ್ಕಾರವನ್ನೂ ಕತ್ತಲಲ್ಲಿಟ್ಟು ನೂರಾರು ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಕೂಡ ಬಹಿರಂಗವಾಗಿದೆ. ಆದರೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಈ ಪ್ರಕರಣದತ್ತ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

 

ಎನ್‌ಆರ್‌ಬಿಸಿ ಎಡದಂಡೆ ಕಾಲುವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ಕೋರುವ ಸಂಬಂಧ ಜಲಸಂಪನ್ಮೂಲ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಅರ್ಥಿಕ ಇಲಾಖೆಯು, ಈ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವುದು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳಿಗೆ ಹೆಚ್ಚಿನ ಬಲ ತಂದುಕೊಟ್ಟಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

‘ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. (ಸಂ;ಆಇ 258 ಆಕೋ-1/2022, WRD 94 KBN 2021 DATED 13-09-2022) ಅಡಳಿತ ಇಲಾಖೆಯು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ, ಅರ್ಥಿಕ ಇಲಾಖೆಯ ಗಮನಕ್ಕೂ ತರದೇ ರೂ 465.00 ಕೋಟಿ ರು.ಗಳ ಕಾಮಗಾರಿಗಳಿಗೆ ಗುತ್ತಿಗೆ ನೀಡಿ ಕೈಗೆತ್ತಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು ಈ ಸಂಬಂಧ ಸದರಿ ಪ್ರಕ್ರಿಯೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಸದರಿ ಪ್ರಸ್ತಾವನೆಗೆ ವೆಚ್ಚ ಭರಿಸಲು ಇಲಾಖೆಯಡಿ ಯಾವ non-grounded ಕಾಮಗಾರಿಗಳನ್ನು ಕಡಿತಗೊಳಿಸಲಾಗುವುದು ಎಂಬ ಬಗ್ಗೆ ಮಾಹಿತಿ ನೀಡಬೇಕು,’ ಎಂದು ಅರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಗಾಯಿತ್ರಿ ಅವರು 2022ರ ಸೆಪ್ಟಂಬರ್‌ 13ರಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

 

ಅರ್ಥಿಕ ಇಲಾಖೆಯು ಬರೆದಿರುವ ಪತ್ರದ ಪ್ರತಿ

 

ಜಲಸಂಪನ್ಮೂಲ ಇಲಾಖೆಯ ಪ್ರಸ್ತಾವನೆಯಲ್ಲೇನಿತ್ತು?

 

ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ, ಹುಣಸಗಿ ಶಾಖಾ ಕಾಲುವೆ, ಶಹಾಪೂರ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಹಾಗೂ ಇಂಡಿ ಶಾಖಾ ಕಾಲುವೆಯ 0.00 ಕಿ ಮೀ ನಿಂದ 64.00 ಕಿ ಮೀವರೆಗೆ ಹಾಗೂ ಈ ಶಾಖಾ ಕಾಲುವೆಗಳ ಅಡಿ ಬರುವ ಡಿಸ್ಟ್ರಿಬ್ಯೂಟರಿ ಹಾಗೂ ಲ್ಯಾಟರಲ್/ಡಿಪಿಒಗಳಿಗೆ ಮಾತ್ರ ಸ್ಕಾಡಾ ಒಂದನೇ ಹಂತದ ಹಾಗೂ ಎರಡನೇ ಹಂತದ ಸ್ವಯಂಚಾಲಿತ ಸ್ಕಾಡಾ ಗೇಟುಗಳ ಅಳವಡಿಕೆಗೆ ಮಾತ್ರ ಪರಿಗಣಿಸಲಾಗಿದೆ.

 

ಹಾಗೆಯೇ ಇಂಡಿ ಶಾಖಾ ಕಾಲುವೆಯ 64.00 ಕಿ ಮೀನಿಂದ 172.00 ಕಿ ಮೀವರೆಗೆ ಹಾಗೂ ಅದರಡಿ ಬರುವ ಡಿಸ್ಟ್ರಿಬ್ಯೂಟರಿ ಹಾಗೂ ಲ್ಯಾಟರಲ್‌ /ಡಿಪಿಒಗಳಿಗೆ ಸ್ವಯಂ ಚಾಲಿತ ಸ್ಕಾಡಾ ಗೇಟುಗಳ ಅಳವಡಿಕೆಯು ಪರಿಗಣಿಸಲಾಗಿರುವುದಿಲ್ಲ. ಸ್ಕಾಡಾ ಎರಡನೇ ಹಂತದ ಅಂದಾಜು ಪಟ್ಟಿಗೆ ಅನುಮೋದನೆ ಪಡೆಯುವ ಸಮಯದಲ್ಲಿ ಇಂಡಿ ಶಾಖಾ ಕಾಲುವೆಯ 64.000 ಕಿ ಮೀನಿಂದ 172.00 ಕಿ ಮೀವರೆಗೆ ಹಾಗೂ ಅದರಡಿ ಬರುವ ಡಿಸ್ಟ್ರಿಬ್ಯೂಟರಿ ಹಾಗೂ ಲ್ಯಾಟರಲ್‌ /ಡಿಪಿಒಗಳಿಗೆ ಸ್ವಯಂಚಾಲಿತ ಸ್ಕಾಡಾ ಅಳವಡಿಕೆಯನ್ನು ಪರಿಗಣಿಸಲಾಗಿದೆ.

 

ಇದರಿಂದ ನಾರಾಯಣಪುರ ಎಡದಂಡೆ ಕಾಲುವೆಯ ಇಆರ್‌ಎಂ ಕಾಮಗಾರಿಯ ಅಂದಾಜು ಮೊತ್ತದಲ್ಲಿ 465.02 ಕೋಟಿ ರು. ಹೆಚ್ಚುವರಿಯಾಗಿದ್ದು ಮೂಲ ಅಂದಾಜು ಪಟ್ಟಿ ತಯಾರಿಕೆಯಲ್ಲಿ ಯಾವುದೇ ಲೋಪದೋಷವಾಗಿರುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆಯು ಸಮಜಾಯಿಷಿ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಆದರೆ ಅರ್ಥಿಕ ಇಲಾಖೆಯು ಈ ಸಮಜಾಯಿಷಿಯನ್ನು ಒಪ್ಪಿಲ್ಲ. ಬದಲಿಗೆ 465 ಕೋಟಿ ಹೆಚ್ಚುವರಿ ಮೊತ್ತಕ್ಕೆ ಸರ್ಕಾರದ ಅನುಮೋದನೆ ಪಡೆಯದೇ ಗುತ್ತಿಗೆ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ನೀಡಿರುವುದು ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸಿದಂತಾಗಿದೆ.

Hot this week

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...
Please Scan to make Your Contribution

Topics

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

Related Articles

Popular Categories

error: Content is protected !!