ಬೆಂಗಳೂರು; ಕರೋನಾ ಸಂದರ್ಭದಲ್ಲಿ ಮಲೆನಾಡಿನಲ್ಲಿ ವ್ಯಾಪಕವಾಗಿ ಅರಣ್ಯ ನಾಶ, ಅತಿಕ್ರಮಣ, ಮರಗಳ್ಳತನ ಹೆಚ್ಚಾಗಿರುವ ಕುರಿತಂತೆ ಸಲ್ಲಿಕೆಯಾಗಿದ್ದ ಸಮೀಕ್ಷಾ ವರದಿಯನ್ನೇ ಕರ್ನಾಟಕ ಜೀವವೈವಿಧ್ಯ ಮಂಡಳಿಯು ಮುಚ್ಚಿ ಹಾಕಿದೆ.
ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಸಮೀಕ್ಷೆ ವರದಿಗಾಗಿ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ 2022ರ ಆಗಸ್ಟ್ 26ರಂದು ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಯಾವುದೇ ಸಮೀಕ್ಷೆ ವರದಿಯನ್ನು ಸಲ್ಲಿಸಿಲ್ಲ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯು ಲಿಖಿತ ಮಾಹಿತಿ ನೀಡಿದೆ.
ಕರೋನಾ ಸಂದರ್ಭದಲ್ಲಿ ಮಲೆನಾಡಿನಲ್ಲಿ ವ್ಯಾಪಕ ಅರಣ್ಯ ನಾಶ, ಅತಿಕ್ರಮಣ, ಮರಗಳ್ಳತನ ಹೆಚ್ಚಾಗಿರುವ ಕುರಿತಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಸರ್ಕಾರಕ್ಕೆ ಸಮೀಕ್ಷೆ ವರದಿ ಸಲ್ಲಿಸಿತ್ತು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಅರಣ್ಯಪಡೆಯ ಮುಖ್ಯಸ್ಥರಿಗೆ 2021ರ ಅಕ್ಟೋಬರ್ 21 ರಂದೇ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
‘ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೆಖಿತ ಪತ್ರದೊಂದಿಗೆ ಅಧ್ಯಕ್ಷರು, ಜೀವ ವೈವಿಧ್ಯ ಮಂಡಳಿ ಬೆಂಗಳೂರು ಇವರ ಪತ್ರ ಮತ್ತು ಸಮೀಕ್ಷಾ ವರದಿಯನ್ನು ಲಗತ್ತಿಸಿ ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮಲೆನಾಡಿನಲ್ಲಿ ವ್ಯಾಪಕ ಅರಣ್ಯನಾಶ, ಅತಿಕ್ರಮಣ, ಮರಗಳ್ಳತನ ಹೆಚ್ಚಾಗಿರುವ ಕುರಿತುಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಆದ್ದರಿಂದ ಸದರಿ ವರದಿ ಮೇಲೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು,’ ಎಂದು ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 2021ರ ಅಕ್ಟೋಬರ್ 21ರಂದು ಬರೆದಿದ್ದ ಪತ್ರದಲ್ಲಿ ನಿರ್ದೇಶಿಸಿದ್ದರು.
ಈ ಪತ್ರವನ್ನಾಧರಿಸಿ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ 2 ತಿಂಗಳ ನಂತರ ಮಾಹಿತಿ ಒದಗಿಸಿರುವ ಕರ್ನಾಟಕ ಜೀವಿವೈವಿಧ್ಯ ಮಂಡಳಿಯು ‘ ಕರ್ನಾಟಕ ಜೀವಿವೈವಿಧ್ಯ ಮಂಡಳಿಯು ಯಾವುದೇ ಸಮೀಕ್ಷೆ ವರದಿ ಸಲ್ಲಿಸಿರುವುದಿಲ್ಲ,’ ಎಂದು ಮಾಹಿತಿ ಹಕ್ಕು 2005ರಡಿ ಅರ್ಜಿಯನ್ನು ವಿಲೇ ಮಾಡಿದೆ.
2021ರ ಅಕ್ಟೋಬರ್ 21ರಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೇ ಸಮೀಕ್ಷಾ ವರದಿ ಆಧರಿಸಿ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದರೂ ಸರ್ಕಾರಕ್ಕೆ ಯಾವುದೇ ಸಮೀಕ್ಷೆ ವರದಿಯನ್ನೇ ಸಲ್ಲಿಸಿಲ್ಲ ಎಂದು ಮಂಡಳಿಯು ಉತ್ತರ ನೀಡಿರುವುದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.