Monday | August 10, 2026 |

ಟೆಕ್ಸ್‌ಟೈಲ್ ಪಾರ್ಕ್; ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಖರ್ಗೆ ತವರು ಕ್ಷೇತ್ರ ಸೇರಿ 7 ರಾಜ್ಯಗಳಿಗೆ 68,400 ಕೋಟಿ ಬಿಡುಗಡೆಗೆ ಬಾಕಿ, ಕಲ್ಬುರ್ಗಿಗಿಲ್ಲ ಬಿಡಿಗಾಸು

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ನೆಲ ಗುಜರಾತ್‌  ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಯೋಜನೆಯಡಿಯಲ್ಲಿ ಉದ್ದೇಶಿತ ಟೆಕ್ಸ್‌ಟೈಲ್ಸ್‌ ಪಾರ್ಕ್‌ ನಿರ್ಮಾಣ ಯೋಜನೆಗೆ ಒಟ್ಟು ಹೂಡಿಕೆ ಪೈಕಿ ಇನ್ನು 68,400 ಕೋಟಿ ರುಪಾಯಿಗಳ ಅನುದಾನವನ್ನು ಕೇಂದ್ರವು ಒದಗಿಸಿಲ್ಲ.

ಲೋಕಸಭೆಯಲ್ಲಿ ಈ ಕುರಿತು ಸಂಸದ ಜಿ ಲಕ್ಷ್ಮಿನಾರಾಯಣ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಜವಳಿ ಸಚಿವ ಗಿರಿರಾಜ್‌ ಸಿಂಗ್‌ ಅವರು ಒದಗಿಸಿರುವ ಉತ್ತರದಲ್ಲಿ ಈ ಮಾಹಿತಿಯಿದೆ.

ರಾಜ್ಯದ ಕಲ್ಬುರ್ಗಿ ಜಿಲ್ಲೆಯಲ್ಲಿ ಪಿಎಂ ಮಿತ್ರ ಯೋಜನೆಯಡಿ ಟೆಕ್ಸ್‌ಟೈಲ್ ಪಾರ್ಕ್‌ ಯೋಜನೆಗೆ 1,700 ಕೋಟಿ ರು,  ಗುಜರಾತ್‌ನ ನವಸಾರಿಯಲ್ಲಿ 13,084 ಕೋಟಿ ರು ಹೂಡಿಕೆ ಆಗಬೇಕಿತ್ತು. ಆದರೆ 2026ರ ಜುಲೈ 21ರ ಅಂತ್ಯಕ್ಕೆ ಕಲ್ಬುರ್ಗಿ ಮತ್ತು ನವಸಾರಿಗೆ ಬಿಡಿಗಾಸು ನೀಡಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಲ್ಬುರ್ಗಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಒಟ್ಟು ಹೂಡಿಕೆಯಾದ 1,700 ಕೋಟಿ ರುನಲ್ಲಿ ಬಿಡಿಗಾಸೂ ನೀಡಿಲ್ಲ ಎಂದು ಕೇಂದ್ರವು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

ಜವಳಿ ಉದ್ಯಮದ ಸಂಪೂರ್ಣ ಮೌಲ್ಯ ಸರಪಳಿಗೆ ಸಮಗ್ರ, ಬೃಹತ್ ಪ್ರಮಾಣದ ಹಾಗೂ ಆಧುನಿಕ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ, 2021-22 ರಿಂದ 2027-28 ರ ಅವಧಿಗೆ ₹4,445 ಕೋಟಿ ವೆಚ್ಚದೊಂದಿಗೆ 7 ಪ್ರಧಾನಮಂತ್ರಿ ಮೆಗಾ ಸಮಗ್ರ ಜವಳಿ ಪ್ರದೇಶ ಮತ್ತು ಉಡುಪು ಉದ್ಯಾನಗಳನ್ನು ಗ್ರೀನ್‌ಫೀಲ್ಡ್/ಬ್ರೌನ್‌ಫೀಲ್ಡ್ ಪ್ರದೇಶಗಳಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.

 

 

ಈ ಯೋಜನೆಗಾಗಿ ಸರ್ಕಾರವು ಕರ್ನಾಟಕದ ಕಲ್ಬುರ್ಗಿ ಸೇರಿ 7 ಸ್ಥಳಗಳನ್ನು ಅಂತಿಮಗೊಳಿಸಿತ್ತು. ತಮಿಳುನಾಡಿನ ವಿರುಧುನಗರ ತೆಲಂಗಾಣದ ವರಂಗಲ್ , ಗುಜರಾತ್‌ನ ನವಸಾರಿ, ಮಧ್ಯಪ್ರದೇಶದ ಧಾರ್, ಉತ್ತರ ಪ್ರದೇಶದ ಲಖನೌ, ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿಎಂ ಮಿತ್ರ ಯೋಜನೆಯಡಿ ಟೆಕ್ಸ್‌ ಟೈಲ್‌ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಗುರುತಿಸಿತ್ತು.

ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಇಂತಹ ಮೆಗಾ ಜವಳಿ ಉದ್ಯಾನಗಳನ್ನು ಪರಿಚಯಿಸಿತ್ತು. ಪ್ರತಿಯೊಂದು ಉದ್ಯಾನವು ಸುಮಾರು 1,000 ಎಕರೆ ವಿವಾದರಹಿತ ಭೂಮಿಯಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

ಇದರ ಪ್ರಕಾರ ತಮಿಳುನಾಡಿನ ವಿರುಧುನಗರದಲ್ಲಿ 6,600 ಕೋಟಿ ರು ಹೂಡಿಕೆ ಮಾಡಬೇಕಿತ್ತು. 2026ರ ಜುಲೈ 21ರ ಅಂತ್ಯಕ್ಕೆ ಕೇವಲ 50 ಕೋಟಿ ಹೂಡಿಕೆ ಮಾಡಿದೆ. ತೆಲಂಗಾಣದ ವರಂಗಲ್ ನಲ್ಲಿ 8,800 ಕೋಟಿ ರು ಹೂಡಿಕೆ ಪೈಕಿ 30 ಕೋಟಿ, ಕರ್ನಾಟಕದ ಕಲ್ಬುರ್ಗಿಯಲ್ಲಿ 1,700 ಕೋಟಿ ರು ಹೂಡಿಕೆ ಪೈಕಿ ಬಿಡಿಗಾಸನ್ನು ನೀಡಿಲ್ಲ. ಗುಜರಾತ್‌ನ ನವಸಾರಿಯಲ್ಲಿ 13,084 ಕೋಟಿ ಹೂಡಿಕೆ ಪೈಕಿ ನಯಾಪೈಸೆಯನ್ನೂ ನೀಡಿಲ್ಲ. ಮಹಾರಾಷ್ಟ್ರದ ಅಮರಾವತಿಯಲ್ಲಿ 12,925 ಕೋಟಿ ರು ಹೂಡಿಕೆ ಪೈಕಿ 60 ಕೋಟಿ ರು ಮಾತ್ರ ಒದಗಿಸಿದೆ.

 

 

ಮಧ್ಯಪ್ರದೇಶದ ಧಾರ್‍‌ನಲ್ಲಿ 20,126 ಕೋಟಿ ರು ಪೈಕಿ ಕೇವಲ 50 ಕೋಟಿ ರು ಮಾತ್ರ ಒದಗಿಸಿದೆ. ಉತ್ತರ ಪ್ರದೇಶದ ಲಖನೌದಲ್ಲಿ 5,355 ಕೋಟಿ ರು ಹೂಡಿಕೆ ಪೈಕಿ ಒಂದೇ ಒಂದು ಪೈಸೆಯನ್ನೂ ನೀಡಿಲ್ಲ ಎಂಬುದು ಉತ್ತರದಿಂದ ತಿಳಿದು ಬಂದಿದೆ.

ಇದಲ್ಲದೆ, ಹೂಡಿಕೆಗಳನ್ನು ಹೆಚ್ಚಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಜವಳಿ ಕ್ಷೇತ್ರದ ರಫ್ತನ್ನು ಉತ್ತೇಜಿಸಲು ಯೋಜಿಸಿತ್ತು. ದೇಶದಾದ್ಯಂತ ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿದ ಜವಳಿ ಉದ್ಯಾನಗಳನ್ನು ಸ್ಥಾಪಿಸಲು ಸಮಗ್ರ ಜವಳಿ ಉದ್ಯಾನ ಯೋಜನೆ (Scheme for Integrated Textile Parks – SITP) ಯನ್ನು ಸಚಿವಾಲಯ ಜಾರಿಗೊಳಿಸಿತ್ತು.

 

 

 

 

ಈ ಯೋಜನೆಯು 20-221ರ ಮಾರ್ಚ್‌ 31ರವರೆಗೆ ಜಾರಿಯಲ್ಲಿತ್ತು. ನಂತರ, ಪ್ರಗತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಇದನ್ನು ಜವಳಿ ಕ್ಲಸ್ಟರ್ ಅಭಿವೃದ್ಧಿ ಯೋಜನೆ (Textile Cluster Development Scheme – TCDS) ಅಡಿಯಲ್ಲಿ ವಿಲೀನಗೊಳಿಸಲಾಗಿದೆ. ಈ ಯೋಜನೆಯಡಿ ಒಟ್ಟು 50 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ 33 ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದರಲ್ಲಿ ಕರ್ನಾಟಕದ ದೊಡ್ಡಬಳ್ಳಾಪುರವೂ ಒಂದಾಗಿದೆ.

 

 

ಜವಳಿ ಕ್ಷೇತ್ರವು ಹೆಚ್ಚು ಕಾರ್ಮಿಕರನ್ನು ಅವಲಂಬಿಸಿರುವ ಕ್ಷೇತ್ರವಾಗಿರುವುದರಿಂದ, 2026–27ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ಸಮಗ್ರ ಕಾರ್ಯಕ್ರಮವೊಂದನ್ನು ಘೋಷಿಸಿದೆ. ಇದರಲ್ಲಿ ರಾಷ್ಟ್ರೀಯ ನೈಸರ್ಗಿಕ ನಾರು (National Fibre Scheme) ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ (Textile Expansion and Employment Scheme), ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮ ಟೆಕ್ಸ್–ಇಕೊ (Tex-Eco) ಉಪಕ್ರಮ , ಸಮರ್ಥ್ 2.0 (Samarth 2.0) ಸೇರಿವೆ.

ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ಜವಳಿ ಕ್ಲಸ್ಟರ್‌ಗಳನ್ನು ಆಧುನೀಕರಿಸುವ ಉದ್ದೇಶದಿಂದ ಯಂತ್ರೋಪಕರಣಗಳಿಗೆ ಬಂಡವಾಳ ನೆರವು, ತಂತ್ರಜ್ಞಾನ ಉನ್ನತೀಕರಣ, ಸಾಮಾನ್ಯ ಪರೀಕ್ಷಾ (Testing) ಮತ್ತು ಪ್ರಮಾಣೀಕರಣ (Certification) ಕೇಂದ್ರಗಳಿಗೆ ಸಹಾಯ ಒದಗಿಸಲು ಯೋಜಿಸಿದೆ ಎಂದು ಕೇಂದ್ರ ಸಚಿವರು ವಿವರ ಒದಗಿಸಿರುವುದು ತಿಳಿದು ಬಂದಿದೆ.
ಈ ಯೋಜನೆಯ ಮಾರ್ಗಸೂಚಿಗಳು (Guidelines) ಪ್ರಕಟವಾದ ನಂತರ ಹೊಸ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮೋದಿಸಲಾಗುವುದು.

ಇದಲ್ಲದೆ, ಭಾರತ ಸರ್ಕಾರವು ಭಾರತ ಔದ್ಯೋಗಿಕ ವಿಕಾಸ ಯೋಜನೆ (BHAVYA – Bharat Audyogik Vikas Yojana) ಯನ್ನು ಅನುಮೋದಿಸಿದೆ. ಇದು ₹33,660 ಕೋಟಿ ವೆಚ್ಚದ ಕೇಂದ್ರ ವಲಯ ಯೋಜನೆಯಾಗಿದೆ. 2026–27 ರಿಂದ 2031–32 ರವರೆಗೆ 6 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 100 ‘ಪ್ಲಗ್ ಅಂಡ್ ಪ್ಲೇ’ ಕೈಗಾರಿಕಾ ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
ಈ ಯೋಜನೆಯ ಉದ್ದೇಶವು ಹೂಡಿಕೆಗೆ ಸಿದ್ಧವಾಗಿರುವ (Investment-ready), ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ. ಹೂಡಿಕೆದಾರರು ಸುಲಭವಾಗಿ ಹೂಡಿಕೆ ಮಾಡಲು ಅನುಕೂಲ ಕಲ್ಪಿಸುವುದು ಹಾಗೂ ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಎಂದು ವಿವರಿಸಿದ್ದಾರೆ.

ಕಲ್ಬುರ್ಗಿಯ ಸ್ಥಿತಿಗತಿ ಏನಿದೆ?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈಚೆಗಷ್ಟೇ ಹೇಳಿಕೆ ನೀಡಿದ್ದರ. ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಪಿಎಂ ಮಿತ್ರ (PM MITRA) ಮೆಗಾ ಜವಳಿ ಪಾರ್ಕ್ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕೈಗಾರಿಕಾ ಯೋಜನೆಯಾಗಿದೆ. ಈ ಪಾರ್ಕ್‌ನ ಮೊದಲ ಹಂತದ ಮೂಲಸೌಕರ್ಯ ನೀಲನಕ್ಷೆಯನ್ನು ಸರ್ಕಾರವು ಈಗಾಗಲೇ ಅಂತಿಮಗೊಳಿಸಿದೆ.

ಕಲಬುರಗಿಯ ನಂದಿಸಿನ್ನೂರು, ಕಿರಣಗಿ ಮತ್ತು ಫಿರೋಜಾಬಾದ್ ಗ್ರಾಮಗಳ ಬಳಿ 1,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತಕ್ಕೆ 320 ಕೋಟಿ ರೂ. ಸೇರಿದಂತೆ, ಯೋಜನೆಯ ಒಟ್ಟು ಮೊತ್ತವು ಸುಮಾರು 1,700 ಕೋಟಿ ರೂ.ಗಳಾಗಿವೆ.ಈ ಟೆಕ್ಸ್‌ ಟೈಲ್ ಪಾರ್ಕ್‌ ಅತ್ಯಾಧುನಿಕ ರಸ್ತೆಗಳು, ವಿದ್ಯುತ್, ನೀರು ಸರಬರಾಜು ಮತ್ತು ‘ಪ್ಲಗ್ ಅಂಡ್ ಪ್ಲೇ’ (Plug and Play) ಮಾದರಿಯ ಕೈಗಾರಿಕಾ ಮೂಲಸೌಕರ್ಯಗಳನ್ನು ಒಳಗೊಂಡಿದೆ.

ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ಧನಸಹಾಯ ಲಭ್ಯವಿದೆ. ಯೋಜನೆಯಿಂದಾಗಿ ಸಾವಿರಾರು ಸ್ಥಳೀಯ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗಿತ್ತು.

Hot this week

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ...
Please Scan to make Your Contribution

Topics

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

Related Articles

Popular Categories

error: Content is protected !!