Sunday | July 19, 2026 |

8 ತಿಂಗಳಲ್ಲಿ 6 ಬಾರಿ ವರ್ಗಾವಣೆ; ಫುಟ್ಬಾಲ್‌ ಚೆಂಡಿನಂತಾದ ಮಣಿಪುರ ಮೂಲದ ಐಎಎಸ್‌ ಅಧಿಕಾರಿ ಅಕ್ರಮ್‌ ಶಾ

ಬೆಂಗಳೂರು; ಮಣಿಪುರ ಮೂಲದ ಕರ್ನಾಟಕ ಕೇಡರ್‍‌ನ (KN 2020) ಐಎಎಸ್‌ ಅಧಿಕಾರಿಯಾಗಿರುವ ನೋನ್‌ಜಾಯ್‌ ಮೊಹ್ಮದ್‌ ಅಲಿ ಅಕ್ರಮ್‌ ಶಾ ಅವರನ್ನು ಕಳೆದ 8 ತಿಂಗಳಲ್ಲಿ 6 ಬಾರಿ ವಿವಿಧ ಸ್ಥಳ-ಹುದ್ದೆಗಳಿಗೆ ವರ್ಗಾವಣೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಕರ್ನಾಟಕ ಕೇಡರ್ ನ 2020ರ ಬ್ಯಾಚ್‌ನ ಅಧಿಕಾರಿಯಾಗಿರುವ ಅಕ್ರಮ್‌ ಶಾ ಅವರು 2022ರ ನವೆಂಬರ್‍‌ 2ರಿಂದ 2023ರ ಜುಲೈ 10ರವರೆಗೆ ಒಟ್ಟು 8 ಬಾರಿ ವರ್ಗಾವಣೆಗೊಳಗಾಗಿದ್ದಾರೆ. 2022ರ ನವಂಬರ್‍‌ 2ರಲ್ಲಿ ಪಾಂಡವಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ ವರ್ಗಾವಣೆ ಆಗಿದ್ದ ಅಕ್ರಮ್‌ ಶಾ ಅವರು ಅಲ್ಲಿ 2023ರ ಫೆ.11ರವರೆಗೆ ಅಂದರೆ ಕೇವಲ ನಾಲ್ಕೇ ನಾಲ್ಕು ತಿಂಗಳ ಅವಧಿಗೆ ಮಾತ್ರ ಕಾರ್ಯನಿರ್ವಹಿಸಿದ್ದಾರೆ. ಇದಾದ ನಂತರ ಪ್ರತಿ ತಿಂಗಳಿಗೊಮ್ಮೆಯಂತೆ ಅಕ್ರಮ್‌ ಶಾ ಅವರನ್ನು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚೆಂಡಾಡುತ್ತಿರುವುದು ಐಎಎಸ್‌ ಕಿರಿಯ ಅಧಿಕಾರಿಗಳ ನಡುವೆ ಚರ್ಚೆಗೆ ಗ್ರಾಸವಾಗಿದೆ.

 

ಅಕ್ರಮ್‌ ಶಾ ಅವರನ್ನು ಎಲ್ಲಿಯೂ ವರ್ಷವಿರಲಿ ಕನಿಷ್ಠ 6 ತಿಂಗಳ ಅವಧಿಯವರೆಗೂ ಒಂದೇ ಹುದ್ದೇ ಅಥವಾ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಬಿಟ್ಟಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ತಿಂಗಳಲ್ಲೇ ಎರಡು ಹುದ್ದೆಗೆ ವರ್ಗಾವಣೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. 8 ಬಾರಿ ವರ್ಗಾವಣೆಗೊಳಿಸಿರುವ ಆದೇಶದ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೆಎಎಸ್‌ ಅಧಿಕಾರಿಗಳನ್ನು ಅವಧಿಪೂರ್ವ ವರ್ಗಾವಣೆಗೊಳಿಸುತ್ತಿರುವ ಮಧ್ಯೆಯೇ ಕಿರಿಯ ಐಎಎಸ್‌ ಅಧಿಕಾರಿಯನ್ನು ಒಂದೆಡೆ ಕಾರ್ಯನಿರ್ವಹಿಸಲು ಅವಕಾಶವನ್ನೇ ನೀಡದೇ ತಿಂಗಳಿಗೊಮ್ಮೆ ಎಂಬಂತೆ ವರ್ಗಾವಣೆಗೊಳಗಾಗುತ್ತಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ಅಕ್ರಮ್‌ ಶಾ ಅವರನ್ನು  2022 ನವೆಂಬರ್ 2ರಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.

 

2022ರ ನವೆಂಬರ್‍‌ನಲ್ಲಿ ವರ್ಗಾವಣೆ ಆದೇಶ

 

 

ಪಾಂಡವಪುರದಲ್ಲಿ ಕೇವಲ ನಾಲ್ಕೇ ನಾಲ್ಕು ತಿಂಗಳು ಮಾತ್ರ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.  2023 ಫೆ.11ರಲ್ಲಿ ಸಕಾಲ ಮಿಷನ್‌ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.

 

2023ರ ಫೆಬ್ರುವರಿಯಲ್ಲಿ ಮಾಡಿದ್ದ ವರ್ಗಾವಣೆ ಅಧಿಸೂಚನೆ

 

 

 

ಸಕಾಲ ಮಿಷನ್‌ನಲ್ಲೂ ಕೇವಲ ಒಂದು ತಿಂಗಳಷ್ಟೇ ಕಾರ್ಯನಿರ್ವಹಿಸಿದ್ದರು. ಬೆಳಗಾವಿ ಮಹಾನಗರ ಪಾಲಿಕೆ ಕೌನ್ಸಿಲ್‌ ಸೆಕ್ರೆಟರಿ ಹುದ್ದೆಗೆ  2023 ಮಾರ್ಚ್‌ 13ರಂದು ವರ್ಗಾವಣೆಗೊಳಿಸಲಾಯಿತು.

 

ಮಾರ್ಚ್‌, 2023ರಲ್ಲಿ ಮಾಡಿದ್ದ ವರ್ಗಾವಣೆ

 

 

 

ಬೆಳಗಾವಿ ಮಹಾನಗರಪಾಲಿಕೆಯಲ್ಲಿ 2023ರ  ಮಾರ್ಚ್‌ 13ಕ್ಕೆ ಕೌನ್ಸಿಲ್‌ ಸೆಕ್ರೆಟರಿ ಆಗಿ ಅಧಿಕಾರ ವಹಿಸಿಕೊಂಡ ಅಕ್ರಮ್‌ ಅವರನ್ನು  ಪುನಃ ಪಾಂಡವಪುರ ಉಪ ವಿಭಾಗಾಧಿಕಾರಿಯಾಗಿ 2023ರ ಏಪ್ರಿಲ್‌ 3ರಂದು ವರ್ಗಾವಣೆಗೊಳಿಸಲಾಗಿತ್ತು.

 

ಏಪ್ರಿಲ್‌, 2023ರಲ್ಲಿ ವರ್ಗಾವಣೆ ಅಧಿಸೂಚನೆ

 

 

 

2023ರ ಏಪ್ರಿಲ್‌ 3ರಂದು ಪಾಂಡವಪುರ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ರಮ್‌ ಅವರನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ  2023ರ ಜೂನ್ 19ರಂದು ಹಂಪಿ ಪಾರಂಪರಿಕಾ ನಿರ್ವಹಣೆ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆ ಮಾಡಿತ್ತು.

 

2023ರ ಜೂನ್‌ನಲ್ಲಿನ ವರ್ಗಾವಣೆ ಆದೇಶ

 

ಹಂಪಿ ಪಾರಂಪರಿಕಾ ನಿರ್ವಹಣೆ ಪ್ರಾಧಿಕಾರದ ಆಯುಕ್ತರಾಗಿ ಒಂದು ತಿಂಗಳೂ ಕಾರ್ಯನಿರ್ವಹಿಸಲಿಲ್ಲ. 2023ರ ಜುಲೈ 10ರಂದು ಅಕ್ರಮ್‌ ಅವರನ್ನು  2023 ಜುಲೈ 10ರಂದು ಹೊಸಪೇಟೆ ಉಪ ವಿಭಾಗಾಧಿಕಾರಿಯಾಗಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ.

 

ಮಣಿಪುರ ಮೂಲದ ಕರ್ನಾಟಕ ಕೇಡರ್‍‌ನ ಕಿರಿಯ ಐಎಎಸ್‌ ಅಧಿಕಾರಿಯಾಗಿರುವ ಅಕ್ರಮ್‌ ಶಾ ಅವರನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಕಾಂಗ್ರೆಸ್‌ ಸರ್ಕಾರವು ಎರಡೆರಡು ತಿಂಗಳಲ್ಲಿ ವರ್ಗಾವಣೆಗೊಳಿಸುತ್ತಿರುವುದಕ್ಕೆ ಕಿರಿಯ ಐಎಎಸ್‌ ಅಧಿಕಾರಿಶಾಹಿಯೊಳಗೇ ಅಸಮಾಧಾನ ವ್ಯಕ್ತವಾಗಿದೆ. ‘ಒಬ್ಬ ಕಿರಿಯ ಐಎಎಸ್‌ ಅಧಿಕಾರಿಯನ್ನು ಹೀಗೆ ಪದೇ ಪದೇ ತಿಂಗಳಲ್ಲೇ ವರ್ಗಾವಣೆ ಮಾಡು ಕ್ರಮ ಸರಿಯಲ್ಲ. ಕಿರಿಯ ಐಎಎಸ್‌ ಅಧಿಕಾರಿಗಳಿಗೆ ನಿಜವಾದ ತರಬೇತಿ ಸಿಗುವುದು ಕಾರ್ಯಕ್ಷೇತ್ರದಲ್ಲಿ. ಹೀಗಿದ್ದರೂ ಒಂದು ಕಾರ್ಯಕ್ಷೇತ್ರದಲ್ಲಿ ಅನುಭವ ಪಡೆದುಕೊಳ್ಳುವ ಮುನ್ನವೇ ಅತ್ಯಲ್ಪ, ಅವಧಿಪೂರ್ವವಾಗಿ ವರ್ಗಾವಣೆ ಮಾಡುವ ಸರ್ಕಾರಗಳು, ಅವರ ಆತ್ಮಸ್ಥೈರ್ಯವನ್ನು ಕುಂದಿಸುತ್ತದೆ,’ ಎನ್ನುತ್ತಾರೆ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು.

 

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೇ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡಿ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿದ್ದರು.

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕ ಪರಿಶೋಧನೆ ವಿಭಾಗದಲ್ಲಿದ್ದ ಒಂದೇ ಹುದ್ದೆಗೆ ನಾಲ್ಕು ಮಂದಿ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರ ಬೆನ್ನಲ್ಲೇ ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

 

ಒಂದು ಹುದ್ದೆಗೆ ವರ್ಗಾವಣೆ ಆದ ಮೇಲೆ ಕನಿಷ್ಟ ಎರಡು ವರ್ಷಗಳವರೆಗೆ ಆ ಅಧಿಕಾರಿಯು ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ನಂತರದ ವರ್ಷಗಳಲ್ಲಿ ಇದನ್ನು ಬದಲಾಯಿಸಿ ಒಂದು ಆ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದ್ದರು. ಈ ಸಂಬಂಧ ಯಾವುದೇ ನಿಯಮಗಳು ಇಲ್ಲದಿದ್ದರೂ ಮಾರ್ಗಸೂಚಿಗಳಿವೆ. ಎಲ್ಲಾ ಎ ಮತ್ತು ಬಿ ಗುಂಪಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ 3 ವರ್ಷ, ಸಿ ಗುಂಪಿನ ಹುದ್ದೆಗಳಿಗೆ 4 ವರ್ಷ, ಡಿ ಗುಂಪಿನ ಹುದ್ದೆಗಳಿಗೆ 7 ವರ್ಷ ಎಂದು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಅತಿ ವಿಶೇಷ ಪ್ರಕರಣಗಳಲ್ಲಿ ಮಾತ್ರ ಅವಧಿಪೂರ್ವವಾಗಿ ವರ್ಗಾವಣೆ ಮಾಡಲು ಮುಖ್ಯಮಂತ್ರಿಗೆ ಅಧಿಕಾರವಿದೆ.

 

ಆದರೆ 2023ರ ಜೂನ್‌ 23ರಂದು ಹೊರಡಿಸಿರುವ ವರ್ಗಾವಣೆ ಅಧಿಸೂಚನೆಯ ಪ್ರಕಾರ ನಾಲ್ಕು ಕೆಎಎಸ್‌ ಅಧಿಕಾರಿಗಳ ವರ್ಗಾವಣೆಗೆ ಸಕಾರಣಗಳಾಗಲೀ, ಈ ಸಂಬಂಧ ತೆರೆದಿರುವ ಕಡತದಲ್ಲಿಯೂ ಸಕಾರಣಗಳು, ವರ್ಗಾವಣೆಗೆ ಯಾವುದೇ ಸಮರ್ಥನೀಯ ಅಂಶಗಳಾಗಲೀ ಇಲ್ಲ. ಮತ್ತು ಅತಿ ವಿಶೇಷ ಸಂದರ್ಭವಿದೆ ಎಂಬ ಅಂಶವನ್ನೂ ಉಲ್ಲೇಖಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.

 

ಮಮತ ಹೊಸಗೌಡರ (2022 ಮೇ 9), ಪ್ರಮೋದ್‌ ಹೆಚ್‌ ಪಿ  (2023ರ ಮಾರ್ಚ್‌ 4), ಸೋಮಪ್ಪ ಕಡಕೋಳ (2023ರ ಮಾರ್ಚ್‌ 8), ಅಪೂರ್ವ ಬಿದರಿ (2023ರ ಮಾರ್ಚ್‌ 23) ರಂದು ಕ್ರಮವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ, ಬಿಡಿಎ ಉಪ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿತ್ತು.

 

ಮತ್ತೊಂದು ವಿಶೇಷವೆಂದರೇ ಮಮತಾ ಹೊಸಗೌಡರ ಅವರು ಕಾರ್ಯನಿರ್ವಹಿಸುತ್ತಿದ್ದ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ (ಧಾರವಾಡ) ಹುದ್ದೆಯನ್ನು ಕೆಎಎಸ್‌ ಹಿರಿಯ  ಶ್ರೇಣಿಯ ವೃಂದಕ್ಕೆ ಉನ್ನತೀಕರಿಸಿ ಹಾಗೇ ಮುಂದುವರೆಸಿ 2023ರ ಜೂನ್‌ 20ರಂದು ಸಿಆಸುಇ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆ ಹೊರಬಿದ್ದ ಮೂರೇ ಮೂರು ದಿನದಲ್ಲಿ ಮಮತಾ ಹೊಸಗೌಡರ ಅವರನ್ನು ಉನ್ನತೀಕರಿಸಿದ  ಹುದ್ದೆಯಿಂದಲೇ ಎತ್ತಂಗಡಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

 

ಆದರೆ ವರ್ಗಾವಣೆಗೊಂಡ ನಾಲ್ಕೇ ನಾಲ್ಕು ತಿಂಗಳಲ್ಲಿ ಈ ಅಧಿಕಾರಿಗಳನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ನವಲಗುಂದ ಶಾಸಕರ ಶಿಫಾರಸ್ಸಿನಂತೆ ಎತ್ತಂಗಡಿ ಮಾಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು 4 ಮಂದಿ ಕೆಎಎಸ್‌ ಅಧಿಕಾರಿಗಳನ್ನು ಅವಧಿಪೂರ್ವವಾಗಿ ವರ್ಗಾವಣೆಗೊಳಿಸಿ 2023ರ ಜೂನ್‌ 23ರಂದು ಆದೇಶ ಹೊರಡಿಸಿದ್ದರು.

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಧಾರವಾಡ) ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಮತಾ ಹೊಸಗೌಡರ ಜಾಗಕ್ಕೆ ನವೀನ ಹೆಚ್ ವಿ ಅವರನ್ನು ವರ್ಗಾಯಿಸಬೇಕು ಎಂದು ನವಲಗುಂದ ಶಾಸಕರು ಶಿಫಾರಸ್ಸು ಮಾಡಿದ್ದರು.

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

ಅದೇ ರೀತಿ ಬಿಡಿಎ ಉಪ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಸೋಮಪ್ಪ ಕಡಕೋಳ ಅವರ ಜಾಗಕ್ಕೆ ಉಮೇಶ್‌ ಡಿ ಎಸ್‌ ಎಂಬುವರನ್ನು ವರ್ಗಾವಣೆ ಮಾಡಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಮತ್ತು ಕೆಐಎಡಿಬಿ (ಬೆಂಗಳೂರು) ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದ ಅಪೂರ್ವ ಬಿದರಿ ಅವರ ಜಾಗಕ್ಕೆ ಕಿಶನ್‌ ಕಲಾಲ್‌ ಅವರನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿದ್ದರು.

 

 

 

 

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೆಎಡಿಬಿ (ಬೆಂಗಳೂರು) ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ನಾಲ್ವರು ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳು ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿಯೇ ಈ ನಾಲ್ಕು ಕೆಎಎಸ್ ಅಧಿಕಾರಿಗಳ ವರ್ಗಾವಣೆಯು ಅವಧಿಪೂರ್ವವಾಗಿತ್ತು .

 

 

ಅವಧಿಪೂರ್ವ ಎಂದಿದ್ದ ಡಿಪಿಎಆರ್‍‌ ಕಾರ್ಯದರ್ಶಿ

 

ಈ ನಾಲ್ಕು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಜೂನ್‌ 14ರಂದು ಮುಖ್ಯಮಂತ್ರಿಗಳ ಅನುಮೋದನೆಗೆ ಕಡತ ಮಂಡಿಸಿತ್ತು. ಈ ಕಡತವನ್ನು ಪರಿಶೀಲಿಸಿದ್ದ ಡಿಪಿಎಆರ್‍‌ ಕಾರ್ಯದರ್ಶಿ ಎಂ ಎಸ್‌ ಶ್ರೀಕರ್‍‌ ಅವರು ‘ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಡಿಸುವ ಕಡತ ಮಂಡಿಸಲಾಗಿದೆ. ಆದರೆ ಬಹುತೇಕ ಪ್ರಕರಣಗಳು ಅವಧಿಪೂರ್ವವಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿದ್ದರು. ಆದರೆ ಇದನ್ನು ಬದಿಗಿರಿಸಿ ಅವಧಿಪೂರ್ವ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು.

 

 

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದರು.

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರು. ವರ್ಗಾವಣೆ ಹಿಂದೆ ಇರುವವರು ಯಾರು ಆ ಅತೀಂದ್ರ ಎಂದು ಟ್ವೀಟ್‌ ಕೂಡ ಮಾಡಿದ್ದರು.

‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಜೂನ್‌ 30 ಕಡೇ ದಿನ ಎಂದು ಹೇಳಿದ್ದ ಸರ್ಕಾರವು ಕಡೇ ಗಳಿಗೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಇದೇ ಜುಲೈ 3ರವರೆಗೂ ವಿಸ್ತರಿಸಿರುವುದನ್ನು ಸ್ಮರಿಸಬಹುದು.

Hot this week

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...
Please Scan to make Your Contribution

Topics

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

Related Articles

Popular Categories

error: Content is protected !!