ಬೆಂಗಳೂರು; ಖಾಲಿ ಇದ್ದ ಅಬಕಾರಿ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಬಯಸಿದ್ದ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಯೊಬ್ಬರಿಂದ 1 ಕೋಟಿ ಲಂಚ ಕೇಳಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಅಬಕಾರಿ ಸಚಿವ ಎಚ್ ನಾಗೇಶ್ ಅವರು ಗುರಿಯಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಬೆಂಗಳೂರು ವೃತ್ತದಲ್ಲಿ ಖಾಲಿ ಇದ್ದ ಜಂಟಿ ಆಯುಕ್ತರ ಹುದ್ದೆಗೆ ಬರಲು ಇಚ್ಛಿಸಿದ್ದ ಅಧಿಕಾರಿಯಿಂದ 1 ಕೋಟಿ ಲಂಚ ಕೇಳಿದ್ದಾರೆ ಎಂದು ಸ್ವತಃ ಅಧಿಕಾರಿ ಪುತ್ರಿ ಪ್ರಧಾನಮಂತ್ರಿ ಕಚೇರಿಗೆ 2020ರ ಜುಲೈ 14ರಂದು ದೂರು ಸಲ್ಲಿಸಿದ್ದಾರೆ. ಅಲ್ಲದೇ ಅದೇ ದೂರನ್ನು (ದೂರಿನ ಸಂಖ್ಯೆ; 51868298) ಇ-ಜನಸ್ಪಂದನದಲ್ಲಿಯೂ ದಾಖಲಿಸಿದ್ದಾರೆ. ಸದ್ಯ ಹೊಸಪೇಟೆ ವಿಭಾಗದಲ್ಲಿ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇ-ಜನಸ್ಪಂದನದಲ್ಲಿ ದಾಖಲಿಸಿರುವ ದೂರಿನ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಅಧಿಕಾರಿಯೊಬ್ಬರ ಪುತ್ರಿ 1 ಕೋಟಿ ಲಂಚದ ಆರೋಪ ಹೊರಿಸಿ ದಾಖಲಿಸಿರುವ ದೂರು, ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರ ವರ್ಗಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳನ್ನು ಬಲಪಡಿಸಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಅಧಿಕಾರಿ ಪುತ್ರಿ ಸ್ನೇಹಾ ಎಂಬುವರು ದೂರು ಸಲ್ಲಿಸುವ ಮುನ್ನ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಮತ್ತು ಸಂಸದರೊಬ್ಬರ ಕಚೇರಿಯನ್ನೂ ಎಡತಾಕಿ ಅವರ ಗಮನಕ್ಕೂ ತಂದಿದ್ದರು. ಆದರೆ ಅವರನ್ನೂ ಅಬಕಾರಿ ಸಚಿವರು ದಿಕ್ಕು ತಪ್ಪಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲೇನಿದೆ?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ‘ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟಾಚಾರದಿಂದ ಕೂಡಿದೆ. ವಿಶೇಷವಾಗಿ ಅಬಕಾರಿ ಇಲಾಖೆಯ ಸಚಿವ ಎಚ್ ನಾಗೇಶ್ ಅವರು ಅತ್ಯಂತ ಭ್ರಷ್ಟರು. ನನ್ನ ತಂದೆ ಇಲಾಖೆಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಭಾರತ ಸರ್ಕಾರದ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಅಬಕಾರಿ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಹೈಪರ್ ಟೆನ್ಷನ್, ಸಕ್ಕರೆ , ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಮ್ಮ ತಂದೆಗೆ ಇಬ್ಬರು ಪುತ್ರಿಯರಿದ್ದು, ಒಬ್ಬರು ಇಂಜಿನಿಯರಿಂಗ್ ಮತ್ತೊಬ್ಬರು ಪಿಯುಸಿ ವ್ಯಾಸಂಗ ಮಾಡುತ್ತಿದ್ದೇವೆ. 5 ಜಂಟಿ ಆಯುಕ್ತರ ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಲ್ಲ. ನಮ್ಮ ತಂದೆ ಸದ್ಯ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಾರೋಗ್ಯ ಮತ್ತು ನಿವೃತ್ತಿ ಅಂಚಿನಲ್ಲಿರುವ ಕಾರಣ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲು ಕೋರಿದ್ದೆವು. ಆದರೆ ಸಚಿವ ಎಚ್ ನಾಗೇಶ್ ಅವರು 1 ಕೋಟಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ, ‘ ಎಂದು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.
‘ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದೇವಲ್ಲದೆ ಅವರ ಬೇಡಿಕೆಯನ್ನು ಈಡೇರಿಸಲು ಸಮರ್ಥರಾಗಿಲ್ಲ. ಬೇಡಿಕೆ ಈಡೇರಿಸದ ಹೊರತು ವರ್ಗಾವಣೆ ಮಾಡುವುದಿಲ್ಲ. ಲಂಚ ನೀಡದ ಕಾರಣ ರಜೆ ಮೇಲೆ ತೆರಳಲು ಸಚಿವ ನಾಗೇಶ್ ಅವರು ಬಲವಂತ ಮಾಡುತ್ತಿದ್ದಾರೆ.
ಇದಕ್ಕೊಪ್ಪದ ಕಾರಣ ಹಿಂಸೆ ನೀಡಲಾಗುತ್ತಿದೆ. ಕಳೆದ 1 ತಿಂಗಳಲ್ಲಿ ಹಣ ಪಡೆದು 600ಕ್ಕೂ ಹೆಚ್ಚು ವರ್ಗಾವಣೆಗಳನ್ನು ಮಾಡಲಾಗಿದೆ. ಸಚಿವರ ಮಧ್ಯವರ್ತಿ ಎಂದು ಹೇಳಲಾಗಿರುವ ಎಲ್ ಎ ಮಂಜುನಾಥ್ ಮತ್ತು ಹರ್ಷ ಅವರು ವರ್ಗಾವಣೆ ಬಯಸುವ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಂಧಾನ ನಡೆಸುತ್ತಾರೆ. ಅಧಿಕಾರಿ ಸಿಬ್ಬಂದಿಯಿಂದ ಪಡೆದ ಹಣವನ್ನು ನೇರವಾಗಿ ಸಚಿವರಿಗೆ ತಲುಪಿಸುತ್ತಾರೆ, ‘ಎಂದು ಇಲಾಖೆಯೊಳಗೆ ನಡೆಯುತ್ತಿದೆ ಎನ್ನಲಾಗಿರುವ ಲಂಚಗುಳಿತನವನ್ನು ದೂರಿನಲ್ಲಿ ವಿವರಿಸಿದ್ದಾರೆ.
ವರ್ಗಾವಣೆ ಬಯಸಿರುವ ಅಧಿಕಾರಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರನ್ನು ಭೇಟಿ ಮಾಡಿದ್ದರು. ಆದರೆ ಅವರಿಗೂ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ ಎಂಬ ಸಂಗತಿ ದೂರಿನಿಂದ ಗೊತ್ತಾಗಿದೆ.
ಅಬಕಾರಿ ಇಲಾಖೆಯಲ್ಲಿ ಕಳೆದ ಹಲವು ತಿಂಗಳಿನಿಂದಲೂ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಂದಷ್ಟು ಅಬಕಾರಿ ನಿರೀಕ್ಷಕರ ಬಳಿ ಲಂಚಕ್ಕಾಗಿ ಬೇಡಿಕೆ ಇರಿಸಿದ್ದರು. ಈ ಸಂಬಂಧ ಖಾಸಗಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ವೇಳೆಯಲ್ಲಿ ಸಚಿವ ನಾಗೇಶ್ ಅವರು ಸಿಕ್ಕಿ ಬಿದ್ದಿದ್ದರು ಎಂದು ಹೇಳಲಾಗಿತ್ತು. ಆದರೆ ಖಾಸಗಿ ವಾಹಿನಿ ಕುಟುಕು ಕಾರ್ಯಾಚರಣೆ ದೃಶ್ಯಗಳನ್ನು ಪ್ರಸಾರ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರರೊಬ್ಬರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.