ಸ್ಯಾನಿಟೈಸೇಷನ್‌; ದುಪ್ಪಟ್ಟು ದರಕ್ಕೆ ಗುತ್ತಿಗೆ, ಕೆಟಿಪಿಪಿ ಕಾಯ್ದೆ ಉಲ್ಲಂಘನೆ, 25.28 ಲಕ್ಷ ನಷ್ಟವೆಂದ ಸಿಎಜಿ

photo credit;deccan hearald

ಬೆಂಗಳೂರು; ವಿಧಾನಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಿಧಾನಸೌಧದ ಕೊಠಡಿಗಳಿಗೆ ಮತ್ತು ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಕರ್ನಾಟಕ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿ ಸಿಂಗಲ್‌ ಟೆಂಡರ್‌ನ್ನು  ಅನುಮೋದಿಸಲಾಗಿತ್ತು. ಹೊಸದಾಗಿ  ಟೆಂಡರ್‌ ಕರೆಯದೇ 53.22 ಲಕ್ಷ ರು.ಗಳನ್ನು ಪಾವತಿಸಿತ್ತು ಎಂಬುದನ್ನು ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ  ಇಲಾಖೆಯ ತಪಾಸಣೆ ವರದಿಯು ಹೊರಗೆಡವಿದೆ.

 

ಕೋವಿಡ್‌-19ರ ಅಲೆಯಲ್ಲಿ ವಿಧಾನಸಭೆ ಸಚಿವಾಲಯ ಮತ್ತು ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಶಾಸಕರ ಭವನದ ಕೊಠಡಿಗಳಿಗೆ ಉಚಿತವಾಗಿ ಸ್ಯಾನಿಟೈಸೇಷನ್‌ ಮಾಡಿಸಲು ಇದ್ದ ಅವಕಾಶಗಳನ್ನೂ ಬದಿಗೊತ್ತಿ ಸಿಂಗಲ್‌ ಟೆಂಡರ್‌ನ್ನು ಅನುಮೋದಿಸಿರುವುದನ್ನೂ ತಪಾಸಣೆ ವರದಿಯಲ್ಲಿ ಆಕ್ಷೇಪಣೆ ಎತ್ತಲಾಗಿದೆ. ಈ ಸಂಬಂಧ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ತಪಾಸಣೆ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

1.00 ಲಕ್ಷ ರು. ಮೊತ್ತದ ಒಳಗಿನ ಕಾಮಗಾರಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವ ಅಧಿಕಾರ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಿದೆ. ಅದೇ ರೀತಿ 5.00 ಲಕ್ಷ ರು. ಮಿತಿಯೊಳಗೆ ಅನುಮೋದನೆ ನೀಡಲು ಸ್ಪೀಕರ್‌ ಕಾರ್ಯಾದೇಶ ಹೊರಡಿಸಬಹುದು. ಆದರೆ ಸ್ಯಾನಿಟೈಸೇಷನ್‌ ಮಾಡಿಸಲು ತಿಂಗಳಿಗೆ 98.00 ಲಕ್ಷ ರು.ವೆಚ್ಚ ಎಂದು ಮೊದಲು ಅಂದಾಜಿಸಿತ್ತು. ಕಡೆಗೆ ಟೆಂಡರ್‌ ಇಲ್ಲದೆಯೇ ಕೆಸಿಐಸಿ ಕಂಪನಿಗೆ ಗುತ್ತಿಗೆ ನೀಡಿತ್ತು.

 

ವಿಧಾನಸಭೆ ಸಚಿವಾಲಯದ ಸ್ಪೀಕರ್‍‌ ಕೊಠಡಿ ಸೇರಿದಂತೆ ಸಚಿವಾಲಯದ ಕೊಠಡಿಗಳು, ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸಲು 6 ತಿಂಗಳ ಅವಧಿಯ ಗುತ್ತಿಗೆ ಮಾಡಿಕೊಂಡಿತ್ತು. ಅಲ್ಲದೇ ಪ್ರತಿ ತಿಂಗಳೂ ಹೊಸದಾಗಿ ಟೆಂಡರ್‍‌ ಕರೆದು ನವೀಕರಿಸಬೇಕಾಗಿತ್ತು. ಆದರೆ ಹೊಸ ಟೆಂಡರ್‌ ಕರೆಯದೇ ಜುಲೈ 2020ರಿಂದ ಮಾರ್ಚ್‌ 2022ರವರೆಗೆ ಒಟ್ಟು 52,32,780 ರು.ಗಳನ್ನು ಕೆಸಿಐಸಿ ಕಂಪನಿಗೆ ಪಾವತಿಸಲಾಗಿತ್ತು ಎಂಬುದನ್ನು ತಪಾಸಣೆ ವರದಿಯು ಪತ್ತೆ ಹಚ್ಚಿದೆ.

 

 

‘ಕೋವಿಡ್ ತುರ್ತು ಸಂದರ್ಭ ಮತ್ತು ಕಾಲಾವಕಾಶ ಕಡಿಮೆ ಎಂಬ ಕಾರಣದಿಂದ ಸಿಂಗಲ್‌ ಟೆಂಡರ್‍‌ನ್ನು ಅನುಮೋದಿಸಿರುವುದು ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೇ ಟೆಂಡರ್, ‍‌ದರ ಪಟ್ಟಿ ಆಹ್ವಾನಿಸದಿರುವುದು ಮತ್ತು ಗುತ್ತಿಗೆ ಅವಧಿ ಪೂರ್ಣಗೊಂಡರೂ ಸ್ಪರ್ಧಾತ್ಮಕ ದರದಲ್ಲಿ ಈ ಸೇವೆ ಪಡೆಯಲು ಮುಂದಾಗದಿರುವುದಕ್ಕೆ ಸಕಾರಣ, ಸಮರ್ಥನೆ ನೀಡಿಲ್ಲ. ಈ ಸಂಬಂಧ ವಿವರಣೆಯನ್ನು ನೀಡಿಲ್ಲ,’ ಎಂದು ತಪಾಸಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಅದಷ್ಟೇ ಅಲ್ಲದೇ ಆರಂಭದಲ್ಲಿ ಗುತ್ತಿಗೆ ನೀಡಲಾಗಿದ್ದ ಕಂಪನಿಯು ಪ್ರತಿ ಚದರ ಮೀಟರ್‍‌ಗೆ 0.21 ರು. ಎಂದು ನಮೂದಿಸಿತ್ತು. ಆದರೆ ಸಿಂಗಲ್‌ ಟೆಂಡರ್‌  ಅನುಮೋದಿಸುವಾಗ ಪ್ರತಿ ಚದರ ಮೀಟರ್‍‌ಗೆ 0.40 ರು.ಗೆ ಒಪ್ಪಿಕೊಂಡಿತ್ತು. ನಮೂದಿಸಿದ್ದ ಮೂಲ ದರಕ್ಕಿಂತಲೂ ದುಪ್ಪಟ್ಟು ದರವಾಗಿದ್ದರೂ ಗುತ್ತಿಗೆದಾರನೊಂದಿಗೆ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿಯು ಸಂಧಾನ ನಡೆಸಿಲ್ಲ. ಹಾಗೆಯೇ ದುಪ್ಪಟ್ಟು ದರವನ್ನು ಒಪ್ಪಿಕೊಳ್ಳಲಾಗಿತ್ತು. ಮೂಲ ದರಕ್ಕೇ ಸಂಧಾನ ನಡೆಸಿದ್ದರೇ 25,28,320 ರು.ಗಳು ಉಳಿಯುತ್ತಿತ್ತು ಎಂಬ ಅಂಶವನ್ನು ತಪಾಸಣೆ ವರದಿಯಲ್ಲಿ ವಿವರಿಸಲಾಗಿದೆ.

 

ಕೋವಿಡ್‌ ತುರ್ತು ಸಂದರ್ಭವಿದ್ದ ಕಾರಣ ವಿಧಾನಸಭೆ ಸಚಿವಾಲಯದ ಕೊಠಡಿಗಳು ಮತ್ತು ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸಲು ಬಿಬಿಎಂಪಿಯನ್ನು ಸಂಪರ್ಕಿಸಬಹುದಾಗಿತ್ತು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸ್ಪೀಕರ್‌ ಕೊಠಡಿಯೂ ಸೇರಿದಂತೆ ವಿಧಾನಸಭೆ ಸಚಿವಾಲಯ ವ್ಯಾಪ್ತಿಯಲ್ಲಿರುವ ಕೊಠಡಿಗಳನ್ನು ಈ ಕಂಪನಿ ಈಗಾಗಲೇ ಸ್ಯಾನಿಟೈಸೇಷನ್‌ ಮಾಡಿದೆ ಎಂದು ತಿಳಿದು ಬಂದಿದೆ. ಆದರೆ ಈ ಕಂಪನಿಗೆ ಕಾರ್ಯಾದೇಶ ನೀಡುವ ಮುನ್ನ ಯಾವುದೇ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ ಮತ್ತು ಇತರೆ ಕಂಪನಿಗಳಿಂದ ದರಪಟ್ಟಿಯನ್ನೂ ಪಡೆದಿರಲಿಲ್ಲ . ಈ ಕುರಿತಾದ ಮಾಹಿತಿಯನ್ನೂ ವಿಧಾನಸಭೆ ಸಚಿವಾಲಯವು ಗೌಪ್ಯವಾಗಿರಿಸಿತ್ತು. ಈ ಕುರಿತು 2020ರ ಆಗಸ್ಟ್‌ 10ರಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌; ದರದ ಮಾಹಿತಿ ಗೌಪ್ಯವಾಗಿಟ್ಟ ಸಚಿವಾಲಯ

 

ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವುದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ 2020ರ ಜುಲೈ 9ರಂದು ಮಾಹಿತಿ ಕೇಳಿತ್ತು. ಕೊಠಡಿವಾರು, ಚದುರ ಮೀಟರ್‌ ವಿಸ್ತೀರ್ಣವಾರು, ಕಂಪನಿ ನೀಡಿರುವ ದರ, ಸಚಿವಾಲಯ ನಿಗದಿಪಡಿಸಿರುವ ದರ ಮತ್ತು ಎಷ್ಟು ಮೊತ್ತ ಪಾವತಿಸಿದೆ ಅಥವಾ ಇಲ್ಲವೇ ಎಂಬ ಮಾಹಿತಿ ಕೇಳಿತ್ತು.

 

ಕಂಪನಿಯು ನಿರ್ವಹಿಸಬೇಕಾದ ಕಾಮಗಾರಿ ವಿವರ, ಪಾವತಿ ಸಂಬಂಧ ಸಲ್ಲಿಸಬೇಕಾದ ಬಿಲ್‌ಗಳ ವಿವರ ಕಾಮಗಾರಿ ನಿರ್ವಹಿಸಬೇಕಾದ ಕಾಲಮಿತಿ, ಕೆಲಸ ಪೂರ್ಣಗೊಂಡ ನಂತರ ಹಣ ಪಾವತಿ ಸಂಬಂಧ ಬಿಲ್‌ಗಳ ಒದಗಿಸುವ ಮಾಹಿತಿ ಕಾರ್ಯಾದೇಶದಲ್ಲಿರುತ್ತೆ. ಆದರೆ ಈ ಯಾವ ವಿವರಗಳನ್ನೂ ಒದಗಿಸದೆಯೇ ಕೇವಲ ಕಾರ್ಯಾದೇಶ ನೀಡಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿ ಉಳಿದ ಈ ಯಾವ ಮಾಹಿತಿಗಳನ್ನೂ ನೀಡದಿದ್ದದ್ದು ಸಂದೇಹಾಸ್ಪದವಾಗಿತ್ತು.

 

 

ವಿಧಾನಸೌಧ ಮತ್ತು ಶಾಸಕರ ಭವನದ ಕೊಠಡಿಗಳನ್ನು ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲು ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಬರೆದಿದೆ ಎನ್ನಲಾಗಿದ್ದ ಪತ್ರವನ್ನು ಆರ್‌ಟಿಐ ಅಡಿ ಒದಗಿಸಲು ಮೀನಮೇಷ ಎಣಿಸಿತ್ತಲ್ಲದೇ ವಿಧಾನಸಭೆ ಸಚಿವಾಲಯವು ಕಾಲಾವಕಾಶ ತಂತ್ರಗಾರಿಕೆಯನ್ನೂ ಬಳಸಿತ್ತು. ಈ ಕುರಿತು ‘ದಿ ಫೈಲ್‌’ 2020ರ ಆಗಸ್ಟ್‌ 23ರಂದು ವರದಿ ಪ್ರಕಟಿಸಿತ್ತು.

 

ಸ್ಯಾನಿಟೈಸೇಷನ್‌; ಆರ್ಥಿಕ ಇಲಾಖೆಗೆ ಬರೆದಿರುವ ಪತ್ರ ಒದಗಿಸಲು ಕಾಲಾವಕಾಶ ತಂತ್ರ ಬಳಸಿದ ಸಚಿವಾಲಯ

 

ವಿಧಾನಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಿಧಾನಸೌಧದ ಕೊಠಡಿ ಮತ್ತು ಶಾಸಕರ ಭವನದ ಕಟ್ಟಡಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನು ಆರ್‌ಟಿಐ ಅಡಿ ಒದಗಿಸದ ವಿಧಾನಸಭೆ ಸಚಿವಾಲಯವು ಇದೀಗ ಆ ಪ್ರಸ್ತಾವನೆಯನ್ನೇ ಕೈ ಬಿಟ್ಟಿತ್ತು. ಈ ಕುರಿತು ‘ದಿ ಫೈಲ್‌’ 2020ರ ಆಗಸ್ಟ್‌ 20ರಂದು ವರದಿ ಪ್ರಕಟಿಸಿತ್ತು.

 

ಸ್ಯಾನಿಟೈಸೇಷನ್‌; ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರ ನೀಡದ ಸಚಿವಾಲಯ, ಪ್ರಸ್ತಾವನೆ ಕೈ ಬಿಟ್ಟಿದ್ದೇಕೆ?

 

ಕಂಪನಿಯು ನಿರ್ವಹಿಸಬೇಕಾದ ಕಾಮಗಾರಿ ವಿವರ, ಪಾವತಿ ಸಂಬಂಧ ಸಲ್ಲಿಸಬೇಕಾದ ಬಿಲ್‌ಗಳ ವಿವರ ಕಾಮಗಾರಿ ನಿರ್ವಹಿಸಬೇಕಾದ ಕಾಲಮಿತಿ, ಕೆಲಸ ಪೂರ್ಣಗೊಂಡ ನಂತರ ಹಣ ಪಾವತಿ ಸಂಬಂಧ ಬಿಲ್‌ಗಳ ಒದಗಿಸುವ ಮಾಹಿತಿ ಕಾರ್ಯಾದೇಶದಲ್ಲಿರುತ್ತದೆ. ಆದರೆ ಈ ಯಾವ ವಿವರಗಳನ್ನೂ ಒದಗಿಸದ ಸಚಿವಾಲಯ ಕೇವಲ ಕಾರ್ಯಾದೇಶ ನೀಡಿದ್ದನ್ನು ಸ್ಮರಿಸಬಹುದು. ಈ ಅವಧಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

the fil favicon

SUPPORT THE FILE

Latest News

Related Posts