ಕೋವಿಡ್‌ ಭ್ರಷ್ಟಾಚಾರ; ಮಧ್ಯಂತರ ವರದಿ ಮಂಡನೆಗೆ ಎರಡನೇ ಬಾರಿಯೂ ಸಿಗದ ಅನುಮತಿ

ಬೆಂಗಳೂರು; ಕೋವಿಡ್‌ 19ನ್ನು ನಿಯಂತ್ರಿಸಲು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಸಿದ್ದ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಮಂಡಿಸಲು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದುವರೆಗೂ ಯಾವುದೇ ನಿಲುವು ತಳೆದಿಲ್ಲ.

ಆದರೆ ಇದೇ ಸಮಿತಿಯು ಉನ್ನತ ಶಿಕ್ಷಣ ಇಲಾಖೆ, ಹೇಮಾವತಿ, ಯಗಚಿ ಜಲಾಶಯ, ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯನ್ನು ಮಂಡಿಸಲು ಸ್ಪೀಕರ್‌ ಕಾಗೇರಿ ಅವರು ಅನುಮತಿ ನೀಡಿದ್ದಾರೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಾಗಿರುವ ಭ್ರಷ್ಟಾಚಾರದ ಕುರಿತು ಸಮಿತಿ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಬೆಳಗಾವಿಯಲ್ಲಿ ಇದೇ ಡಿಸೆಂಬರ್‌ 13ರಿಂದ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ಅನುಮತಿ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.

ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿಯೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದವು. ಆ ಸಂದರ್ಭದಲ್ಲಿಯೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ಎಚ್‌ ಕೆ ಪಾಟೀಲ್‌ ಅವರು ವಿಸ್ತೃತವಾಗಿ ಪರಿಶೀಲನೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದ್ದರು. ಆದರೆ ಆ ವರದಿಯನ್ನೂ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಅನುಮತಿ ನೀಡಿರಲಿಲ್ಲ.

ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಮಂಡಿಸಲು ಈ ಬಾರಿಯೂ ಅನುಮತಿ ದೊರೆತಿಲ್ಲ. ಶಾಸನಬದ್ಧವಾಗಿ ರಚನೆಯಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (ಸಿಎಜಿ) ನೀಡುವ ವರದಿ ಆಧಾರದ ಮೇಲೆ ಸಭೆಗಳಲ್ಲಿ ಚರ್ಚೆ ನಡೆಸುತ್ತದೆ. ವರದಿ ಮೇಲೆ ಇಲಾಖೆಗಳು ಕೈಗೊಂಡಿರುವ ಕ್ರಮ ಮತ್ತು ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ವಸೂಲಿ, ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಮತ್ತು ವಿಷಯವಾರು ಶಿಫಾರಸ್ಸುಗಳನ್ನು ಮಾಡುವ ಮೂಲಕ ವರದಿಯನ್ನು ತಯಾರಿಸುತ್ತದೆ. ಆ ನಂತರ ಸಭಾಧ್ಯಕ್ಷರ ಅನುಮತಿ ಮೇರೆಗೆ ಆ ವರದಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.

ಕೋವಿಡ್‌ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಮತ್ತು ಆಮ್‌ ಆದ್ಮಿ ಪಕ್ಷವು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದವು.

ಎಚ್‌ ಕೆ ಪಾಟೀಲ್‌ ಮತ್ತು ರಾಮಲಿಂಗಾರೆಡ್ಡಿ ಅವರಿಬ್ಬರ ನೇತೃತ್ವದ ಸಮಿತಿಯು ಈ ದೂರುಗಳನ್ನು ಸ್ವೀಕರಿಸಿತ್ತಲ್ಲದೆ ಇಲಾಖೆಯಿಂದ ವಿವರಣೆಗಳನ್ನು ಪಡೆದಿತ್ತು. ಇಲಾಖೆಗಳು ನೀಡಿದ್ದ ವಿವರಣೆಯನ್ನು ಒಪ್ಪದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮಧ್ಯಂತರ ವರದಿಗಳನ್ನು (ಕೋವಿಡ್‌ ಮೊದಲ ಮತ್ತು ಎರಡನೇ ಅಲೆ) ಸಲ್ಲಿಸಿದ್ದವು.

ಈ ಮಧ್ಯಂತರ ವರದಿಗಳನ್ನು ಸದನದಲ್ಲಿ ಮಂಡಿಸಬೇಕಿತ್ತು. ಅಥವಾ ವರದಿಗಳನ್ನು ತಿರಸ್ಕರಿಸಬೇಕು. ಆದರಿಲ್ಲಿ ಸ್ಪೀಕರ್‌ ಅವರು ಎರಡು ಬಾರಿಯೂ ಮಧ್ಯಂತರ ವರದಿಗಳನ್ನು ಮಂಡಿಸುವ ಸಂಬಂಧ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಇದು ಸರ್ಕಾರವು ಸ್ಪೀಕರ್‌ ಮೇಲೆ ಒತ್ತಡ ಹೇರಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಲ್ಲದೆ ವೆಂಟಿಲೇಟರ್‌, ಆಕ್ಸಿಜನ್‌ ಸಿಲಿಂಡರ್‌, ಬೆಡ್‌ ಸೇರಿದಂತೆ ಇನ್ನಿತರೆ ಉಪಕರಣಗಳ ಬಳಕೆ ಕುರಿತಂತೆ ಆಸ್ಪತ್ರೆಳಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿಗೆ ಸ್ಪೀಕರ್‌ ಕಾಗೇರಿ ಅವರು ಅನುಮತಿ ನೀಡಿರಲಿಲ್ಲ.

‘ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ನೀಡಿದ್ದೆವು. ಈ ಬಗ್ಗೆ ಸಮಿತಿಯು ಎರಡು ಮಧ್ಯಂತರ ವರದಿಗಳನ್ನು ತಯಾರಿಸಿದೆ. ಅದರೆ ಮಾನ್ಯ ವಿಧಾನಸಭಾಧ್ಯಕ್ಷರು ಇಲ್ಲಿಯವರೆಗೂ ವರದಿಗಳನ್ನು ಮಂಡಿಸಲು ಅನುಮತಿ ನೀಡದೇ ಇರುವುದು ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಸಭಾಧ್ಯಕ್ಷರು ಸರ್ಕಾರದ ಪರವಾಗಿ ಪಕ್ಷಪಾತ ಮಾಡಿರುವುದು ಅವರ ಸ್ಥಾನಕ್ಕೆ ಮಾಡಿರುವ ಅಪಚಾರ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್‌.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಲ್ಲಿಸಿರುವ ವರದಿಯನ್ನು ಸದನದಲ್ಲಿ ಮಂಡಿಸಬೇಕು. ಸ್ಪೀಕರ್‌ ಸರ್ಕಾರದ ಒತ್ತಡಕ್ಕೆ ಮಣಿಯಬಾರದು. ಒಂದು ವೇಳೆ ಸರ್ಕಾರದ‌ ಒತ್ತಡಕ್ಕೆ ಮಣಿದರೆ ತಪ್ಪು.‌ ವಿಧಾನಸಭೆ ಕಾರ್ಯದರ್ಶಿ ಕೂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುತ್ತಾರೆ ವಿಧಾನಸಭೆ ಸಚಿವಾಲಯದ ಉನ್ನತ ಅಧಿಕಾರಿ.

ಕೋವಿಡ್‌ ಮೊದಲ ಅಲೆ ವೇಳೆಯಲ್ಲಿ ಪಿಪಿಇ ಕಿಟ್‌, ಸ್ಯಾನಿಟೈಸರ್‌, ಮಾಸ್ಕ್‌, ಆರ್‌ಟಿಪಿಸಿಆರ್‌ ಉಪಕರಣ, ವಿಟಿಎಂ ಕಿಟ್‌ ಸೇರಿದಂತೆ ಇನ್ನಿತರೆ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರಗಳು ನಡೆದಿದ್ದವು. ದುಬಾರಿ ದರದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿದ್ದರೂ ಅವುಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಸಾಫ್ಟ್‌ವೇರ್‌ ಕಂಪನಿ ಮತ್ತು ಫರ್ನಿಚರ್‌ ಕಂಪನಿಗಳಿಂದಲೂ ಮಾಸ್ಕ್‌, ಪಲ್ಸ್‌ ಆಕ್ಸಿಮೀಟರ್‌ಗಳನ್ನು ಖರೀದಿಸಿತ್ತು.

ಕೋವಿಡ್‌ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ , ಆಂಪೋಟೆರಿಸಿನ್‌ ಬಿ ಔಷಧ ಖರೀದಿಯಲ್ಲಿನ ಅಕ್ರಮ ಮತ್ತು ಮೊದಲ ಬಾರಿ ಕರೆದಿದ್ದ ದರಪಟ್ಟಿ ಅಂತಿಮಗೊಳಿಸದೆಯೇ ಸರ್ಕಾರಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಯಾವುದೇ ದಾಖಲಾತಿ ಮತ್ತು ವಿವರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿರಲಿಲ್ಲ.

ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿಯೂ ಸ್ಯಾನಿಟೈಸರ್‌ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ ಖರೀದಿಸಿದೆ. ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ನ್ನು ಪೂರೈಸಿದೆ ಎಂದು 2021ರ ಆಗಸ್ಟ್‌ 8ರಂದು ವರದಿ ನೀಡಿದ್ದರೂ ಅಯೋಡಿನ್‌ ಕಂಪನಿಗೆ ಖರೀದಿ ಮೊತ್ತದ ಅಂದಾಜು 9 ಕೋಟಿ ಮೊತ್ತದ ಪೈಕಿ 9 ಲಕ್ಷವನ್ನು 2021ರ ಸೆಪ್ಟಂಬರ್‌ನಲ್ಲಿ ತರಾತುರಿಯಲ್ಲಿ ಪಾವತಿಯಾಗಿತ್ತು.

ಆಂಪೋಟೆರಿಸಿನ್‌ ಚುಚ್ಚುಮದ್ದು ಖರೀದಿಯಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಅನುಸರಿಸಿದ್ದ ನೀತಿಯಿಂದಾಗಿ ಬೊಕ್ಕಸಕ್ಕೆ ಅಂದಾಜು 1.14 ಕೋಟಿ ರು. ನಷ್ಟವಾಗಿತ್ತು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್‌ ಪರಿಕರಗಳ ಖರೀದಿಯಲ್ಲಿ 14.75 ಕೋಟಿ ರು. ಹೆಚ್ಚುವರಿ ಹೊರೆಯಾಗಿತ್ತು.

ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್‌ ಖರೀದಿ ಸೇರಿದಂತೆ ಇನ್ನಿತರೆ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೇಳಿದ್ದ ಪ್ರಶ್ನೆಗಳಿಗೆ ವರದಿ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಮಂಜಸವಾದ ಉತ್ತರವನ್ನು ನೀಡುವಲ್ಲಿ ವಿಫಲವಾಗಿತ್ತು. ಆರೋಗ್ಯ ಇಲಾಖೆಗೆ ಕೋವಿಡ್ ನೂನ್ಯತೆಗಳ ಬಗ್ಗೆ ಸಮಿತಿ ಕೇಳಿದ್ದ ಒಟ್ಟು 21 ಪ್ರಶ್ನೆಗಳಿಗೆ ಇಲಾಖೆ ನೀಡಿದ್ದ ಉತ್ತರವು ಅಸಮರ್ಪಕವಾಗಿತ್ತು. ಹೀಗಾಗಿ ಉತ್ತರವನ್ನು ಮರುಪರಿಶೀಲಿಸಬೇಕು ಎಂದು ಸಮಿತಿಯು ಸೂಚಿಸಿತ್ತು.

ಕೋವಿಡ್‌ ಅವ್ಯವಹಾರಗಳ ಕುರಿತು ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿರುವ ಮಧ್ಯಂತರ ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು. ಈ ಮೂಲಕ ಸರ್ಕಾರವು ಪಾರದರ್ಶಕತೆ ತೋರಬೇಕು. ಕೋವಿಡ್‌ ಎರಡನೇ ಅಲೆ ವೇಳೆಯಲ್ಲಿ ರಾಜ್ಯದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕೆಲ ಪ್ರಭಾವಿ ಸಚಿವರು ಹಾಗೂ ಅಧಿಕಾರಿಗಳು ಮಾನವೀಯತೆ ಮರೆತು ಔ‍ಷಧ, ಉಪಕರಣ ಖರೀದಿಯಲ್ಲಿ ಸಾವಿರಾರು ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಆಮ್‌ ಆದ್ಮಿ ಪಕ್ಷವು ದಾಖಲೆ ಸಮೇತ ದೂರು ನೀಡಿತ್ತು. ಇದನ್ನಾಧರಿಸಿ ಪರಿಶೀಲನೆ ನಡೆಸಿರುವ ಸಮಿತಿಯು ತಯಾರಿಸಿರುವ ವರದಿಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಅನುವು ಮಾಡಿಕೊಡಬೇಕು ಎನ್ನುತ್ತಾರೆ ಆಮ್‌ ಆದ್ಮಿ ಜಗದೀಶ್‌ ವಿ ಸದಂ.

the fil favicon

SUPPORT THE FILE

Latest News

Related Posts