Tuesday | July 21, 2026 |

ವಸತಿ ಬಡಾವಣೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ, ಬಡ್ಡಿ ಪಾವತಿ; ಲೆಕ್ಕಪತ್ರವನ್ನೇ ನಿರ್ವಹಿಸಿಲ್ಲ, ದಾಖಲೆಗಳನ್ನೂ ಒದಗಿಸಿಲ್ಲ, ಮುಡಾ ದುರಾಡಳಿತ

ಮಂಗಳೂರು: ಕುಂಜತ್‌ ಬೈಲ್ ಸೇರಿದಂತೆ ಹಲವೆಡೆ ವಸತಿ ಬಡಾವಣೆಗಳನ್ನು ರಚಿಸುವ ಉದ್ದೇಶದಿಂದ ಜಮೀನು ಖರೀದಿಸಿ ಮತ್ತು  ಬ್ಯಾಂಕ್‌ಗಳಿಂದ ಸಾಲ ಪಡೆದಿರುವ  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆ ನಿರ್ಮಾಣ ಕಾಮಗಾರಿಯನ್ನು  ಪೂರ್ಣ ಪ್ರಮಾಣದಲ್ಲಿ  ಮುಕ್ತಾಯಗೊಳಿಸಿಲ್ಲ. ಅಲ್ಲದೇ  ವಸತಿ ಬಡಾವಣೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಡ್ಡಿ ಪಾವತಿಸಿದ ಕುರಿತು ಯಾವುದೇ ಲೆಕ್ಕಪತ್ರಗಳನ್ನು ನಿರ್ವಹಿಸಿಲ್ಲ ಎಂಬ ಸಂಗತಿಯನ್ನು ಲೆಕ್ಕ ತಪಾಸಣೆ ವರದಿಯು ಬಯಲು ಮಾಡಿದೆ.

ಮಂಗಳೂರು ತಾಲೂಕಿನ ಕುಂಜತ್ತಬೈಲ್ ಗ್ರಾಮದಲ್ಲಿ ಮಾತ್ರವಲ್ಲದೆ ಈಗಾಗಲೇ ಚೇಳ್ಯಾರು (ಚೇಳೈರು) ಮತ್ತು ಕೊಣಾಜೆಯಲ್ಲಿ ಮನೆ ನಿವೇಶನಕ್ಕಾಗಿ ಜಮೀನು ಖರೀದಿ ಮಾಡಿದೆಯಾದರೂ  ಮನೆ,  ನಿವೇಶನಗಳನ್ನು ವಿತರಣೆ ಮಾಡಿಲ್ಲ ಎಂದು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

2023-24ನೇ ಸಾಲಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರ ತಪಾಸಣೆಯನ್ನು ಪೂರ್ಣಗೊಳಿಸಿರುವ ಲೆಕ್ಕ ಪರಿಶೋಧಕರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಈ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾರ್ಯವೈಖರಿ ಕುರಿತು ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು 2026ರ ಜೂನ್‌ 19ರಂದು ಅಧಿಕಾರಿಗಳ ಸಭೆ ನಡೆಸಿದ್ದರು. ಈ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು ರಚಿಸಿರುವ ವಸತಿ ಬಡಾವಣೆ, ಸಿ ಎ ನಿವೇಶನಗಳ ಹಂಚಿಕೆ ಕುರಿತು ಮಾಹಿತಿ ಪಡೆದಿದ್ದರು. ಈ ಸಭೆಯ ಬೆನ್ನಲ್ಲೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ 2023-24ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯು ಮುನ್ನೆಲೆಗೆ ಬಂದಿದೆ.

ವಸತಿ ಬಡಾವಣೆಗಳ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರವು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದರೂ ಸಹ  ಸರಿಯಾಗಿ ನಿರ್ವಹಣೆ ಮಾಡಿಲ್ಲ.  ನಗರಾಭಿವೃದ್ಧಿ ಪ್ರಾಧಿಕಾರವು ಖರೀದಿ ಮಾಡಿದ ಭೂಮಿಯಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿಯನ್ನು ಪೂರ್ತಿ ಮಾಡಿಲ್ಲ. ಸರಕಾರದ ನಿರ್ದೇಶನದಂತೆ ವಿಸ್ತೃತ ಯೋಜನಾ ವರದಿ (DPR) ಯಲ್ಲಿ ತಿಳಿಸಿರುವಂತೆ ಬಡಾವಣೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಕಾರ್ಯಗತಗೊಳಿಸಿ ಸಾಲ ಮರುಪಾವತಿ ಮಾಡಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರದವು ನಿರ್ದಿಷ್ಟ ಉದ್ದೇಶಕ್ಕಾಗಿ  ಕಾದಿರಿಸಿದ ಮೊಬಲಗಿನ ನಿಶ್ಚಿತ ಠೇವಣಿಗಳನ್ನು ಮರಳಿ ಪಡೆದಿಲ್ಲ. ಅಲ್ಲದೇ  ಈ ಸಂಬಂಧ ವಿವರಗಳನ್ನೂ  ಲೆಕ್ಕಪರಿಶೋಧನೆಗೆ ಹಾಜರುಪಡಿಸಿಲ್ಲ. ಕುಂಜತ್ತಬೈಲ್ ಬಡಾವಣೆ ನಿರ್ಮಾಣಕ್ಕೆ  ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರಿಗೆ ಅಗತ್ಯ ಮಾಹಿತಿಯನ್ನು ಪ್ರಾಧಿಕಾರವು ನೀಡಿಲ್ಲ.

ಕುಂಜತ್ತಬೈಲು ಜಮೀನು ಖರೀದಿ ಸಾಲದ ಕಡತವನ್ನು ಲೆಕ್ಕ ಪರಿಶೋಧಕರು  ಪರಿಶೀಲಿಸಿದ್ದಾರೆ.  2013-24ನೇ ಸಾಲಿನಲ್ಲಿ ಬ್ಯಾಂಕಿಗೆ ಅಡಮಾನ ಇರಿಸಿರುವ ಮೊತ್ತದ ಮೇಲೆ ಗಳಿಸಿದ ಬಡ್ಡಿ ಮೊತ್ತವನ್ನು ಸಾಲದ ಬಡ್ಡಿಗೆ ಕಟಾಯಿಸಿರುವ ಬಗ್ಗೆ ಲೆಕ್ಕಪತ್ರವನ್ನು ನಿರ್ವಹಿಸಿಲ್ಲ ಎಂದು ತಪಾಸಣೆ ವೇಳೆ ಪತ್ತೆ ಹಚ್ಚಿದ್ದಾರೆ.  ಮಾತ್ರವಲ್ಲದೆ,  ಕುಂಜತ್ತಬೈಲ್ ಬಡಾವಣೆ ನಿರ್ಮಾಣ ಕಾಮಗಾರಿ ಬಿಲ್ಲುಗಳನ್ನು ಪಾವತಿಸುತ್ತಿದೆ.  ಈ ಬಗ್ಗೆ ಕೂಡ ಲೆಕ್ಕಪತ್ರದಲ್ಲಿ ದಾಖಲಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಕುಂಜತ್ತಬೈಲು ಜಮೀನು ಬಗ್ಗೆ ಈವರೆಗೆ ಪಡೆದ ಸಾಲ, ಮರುಪಾವತಿ ಮಾಡಿರುವ ಬಡ್ಡಿ , ಹೊಂದಾಣಿಕೆ ಮಾಡಿರುವ ಬಡ್ಡಿ ಮೊತ್ತ ಹಾಗೂ ಕಾಮಗಾರಿಗಳಿಗೆ ಆಗಿರುವ ವೆಚ್ಚವನ್ನು ದಾಖಲಿಸಿದ ಲೆಕ್ಕಪತ್ರದ ದಾಖಲೆಗಳನ್ನು ನೀಡಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 2025 ಮಾರ್ಚ್ ನಲ್ಲಿ ಸೂಚನೆ ನೀಡಿದ್ದರು. ಆದರೆ  ಲೆಕ್ಕಪರಿಶೋಧಕರು ಈ ವರದಿಯನ್ನು ತಯಾರಿಸುವವರೆಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು  ಅನುಸರಣಾ ವರದಿಯನ್ನು ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

 

ಮಂಗಳೂರು ತಾಲೂಕಿನ ಕುಂಜತ್ತಬೈಲ್ ಗ್ರಾಮದ ಸರ್ವೆ ನಂಬರ್ 6/1 ರಿಂದ 6/14  ಮತ್ತು 5/1ರಿಂದರಲ್ಲಿ ಒಟ್ಟು 17 ಎಕರೆ 49 ಸೆಂಟ್ಸ್ ಭೂಪರಿವರ್ತನೆಯಾದ ಜಮೀನನ್ನು ಕುಂಜತ್ತಬೈಲ್ ಬಡಾವಣೆ ನಿರ್ಮಾಣಕ್ಕಾಗಿ ಖರೀದಿ ಮಾಡಲಾಗಿತ್ತು. ಒಂದು ಸೆಂಟ್ ಜಮೀನಿಗೆ 2.30 ಲಕ್ಷ ರೂಪಾಯಿ ದರದಲ್ಲಿ ಭೂ ಮಾಲೀಕರಾದ ಕೃಷ್ಣ ಜೆ.ಪಾಲೇಮಾರ್ ಅವರಿಗೆ 40,22,70,000 ರೂಪಾಯಿ ಪಾವತಿ ಮಾಡಲಾಗಿದೆ. ಇದಕ್ಕಾಗಿ ಕೆನರಾ ಬ್ಯಾಂಕ್ ಹಂಪನಕಟ್ಟೆ ಮತ್ತು ಲಾಲ್‌ಬಾಗ್  ಶಾಖೆಗಳಿಂದ ಒಟ್ಟು 42,87,97, 320 ರೂಪಾಯಿ  ಸಾಲ ಪಡೆದುಕೊಂಡಿತ್ತು.

ಈ ಯೋಜನೆಗೆ ರಾಜ್ಯ ಸರಕಾರ 2020 ಮಾರ್ಚ್ 20ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು.  ಮತ್ತು ಸರಕಾರದಿಂದ ಯಾವುದೇ ಅನುದಾನ ನೀಡಿಲ್ಲ. ಕುಂಜತ್ತಬೈಲ್ ಬಡಾವಣೆಯಲ್ಲಿ 182 ಮನೆ ನಿವೇಶನಗಳು, ಚೇಳ್ಯಾರು ಬಡಾವಣೆಯಲ್ಲಿ 112, ಕೊಣಾಜೆ ಬಡಾವಣೆಯಲ್ಲಿ 750 ಮನೆ ನಿವೇಶನ ಲಭ್ಯವಿವೆ ಎಂದು ವರದಿಯಲ್ಲಿ ಹೇಳಿದೆ.

 

 

ಚೇಳ್ಯಾರು ಮತ್ತು ಕೋಣಾಜೆಯಲ್ಲಿಯೂ ವಸತಿ ಬಡಾವಣೆಗೆ ಜಮೀನು ಖರೀದಿಸಿದೆ. ಆದರೆ ಇದರ ದಾಖಲೆಗಳನ್ನು ಲೆಕ್ಕ ಪರಿಶೋಧಕರಿಗೆ ನೀಡಿಲ್ಲ. ಈ ಜಮೀನು ಖರೀದಿಗೆ ಸಂಬಂಧಿಸಿದಂತೆ ಸರ್ಕಾರವು ಮಂಜೂರಾತಿ ನೀಡಿದ್ದ ಆದೇಶದ ಪ್ರಕಾರ ಜಮೀನು ಖರೀದಿಯಿಂದ ಬಂದ ಆದಾಯದಲ್ಲೇ ಭರಿಸಬೇಕು. ಆದರೆ ಈ ಜಮೀನಿಂದ ಬಂದ ಆದಾಯದ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.

ರಿಸರ್ವೇಷನ್ ಶುಲ್ಕ ಮತ್ತು ಕೆರೆ ಪುನರುಜ್ಜೀವನ ಶುಲ್ಕ ನಿಧಿಯಡಿ ಸಂಗ್ರಹವಾದ ಮೊತ್ತದ ಹೂಡಿಕೆಗಳನ್ನು, ಕೆನರಾ ಬ್ಯಾಂಕ್‌ ಗೆ ವರ್ಗಾವಣೆ ಮಾಡಿ ಜಮೀನು ಖರೀದಿಸಲು ಸಾಲ ಪಡೆದಿದೆ. ಈ ವರ್ಗಾವಣೆಯಾದ ಮೊತ್ತಕ್ಕೆ ಕೆನರಾ ಬ್ಯಾಂಕ್‌ನಿಂದ ಹೊಸ ಹೂಡಿಕೆ ಪತ್ರ ನೀಡಿದೆ. ಆದರೆ ಇದು ಯಾವ ನಿಧಿಗೆ ಸಂಬಂಧಿಸಿದೆ ಎಂದು ಲೆಕ್ಕ ಪರಿಶೋಧಕರಿಗೆ ತಿಳಿದು ಬಂದಿದೆ. ಅಲ್ಲದೆ ಇದರ ವಿವರಗಳನ್ನೂ ಲೆಕ್ಕ ಪರಿಶೋಧನೆಗೆ ನೀಡಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಹಾಗೆಯೇ ಖರೀದಿ ಮಾಡಿದ ಭೂಮಿಯಲ್ಲಿ ಬಡಾವಣೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ.  ಸರ್ಕಾರದ ನಿರ್ದೇಶನದ ಪ್ರಕಾರ ವಿಸ್ತೃತ ಯೋಜನಾ ವರದಿಯಲ್ಲಿ ತಿಳಿಸಿರುವಂತೆ ಬಡಾವಣೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಕಾರ್ಯಗತಗೊಳಿಸಿ ಸಾಲ ಮರು ಪಾವತಿ ಮಾಡಿಲ್ಲ.  ಹಾಗೂ ಪ್ರಾಧಿಕಾರದ ನಿರ್ದಿಷ್ಟ ಉದ್ದೇಶಕ್ಕೆ ಕಾದಿರಿಸಿದ ಮೊಬಲಿಗಿನ ನಿಖರ ಠೇವಣಿಗಳನ್ನು ಮರಳಿ ಪಡೆದಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ನಿವೇಶನ ಹರಾಜು ಮಾಡಿಲ್ಲವೇಕೆ?

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು 2013-24ನೇ ಹಣಕಾಸು ವರುಷದಲ್ಲಿ ಯಾವುದೇ ನಿವೇಶನಗಳ ಹರಾಜು ಮಾಡಿಲ್ಲ.  ಕೈಕಂಬ ಬಿಕರ್ಣಕಟ್ಟೆ  ಶ್ರೀನಿವಾಸ ಮಲ್ಯ ನಗರ ಬಡಾವಣೆ ನಿವೇಶನ (ಸಂಖ್ಯೆ 75 )  ಹಂಚಿಕೆಗೆ ಬಾಕಿ ಇತ್ತು. ಇದನ್ನು ನಿಯಮಾನುಸಾರ ಹಂಚಿಕೆ ಮಾಡಿ ಲೆಕ್ಕ ಪರಿಶೋಧೆಗೆ ಒದಗಿಸಲು ಸೂಚಿಸಲಾಗಿತ್ತು. ಸೋಮನಾಥ ನಗರ ಬಡಾವಣೆಯಲ್ಲಿ ನಿವೇಶನ (ಸಂಖ್ಯೆ 183ರ) ವು   ಹಂಚಿಕೆಗೆ ಬಾಕಿ ಇತ್ತು.   ಹಲವಾರು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಉಲ್ಲೇಖಿಸಿದರೂ ಸಹ  ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

2015-16ನೇ ಸಾಲಿನಲ್ಲಿ ಪದವು ಗ್ರಾಮದ ಸರ್ವೇ ನಂಬರ್ 157/2ರಲ್ಲಿ ಒಂದು ಎಕರೆ ಜಮೀನಿನಲ್ಲಿ ಕಾಡುಗಳ್ಳಿ ವೀರಪ್ಪನ್ ಮತ್ತವನ ಸಹಚರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಿಶೇಷ ಕಾರ್ಯಪಡೆ (STF) ಪೊಲೀಸ್ ಸಿಬ್ಬಂದಿಗಾಗಿ STF ಬಡಾವಣೆ ನಿರ್ಮಾಣ ಮಾಡಲಾಗಿತ್ತು. ಈ ಬಡಾವಣೆಯಲ್ಲಿ 19 ನಿವೇಶನಗಳು ಲಭ್ಯವಿದ್ದವು.   ಈ ಪೈಕಿ ಮೂರು ಮೂಲೆ ನಿವೇಶನ,  ಒಂದು ವಾಣಿಜ್ಯ ನಿವೇಶನ ಲಭ್ಯವಿವೆ.  ಒಟ್ಟು 19 ನಿವೇಶನಗಳ ಪೈಕಿ 11 ನಿವೇಶನಗಳನ್ನು 2015-2016ರಲ್ಲಿ, 2 ನಿವೇಶನಗಳನ್ನು 2016-17ರಲ್ಲಿ ಮತ್ತು 2017-18ರಲ್ಲಿ2 ನಿವೇಶನಗಳನ್ನು ಬದಲು ನಿವೇಶನಗಳಾಗಿ ಹಂಚಿಕೆ ಮಾಡಲಾಗಿದೆ. ಮೂರು ಮೂಲೆ ನಿವೇಶನ ಮತ್ತು 1 ವಾಣಿಜ್ಯ ನಿವೇಶನ ಹಂಚಿಕೆ ಮಾಡಲು 2015-16 ನೇ ಸಾಲಿನಿಂದಲೂ ಬಾಕಿ ಇರುವುದು ಗೊತ್ತಾಗಿದೆ.

ಈ ನಿವೇಶನಗಳನ್ನು ಮಾರಾಟ ಮಾಡದೇ ಇರುವುದರಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ನಷ್ಟ ಆಗುತ್ತಿದೆ.  ಯು. ಶ್ರೀನಿವಾಸ ಮಲ್ಯ ಬಡಾವಣೆಯಲ್ಲಿ 4 ನಿವೇಶನಗಳಿಗೆ ತಕರಾರು ಕಂಡು ಬಂದಿದೆ.  2023-24ನೇ ಸಾಲಿನಲ್ಲಿ ಒಟ್ಟು 13.58 ಲಕ್ಷ ರೂಪಾಯಿ ವಸೂಲಿಗೆ ಬಾಕಿ ಇದೆ. .  ಸಂಬಂಧಪಟ್ಟ  ಈ  4 ನಿವೇಶನಗಳಲ್ಲಿ  2ನ್ನು  2020ರಲ್ಲಿ ಮತ್ತು ಅನಂತರ ಮತ್ತೆರಡು ನಿವೇಶನಗಳ  ಹಂಚಿಕೆಯನ್ನು ರದ್ದು ಮಾಡಿದೆ.  ಈ ನಾಲ್ಕು ನಿವೇಶನಗಳನ್ನು ಕಾನೂನು ಪ್ರಕಾರ ಮರು ಹಂಚಿಕೆ ಮಾಡಲು ಅವಕಾಶ ಇರುವುದರಿಂದ ಸದ್ರಿ ನಿವೇಶನಗಳನ್ನು ಮರು ಹಂಚಿಕೆ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲು ಲೆಕ್ಕಪರಿಶೋಧಕರು ಸೂಚಿಸಿದ್ದಾರೆ.

ನಾಗರಿಕ ಸೌಲಭ್ಯಗಳ ನಿವೇಶನಗಳಿಂದ ಬಾಕಿ

ವಿವಿಧ ಬಡಾವಣೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಹಂಚಿಕೆ ಮಾಡಿದ ನಾಗರಿಕ ಸೌಲಭ್ಯಗಳ  ಪೈಕಿ ನಾಲ್ಕು ನಿವೇಶನಗಳನ್ನು ಪಡೆದುಕೊಂಡಿರುವ ಸಂಸ್ಥೆಗಳಿಂದ ವಸೂಲಾತಿ ಬಾಕಿ ಇದೆ.  ಪ್ರಾಧಿಕಾರಕ್ಕೆ ಬರಬೇಕಾಗಿರುವ ಗುತ್ತಿಗೆ ಮೌಲ್ಯ  5,06,46,905 ರೂಪಾಯಿ ಮತ್ತು ವಸೂಲಾಗಬೇಕಾದ ಬಡ್ಡಿ 50,43,502 ರೂಪಾಯಿನಷ್ಟಿದೆ.

 

 

ಮೊಗವೀರ ಸಂಘ, ಸುವರ್ಣ ಕರ್ನಾಟಕ ಸೇವಾ ಸಂಘ (ಕುಂಜತ್ತಬೈಲ್ ಖಾಸಗಿ ಬಡಾವಣೆ), ಇಸಮ್ಮ ಅಹ್ಮದಾಜಿ ಮೆಮೋರಿಯಲ್ ಟ್ರಸ್ಟ್ (ತಲಪಾಡಿ ಅಗ್ರಿ ಗೋಲ್ಡ್ ),  ಇಸ್ಕಾನ್ (ಎಂ ಎಸ್ ಸಿ ಝೆಡ್ ಪುನರುವಸತಿ ಬಡಾವಣೆ) ಮತ್ತು ನಗರ ಕೇಂದ್ರ ಗ್ರಂಥಾಲಯ (ಶ್ರೀನಿವಾಸ ಮಲ್ಯ ಬಡಾವಣೆ) ಇವರಿಂದ ಲೆಕ್ಕ ಪರಿಶೋಧನ ವರ್ಷಕ್ಕೆ ಬಾಕಿ ಇತ್ತು.  ಈ ಪೈಕಿ  ಮೊಗವೀರ ವ್ಯವಸ್ಥಾಪನಾ ಮಂಡಳಿ ಮತ್ತು ಇಸ್ಕಾನ್ ಮುಂಬಯಿ ಅವರು ಬಾಕಿ ಪಾವತಿ ಮಾಡಿದೆ.   ಇಸಮ್ಮ ಅಹ್ಮದಾಜಿ ಮೆಮೋರಿಯಲ್ ಟ್ರಸ್ಟ್49.46 ಸೆಂಟ್ಸ್ ನಿವೇಶನ ಪಡೆದು 5 ಕಂತುಗಳಲ್ಲಿ ಗುತ್ತಿಗೆ ಹಣ ಪಾವತಿಸಬೇಕಾಗಿದೆ.  ಪಾವತಿಸಲು ಬಾಕಿರುವ ಗುತ್ತಿಗೆ ಮತ್ತು ಬಡ್ಡಿಯನ್ನು ಮೊತ್ತವನ್ನು ವಸೂಲು ಮಾಡಿ ಲೆಕ್ಕಪತ್ರ ಸಲ್ಲಿಸಲು ಸೂಚಿಸಿದ್ದಾರೆ.

 

 

ಸುವರ್ಣ  ಕರ್ನಾಟಕ ಸೇವಾ ಸಂಸ್ಥೆಯವರು ಕುಂಜತ್ತಬೈಲು ಗ್ರಾಮದಲ್ಲಿ 9.80 ಸೆಂಟ್ಸ್ ನಾಗರಿಕ ಸೌಲಭ್ಯಗಳ  ನಿವೇಶನವನ್ನು 11,95, 600 ರೂಪಾಯಿ ದರಲ್ಲಿ ಪಡೆದುಕೊಂಡಿತ್ತು.    ಲೆಕ್ಕ ವರ್ಷದ ವರೆಗೆ 2,39, 120 ಪಾವತಿ ಮಾಡಿರುತ್ತಾರೆ. ವರ್ಷಾಂತ್ಯಕ್ಕೆ ಬಾಕಿ ಇರುವ 9,56, 480 ರೂಪಾಯಿ ವಸೂಲು ಮಾಡಲು ಸೂಚಿಸಲಾಗಿದೆ.

ನಗರ ಕೇಂದ್ರ ಗ್ರಂಥಾಲಯವು ಪದವು ಶ್ರೀನಿವಾಸ ಮಲ್ಯ ಬಡಾವಣೆಯಲ್ಲಿ 9.82 ಸೆಂಟ್ಸ್ ನಾಗರಿಕ ಸೌಲಭ್ಯಗಳ  ನಿವೇಶನವನ್ನು 30,78,825 ರೂಪಾಯಿಗೆ ಪಡೆದುಕೊಂಡಿರುವ ನಗರ ಕೇಂದ್ರ ಗ್ರಂಥಾಲಯ 5 ಕಂತುಗಳಲ್ಲಿ ಪಾವತಿಸಬೇಕಾಗಿತ್ತು.   2023-24ರಲ್ಲಿ 24,63, 060 ರೂಪಾಯಿ ಪಾವತಿಸಿದ್ದು, 2024 ಮಾರ್ಚ್ ಅಂತ್ಯಕ್ಕೆ ಗುತ್ತಿಗೆ ಮತ್ತು ಬಡ್ಡಿ ಸೇರಿ 6,15, 765 ರೂಪಾಯಿ ಪಾವತಿಸಲು ಬಾಕಿ ಇರುವುದು ಗೊತ್ತಾಗಿದೆ.

Hot this week

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...
Please Scan to make Your Contribution

Topics

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...

Related Articles

Popular Categories

error: Content is protected !!