ಡಿವೈಎಸ್ಪಿ ವರ್ಗಾವಣೆಯಲ್ಲಿ ಸಿಎಂ ಮೇಲುಗೈ; ಉಸ್ತುವಾರಿ ಸಚಿವರಿಗೆ ಮನ್ನಣೆ, ಕೆರಳಿದ ಶಾಸಕ

ಬೆಂಗಳೂರು; ಕೆಎಎಸ್‌ ಸೇರಿದಂತೆ ಗ್ರೂಪ್‌ ಎ, ಬಿ, ಸಿ ಮತ್ತು  ಪಿಡಿಒಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರವು ಒಂದಲ್ಲ ಒಂದು ರೀತಿಯ ಮುಜುಗರದಲ್ಲಿ ಸಿಲುಕಿ ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡಿರುವ ಮಧ್ಯೆಯೇ  ಇನ್ಸ್‌ಪೆಕ್ಟರ್‍‌, ಡಿವೈಎಸ್ಪಿಗಳ ವರ್ಗಾವಣೆಯಲ್ಲಿಯೂ ಕಾಂಗ್ರೆಸ್‌ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ  ಸಚಿವರ ನಡುವೆಯೇ ತಿಕ್ಕಾಟ ಮುಂದುವರೆದಿದೆ. ಅಲ್ಲದೇ ತಮ್ಮ ಮಾತಿಗೆ ಕಿಮ್ಮತ್ತು ನೀಡಿಲ್ಲವೆಂದು ಸ್ಥಳೀಯ ಶಾಸಕರ ವಲಯದಲ್ಲಿ ಅಸಮಾಧಾನ, ಆಕ್ರೋಶದ ಭುಗಿಲೆದ್ದಿದೆ.

 

ತಮ್ಮ ವಿಧಾನಸಭೆ ಕ್ಷೇತ್ರಕ್ಕೆ ನಿರ್ದಿಷ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಏಕಕಾಲಕ್ಕೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನೀಡುತ್ತಿರುವ ಟಿಪ್ಪಣಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ  ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರಿಗೆ ತಲೆಬಿಸಿಯಾಗಿ ಪರಿಣಿಮಿಸಿದೆ.

 

ಸಚಿವರು ಮತ್ತು ಶಾಸಕರು ಶಿಫಾರಸ್ಸು ಮಾಡಿರುವ ಟಿಪ್ಪಣಿ, ನಡವಳಿ  ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕೆಲವು ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸ್ಥಳೀಯ ಶಾಸಕರ ಟಿಪ್ಪಣಿಗಳನ್ನು ಬದಿಗಿರಿಸಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ  ಹೆಚ್ಚಿನ ಕಿಮ್ಮತ್ತು ನೀಡಿ ತಮ್ಮ ಮೇಲುಗೈ ಸಾಧಿಸುತ್ತಿದ್ದಾರೆ.

 

ಹೀಗಾಗಿಯೇ ಸ್ಥಳೀಯ ಶಾಸಕರು ತೀವ್ರವಾಗಿ  ಅಸಮಾಧಾನಿತರಾಗಿದ್ದಾರೆ.  ಅಲ್ಲದೇ  ತಮ್ಮ ಶಿಫಾರಸ್ಸಿಗೆ ವಿರುದ್ಧವಾಗಿ ವರ್ಗಾವಣೆ ಆಗಿ ಬರುವ ಡಿವೈಎಸ್ಪಿಗಳಿಗೆ ಕಾರ್ಯಭಾರ ವಹಿಸಿಕೊಳ್ಳದಂತೆ ಬೆದರಿಸಿ ತಡೆಯೊಡ್ಡುತ್ತಿರುವ ಪ್ರಕರಣಗಳು ನಡೆದಿವೆ ಎಂದು ಗೊತ್ತಾಗಿದೆ.

 

ವಿಜಯನಗರ ಹೊಸಪೇಟೆ  ಪೊಲೀಸ್‌ ಉಪ ವಿಭಾಗಕ್ಕೆ ಡಿವೈಎಸ್ಪಿ ಹುದ್ದೆಗೆ ವರ್ಗಾವಣೆಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸಿ ತಮ್ಮ ಮೇಲುಗೈ ಸಾಧಿಸಿದ್ದಾರೆ.

 

ವಸತಿ, ವಕ್ಫ್‌ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಶಿಫಾರಸ್ಸು ಮಾಡಿದ್ದ ಡಿವೈಎಸ್ಪಿಯನ್ನೇ ಹೊಸಪೇಟೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್‌ನ ಸ್ಥಳೀಯ ಶಾಸಕ ಹೆಚ್‌ ಆರ್‍‌ ಗವಿಯಪ್ಪ ಅವರನ್ನು ಕೆರಳಿಸಿದಂತಾಗಿದೆ.

 

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಅವರು ಸಿಂಧನೂರು ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿರುವ ವೆಂಕಟಪ್ಪ ನಾಯಕ್‌ ಅವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸ್‌ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2023ರ ಜೂನ್‌ 27ರಂದು ನಡವಳಿ ಪತ್ರವನ್ನು ನೀಡಿದ್ದರು.

 

ಅದೇ ರೀತಿ ಸ್ಥಳೀಯ ಕಾಂಗ್ರೆಸ್‌ ಶಾಸಕ ಹೆಚ್‌ ಆರ್‍‌ ಗವಿಯಪ್ಪ ಅವರು ಹೊಸ ಪೇಟೆ ಉಪ ವಿಭಾಗಕ್ಕೆ ಡಿವೈಎಸ್ಪಿ  ಡಾ ಮಂಜುನಾಥ್‌ ಅವರನ್ನು ವರ್ಗಾವಣೆ ಮಾಡಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿದ್ದರು.

 

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರ ಶಿಫಾರಸ್ಸು ಪತ್ರಕ್ಕೇ ಕಿಮ್ಮತ್ತು ನೀಡಿ ಸಿಂಧನೂರು ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿರುವ ವೆಂಕಟಪ್ಪ ನಾಯಕ್‌ ಅವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸ್‌ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿಸಿದ್ದಾರೆ. ಈ ಸಂಬಂಧ 2023ರ ಜುಲೈ 31ರಂದು ಆದೇಶ ಹೊರಬಿದ್ದಿದೆ.

 

 

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇದ್ದ ಕುಲಸಚಿವರ ಹುದ್ದೆಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿದ್ದ ಅಧಿಸೂಚನೆಯನ್ನೇ ಬದಿಗೊತ್ತಿರುವ  ಉನ್ನತ ಶಿಕ್ಷಣ ಇಲಾಖೆಯು ಕುಲಸಚಿವರ ಹುದ್ದೆಗಳಿಗೆ  ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನೇಮಕಗೊಳಿಸಿ ಅಧಿಸೂಚನೆ ಹೊರಡಿಸಿದ್ದರು.

 

ಡಿಪಿಎಆರ್‍‌ ಅಧಿಸೂಚನೆ ಬದಿಗೊತ್ತಿ ಕುಲಸಚಿವ ಹುದ್ದೆಗೆ ಪ್ರಾಧ್ಯಾಪಕರ ನೇಮಕ; ಸಂಘರ್ಷಕ್ಕೆಡೆ ಮಾಡಿಕೊಟ್ಟಿತೇ?

 

 

 

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಆದೇಶದಲ್ಲಿ ಒಂದೇ ಪಂಚಾಯ್ತಿಗೆ ಇಬ್ಬರು ಪಿಡಿಒಗಳನ್ನು ವರ್ಗಾಯಿಸಲಾಗಿತ್ತು. ಈ ಪಂಚಾಯ್ತಿಗೆ ಯಾರು ಅಧಿಕಾರ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಇಬ್ಬರು ಪಿಡಿಒಗಳ ನಡುವೆಯೇ ಪೈಪೋಟಿಗೆ ಸೃಷ್ಟಿಸಿದಂತಾಗಿತ್ತು.

ಸುತ್ತೋಲೆ ಬದಿಗಿರಿಸಿ 208 ಪಿಡಿಒಗಳ ವರ್ಗಾ, ಒಂದೇ ಪಂಚಾಯ್ತಿಗೆ ಇಬ್ಬರು ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

 

 

ವರ್ಗಾವಣೆ ಆದೇಶದ 35ನೇ ಕ್ರಮಾಂಕದಲ್ಲಿರುವ ಪ್ರತಿಭಾ ಅವರನ್ನು ಕೋಲಾರ ತಾಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯ್ತಿಯಿಂದ ಕುಣಿಗಲ್‌ ಗ್ರಾಮಾಂತರ ತಾಲೂಕಿನ ಕಿತ್ತಾಮಂಗಲ ಗ್ರಾಮ ಪಂಚಾಯ್ತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

 

ಮೂಡಿಗೆರೆ ಪ್ರಾದೇಶಿಕ ವಲಯದಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಜಿ ಮೋಹನ್‌ ಕುಮಾರ್‍‌ ಅವರನ್ನು ಬೆಳ್ತಂಗಡಿ ಪ್ರಾದೇಶಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತ್ಯಾಗರಾಜು ಅವರ ಜಾಗಕ್ಕೆ ವರ್ಗಾಯಿಸಲು ಕೋರಿದೆ ಎಂದು 2023ರ ಜೂನ್‌ 14ರಂದು ಸಿದ್ದರಾಮಯ್ಯ ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಈಶ್ವರ್‍‌ ಖಂಡ್ರೆ ಅವರಿಗೆ ಟಿಪ್ಪಣಿ ಹೊರಡಿಸಿದ್ದರು. ಈ ಟಿಪ್ಪಣಿ ಹೊರಡಿಸಿದ 15 ದಿನದೊಳಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಹೊನ್ನಾವರ ವಿಭಾಗ ಮತ್ತು ವಲಯದಲ್ಲಿ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮ್‌ ಆರ್‍‌ ಎಂ ಅವರನ್ನು ವರ್ಗಾಯಿಸಬೇಕು ಎಂದು ಅರಣ್ಯ ಸಚಿವರಿಗೆ 2023ರ ಜೂನ್‌ 30ರಂದು ಸೂಚಿಸಿದ್ದರು.

 

ಸಿಎಂ ಕಚೇರಿಯಲ್ಲಿ ನಿಲ್ಲದ ವರ್ಗಾವಣೆ ಭರಾಟೆ; ಅರಣ್ಯಾಧಿಕಾರಿಯ ಒಂದೇ ಹುದ್ದೆಗೆ ಇಬ್ಬರಿಗೆ ಶಿಫಾರಸ್ಸು

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಕಮಿಷನ್‌, ಲಂಚ ಪಡೆದು ವರ್ಗಾವಣೆ ವ್ಯಾಪಾರ ನಡೆಸಿದ್ದರೇ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿಗೆ ಸದನದಲ್ಲಿಯೇ ಸವಾಲು ಎಸೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ಮೂರು ಬಾರಿ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದರು.  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮನಸೋ ಇಚ್ಛೆ ಅಧಿಕಾರಿ, ನೌಕರರ ವರ್ಗಾವಣೆಗಳನ್ನು ಮಾಡುತ್ತಿರುವುದರ ಬಗ್ಗೆ ಅಧಿಕಾರಿಶಾಹಿಯೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.

 

ಎಸ್‌ ಟಿ ಕಲ್ಯಾಣ ಇಲಾಖೆ ನಿರ್ದೇಶಕರ ಹುದ್ದೆ; ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳ ವರ್ಗಾವಣೆ

 

ಮಣಿಪುರ ಮೂಲದ ಕರ್ನಾಟಕ ಕೇಡರ್‍‌ನ (KN 2020) ಐಎಎಸ್‌ ಅಧಿಕಾರಿಯಾಗಿರುವ ನೋನ್‌ಜಾಯ್‌ ಮೊಹ್ಮದ್‌ ಅಲಿ ಅಕ್ರಮ್‌ ಶಾ ಅವರನ್ನು ಕಳೆದ 8 ತಿಂಗಳಲ್ಲಿ 6 ಬಾರಿ ವಿವಿಧ ಸ್ಥಳ-ಹುದ್ದೆಗಳಿಗೆ ವರ್ಗಾವಣೆ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

 

8 ತಿಂಗಳಲ್ಲಿ 6 ಬಾರಿ ವರ್ಗಾವಣೆ; ಫುಟ್ಬಾಲ್‌ ಚೆಂಡಿನಂತಾದ ಮಣಿಪುರ ಮೂಲದ ಐಎಎಸ್‌ ಅಧಿಕಾರಿ ಅಕ್ರಮ್‌ ಶಾ

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೇ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡಿ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿದ್ದರು.

 

 

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದರು.

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರು. ವರ್ಗಾವಣೆ ಹಿಂದೆ ಇರುವವರು ಯಾರು ಆ ಅತೀಂದ್ರ ಎಂದು ಟ್ವೀಟ್‌ ಕೂಡ ಮಾಡಿದ್ದರು.

‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಜೂನ್‌ 30 ಕಡೇ ದಿನ ಎಂದು ಹೇಳಿದ್ದ ಸರ್ಕಾರವು ಕಡೇ ಗಳಿಗೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಇದೇ ಜುಲೈ 3ರವರೆಗೂ ವಿಸ್ತರಿಸಿದ್ದರು.

ಸುತ್ತೋಲೆ ಉಲ್ಲಂಘಿಸಿ ಕೆಎಎಸ್‌, ಪಿಡಿಒ, ಅಬಕಾರಿ ನಿರೀಕ್ಷಕರು ಸೇರಿ 63 ಮಂದಿ ವರ್ಗಾವಣೆ

ಇದಾದ ನಂತರವೂ ವರ್ಗಾವಣೆ ಅಧಿಸೂಚನೆಗಳು ಹೊರಬಿದ್ದಿದ್ದವು. ವಿಶೇಷವೆಂದರೆ ಸರ್ಕಾರಿ ಜಮೀನನ್ನು ಮಾಜಿ ಸಚಿವ ಬಿ ಶ್ರೀರಾಮುಲು ಅವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲು ಸುಳ್ಳು ದಾಖಲೆಗಳನ್ನೇ ನೈಜವೆಂದು ನಂಬಿಸಿದ ಆರೋಪದ ಮೇರೆಗೆ ವಿಚಾರಣೆ ಎದುರಿಸಿದ್ದ ಶಶಿಧರ ಬಗಲಿ ಅವರನ್ನು ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರು.

ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನೂ ಸೇರಿಸಿ ನೋಂದಾಯಿಸಿದ್ದ ಅಧಿಕಾರಿಗೆ ಭೂಸ್ವಾಧೀನಾಧಿಕಾರಿ ಹುದ್ದೆ

ಇದಷ್ಟೇ ಅಲ್ಲ, ಎಪಿಪಿಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ  2ನೇ ಆರೋಪಿ ಎಂದು ಹೆಸರಿಸಿದ್ದ ನಾರಾಯಣಸ್ವಾಮಿ ಅವರನ್ನು ಅಭಿಯೋಜನಾ ಇಲಾಖೆಯ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

ಹಾಗೆಯೇ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಅಭಿವೃದ್ಧಿಪಡಿಸಲಾಗಿದ್ದ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಂಡಿದ್ದ ಆರೋಪವೂ ಕೇಳಿ ಬಂದಿತ್ತು.

ಲಂಚ; ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು?

ಕಾಸಿಗಾಗಿ ಪೋಸ್ಟಿಂಗ್‌ ಎಂಬ ಆರೋಪ ಕೇಳಿ ಬಂದಿದ್ದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಎಸ್ ಪ್ರಹ್ಲಾದ್‌ ಎಂಬುವರನ್ನು ಬಿಬಿಎಂಪಿಯಲ್ಲಿನ ಮುಖ್ಯ ಇಂಜಿನಿಯರ್‌ ಹುದ್ದೆಗೆ ವರ್ಗಾವಣೆ ಮಾಡಲು ಟಿಪ್ಪಣಿ ಹೊರಡಿಸಿದ್ದರು.

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

ಇದಷ್ಟೇ ಅಲ್ಲ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಕೂಡ ಆಯಕಟ್ಟಿನ ಹುದ್ದೆಗೆ ಕೆ ಟಿ ನಾಗರಾಜ್‌ ಅವರನ್ನು ನೇಮಿಸಿದ್ದರ ಬಗ್ಗೆಯೂ ಆರೋಪಗಳು ಕೇಳಿ ಬಂದಿದ್ದವು.

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

47 ಕೋಟಿ ರು. ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ತರಬೇತಿ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವರ್ಗಾಯಿಸಿದ್ದರು.

47 ಕೋಟಿ ನಷ್ಟ; ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ

 

ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವ್ಯಾಪಾರವಾಗಲೀ, ದಂಧೆಯನ್ನಾಗಲಿ ನಡೆದಿಲ್ಲ ಮತ್ತು ಇದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts