ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು ವೆಚ್ಚವು ಪದೇಪದೇ ಪರಿಷ್ಕೃತಗೊಳ್ಳುತ್ತಿರುವ ಕಾರಣ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ – ವೇಗವರ್ಧಿತ ನೀರಾವರಿ ಯೋಜನೆಯಡಿಯಲ್ಲಿ ಸೇರಿಸಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯು ಹೇಳಿದೆ.
2023-24ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯಸಭೆ ಸದಸ್ಯ ಅಜಯ್ ಮಕನ್ ಅವರು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ 2026ರ ಜುಲೈ 20ರಂದು ನೀಡಿರುವ ಉತ್ತರದಲ್ಲಿ ಈ ಮಾಹಿತಿಯಿದೆ.
ಕೇಂದ್ರ ಸರ್ಕಾರವು 2023-24ರಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರುಪಾಯಿ ಸಹಾಯಧನ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರವು ಬಿಡಿಗಾಸನ್ನೂ ನೀಡಿಲ್ಲ. ಕೇಂದ್ರದ ಈ ಧೋರಣೆ ಕುರಿತು ಕಾಂಗ್ರೆಸ್ ಬಲವಾಗಿ ಟೀಕಿಸಿತ್ತು. ಈ ನಡುವೆ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಅಜಯ್ ಮಕನ್ ಅವರು ಕೇಳಿದ್ದ ಪ್ರಶ್ನೆಗೆ ಕೇಂದ್ರವು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಉತ್ತರದಲ್ಲೇನಿದೆ?
2023-24ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಅಪ್ಪರ್ ಭದ್ರಾ ಯೋಜನೆಗೆ ₹5,300 ಕೋಟಿ ಕೇಂದ್ರ ಸಹಾಯ ಘೋಷಿಸಿತ್ತು. ಈ ಮಧ್ಯೆ ಕರ್ನಾಟಕ ಸರ್ಕಾರವು ಆಗಸ್ಟ್ 2023ರಲ್ಲಿ ಮನವಿ ಸಲ್ಲಿಸಿತ್ತು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ – ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY–AIBP) ಅಡಿಯಲ್ಲಿ ಹಣಕಾಸು ನೆರವು ನೀಡುವ ಪ್ರಸ್ತಾವನೆಯನ್ನು ಜಲಶಕ್ತಿ ಸಚಿವಾಲಯ ಪರಿಗಣಿಸಿತ್ತು.
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ಬರಪೀಡಿತ ಪ್ರದೇಶಗಳಲ್ಲಿ ಸುಮಾರು 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ (Micro Irrigation) ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸುವುದು ಹಾಗೂ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರಿನ ಹರಿವನ್ನು ಹೆಚ್ಚಿಸುವುದೂ ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದೆ.

2023-24ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೇಂದ್ರ ಸಹಾಯ ಘೋಷಿಸಿತ್ತು. ಕರ್ನಾಟಕ ಸರ್ಕಾರವು ಆಗಸ್ಟ್ 2023ರಲ್ಲಿ ಸಲ್ಲಿಸಿದ ಮನವಿ ಪ್ರಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ – ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY–AIBP) ಅಡಿಯಲ್ಲಿ ಹಣಕಾಸು ನೆರವು ನೀಡುವ ಪ್ರಸ್ತಾವನೆಯನ್ನು ಜಲಶಕ್ತಿ ಸಚಿವಾಲಯ ಪರಿಗಣಿಸಿದೆ.
‘ಆದರೆ, ಯೋಜನೆಯ ಪೂರ್ಣಗೊಳಿಸುವಿಕೆಗೆ ಈ ಹಿಂದೆ ಅನುಮೋದಿಸಲಾಗಿದ್ದ ವೆಚ್ಚವು ಪ್ರಸ್ತುತ ಬೆಲೆ ಮಟ್ಟದಲ್ಲಿ ಸಾಕಾಗದ ಕಾರಣ, ಕರ್ನಾಟಕ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಪರಿಷ್ಕೃತ ವೆಚ್ಚ ಅಂದಾಜನ್ನು ಸಿದ್ಧಪಡಿಸಿ ಜಲಶಕ್ತಿ ಸಚಿವಾಲಯ ಪರಿಶೀಲನೆಗೆ ತೆಗೆದುಕೊಂಡಿದೆ,’ ಎಂದು ಕೇಂದ್ರ ಸರ್ಕಾರವು ಉತ್ತರದಲ್ಲಿ ಮಾಹಿತಿ ಒದಗಿಸಿದೆ.
ಈ ಪರಿಷ್ಕೃತ ವೆಚ್ಚ ಅಂದಾಜನ್ನು 2024-25ರ ಬೆಲೆ ಮಟ್ಟದಲ್ಲಿ ₹21,167.93 ಕೋಟಿ ಎಂದು ನಿಗದಿಪಡಿಸಲಾಗಿದೆ. 2026ರ ಮಾರ್ಚ್ 20ರಂದು ನಡೆದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಸಲಹಾ ಸಮಿತಿಯ 160ನೇ ಸಭೆಯಲ್ಲಿ ಅದನ್ನು ಪರಿಶೀಲಿಸಲಾಗಿದೆ.
ಈ ಕಾರಣಗಳಿಂದಾಗಿ ಈ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಇದುವರೆಗೆ ಯಾವುದೇ ಕೇಂದ್ರ ಸಹಾಯಧನವನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಹೇಳಿದೆ.
‘ಇನ್ನು ಮುಂದೆ, ಈ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಕೇಂದ್ರ ಸಹಾಯಕ್ಕೆ ಸೇರಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. 2026–31ರ ಅವಧಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಗೆ ಅನುಮೋದಿಸಲಾದ ಮಾರ್ಗಸೂಚಿಗಳು ಹಾಗೂ ಹಣಕಾಸಿನ ಹಂಚಿಕೆ, ಜೊತೆಗೆ 16ನೇ ಹಣಕಾಸು ಆಯೋಗದ ಶಿಫಾರಸುಗಳ ಅವಧಿಗೆ ಅನುಗುಣವಾಗಿ ಕೈಗೊಳ್ಳಲಾಗುವುದು,’ ಎಂದು ಮಾಹಿತಿ ಒದಗಿಸಿದೆ.
ಏನಿದು ಯೋಜನೆ?
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದಿಂದ ಮಧ್ಯ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮಧ್ಯ ಕರ್ನಾಟಕದ ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ದತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ಹಾಗೂ ಇದೇ ಜಿಲ್ಲೆಗಳ 367 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸುವ ಉದ್ದೇಶವೂ ಈ ಯೋಜನೆಯಲ್ಲಿದೆ.

ಈ ಯೋಜನೆಗಾಗಿ 2025-26ನೇ ಸಾಲಿನಲ್ಲಿ ರೂ.1440.29 ಕೋಟಿಗಳ ಅನುದಾನ ಹಂಚಿಕೆಯಾಗಿದ್ದು, ಫೆಬ್ರವರಿ-2026ರ ಅಂತ್ಯಕ್ಕೆ ಒಟ್ಟಾರೆ ಸಂಚಿತ ರೂ.11,375.02 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಿದೆ. ಈ ಯೋಜನೆಯನ್ನು 2027-28ನೇ ಸಾಲಿನಲ್ಲಿ 2028ರ ಮಾರ್ಚ್ ಅಂತ್ಯಕ್ಕೆ ಅನುದಾನದ ಲಭ್ಯತೆಗೆ ಅನುಗುಣವಾಗಿ ಪೂರ್ಣಗೊಳಿಸಲು ಉದ್ದೇಶಿಸಿದೆ.
ಯೋಜನಾ ಅಧಿಕಾರಿಗಳ ತಂಡವು ಜನವರಿ-2026 ರಲ್ಲಿ ಹಾಜರಾಗಿ; ಸುದೀರ್ಘವಾದ ಚರ್ಚೆ ಹಾಗೂ ಪರಿಶೀಲನೆಗಳ ಬಳಿಕ ಕೇಂದ್ರ ಜಲಶಕ್ತಿ ಮಂತ್ರಾಲಯದ Cost Appraisal Directorate; ಯೋಜನೆಯ ಮೊತ್ತವನ್ನು ರೂ.21,167.93 ಕೋಟಿಗಳಿಗೆ ಅಂತಿಮಗೊಳಿಸಿರುತ್ತದೆ.
ಈ ಮೊತ್ತಕ್ಕೆ ಕೇಂದ್ರ ಜಲ ಆಯೋಗವು ಅನುಮತಿ ನೀಡಿದೆ. ಯೋಜನೆಯ ಪರಿಷ್ಕ್ರತ ಅಂದಾಜು ಮೊತ್ತಕ್ಕೆ ಅನುಗುಣವಾಗಿ ಬರುವ ಲಾಭ ವೆಚ್ಚ ಅನುಪಾತಕ್ಕೆ (BC Ratio);ಕೇಂದ್ರ ಜಲ ಆಯೋಗದ ಯೋಜನಾ ಮೌಲ್ಯಾಂಕನ ನಿರ್ದೇಶನಾಲಯವು 2026ರ ಫೆ.17ರಂದು ಒಪ್ಪಿಗೆ ನೀಡಿದೆ.
ಕೇಂದ್ರದ ಸಹಾಯಧನ ಪಡೆಯುವ ನಿಟ್ಟಿನಲ್ಲಿ ಯೋಜನೆಯ ಪರಿಷ್ಕ್ರತ ಅಂದಾಜು ಮೊತ್ತ ಹಾಗೂ ಲಾಭ ವೆಚ್ಚ ಅನುಪಾತವನ್ನು (BC Ratio) ಕೇಂದ್ರ ಜಲ ಆಯೋಗದ ವತಿಯಿಂದ ಮುಂಬರುವ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಮಂಡಿಸಿ ಅನುಮತಿ ಪಡೆಯಲು ಬಾಕಿ ಇದೆ.
ಈ ಯೋಜನೆಯಿಂದ 787 ಗ್ರಾಮಗಳಿಗೆ ಪ್ರಯೋಜನ ಆಗಲಿದೆ. ಒಟ್ಟಾರೆ 75 ಲಕ್ಷ ಜನರಿಗೆ ಈ ಯೋಜನೆಯಿಂದ ನೇರವಾಗಿ ಅನುಕೂಲ ಆಗಲಿದೆ. ಈ ಯೋಜನೆಗೆ ಸರಿ ಸುಮಾರು 30 ಟಿಎಂಸಿ ನೀರು ಬಳಕೆ ಆಗಲಿದೆ.
ಈ ಯೋಜನೆ 2 ಹಂತಗಳಲ್ಲಿ ಜಾರಿಗೆ ಬರಲಿದೆ. ಪ್ಯಾಕೇಜ್ 1ರ ಅಡಿ ತುಂಗಾ ನದಿಯಿಂದ ಹದಿನೇಳೂವರೆ ಟಿಎಂಸಿ ನೀರನ್ನ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಪ್ಯಾಕೇಜ್ 2ರ ಅಡಿ ಭದ್ರಾ ಜಲಾಶಯದಿಂದ ಸುಮಾರು 30 ಟಿಎಂಸಿ ನೀರನ್ನ ಲಿಫ್ಟ್ ಮಾಡಿ ಅಜ್ಜಂಪುರದಲ್ಲಿ ಇರುವ ಸುರಂಗದವರೆಗೆ ಸಾಗಿಸಲಿದೆ.

ಸಕಾಲದಲ್ಲಿ ಈ ಯೋಜನೆ ಅನುಷ್ಠಾನಗೊಂಡಿಲ್ಲ. ಹೀಗಾಗಿ ಈ ಯೋಜನೆಯ ವೆಚ್ಚವು ದಿನದಿಂದ ದಿನಕ್ಕೆ ಪರಿಷ್ಕೃತಗೊಳ್ಳುತ್ತಲೇ ಬಂದಿದೆ. ಈ ಯೋಜನೆಗೆ 23 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿರುವ ಮಾಹಿತಿ ಪ್ರಕಾರ 2024-25ರ ಬೆಲೆ ಮಟ್ಟದಲ್ಲಿ ₹21,167.93 ಕೋಟಿ ರು. ನಿಗದಿಪಡಿಸಿದೆ. ಈ ಪೈಕಿ 16 ಸಾವಿರ ಕೋಟಿ ರೂಪಾಯಿ ಮೊತ್ತದ ಕೆಲಸಗಳು ಇನ್ನೂ ಬಾಕಿ ಉಳಿದಿವೆ.
ಭದ್ರಾ ಮೇಲ್ದಂಡೆ ಯೋಜನೆ ಇದೀಗ ರಾಷ್ಟ್ರೀಯ ಯೋಜನೆ.. ಯಾವುದೇ ಒಂದು ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಶೇಕಡಾ 60ರಷ್ಟು ಅನುದಾನ ನೀಡಬೇಕು. ಇದೇ ಕಾರಣಕ್ಕಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ಅನುದಾನ ಘೋಷಣೆ ಆಗಿದೆ.
ಈ ಯೋಜನೆಯನ್ನು 2000ರಲ್ಲೇ ಘೋಷಿಸಲಾಗಿತ್ತು. 2003ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. 2008ರಲ್ಲಿ ಈ ಯೋಜನೆಗೆ ಚಾಲನೆ ನೀಡಿತ್ತು. ಭದ್ರಾ ಮೇಲ್ದಂಡೆ ಯೋಜನೆಯ ರೂ.21473.67 ಕೋಟಿಗಳ ಮೊತ್ತದ ಪುನರ್ ಪರಿಷ್ಕೃತ ಯೋಜನಾ ವರದಿಗೆ ಸರ್ಕಾರವು (ಆದೇಶ ಸಂಖ್ಯೆ: WRD 166 VBYE 2020 Bangalore dated :16.12.2020 ) 2020ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೂಲ ಯೋಜನೆಗೆ ಚಾಲನೆ ದೊರೆತ ನಂತರವೂ ಅಂದರೇ ಸುಮಾರು 18 ವರ್ಷಗಳಾದರೂ ಭೂ ಸ್ವಾಧೀನ ಮತ್ತು ಅರಣ್ಯ ಇಲಾಖೆಯ ಪೂರ್ವಾನುಮತಿ ಸಕಾಲದದಲ್ಲಿ ದೊರೆಯದಿರುವುದು ಸೇರಿದಂತೆ ಇನ್ನಿತರೆ ನಾನಾ ಕಾರಣಗಳಿಂದ ಕುಂಠಿತಗೊಳ್ಳುತ್ತಲೇ ಬಂದಿದೆ.
ಯೋಜನೆಯ ರೂಪರೇಷೆಗಳು:-ಭದ್ರಾ ಮೇಲ್ದಂಡೆ ಯೋಜನೆಯನ್ನು 02 ಹಂತಗಳಲ್ಲಿ ಕೈಗೆತ್ತಿಕೊಂಡಿದೆ. ಪ್ರಥಮ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸುವುದು ಭದ್ರಾ ಜಲಾಶಯದಲ್ಲಿನ 12.50 ಟಿ.ಎಂ.ಸಿ. ನೀರನ್ನು ಬಳಸಿಕೊಂಡು ಒಟ್ಟಾರೆ 29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ ಉದ್ದೇಶ ಹೊಂದಿದೆ. ಮತ್ತು ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸಲಿದೆ.
ಎರಡನೇ ಹಂತದಲ್ಲಿ ಕಾಲುವೆ, ಕೆರೆ ತುಂಬಿಸುವ ಫೀಡರ್ ಮತ್ತು ಸೂಕ್ಷ್ಮ ನೀರಾವರಿ ಕಲ್ಪಿಸುವ ಕಾಮಗಾರಿಗಳನ್ನು ಒಳಗೊಂಡಿದೆ. ತರೀಕೆರೆ ಏತ ನೀರಾವರಿ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ 20,150 ಹೆಕ್ಟೇರ್ (0.49 ಲಕ್ಷ ಎಕರೆ) ಕ್ಷೇತ್ರಕ್ಕೆ ಸೂಕ್ಷ್ಮ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ 79 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸುವ (2.06 ಟಿ.ಎಂ.ಸಿ) ಉದ್ದೇಶ ಹೊಂದಿದೆ.
ಚಿತ್ರದುರ್ಗ ಶಾಖಾ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಮೂಲಕ 1,20,465 ಹೆಕ್ಟೇರ್ (2.98 ಲಕ್ಷ ಎಕರೆ) ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ 157 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸುವ (16.36 ಟಿ.ಎಂ.ಸಿ) ಉದ್ದೇಶ ಹೊಂದಿದೆ.
ತುಮಕೂರು ಶಾಖಾ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಮೂಲಕ 84,900 ಹೆಕ್ಟೇರ್ (2.10 ಲಕ್ಷ ಎಕರೆ) ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ 131 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸುವುದು. ವಾಣಿ ವಿಲಾಸ ಸಾಗರ ಜಲಾಶಯಕ್ಕೆ ತುಮಕೂರು ಶಾಖಾ ಕಾಲುವೆ ಮುಖಾಂತರ (11.48 ಟಿ.ಎಂ.ಸಿ) ನೀರನ್ನು ಹರಿಸಲಿದೆ.
ಚಿತ್ರದುರ್ಗ ಶಾಖಾ ಕಾಲುವೆಯು ಕಿ.ಮೀ00 ರಿಂದ 134.597 ಕಿ.ಮೀ ರವರೆಗಿನ ಚಿತ್ರದುರ್ಗ ಶಾಖಾ ಕಾಲುವೆಯ ರೂ.1723.42 ಕೋಟಿಗಳ ಮೊತ್ತದ ಕಾಮಗಾರಿಗಳನ್ನು 12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದೆ. ಒಟ್ಟು 134.597 ಕಿ.ಮೀ ಕಾಲುವೆ ನಿರ್ಮಾಣ ಕಾಮಗಾರಿಯ ಪೈಕಿ 128.00 ಕಿ.ಮೀ ಉದ್ದದ ಕಾಲುವೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ.
1.962 ಕಿಮೀ ಉದ್ದದ ಗೋನೂರು ಮೇಲ್ಗಾಲುವೆ (Aqueduct) ಸೇರಿದಂತೆ ಉಳಿದ 6.597 ಕಿ.ಮೀ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ. 1.962 ಕಿಮೀ ಉದ್ದದ ಗೋನೂರು ಮೇಲ್ಗಾಲುವೆ (Aqueduct) ಹೊರತುಪಡಿಸಿ ಉಳಿದ 4.635 ಕಿಮೀ ಉದ್ದದ ನಾಲಾ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಸದರಿ ಕಾಮಗಾರಿಗಳನ್ನು 15/04/2026ರ ಅಂತ್ಯಕ್ಕೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ 114.209 ಕಿಮೀ ಚಿತ್ರದುರ್ಗ ಸಮೀಪದ ಗೋನೂರು ಮೇಲ್ಗಾಲುವೆವರೆಗೆ ನೀರನ್ನು ಹರಿಸಲು (trial run) ಉದ್ದೇಶಿಸಿದೆ.
ತುಮಕೂರು ಶಾಖಾ ಕಾಲುವೆಯು ಕಿ.ಮೀ00 ರಿಂದ 159.684 ಕಿ.ಮೀ ರವರೆಗಿನ ತುಮಕೂರು ಶಾಖಾ ಕಾಲುವೆಯ ರೂ.1142.82 ಕೋಟಿಗಳ ಮೊತ್ತದ ಕಾಮಗಾರಿಗಳನ್ನು 9 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದೆ. ಒಟ್ಟು 159.684 ಕಿ.ಮೀ ಕಾಲುವೆ ಕಾಮಗಾರಿಯ ಪೈಕಿ 92.885 ಕಿ.ಮೀ ಕಾಲುವೆ ಅಗೆತ, 45.545 ಕಿ.ಮೀ ಸಿ.ಬಿ.ಎಲ್ ವರೆಗೆ ಕಾಲುವೆ ಅಗೆತ ಹಾಗೂ 38.325 ಕಿ.ಮೀ ಕಾಲುವೆ ಲೈನಿಂಗ್ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ.

ಬಾಕಿ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಕಾಮಗಾರಿಗಳನ್ನು ಮಾರ್ಚ್-2028ರ ಅಂತ್ಯಕ್ಕೆ ಪೂರ್ಣಗೊಳಿಸಲು ಯೋಜಿಸಿದೆ ಎಂದು ಅನುಷ್ಠಾನ ಹೊಣೆ ಹೊತ್ತಿರುವ ನೀರಾವರಿ ನಿಗಮವು ವಿವರಿಸಿದೆ. ಭದ್ರಾ ಮೇಲ್ದಂಡೆಯ ಯೋಜನಾ ವೆಚ್ಚ ಆರಂಭದಲ್ಲಿ ಇದ್ದಿದ್ದು ಕೇವಲ 2,813 ಕೋಟಿ ರೂಪಾಯಿ. ಆದರೆ 21 ಸಾವಿರ ಕೋಟಿಗೇರಿರುವುದು ಗೊತ್ತಾಗಿದೆ.
ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲೇ ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಅನುದಾನ ಮತ್ತು ಅನುಮತಿಗಳನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದನ್ನು ಸ್ಮರಿಸಬಹುದು.




