ಬೆಂಗಳೂರು; ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಟೆಂಡರ್ ಕಾರ್ಯಾದೇಶ ನೀಡಲು ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಎಂ ವಿ ಪ್ರಶಾಂತ್ ಕುಮಾರ್ ವಿರುದ್ಧ ಇದುವರೆಗೂ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮೊಕದ್ದಮೆ ದಾಖಲು ಮಾಡಿಲ್ಲ.
ಕಾರ್ಯಾಚರಣೆ ವೇಳೆ ಎಂಟು ಕೋಟಿ ರು.ಗಿಂತ ಹೆಚ್ಚು ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದರೂ ಇದುವರೆಗೂ ಜಾರಿ ನಿರ್ದೇಶನಾಲಯ ಸುಳಿದಿಲ್ಲ.
ಮೆರ್ಸೆಸ್ ಡಿಲಿಸಿಯಾ ಕೆಮಿಕಲ್ಸ್ ಕಂಪೆನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಕುರಿತ ಕೆಎಸ್‌ಡಿಎಲ್ ಟೆಂಡರ್ ಕಾರ್ಯಾದೇಶ ನೀಡಲು ಪ್ರತಿಯಾಗಿ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಪ್ರಶಾಂತ್ ಮಾಡಾಳು ಅವರ ಮನೆ ಮೇಲೂ ದಾಳಿ ನಡೆದಿತ್ತು. ಆ ವೇಳೆಯಲ್ಲಿ 6 ಕೋಟಿಗೂ ಹೆಚ್ಚಿನ ಮೊತ್ತ ಇದ್ದದ್ದನ್ನು ಕಂಡು ಲೋಕಾಯುಕ್ತ ಪೊಲೀಸರೇ ಹುಬ್ಬೇರಿಸಿದ್ದರು.
ಪ್ರಶಾಂತಕುಮಾರ್ ಮಾಡಾಳು ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆಯೇ ವಿನಃ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಸಾಮಾನ್ಯವಾಗಿ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ ನಂತರ ಲೋಕಾಯುಕ್ತ ಪೊಲೀಸರು ತಕ್ಷಣವೇ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮೊಕದ್ದಮೆ ದಾಖಲು ಮಾಡುತ್ತಿದ್ದರು. ಪ್ರಶಾಂತ್ ಮಾಡಾಳು ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮೊಕದ್ದಮೆ ದಾಖಲಿಸಲು ಮೀನಮೇಷ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಈಗಾಗಲೇ ಪ್ರಶಾಂತ್ ಮಾಡಾಳು ಅವರಿಗೆ ಕರ್ನಾಟಕ ಹೈಕೋರ್ಟ್ ಕೆಲ ದಿನಗಳ ಹಿಂದೆಯಷ್ಟೇ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಲಂಚ ಸ್ವೀಕಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದರೆ, ಅವರ ಪುತ್ರ ಪ್ರಶಾಂತ್ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಜಾಮೀನು ಕೋರಿ ಪ್ರಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಏಪ್ರಿಲ್10ರಂದು ವಜಾಗೊಳಿಸಿತ್ತು.
ಇದರಿಂದ, ಪ್ರಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣದಲ್ಲಿ ಮಾರ್ಚ್ 27ರಂದು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಏ.15ರಂದು ಜಾಮೀನು ಮಂಜೂರು ಮಾಡಿತ್ತು.
ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿದ್ದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಅವರ ಖಾಸಗಿ ಒಟ್ಟು 2.02 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಡಾಲರ್ಸ್ ಕಾಲೋನಿಯ ಪ್ರಶಾಂತ್ ಮನೆಯ ಮೇಲೆ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದರು. ಮನೆಯಲ್ಲಿ ಸಂಗ್ರಹಿಸಿ ಇರಿಸಿದ್ದ 6 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು ಖುದ್ದು ಲೋಕಾಯುಕ್ತ ಪೊಲೀಸರೇ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.