ಗುತ್ತಿಗೆದಾರರಿಗೆ 1,120 ಕೋಟಿ ಅಕ್ರಮ ಲಾಭ!; ಆರೋಪಿತ ಅಧಿಕಾರಿಗಳ ರಕ್ಷಣೆಗೆ ನಿಂತ ಸರ್ಕಾರ

ಬೆಂಗಳೂರು; ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆ ಟೆಂಡರ್‌ ಪ್ರಕ್ರಿಯೆಗಳನ್ನು ವಿಕೇಂದ್ರಿಕರಣಕ್ಕೆ ವಿರುದ್ಧವಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರವು ಕೈಗೊಂಡಿದ್ದ ತೀರ್ಮಾನ, ಗುತ್ತಿಗೆದಾರರಿಗೆ ಅತ್ಯಧಿಕ ಪ್ರೀಮಿಯಂ, ಸರ್ಕಾರದ ಗಮನಕ್ಕೆ ತರದೇ ಬೆಲೆ ವ್ಯತ್ಯಾಸದ ಷರತ್ತು ಸೇರಿಸಿ ಟೆಂಡರ್‌ ಕೊಟ್ಟಿರುವುದು ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರು. ನಷ್ಟ ಸಂಭವಿಸಲು ದಾರಿಮಾಡಿಕೊಟ್ಟಿದೆ.

 

ಅಲ್ಲದೇ ಟೆಂಡರ್‌ ನಿಯಮಗಳನ್ನು ಉಲ್ಲಂಘಿಸಿ 1,120 ಕೋಟಿ ರು. ಗಳಷ್ಟು ಮೊತ್ತವನ್ನು ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಪಾವತಿಸಲು ಅಕ್ರಮವಾಗಿ ಲಾಭ ಮಾಡಿಕೊಡಲು ಕಾರಣವಾಗಿರುವ ಅಧಿಕಾರಿಗಳು ಮತ್ತು ಅವರ ಹಿಂದಿರುವ ಪ್ರಭಾವಿಗಳ ರಕ್ಷಣೆಗೆ ಹಾಲಿ ಬಿಜೆಪಿ ಸರ್ಕಾರವೂ ನಿಂತಿದೆ.

 

ಹಾಗೆಯೇ ಸರ್ಕಾರದ ಅನುಮೋದನೆಯಿಲ್ಲದೆಯೇ ಕಾನೂನುಬಾಹಿರವಾಗಿ ಬೆಲೆ ವ್ಯತ್ಯಾಸದ ಷರತ್ತುಗಳನ್ನು ಸೇರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು 2019ರಲ್ಲಿಯೇ ಅಭಿವೃದ್ಧಿ ಆಯುಕ್ತರ ಸಮಿತಿಯು ವರದಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಚಿವ ಬಿ ಸಿ ನಾಗೇಶ್‌ ಅವರು ಸಹ ಈ ಕುರಿತು ಮೌನ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ‘ದಿ ಫೈಲ್‌’ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.

 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ಶಾಲಾ ದುರಸ್ತಿ, ಕೊಠಡಿ ನಿರ್ಮಾಣ ಸೇರಿದಂತೆ ಇನ್ನಿತರೆ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 990 ಕೋಟಿ ರು. ಮೊತ್ತದಲ್ಲಿ ಮೂಲ ಅಂದಾಜು ಪಟ್ಟಿ ರಚಿಸಲಾಗಿತ್ತು. ಆದರೆ ಈಗಾಗಲೇ 1,680 ಕೋಟಿ ರು ಪಾವತಿಯಾಗಿದ್ದರೂ ಗುತ್ತಿಗೆದಾರರು ಇನ್ನೂ 1,120 ಕೋಟಿ ಹೆಚ್ಚುವರಿ ಪಾವತಿಗೆ ಬೇಡಿಕೆಯಿರಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಗುತ್ತಿಗೆದಾರರ ಬೇಡಿಕೆಯನ್ನು ಈಡೇರಿಸಿದಲ್ಲಿ ಕಾಮಗಾರಿಗಳ ಒಟ್ಟು ಮೊತ್ತ 2,700 ಕೋಟಿ ರು.ಗೇರಲಿದೆ. ಈ ಮೊತ್ತವನ್ನು ಮೂಲ ಅಂದಾಜಿಗೆ ಹೋಲಿಸಿದರೆ ಶೇ.180ಕ್ಕಿಂತಲೂ ಹೆಚ್ಚಾಗಿರುವುದು ಗೊತ್ತಾಗಿದೆ. 1,120 ಕೋಟಿ ರು.ಗಳಷ್ಟು ಹೆಚ್ಚುವರಿ ಮೊತ್ತ ಪಾವತಿಸುವಂತಹ ಪರಿಸ್ಥಿತಿಗೆ ತಂದೊಡ್ಡಿರುವ ಅಧಿಕಾರಿಗಳ ವಿರುದ್ಧ ಇದುವರೆಗೂ ಸರ್ಕಾರವು ಯಾವುದೇ ಕ್ರಮ ವಹಿಸಿಲ್ಲ. ಈ ವಿಳಂಬವನ್ನು ಗಮನಿಸಿದರೇ ಸರ್ಕಾರವೇ ಅಧಿಕಾರಿಗಳ ರಕ್ಷಣೆ ಮಾಡುವ ಉದ್ದೇಶ ಹೊಂದಿದೆಯೇ ಎಂಬ ಅನುಮಾನಗಳಿವೆ.

 

ಈ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಮೊದಲು ಅಂದಾಜು ತಯಾರು ಮಾಡಿದ್ದ ಇಲಾಖೆಯು ಆ ನಂತರ ತಾಂತ್ರಿಕ ಮಂಜೂರಾತಿ ಇಲ್ಲದೆಯೇ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಆ ನಂತರ ನ್ಯಾಯಾಲಯದ ವಿವಿಧ ಪೀಠಗಳಲ್ಲಿ ಈ ಪ್ರಕರಣವು ವಿಚಾರಣೆ ನಡೆದಿತ್ತು. ಈ ಎಲ್ಲಾ ಪೀಠಗಳಲ್ಲಿಯೂ ಸರ್ಕಾರದ ವಿರುದ್ಧವೇ ಆದೇಶ ಹೊರಬಿದ್ದಿರುವುದು ತಿಳಿದು ಬಂದಿದೆ.

 

ಸುಪ್ರೀಂ ಕೋರ್ಟ್‌ಗೆ ಹೋಗುವ ಮೊದಲು ಈ ಪ್ರಕರಣದಲ್ಲಿ ಕಾನೂನು ಅಭಿಪ್ರಾಯ ಪಡೆದುಕೊಂಡು ಇಲ್ಲಾಗಿರುವ ತಪ್ಪುಗಳನ್ನು ಸರಿಪಡಿಸಬೇಕಾಗಿತ್ತು. ಆದರೆ ಈ ಪ್ರಕರಣವನ್ನು ಮಧ್ಯಸ್ಥಗಾರರಿಗೆ (ಆರ್ಬಿಟ್ರೇಟರ್‌) ಕೊಡಲಾಗಿದೆ. ಇದರಲ್ಲಿ ಬಡ್ಡಿಯನ್ನೂ ಸೇರಿಸಿದರೆ 1,500 ಕೋಟಿ ರು ಪಾವತಿಸಬೇಕಾಗುತ್ತದೆ ಎಂದೂ ಹೇಳಲಾಗುತ್ತಿದೆ.

 

ಈ ಹಣವನ್ನು ಹಂಚಿಕೆ ಮಾಡಿ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಮಾತ್ರ ಭಾಗಿಯಾಗಿಲ್ಲ. ಹೀಗಾಗಿ ಇದೊಂದು ದೊಡ್ಡ ಮೊತ್ತದ ಹಗರಣವಾಗಿದ್ದು, ಇದರಲ್ಲಿ ಸರ್ಕಾರಕ್ಕೆ ಸೇರಿದ ಸಾವಿರಾರು ಕೋಟಿ ರು. ಲೂಟಿಯಾಗಿದೆ ಎಂಬ ಮಾತುಗಳು ಇಲಾಖೆಯೊಳಗಿನಿಂದಲೇ ಕೇಳಿ ಬಂದಿವೆ.

 

‘ಇಷ್ಟು ಅನಾಹುತಗಳಿಗೆ ಯಾರು ಕಾರಣವಾಗಿದ್ದಾರೆ ಎನ್ನುವ ಬಗ್ಗೆ ಇಲ್ಲಿಯವರೆಗೂ ಸರ್ಕಾರವು ಗಂಭೀರವಾಗಿ ಕ್ರಮ ತೆಗೆದುಕೊಂಡಿಲ್ಲ. ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿಯೊಂದು ಹಂತದಲ್ಲಿಯೂ ವಿಳಂಬ ಮಾಡಿಕೊಂಡು ಬಂದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ,’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಅಲ್ಲದೇ ಈ ಪ್ರಕರಣ ಕುರಿತು ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಸುದೀರ್ಘವಾಗಿ ಚರ್ಚಿಸಿದೆ. ಕಳೆದ ಡಿಸೆಂಬರ್‌ 2022ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿಯೂ ವರದಿಯನ್ನು ಸಲ್ಲಿಸಿದೆ.

 

‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯ ಕಾಮಗಾರಿಗಳ ಬಹಳಷ್ಟು ಗುತ್ತಿಗೆದಾರರು ಬೆಲೆಏರಿಕೆ ಷರತ್ತು ಕುರಿತಂತೆ ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಿ ನಷ್ಟ ಪರಿಹಾರ ಕೋರಿರುವುದನ್ನು ಮತ್ತು ಮಧ್ಯಸ್ಥರ ಬಳಿ ವ್ಯಾಜ್ಯ ಬಾಕಿಯಿರುವುದನ್ನು ಸಮಿತಿಯು ಗಮನಿಸಿರುತ್ತದೆ. ಇದು ಇಲಾಖೆಗೆ ಮುಂದೆ ಆರ್ಥಿಕವಾಗಿ ಬಹಳಷ್ಟು ಹೊರೆಯಾಗುವ ಸಾಧ್ಯತೆ ಇರುವ ಕಾರಣ ಇಲಾಖೆಯ ಅಧಿಕಾರಿಗಳು ಮಾಡಿರುವ ತಪ್ಪಿಗೆ ಭಾರೀ ದಂಡ ಪಾವತಿಸಬೇಕಾಗುವ ಪ್ರಮೇಯವು ಉಂಟಾಗಿದೆ, ‘ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಗಂಭೀರವಾಗಿ ವಿಶ್ಲೇಷಿಸಿದೆ.

 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರದಿಂದ 2009-10 ಮತ್ತು 2010-11ನೇ ಸಾಲಿನಲ್ಲಿ ಅನುಮೋದನೆ ಪಡೆದುಕೊಂಡ 2,336 ಕಾಮಗಾರಿಗಳನ್ನು ಇಲಾಖೆಯು ಇಲ್ಲಿಯವರೆಗೂ ಸಂಪೂರ್ಣವಾಗಿ ಪೂರ್ಣಗೊಳಿಸಿಲ್ಲ. ಮತ್ತು ಈ ಯೋಜನೆಯಲ್ಲಿನ ಸಿವಿಲ್‌ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ರಾಜ್ಯ ಯೋಜನಾ ಅಭಿಯಂತರರು ಕಾನೂನುಬಾಹಿರವಾಗಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ದರ ಏರಿಕೆ ಕಲಂನ್ನು ಗುತ್ತಿಗೆಯ ಷರತ್ತಿನಲ್ಲಿ ಅಳವಡಿಸಲಾಗಿದ್ದನ್ನು ಸಮಿತಿಯು ಪತ್ತೆ ಹಚ್ಚಿದೆ.

 

‘ಸರ್ಕಾರದ ಅನುಮೋದನೆ ಪಡೆಯದೇ ಕೆಲವು ಷರತ್ತುಗಳನ್ನು ಒಪ್ಪಂದ ಷರತ್ತಿಗೆ ಅಭಿಯಂತರರು ಸೇರಿಸಿರುವುದರಿಂದ ಸರ್ಕಾರದ ಬೆಂಬಲ ಈ ಷರತ್ತಿಗೆ ಇರುವುದಿಲ್ಲ. ಹಾಗೂ ಸರ್ಕಾರದ ಅನುಮೋದನೆ ಪಡೆಯದೇ ಒಡಂಬಡಿಯಲ್ಲಿ ದರ ಷರತ್ತುಗಳನ್ನು ಅಳವಡಿಸಿರುವುದಕ್ಕೆ ಯೋಜನೆಯ ಅಭಿಯಂತರರಾದ ಕೃಷ್ಣೇಗೌಡ ಮತ್ತು ವಿಜಯ್‌ ಎಂಬುವರು ಕಾರಣಕರ್ತರು. ಇವರುಗಳ ವಿರುದ್ಧ ಶಿಸ್ತು ಕ್ರಮ ಜಾರಿಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ಮಾಡಿಸಬೇಕು, ‘ ಎಂದು ಅಭಿವೃದ್ಧಿ ಆಯುಕ್ತರು ಶಿಫಾರಸ್ಸು ಮಾಡಿದ್ದರು ಎಂಬ ಅಂಶವು ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ಎನ್‌ಸಿಸಿ ಲಿಮಿಟೆಡ್‌, ಜಂಪನಾ ಕನ್ಸಟ್ರಕ್ಷನ್ಸ್‌, ಸಿ ರಾಮಗೋವಿಂದರೆಡ್ಡಿ, ಎಸ್‌ ಆರ್‌ ಚಂದ್ರಸೇನ, ಆರ್‌ ಆರ್‌ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ., ಚಿಕ್ಕೂರು ರಾಜೇಂದ್ರ ನಾಯ್ಡು, ಕೆಬಿಆರ್‌ ಇನ್ಫ್ರಾಟೆಕ್‌ ಲಿಮಿಟೆಡ್‌, ಮೈಕಾನ್‌ ಕನ್ಸ್‌ಟ್ರಕ್ಷನ್ಸ್‌ ಬೆಂಗಳೂರು, ಕೆಎಂವಿ ಪ್ರಾಜೆಕ್ಟ್‌ ಲಿಮಿಟೆಡ್‌ ಇವರಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಗೊತ್ತಾಗಿದೆ.

 

ಈ ಯೋಜನೆಯ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್‌ ಮತ್ತು ತನ್ವೀರ್‌ ಸೇಠ್‌ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದರು ಎಂಬುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts