Monday | August 10, 2026 |

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಲೋಪ ದೋಷಗಳಿದ್ದವು. ನಿಯಮಗಳ ಪ್ರಕಾರ 30 ದಿನಗಳ ಕಾಲಾವಕಾಶಕ್ಕೆ ಬದಲಿಗೆ 22 ದಿನಗಳ ಮಾತ್ರ ಅವಕಾಶ ನೀಡಿತ್ತು. ಅಲ್ಪಾವಧಿ ಟೆಂಡರ್ ಕರೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡುಬಂದಿರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ಬಯಲು ಮಾಡಿದೆ.

ಅಲ್ಲದೇ ಸ್ಟಕ್ಚರಲ್ ವಿನ್ಯಾಸ ಮತ್ತು ಮಂಜೂರಾದ ಅಂದಾಜು ಪಟ್ಟಿಯಲ್ಲಿನ ಲೋಪದೋಷಗಳು ಮತ್ತು ಪರಿಗಣಿಸದಿರುವ ಅಂಶಗಳ ಪ್ರಕಾರ ಪರಿಷ್ಕೃತ ಅಂದಾಜಿನಂತೆ 130 ಕೋಟಿ ರು ಹೆಚ್ಚುವರಿಯಾಗಿರುವುದನ್ನೂ ಸಹ ಪತ್ತೆ ಮಾಡಿದೆ.

₹454.94 ಕೋಟಿ ವೆಚ್ಚದ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ವಿಳಂಬ ಹಾಗೂ ಕಳಪೆ ಕಾಮಗಾರಿ ಕುರಿತು ದೂರುಗಳು ಬಂದಿದ್ದವು. ಇದರ ಪರಿಶೀಲನೆಗೆ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯು ಸ್ಥಳ ಪರಿಶೀಲನೆಯನ್ನು ಸಹ ನಡೆಸಿತ್ತು. ಇದರ ಬೆನ್ನಲ್ಲೇ  ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡದ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಮುನ್ನೆಲೆಗೆ ಬಂದಿದೆ. ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುವ ಬಗ್ಗೆ  ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ನೀಡಿದ್ದ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿಗೆ ಎಂಸಿಐ, ಎನ್‌ಎಂಸಿ ನಿಯಮಗಳ ಪ್ರಕಾರ ಅವಶ್ಯವಿರುವ ಎಲ್ಲಾ ಕಾಂಪೋನೆಂಟ್‌ಗಳನ್ನು ಅಳವಡಿಸಿಕೊಂಡು ತಯಾರಿಸಿದೆ. ಕಾಮಗಾರಿಯನ್ನು ನಿರ್ವಹಿಸುವ ಸಮಯದಲ್ಲಿ ಎಂಸಿಐ ಮತ್ತು ಎನ್‌ಎಂಸಿ ಮಾನದಂಡಗಳ ಪ್ರಕಾರ ಹಾಗೂ ಉಪಯೋಗಿ ಇಲಾಖೆಯ ಕೋರಿಕೆಯಂತೆ ಹೆಚ್ಚುವರಿಯಾಗಿ ಒಟ್ಟಾರೆ 6,400 ಚ ಮೀ ಕಟ್ಟಡ ನಿರ್ಮಾಣವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್ ಅವರು ತನಿಖಾ ಸಮಿತಿಗೆ ಒದಗಿಸಿದ್ದ ದಾಖಲೆಗಳ ಪ್ರಕಾರ ಪರಿಷ್ಕೃತ ಅಂದಾಜು ಪಟ್ಟಿಯು ಸರ್ಕಾರದ ಅನುಮೋದನೆಗೆ ಸಲ್ಲಿಕೆಯಾಗಿತ್ತು.  ಆದರೆ ಈವರೆಗೆ ಅನುಮೋದನೆ ದೊರೆಯದ ಕಾರಣ ಗುತ್ತಿಗೆದಾರರಿಗೆ ಇದುವರೆಗೂ ಯಾವುದೆ ಹೆಚ್ಚುವರಿ ಕಾರ್ಯಾದೇಶ ನೀಡಿರುವುದಿಲ್ಲ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

 

 

ಕೊಠಡಿಗಳ ವಿಸ್ತೀರ್ಣಗಳು ಅವಶ್ಯಕತೆಗಿಂತಲೂ ಅಧಿಕ- 18.02 ಕೋಟಿಯಷ್ಟು ಹೆಚ್ಚುವರಿ

ಮುಖ್ಯ ವಾಸ್ತುಶಿಲ್ಪಿ ಅವರ ವರದಿ ಪ್ರಕಾರ ಈ ಕಾಮಗಾರಿಯಲ್ಲಿ ಒಳಗೊಂಡಿರುವ ಎಲ್ಲಾ ಸೌಲಭ್ಯಗಳನ್ನು ಎಂಸಿಐ ಮತ್ತು ಎನ್‌ಎಂಸಿ ನಿಯಮಗಳಿಗೆ ಅನುಸಾರವಾಗಿದೆ. ಆದರೆ ಕೆಲವೊಂದು ಕೊಠಡಿಗಳ ವಿಸ್ತೀರ್ಣಗಳು ಅವಶ್ಯಕತೆಗಿಂತಲೂ ಅಧಿಕವಾಗಿದೆ. ಹೆಚ್ಚುವರಿಯಾಗಿ ಅಳವಡಿಸಿಕೊಂಡಿರುವ ಅಥವಾ ಕೈಗೊಂಡಿರುವ ವಿಸ್ತೀರ್ಣವು 6,400 ಚ ಮೀಟರ್ ಆಗಿದೆ. ಇದರಿಂದಾಗಿ 18.02 ಕೋಟಿಯಷ್ಟು ಹೆಚ್ಚುವರಿಯಾಗಿದೆ ಎಂದು ವಿವರಿಸಿದೆ.

ಡಿಪಿಆರ್‍‌ನಲ್ಲೇ ಲೋಪದೋಷ

ತನಿಖಾ ತಂಡವು  ಮಂಜೂರಾದ ಅಂದಾಜು ಪಟ್ಟಿಯನ್ನು ಪರಿಷ್ಕೃತ ಅಂದಾಜು ಪಟ್ಟಿಗೆ ಹೋಲಿಸಿದೆ. ಇದರ ಪ್ರಕಾರ ಮಂಜೂರಾದ ಅಂದಾಜುಪಟ್ಟಿಗೆ ಹೋಲಿಸಲಾಗಿದೆ ಈ ಕಾಮಗಾರಿಯಲ್ಲಿ ಹೆಚ್ಚುವರಿ ಪರಿಮಾಣ, ಅಂಶಗಳನ್ನು ಕೈಗೊಳ್ಳಲಾಗಿದೆ. ಕೆಲವು ಹೆಚ್ಚುವರಿಯಾಗಿ ಅಳವಡಿಸಿಕೊಂಡಿರುವ ಕೈಗೊಂಡಿರುವ ಕಾಂಪೋನೆಂಟ್‌ಗಳಿಂದಾಗಿ ಹಾಗೂ ಅನುಮೋದಿಸಿಕೊಂಡಿರುವ ಸ್ಟ್ರಕ್ಚರಲ್ ವಿನ್ಯಾಸ ಮತ್ತು ಡಿಪಿಆರ್ ತಯಾರಿಸುವಾಗ ಲೋಪದೋಷಗಳಿಂದಾಗಿ ಹೆಚ್ಚುವರಿ ಉಂಟಾಗಿದೆ. ಇವುಗಳಿಗೆ ಒದಗಿಸಲಾದ ದಾಖಲೆಗಳ ಪ್ರಕಾರ ಮಾನದಂಡಗಳನ್ನು ಅನುಸರಿಸಿ ಅನುಮೋದನೆಯನ್ನು ಪಡೆದಿಲ್ಲ.

 

 

ಆದರೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳಲು ಪರಿಷ್ಕೃತ ಅಂದಾಜು/ಹೆಚ್ಚುವರಿ ಪರಿಮಾಣ, ಅಂಶಗಳನ್ನು ತಯಾರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯಲ್ಲಿ ಮಂಡಿಸಲಾಗಿತ್ತು. ಈ ಸಮಿತಿಯ ಅನುಮೋದನೆಯನ್ನು ಪಡೆದುಕೊಂಡಿದೆ.

130 ಕೋಟಿ ರು ಹೆಚ್ಚುವರಿ

ಈ ಕಾಮಗಾರಿಯಲ್ಲಿ ಈಗಾಗಲೇ ಕೈಗೊಂಡಿರುವ ಮತ್ತು ಕೈಗೊಳ್ಳಲಾಗುತ್ತಿರುವ ಹೆಚ್ಚುವರಿ ಕಾಂಪೋನೆಂಟ್‌ಗಳು ಸೇರಿದಂತೆ ಕಾಮಗಾರಿಯ ಸ್ಟಕ್ಚರಲ್ ವಿನ್ಯಾಸ ಮತ್ತು ಮಂಜೂರಾದ ಅಂದಾಜು ಪಟ್ಟಿಯಲ್ಲಿನ ಲೋಪದೋಷಗಳು ಮತ್ತು ಪರಿಗಣಿಸದಿರುವ ಅಂಶಗಳ ಪ್ರಕಾರ ಪರಿಷ್ಕೃತ ಅಂದಾಜಿನಂತೆ 130 ಕೋಟಿ ರು ಹೆಚ್ಚುವರಿಯಾಗಿದೆ. ಈವರೆಗೆ ಕೈಗೊಳ್ಳಲಾಗಿರುವ ಕಾಂಪೋನೆಂಟ್‌ಗಳು ಹೆಚ್ಚುವರಿ ಪರಿಮಾಣಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದಿರುವ ಕುರಿತು ಸಲ್ಲಿಸಿರುವ ದಾಖಲೆಗಳಲ್ಲಿ ಕಂಡುಬಂದಿರುವುದಿಲ್ಲ. ಕಾಮಗಾರಿಯು ಪ್ರಗತಿಯಲ್ಲಿದೆ.

ಈ ಕಾಮಗಾರಿಯ ಟೆಂಡರ್‍‌ನಲ್ಲಿ ಒಟ್ಟು 4 ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಎನ್‌ಸಿಸಿ, ಕೆಬಿಆರ್‍‌ ಇನ್ಫ್ರಾಟೆಕ್, ನಿಲೇಶ್‌ ಟೈಕ್ (ಹರ್ಷ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ.,) ವಿ ಸೇಖರ್ ಬಾಲಾಜಿ ಕೃಪಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಭಾಗವಹಿಸಿದ್ದವು. ಈ ಪೈಕಿ ನಿಲೇಶ್‌ ಟೈಕ್‌ ತಿರಸ್ಕೃತಗೊಂಡಿತ್ತು. ಬಾಲಾಜಿ ಕೃಪಾ ಪ್ರಾಜೆಕ್ಟ್ಸ್‌ ಲಿಮಿಟೆಡ್ ಕಡಿಮೆ ದರ ನಮೂದಿಸಿ ಅಯ್ಕೆಯಾಗಿದೆ. 2020ರ ಅಕ್ಟೋಬರ್‍‌ 23ರಂದೇ ಕಾರ್ಯಾದೇಶ ನೀಡಲಾಗಿದೆ.

 

 

ತನಿಖಾ ಸಮಿತಿಯ ಅಭಿಪ್ರಾಯವೇನು?

ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಎಂಸಿಐ ನಿಯಮಗಳಿಗೆ ಅನುಸಾರವಾಗಿ ವಿನ್ಯಾಸ ರೂಪಿಸಿಕೊಳ್ಳಬೇಕಿದೆ. ಹೀಗಾಗಿ ಮುಖ್ಯ ವಾಸ್ತು ಶಿಲ್ಪಿ ಅವರ ತನಿಖಾ ವರದಿಯಂತೆ 6,400 ಚ ಮೀ ವಿಸ್ತೀರ್ಣ ಅಧಿಕವಾಗಿದೆ. ಮಂಜೂರಾದ ಅಂದಾಜಿನಲ್ಲಿ ಕೆಲವು ಕಾಂಪೋನೆಂಟ್‌ಗಳು ಹಾಗೂ ಪರಿಮಾಣಗಳು ಬಿಟ್ಟು ಹೋಗಿವೆ. ಅಲ್ಲದೇ ಪರಿಮಾಣ ಲೆಕ್ಕ ಹಾಕುವಾಗ ತಪ್ಪಾಗಿದೆ. ಇದರಿಂದಾಗಿ 23.98 ಕೋಟಿ ಹೆಚ್ಚುವರಿಯಾಗಿದೆ. ಅದರೆ ಈ ಕಾಮಗಾರಿಯಲ್ಲಿ  ಅನುಮೋದಿತ ವಿನ್ಯಾಸ ಮತ್ತು ಸ್ಥಳಕ್ಕೆ ತಕ್ಕಂತೆ ಕಾಮಗಾರಿ ಮುಂದುವರೆಸಿದೆ. ಯಾವುದೇ ಅನಗತ್ಯ ಕಾಂಪೋನೆಂಟ್‌ಗಳನ್ನು ನಿರ್ವಹಿಸಿರುವುದು ಕಂಡುಬಂದಿಲ್ಲ ಎಂದು ವಿವರಿಸಿದೆ.

27.52 ಕೋಟಿಗಳಷ್ಟು ಟೆಂಡರ್ ಪ್ರೀಮಿಯಂ ಮತ್ತು 55.08 ಕೋಟಿಗಳಷ್ಟು ಪ್ರೈಸ್‌ ಅಡ್ಜಸ್ಟ್‌ಮೆಂಟ್‌ ಮೊತ್ತ ಉಂಟಾಗಿದೆ. ಹೆಚ್ಚುವರಿ ಜಿಎಸ್‌ಟಿ ಶೇ. 6ರಷ್ಟು ಅಂಧರೇ 20.46 ಕೋಟಿ ಮತ್ತು ಇತರೆ ಇಲಾಖೆಗಳಿಗೆ ನೀಡುವ ಠೇವಣಿ ಮೊತ್ತ 2.94 ಕೋಟಿ ಸೇರಿ ಒಟ್ಟಾರೆಯಾಗಿ 106 ಕೋಟಿಗಳಷ್ಟು ಹೆಚ್ಚುವರಿಯಾಗುತ್ತದೆ ಎಂದು ತನಿಖಾ ತಂಡವು ಅಭಿಪ್ರಾಯಿಸಿದೆ.

ಅಲ್ಲದೇ ಕಾಮಗಾರಿಗೆ ನಿಯಮಾವಳಿಗಳ ಪ್ರಕಾರ 30 ದಿನಗಳ ಕಾಲಾವಕಾಶ ನೀಡಬೇಕಾಗಿತ್ತು. ಆದರೆ 22 ದಿನಗಳ ಕಾಲಾವಕಾಶ ನೀಡಲಾಗಿದೆ. ಅಲ್ಪಾವಧಿ ಟೆಂಡರ್‍‌ ಕರೆಯಲು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡುಬಂದಿರುವುದಿಲ್ಲ ಎಂದು ವರದಿಯು ಅಭಿಪ್ರಾಯಿಸಿದೆ

 

 

 

ಈ ಕಾಮಗಾರಿ ನಡೆದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದ ಇಂಜಿನಿಯರ್‍‌ ಮತ್ತು ಲೆಕ್ಕಾಧಿಕಾರಿಗಳ ಪಟ್ಟಿಯನ್ನು ತನಿಖಾ ಸಮಿತಿಯು ಒದಗಿಸಿದೆ.

 

ಶ್ರೀನಾಥ್‌ ಎಂ ಬಿ., ಶ್ರೀನಿವಾಸ್‌ ಗೌಡ ಹೆಚ್,  ವಿಕಾಸ್‌ ಜಿ ಎಚ್‌, ಕರೀಗೌಡ, ರಮೇಶ್‌, ಬಿ ಗಿರೀಶ, ಎಚ್‌ ಎಂ ಶಶಿಧರ್, ಜೀವನ್ ಪಟೇಲ್‌ ಎನ್‌, ಪುಟ್ಟಸ್ವಾಮಿ ಎಸ್‌, ಮೋಹನ್ ಕುಮಾರ್ ಡಿ ಮತ್ತು ಮುನೀರ್ ಪಾಶ ಅವರು ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ತನಿಖಾ ಸಮಿತಿಯು ಹೆಸರಿಸಿರುವುದು ತಿಳಿದು ಬಂದಿದೆ.

 

 

 

 

ರಾಜ್ಯದ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ, ಭ್ರಷ್ಟಾಚಾರ ಮತ್ತು ಅನಗತ್ಯ ವೆಚ್ಚವಾಗಿದೆ ಎಂದು ಲೋಕೋಪಯೋಗಿ ಇಲಾಖೆಯು ನೀಡಿರುವ ತಾಂತ್ರಿಕ ವರದಿ ಆಧರಿಸಿ ದೋಷಾರೋಪಣೆ ಪಟ್ಟಿ ತಯಾರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಈಗಾಗಲೇ ಆದೇಶಿಸಿದೆ.

ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತರ ವಿರುದ್ಧ ದೋಷಾರೋಪಣೆ ಪಟಟಿ ಸಲ್ಲಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದೆ. ಆಡಳಿತಾತ್ಕ ಅನುಮೋದನೆ ಪಡೆಯದೇ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅನಗತ್ಯ ವೆಚ್ಚ ಮಾಡಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅನುಬಂಧ -1ರಿಂದ 4 ನ್ನು ಒಳಗೊಂಡ ದೋಷಾರೋಪಣೆ ಪಟ್ಟಿ ತಯಾರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ ನಂಜುಂಡಯ್ಯ ಅವರನ್ನು 2026ರ ಮಾರ್ಚ್‌ನಲ್ಲಿಯೇ ಆದೇಶ ಹೊರಡಿಸಿದೆ.

 

 

 

 

ಟೆಂಡರ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿ ವರ್ಗವು ನಿಯಮಗಳ ಉಲ್ಲಂಘನೆ ಮಾಡಿರುವುದು ತನಿಖಾ ವರದಿಯಿಂದ ನಿಖರವಾಗಿ ಕಂಡು ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದಲ್ಲಿ ವಿವರಿಸಿತ್ತು.

 

 

ಲೋಕೋಪಯೋಗಿ ಇಲಾಖೆ ನೀಡಿರುವ ತಾಂತ್ರಿಕ ವರದಿ ಆಧಾರದ ಮೇಲೆ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡಗ ಕಾಮಗಾರಿಗಳಿಗೆ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಖಚಿತಪಟ್ಟಿದೆ. ಹಾಗೆಯೇ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ ಇರುವುದರ ಹಿಂದೆ ದುರದ್ದೇಶವಿದೆ. ಈ ಮೂಲಕ ಅನಗತ್ಯವಾಗಿ ಹೆಚ್ಚುವರಿ ಕಾಮಗಾರಿ ಮತ್ತು ಅನಗತ್ಯವಾಗಿ ವೆಚ್ಚ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (ಕೇಂದ್ರ ಪುರಸ್ಕೃತ ಯೋಜನೆಯಡಿ) 3ನೇ ಹಂತದಲ್ಲಿ ಪ್ರತಿ ವೈದ್ಯಕೀಯ ಕಾಲೇಜಿಗೆ 325.00 ಕೋಟಿಗಳ ವೆಚ್ಚದಲ್ಲಿ ದೇಶದಾದ್ಯಂತ 75 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕೇಂದ್ರ ಪುರಸ್ಕೃತ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ಕರ್ನಾಟಕ ಸರ್ಕಾರವು ತಾಂತ್ರಿಕ ಮೌಲ್ಯಮಾಪನ ಸಮಿತಿಗೆ 2019ರ ಸೆ.8ರಂದು ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿತ್ತು.

ನಂತರ ಯೋಜನಾ ವರದಿಯನ್ನು ಪರಿಶೀಲಿಸಿ, ಚಿಕ್ಕಮಗಳೂರು ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಿ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು 60:40 ಅನುಪಾತದಲ್ಲಿ ವೆಚ್ಚ ಭರಿಸಿ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ 2019ರ ಅಕ್ಟೋಬರ್ 23ರಂದು ಕೇಂದ್ರ ಸಚಿವಾಲಯವು ಅನುಮೋದನೆ ನೀಡಿತ್ತು.

ಭಾರತ ಸರ್ಕಾರವು ತನ್ನ ಪಾಲಿನ 195 ಕೋಟಿಗಳಲ್ಲಿ 2019ರ ನವೆಂಬರ್‍‌ 15ರಂದು 23 ಕೋಟಿ, 2020ರ ಜೂನ್‌ 10ರಂದು 27 ಕೋಟಿ ರು ಅನುದಾನವನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಕೊರತೆಯನ್ನು ನೀಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಗಳ ಜೊತೆಗೆ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕುರಿತ ಕೇಂದ್ರ ಪುಸ್ಕೃತ ಯೋಜನೆಯನ್ನು ಅನುಷ್ಟಾನಗೊಳಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು.

ಈ ಯೋಜನೆಯ ಮೊದಲನೇ ಹಂತದಲ್ಲಿ 2014 ರಲ್ಲಿ 58 ಹೊಸ ವೈದ್ಯಕೀಯ ಕಾಲೇಜುಗಳನ್ನು ಒಟ್ಟು ರೂ. 10,962/- ಕೋಟಿಗಳ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಒಟ್ಟು 7541 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.
ಪ್ರತಿ ರಾಜ್ಯದಲ್ಲಿ ಆರೋಗ್ಯ ಸೇವೆಗಳ ಕನಿಷ್ಠ ಸೌಲಭ್ಯ ಹೊಂದಿರುವ ಒಂದು ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯ ಎರಡನೇ ಹಂತದಲ್ಲಿ ಪ್ರತಿ ಮೆಡಿಕಲ್ ಕಾಲೇಜಿಗೆ 250 ಕೋಟಿಗಳಂತೆ ಒಟ್ಟು 6000 ಕೋಟಿಗಳ ವೆಚ್ಚದಲ್ಲಿ 24 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನುಮೋದನೆ ನೀಡಿರುವುದನ್ನು ಸ್ಮರಿಸಬಹುದು.

Hot this week

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ...
Please Scan to make Your Contribution

Topics

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

Related Articles

Popular Categories

error: Content is protected !!