ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ; ಎಕರೆಗೆ ಶೇ. 5ರಷ್ಟು ದರ ನಿಗದಿ, 139.21 ಕೋಟಿ ನಷ್ಟದ ಹೊರೆ

photo credit;rashokofficialtwitter account

ಬೆಂಗಳೂರು; ಕರ್ನಾಟಕ ವಿಧಾನಸಭೆಗೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ದರವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರು. ನಷ್ಟವನ್ನು ಹೊರಿಸಿದೆ.

 

ಜನಸೇವಾ ಟ್ರಸ್ಟ್‌ಗೆ 2022ರ ಸೆ.13 ಮತ್ತು 2023ರ ಮಾರ್ಚ್‌ 16ರಂದು ಕ್ರಮವಾಗಿ 25 ಎಕರೆ ಗೋಮಾಳವನ್ನು ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ. 25ರಷ್ಟು ಮತ್ತು 10.33 ಎಕರೆ ಗೋಮಾಳವನ್ನು ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ದರವನ್ನು ಭರಿಸಲು ಕಷ್ಟಸಾಧ್ಯ ಎಂದು ಜನಸೇವಾ ಟ್ರಸ್ಟ್‌ ಕೋರಿಕೆ ಸಲ್ಲಿಸಿದ್ದ ಕೆಲವೇ ಕೆಲವು ದಿನಗಳಲ್ಲಿ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಚಿಕ್ಕಾಸು ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೆ ನಂಬರ್‌ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು 2022ರ ಸೆ. 13ರಂದು ಇದಾಗಿ 6 ತಿಂಗಳ ಒಳಗೇ ಇದೇ ಸರ್ವೇ ನಂಬರ್‌ನಲ್ಲಿ ಹೆಚ್ಚುವರಿಯಾಗಿ 10.33 ಎಕರೆ ಜಮೀನು ಮಂಜೂರು ಮಾಡಿತ್ತು. ಒಟ್ಟಾರೆ ಈ ಟ್ರಸ್ಟ್‌ಗೆ 35.33 ಎಕರೆ ಗೋಮಾಳ ಮಂಜೂರಾಗಿತ್ತು.

 

ತಾವರೆಕೆರೆ ಹೋಬಳಿ ಕುರುಬರಹಳ್ಳಿಯಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರದಂತೆ ಕೃಷಿ ಜಮೀನು ಎಕರೆಗೆ 1.20 ಕೋಟಿ ರು. ಇದೆ. ಇದರ ಪ್ರಕಾರ ಜನಸೇವಾ ಟ್ರಸ್ಟ್‌ಗೆ 35.33 ಎಕರೆಗೆ 42.39 ಕೋಟಿ ರು. ಆಗಲಿದೆ. ಅಲ್ಲದೇ ಇದೇ ಕುರುಬರಹಳ್ಳಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಎಕರೆಗೆ ಗರಿಷ್ಠ 4 ಕೋಟಿ ರು. ಇದೆ. ಇದರ ಪ್ರಕಾರ 35.33 ಎಕರೆಗೆ 141.32 ಕೋಟಿ ರು. ಆಗಲಿದೆ.

 

ಆದರೆ ಸರ್ಕಾರವು ಜನಸೇವಾ ಟ್ರಸ್ಟ್‌ನ ಕೋರಿಕೆಯಂತೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿರುವ ದರದಂತೆ ಲೆಕ್ಕ ಹಾಕಿದರೆ ತಲಾ ಎಕರೆಗೆ ಕೇವಲ 6 ಲಕ್ಷ ರು ಆಗಲಿದೆ. ಇದರ ಪ್ರಕಾರ 35.33 ಎಕರೆಗೆ ಕೇವಲ 2.11 ಕೋಟಿ ರು. ಆಗಲಿದೆ. ಸರ್ಕಾರಿ ಮಾರ್ಗಸೂಚಿ ಮೌಲ್ಯದಂತೆಯೇ ಲೆಕ್ಕ ಹಾಕಿದರೆ ಸರ್ಕಾರಕ್ಕೆ 40.28 ಕೋಟಿ ರು. ನಷ್ಟವಾದಂತಾಗುತ್ತದೆ. ಇನ್ನು ಮುಕ್ತ ಮಾರುಕಟ್ಟೆ ದರದ ಪ್ರಕಾರ 35.33 ಎಕರೆಗೆ 141.32 ಕೋಟಿ ರು. ಆಗಲಿದೆ. ಶೇ.5ರಂತೆ ದರವನ್ನು ಮರು ನಿಗದಿ ಮಾಡಿರುವ ಪ್ರಕಾರ ಸರ್ಕಾರಕ್ಕೆ ಅಂದಾಜು 139.21 ಕೋಟಿ ರು. ನಷ್ಟವಾದಂತಾಗುತ್ತದೆ.

 

ಜನಸೇವಾ ಟ್ರಸ್ಟ್‌ ಕಳೆದ 50 ವರ್ಷಗಳಿಂದ ಶೈಕ್ಷಣಿಕ ಸಂಸ್ಥೆಗಳನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ನಡೆಸುತ್ತಿದ್ದು ಈಗಾಗಲೇ ಸರ್ಕಾರದ ಆದೇಶಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್‌ 89ರಲ್ಲಿ 35-33 ಎಕರೆ/ಗುಂಟೆ ಜಮೀನು ಮಂಜೂರು ಮಾಡಲು ವಿಧಿಸಿರುವ ದರದಂತೆ ಪಾವತಿಸಲು ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ದರವನ್ನು ಪರಿಷ್ಕರಿಸಿ ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟನ್ನು ಮರುನಿಗದಿಪಡಿಸಬೇಕು ಎಂದು ಜನಸೇವಾ ಟ್ರಸ್ಟ್‌ನ ಗೌರವ ಕಾರ್ಯದರ್ಶಿಯು 2023ರ ಮಾರ್ಚ್‌ 16ರಂದು ಕೋರಿಕೆ ಸಲ್ಲಿಸಿದ್ದರು.

 

ಈ ಕೋರಿಕೆ ಕುರಿತು 2023ರ ಮಾರ್ಚ್‌ 24ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಸಚಿವ ಸಂಪುಟದ ನಿರ್ಣಯದ ಪ್ರಕಾರ ಜನಸೇವಾ ಟ್ರಸ್ಟ್‌ಗೆ ಈಗಾಗಲೇ ಮಂಜೂರಾಗಿರುವ 35.33 ಎಕರೆ ಜಮೀನಿಗೆ ವಿಧಿಸಿರುವ ಕೃಷಿಯೇತರ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿರುವುದನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ನಿಯಮ 22(ಎ)1)(i)(2) ಸಡಿಲಿಸಿ ಜಮೀನುಗಳ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಆದೇಶ ಹೊರಡಿಸಿದೆ.

 

ಟ್ರಸ್ಟ್‌ನ ಅ ಸಾ ನಿರ್ಮಲ್‌ ಕುಮಾರ್‌ ಎಂಬುವರು 2022ರ ಸೆ.28ರಂದು ಪುನಃ 15 ಎಕರೆ ಜಮೀನು ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಿದ್ದ ಕೋರಿಕೆ ಆಧರಿಸಿ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2023ರ ಜನವರಿ 25ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

 

‘ಜನಸೇವಾ ಟ್ರಸ್ಟ್‌ಗೆ 15 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ನಿಗದಿಪಡಿಸಿ ಮಂಜೂರು ಮಾಡಬೇಕು ಎಂದು ಕೋರಿರುತ್ತಾರೆ. ಈ ಪತ್ರದಲ್ಲಿ ತಿಳಿಸಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು,’ ಎಂದು ಸರ್ಕಾರದ ಕಾರ್ಯದರ್ಶಿಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದರು. ಇದರ ಅನ್ವಯ ಕಂದಾಯ ಇಲಾಖೆಯು 10.33 ಎಕರೆಯನ್ನು ಮಂಜೂರು ಮಾಡಿತ್ತು. ಈ ಕುರಿತು ‘ದಿ ಫೈಲ್‌’ 2023ರ ಮಾರ್ಚ್‌ 21ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಜನಸೇವಾ ಟ್ರಸ್ಟ್‌ಗೆ 25 ಎಕರೆ ನೀಡಿದ್ದರೂ ಹೆಚ್ಚುವರಿ 10.33 ಎಕರೆ ಮಂಜೂರು; ಸಂಘದ ಮೋಹ ಬಿಡಲೊಲ್ಲದ ಸರ್ಕಾರ

ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೆ ನಂಬರ್‌ 89ರಲ್ಲಿದ್ದ ಒಟ್ಟು  40.20 ಎಕರೆ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನಲ್ಲಿ ಸುಮಾರು 40 ಕ್ಕೂ ಹೆಚ್ಚಿನ ಭೂ ಭಾಗದಲ್ಲಿ ಕಲ್ಲು ಬಂಡೆಗಳಿವೆ. ಎತ್ತರ ಮತ್ತು ತಗ್ಗು ಪ್ರದೇಶದಿಂದ ಕೂಡಿದೆ. ಉದ್ದೇಶಿತ ಕಟ್ಟಡಗಳನ್ನು ನಿರ್ಮಾಣ ಮಾಢುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಣವನ್ನು ಭರಿಸಬೇಕಾಗುತ್ತದೆ. ಮತ್ತು ಉದ್ದೇಶಿತ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಈಗ ಮಂಜೂರಾದ 25 ಎಕರೆ ಭೂಮಿಯ ಜತೆಗೆ ಇದೇ ಸರ್ವೇ ನಂಬರ್‌ನಲ್ಲಿರುವ ಇನ್ನೂ 15 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ಜನಸೇವಾ ಟ್ರಸ್ಟ್‌ನ ಅ ಸ ನಿರ್ಮಲಕುಮಾರ್‌ ಅವರು ಸರ್ಕಾರಕ್ಕೆ ಸಲ್ಲಿಸಿರುವ ಕೋರಿಕೆಯಲ್ಲಿ ವಿವರಿಸಿದ್ದರು.

 

ಇದಷ್ಟೇ ಅಲ್ಲದೇ ಜನಸೇವಾ ಟ್ರಸ್ಟ್‌ಗೆ ಅಂದಾಜು 80 ಕೋಟಿ ರು. ಮೌಲ್ಯದ 40 ಎಕರೆ ಜಮೀನು ಇದ್ದರೂ ರಾಜ್ಯ ಸರ್ಕಾರವು 35.33 ಎಕರೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಮುಂದಾಗಿದೆ ಎಂಬುದನ್ನು ‘ದಿ ಫೈಲ್‌’ 2022ರ ಸೆ.5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ ಗೋಮಾಳ;80 ಕೋಟಿ ಬೆಲೆಯ 40 ಎಕರೆ ಇದ್ದರೂ 70 ಕೋಟಿ ಮೌಲ್ಯದ 35 ಎಕರೆ ಮಂಜೂರು

ಈಗಾಗಲೇ 40 ಎಕರೆ ಜಮೀನಿದ್ದರೂ ಮಾರುಕಟ್ಟೆ ಮೌಲ್ಯಕ್ಕಿಂತಲೂ ಶೇ. 5ರ ದರದಲ್ಲಿ 35.33 ಎಕರೆ ಗೋಮಾಳ ಜಮೀನನ್ನು ಮಂಜೂರು ಮಾಡಿರುವುದು ಸಿಎಜಿ ಆಕ್ಷೇಪಣೆಗೆ ದಾರಿಮಾಡಿಕೊಟ್ಟಂತಾಗಿದೆ.

 

ಜನಸೇವಾ ಟ್ರಸ್ಟ್‌ ಸೇರಿದಂತೆ ರಾಷ್ಟ್ರೋತ್ಥಾನ ಪರಿಷತ್‌ಗೆ ರಾಜ್ಯದ ವಿವಿಧೆಡೆ ಗೋಮಾಳ ಜಮೀನು ಮಂಜೂರು ಮಾಡುವ ಪ್ರಸ್ತಾವನೆಗಳನ್ನು ಸಚಿವ ಸಂಪುಟಕ್ಕೆ ಮಂಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಮತ್ತು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಕಡತ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts