ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 5 ತಿಂಗಳಲ್ಲಿ 395 ಅಧಿಕಾರಿಗಳ ವರ್ಗಾವಣೆ; ಲಂಚ ಕೊಟ್ಟವರಿಗಷ್ಟೇ ಹುದ್ದೆ?

ಬೆಂಗಳೂರು; 2023-24ನೇ ಸಾಲಿನಲ್ಲಿ ಕೆಎಎಸ್‌ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ, ನೌಕರರ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಕಾಂಗ್ರೆಸ್‌ ಸರ್ಕಾರವು ಗುರಿಯಾಗಿರುವ ಬೆನ್ನಲ್ಲೇ ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದರಲ್ಲೇ ಕೇವಲ 5 ತಿಂಗಳಲ್ಲೇ 395 ಕ್ಕೂ ಹೆಚ್ಚು ಅಧಿಕಾರಿ ನೌಕರರ ವರ್ಗಾವಣೆ ಆಗಿರುವುದು ಇದೀಗ ಬಹಿರಂಗವಾಗಿದೆ.

 

ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿರುವ ವರ್ಗಾವಣೆಗಳ ಪೈಕಿ ಬಹುತೇಕ ವರ್ಗಾವಣೆ ಆದೇಶಗಳಿಗೆ ಪೂರ್ವಾನುಮೋದನೆಯಾಗಲೀ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಯೇ ಇಲ್ಲ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ಸರ್ಕಾರವು ವರ್ಗಾವಣೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ಸುತ್ತೋಲೆಯೇ ಈಗಲೂ ಚಾಲ್ತಿಯಲ್ಲಿದ್ದರೂ ಇದನ್ನೂ ಗಾಳಿಗೆ ತೂರಿ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಗೊತ್ತಾಗಿದೆ.

 

ಸಾರ್ವತ್ರಿಕ ವರ್ಗಾವಣೆ ಅವಧಿ ಪೂರ್ಣಗೊಂಡ ನಂತರ ಅದನ್ನು ಎರಡು ಬಾರಿ ವಿಸ್ತರಿಸಲಾಗಿತ್ತು. ಆ ಅವಧಿಯೂ ಮುಗಿದ ನಂತರ ಒಟ್ಟು 401 ಕ್ಕೂ   ಅಧಿಕಾರಿ ನೌಕರರ ವರ್ಗಾವಣೆ ಆಗಿವೆ.  ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಹಲವು ದಾಖಲೆಗಳು ಲಭ್ಯವಾಗಿವೆ.

 

ಸ್ವಂತ ವೇತನ ಶ್ರೇಣಿ ಮೇಲೆ ವರ್ಗಾವಣೆ ಮಾಡಲು ನಿಯಮಗಳಲ್ಲಿ ಅವಕಾಶವೇ ಇಲ್ಲದಿದ್ದರೂ ಜೂನ್‌ 2023ರಿಂದ ಅಕ್ಟೋಬರ್‍‌ ಅಂತ್ಯದವರೆಗೂ ಹೊರಡಿಸಿರುವ ಆದೇಶಗಳಲ್ಲಿಯೂ ಸ್ವಂತ ವೇತನ ಶ್ರೇಣಿ ಮೇಲೆಯೇ ಹಲವು ಅಧಿಕಾರಿಗಳನ್ನು  ವರ್ಗಾವಣೆ ಮಾಡಲಾಗಿದೆ. ಹಲವು ಅಧಿಕಾರಿ, ನೌಕರರಿಗೆ ಮುಂಬಡ್ತಿ ನೀಡಿದ್ದರೂ ಬಹುತೇಕರಿಗೆ ಇನ್ನೂ ಸ್ಥಳ ನಿಯುಕ್ತಿಗೊಳಿಸಿಲ್ಲ.

 

ಬದಲಿಗೆ ಮುಂಬಡ್ತಿ ನೀಡಿ ಹೊರಡಿಸಿರುವ ಆದೇಶಗಳಲ್ಲಿ ಹಲವು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗಾಗಿ ಕಾದಿರಿಸಿದೆ. ಕನಿಷ್ಠ 2 ಲಕ್ಷ ರು.ನಿಂದ ಗರಿಷ್ಠ 50 ಲಕ್ಷ ರು.ವರೆಗೂ ಲಂಚ ನೀಡಲಾಗಿದೆ.  ಮುಂಬಡ್ತಿ ನೀಡಿದ್ದರೂ ಲಂಚ ನೀಡಿಲ್ಲ ಎಂಬ ಕಾರಣಕ್ಕೆ ಹಲವು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿಲ್ಲ   ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

 

ಅದೇ ರೀತಿ   ಗ್ರೂಪ್‌ ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ ನೌಕರರನ್ನು ವರ್ಗಾವಣೆ ಮಾಡಲು ಇಲಾಖೆಯ ನಿರ್ದೇಶಕರಿಗೆ ಅಧಿಕಾರ ಇದೆ. ಈ ಬಾರಿ ಇದನ್ನು ಸಚಿವರಿಗೆ ಪ್ರತ್ಯಾಯೋಜಿಸಲಾಗಿದೆ. ಕಾರ್ಯದರ್ಶಿ ಮೂಲಕ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಬೆಕು. ಅನುಮೋದನೆ ಪಡೆದ ನಂತರ ಕಾರ್ಯದರ್ಶಿಯು ಆದೇಶ ಹೊರಡಿಸಬೇಕು.  ಆದರೆ ಈ ಬಾರಿ ಸಚಿವರೇ ಖುದ್ದು ಪಟ್ಟಿ ತಯಾರಿಸಿದ್ದಾರೆ. ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯದರ್ಶಿ ಮುಖಾಂತರ ಆದೇಶಗಳನ್ನು ಹೊರಡಿಸಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಗುರಿಯಾಗಿದ್ದಾರೆ.

 

2023ರ ಅಕ್ಟೋಬರ್‍‌ 18ರಂದು ಹೊರಡಿಸಿರುವ 49 ಮಂದಿ ಅಧಿಕಾರಿಗಳ ವರ್ಗಾವಣೆಗೆ ಸಾರ್ವಜನಿಕ ಹಿತದೃಷ್ಟಿ, ಅಥವಾ ಕೋರಿಕೆ ಎಂಬುದನ್ನು ಉಲ್ಲೇಖಿಸಿಲ್ಲ. ಒಬ್ಬ ಅಧಿಕಾರಿಯ ವರ್ಗಾವಣೆಯು ಸಾರ್ವಜನಿಕ ಹಿತದೃಷ್ಟಿ ಇದ್ದಲ್ಲಿ ಆರ್ಥಿಕ ಲಾಭಗಳಿರುತ್ತವೆ. ಪ್ರಯಾಣ ಮತ್ತು ದಿನ ಭತ್ಯೆ ನೀಡಬೇಕು. ವರ್ಗಾವಣೆ ಅನುದಾನ ಕನಿಷ್ಠ 10 ಸಾವಿರ ರು.ದಿಂದ 50 ಸಾವಿರ ರು.ವರೆಗೆ ಪಡೆಯಲು ಅವಕಾಶವಿದೆ. ಒಂದು ತಿಂಗಳ ವೇತನವನ್ನು ಮುಂಗಡವಾಗಿ ಪಡೆದು ಅದನ್ನು 10 ಕಂತುಗಳಲ್ಲಿ ಸರ್ಕಾರಕ್ಕೆ ಮರು ಪಾವತಿಸಬಹುದು ಎಂದು ಗೊತ್ತಾಗಿದೆ.

 

ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರಿಗೆ ಸಂಬಂಧಿಸಿದಂತೆ  2023ರ ಜೂನ್‌ 12ರಂದು 6, ಜೂನ್‌  28ರಂದು ಒಟ್ಟು 38  ಮಂದಿಯನ್ನು ವರ್ಗಾಯಿಸಲಾಗಿದೆ. 2023ರ ಜುಲೈ 3ರಂದು 42  ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಧೀಕ್ಷಕರು, ಹಿರಿಯ ಮೇಲ್ವಿಚಾರಕಿಯರು, ದ್ವಿತೀಯ ದರ್ಜೆ ಸಹಾಯಕರ ವರ್ಗಾವಣೆ ಮಾಡಲಾಗಿದೆ. 2023ರ ಜುಲೈ 7ರಂದು 6 ಮಂದಿ ಮೇಲ್ವಿಚಾರಕಿಯರು, ಜುಲೈ 10ರಂದು 39, ಜುಲೈ 13ರಂದು 61, ಜುಲೈ 14 ರಂದು  4, ಜುಲೈ 17ರಂದು 22, ಜುಲೈ 20ರಂದು 21, ಸೆ.8ರಂದು 99, ಅಕ್ಟೋಬರ್‍‌ 11ರಂದು 14, ಅಕ್ಟೋಬರ್‍‌ 18ರಂದು 49 ಅಧಿಕಾರಿಗಳ ವರ್ಗಾವಣೆ ಆದೇಶಗಳು ಹೊರಬಿದ್ದಿವೆ.

 

ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ, ನಿಯೋಜನೆಗೊಳಿಸುವುದನ್ನು ಸರ್ಕಾರವೇ ನಿರ್ಬಂಧಿಸಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹುದ್ದೆಗೆ ಹಲವು ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.

 

ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯನ್ನು (2023ರ ಸೆ.12) ಹೊರಡಿಸಿತ್ತು.

 

ಸುತ್ತೋಲೆಯಲ್ಲೇನಿತ್ತು?

 

ಯಾವುದೇ ಇಲಾಖೆಯಲ್ಲಿಯಾದರೂ ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು ನಿಯೋಜನೆಗೊಳಿಸುವುದನ್ನು ನಿರ್ಬಂಧಿಸಿದೆ. ಈ ಮೇಲಿನ ಸೂಚನೆಯನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು 2023ರ ಸೆ.12ರಂದೇ ಹೊರಡಿಸಿದ್ದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದರು.

 

 

ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೂವರು ಉಪ ನಿರ್ದೇಶಕರನ್ನು ಸ್ವಂತ ವೇತನ ಶ್ರೇಣಿ ಮೇಲೆ ವರ್ಗಾಯಿಸಿ 2023ರ ಅಕ್ಟೋಬರ್‍‌ 11ರಂದು ಅಧಿಸೂಚನೆ ಹೊರಡಿಸಿದೆ.

 

ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಬಸವರಾಜ ಜಿಗಳೂರು ಅವರನ್ನು ವಿಜಯಪುರ ಜಿಲ್ಲೆಯಲ್ಲಿ ಖಾಲಿ ಇದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ (ಸ್ವಂತ ವೇತನ ಶ್ರೇಣಿ) ವರ್ಗಾಯಿಸಲಾಗಿದೆ.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವರ್ಗಾವಣೆ; ಸುತ್ತೋಲೆ ಉಲ್ಲಂಘಿಸಿದ ಸಿಎಂ, ಸಚಿವೆ ಹೆಬ್ಬಾಳ್ಕರ್‍‌

 

ಅದೇ ರೀತಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಯಾದ ಶಿವಮೂರ್ತಿ ಕುಂಬಾರ ಅವರನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.

 

ಹಾಗೆಯೇ ತರೀಕೆರೆ ಯೋಜನೆಯ ಜ್ಯೋತಿ ಲಕ್ಷ್ಮಿ ಅವರನ್ನು ಹೊಳೆ ನರಸೀಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ( ಸ್ವಂತ ವೇತನ ಶ್ರೇಣಿ) ಹುದ್ದೆಗೆ ವರ್ಗಾಯಿಸಿರುವುದು ಅಧಿಸೂಚನೆಯಿಂದ ಗೊತ್ತಾಗಿದೆ.

 

 

ಅಲ್ಲದೇ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬೇರೆ ಇಲಾಖೆಯಿಂದ ನಿಯೋಜನೆಗೆ ಅವಕಾಶ ಕಲ್ಪಿಸದೇ ಇರುವ ಹುದ್ದೆಗಳಿಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿತ್ತು. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ನಿಯೋಜನೆ ಮೇಲೆ ಮುಂದುವರೆದಿರುವ ಅಧಿಕಾರಿ ನೌಕರರು ಒಂದು ವೇಳೆ ಗರಿಷ್ಠ ಐದು ವರ್ಷಗಳ ನಿಯೋಜನಾ ಅವಧಿಯನ್ನು ಪೂರ್ಣಗೊಳಿಸಿದ್ದಲ್ಲಿ ಹಾಗೂ ಸರ್ಕಾರದ ವಿಶೇಷ ಆದೇಶಗಳಿರದೇ ಸದರಿ ನಿಯೋಜನೆಯಲ್ಲಿ ಮುಂದುವರೆದಿದ್ದಲ್ಲಿ ಅಂತಹವರನನು ಮಾತೃ ಇಲಾಖೆಗೆ ಹಿಂದಿರುಗಿಸಲು ಕೂಡಲೇ ಕ್ರಮ ವಹಿಸಬೇಕು ಎಂದೂ ನಿರ್ದಶನ ನೀಡಲಾಗಿತ್ತು.

the fil favicon

SUPPORT THE FILE

Latest News

Related Posts