Thursday | July 16, 2026 |

ಅಧಿವೇಶನ ಬಿಸಿ; ಹೆಚ್‌ಡಿಕೆ ಅವಧಿಯಿಂದಲೂ ಅಧಿಕಾರಿ, ನೌಕರರ ವರ್ಗಾವಣೆ ಸಂಖ್ಯೆ ಸಂಗ್ರಹಕ್ಕೆ ಸೂಚನೆ

ಬೆಂಗಳೂರು; ಜೂನ್‌ 2018ರಿಂದ 2023ರ ಅಕ್ಟೋಬರ್‍‌ವರೆಗಿನ  ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ಅಧಿಕಾರಿ, ನೌಕರರ ವರ್ಗಾವಣೆ ಬಗೆಗಿನ ಅಂಕಿ ಅಂಶಗಳನ್ನು ಸರ್ಕಾರವು ಸದ್ದಿಲ್ಲದೇ ಕಲೆ ಹಾಕುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಇದೇ ಡಿಸೆಂಬರ್‍‌  4 ರಿಂದ 15 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ  ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿರುವ ಹೊತ್ತಿನಲ್ಲೇ ಅಧಿಕಾರಿ, ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳ ಅಂಕಿ ಅಂಶಗಳನ್ನು ಕಲೆ ಹಾಕುವ ಮೂಲಕ   ಪ್ರತಿಪಕ್ಷಗಳನ್ನು ಎದುರಿಸಲು ಕಾಂಗ್ರೆಸ್‌ ಸರ್ಕಾರವು  ಸಜ್ಜಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಧಿಕಾರಿ, ನೌಕರರ ವರ್ಗಾವಣೆಗಳಲ್ಲಿ ಲಂಚ, ಕಮಿಷನ್‌ ಪಡೆಯಲಾಗಿದೆ ಎಂಬ ಆರೋಪ ಕುರಿತು ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿಯೇ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಎಚ್‌ ಡಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ವಾಕ್ಸಮರವೇ ನಡೆದಿತ್ತು. ಪ್ರ

 

ಈ ಅಧಿವೇಶನ ಪೂರ್ಣಗೊಂಡ ನಂತರವೂ ಅಧಿಕಾರಿ, ನೌಕರರ ವರ್ಗಾವಣೆಗಳು ಮುಂದುವರೆದಿದ್ದವು. ಅದರಲ್ಲೂ ತುಂಬಾ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರು ದೂರವಾಣಿ ಸಂಭಾಷಣೆಯೊಂದರಲ್ಲಿ ಮಾತನಾಡಿದ್ದ ವಿವೇಕಾನಂದ ಹೆಸರಿನ ಬಗ್ಗೆಯೂ ಸಿದ್ದರಾಮಯ್ಯ ಮತ್ತು ಹೆಚ್‌ ಡಿ ಕುಮಾರಸ್ವಾಮಿ ಅವರ ಮಧ್ಯೆ ವಾಗ್ವಾದಗಳು ನಡೆದಿದ್ದವು.

 

ತಿಪಕ್ಷ ನಾಯಕ ಆರ್‍‌ ಅಶೋಕ್‌ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರೂ ಸಹ ವರ್ಗಾವಣೆ ಪ್ರಕ್ರಿಯೆಗಳಲ್ಲಿ ದಂಧೆ ನಡೆದಿದೆ ಎಂದು ಆರೋಪಿಸಿದ್ದರು.

 

ಕಳೆದ ಜೂನ್‌ನಿಂದಲೂ  ವರ್ಗಾವಣೆ ಆದೇಶಗಳು ಮುಖ್ಯಮಂತ್ರಿ ಅನುಮೋದಿತ ಹೆಸರಿನಲ್ಲಿ ಈಗಲೂ  ಹೊರಬೀಳುತ್ತಲೇ ಇವೆ. ಒಂದೊಮ್ಮೆ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಶಾಸಕರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ  ವರ್ಗಾವಣೆ ಬಗೆಗೆ ಆರೋಪಗಳನ್ನು ಮಾಡಿದರೆ ಅಂಕಿ ಅಂಶಗಳ ಸಮೇತ ಉತ್ತರ ಕೊಡಲು ಸಿದ್ದರಾಮಯ್ಯ ಅವರು ತಯಾರಿ ನಡೆಸಿದ್ದಾರೆ.

 

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್‌ 2018ರಿಂದ 2023ರ ಅಕ್ಟೋಬರ್‍‌ವರೆಗಿನ  ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ಅಧಿಕಾರಿ, ನೌಕರರ ವರ್ಗಾವಣೆ ಬಗೆಗಿನ ಅಂಕಿ ಅಂಶಗಳನ್ನು ಕಲೆ ಹಾಕಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಕುರಿತು 2023ರ ನವೆಂಬರ್‍‌ 21ರಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಜೂನ್‌ 2018ರಿಂದ ಅಕ್ಟೋಬರ್‍‌ 20234ವರೆಗೆ ಎಲ್ಲಾ ಇಲಾಖೆಗಳಲ್ಲಿ ಕೈಗೊಳ್ಳಲಾದ ಅಧಿಕಾರಿ, ನೌಕರರುಗಳ ವರ್ಗಾವಣೆಗಳ ಸಂಖ್ಯೆ ವರ್ಷವಾರು, ವೃಂದವಾರು ತುರ್ತಾಗಿ ನೀಡಬೇಕು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ತಿಳಿದು ಬಂದಿದೆ.

 

ಕೆಎಎಸ್‌ ಸೇರಿದಂತೆ ಗ್ರೂಪ್‌  ಬಿ, ಸಿ, ಪಿಡಿಒ, ಡಿವೈಎಸ್ಪಿ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿ, ನಿಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿವೇಚನೆಯನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಸಾಲುಸಾಲಾಗಿ ಬಹಿರಂಗವಾಗಿದ್ದವು.

 

ವರ್ಗಾವಣೆ, ಸ್ಥಳ ನಿಯುಕ್ತಿ, ನಿಯೋಜನೆ ಕಡತಗಳಿಗೆ ಸಹಿ ಮಾಡುವ ಸಿದ್ದರಾಮಯ್ಯ ಅವರು ಹತ್ತಿಪ್ಪತ್ತು ದಿನದಲ್ಲೇ ತಾವೇ ವರ್ಗಾವಣೆ, ಸ್ಥಳ ನಿಯುಕ್ತಿ ಮಾಡಿದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿತ್ತು.

 

ಜೆಡಿಎಸ್‌ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಈ ಸರ್ಕಾರದಲ್ಲಿ  ವರ್ಗಾವಣೆ ವ್ಯಾಪಾರ, ಕಾಸಿಗಾಗಿ ಪೋಸ್ಟಿಂಗ್‌ ನಡೆಯುತ್ತಿದೆ ಪದೇ ಪದೇ ವಾಕ್ಸಮರ ನಡೆಸುತ್ತಿದ್ದರೂ ಮುಖ್ಯಮಂತ್ರಿಗಳ ಕಚೇರಿ ತನ್ನ ವರ್ತನೆಯನ್ನು ಬದಲಿಸಿಕೊಳ್ಳುತ್ತಿಲ್ಲ. ಹೀಗಾಗಿಯೇ ವರ್ಗಾವಣೆ, ಸ್ಥಳ ನಿಯುಕ್ತಿ ಆದೇಶಗಳು ಗಂಟೆಗೊಂದರಂತೆ ಹೊರಬೀಳುತ್ತಲೇ ಇವೆ.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಡೆದಿದ್ದ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಸುತ್ತೋಲೆಯನ್ನು ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವರ್ಗಾವಣೆ; ಸುತ್ತೋಲೆ ಉಲ್ಲಂಘಿಸಿದ ಸಿಎಂ, ಸಚಿವೆ ಹೆಬ್ಬಾಳ್ಕರ್‍‌

 

ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 5 ತಿಂಗಳಲ್ಲಿ 395 ಅಧಿಕಾರಿಗಳ ವರ್ಗಾವಣೆ ನಡೆದಿತ್ತು. ಲಂಚ ಕೊಟ್ಟವರಿಗಷ್ಟೇ ಹುದ್ದೆ, ಸ್ಥಳ ನಿಯುಕ್ತಿಗೊಳಿಸಿತ್ತು.

 

ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 5 ತಿಂಗಳಲ್ಲಿ 395 ಅಧಿಕಾರಿಗಳ ವರ್ಗಾವಣೆ; ಲಂಚ ಕೊಟ್ಟವರಿಗಷ್ಟೇ ಹುದ್ದೆ?

 

ಕಳೆದ ಐದು ತಿಂಗಳಲ್ಲಿ 553 ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು.

 

ಕೆಎಎಸ್‌, ಐಎಎಸ್‌, ಐಪಿಎಸ್‌, ಐಎಫ್ಎಸ್‌ ವೃಂದ; ಐದು ತಿಂಗಳಲ್ಲಿ 553 ವರ್ಗಾವಣೆ ಆದೇಶ

 

ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಅವರು ಮಾಡಿದ್ದ ಶಿಫಾರಸ್ಸು ಪಟ್ಟಿಯಲ್ಲಿ 40 ಮಂದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯವು ಕೈ ಬಿಟ್ಟಿತ್ತು.

 

ವರ್ಗಾವಣೆ ಪಟ್ಟಿಗೆ ಕತ್ತರಿ; ಲಾಡ್‌ ಶಿಫಾರಸ್ಸಿನ ಪೈಕಿ 40 ಮಂದಿ ಕೈಬಿಟ್ಟು ಹೊಸಪಟ್ಟಿ ರಚಿಸಿದ ಸಿಎಂ ಸಚಿವಾಲಯ

 

ವರ್ಗಾವಣೆ ಕುರಿತು ಮುಖ್ಯಮಂತ್ರಿ ಸಚಿವಾಲಯ ಮತ್ತು ಸಚಿವ ಸಂತೋಷ್‌ ಲಾಡ್‌ ಅವರ ಮಧ್ಯೆ ಸಂಘರ್ಷ ನಡೆದಿತ್ತು.

ವರ್ಗಾವಣೆ ಸಂಘರ್ಷ; ಸಚಿವರ ಪಟ್ಟಿ ಬದಿಗೊತ್ತಿದ ಸಿಎಂ ಸಚಿವಾಲಯ, ಹೊಸ ಪಟ್ಟಿ ಜಾರಿಗೊಳಿಸಲು ಸೂಚನೆ

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಆಗಸ್ಟ್‌ 5ರಂದು 13 ಕೆಎಎಸ್‌ ಅಧಿಕಾರಿಗಳನ್ನು ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿತ್ತು.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿ ಪ್ರಸನ್ನಕುಮಾರ್‍‌ ವಿ ಕೆ ಅವರನ್ನು 2023ರ ಜುಲೈ 17ರಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ವರ್ಗಾಯಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಅನುಮೋದಿಸಿದ್ದರು.

 

ಆದರೆ ಇದೇ  ಪ್ರಸನ್ನಕುಮಾರ್‍‌ ಅವರ ಸ್ಥಳ ನಿಯುಕ್ತಿ ಆದೇಶವನ್ನು ಮಾರ್ಪಡಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರ್ನಾಟಕ ಅಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ 2023ರ ಆಗಸ್ಟ್‌ 5ರಂದು ಅಧಿಸೂಚನೆ ಹೊರಡಿಸಿತ್ತು.

 

 

ಹಾಗೆಯೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಾವೇರಿ ಜಿಲ್ಲೆಯ ಉಪ ನಿರ್ದೇಶಕರಾಗಿದ್ದ ಡಾ ನಾಗರಾಜ್‌ ಎಸ್‌  ಅವರನ್ನು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾಯಿಸಿ  2023ರ ಜುಲೈ 24ರಂದು ಆದೇಶಿಸಲಾಗಿತ್ತು. ಆದರೆ 2023ರ ಆಗಸ್ಟ್‌ 5ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ 2023ರ ಜುಲೈ 24ರಂದು ಹೊರಡಿಸಿದ್ದ ಆದೇಶವು ರದ್ದುಗೊಂಡಿತ್ತು.

 

ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ಸೋಮಪ್ಪ ಕಡಕೋಳ ಅವರನ್ನು 2023ರ ಜುಲೈ 17ರಂದು ಕೆಪಿಐಡಿ ಕಾಯ್ದೆ ಬಡ್ಸ್‌ ಕಾಯ್ದೆ ಸಕ್ಷಮ ಪ್ರಾಧಿಕಾರದ  ಸಹಾಯಕ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು. 2023ರ ಆಗಸ್ಟ್‌ 5ರಂದು ಹೊರಬಿದ್ದಿರುವ ಅಧಿಸೂಚನೆ ಪ್ರಕಾರ ಇವರ ಸ್ಥಳ ನಿಯುಕ್ತಿ ಆದೇಶವು ಮಾರ್ಪಾಡುಗೊಂಡಿದೆ. ಇದರ ಪ್ರಕಾರ ಇವರನ್ನು ಖಾದಿ ಗ್ರಾಮೋದ್ಯೋಗ ಮಂಡಳಿಯ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

 

ಅಧಿಕಾರಿಯೊಬ್ಬರ ವರ್ಗಾವಣೆಗಾಗಿ 1.50 ಕೋಟಿ ರು. ಬೇಡಿಕೆ ಇಟ್ಟ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಅವರ ಹೆಸರನ್ನು ಬಳಸಲಾಗಿತ್ತು. ಅಲ್ಲದೇ ಇದೇ ಪ್ರಕರಣದಲ್ಲಿ ತಡರಾತ್ರಿಯಲ್ಲಿ ದೂರನ್ನು ಅದಲುಬದಲು ಮಾಡಿ ಪ್ರಭಾವಿಗಳ ಒತ್ತಡಕ್ಕೆ  ಮಣಿದಿದ್ದ ಕೋಲಾರ ಜಿಲ್ಲಾ ಪೊಲೀಸರು, ದೂರಿನಲ್ಲಿ ವರ್ಗಾವಣೆಗಾಗಿ ಎಂಬ ಪದವನ್ನೇ ಅಳಿಸಿ ಹಾಕಿದ್ದರು.

 

ವರ್ಗಾವಣೆಗಾಗಿ 1.50 ಕೋಟಿ ಬೇಡಿಕೆ; ತಡರಾತ್ರಿ ದೂರೇ ಅದಲು ಬದಲು, ಪ್ರಭಾವಿಗಳ ಒತ್ತಡಕ್ಕೆ ಮಣಿದ ಪೊಲೀಸರು!

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರ ಶಿಫಾರಸ್ಸು ಪತ್ರಕ್ಕೇ ಕಿಮ್ಮತ್ತು ನೀಡಿ ಸಿಂಧನೂರು ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿರುವ ವೆಂಕಟಪ್ಪ ನಾಯಕ್‌ ಅವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸ್‌ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿಸಿದ್ದಾರೆ. ಈ ಸಂಬಂಧ 2023ರ ಜುಲೈ 31ರಂದು ಆದೇಶ ಹೊರಬಿದ್ದಿತ್ತು.

ಡಿವೈಎಸ್ಪಿ ವರ್ಗಾವಣೆಯಲ್ಲಿ ಸಿಎಂ ಮೇಲುಗೈ; ಉಸ್ತುವಾರಿ ಸಚಿವರಿಗೆ ಮನ್ನಣೆ, ಕೆರಳಿದ ಶಾಸಕ

 

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇದ್ದ ಕುಲಸಚಿವರ ಹುದ್ದೆಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿದ್ದ ಅಧಿಸೂಚನೆಯನ್ನೇ ಬದಿಗೊತ್ತಿರುವ  ಉನ್ನತ ಶಿಕ್ಷಣ ಇಲಾಖೆಯು ಕುಲಸಚಿವರ ಹುದ್ದೆಗಳಿಗೆ  ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನೇಮಕಗೊಳಿಸಿ ಅಧಿಸೂಚನೆ ಹೊರಡಿಸಿದ್ದರು.

 

ಡಿಪಿಎಆರ್‍‌ ಅಧಿಸೂಚನೆ ಬದಿಗೊತ್ತಿ ಕುಲಸಚಿವ ಹುದ್ದೆಗೆ ಪ್ರಾಧ್ಯಾಪಕರ ನೇಮಕ; ಸಂಘರ್ಷಕ್ಕೆಡೆ ಮಾಡಿಕೊಟ್ಟಿತೇ?

 

 

 

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಆದೇಶದಲ್ಲಿ ಒಂದೇ ಪಂಚಾಯ್ತಿಗೆ ಇಬ್ಬರು ಪಿಡಿಒಗಳನ್ನು ವರ್ಗಾಯಿಸಲಾಗಿತ್ತು. ಈ ಪಂಚಾಯ್ತಿಗೆ ಯಾರು ಅಧಿಕಾರ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಇಬ್ಬರು ಪಿಡಿಒಗಳ ನಡುವೆಯೇ ಪೈಪೋಟಿಗೆ ಸೃಷ್ಟಿಸಿದಂತಾಗಿತ್ತು.

ಸುತ್ತೋಲೆ ಬದಿಗಿರಿಸಿ 208 ಪಿಡಿಒಗಳ ವರ್ಗಾ, ಒಂದೇ ಪಂಚಾಯ್ತಿಗೆ ಇಬ್ಬರು ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

 

 

ವರ್ಗಾವಣೆ ಆದೇಶದ 35ನೇ ಕ್ರಮಾಂಕದಲ್ಲಿರುವ ಪ್ರತಿಭಾ ಅವರನ್ನು ಕೋಲಾರ ತಾಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯ್ತಿಯಿಂದ ಕುಣಿಗಲ್‌ ಗ್ರಾಮಾಂತರ ತಾಲೂಕಿನ ಕಿತ್ತಾಮಂಗಲ ಗ್ರಾಮ ಪಂಚಾಯ್ತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

 

ಮೂಡಿಗೆರೆ ಪ್ರಾದೇಶಿಕ ವಲಯದಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಜಿ ಮೋಹನ್‌ ಕುಮಾರ್‍‌ ಅವರನ್ನು ಬೆಳ್ತಂಗಡಿ ಪ್ರಾದೇಶಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತ್ಯಾಗರಾಜು ಅವರ ಜಾಗಕ್ಕೆ ವರ್ಗಾಯಿಸಲು ಕೋರಿದೆ ಎಂದು 2023ರ ಜೂನ್‌ 14ರಂದು ಸಿದ್ದರಾಮಯ್ಯ ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಈಶ್ವರ್‍‌ ಖಂಡ್ರೆ ಅವರಿಗೆ ಟಿಪ್ಪಣಿ ಹೊರಡಿಸಿದ್ದರು. ಈ ಟಿಪ್ಪಣಿ ಹೊರಡಿಸಿದ 15 ದಿನದೊಳಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಹೊನ್ನಾವರ ವಿಭಾಗ ಮತ್ತು ವಲಯದಲ್ಲಿ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮ್‌ ಆರ್‍‌ ಎಂ ಅವರನ್ನು ವರ್ಗಾಯಿಸಬೇಕು ಎಂದು ಅರಣ್ಯ ಸಚಿವರಿಗೆ 2023ರ ಜೂನ್‌ 30ರಂದು ಸೂಚಿಸಿದ್ದರು.

 

ಸಿಎಂ ಕಚೇರಿಯಲ್ಲಿ ನಿಲ್ಲದ ವರ್ಗಾವಣೆ ಭರಾಟೆ; ಅರಣ್ಯಾಧಿಕಾರಿಯ ಒಂದೇ ಹುದ್ದೆಗೆ ಇಬ್ಬರಿಗೆ ಶಿಫಾರಸ್ಸು

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಕಮಿಷನ್‌, ಲಂಚ ಪಡೆದು ವರ್ಗಾವಣೆ ವ್ಯಾಪಾರ ನಡೆಸಿದ್ದರೇ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿಗೆ ಸದನದಲ್ಲಿಯೇ ಸವಾಲು ಎಸೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ಮೂರು ಬಾರಿ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದರು.  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮನಸೋ ಇಚ್ಛೆ ಅಧಿಕಾರಿ, ನೌಕರರ ವರ್ಗಾವಣೆಗಳನ್ನು ಮಾಡುತ್ತಿರುವುದರ ಬಗ್ಗೆ ಅಧಿಕಾರಿಶಾಹಿಯೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.

 

ಎಸ್‌ ಟಿ ಕಲ್ಯಾಣ ಇಲಾಖೆ ನಿರ್ದೇಶಕರ ಹುದ್ದೆ; ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳ ವರ್ಗಾವಣೆ

 

ಮಣಿಪುರ ಮೂಲದ ಕರ್ನಾಟಕ ಕೇಡರ್‍‌ನ (KN 2020) ಐಎಎಸ್‌ ಅಧಿಕಾರಿಯಾಗಿರುವ ನೋನ್‌ಜಾಯ್‌ ಮೊಹ್ಮದ್‌ ಅಲಿ ಅಕ್ರಮ್‌ ಶಾ ಅವರನ್ನು ಕಳೆದ 8 ತಿಂಗಳಲ್ಲಿ 6 ಬಾರಿ ವಿವಿಧ ಸ್ಥಳ-ಹುದ್ದೆಗಳಿಗೆ ವರ್ಗಾವಣೆ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

 

8 ತಿಂಗಳಲ್ಲಿ 6 ಬಾರಿ ವರ್ಗಾವಣೆ; ಫುಟ್ಬಾಲ್‌ ಚೆಂಡಿನಂತಾದ ಮಣಿಪುರ ಮೂಲದ ಐಎಎಸ್‌ ಅಧಿಕಾರಿ ಅಕ್ರಮ್‌ ಶಾ

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೇ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡಿ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿದ್ದರು.

 

 

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದರು.

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರು. ವರ್ಗಾವಣೆ ಹಿಂದೆ ಇರುವವರು ಯಾರು ಆ ಅತೀಂದ್ರ ಎಂದು ಟ್ವೀಟ್‌ ಕೂಡ ಮಾಡಿದ್ದರು.

‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಜೂನ್‌ 30 ಕಡೇ ದಿನ ಎಂದು ಹೇಳಿದ್ದ ಸರ್ಕಾರವು ಕಡೇ ಗಳಿಗೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಇದೇ ಜುಲೈ 3ರವರೆಗೂ ವಿಸ್ತರಿಸಿದ್ದರು.

ಸುತ್ತೋಲೆ ಉಲ್ಲಂಘಿಸಿ ಕೆಎಎಸ್‌, ಪಿಡಿಒ, ಅಬಕಾರಿ ನಿರೀಕ್ಷಕರು ಸೇರಿ 63 ಮಂದಿ ವರ್ಗಾವಣೆ

ಇದಾದ ನಂತರವೂ ವರ್ಗಾವಣೆ ಅಧಿಸೂಚನೆಗಳು ಹೊರಬಿದ್ದಿದ್ದವು. ವಿಶೇಷವೆಂದರೆ ಸರ್ಕಾರಿ ಜಮೀನನ್ನು ಮಾಜಿ ಸಚಿವ ಬಿ ಶ್ರೀರಾಮುಲು ಅವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲು ಸುಳ್ಳು ದಾಖಲೆಗಳನ್ನೇ ನೈಜವೆಂದು ನಂಬಿಸಿದ ಆರೋಪದ ಮೇರೆಗೆ ವಿಚಾರಣೆ ಎದುರಿಸಿದ್ದ ಶಶಿಧರ ಬಗಲಿ ಅವರನ್ನು ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರು.

ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನೂ ಸೇರಿಸಿ ನೋಂದಾಯಿಸಿದ್ದ ಅಧಿಕಾರಿಗೆ ಭೂಸ್ವಾಧೀನಾಧಿಕಾರಿ ಹುದ್ದೆ

ಇದಷ್ಟೇ ಅಲ್ಲ, ಎಪಿಪಿಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ  2ನೇ ಆರೋಪಿ ಎಂದು ಹೆಸರಿಸಿದ್ದ ನಾರಾಯಣಸ್ವಾಮಿ ಅವರನ್ನು ಅಭಿಯೋಜನಾ ಇಲಾಖೆಯ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

ಹಾಗೆಯೇ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಅಭಿವೃದ್ಧಿಪಡಿಸಲಾಗಿದ್ದ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಂಡಿದ್ದ ಆರೋಪವೂ ಕೇಳಿ ಬಂದಿತ್ತು.

ಲಂಚ; ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು?

ಕಾಸಿಗಾಗಿ ಪೋಸ್ಟಿಂಗ್‌ ಎಂಬ ಆರೋಪ ಕೇಳಿ ಬಂದಿದ್ದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಎಸ್ ಪ್ರಹ್ಲಾದ್‌ ಎಂಬುವರನ್ನು ಬಿಬಿಎಂಪಿಯಲ್ಲಿನ ಮುಖ್ಯ ಇಂಜಿನಿಯರ್‌ ಹುದ್ದೆಗೆ ವರ್ಗಾವಣೆ ಮಾಡಲು ಟಿಪ್ಪಣಿ ಹೊರಡಿಸಿದ್ದರು.

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

ಇದಷ್ಟೇ ಅಲ್ಲ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಕೂಡ ಆಯಕಟ್ಟಿನ ಹುದ್ದೆಗೆ ಕೆ ಟಿ ನಾಗರಾಜ್‌ ಅವರನ್ನು ನೇಮಿಸಿದ್ದರ ಬಗ್ಗೆಯೂ ಆರೋಪಗಳು ಕೇಳಿ ಬಂದಿದ್ದವು.

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

47 ಕೋಟಿ ರು. ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ತರಬೇತಿ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವರ್ಗಾಯಿಸಿದ್ದರು.

47 ಕೋಟಿ ನಷ್ಟ; ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ

 

ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವ್ಯಾಪಾರವಾಗಲೀ, ದಂಧೆಯನ್ನಾಗಲಿ ನಡೆದಿಲ್ಲ ಮತ್ತು ಇದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

Hot this week

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!