ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಮತ್ತು ಸಾಮಾಜಿಕ ಆರ್ಥಿಕ ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕಿದೆ ಎಂದು ಪ್ರತಿಪಾದಿಸಲಿರುವ ಕರ್ನಾಟಕ ಸರ್ಕಾರವು ಇದೀಗ ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡಬೇಕು ಎಂಬ ನಿರ್ಣಯವನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.
ಈಚೆಗಷ್ಟೇ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅದರಿಂದಾಗಿ ಒತ್ತಡ ಗುಂಪೊಂದು ಭಾರೀ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಸರ್ಕಾರವು ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿತ್ತು. ಈ ಬೆಳವಣಿಗೆ ನಡುವೆಯೇ ಕರ್ನಾಟಕ ಸರ್ಕಾರವು ಸಹ ನೀಟ್ ಪರೀಕ್ಷೆಯಿಂದ ವಿನಾಯಿತಿ ಕೋರುವ ನಿರ್ಣಯವನ್ನು ಮಂಡಿಸಲು ಸಿದ್ಧತೆ ನಡೆಸಿದೆ.
ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ಣಯವನ್ನು ಸಿದ್ಧಪಡಿಸಿದೆ. ಇದರ ಕರಡು ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ಈ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಪಡಿಸಬೇಕು ಎಂದು 2024ರಲ್ಲಿಯೂ ಕರ್ನಾಟಕ ಸರ್ಕಾರವು ನಿರ್ಣಯ ಕೈಗೊಂಡಿತ್ತು. ಇದೀಗ ಮಂಡಿಸಲಿರುವ ನಿರ್ಣಯದಲ್ಲಿ ವೈದ್ಯಕೀಯ ಪದವಿ ಶಿಕ್ಷಣಕ್ಕೆ ಪ್ರವೇಶ ನೀಡುವ ವಿಧಾನವು ರಾಜ್ಯದ ಶೈಕ್ಷಣಿಕ, ಸಾಮಾಜಿಕ-ಆರ್ಥಿಕ, ಮೀಸಲಾತಿ ಮತ್ತು ಆರೋಗ್ಯ ಕ್ಷೇತ್ರದ ಅಗತ್ಯಗಳಿಗೆ ಅನುಗಣವಾಗಿರಬೇಕು ಎಂಬ ಅಂಶವನ್ನೂ ಸಹ ಒಳಗೊಂಡಿದೆ.
ಪ್ರಸ್ತಾವಿತ ನಿರ್ಣಯದಲ್ಲೇನಿರಲಿದೆ?
ರಾಷ್ಟ್ರೀಯ ಅರ್ಹತಾ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಆಯೋಜನೆ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಪರೀಕ್ಷೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ವ್ಯಕ್ತವಾಗುತ್ತಿರುವ ಪ್ರಶ್ನೆಗಳು, ಅಕ್ರಮಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಉಂಟಾಗುತ್ತಿರುವ ಆತಂಕ ಮತ್ತು ಅನಿಶ್ಚತತೆಗಳನ್ನು ಈ ಸದನವು ಗಂಭೀರವಾಗಿ ಪರಿಗಣಿಸಲಿದೆ ಎಂದು ವಿವರಿಸಿದೆ.
ವೈದ್ಯಕೀಯ ಪದವಿ ಶಿಕ್ಷಣಕ್ಕೆ ಪ್ರವೇಶ ನೀಡುವ ವಿಧಾನವು ರಾಜ್ಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಮೀಸಲಾತಿ ಮತ್ತು ಮತ್ತು ಆರೋಗ್ಯ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿರಬೇಕು ಎಂಬುದು ಸದನದ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019 ಹಾಗೂ ಅಗತ್ಯವಿರುವ ಇತರೆ ಸಂಬಂಧಿತ ಕೇಂದ್ರ ಅಧಿನಿಯಮಗಳು ಮತ್ತು ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡುವ ಮೂಲಕ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ ಕಡ್ಡಾಯ ಅನ್ವಯದಿಂದ ಕರ್ನಾಟಕ ರಾಜ್ಯಕ್ಕೆ ವಿನಾಯಿತಿ ನೀಡಬೇಕು. ಕರ್ನಾಟಕ ರಾಜ್ಯವು ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ತನ್ನದೇ ಆದ ಪಾರದರ್ಶಕ, ಅರ್ಹತೆ ಆಧಾರಿತ ಮತ್ತು ರಾಜ್ಯದ ಅಗತ್ಯಗಳಿಗೆ ಅನುಗುಣವಾದ ಪ್ರವೇಶ ವ್ಯವಸ್ಥೆ ಜಾರಿಗೊಳಿಸಲು ಅವಕಾಶ ಕಲ್ಪಿಸಬೇಕು ಎಂದು ಭಾರತ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ ಎಂದು ನಿರ್ಣಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕರ್ನಾಟಕ ರಾಜ್ಯದ ಪರ್ಯಾಯ ಪ್ರವೇಶ ವ್ಯವಸ್ಥೆಯಲ್ಲಿ ದ್ವಿತೀಯ ಪಿಯುಸಿ/12ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳು/ ಅಥವಾ ರಾಜ್ಯ ಸರ್ಕಾರವು ನಿರ್ಧರಿಸುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆ ಅಂಕಗಳನ್ನು ಪರಿಗಣಿಸಲು ಅವಕಾಶ ಕಲ್ಪಿಸಬೇಕು ಎಂದು ಈ ಸದನವು ಭಾರತ ಸರ್ಕಾರವನ್ನು ಕೋರಬೇಕು ಎಂದು ನಿರ್ಣಯದಲ್ಲಿ ಸೇರಿಸಿದೆ. ಅದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟ, ವೈದ್ಯಕೀಯ ಅರ್ಹತಾ ಮಾನದಂಡಗಳು, ಪಠ್ಯಕ್ರಮ, ಬೋಧಕ ಸಿಬ್ಬಂದಿ, ಮೂಲಸೌಕರ್ಯ ಹಾಗೂ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ರಾಷ್ಟ್ರೀಯ ಮಾನದಂಡಗಳು ಕಾಪಾಡಲು ಅನುಗುಣವಾಗಿ ಅಗತ್ಯ ಕಾನೂನು ಮತ್ತು ನಿಯಂತ್ರಣಾತ್ಮಕ ವ್ಯವಸ್ಥೆಯನ್ನು ಮುಂದುವರಿಸಬೇಕು ಈ ಸದನವು ಒತ್ತಾಯಿಸಲಿದೆ ಎಂದು ನಿರ್ಣಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಹಿತಾಸಕ್ತಿ ಹಾಗೂ ರಾಜ್ಯದ ವೈದ್ಯಕೀಯ ಮಾನವ ಸಂಪನ್ಮೂಲಗದ ಅವಶ್ಯಕತೆಗಳನ್ನು ಪರಿಗಣಿಸಿ ಈ ಉದ್ದೇಶಗಳನ್ನು ಸಾಧಿಸಲು ಅಗತ್ಯವಿರುವ ಕೇಂದ್ರ ಶಾಸನಾತ್ಮಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಈಗಾಗಲೇ 2024ರ ಜುಲೈ 25ರಂದೇ ನಿರ್ಣಯ ಅಂಗೀಕರಿಸಿದೆ. ಅಲ್ಲದೇ 2024ರ ಸೆ.5ರಂದೇ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ರವಾನಿಸಿದೆ. ಆ ಪತ್ರದಲ್ಲಿನ ಮನವಿಯನ್ನೇ ಪುನರುಚ್ಛರಿಸಲಿದೆ. ಹಾಗೆಯೇ ಇತ್ತೀಚಿನ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ಪರೀಕ್ಷಾ ಅಕ್ರಮಗಳು ಮತ್ತು ವಿದ್ಯಾರ್ಥಿಗಳು, ಪೋಷಕರಲ್ಲಿನ ಆತಂಕವನ್ನು ಪರಿಗಣಿಸಿ ಕರ್ನಾಟಕ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ನೀಡಬೇಕು. ಈ ಕುರಿತು ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಮನವಿ ಸಲ್ಲಿಸಲು ಸಿದ್ದತೆ ನಡೆಸಿದೆ.
ಭಾರತ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗೂ ಅಗತ್ಯವಿರುವ ಇತರೆ ಸಂಬಂಧಿತ ಪ್ರಾಧಿಕಾರಗಳಿಗೆ ಪತ್ರ ರವಾನಿಸಲಿದೆ. ಕರ್ನಾಟಕ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ನೀಡಲು ಅಗತ್ಯವಿರುವ ಕೇಂದ್ರ ಶಾಸನಾತ್ಮಕ ಮತ್ತು ನಿಯಂತ್ರಣಾತ್ಮಕ ಕ್ರಮ ಕೈಗೊಳ್ಳುಲು ನಿರ್ಣಯ ಕೈಗೊಳ್ಳಲಿದೆ.
ಈ ನಿರ್ಣಯದ ಕಾನೂನುಬದ್ಧತೆ, ಸಂವಿಧಾನಾತ್ಮಕ ಅಂಶಗಳು ಮತ್ತು ಕೇಂದ್ರ ಅಧಿನಿಯಮಗಳಿಗೆ ಅಗತ್ಯವಿರುವ ತಿದ್ದುಪಡಿಗಳ ಕುರಿತು ಅಭಿಪ್ರಾಯ ಪಡೆಯಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ಇಲಾಖೆಗೆ ಕಳಿಸಲು ಇಲಾಖೆಯು ತಯಾರಿ ನಡೆಸಿರುವುದು ಗೊತ್ತಾಗಿದೆ.
ವಿನಾಯಿತಿ ಕೋರಿಕೆ- ಪ್ರತಿಪಾದನೆಯಲ್ಲಿ ಏನಿರಲಿದೆ?
ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡಬೇಕು ಎಂದು ನಿರ್ಣಯ ಮಂಡಿಸಲಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಹಲವು ಪ್ರತಿಪಾದನೆಗಳನ್ನು ಮಾಡಿದೆ.
ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಬೇಕು. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು. ರಾಜ್ಯದಲ್ಲಿ ಜಾರಿಯಲ್ಲಿರುವ ಮೀಸಲಾತಿ ನೀತಿ ಮತ್ತು ಸಾಮಾಜಿಕ ನ್ಯಾಯದ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಸುವುದು, ರಾಜ್ಯದ ವೈದ್ಯಕೀಯ ಮಾನವ ಸಂಪನ್ಮೂಲದ ಅಗತ್ಯಗಳಿಗೆ ಅನುಗುಣವಾಗಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆ ರೂಪಿಸುವುದು ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಬೇಕು ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಿರುವುದು ಗೊತ್ತಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಶವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿಶೇಷ ಅಗತ್ಯಗಳಿಗೆ ಅನುಗುಣವಾಗಿ ವೈದ್ಯಕೀಯ ಪದವಿ ಪ್ರವೇಶ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಕರ್ನಾಟಕಕ್ಕೆ ಕಾನೂನುಬದ್ಧ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ವಿವರಿಸಲಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವುದರ ಉದ್ದೇಶವು ಕೇಂದ್ರ ಅಧಿನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು ಮತ್ತು ಕರ್ನಾಟಕ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ನೀಡಲು ಭಾರತ ಸರ್ಕಾರ ಮತ್ತು ಸಂಸತ್‌ನ್ನು ಒತ್ತಾಯಿಸಬೇಕು ಎಂಬ ಅಂಶವು ನಿರ್ಣಯದಲ್ಲಿರಲಿದೆ ಎಂದು ಗೊತ್ತಾಗಿದೆ.
ಪದವಿ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರಿಚಯಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಮಂಡಳಿಯು 2010ರ ಡಿಸೆಂಬರ್ 21ರಂದು ಪದವಿ ವೈದ್ಯಕೀಯ ಶಿಕ್ಷಣ ನಿಯಮಗಳು (ತಿದ್ದುಪಡಿ) 2010ಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿತ್ತು. ನಂತರ 2012ರ ಫೆ.15ರಂದು ಈ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತಷ್ಟು ತಿದ್ದುಪಡಿಗಳನ್ನು ತಂದಿತ್ತು.
ನಂತರ ನೀಟ್ ಪರೀಕ್ಷೆ ಆಯೋಜನೆಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಈ ನ್ಯಾಯಾಂಗ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ನೀಟ್ ವ್ಯವಸ್ಥೆಯು ದೇಶದಾದ್ಯಂತ ಜಾರಿಗೆ ಬಂದಿತ್ತು. ಕರ್ನಾಟಕ ರಾಜ್ಯದಲ್ಲಿ 2017ರಿಂದ ನಿಟ್ ಆಧಾರಿತ ವೈದ್ಯಕೀಯ ಪ್ರವೇಶ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕೂ ಮೊದಲು ಸರ್ಕಾರಿ ಕೋಟಾ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಮ್ಯಾನೇಜ್‌ಮೆಂಟ್ ಸೀಟುಗಳಿಗೆ ಸಂಬಂಧಿಸಿದಂತೆ ಕಾಮೆಡ್ ಕೆ ಪರೀಕ್ಷೆ ಆಧಾರದ ಮೇಲೆ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು.
ನೀಟ್ ಪರೀಕ್ಷೆ ಆತಂಕಗಳೇನು?
ನೀಟ್ ಪರೀಕ್ಷೆಯ ಆಯೋಜನೆ ಮತ್ತು ಅದರಲ್ಲಿನ ಪಾರದರ್ಶಕತೆ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಹಾಗೂ ಇತರೆ ಅಸಮರ್ಪಕತೆಗಳ ಕುರಿತು ಕಾಲಾನುಕಾಲಕ್ಕೆ ಪ್ರಶ್ನೆಗಳು ಉದ್ಭವಿಸಿವೆ. ಇಂತಹ ಬೆಳವಣಿಗೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮತ್ತು ಅನಿಶ್ಚತತೆ ಉಂಟಾಗಿದೆ. ಅಲ್ಲದೇ ದೇಶಾದಾದ್ಯಮತ ಒಂದೇ ರೀತಿಯ ವೈದ್ಯಕೀಯ ಪ್ರವೇಶವನ್ನು ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾದ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೂ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕರ್ನಾಟಕ ಸರ್ಕಾರವು ತನ್ನ ನಿರ್ಣಯದಲ್ಲಿ ಆತಂಕ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
‘ಆದ್ದರಿಂದ ಇತ್ತೀಚಿನ ನೀಟ್ ಪರೀಕ್ಷೆ ಸಂದರ್ಭದಲ್ಲಿ ವ್ಯಕ್ತವಾಗಿರುವ ವಿವಿಧ ಅಕ್ರಮಗಳು ಮತ್ತು ಪರೀಕ್ಷಾ ಪ್ರಕ್ರಿಯೆಯ ಕುರಿತು ಉದ್ಭವಿಸಿರುವ ಪ್ರಶ್ನೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ವೈದ್ಯಕೀಯ ಪದವಿ ಪ್ರವೇಶಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ ಏಕರೂಪದ ನೀಟ್ ವ್ಯವಸ್ಥೆಯನ್ನು ಮರುಪರಿಶೀಲಿಸುವುದು ಅಗತ್ಯವೆಂದು ಪರಿಗಣಿಸಬಹುದು,’ ಎಂದು ವಿವರಿಸಲಿದೆ.
ಪರ್ಯಾಯ ಪ್ರವೇಶ ವ್ಯವಸ್ಥೆ ಏನಿರಬೇಕು?
ಕರ್ನಾಟಕ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ದೊರೆತಲ್ಲಿ ರಾಜ್ಯ ಸರ್ಕಾರವು ಪಾರದರ್ಶಕ ಮತ್ತು ಅರ್ಹತೆ ಆಧಾರಿತ ವೈದ್ಯಕೀಯ ಪ್ರವೇಶ ವ್ಯವಸ್ಥೆಯನ್ನು ರೂಪಿಸಬಹುದಾಗಿದೆ ಎಂದು ಕರ್ನಾಟಕ ಸರ್ಕಾರವು ಪ್ರತಿಪಾದನೆಯನ್ನು ಮುಂದಿರಿಸಲಿದೆ. ದ್ವಿತೀಯ ಪಿಯುಸಿ/12ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಆಧಾರವಾಗಿಟ್ಟುಕೊಂಡು ಪ್ರವೇಶ ನೀಡಬೇಕು. ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದದಿಂದ ರಾಜ್ಯಮಟ್ಟದ ಪ್ರತ್ಯೇಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿ ಅಲ್ಲಿ ಗಳಿಸುವ ಅಂಕಗಳ ಅಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡುವ ಆಯ್ಕೆಯನ್ನು ಪರಿಶೀಲಿಸಬಹುದು ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಿದೆ.
ಅದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಗುಣಮಟ್ಟ, ವೈದ್ಯಕೀಯ ಆರ್ಹತಾ ಮಾನದಂಡಗಳು, ಪಠ್ಯಕ್ರಮ, ಬೋಧಕ ಸಿಬ್ಬಂದಿ, ಮೂಲಸೌಕರ್ಯ ಮತ್ತು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ರಾಷ್ಟ್ರೀಯಮಟ್ಟದ ಮಾನದಂಡಗಳು ಮುಂದುವರಿಯುವಂತೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬಹುದು ಎಂದು ವಿವರಿಸಲಿದೆ.
ಕಾನೂನುಬದ್ಧ ಅಂಶವೇನು?
ನೀಟ್ ಪರೀಕ್ಷೆಯಿಂದ ವಿನಾಯಿತಿ ಕೋರಲಿರುವ ರಾಜ್ಯ ಸರ್ಕಾರವು ಇದಕ್ಕೆ ಕಾನೂನುಬದ್ಧ ಅಂಶಗಳನ್ನು ಗುರುತಿಸಿದೆ. ಪ್ರಸ್ತುತ ವೈದ್ಯಕೀಯ ಪದವಿ ಶಿಕ್ಷಣದ ಪ್ರವೇಶಕ್ಕೆ ನೀಟ್ ವ್ಯವಸ್ಥೆ ಕೇಂದ್ರ ಶಾಸನ ಮತ್ತು ರಾಷ್ಟ್ರೀಯ ನಿಯಂತ್ರಣಾತ್ಮಾಕ ಚೌಕಟ್ಟಿನ ಅಡಿಯಲ್ಲಿ ಜಾರಿಯಲ್ಲಿದೆ. ಕಾರ್ನಟಕ ವಿಧಾನಸಭೆಯ ನಿರ್ಣಯವನ್ನು ಅಂಗೀಕರಿಸುವುದರಿಂದ ಮಾತ್ರ ರಾಜ್ಯಕ್ಕೆ ಸ್ವಯಂಚಾಲಿತವಾಗಿ ನೀಟ್‌ನಿಂದ ಕಾನೂನುಬದ್ಧ ವಿನಾಯಿತಿ ದೊರೆಯುವುದಿಲ್ಲ ಎಂಬ ಸಂಗತಿಯನ್ನು ಮನವರಿಕೆ ಮಾಡಿಕೊಂಡಿರುವುದು ಮಂಡಿಸಲಿರುವ ನಿರ್ಣಯದಿಂದ ತಿಳಿದು ಬಂದಿದೆ.
ಆದ್ದರಿಂದ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವುದರ ಉದ್ದೇಶವು ಕೇಂದ್ರ ಅಧಿನಿಯಮಗಳಲ್ಲಿ ಅಗತ್ಯ ತಿದ್ದುಪಡಿಗಳನ್ನುಮಾಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ನೀಡಲು ಭಾರತ ಸರ್ಕಾರ, ಸಂಸತ್‌ನ್ನು ಒತ್ತಾಯಿಸುವಂತಿರಬೇಕು ಎಂದು ವಿವರಿಸಿದೆ. ಹೀಗಾಗಿ ಈ ಅಂತಿಮ ನಿರ್ಣಯದ ಕರಡನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಕಾನೂನು ಹಾಗೂ ಸಂವಿಧಾನಾತ್ಮಕ ಅಭಿಪ್ರಾಯಪಡೆದು ಅಂತಿಮಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡಿದ್ದ ನಿರ್ಣಯದಲ್ಲೇನಿತ್ತು?
ತಮಿಳುನಾಡು ವಿಧಾಸಭೆಯು 2026ರ ಆಗಸ್ಟ್ 11ರಂದು ನೀಟ್ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತ್ತು. ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019 ಸೇರಿದಂತೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಅಧಿನಿಯಮಗಳಿಗೆ ಅಗತ್ಯ ತಿದ್ದುಪಡಿ ತರಲು ಒತ್ತಾಯಿಸಿತ್ತು. ವೈದ್ಯಕೀಯ ಪದವಿ ಶಿಕ್ಷಣ ಪ್ರವೇಶಕ್ಕಾಗಿ ದೇಶವ್ಯಾಪಿ ಏಕರೂಪವಾದ ನೀಟ್ ಪರೀಕ್ಷೆ ಕೈಬಿಟ್ಟು ಆಯಾ ರಾಜ್ಯಗಳ ಶೈಕ್ಷಣಿಕ ವ್ಯವಸ್ಥೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಪರ್ಯಾಯ ಪ್ರವೇಶ ವ್ಯವಸ್ಥೆಯನ್ನು ಕಲ್ಪಿಸಲು ಭಾರತ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಂಡಿತ್ತು.
ಕರ್ನಾಟಕ ರಾಜ್ಯವು ಸಹ ತನ್ನ ಹಿಂದಿನ ನಿಲುವನ್ನು ಪುನರುಚ್ಚರಿಸಬೇಕು. ಮತ್ತು ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕಕ್ಕೆ ನೀಟ್‌ನಿಂದ ವಿನಾಯಿತಿ ನೀಡಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸಬೇಕು ಎಂಬ ಅಂಶವನ್ನು ನಿರ್ಣಯದಲ್ಲಿ ಸೇರಿಸಲಿದೆ.
ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್ ಪರೀಕ್ಷೆ ರದ್ದುಗೊಳಿಸುವ ಮಹತ್ವದ ನಿರ್ಣಯವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ 2024ರರಲ್ಲೇ ಅಂಗೀಕರಿಸಿತ್ತು. ಕೇಂದ್ರದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ್ದರು. ಈ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು.




