ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಬೆಂಗಳೂರು; ರಾಜ್ಯದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲಾ ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಸಂಘ ಪರಿವಾರದ ಹಲವು ಸಂಘ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಗೋಮಾಳ, ಸರ್ಕಾರಿ ಜಮೀನು ಮಂಜೂರಾಗುತ್ತಿದೆ. ಜಿಲ್ಲೆ, ತಾಲೂಕು, ಹೋಬಳಿ ಪ್ರದೇಶಗಳಲ್ಲಿ ಲಭ್ಯವಿರುವ ಗೋಮಾಳ ಮತ್ತು ಸರ್ಕಾರಿ ಜಮೀನುಗಳನ್ನು ಮಾರುಕಟ್ಟೆ ದರದ ಶೇ.25ದರದಲ್ಲಿ ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರುಪಾಯಿ ನಷ್ಟ ಸಂಭವಕ್ಕೂ ಕಾರಣವಾಗುತ್ತಿದೆ.

 

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಒಂದು ವರ್ಷದಲ್ಲಿ ಬೆಂಗಳೂರು, ಕಲ್ಬುರ್ಗಿ ಗೋಮಾಳವನ್ನು ಮಂಜೂರು ಮಾಡಿರುವ ಸರ್ಕಾರವು ಹೊಸಪೇಟೆಯಲ್ಲಿಯೂ ಜಮೀನು ಮಂಜೂರು ಮಾಡಲು ಹೊರಟಿದೆ. ಕಾನೂನು ಇಲಾಖೆಯು ವಿರೋಧ ವ್ಯಕ್ತಪಡಿಸಿದ್ದರೂ ಲೆಕ್ಕಿಸದೇ ಜಮೀನು ಮಂಜೂರು ಮಾಡುತ್ತಿರುವುದನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ದಾಖಲೆ ಪಡೆದು ಬಹಿರಂಗಗೊಳಿಸಿತ್ತು.

 

ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳಿಗೂ ಮೊದಲೇ ‘ದಿ ಫೈಲ್‌’ ಈ ಕುರಿತಾದ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಹೊಸಪೇಟೆಯಲ್ಲಿಯೂ ಜಮೀನು ಮಂಜೂರು ಮಾಡಲು ತರಾತುರಿಯಲ್ಲಿ ಸರ್ಕಾರ ಹೊರಟಿರುವುದರ ಬೆನ್ನಲ್ಲೇ ಮತ್ತೊಮ್ಮೆ ಈ ಎಲ್ಲಾ ವರದಿಗಳನ್ನು ಇಲ್ಲಿ ಕ್ರೋಢೀಕರಿಸಿ ಇಲ್ಲಿ ಕೊಡಲಾಗಿದೆ.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 24.8 ಎಕರೆ ಗೋಮಾಳ ಪೈಕಿ 9.32 ಎಕರೆ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಲು ಸಿದ್ಧತೆ ನಡೆಸಿದೆ ಎಂಬುದನ್ನು 2021ರ ಡಿಸೆಂಬರ್‌ 3ರಂದು ವರದಿ ಪ್ರಕಟಿಸಿತ್ತು.

ರಾಷ್ಟ್ರೋತ್ಥಾನಕ್ಕೆ ಬಹುಕೋಟಿ ಮೌಲ್ಯದ ಗೋಮಾಳ ಜಮೀನು; ಸಂಘಪರಿವಾರ ಮೆಚ್ಚಿಸಿದರೇ ಅಶೋಕ್‌?

ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ 74 ಎಕರೆ ಜಮೀನು ಹೊಂದಿದ್ದರೂ ಹೆಸರಘಟ್ಟ ಬಳಿ 9.32 ಎಕರೆ ಜಮೀನನ್ನು 2022ರ ಫೆ.22ರಂದು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಪ್ರಚಲಿತ ಮಾರುಕಟ್ಟೆಯಲ್ಲಿ 7.45 ಕೋಟಿ ರು. ಬೆಲೆಬಾಳುವ ಜಮೀನನ್ನು ಕೇವಲ1.86 ಕೋಟಿ ರು.ಗೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದನ್ನು 2022ರ ಏಪ್ರಿಲ್‌ 22ರಂದು ವರದಿ ಪ್ರಕಟಿಸಿತ್ತು.

ರಾಷ್ಟ್ರೋತ್ಥಾನ ಪರಿಷತ್‌ಗೆ 9.32 ಎಕರೆ ಗೋಮಾಳ ಮಂಜೂರು; ಸರ್ಕಾರಕ್ಕೆ 5.59 ಕೋಟಿ ನಷ್ಟ?

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಕಂದಾಯ ಇಲಾಖೆಯ ಪ್ರಸ್ತಾವನೆಯನ್ನು ಕಾನೂನು ಇಲಾಖೆ ಮತ್ತು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ. ಈ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದು ಇಡೀ ಪ್ರಕ್ರಿಯೆಯನ್ನು ಎಲ್ಲಾ ಮಗ್ಗುಲುಗಳಿಂದ 2022ರ ಮೇ 6ರಂದು ವರದಿ ಪ್ರಕಟಿಸಿತ್ತು.

ಕಾನೂನು, ಆರ್ಥಿಕ ಇಲಾಖೆ ವಿರೋಧದ ನಡುವೆಯೂ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು

ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯೇ ಹೊರತು ನೋಂದಾಯಿತ ಸಂಸ್ಥೆಯಲ್ಲವೆಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು. ಈ ಕುರಿತು 2022ರ ಮೇ 7ರಂದು ವರದಿ ಪ್ರಕಟಿಸಿತ್ತು.

ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯೇ ಹೊರತು, ನೋಂದಾಯಿತ ಸಂಸ್ಥೆಯಲ್ಲವೆಂದ ಕಾನೂನು ಇಲಾಖೆ

ಶಾಲಾ ಶುಲ್ಕ ಸಂಗ್ರಹವಾದ ಆದಾಯವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಕಳೆದ 5 ವರ್ಷಗಳಲ್ಲಿ401.86 ಕೋಟಿ ರು ಮತ್ತು 2021ರಲ್ಲಿ 63.64 ಕೋಟಿ ರು. ಲಾಭಾಂಶ ಹೊಂದಿತ್ತು. ಆದರೂ ಶೇ.25ರಷ್ಟು ರಿಯಾಯಿತಿ ದರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರಾಗಿತ್ತು. ಈ ಕುರಿತು 2022ರ ಮೇ 9ರಂದು ವರದಿ ಪ್ರಕಟಿಸಿತ್ತು.

401 ಕೋಟಿ ರು ಆದಾಯವಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಗೋಮಾಳ ಮಂಜೂರು

ಶೈಕ್ಷಣಿಕ ಉದ್ದೇಶಕ್ಕೆ ಗೋಮಾಳ ಮಂಜೂರು ಮಾಡಿಸಿಕೊಂಡಿದ್ದ ರಾಷ್ಟ್ರೋತ್ಥಾನ ಪರಿಷತ್‌, ಶಿಕ್ಷಣ ಇಲಾಖೆಯಿಂದ ಅನುಮತಿಯನ್ನೇ ಪಡೆದಿರಲಿಲ್ಲ. ಈ ಕುರಿತು 2022ರ ಮೇ 10ರಂದು ವರದಿ ಪ್ರಕಟಿಸಿತ್ತು.

ಶೈಕ್ಷಣಿಕ ಉದ್ದೇಶಕ್ಕೆ ಗೋಮಾಳ ಮಂಜೂರು; ಶಿಕ್ಷಣ ಇಲಾಖೆಯ ಅನುಮತಿ ಪಡೆಯದ ರಾಷ್ಟ್ರೋತ್ಥಾನ ಪರಿಷತ್‌!

ಗೋಮಾಳವನ್ನು ಸಂರಕ್ಷಿಸಬೇಕಿದ್ದ ಪಶು ಸಂಗೋಪನೆ ಇಲಾಖೆಯು ಗೋಮಾಳ ಅವಶ್ಯಕತೆಯೇ ಇಲ್ಲವೆಂದು ದೃಢೀಕೃತ ಪ್ರಮಾಣ ಪತ್ರವನ್ನು ನೀಡುವ ಮೂಲಕ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು ಮಾಡುವ ಸಂಬಂಧ ವರದಿ ನೀಡಿತ್ತು. ಈ ಕುರಿತು 2022ರ ಮೇ 11ರಂದು ವರದಿ ಪ್ರಕಟಿಸಿತ್ತು.

ರಾಷ್ಟ್ರೋತ್ಥಾನ ಪರಿಷತ್‌ ಪರ ಪಶು ಸಂಗೋಪನೆ ಇಲಾಖೆ; ಗೋಮಾಳ ಅವಶ್ಯಕತೆಯಿಲ್ಲವೆಂಬ ದೃಢೀಕೃತ ಪತ್ರ

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಜಾಲ ಹೋಬಳಿಯ ಬೈಯಪ್ಪನಹಳ್ಳಿ ಬಳಿ 10.00 ಎಕರೆ ಮತ್ತು ಗುಲ್ಬರ್ಗಾ ಜಿಲ್ಲೆಯ ಶರಣಸಿರಸಿ ಪಟ್ಟಣದಲ್ಲಿ 7.00 ಎಕರೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದೆ. ಈ ಕುರಿತು ಮೇ 12ರಂದು ವರದಿ ಪ್ರಕಟಿಸಿತ್ತು.

ಬೈಯಪ್ಪನಹಳ್ಳಿ, ಕಲ್ಬುರ್ಗಿಯಲ್ಲಿ 17 ಎಕರೆ ಗೋಮಾಳದ ಮೇಲೂ ರಾಷ್ಟ್ರೋತ್ಥಾನ ಪರಿಷತ್‌ ಕಣ್ಣು

 

ಇದಲ್ಲದೇ ಆರ್‌ಎಸ್‌ಎಸ್‌ ಬೆಂಬಲದ ವನವಾಸಿ ಕಲ್ಯಾಣ ಸಂಸ್ಥೆಗೂ ಜಮೀನು ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈ ಕುರಿತು 2022ರ ಜೂನ್ 2ರಂದು ವರದಿ ಪ್ರಕಟಿಸಿತ್ತು.

ಆರೆಸ್ಸೆಸ್‌ ಬೆಂಬಲದ ವನವಾಸಿ ಕಲ್ಯಾಣ ಸಂಸ್ಥೆಗೆ ಜಮೀನು; ಆರ್ಥಿಕ ಇಲಾಖೆ ತಿರಸ್ಕರಿಸಿದರೂ ಒತ್ತಡ ಹೇರಿಕೆ

ಸಾವಿರಾರು ಕೋಟಿ ರುಪಾಯಿ ದೇಣಿಗೆ ಪಡೆಯುತ್ತಿರುವ ಬಿಜೆಪಿ ಪಕ್ಷವು ತಾಲೂಕು ಮಟ್ಟದಲ್ಲಿ ಬಿಜೆಪಿ ಕಚೇರಿಗಳಿಗಾಗಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಜಮೀನುಗಳ ಮೇಲೆ ಕಣ್ಣು ಹಾಕಿತ್ತು. ಮುಧೋಳದಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಕಾಯ್ದಿರಿಸಿದ್ದ ನಿವೇಶನವನ್ನು ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳ ವರದಿ ಕೇಳಿತ್ತು. ಈ ಕುರಿತು 2022ರ ಜುಲೈ 18ರಂದು ವರದಿ ಪ್ರಕಟಿಸಿತ್ತು.

ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?

ಇದಲ್ಲದೇ ಕರ್ನಾಟಕ ನೀರಾವರಿ ನಿಗಮದ ಸ್ವಾಧೀನದಲ್ಲಿದ್ದ ಜಮೀನಿನ ಪೈಕಿ 2 ಎಕರೆ ಜಮೀನನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್‌ ಅವರು ಪತ್ರ ಬರೆದಿದ್ದರು. ಇದನ್ನು ‘ದಿ ಫೈಲ್‌’ 2022ರ ಜುಲೈ 26ರಂದು ಬಹಿರಂಗಗೊಳಿಸಿತ್ತು.

ನೀರಾವರಿ ನಿಗಮದ 2 ಎಕರೆ ನಿವೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ; ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರ

ಹೊಸಪೇಟೆಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಾಗಿ ಕಾಯ್ದಿರಿಸಿದ್ದ ಜಮೀನಿನ ಪೈಕಿ 5 ಎಕರೆಯನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರು ಮಾಡಲು ಸರ್ಕಾರವು ಪ್ರಕ್ರಿಯೆ ಆರಂಭಿಸಿದೆ. ಕಾನೂನು ಇಲಾಖೆಯು ಈಗಾಗಲೇ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಈ ಕುರಿತು 2022ರ ಜುಲೈ 29ರಂದು ವರದಿ ಪ್ರಕಟಿಸಿತ್ತು.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜಮೀನಿನ ಮೇಲೆ ರಾಷ್ಟ್ರೋತ್ಥಾನ ಪರಿಷತ್‌ ಕಣ್ಣು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಕರ್ನಾಟಕ ನೀರಾವರಿ ನಿಗಮದ 2 ಎಕರೆ ಜಮೀನನ್ನು ನೋಂದಣಿ ಮಾಡಿಕೊಡಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರು ಬರೆದಿದ್ದ ಪತ್ರವು ಬಹಿರಂಗಗೊಳಿಸಿದ ನಂತರ ಕರ್ನಾಟಕ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರವೂ ಜಲಸಂಪನ್ಮೂಲ ಇಲಾಖೆಯು ಕಂದಾಯ ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಕುರಿತು 2022ರ ಆಗಸ್ಟ್‌ 1ರಂದು ವರದಿ ಪ್ರಕಟಿಸಿತ್ತು.

ಬಿಜೆಪಿ ಅಧ್ಯಕ್ಷರ ಹೆಸರಿಗೆ 2 ಎಕರೆ ನೋಂದಣಿ; ಕಂದಾಯ ಇಲಾಖೆ ಅಭಿಪ್ರಾಯ ಕೋರಿದ ಜಲಸಂಪನ್ಮೂಲ ಇಲಾಖೆ

 

ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ 76 ಎಕರೆ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು. ಈ ವರದಿಯನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಈ ಸಮಿತಿಗೆ ಕಂದಾಯ ಇಲಾಖೆಯು ಯಾವುದೇ ವರದಿಯನ್ನೂ ಸಲ್ಲಿಸಿರಲಿಲ್ಲ.

the fil favicon

SUPPORT THE FILE

Latest News

Related Posts