ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ

photo credit;basavarajbommai twitter account

ಬೆಂಗಳೂರು; ಪ್ರಸಕ್ತ ಸಾಲಿನ ಆರ್ಥಿಕ ವರ್ಷ (2022-23) ಪೂರ್ಣಗೊಳ್ಳಲು ಇನ್ನು ಕೇವಲ ಮೂರೇ ಮೂರು ತಿಂಗಳಿದ್ದರೂ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ ನವೆಂಬರ್‌ ಅಂತ್ಯದವರೆಗೆ 8,199 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಕಾರ್ಯಕ್ರಮಗಳ ಪೈಕಿ ಇನ್ನೂ 122 ಕಾರ್ಯಕ್ರಮಗಳಿಗೆ ಚಾಲನೆಯೇ ದೊರೆತಿಲ್ಲ.

 

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವುದಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್‌ 16ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ಒದಗಿಸಿದ್ದಾರೆ. ಸಭೆಯ ನಡವಳಿಗಳ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧರಾಗುತ್ತಿರುವ ಬೆನ್ನಲ್ಲೇ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕಾರ್ಯಕ್ರಮಗಳ ಅನುಷ್ಠಾನಗೊಳಿಸಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

 

2022-23ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಒಟ್ಟು ಅನುದಾನ 48,368 ಕೋಟಿ ರು (ಪ್ರಾಥಮಿಕ ಶಿಲ್ಕು 8,487 ಕೋಟಿ ಒಳಗೊಂಡಂತೆ) ಪೈಕಿ 20, 107 ಕೋಟಿ ರು.ನಲ್ಲಿ ನವೆಂಬರ್‌ 2022ರ ಅಂತ್ಯಕ್ಕೆ 11,908 ಕೋಟಿ ಬಿಡುಗಡೆಯಾಗಿದೆ. ಇನ್ನೂ 8,199 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಇದೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ಒಟ್ಟು 3,000.70 ಕೋಟಿ ರು. ಅನುದಾನದಲ್ಲಿ ಶಿಕ್ಷಣ ಇಲಾಖೆ 443.00 ಕೋಟಿ, ಆರೋಗ್ಯ ಇಲಾಖೆ 325.48 ಕೋಟಿ ರು. ಮುಂದುವರೆದ ಕಾರ್ಯಕ್ರಮಗಳಿಗೆ ಜಲಸಂಪನ್ಮೂಲ ಇಲಾಖೆ 1,200 ಕೋಟಿ, ಕೆಎಸ್‌ಆರ್‌ಟಿಸಿಗೆ 30.00 ಕೋಟಿ, ಸಣ್ಣ ನೀರಾವರಿಗೆ 56 ಕೋಟಿ ಮೊತ್ತದ ಯೋಜನೆಗೆ ಕ್ರಿಯಾ ಯೋಜನೆಯನ್ನೂ ಯೋಜನಾ ಇಲಾಖೆಗೆ ಸಲ್ಲಿಸಿಲ್ಲ.

 

 

‘2022-23ನೇ ಸಾಲಿನ ಆಯವ್ಯಯ ಘೋಷಣೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು/ಚಾಲನೆ ನೀಡಲು ಬಾಕಿ ಇರುವ 122 ಯೋಜನೆಗಳಿಗೆ ಶೀಘ್ರವಾಗಿ ಚಾಲನೆಗೆ ಕ್ರಮವಹಿಸಬೇಕು. ಎಲ್ಲಾ ಇಲಾಖೆಗಳು ಮಾಹಿತಿಯನ್ನು ಯೋಜನಾ ಇಲಾಖೆಗೆ ಸಲ್ಲಿಸಬೇಕು,’ ಎಂದು ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿದೆ.

 

ರಾಜ್ಯ ವಲಯದ ಆಯವ್ಯಯ ಅಂದಾಜು 1,77,525 ಕೋಟಿ ರು.ನಲ್ಲಿ 93,717 ಕೋಟಿ ವೆಚ್ಚವಾಗಿದೆ. (ಶೇ.53), ಜಿಲ್ಲಾ ವಲಯದ ಆಯವ್ಯಯ ಅಂದಾಜು 42,786 ಕೋಟಿಗಳಲ್ಲಿ 22,503 ಕೋಟಿ ರು. (ಶೇ.53) ಸೇರಿ ಒಟ್ಟಾರೆ 1,20,224 ಕೋಟಿ ರು.ವೆಚ್ಚವಾಗಿದೆ. ಅಂದರೆ 1,09,153 ಕೋಟಿಯಷ್ಟು ಅನುದಾನ ಸಿಂಗಲ್‌ ಡಿಡಿಒಗೆ ಹಂಚಿಕೆಯಾಗಿದ್ದು ಇದನ್ನು ಅನುಷ್ಠಾನಗೊಳಿಸಲಾಗುತ್ತಿರುವ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ ತತ್ಸಂಬಂಧ ಬಿಡುಗಡೆ ಹಾಗೂ ವೆಚ್ಚದ ಮಾಹಿತಿಯನ್ನು ಖಜಾನೆ-2ರಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.

 

ಜಿಲ್ಲಾವಾರು ಶ್ರೇಯಾಂಕ ಮಾಹಿತಿ ಅನ್ವಯ ಕೊಡಗು, ಬಳ್ಳಾರಿ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಗತಿ ನಿರೀಕ್ಷೆಯಂತೆ ಆಗಿಲ್ಲ. ಅಲ್ಲದೇ 2022-23ನೇ ಸಾಲಿನ ಆಯವ್ಯಯ ಘೋಷಣೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು/ಚಾಲನೆ ನೀಡುವ ಪೈಕಿ ಇನ್ನೂ 122 ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ.

 

ಆಹಾರ ಇಲಾಖೆಯಲ್ಲಿ 2,985.00 ಕೋಟಿಯಲ್ಲಿ ಒಟ್ಟು ಅನುದಾನದಲ್ಲಿ ಬಿಡುಗಡೆಯಾಗಿರುವ 1,419.84 ಕೋಟಿ ರು ಪೈಕಿ 917 ಕೋಟಿ ವೆಚ್ಚವಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಕೈಗಾರಿಕಾ ಘಟಕಗಳಿಗೆ ಮೌಲ್ಯಾಧಾರಿತ ತೆರಿಗೆ ಪಾವತಿಗಾಗಿ ಸಾಲದ ಕಾರ್ಯಕ್ರಮದಲ್ಲಿ 1,000 ಕೋಟಿ ರು.ಗಳಲ್ಲಿ 474.00 ಕೋಟಿ ರು. ಪ್ರಸ್ತಾವನೆ ಬಾಕಿ ಇದೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು 2022ರ ಸೆಪ್ಟಂಬರ್‌ ಅಂತ್ಯಕ್ಕೆ ಎಂದು ನಿಗದಿಗೊಳಿಸಲಾಘಿತ್ತು. ಆದರೆ ಯೋಜನೆಯು ಪೂರ್ಣಗೊಳ್ಳದ ಕಾರಣ ಈ ಯೋಜನೆಗಳನ್ನು ಪೂರ್ಣಗೊಳಿಸಲು 2 ವರ್ಷಗಳ ಕಾಲಾವಕಾಶ ಕೋರಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿರುವುದು ತಿಳಿದು ಬಂದಿದೆ.

 

ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆಗಳಲ್ಲಿ ವೇತನದ ಅನುದಾನವನ್ನು ವಿಳಂಬವಾಗಿ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಈ ಇಲಾಖೆಗಳ ಅಧಿಕಾರಿ, ನೌಕರರು ಸರಿಯಾದ ಸಮಯದೊಳಗೆ ವೇತನ ಪಡೆಯುತ್ತಿಲ್ಲ ಎಂದು ನಡವಳಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts