Thursday | May 21, 2026 |

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ  ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯವುದು ಸೂಕ್ತವಲ್ಲ ಮತ್ತು ಹಿಂದಕ್ಕೆ ಪಡೆಯಲು ಅರ್ಹವಾಗಿಲ್ಲ ಎಂದು ಪೊಲೀಸ್‌ ಇಲಾಖೆ, ಅಭಿಯೋಗ, ಸರ್ಕಾರಿ ವ್ಯಾಜ್ಯಗಳು, ಕಾನೂನು ಇಲಾಖೆಯ ಅಭಿಪ್ರಾಯವನ್ನು ಬದಿಗೊತ್ತಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮತ್ತೆ ಮುಂದಾಗಿದೆ.

ಈ ಸಂಬಂಧ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಾಡಳಿತ ಇಲಾಖೆಯು ಕಡತವನ್ನು ಮಂಡಿಸಿದೆ.

 

 

ಸಚಿವ ಸಂಪುಟಕ್ಕೆ ಮಂಡಿಸಿರುವ ರಹಸ್ಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 52 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ಒಳಾಡಳಿತ ಇಲಾಖೆಯು ಸಲ್ಲಿಸಿರುವ (ಒಇ 248/2026) ಪ್ರಸ್ತಾವನ್ನು ಸಚಿವ ಡಾ ಜಿ ಪರಮೇಶ್ವರ್ ಅವರು ಅನುಮೋದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಸಚಿವ ಸಂಪುಟ ಪ್ರಸ್ತಾವದಲ್ಲೇನಿದೆ?

ರಾಜ್ಯದ ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಒಳಾಡಳಿತ ಇಲಾಖೆಯು ಪರಿಗಣಿಸಿದೆ. ಸಚಿವ ಸಂಪುಟದ ಮುಂದೆ ನಿರ್ಣಯಕ್ಕಾಗಿ ಮಂಡಿಸುವ ಪೂರ್ವದಲ್ಲಿ  ಪ್ರಕರಣಗಳಿಗೆ ಸಂಬಂಧಿಸಿದಂತಹ ಅಭಿಪ್ರಾಯಗಳನ್ನು ಡಿಜಿ ಮತ್ತು ಐಜಿಪಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆಗಳಿಂದ ಪ್ರತಿ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಅಭಿಪ್ರಾಯ ಪಡೆಯಲಾಗುತ್ತದೆ.

 

 

ಇದಾದ ನಂತರ ಸರ್ಕಾರವು ಇಂತಹ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಕುರಿತು ಪರಿಶೀಲಿಸಲು ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯ ಪರಿಶೀಲನೆಗೆ ಮಂಡಿಸಲಾಗಿದೆ. ಸಚಿವ ಸಂಪುಟ ಉಪ ಸಮಿತಿಯು ಸಿಆರ್‍‌ಪಿಸಿ ಕಲಂ 321 ಅಡಿಯಲ್ಲಿ ಅಭಿಯೋಜನೆಯಿಂದ ಹಿಂಪಡೆಯಲು ಸೂಕ್ತ ಎಂದು ಶಿಫಾರಸ್ಸು ಮಾಡಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಸಮರ್ಥನೆ ಏನು?

ಸಚಿವ ಸಂಪುಟದ ಉಪ ಸಮಿತಿಯು 2026ರ ಫೆ.26ರಂದು ನಡೆಸಿದ್ದ ಸಭೆಯಲ್ಲಿ 81 ಪ್ರಕರಣಗಳನ್ನು ಹಿಂಪಡೆಯಲು (ಹೆಚ್‌ಡಿ 49 ಎಮ್‌ಹೆಚ್‌ಬಿ 2026)  ಚರ್ಚಿಸಿತ್ತು. ಇದರಲ್ಲಿ 42 ಪ್ರಕರಣಗಳನ್ನು ಅಭಿಯೋಜನೆಯಿಂದ ಪಡೆಯುವುದು ಎಂದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಈ ವಿಷಯವನ್ನು ಸಚಿವ ಸಂಪುಟ ನಿರ್ಣಯಕ್ಕೆ ಮಂಡಿಸಲು ಶಿಫಾರಸ್ಸು ಮಾಡಿದೆ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

ಅಲ್ಲದೆ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಇನ್ನು (ಅನುಬಂಧ-2) 10 ಪ್ರಕರಣಗಳನ್ನು ಸಹ ಹಿಂಪಡೆಯಲು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಸರ್ವೋಚ್ಛ ನ್ಯಾಯಾಲಯದ ರಿಟ್‌ ಅರ್ಜಿ (ಸಂಖ್ಯೆ 699/2016) ಅಶ್ವಿನಿ ಕುಮಾರ್ ಉಪಾಧ್ಯಾಯ /ಕೇಂದ್ರ ಸರ್ಕಾರ ಹಾಗೂ ಇತರರ ಪ್ರಕರಣದಲ್ಲಿ ನೀಡಿರುವ ಆದೇಶ (2021ರ ಆಗಸ್ಟ್‌ 10) ಹಾಗೂ ಉಚ್ಛ ನ್ಯಾಯಾಲಯದಲ್ಲಿನ ರಿಟ್‌ ಅರ್ಜಿ (12755/2020) ಮತ್ತು ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ 2022ರ ಜುಲೈ 13ರಂದು ಆದೇಶ ನೀಡಿತ್ತು. ಈ ಆದೇಶದ ಅನುಸಾರ ಅನುಬಂಧ-2ರಲ್ಲಿನ 10 ಪ್ರಕರಣಗಳನ್ನು ಹಿಂಪಡೆಯಲು ಉಚ್ಛ ನ್ಯಾಯಾಲಯದ ಅನುಮತಿ ಪಡೆಯುವ ಸಂಬಂಧ ಕ್ರಮ ವಹಿಸಲು ಸಚಿವ ಸಂಪುಟದ ನಿರ್ಣಯಕ್ಕೆ ಮಂಡಿಸಲು ಶಿಫಾರಸ್ಸು ಮಾಡಿದೆ.

 

 

ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳನ್ನು ಸಿಆರ್‍‌ಪಿಸಿ ಕಲಂ 321 ರ ಅಡಿಯಲ್ಲಿ ಹಿಂಪಡೆಯುವ ಸಂಬಂಧ ಸರ್ಕಾರದಿಂದ ಹೊರಡಿಸಲಾದ ಆದೇಶಗಳ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ರಿಟ್‌ ( 12755/2020) ಅರ್ಜಿಯನ್ನು ದಾಖಲಿಸಿದೆ.

 

 

 

ಈ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮೊಕದ್ದಮೆಗಳನ್ನು ಹಿಂಪಡೆಯಲು ಹೊರಡಿಸಲಾದ 2020ರ ಆಗಸ್ಟ್‌ 31ರಂದು ಆದೇಶದ ಆಧಾರದ ಮೇಲೆ ಯಾವುದೇ ಮುಂದಿನ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು 2020ರ ಡಿಸೆಂಬರ್‍‌ 21ರಂದು ಮಧ್ಯಂತರ ಆದೇಶದಲ್ಲಿ ಸರ್ಕಾರಕ್ಕೆ ನಿರ್ದೇಶಿಸಿದೆ ಎಂದು ಸಮರ್ಥನೆಯಲ್ಲಿ ವಿವರಿಸಿದೆ.

ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರ್ಕಾರವು ಮಧ್ಯಂತರ ಅರ್ಜಿಯನ್ನು (ಐಎ.1/2022)  ಸಲ್ಲಿಸಿದೆ. 2022ರಡಿಸೆಂಬರ್‍‌ 21ರಂದು ದೈನಂದಿನ ಆದೇಶದಲ್ಲಿ ಹಲವು ನಿರ್ದೇಶನಗಳನ್ನು ನೀಡಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸಿನಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಒಟ್ಟು 52 (ಅನುಬಂಧ 1ರಲ್ಲಿ 42- ಅನುಬಂಧ-2ರಲ್ಲಿ 10) ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ಸೂಕ್ತವೆಂದು ಪರಿಗಣಿಸಿದೆ. ಇವಕ್ಕೆ ಉಚ್ಛ ನ್ಯಾಯಾಲಯದ ಅನುಮತಿ ಪಡೆಯುವ ಸಂಬಂಧ ಕ್ರಮ ವಹಿಸಲು ಸಚಿವ ಸಂಪುಟದ ಮುಂದೆ ಪ್ರಸ್ತಾವವನ್ನು  ಮಂಡಿಸಿದೆ.

ಡಿಜಿ ಐಜಿಪಿ ಆಕ್ಷೇಪ

ಸಚಿವ ಸಂಪುಟಕ್ಕೆ ಈ ಪ್ರಸ್ತಾವವನ್ನು ಮಂಡಿಸುವ ಮುನ್ನ ಒಳಾಡಳಿತ ಇಲಾಖೆಯು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಅಭಿಪ್ರಾಯ ಕೋರಿತ್ತು. ಸರ್ಕಾರವು ಸಲ್ಲಿಸಿದ್ದ ಈ ಎಲ್ಲಾ ಪ್ರಕರಣಗಳ ಕುರಿತು ಡಿಜಿ ಐಜಿಪಿ ಅವರು ಪರಿಶೀಲಿಸಿದ್ದಾರೆ. ಅಲ್ಲದೇ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳು ಮತ್ತು ಕಾನೂನು ಇಲಾಖೆಯೂ ಸಹ ಪರಿಶೀಲಿಸಿದೆ.

 

 

‘ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಅರ್ಹವಾದ ಪ್ರಕರಣಗಳಾಗಿರುವುದಿಲ್ಲ. ಈ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರುವುದು ಕಂಡುಬಂದಿರುವುದಿಲ್ಲ. ಹಾಗೂ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳುವುದು ಸೂಕ್ತವಾಗಿರುವುದಿಲ್ಲ,’ ಎಂದು ಅಭಿಪ್ರಾಯಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಆದರೂ ಸಹ ಒಳಾಡಳಿತ ಇಲಾಖೆಯು ಈ ಪ್ರಸ್ತಾವನೆಯನ್ನು ಸಚಿವ ಡಾ ಜಿ ಪರಮೇಶ್ವರ್ ಅವರು ಅನುಮೋದಿಸಿದ್ದಾರೆ.

‘2026ರ ಫೆ.26ರಂದು ಸಚಿವ ಸಂಪುಟ ಉಪ ಸಮಿತಿಯು ಶಿಫಾರಸ್ಸು ಮಾಡಿರುವ ಅನುಬಂಧ 1ರಲ್ಲಿನ 42 ಪ್ರಕರಣಗಳನ್ನು ಕಲಂ 321 ಸಿಆರ್‍‌ಪಿಸಿ ಯಂತೆ ಅನುಬಂಧ 2ರಲ್ಲಿನ 10 ಪ್ರಕರಣಗಳನ್ನು ಹಿಂಪಡೆಯಲು ಉಚ್ಛ ನ್ಯಾಯಾಲಯದ ಅನುಮತಿ ಪಡೆಯುವ ಸಂಬಂಧ ಕ್ರಮವಹಿಸುವ ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ,’ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ದೇವಜ್ಯೋತಿ ರೇ ಅವರು ಕೋರಿರುವುದು ಗೊತ್ತಾಗಿದೆ.

 

 

ಕ್ರಿಮಿನಲ್ ಪ್ರಕರಣಗಳನ್ನು ಹಿಂದಿನ ಬಿಜೆಪಿ ಅವಧಿಯಲ್ಲಿಯೂ ಸಹ ಹಿಂಪಡೆದುಕೊಂಡಿತ್ತು.

 

ಕೋಮು ದ್ವೇಷ ; ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲೇ 43 ಕೇಸು ಹಿಂಪಡೆದಿತ್ತು ಬಿಜೆಪಿ ಸರ್ಕಾರ

 

ಕೋಮು ದ್ವೇಷ ಬಿತ್ತಿದ ಪ್ರಕರಣಗಳನ್ನೂ ಸಹ ಹಿಂದಿನ ಬಿಜೆಪಿ ಸರ್ಕಾರವು ಹಿಂಪಡೆದುಕೊಂಡಿತ್ತು.

 

ಪೊಲೀಸ್‌ ಇಲಾಖೆಯ ಅಸಮ್ಮತಿ ನಡುವೆಯೂ ಕೋಮು ದ್ವೇಷ ಬಿತ್ತಿದ ಪ್ರಕರಣಗಳ ಹಿಂಪಡೆದ ಬಿಜೆಪಿ ಸರ್ಕಾರ

 

ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣವನ್ನೂ ಸಹ ಯಾವುದೇ ವಿಚಾರಣೆಯಿಲ್ಲದೆಯೇ ಹಿಂಪಡೆದಿತ್ತು.

 

ಕೋಮು ದ್ವೇಷ, ಸೌಹಾರ್ದತೆಗೆ ಧಕ್ಕೆ; ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ಹಿಂಪಡೆದಿದ್ದ ಬಿಜೆಪಿ ಸರ್ಕಾರ

ದ್ವೇಷ ಭಾಷಣ, ಧಾರ್ಮಿಕ ಪ್ರಚೋದನೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದ ಪ್ರಕರಣಗಳನ್ನೂ ಸಹ ಹಿಂಪಡೆದಿತ್ತು.

ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ,ಹಿಂಸಾಚಾರ; ಒಂದೇ ವರ್ಷದಲ್ಲಿ 330 ಪ್ರಕರಣ ಹಿಂಪಡೆದ ಸರ್ಕಾರ

ಮಧುಗಿರಿ ಮೋದಿ ಸೇರಿದಂತೆ ಇನ್ನಿತರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನೂ ಸಹ ಹಿಂಪಡೆಯಲಾಗಿತ್ತು.

ಮಧುಗಿರಿ ಮೋದಿ ಸೇರಿ 495 ಆರೋಪಿಗಳ ವಿರುದ್ಧ 260 ಪ್ರಕರಣ ಹಿಂತೆಗೆತ;ಬಿಜೆಪಿ ಕಾರ್ಯಕರ್ತರದ್ದೇ ಸಿಂಹಪಾಲು

ಹಲವು ಪ್ರಕರಣಗಳನ್ನು ಹಿಂಪಡೆದುಕೊಳ್ಳಲು ಸೂಕ್ತವಾಗಿಲ್ಲ ಮತ್ತು ಅರ್ಹವಾಗಿಲ್ಲ ಎಂದು ಡಿಜಿಐಜಿಪಿ ಅವರು ಅಭಿಪ್ರಾಯ ನೀಡಿದ್ದರೂ ಸಹ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಿಂಪಡೆದುಕೊಂಡಿತ್ತು.

ಡಿಜಿಐಜಿಪಿ ಅಭಿಪ್ರಾಯ ಬದಿಗಿರಿಸಿ ನೂರಾರು ಕ್ರಿಮಿನಲ್‌ ಪ್ರಕರಣ ಹಿಂತೆಗೆತ; ಶಾಂತಿ ಸುವ್ಯವಸ್ಥೆಗೆ ಭಂಗ

ಸಿದ್ದರಾಮಯ್ಯ ನೇತೃತ್ವದ ಎರಡನೇ ಅವಧಿಯಲ್ಲಿಯೂ ಸಹ ಪ್ರಕರಣಗಳನ್ನು ಹಿಂಪಡೆದುಕೊಂಡಿತ್ತು.

ಗುಪ್ತಚರ ಇಲಾಖೆ ಮಾಹಿತಿಯಂತೆ ಕೋವಿಡ್‌ ನಿಯಮ ಉಲ್ಲಂಘಿಸಿರುವ ಪ್ರಕರಣಗಳ ಹಿಂತೆಗೆತ; ನಿರ್ದೇಶನ

 

ಈ ಕುರಿತು ದಿ ಫೈಲ್‌ ದಾಖಲೆ ಸಹಿತ ಹಲವು ವರದಿಗಳನ್ನು ಪ್ರಕಟಿಸಿತ್ತು.

Hot this week

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...
Please Scan to make Your Contribution

Topics

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

Related Articles

Popular Categories

error: Content is protected !!