ಬೆಂಗಳೂರು; ರಾಜ್ಯದ 1,396 ನ್ಯಾಯಾಲಯಗಳಲ್ಲಿರುವ ಸುಮಾರು 250 ಕೋಟಿ ಪುಟಗಳ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಪ್ರಕ್ರಿಯೆಗೆ ಚಾಲನೆಯೇ ದೊರೆತಿಲ್ಲ. ಅಲ್ಲದೇ ಇದಕ್ಕೆ ಮೂರು ವರ್ಷಗಳಿಗೆ ತಗಲುವ ಅಂದಾಜು 647 ಕೋಟಿ ರು ವೆಚ್ಚಕ್ಕೆ ಇನ್ನೂ ಹಣಕಾಸು ಇಲಾಖೆಯು ಇನ್ನೂ ತಾತ್ವಿಕ ಅನುಮೋದನೆಯನ್ನೇ ನೀಡಿಲ್ಲ. ಅಷ್ಟೇ ಏಕೆ ಈ ಸಂಬಂಧ ಯಾವುದೇ ಪ್ರಸ್ತಾವವನ್ನೂ ಸಚಿವ ಸಂಪುಟಕ್ಕೆ ಸಲ್ಲಿಸಿಲ್ಲ.
ಪ್ರಕರಣದ ದಾಖಲೆಗಳು (Case Papers), ಆದೇಶಗಳು,ತೀರ್ಪುಗಳು, ಸಾಕ್ಷ್ಯಗಳು, ವ್ಯಾಜ್ಯದಲ್ಲಿರುವ ವ್ಯಕ್ತಿಗಳು ಮತ್ತು ಸಾಕ್ಷಿದಾರರ ವೈಯಕ್ತಿಕ ಮಾಹಿತಿ ಇವೆಲ್ಲವೂ ಅತ್ಯಂತ ಸೂಕ್ಷ್ಮವಾಗಿವೆ. ಆದರೆ ಇಂತಹ ದತ್ತಾಂಶಗಳ ಡಿಜಿಲೀಟೀಕರಣ ಪ್ರಕ್ರಿಯೆ ಕುಂಠಿತಗೊಂಡಿರುವುದಕ್ಕೆ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಈ ಸಂಬಂಧ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿದ್ದರೂ ಸಹ ಇದುವರೆಗೂ ಪಾಲನೆಯಾಗಿಲ್ಲ.
ಕಂದಾಯ ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸಲು ಸರ್ಕಾರವು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ನ್ಯಾಯಾಲಯಗಳಲ್ಲಿರುವ 250 ಕೋಟಿ ಪುಟಗಳ ಹಳೆ ದಾಖಲೆಗಳನ್ನು ಡಿಜಿಟಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಹೀಗಾಗಿ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಎಂ ಚಂದ್ರಶೇಖರ ರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2026ರ ಜೂನ್ 18ರಂದು ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.
ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ಈಚೆಗಷ್ಟೇ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವೇದಿಕೆ ಮೇಲೆಯೇ ರಾಜ್ಯದ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದರು. ಅಲ್ಲದೇ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ನಂತರವೂ ಅಧಿಕಾರಿವರ್ಗವು ಎಚ್ಚೆತ್ತುಕೊಂಡಿಲ್ಲ. ಇದರ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಎಂ ಚಂದ್ರಶೇಖರ ರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ರಾಜ್ಯದ 1,396 ನ್ಯಾಯಾಲಯಗಳಲ್ಲಿರುವ ಸುಮಾರು 250 ಕೋಟಿ ಪುಟಗಳ ಹಳೆಯ ದಾಖಲೆಗಳಿವೆ. ಇವುಗಳನ್ನು ಡಿಜಿಲಿಟೀಕರಣಗೊಳಿಸುವ ಸಂಬಂಧ ಯೋಜನೆಯನ್ನೂ ಸಿದ್ಧಪಡಿಸಿದೆ. ಈ ಕಾರ್ಯವು ಮೂರು ವರ್ಷಗಳವರೆಗೆ ನಡೆಯಲಿದೆ. ಇದಕ್ಕಾಗಿ ಅಂದಾಜು 647 ಕೋಟಿ ರು ವೆಚ್ಚವಾಗಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಈ ಡಿಜಿಲೀಟೀಕರಣ ಪ್ರಕ್ರಿಯೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಇ-ಆಡಳತ ಇಲಾಖೆಯು ಅನುಷ್ಠಾನ ಏಜೆನ್ಸಿಯಾಗಿದೆ. ಆದರೆ ಇದುವರೆಗೂ ಈ ಪ್ರಸ್ತಾವವು ಸಚಿವ ಸಂಪುಟಕ್ಕೆ ಮಂಡಿಸಿಲ್ಲ. ಮತ್ತು ಹಣಕಾಸು ಇಲಾಖೆಯೂ ಸಹ ಇದಕ್ಕೆ ತಾತ್ವಿಕ ಅನುಮೋದನೆಯನ್ನೂ ನೀಡಿಲ್ಲ ಎಂದು ಪತ್ರದಿಂದ ತಿಳಿದು ಬಂದಿದೆ.
ಈ ಸಂಬಂಧ 2026ರ ಜೂನ್ 2ರಂದು ಮುಖ್ಯ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ನ್ಯಾಯಮೂರ್ತಿಬಿ.ಎಂ. ಶ್ಯಾಮ್ ಪ್ರಸಾದ್, ಸೂರಜ್ ಗೋವಿಂದರಾಜ್, ಡಿಪಿಎಆರ್ (ಇ-ಆಡಳಿತ) ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭಾಗವಹಿಸಿದ್ದ ಸಭೆಯಲ್ಲಿ ಕರ್ನಾಟಕ ನ್ಯಾಯಾಲಯಗಳ ಡಿಜಿಟಲೀಕರಣ ಮತ್ತು ಡಿಜಿಟಲ್ ರೂಪಾಂತರ (Digital Transformation) ಕುರಿತು ಚರ್ಚೆಯಾಗಿತ್ತು. ಈ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೊಳಿಸಲು ಸಂಬಂಧಿತ ಇಲಾಖೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಸಭೆಯು ತೀರ್ಮಾನಿಸಿತ್ತು.
ಅಲ್ಲದೇ ಕೆಎಸ್‌ಡಬ್ಲ್ಯುಸಿ ಆನೇಕಲ್‌ನಲ್ಲಿರುವ ಆಸ್ತಿ (7 ಎಕರೆ / 1,41,000 ಚದರ ಅಡಿ), ಡಿಜಿಟಲ್ ದಾಖಲೆಗಳ ಸಂಗ್ರಹಣೆಗೆ ಮೀಸಲಾದ ಕೇಂದ್ರವಾಗಿ ಗುರುತಿಸಲಾಗಿದೆ. ಈ ಆಸ್ತಿಯನ್ನು ಮೂಲತಃ ಕೃಷಿ ಇಲಾಖೆಯಿಂದ ಸಹಕಾರ ಇಲಾಖೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಲಾಗಿತ್ತು. ಈಗಾಗಲೇ ಆ ಗುತ್ತಿಗೆಯ 10 ವರ್ಷಗಳು ಕಳೆದಿವೆ. ಹಾಗೂ ಗುತ್ತಿಗೆ ಒಪ್ಪಂದದಲ್ಲಿ ಮೂರನೇ ವ್ಯಕ್ತಿಗೆ ವರ್ಗಾವಣೆ ಮಾಡುವ ನಿರ್ಬಂಧವೂ ಇದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ಕುರಿತು ಸಭೆಯಲ್ಲಿ ಚರ್ಚೆಯಾಗಿತ್ತು. ವಿಸ್ತೃತ ಚರ್ಚೆಯ ನಂತರ, ಸಂಬಂಧಿತ ಇಲಾಖೆಗೆ ಅದರ ಮೌಲ್ಯವನ್ನು ಪಾವತಿಸಿ, ಈ ಆಸ್ತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಶಾಶ್ವತವಾಗಿ ವರ್ಗಾಯಿಸಲು ನಿರ್ಧರಿಸಿತ್ತು. ಇದಲ್ಲದೆ, ಆಸ್ತಿಯ ನವೀಕರಣ ಮತ್ತು ಸಂಬಂಧಿತ ಈ ಎಲ್ಲಾ ನವೀಕರಣದ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಬೇಕು ಎಂಬ ಅಭಿಪ್ರಾಯಕ್ಕೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೂ ಸಹಮತ ವ್ಯಕ್ತಪಡಿಸಿದ್ದರು.
ಸಂಬಂಧಿತ ಇಲಾಖೆಯು ಈ ಆಸ್ತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಹಾಗೂ ಅದರ ಮೌಲ್ಯವನ್ನು ಮಂಜೂರು ಮಾಡಲು ಹಣಕಾಸು ಇಲಾಖೆಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.
ಈ ಸೌಲಭ್ಯದ ನವೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಿರ್ಮಿತಿ ಕೇಂದ್ರ (ನಗರ) ಸ್ಥಳ ಪರಿಶೀಲನೆ ನಡೆಸಿದೆ. ಮತ್ತು ಅಗತ್ಯ ನಕ್ಷೆಗಳನ್ನು ಸಿದ್ಧಪಡಿಸಿದೆ. 2024-25ರ ಎಸ್.ಆರ್. (Schedule of Rates) ಆಧಾರದ ಮೇಲೆ ₹22 ಕೋಟಿಗಳ ವಿವರವಾದ ಅಂದಾಜು ವೆಚ್ಚವನ್ನು ಸಲ್ಲಿಸಿದೆ.
ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಇತರ ರಾಜ್ಯಗಳ ಡಿಜಿಟಲೀಕರಣ ಸೌಲಭ್ಯಗಳ ಅಧ್ಯಯನ ಪ್ರವಾಸದಲ್ಲಿ ಅಧಿಕೃತವಾಗಿ ಭಾಗವಹಿಸಿದ್ದಾರೆ. ಈ ಯೋಜನೆಯ ಅಗತ್ಯತೆಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿದ್ದಾರೆ ಎಂದು ದೃಢಪಡಿಸಿದರು. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ಕೆಟಿಪಿಪಿ ಕಾಯ್ದೆ (KTPP Act) ಅಡಿಯಲ್ಲಿ ಕಲಂ 4(g) ವಿನಾಯಿತಿಯನ್ನು (Exemption) ಬೆಂಗಳೂರು ನಿರ್ಮಿತಿ ಕೇಂದ್ರಕ್ಕೆ ನೀಡಲಾಗುವುದು ಎಂದು ದೃಢಪಡಿಸಿದ್ದರು.
ಆದರೆ ಈ ಬಗ್ಗೆ ಯಾವುದೇ ಪ್ರಕ್ರಿಯೆಗಳಿಗೂ ಚಾಲನೆ ದೊರೆತಿಲ್ಲ. ಆದ್ದರಿಂದ, ಈ ವಿನಾಯಿತಿಯನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಹಣಕಾಸು ಇಲಾಖೆಗೆ ನಿರ್ದೇಶನಗಳನ್ನು ನೀಡುವಂತೆ ಕೋರಿರುವುದು ಗೊತ್ತಾಗಿದೆ. ಅದೇ ರೀತಿ ಸಮರ್ಪಿತ ನ್ಯಾಯಾಂಗ ದತ್ತಾಂಶ ಕೇಂದ್ರ (Dedicated Judiciary Data Centre) ಕುರಿತು ಹಣಕಾಸು ಇಲಾಖೆಯು ಹಲವು ಪ್ರಶ್ನೆಗಳನ್ನು ಎತ್ತಿತ್ತು.
ಪ್ರಕರಣದ ದಾಖಲೆಗಳು (Case Papers), ಆದೇಶಗಳು (Orders),ತೀರ್ಪುಗಳು (Judgments), ಸಾಕ್ಷ್ಯಗಳು (Evidence), ವ್ಯಾಜ್ಯದಲ್ಲಿರುವ ವ್ಯಕ್ತಿಗಳು (Litigants) ಮತ್ತು ಸಾಕ್ಷಿದಾರರ ವೈಯಕ್ತಿಕ ಮಾಹಿತಿ ಇವೆಲ್ಲವೂ ಅತ್ಯಂತ ಸೂಕ್ಷ್ಮ (Highly Sensitive) ದತ್ತಾಂಶಗಳಾಗಿವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದರು.
ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಹಾಗೂ ತಾಂತ್ರಿಕ ಸಮಿತಿಯ ಅಭಿಪ್ರಾಯದಂತೆ ಡೇಟಾ ಸೆಂಟರ್ ಮತ್ತು ಡಿಸಾಸ್ಟರ್ ರಿಕವರಿ (DC & DR) ಮೂಲಸೌಕರ್ಯವನ್ನು ನಿರ್ಮಿಸಬೇಕು ಎಂದು ಅವರು ನಿರ್ದೇಶಿಸಿದರು. ಈ ಸಂಬಂಧ, ಭಾರತದ ಸುಪ್ರೀಂ ಕೋರ್ಟ್‌ನ ಇ-ಕಮಿಟಿ ಹೊರಡಿಸಿರುವ ಡಿಜಿಟಲೀಕರಣ, ದಾಖಲೆ ಸಂಗ್ರಹಣೆ, ಸಂರಕ್ಷಣೆ, ಹುಡುಕಾಟ ಮತ್ತು ಮರುಪಡೆಯುವಿಕೆ (Digitization, Storage, Preservation, Search & Retrieval) ಕುರಿತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಿರುವುದನ್ನು ಪತ್ರದಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.

ಈ ಕುರಿತು ಡಿಪಿಎಆರ್ (ಇ-ಆಡಳಿತ) ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು, ರಾಜ್ಯದ ಎಸ್‌ಡಿಸಿಯಲ್ಲಿ ಈಗಾಗಲೇ ಹಣಕಾಸು, ಕಂದಾಯ, ಇಂಧನ ಹಾಗೂ ಇತರೆ ಇಲಾಖೆಗಳ ವಿವಿಧ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಿದೆ. ಅವುಗಳನ್ನು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಮರ್ಪಿತ ಡೇಟಾ ಸೆಂಟರ್ಮತ್ತು ಡಿಸಾಸ್ಟರ್ ರಿಕವರಿ ಸೌಲಭ್ಯದ ವ್ಯವಸ್ಥೆಯನ್ನು ತಾಂತ್ರಿಕ ಸಲಹಾ ಸಮಿತಿಯು ನಿರ್ಧರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಕೇಂದ್ರ ಸರ್ಕಾರದ ಅನುದಾನಕ್ಕೆ ಸಂಬಂಧಿಸಿದಂತೆ ಇ-ಕೋರ್ಟ್ಸ್ ಎಂಎಂಪಿ (e-Courts MMP) ಹಂತ–III ಯೋಜನೆಯಡಿ ಕೇಂದ್ರದಿಂದ ದೊರೆಯುವ ಅನುದಾನದ ಲಭ್ಯತೆಗಾಗಿ ಕಾಯುತ್ತಿದೆ. ಈ ಯೋಜನೆಗೆ ಡಿಪಿಎಆರ್ (ಇ-ಆಡಳಿತ) ಮೂಲಕ ರಾಜ್ಯ ಸರ್ಕಾರದ ಅನುದಾನ ಹಂಚಿಕೆಗೆ ಯಾವುದೇ ವಿಳಂಬವಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದರು.
ಇದಲ್ಲದೆ, ಯೋಜನೆಯ ಅನುಷ್ಠಾನದಲ್ಲಿ ಈಗಾಗಲೇ ಉಂಟಾಗಿರುವ ವಿಳಂಬವನ್ನು ಗಮನಿಸಿ, ಎಲ್ಲಾ ಇಲಾಖೆಗಳ ಅನುಮೋದನೆ ಪೂರ್ಣಗೊಳ್ಳುವುದನ್ನು ಕಾಯದೆ, ಯೋಜನೆಗೆ ಸಂಬಂಧಿಸಿದ ಸ್ಟ್ರಾಟೆಜಿಕ್ ಕನ್ಸಲ್ಟೆನ್ಸಿ (Strategic Consultancy) ಆಯ್ಕೆಗಾಗಿ ಡಿಪಿಎಆರ್ (ಇ-ಆಡಳಿತ) ತಕ್ಷಣವೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದರು.
ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನಗಳು ಸ್ಪಷ್ಟವಾಗಿವೆ. ಈ ಯೋಜನೆಯನ್ನು ಮತ್ತಷ್ಟು ವಿಳಂಬವಿಲ್ಲದೆ ಮುಂದುವರಿಸಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದು ಗಮನಸೆಳೆದಿರುವುದು ಗೊತ್ತಾಗಿದೆ.

‘ಆನೇಕಲ್‌ನಲ್ಲಿರುವ ಆಸ್ತಿಯನ್ನು ಶಾಶ್ವತವಾಗಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಬೆಂಗಳೂರು ನಿರ್ಮಿತಿ ಕೇಂದ್ರಕ್ಕೆ ಕೆಟಿಪಿಪಿ ಕಾಯ್ದೆಯ 4(g) ವಿನಾಯಿತಿ ಮಂಜೂರು ಮಾಡಬೇಕು. ಹಾಗೂ ಹಣಕಾಸು ಇಲಾಖೆಯಿಂದ ಸಚಿವ ಸಂಪುಟದ ಟಿಪ್ಪಣಿಗೆ ತಾತ್ವಿಕ ಅನುಮೋದನೆ ನೀಡಬೇಕು. ಸಚಿವ ಸಂಪುಟದ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಯೋಜನೆಯ ಅನುಷ್ಠಾನವಾಗಲು ಸಾಧ್ಯವಾಗುವಂತೆ, ಸಂಬಂಧಿತ ಎಲ್ಲ ಇಲಾಖೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು,’ ಎಂದು ರಿಜಿಸ್ಟ್ರಾರ್ ಜನರಲ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.




