Thursday | May 21, 2026 |

ಆಕ್ಸಿಜನ್‌ ಕೊರತೆಯಿಂದಾದ ಸಾವುಗಳು; ಕೇಂದ್ರಕ್ಕೆ ಎರಡನೇ ಬಾರಿಯೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಕೋವಿಡ್‌ ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿರುವ ಕುರಿತು ರಾಜ್ಯ ಬಿಜೆಪಿ ಸರ್ಕಾರವು ಸಂಸತ್ತಿಗೆ ಈ ಬಾರಿಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್‌ ಸಾವುಗಳ ಅಂಕಿ ಸಂಖ್ಯೆಗಳ ಕೋರಿ ಜುಲೈ 26ರಿಂದ 30ರ ಮಧ್ಯೆ ರಾಜ್ಯಗಳಿಗೆ ಮೂರು ಬಾರಿ ಪತ್ರ ಬರೆದಿದ್ದ ಕೇಂದ್ರಕ್ಕೆ ಉತ್ತರಿಸಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯದ ಹೆಸರಿಲ್ಲ.

ಅಂಡಮಾನ್‌ ನಿಕೋಬಾರ್‌ ಆಡಳಿತ, ದಾದ್ರಾ ನಗರ್‌ ಹವೇಲಿ, ಡಾಮನ್‌, ಡಿಯು ಆಡಳಿತ, ಉತ್ತರ ಪ್ರದೇಶ, ತೆಲಂಗಾಣ, ಅಸ್ಸಾಂ, ಪಂಜಾಬ್‌, ಜಮ್ಮು ಕಾಶ್ಮೀರ, ಲಡಾಖ್‌, ಪಶ್ಚಿಮ ಬಂಗಾಳ, ಪುದುಚ್ಚೇರಿ, ಅರುಣಾಚಲ ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್‌, ಸಿಕ್ಕಿಂ, ತ್ರಿಪುರಾ, ಜಾರ್ಖಂಡ್‌ ಮತ್ತು ಹಿಮಾಚಲ ಪ್ರದೇಶ ಆಡಳಿತಗಳು ಉತ್ತರಿಸಿದ್ದವು. ಈ ಪೈಕಿ ಪಂಜಾಬ್‌ ರಾಜ್ಯವು ಅಮೃತ್‌ಸರ್‌ ಜಿಲ್ಲೆಯ ಒಂದು ಆಸ್ಪತ್ರೆಯಲ್ಲಿ 4 ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿವೆ ಎಂದು ಅನುಮಾನ ವ್ಯಕ್ತಪಡಿಸಿ ಲಿಖಿತ ಹೇಳಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಸಂಸತ್‌ಗೆ ತಿಳಿಸಿದ್ದಾರೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಐಎಂಎಸ್‌) ಆಮ್ಲಜನಕ ಕೊರತೆಯಿಂದ 24 ಜನರು ಸಾವನ್ನಪ್ಪಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸದೇ ತನ್ನ ಭಂಡ ನಿರ್ಲಕ್ಷ್ಯತನವನ್ನು ಮೆರೆಯುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕೋವಿಡ್‌ –19ರ ಎರಡನೇ ಅಲೆಯ ಸಂದರ್ಭದಲ್ಲಿ, ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟ ಬಗ್ಗೆ ರಾಜ್ಯಗಳಿಂದ ವರದಿಯಾಗಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಕೆ.ಸಿ. ವೇಣುಗೋಪಾಲ್‌ ಅವರ ಪ್ರಶ್ನೆಗೆ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್‌ ಅವರು ಉತ್ತರಿಸಿದ್ದನ್ನು ಸ್ಮರಿಸಬಹುದು.

ಜಿಲ್ಲಾ ಶಸ್ತ್ರ ಚಿಕಿತ್ಸಕರು ನೀಡಿದ್ದ ವರದಿ ಏನಾಯಿತು?

ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಮಸ್ಯೆಯಿಂದ ಉಂಟಾದ ಸಾವಿನ ಪ್ರಕರಣ, ಆಕ್ಸಿಜನ್‌ ಪೂರೈಕೆಯಲ್ಲಿ ಇಲಾಖೆಯು ಅಳವಡಿಸಿಕೊಂಡಿದ್ದ ವಿಧಾನಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ 2021ರ ಸೆಪ್ಟಂಬರ್‌ 1ರಂದು 2 ಪುಟದ ವರದಿ ನೀಡಿದ್ದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಐಎಂಎಸ್‌) ಆಮ್ಲಜನಕ ಪೂರೈಕೆಯಲ್ಲಿನ ಕೊರತೆಯಿಂದಾಗಿ ಮೇ 2ರ ರಾತ್ರಿ 10;30ರಿಂದ 2.20ರ ಮಧ್ಯದಲ್ಲಿ ಆಮ್ಲಜನಕ ಕೊರತೆಯಾಗಿತ್ತು. ಅಲ್ಲದೆ ಮೇ 3ರ ಬೆಳಗಿನ ಜಾವ 2;20ರಿಂದ ನಿರಂತರವಾಗಿ ಆಮ್ಲಜನಕ ಪೂರೈಕೆಯಾದ ನಂತರವೂ ಬೆಳಗ್ಗೆ 9ರವರಗೆ ಒಟ್ಟು 10 ಕೋವಿಡ್‌ ಮರಣ, ಕೋವಿಡ್‌ ಲಕ್ಷಣಗಳಿದ್ದ ಇಬ್ಬರು ರೋಗಿಗಳು ಸೇರಿದಂತೆ 15 ಸಾವು ಸಂಭವಿಸಿವೆ ಎಂದು ಚಾಮರಾಜನಗರ ಜಿಲ್ಲೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ವರದಿ ನೀಡಿದ್ದರು.

‘2021ರ ಮೆ 2ರಂದು ರಾತ್ರಿ 10-30ರಿಂದ 12;30ರವರೆಗೆ ಹಾಗೂ 12;50ರಿಂದ 2;20ರವರೆಗೆ ಆಮ್ಲಜನಕದ ಕೊರತೆಯಾಗಿರುತ್ತದೆ. ಈ ಸಮಯದಲ್ಲಿ 5 ಸಾವು ( 3 ಕೋವಿಡ್‌ ಮತ್ತು 2 ನಾನ್‌ ಕೋವಿಡ್‌ (ಸಿಎಲ್‌ಎಸ್‌) ಸಂಭವಿಸಿರುತ್ತದೆ. 2021ರ ಮೇ 3ರಂದು ಬೆಳಗಿನ ಜಾವ 2;20ರಿಂದ ನಿರಂತರವಾಗಿ ಆಕ್ಸಿಜನ್‌ ಪೂರೈಕೆಯಾಗಿರುತ್ತದೆ. ಪೂರೈಕೆಯಾದ ನಂತರ ಬೆಳಿಗ್ಗೆ 9 ಗಂಟೆವರೆಗೆ 10 ಕೋವಿಡ್‌ ಮರಣಗಳು ಹಾಗೂ ಕೋವಿಡ್‌ ಲಕ್ಷಣಗಳುಳ್ಳ ಇಬ್ಬರು ಸಾವನ್ನಪ್ಪಿದ್ದಾರೆ,’ ಎಂದು 2 ಪುಟದ ವರದಿಯಲ್ಲಿ ಮಾಹಿತಿ ಒದಗಿಸಿದ್ದರು.

‘ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಸೆಂಟ್ರಲ್‌ ಆಕ್ಸಿಜನ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಾರ್ಚ್‌ 2021ರವರೆಗೆ 254 ಸಿಲಿಂಡರ್‌ಗಳನ್ನು ಖರೀದಿಸಲಾಗಿದೆ. 2021ರ ಏಪ್ರಿಲ್‌ 29ರವರೆಗೆ ಜಂಬೋ ಸಿಲಿಂಡರ್‌ ಮುಖಾಂತರ ಆಕ್ಸಿಜನ್‌ ಅನ್ನು ಸರಬರಾಜು ಮಾಡಲಾಗುತ್ತಿತ್ತು. ಚಾಮರಾಜನಗರದಲ್ಲಿ ಸಿಲಿಂಡರ್‌ಗಳನ್ನು ರಿಫಿಲ್ಲಿಂಗ್‌ ಮಾಡುವ ಏಜೆನ್ಸಿಗಳು ಇರುವುದಿಲ್ಲ. ಆದ್ದರಿಂದ ಜಂಬೋ ಸಿಲಿಂಡರ್‌ಗಳನ್ನು ಮೈಸೂರಿನಿಂದ ರೀಫಿಲ್ಲಿಂಗ್‌ ಮಾಡಿ ತರಲಾಗುತ್ತಿತ್ತು,’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದ್ದರು.

ಅದೇ ರೀತಿ ಕೋವಿಡ್‌ ಆಸ್ಪತ್ರೆಗೆ ಹೆಚ್ಚುವರಿ 44 ಆಕ್ಸಿಜನ್‌ ಪೋರ್ಟಲ್‌ಗಳನ್ನು 2021ರ ಏಪ್ರಿಲ್‌ 4ರಂದು ಅಳವಡಿಸಲಾಗಿತ್ತು. ಆಕ್ಸಿಜನ್‌ ಪೋರ್ಟಲ್‌ ಸಂಖ್ಯೆ 99 ಆಗಿತ್ತು. ಸಿಸಿಯುನಲ್ಲಿ 10 ಆಕ್ಸಿಜನ್‌ ಹಾಸಿಗೆ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲಿ 12 ಆಕ್ಸಿಜನ್‌ ಹಾಸಿಗೆಗಳಿದ್ದು, ಇವುಗಳನ್ನು ಕೋವಿಡ್‌ ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿತ್ತು. ಹಾಗಾಗಿ 2021ರ ಏಪ್ರಿಲ್‌ ಕೊನೆಯ ವಾರದಲ್ಲಿ ಒಟ್ಟು 121 ಆಕ್ಸಿಜನ್‌ ಪೋರ್ಟಲ್‌ಗಳಾಗಿತ್ತು,’ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ಆಕ್ಸಿಜನ್‌ ಸಿಲಿಂಡರ್‌ ಸರಬರಾಜಿನ ಬಗ್ಗೆ ನಿರಂತರವಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಿ ಮಾರ್ಗದರ್ಶನ ಪಡೆಯಲಾಗಿತ್ತು ಎಂದು ಮಾಹಿತಿ ಒದಗಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧೀಕ್ಷಕ, ಆಕ್ಸಿಜನ್‌ ಸರಬರಾಜಿನ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ (ಏಪ್ರಿಲ್‌ 29, 2021) ಪ್ರಸ್ತಾಪಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 29ರಂದು ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆಎಲ್‌ ಸಾಮರ್ಥ್ಯದ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ (ಎಲ್‌ಎಂಒ) ಟ್ಯಾಂಕ್‌ನ್ನು ಮೊದಲ ಬಾರಿಗೆ ಅಳವಡಿಸಲಾಗಿತ್ತು. ಮತ್ತು ಅದೇ ದಿನ ಮೊದಲ ಬಾರಿಗೆ ತುಂಬಿಸಿ ಉಪಯೋಗಿಸಲಾಗಿತ್ತು. ಮೇ 1ರಂದು ಬೆಳಗ್ಗೆ 8 ಗಂಟೆಗೆ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಅನ್ನು ಎರಡನೇ ಸಲ ತುಂಬಿಸಲಾಗಿತ್ತು. ಇದನ್ನು ಮೇ 2ರ ಮಧ್ಯಾಹ್ನ 2 ಗಂಟೆಯವರಗೆ ಉಪಯೋಗಿಸಲಾಗಿತ್ತು ಎಂದು ವರದಿಯಲ್ಲಿ ಮಾಹಿತಿ ಒದಗಿಸಿದ್ದಾರೆ.

ನಿರ್ಣಾಯಕ ಸಮಯದಲ್ಲಿ ಅವರಿಗೆ ಆಮ್ಲಜನಕದ ಅಗತ್ಯವಿತ್ತು. ಆದರೆ, ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯೇ ಇರಲಿಲ್ಲ. ಮೃತಪಟ್ಟವರ ಕೇಸ್ ಶೀಟ್‌ಗಳನ್ನು ಗಮನಿಸಿದರೆ ಅವರಿಗೆ ಆಮ್ಲಜನಕದ ಅಭಾವವಿತ್ತು ಎಂಬುದನ್ನು ಸೂಚಿಸುತ್ತದೆ. ಆಮ್ಲಜನಕ ಕೊರತೆ ಕಾರಣಕ್ಕೆ ಮೆದುಳಿನ ಕೋಶಗಳಿಗೆ ಹಾನಿಯಾಗಿದೆ’ ಎಂದು ಹೈಕೋರ್ಟ್‌ ನೇಮಿಸಿದ್ದ ಸಮಿತಿ ಅಭಿಪ್ರಾಯಪಟ್ಟಿದ್ದನ್ನು ಸ್ಮರಿಸಬಹುದು.

2021ರ ಜೂನ್‌ನಲ್ಲಿಯೇ ಅತಿ ಹೆಚ್ಚು ಎಂದರೆ 99,665 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಜನವರಿಯಲ್ಲಿ 50,319, ಫೆಬ್ರುವರಿಯಲ್ಲಿ 45,884, ಮಾರ್ಚ್‌ನಲ್ಲಿ 49,987, ಏಪ್ರಿಲ್‌ನಲ್ಲಿ 42,337, ಮೇನಲ್ಲಿ 77,221, ಜುಲೈನಲ್ಲಿ 65,530 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಈ ಕುರಿತು ಅಂಕಿ ಅಂಶಗಳ ದಾಖಲೆಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿತ್ತು.

ರಾಜ್ಯದಲ್ಲಿ ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಯುಷ್ಮಾನ್‌ ಭಾರತ್‌ (ಎಬಿ) ಯೋಜನೆಯಡಿ ಕ್ಲೈಮ್‌ ಮಾಡಿರುವ 2,34,247 ಪ್ರಕರಣಗಳ ಪೈಕಿ ಕೇವಲ 14,371 ಮಂದಿಯಷ್ಟೇ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಒಟ್ಟು ಕ್ಲೈಮ್‌ಗಳ ಪೈಕಿ ಸಾವಿನ ಪ್ರಮಾಣ ಶೇಕಡವಾರು 6ರಷ್ಟಿದೆ. ಅದೇ ರೀತಿ ಕೋವಿಡ್‌ ಬುಲೆಟಿನ್‌ನಲ್ಲಿ (2021ರ ಆಗಸ್ಟ್‌ 2) ನಮೂದಿಸಿರುವ ಅಂಕಿ ಸಂಖ್ಯೆಗೂ ಡೆತ್‌ ಆಡಿಟ್‌ನಲ್ಲಿ ಒದಗಿಸಿರುವ ಸಾವಿನ ಸಂಖ್ಯೆ ನಡುವೆ 1,471ಯಷ್ಟೇ ವ್ಯತ್ಯಾಸವಿತ್ತು.

Hot this week

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...
Please Scan to make Your Contribution

Topics

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

Related Articles

Popular Categories

error: Content is protected !!