ಲಾಕ್‌ಡೌನ್‌ನಲ್ಲಿ 612 ಎಕರೆ ಅರಣ್ಯ ಪ್ರದೇಶ ಅತಿಕ್ರಮಣ; ಮುಚ್ಚಿಟ್ಟಿದ್ದ ವರದಿ ಹೊರತೆಗೆದ ‘ದಿ ಫೈಲ್‌’

photo credit;tv9kannada

ಬೆಂಗಳೂರು; ಕರೋನಾ ಸಂದರ್ಭದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಅವಧಿಯಲ್ಲಿ ಮಲೆನಾಡಿನ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶಿವಮೊಗ್ಗ ಜಿಲ್ಲೆಯ ಸೊರಬದ ದೇವರ ಕಾಡು, ಸಾಗರ ಮತ್ತು ಹೊಸನಗರ ತಾಲೂಕಿನ ವಿವಿಧೆಡೆ ಅರಣ್ಯ ಪ್ರದೇಶ, ಎಂಪಿಎಂ  ನೆಡುತೋಪು, ಸಾಮಾಜಿಕ ಅರಣ್ಯ ಪ್ರದೇಶ ಸೇರಿ ಒಟ್ಟಾರೆ  612  ಎಕರೆ ಅರಣ್ಯ  ಪ್ರದೇಶ ಅತಿಕ್ರಮಣವಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ನೀಡಿದ್ದ ವರದಿಯನ್ನು ‘ದಿ ಫೈಲ್‌’ ಇದೀಗ ಹೊರಗೆಡವಿದೆ.

 

ವಿಶೇಷವೆಂದರೆ ಸರ್ಕಾರಕ್ಕೆ ಸಲ್ಲಿಸಿದ್ದ ಸಮೀಕ್ಷೆ ವರದಿಯನ್ನು ಆರ್‌ಟಿಐ ಅಡಿಯಲ್ಲಿ ‘ದಿ ಫೈಲ್‌’ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ್ದ ಜೀವ ವೈವಿಧ್ಯ ಮಂಡಳಿಯು ಇಂತಹ ಯಾವುದೇ ಸಮೀಕ್ಷೆ ವರದಿಯು ಇಲ್ಲ ಎಂದು ಹಿಂಬರಹ ನೀಡಿ    ಮುಚ್ಚಿ ಹಾಕಿತ್ತು. ಆದರೀಗ  ಜೀವ ವೈವಿಧ್ಯ ಮಂಡಳಿಯು ನೀಡಿದ್ದ ಸಮೀಕ್ಷಾ ವರದಿಯನ್ನು  ಅರಣ್ಯ ಇಲಾಖೆಯು ಆರ್‌ಟಿಐ ಅಡಿಯಲ್ಲಿ   2023ರ ಫೆ. 27ರಂದು ‘ದಿ ಫೈಲ್‌’ಗೆ  ಒದಗಿಸಿದೆ.

 

‘ಕರ್ನಾಟಕದ ಎಲ್ಲೆಡೆ ಕರೋನಾ ಆರೋಗ್ಯ ತುರ್ತು ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಮಲೆನಾಡಿನ ದಟ್ಟಾರಣ್ಯ, ದೇವರಕಾಡು, ಕಾನು, ಎಂಪಿಎಂ ಅರಣ್ಯ, ಗ್ರಾಮಗಳ ಕೆರೆ, ಮುಂತಾದ ಅಪಾರ ಜೀವವೈವಿಧ್ಯ ಸೂರೆ ಮಾಡುವ ಕೃತ್ಯದಲ್ಲಿ ಕೆಲವು ಜನರು ತೊಡಗಿಕೊಂಡಿದ್ದಾರೆ. ನೂರಾರು ಮರಗಳನ್ನು ಕಡಿದು ಸಾಗಿಸುವ ಕೃತ್ಯ ನಡೆದಿದೆ. ಜೆಸಿಬಿ ಮೂಲಕ ಸಾವಿರಾರು ಎಕರೆ ಅರಣ್ಯ ನೆಲಸಮ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ್ಲಿ ಎಗ್ಗಿಲ್ಲದೇ ನಡೆದಿದೆ. ಘಟ್ಟದ ಅರಣ್ಯ, ಕೆರೆ, ಕಾನು ನಾಶ ಕೃತ್ಯದಲ್ಲಿ ಬೆಂಗಳೂರಿನಿಂದ   ಊರಿಗೆ ಬಂದ ಕೆಲವು ಯುವಕರು, ಹಳ್ಳಿಗಳ ಸ್ಥಾಪಿತ ಹಿತಾಸಕ್ತಿಗಳು, ಧನಾಢ್ಯರು ತೊಡಗಿದ್ದಾರೆ,’ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

 

2021ರ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ನಿರಂತರವಾಗಿ ವನ್ಯ ಜೀವ ಸಂಕುಲ ನಾಶವಾಗಿದೆ. ಜೀವ ವೈವಿಧ್ಯ ಮಂಡಳಿಯು ಕೆಲವು ಸ್ಥಳಗಳಿಗೆ ಭೇಟಿ ನೀಡಿದೆ. ಸಮೀಕ್ಷೆ ನಡೆಸಿದೆ. ವಿಶೇಷ ಕ್ಷಿಪ್ರ ವರದಿ ತಯಾರಿಸಿದೆ. ಜೀವವೈವಿಧ್ಯ ಮಂಡಳಿಯು ಅರಣ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದಿದೆ ಎಂದು ವರದಿಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

 

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಬಳಿಯ ವಗರೇಹಳ್ಳಿ ಹೊಗರೇ ಕಾನುಗಿರಿ ಬೆಟ್ಟದ ಬುಡದಲ್ಲಿ 12 ಸ್ಥಳಗಳಲ್ಲಿ 480 ಎಕರೆ ಅರಣ್ಯ ಧ್ವಂಸ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ಬಾಳೂರು ಸಂರಕ್ಷಿತ ಅರಣ್ಯದಲ್ಲಿ 472 ಭಾರೀ ವೃಕ್ಷಗಳನ್ನು ಕಡಿದು ಹಾಕಲಾಗಿದೆ. ಗರಗೆ, ಗೊದ್ದ, ಮಾವು, ಬಬ್ಬಿ, ಧೂಪ, ನಂದಿ, ಹಲಸು, ಸಂಪಿಗೆ, ನೇರಲು, ತಾರೆ ಸೇರಿದಂತೆ ವಿನಾಶದಂಚಿನ ಮರಗಳನ್ನು ಕಡಿದು ಹಾಕಲಾಗಿದೆ ಎಂಬ ಅಂಶವು ವರದಿಯಲ್ಲಿ ವಿವರಿಸಲಾಗಿದೆ.

 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಬಳಿ ಸೂರಳಿ ಎಂಬಲ್ಲಿ ಏಪ್ರಿಲ್‌ 2021ರಲ್ಲಿ 42 ಎಕರೆ ಅರಣ್ಯ ನಾಶ ಮಾಡಲಾಗಿದೆ. ಕೊಪ್ಪ ತಾಲೂಕಿನ ಬಸರಿಕಟ್ಟೆ ಬಳಿ ದೇವಗೋಡ ಗ್ರಾಮದಲ್ಲಿ ಗ್ರಾಮ ಅರಣ್ಯ ನಾಶ ಮಾಡಲಾಗಿದೆ ಎಂಬುದು ವರದಿಯಿಂದ ಗೊತ್ತಾಗಿದೆ.

 

2021ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಿಂದ 3 ಕಿ ಮೀ ದೂರದಲ್ಲಿರುವ ಹಳೇ ಸೊರಬ ಗ್ರಾಮದ 540 ಎಕರೆಯಲ್ಲಿನ ದೇವರ ಕಾಡಿನಲ್ಲಿ ದೇವದಾರು, ನೇಋಳೆ, ಹಲಸು, ಬರಣಿಗೆ, ತೇಗ ಜಾತಿಗೆ ಸೇರಿದ 300 ವರ್ಷ ಹಳೆಯದಾದ ಮುಗಿಲೆತ್ತರದ 140 ಮರಗಳನ್ನು ಕಡಿದು ಹಾಕಲಾಗಿದೆ.

 

ಅದೇ ರೀತಿ ಹೊಸನಗರ ತಾಲೂಕಿನ ಹುಂಚ ಹೋಬಳಿ ಗುಡ್ಡೆಕೊಪ್ಪದಲ್ಲಿ ಎಂಪಿಎಂ ನೆಡುತೋಪು ಸಾಮಾಜಿಕ ಅರಣ್ಯ ಪ್ರದೇಶದಲ್ಲಿದ್ದ 50 ಎಕರೆ ಅರಣ್ಯವು   2021ರ ಮೇ ತಿಂಗಳ ಮೊದಲ ವಾರದಲ್ಲಿಯೇ ಕಬಳಿಕೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸುತ್ತಮುತ್ತ ಇರುವ 40 ಎಕರೆ ಗ್ರಾಮ ಅರಣ್ಯವನ್ನು ಖಾಸಗಿಯವರು ಕಟಾವು ಮಾಡಿದ್ದಾರೆ ಎಂದು ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ನೀಡಿರುವ ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.

 

‘ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೆಖಿತ ಪತ್ರದೊಂದಿಗೆ ಅಧ್ಯಕ್ಷರು, ಜೀವ ವೈವಿಧ್ಯ ಮಂಡಳಿ ಬೆಂಗಳೂರು ಇವರ ಪತ್ರ ಮತ್ತು ಸಮೀಕ್ಷಾ ವರದಿಯನ್ನು ಲಗತ್ತಿಸಿ ಕರೋನಾ ಲಾಕ್‌ ಡೌನ್‌ ಸಂದರ್ಭದಲ್ಲಿ ಮಲೆನಾಡಿನಲ್ಲಿ ವ್ಯಾಪಕ ಅರಣ್ಯನಾಶ, ಅತಿಕ್ರಮಣ, ಮರಗಳ್ಳತನ ಹೆಚ್ಚಾಗಿರುವ ಕುರಿತುಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಆದ್ದರಿಂದ ಸದರಿ ವರದಿ ಮೇಲೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು,’ ಎಂದು ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 2021ರ ಅಕ್ಟೋಬರ್‌ 21ರಂದು ಬರೆದಿದ್ದ ಪತ್ರದಲ್ಲಿ ನಿರ್ದೇಶಿಸಿದ್ದರು.

 

ಈ ಪತ್ರವನ್ನಾಧರಿಸಿ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ 2022ರ ಆಗಸ್ಟ್‌ 26ರಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ 2 ತಿಂಗಳ ನಂತರ ಮಾಹಿತಿ ಒದಗಿಸಿದ್ದ ಕರ್ನಾಟಕ ಜೀವಿವೈವಿಧ್ಯ ಮಂಡಳಿಯು ‘ ಕರ್ನಾಟಕ ಜೀವಿವೈವಿಧ್ಯ ಮಂಡಳಿಯು ಯಾವುದೇ ಸಮೀಕ್ಷೆ ವರದಿ ಸಲ್ಲಿಸಿರುವುದಿಲ್ಲ,’ ಎಂದು ಮಾಹಿತಿ ಹಕ್ಕು 2005ರಡಿ ಅರ್ಜಿಯನ್ನು ವಿಲೇ ಮಾಡಿತ್ತು. ಈ ಕುರಿತು ‘ದಿ ಫೈಲ್‌’ 2023ರ ಫೆ. 11ರಂದು ವರದಿ ಪ್ರಕಟಿಸಿತ್ತು.

 

ಕೋವಿಡ್‌ ಅವಧಿಯಲ್ಲಿ ವ್ಯಾಪಕ ಅರಣ್ಯನಾಶ; ಸಮೀಕ್ಷಾ ವರದಿಯನ್ನೇ ಮುಚ್ಚಿಟ್ಟ ಜೀವವೈವಿಧ್ಯ ಮಂಡಳಿ

 

2021ರ ಅಕ್ಟೋಬರ್‌ 21ರಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೇ ಸಮೀಕ್ಷಾ ವರದಿ ಆಧರಿಸಿ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದರೂ ಸರ್ಕಾರಕ್ಕೆ ಯಾವುದೇ ಸಮೀಕ್ಷೆ ವರದಿಯನ್ನೇ ಸಲ್ಲಿಸಿಲ್ಲ ಎಂದು ಮಂಡಳಿಯು ಉತ್ತರ ನೀಡಿದ್ದು   ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

the fil favicon

SUPPORT THE FILE

Latest News

Related Posts