ಪೊಲೀಸ್‌ ಇಲಾಖೆಯ ಅಸಮ್ಮತಿ ನಡುವೆಯೂ ಕೋಮು ದ್ವೇಷ ಬಿತ್ತಿದ ಪ್ರಕರಣಗಳ ಹಿಂಪಡೆದ ಬಿಜೆಪಿ ಸರ್ಕಾರ

ಪ್ರಚೋದನಾಕಾರಿ ಭಾಷಣ, ಕೋಮು ದ್ವೇಷ ಹಬ್ಬಿಸಲು ಯತ್ನ, ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಗಲಭೆ, ಪರೇಶ್‌ ಮೇಸ್ತಾ ಪ್ರಕರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಹಿಂಪಡೆದುಕೊಳ್ಳಲು ಪೊಲೀಸ್‌ ಇಲಾಖೆ ಅಸಮ್ಮತಿ  ಸೂಚಿಸಿದ್ದರೂ ಬಿಜೆಪಿ ಸರ್ಕಾರ 43ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂಪಡೆದುಕೊಂಡಿದೆ.

ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಸಲ್ಲಿಸಿದ್ದ ಪ್ರಸ್ತಾವನೆ, ಮನವಿಗಳಿಗೆ ಮನ್ನಣೆ ನೀಡಿರುವ ಗೃಹ ಇಲಾಖೆ, ತನಿಖೆಯಲ್ಲಿರುವ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದುಕೊಂಡಿರುವುದು ವಿವಾದಕ್ಕೀಡಾಗುವ ಸಾಧ್ಯತೆಗಳಿವೆ. 

ಕೆಲ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆಯುವ ಸಂಬಂಧ ‘ಪ್ರಕರಣಗಳಲ್ಲಿ ವ್ಯತ್ಯಾಸವಿದೆ’ ಎಂದು ಪೊಲೀಸ್‌ ಮಹಾನಿರ್ದೇಶಕರು ಅಭಿಪ್ರಾಯ ನೀಡಿದ್ದರೂ ಅಂತಹ ಪ್ರಕರಣಗಳನ್ನೂ ರಾಜ್ಯ ಬಿಜೆಪಿ ಸರ್ಕಾರ ವಿಚಾರಣೆಯಿಂದ ಹಿಂಪಡೆದಿರುವುದು  ದಾಖಲೆಯಿಂದ ತಿಳಿದು ಬಂದಿದೆ. ಈ ಕುರಿತಾದ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. 

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 4 ತಿಂಗಳಲ್ಲಿ ಒಟ್ಟು 43 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದವು. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ತನಿಖೆ ಮುಂದುವರೆಯುತ್ತಿರುವ ಮಧ್ಯೆಯೇ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಸ್ತಾವನೆಗಳ ಪೈಕಿ ಮಂಗಳೂರಿನ ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ ಪ್ರಕರಣವೂ ಸೇರಿದೆ. ಇನ್ನುಳಿದಂತೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರ ವಿರುದ್ಧದ ಪ್ರಕರಣಗಳೂ ಇರುವುದು ದಾಖಲೆಯಿಂದ ಗೊತ್ತಾಗಿದೆ. 

ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವವರ ಪೈಕಿ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 4 ತಿಂಗಳಲ್ಲಿ ಒಟ್ಟು 43 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ. 

ಸಚಿವ ಸಿ ಟಿ ರವಿ, ಪ್ರಭು ಬಿ ಚವ್ಹಾಣ, ಕೆ ಜಿ ಬೋಪಯ್ಯ, ಸುನೀಲ್ ಬಿ ನಾಯ್ಕ, ಸಿ ಎಂ ಉದಾಸಿ, ರೂಪಾಲಿ ನಾಯ್ಕ, ಡಿ ವೇದವ್ಯಾಸ ಕಾಮತ್, ಕಳಕಪ್ಪ ಜಿ ಬಂಡಿ, ಅರಗ ಜ್ಞಾನೇಂದ್ರ, ನೆಹರು ಓಲೆಕಾರ, ಹರೀಶ್ ಪೂಂಜಾ, ಎ ಎಸ್ ಜಯರಾಮ್, ಕರಡಿ ಸಂಗಣ್ಣ, ಪರಣ್ಣ ಈಶ್ವರಪ್ಪ ಮುನವಳ್ಳಿ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಯು ಬಿ ಬಣಕಾರ, ಅರವಿಂದ ಚಂದ್ರಕಾಂತ ಬೆಲ್ಲದ ಸೇರಿದಂತೆ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಗೊತ್ತಾಗಿದೆ. 

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಎಸ್ ಅಂಗಾರ ಅವರು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಸಂಚಾಲಕ ಜಗದೀಶ್ ಕಾರಂತ ವಿರುದ್ಧದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯಬೇಕು ಎಂದು 2019ರ ಅಕ್ಟೋಬರ್ 30ರಂದು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ. 

ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ 2019ರ ನವೆಂಬರ್ 26, ಡಿಸೆಂಬರ್ 6 ಮತ್ತು 12ರಂದು ಪೊಲೀಸ್ ಇಲಾಖೆ ತನ್ನ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಿದೆ ಎಂದು ‘ದಿ ಫೈಲ್‌’ಗೆ ಖಚಿತಪಡಿಸಿರುವ ಒಳಾಡಳಿತ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯದಲ್ಲೇನಿದೆ ಎಂಬ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ.

ಜಗದೀಶ್ ಕಾರಂತ್ ವಿರುದ್ಧ ಪುತ್ತೂರಿನಲ್ಲಿ ಕಳೆದ ವರ್ಷ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಕೋಮು ಗಲಭೆ ನಡೆಸುವುದಾಗಿ ಪ್ರಚೋದನಕಾರಿ ಭಾಷಣ ಮಾಡಿ ಬೆದರಿಕೆ ಹಾಕಿದ್ದ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿರುವುದನ್ನು ಸ್ಮರಿಸಬಹುದು.

ಜಗದೀಶ್ ಕಾರಂತ್ ವಿರುದ್ಧ ವಿವಿಧ ಧರ್ಮದ ಜನರ ನಡುವೆ ದ್ವೇಷ ಬಿತ್ತುವಂತಹ ಭಾಷಣ ಮಾಡಿರುವುದು (ಐಪಿಸಿ ಸೆಕ್ಷನ್ 505(1)ಸಿ ), ಕೋಮು ದ್ವೇಷ ಹಬ್ಬಿಸಲು ಯತ್ನಿಸಿರುವುದು, ಜನಾಂಗ, ಧರ್ಮ, ಜಾತಿ ಆಧಾರದಲ್ಲಿ ಜನರ ನಡುವೆ ದ್ವೇಷ ಬಿತ್ತಲು ಯತ್ನ (ಐಪಿಸಿ ಸೆಕ್ಷನ್ 505(2) ಭಾಷಣ, ಸಂಜ್ಞೆ ಅಥವಾ ದೃಶ್ಯಾವಳಿಗಳ ಮೂಲಕ ಕೋಮು ದ್ವೇಷ ಹಬ್ಬಿಸಲು ಯತ್ನಿಸಿರುವುದು (ಐಪಿಸಿ ಸೆಕ್ಷನ್ 153(ಎ) ಮತ್ತು ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಚಿವ ಸಿ ಟಿ ರವಿ ಅವರು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಬೇಕು ಎಂದು 2019ರ ಸೆ.9ರಂದು ಪತ್ರ ಬರೆದಿದ್ದರು. 

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರು ದತ್ತಪೀಠ ಜಯಂತಿ ಮತ್ತಿತರ  ಕಾರ್ಯಕ್ರಮಗಳ ಕುರಿತು ಸಾರ್ವಜನಿಕರ ಪ್ರತಿಭಟನೆ ಸಂದರ್ಭದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಸಿ ಟಿ ರವಿ, 2019ರ ಸೆ.26ರಂದು ಪತ್ರ ಬರೆದಿದ್ದರು. 

ಬಿಜೆಪಿಯ ಮತ್ತೊಬ್ಬ ಶಾಸಕ ಸುನೀಲ್ ಬಿ ನಾಯ್ಕ ಅವರು ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಹಾಗೂ ಇತರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಬೇಕು ಎಂದು 2019ರ ಆಗಸ್ಟ್ 14ರಂದು ಬರೆದಿದ್ದ ಪತ್ರಕ್ಕೆ 2019ರ ಡಿಸೆಂಬರ್ 3ರಂದು ಡಿಜಿ,ಐಜಿಪಿ ಅವರ ಅಭಿಪ್ರಾಯವು ಸರ್ಕಾರಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.

2017ರ ಡಿಸೆಂಬರ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪರೇಶ್ ಮೇಸ್ತಾ ಎಂಬ ಯುವಕನ ಸಾವಿನ ಪ್ರಕರಣದಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವನ್ನು ಹಿಂಪಡೆಯುವ ಕುರಿತು ಶಾಸಕಿ ರೂಪಾಲಿನಾಯ್ಕ ಅವರು 2019ರ ಜುಲೈ 29ರಂದು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ‘ಪ್ರಕರಣಗಳ ವ್ಯತ್ಯಾಸವಿದೆ,’ ಎಂದು ಡಿಜಿ ಮತ್ತು ಐಜಿಪಿ ಅವರು ಒಳಾಡಳಿತ ಇಲಾಖೆಗೆ ಅಭಿಪ್ರಾಯವನ್ನು ರವಾನಿಸಿದ್ದರು. ಪ್ರಕರಣಗಳಲ್ಲಿ ವ್ಯತ್ಯಾಸವಿದ್ದರೂ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆದಿದೆ.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಶಾಲಾ ಬಾಲಕಿ ಕು.ನಂದಿತ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು 2019ರ ಸೆ.9ರಂದು ಪತ್ರ ಬರೆದಿದ್ದಾರೆ. ಈ ಪ್ರಕರಣ ಸಂಬಂಧ ಡಿಜಿ, ಐಜಿಪಿ ಅವರು ಯಾವುದೇ ಅಭಿಪ್ರಾಯವನ್ನು ಈವರೆಗೂ ನೀಡಿಲ್ಲ ಎಂದು ಗೊತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಗೋರಕ್ಷಕರ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಶಾಸಕ ಹರೀಶ್ ಪೂಂಜಾ ಅವರು 2019ರ ಅಕ್ಟೋಬರ್ 17ರಂದು ಪತ್ರ ಬರೆದಿದ್ದರೆ, ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು 2019ರ ಅಕ್ಟೋಬರ್ 19ರಂದು, ಹಿರೆಕೆರೂರು ಮತ್ತು ಹಂಸಭಾವಿಯಲ್ಲಿ ದಾಖಲಾಗಿದ್ದ ಗಣೇಶ ಹಬ್ಬದ ಸಂದರ್ಭದಲ್ಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಬಿಜೆಪಿಯ ಮಾಜಿ ಶಾಸಕ ಯು ಬಿ ಬಣಕಾರ ಅವರು 2019ರ ಅಕ್ಟೋಬರ್ 17ರಂದು ಪತ್ರ ಬರೆದಿದ್ದಾರೆ.

ಇನ್ನು ಟಿಪ್ಪು ಜಯಂತಿ ಆಚರಣೆ ಸಂಬಂಧ 2015ರಿಂದ 2018ರವರೆಗೆ ದಾಖಲಾದ ಅಪರಾಧ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಶಾಸಕ ಕೆ ಜಿ ಬೋಪಯ್ಯ ಅವರು ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ‘ಪ್ರಕರಣಗಳ ವ್ಯತ್ಯಾಸವಿದೆ,’ ಎಂದು 2019ರ ಅಕ್ಟೋಬರ್ 21ರಂದು ಅಭಿಪ್ರಾಯ ನೀಡಿರುವುದು ದಾಖಲೆಯಿಂದ  ತಿಳಿದು ಬಂದಿದೆ. 

‘ಮಂಗಳೂರಿನಲ್ಲಿ ಕೋಮು ದಳ್ಳುರಿ ಹೆಚ್ಚಾಗಿ ಜನ ಜೀವನ ನಲುಗಿ ಹೋಗಿತ್ತು. ಈ ಗಲಭೆಗಳಿಗೆ ರಾಜ್ಯ ಸರ್ಕಾರದ ಧೋರಣೆಗಳೇ ಕಾರಣ. ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಸರ್ಕಾರ ಅವರ ಮೇಲೆ ಈ ಮೊದಲು ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಇದರಿಂದ ಪಿಎಫ್ಐ, ಎಸ್ ಡಿಪಿಐ ನಂತಹ ಸಂಘಟನೆಗಳು ರಾಜ್ಯಾದ್ಯಂತ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ,’ ಎಂದು ಬಿಜೆಪಿ ಆರೋಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts