ಸಚಿವ ನಾಗೇಶ್‌ರನ್ನು ತಲ್ಲಣಗೊಳಿಸಿದ ‘ದಿ ಫೈಲ್‌’ ವರದಿ; ಪ್ರಕರಣ ತನಿಖೆಗೆ ಆದೇಶ

ಬೆಂಗಳೂರು; ಅಬಕಾರಿ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಬಯಸಿದ್ದ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಯೊಬ್ಬರಿಂದ 1 ಕೋಟಿ ಲಂಚ ಕೇಳಿದ್ದಾರೆ ಎಂದು ಪ್ರಧಾನಿ ಕಚೇರಿಗೆ ಅಧಿಕಾರಿಯೊಬ್ಬರ ಪುತ್ರಿ ಸಲ್ಲಿಸಿದ್ದ ದೂರನ್ನಾಧರಿಸಿ ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಅಬಕಾರಿ ಸಚಿವ ನಾಗೇಶ್‌ ಅವರನ್ನು ತಲ್ಲಣಗೊಳಿಸಿದೆ.

1 ಕೋಟಿ ಲಂಚ ಕೇಳಿದ ಪ್ರಕರಣ ಕುರಿತು ದಾಖಲೆ ಸಮೇತ ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಪ್ರಜಾವಾಣಿಯೂ ಸೇರಿದಂತೆ ರಾಜ್ಯದ ಪ್ರಮುಖ ದಿನಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳು ವರದಿಯನ್ನು ವಿಸ್ತರಿಸಿದವು. ಇದರಿಂದ ತಲ್ಲಣಗೊಂಡ ಸಚಿವ ನಾಗೇಶ್‌, ಪ್ರಕರಣ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಇಂದು ಬೆಳಗ್ಗೆ 12ಕ್ಕೆ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಕರೆದಿದ್ದ ದಿಢೀರ್‌ ಸುದ್ದಿಗೋಷ್ಠಿ ಪ್ರಕಟಣೆಯಲ್ಲಿಯೂ ‘ದಿ ಫೈಲ್‌’ ಜಾಲತಾಣದಲ್ಲಿ ಪ್ರಕಟಗೊಂಡ ವರದಿಯನ್ನಷ್ಟೇ ಉಲ್ಲೇಖಿಸಿದೆ. ಸುದ್ದಿಗೋಷ್ಠಿಯಲ್ಲಿ ‘ದಿ ಫೈಲ್‌’ ಜಾಲತಾಣವನ್ನು ಹೆಸರಿಸಿದ ಪ್ರಸ್ತಾಪಿಸಿದ ಸಚಿವ ನಾಗೇಶ್‌ ಅವರು ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದೂ ಆರೋಪಿಸಿದರಲ್ಲದೆ ತಾವು ಭ್ರಷ್ಟಾಚಾರಿ ಅಲ್ಲ, ಯಾವುದೇ ಲಂಚ ಪಡೆದಿಲ್ಲ, ಎಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡಿದ್ದಾರೆ.

ಅಧಿಕಾರಿ ಪುತ್ರಿ ಸ್ನೇಹಾ ಎಂಬುವರು ಪ್ರಧಾನಿ ಕಚೇರಿಗೆ ಸಲ್ಲಿಸಿದ್ದ ಲಿಖಿತ ದೂರನ್ನಾಧರಿಸಿ ‘ದಿ ಫೈಲ್‌’ ವರದಿ ಮಾಡಿತ್ತೇ ವಿನಃ ವರದಿಯ ಹಿಂದೆ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ. ಕಳೆದ ಮಾರ್ಚ್‌ 9ರಿಂದ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ನಿರಂತರವಾಗಿ ದಾಖಲೆ ಸಮೇತ ಪ್ರಕಟಿಸುತ್ತಿದೆ. ನಾಗೇಶ್‌ ವಿರುದ್ಧ ಕೇಳಿ ಬಂದ ಅರೋಪದ ಕುರಿತೂ ದಾಖಲೆ ಸಮೇತ ವರದಿ ಪ್ರಕಟಿಸಿದೆ.

ಸ್ನೇಹಾ ಎಂಬುವರು ಸಲ್ಲಿಸಿದ್ದ ದೂರು ಕರ್ನಾಟಕ ಸರ್ಕಾರದ ಇ-ಜನಸ್ಪಂದನ ಅಧಿಕೃತ ಜಾಲತಾಣದಲ್ಲಿಯೂ ಪ್ರಕಟವಾಗಿದೆ. ಸಚಿವ ನಾಗೇಶ್‌ ಅವರು ತಮ್ಮ ತಂದೆಯ ವರ್ಗಾವಣೆಗಾಗಿ 1 ಕೋಟಿ ಲಂಚ ಕೇಳಿದ್ದಾರೆ ಎಂದು ನೇರವಾಗಿ ಆರೋಪಿಸಿರುವ ವಿವರಣೆಯೂ ಪತ್ರದಲ್ಲಿದೆ. ಇದನ್ನಾಧರಿಸಿ ವರದಿ ಪ್ರಕಟಿಸಲಾಗಿದೆಯೇ ವಿನಃ ಇದರ ಹಿಂದೆ ಯಾರದ್ದೇ ರಾಜಕೀಯ ಷಡ್ಯಂತ್ರವಿಲ್ಲ ಎಂದು ‘ದಿ ಫೈಲ್‌’ ಸ್ಪಷ್ಟಪಡಿಸುತ್ತಿದೆ. ಹಾಗೆಯೇ ಸಚಿವರು ಹೇಳಿರುವಂತೆ ಪ್ರಕರಣದ ಕುರಿತು ನಡೆಸಲಿರುವ ತನಿಖೆಯನ್ನು ಎದುರಿಸಲಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಬೆಂಗಳೂರು ವೃತ್ತದಲ್ಲಿ ಖಾಲಿ ಇದ್ದ ಜಂಟಿ ಆಯುಕ್ತರ ಹುದ್ದೆಗೆ ಬರಲು ಇಚ್ಛಿಸಿದ್ದ ಅಧಿಕಾರಿಯಿಂದ 1 ಕೋಟಿ ಲಂಚ ಕೇಳಿದ್ದಾರೆ ಎಂದು ಸ್ವತಃ ಅಧಿಕಾರಿ ಪುತ್ರಿ ಪ್ರಧಾನಮಂತ್ರಿ ಕಚೇರಿಗೆ 2020ರ ಜುಲೈ 14ರಂದು ದೂರು ಸಲ್ಲಿಸಿದ್ದಾರೆ. ಅಲ್ಲದೇ ಅದೇ ದೂರನ್ನು (ದೂರಿನ ಸಂಖ್ಯೆ; 51868298) ಇ-ಜನಸ್ಪಂದನದಲ್ಲಿಯೂ ದಾಖಲಿಸಿದ್ದಾರೆ. ಸದ್ಯ ಹೊಸಪೇಟೆ ವಿಭಾಗದಲ್ಲಿ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇ-ಜನಸ್ಪಂದನದಲ್ಲಿ ದಾಖಲಿಸಿದ್ದರು.

ದೂರಿನಲ್ಲೇನಿದೆ?

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ‘ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟಾಚಾರದಿಂದ ಕೂಡಿದೆ. ವಿಶೇಷವಾಗಿ ಅಬಕಾರಿ ಇಲಾಖೆಯ ಸಚಿವ ಎಚ್‌ ನಾಗೇಶ್‌ ಅವರು ಅತ್ಯಂತ ಭ್ರಷ್ಟರು. ನನ್ನ ತಂದೆ ಇಲಾಖೆಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಭಾರತ ಸರ್ಕಾರದ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಅಬಕಾರಿ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಹೈಪರ್‌ ಟೆನ್ಷನ್‌, ಸಕ್ಕರೆ , ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಮ್ಮ ತಂದೆಗೆ ಇಬ್ಬರು ಪುತ್ರಿಯರಿದ್ದು, ಒಬ್ಬರು ಇಂಜಿನಿಯರಿಂಗ್‌ ಮತ್ತೊಬ್ಬರು ಪಿಯುಸಿ ವ್ಯಾಸಂಗ ಮಾಡುತ್ತಿದ್ದೇವೆ. 5 ಜಂಟಿ ಆಯುಕ್ತರ ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಲ್ಲ. ನಮ್ಮ ತಂದೆ ಸದ್ಯ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಾರೋಗ್ಯ ಮತ್ತು ನಿವೃತ್ತಿ ಅಂಚಿನಲ್ಲಿರುವ ಕಾರಣ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲು ಕೋರಿದ್ದೆವು. ಆದರೆ ಸಚಿವ ಎಚ್‌ ನಾಗೇಶ್‌ ಅವರು 1 ಕೋಟಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ, ‘ ಎಂದು ಆರೋಪಿಸಿದ್ದರು.

1 ಕೋಟಿ ಬೇಡಿಕೆ; ಸಚಿವ ನಾಗೇಶ್‌ ವಿರುದ್ಧ ಪ್ರಧಾನಿಗೆ ದೂರು ಸಲ್ಲಿಕೆ

‘ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದೇವಲ್ಲದೆ ಅವರ ಬೇಡಿಕೆಯನ್ನು ಈಡೇರಿಸಲು ಸಮರ್ಥರಾಗಿಲ್ಲ. ಬೇಡಿಕೆ ಈಡೇರಿಸದ ಹೊರತು ವರ್ಗಾವಣೆ ಮಾಡುವುದಿಲ್ಲ. ಲಂಚ ನೀಡದ ಕಾರಣ ರಜೆ ಮೇಲೆ ತೆರಳಲು ಸಚಿವ ನಾಗೇಶ್‌ ಅವರು ಬಲವಂತ ಮಾಡುತ್ತಿದ್ದಾರೆ. ಇದಕ್ಕೊಪ್ಪದ ಕಾರಣ ಹಿಂಸೆ ನೀಡಲಾಗುತ್ತಿದೆ. ಕಳೆದ 1 ತಿಂಗಳಲ್ಲಿ ಹಣ ಪಡೆದು 600ಕ್ಕೂ ಹೆಚ್ಚು ವರ್ಗಾವಣೆಗಳನ್ನು ಮಾಡಲಾಗಿದೆ. ಸಚಿವರ ಮಧ್ಯವರ್ತಿ ಎಂದು ಹೇಳಲಾಗಿರುವ ಎಲ್‌ ಎ ಮಂಜುನಾಥ್‌ ಮತ್ತು ಹರ್ಷ ಅವರು ವರ್ಗಾವಣೆ ಬಯಸುವ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಂಧಾನ ನಡೆಸುತ್ತಾರೆ. ಅಧಿಕಾರಿ ಸಿಬ್ಬಂದಿಯಿಂದ ಪಡೆದ ಹಣವನ್ನು ನೇರವಾಗಿ ಸಚಿವರಿಗೆ ತಲುಪಿಸುತ್ತಾರೆ, ‘ಎಂದು ಇಲಾಖೆಯೊಳಗೆ ನಡೆಯುತ್ತಿದೆ ಎನ್ನಲಾಗಿರುವ ಲಂಚಗುಳಿತನವನ್ನು ದೂರಿನಲ್ಲಿ ವಿವರಿಸಿದ್ದರು.

ಆದರೆ ಸಚಿವ ನಾಗೇಶ್‌ ಅವರು ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ‘ತಾವು ಪರಿಶಿಷ್ಟ ಸಮುದಾಯಕ್ಕೆ ಸೇರಿದವನು. ನನ್ನನ್ನು ಹೆದರಿಸಲು ಬ್ಲಾಕ್‌ಮೇಲ್‌ ಮಾಡಲು ಪ್ರಯತ್ನಿಸಲಾಗಿದೆ. ವರ್ಗಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ. ನನಗೆ ಯಾರೂ ರೈಟ್‌ ಹ್ಯಾಂಡ್‌ ಇಲ್ಲ. ಮಂಜುನಾಥ್‌ ಮತ್ತು ಹರ್ಷ ಯಾರು ಅಂತ ಗೊತ್ತಿಲ್ಲ. ಅವರು ಕೋಲಾರದವರಷ್ಟೇ,’ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು.

the fil favicon

SUPPORT THE FILE

Latest News

Related Posts