ಬೆಂಗಳೂರು; ವಂಚನೆ ಆರೋಪದಡಿ ಬಂಧನಕ್ಕೊಳಗಾಗಿರುವ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಧಾರ್ಮಿಕ ಸೌಹಾರ್ದತೆ ಧಕ್ಕೆ ಮತ್ತು ಕೋಮು ದ್ವೇಷ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು.
2018ರ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗಂಗಾವತಿಯಲ್ಲಿ ಕೋಮು ದ್ವೇಷದ ಭಾಷಣ ಮಾಡಿದ್ದ ಆರೋಪದ ಮೇರೆಗೆ ಚೈತ್ರಾ ಕುಂದಾಪುರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲಿ ಹಿಂತೆಗೆದುಕೊಳ್ಳಲಾಗಿತ್ತು. ಈ ಕುರಿತು ‘ದಿ ಫೈಲ್’ಗೆ ದಾಖಲೆ ಲಭ್ಯವಾಗಿದೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರುಪಾಯಿ ವಂಚಿಸಿದ್ದಾರೆ ಎಂಬ ಆರೋಪದಡಿ ಬಂಧನಕ್ಕೊಳಗಾಗಿರುವ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಕೋಮು ದ್ವೇಷದ ಭಾಷಣ ಮಾಡಿದ ಆರೋಪದ ಮೇರೆಗೆ ದಾಖಲಾಗಿದ್ದ ಪ್ರಕರಣ ಮತ್ತು ಅದನ್ನು ಹಿಂದಿನ ಬಿಜೆಪಿ ಸರ್ಕಾರವು ಹಿಂಪಡೆದುಕೊಂಡಿದ್ದು ಇದೀಗ ಮುನ್ನೆಲೆಗೆ ಬಂದಿದೆ.
ಗಂಗಾವತಿ ನಗರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಬಗ್ಗೆ ಮಾತನಾಡುವಾಗ ಕೋಮು ಗಲಭೆಗೆ ಕಾರಣವಾಗುವ ಹಾಗೂ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತಂದಿದ್ದರು. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅವರೊಬ್ಬರನ್ನೇ ಆರೋಪಿಯನ್ನಾಗಿಸಲಾಗಿತ್ತು.
ಎಫ್‌ಐಆರ್‌ನಲ್ಲೇನಿತ್ತು?
ಇಕ್ಬಾಲ್ ಅನ್ಸಾರಿ ಅವರು ಹಿಂದೂಗಳಿಗೆ ಹೆದರಿದ್ದಾರೆ. ಈ ಸಲದ ಗಂಗಾವತಿ ಮತ ಕ್ಷೇತ್ರದ ಚುನಾವಣೆ ರಾಮ ಮತ್ತು ಅಲ್ಲಾನ ನಡುವೆ ನಡೆಯುತ್ತಿರುವ ಯುದ್ಧ. ಗಂಗಾವತಿಯಲ್ಲಿ ನನ್ನನ್ನು ಸೇರಿಸಿ ಗಂಗಾವತಿಯಲ್ಲಿರುವ ಎಲ್ಲಾ ಹಿಂದೂಗಳನ್ನು ಗಡಿಪಾರು ಮಾಡಿದರೂ ಸಹ ನಾವು ಸೊಪ್ಪು ಹಾಕುವುದಿಲ್ಲ. ಇಕ್ಬಾಲ್ ಅನ್ಸಾರಿ ಅವರಿಗೆ ಈ ಸಲದ ಚುನಾವಣೆಯಲ್ಲಿ ಒಂದೇ ಒಂದು ಹಿಂದೂಗಳ ಓಟು ಸಹ ಬೀಳುವುದಿಲ್ಲ.
ಯಾರ ಮೈಯಲ್ಲಿ ಹಿಂದೂವಿನ ರಕ್ತ ಹರಿಯುತ್ತದೆಯೋ ಅವರಾರು ಇಕ್ಬಾಲ್ ಅನ್ಸಾರಿಗೆ ಓಟು ಹಾಕುವುದಿಲ್ಲ. ಹೀಗೆ ಧರ್ಮ ಧರ್ಮದ ಮಧ್ಯೆ ದ್ವೇಷ ಭಾವನೆಗಳನ್ನು ಬೆಳೆಸುವ ಮತ್ತು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡಿದ್ದರು. ಇದರಿಂದಾಗಿ ಕೋಮು ಗಲಭೆವುಂಟಾಗಿ ಸಮಾಜದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವವಿರುತ್ತದೆ.
ಅಲ್ಲದೇ ಧಾರ್ಮಿಕ ಭಾವನೆ ಕೆರಳಿಸಿ ಧರ್ಮದ ಹೆಸರಿನಲ್ಲಿ ಮತ ಕೇಳಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದು ಸಾಮಾಜಿಕ ಜಾಲತಾಣ ವಾಟ್ಸಾಪ್ ಪರಿಶೀಲನೆಯಿಂದ ಕಂಡು ಬಂದಿರುತ್ತದೆ. ಆದ್ದರಿಂ ಚೈತ್ರಾ ಕುಖದಾಮಪೊಉರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜಿ ಎಸ್ ಹೆಬ್ಬಾಳ್ ಅವರು ದೂರು ನೀಡಿದ್ದರು. ಇದನ್ನಾಧರಿಸಿ ಚೈತ್ರಾ ಕುಂದಾಪುರ ವಿರುದ್ಧ ಜನಪ್ರತಿನಿಧಿ ಕಾಯ್ದೆ3 1950, 1951, 1989 (u/s 125) ಮೊಕದ್ದಮೆ ದಾಖಲಾಗಿತ್ತು.
ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದ ವೇಳೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು 2020ರ ಮೇ5ರಂದು ಅಭಿಯೋಜನೆಯಿಂದ ಹಿಂಪಡೆದಿತ್ತು.
ವಂಚನೆ ಆರೋಪದಡಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಉದ್ಯಮಿಯೊಬ್ಬರಿಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪ ಅವರ ವಿರುದ್ಧ ಕೇಳಿಬಂದಿದೆ.
ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿಯವರು ಚೈತ್ರಾ ಕುಂದಾಪುರ ಹೇಳಿದಂತೆ ಆಗಾಗ ಬೆಂಗಳೂರಿಗೆ ಬರುತ್ತಿದ್ದರು.
ಇಲ್ಲಿ ಚೈತ್ರಾ ಕುಂದಾಪುರ ಕೆಲವರನ್ನು ತೋರಿಸಿ ಇವರಿಗೆ ಹೈಕಮಾಂಡ್ ನಾಯಕರ ಜೊತೆ ನಿಕಟ ಸಂಪರ್ಕವಿದ್ದು, ಇವರು ಹೇಳಿದರೆ ಟಿಕೆಟ್ ಕೊಡಿಸುತ್ತಾರೆ ಎಂದು ಮಾತಿನ ಮೂಲಕ ಮರುಳು ಮಾಡಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿ ಅವರು ಟಿಕೆಟ್ ಸಿಗತ್ತೆ ಅನ್ನುವ ಆಸೆಗೆ ಕೇಳಿದಷ್ಟು ಹಣ ಕೊಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯು ಹೊರಗೆಡವಿತ್ತು.
ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಕುಂದಾಪುರ ಒಟ್ಟು 4 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದರು.
ಹಿಂದೂಪರ ನಾಯಕಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಂಗಡಿಗರು ಉದ್ಯಮಿ ಗೋವಿಂದ್ ಬಾಬು ಪೂಜಾರಿ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೋಟಿಗಟ್ಟಲೆ ವಂಚಿಸಿರುವ ಬಗ್ಗೆ ನನಗೆ ಮೊದಲೇ ತಿಳಿದಿತ್ತು ಎಂದು ಬಲಪಂಥೀಯ ಕಾರ್ಯಕರ್ತ ಮತ್ತು ಕರ್ನಾಟಕದ ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು. ಈ ಬಗ್ಗೆ ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಅವರ ಗಮನಕ್ಕೂ ತಂದಿರುವುದಾಗಿ ಹೇಳಿದ್ದನ್ನು ಸ್ಮರಿಸಬಹುದು.
ಧಾರ್ಮಿಕ ಸೌಹಾರ್ದತೆಗೆ ಧಕ್ಕೆ, ಕೋಮು ಸೌಹಾರ್ದವನ್ನು ಹಾಳುಗೆಡವುದು, ಸಾರ್ವಜನಿಕರಲ್ಲಿ ದ್ವೇಷ ಭಾವನೆ ಮೂಡಿಸಿರುವುದು, ಸುಳ್ಳು, ಪ್ರಚೋದಕ ಮತ್ತು ವಿಡಿಯೋ ತುಣುಕುಗಳನ್ನು ಬದಲಿಸಿ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವುದು ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿರುವಂತಹ ಗುರುತರ ಆರೋಪ ಮತ್ತು ಹಲವು ಗಂಭೀರ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿರುವ ಪ್ರಕರಣಗಳೂ ಸೇರಿದಂತೆ ಕಳೆದ ಒಂದೇ ವರ್ಷದಲ್ಲಿ ಒಟ್ಟು 330 ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರವು ಅಭಿಯೋಜನೆಯಿಂದಲೇ ಹಿಂಪಡೆದಿತ್ತು.
2013-14ರಿಂದ 2017-18ರವರೆಗೆ 600 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿದೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಸೇರಿದ ಯಾರೊಬ್ಬರ ಪ್ರಕರಣವನ್ನು ಹಿಂಪಡೆದಿರುವುದಿಲ್ಲ ಎಂಬುದು ಆರ್‌ಟಿಐ ಅಡಿ ನೀಡಿರುವ ದಾಖಲೆಗಳಿಂದ ಗೊತ್ತಾಗಿದೆ. ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಒಂದೇ ಒಂದು ವರ್ಷದಲ್ಲಿ 330 ಪ್ರಕರಣಗಳನ್ನು ಹಿಂಪಡೆದಿತ್ತು.
ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ,ಹಿಂಸಾಚಾರ; ಒಂದೇ ವರ್ಷದಲ್ಲಿ 330 ಪ್ರಕರಣ ಹಿಂಪಡೆದ ಸರ್ಕಾರ
ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವವರ ಪೈಕಿ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 4 ತಿಂಗಳಲ್ಲಿ ಒಟ್ಟು 43 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿತ್ತು.