ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

ಬೆಂಗಳೂರು; 197 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ  ದೋಷಾರೋಪ ಪಟ್ಟಿಯಲ್ಲಿ ಎರಡನೇ ಆರೋಪಿಯಾಗಿರುವ ನಾರಾಯಣಸ್ವಾಮಿ ಎಂಬುವರ ವಿರುದ್ಧದ ನಂಬಿಕೆ ದ್ರೋಹ, ಅಂಕಗಳನ್ನು ತಿದ್ದಿರುವುದು, ನಿರ್ದಿಷ್ಟ ಅಭ್ಯರ್ಥಿಗಳಿಗೆ  ಹೆಚ್ಚಾಗಿ ಅಂಕಗಳನ್ನು ನೀಡಿರುವುದು, ಪ್ರಾಮಾಣಿಕ ಅಭ್ಯರ್ಥಿಗಳಿಗೆ ವಂಚನೆ ಎಸಗಿರುವುದು ಸೇರಿದಂತೆ ಹಲವು ಆರೋಪಗಳು ತನಿಖೆಯಲ್ಲಿ ರುಜುವಾತಾಗಿದ್ದರೂ  ಕಾಂಗ್ರೆಸ್‌ ಸರ್ಕಾರವು ಇದೀಗ ನಾರಾಯಣಸ್ವಾಮಿ ಅವರನ್ನೇ  ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಆಡಳಿತಾಧಿಕಾರಿ ಹುದ್ದೆಗೆ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.

 

ಕಳಂಕಿತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ನೀಡುತ್ತಿರುವ ಪ್ರಕರಣಗಳ ಕುರಿತು ಪ್ರತಿಪಕ್ಷಗಳು ಟೀಕೆ ಗುರಿಮಾಡಿರುವ ಬೆನ್ನಲ್ಲೇ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರು ಅಧಿಕಾರ ವಹಿಸಿಕೊಂಡ ತಿಂಗಳೊಳಗೇ ನಾರಾಯಣಸ್ವಾಮಿ ಅವರನ್ನು ಪುನಃ ಅದೇ ಜಾಗಕ್ಕೆ ವರ್ಗಾವಣೆ ಮಾಡಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

 

ವಿಶೇಷವೆಂದರೇ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ತನಿಖೆಯಲ್ಲಿ ರುಜುವಾತಾಗಿದ್ದರಿಂದಾಗಿ  59 ಎಪಿಪಿಗಳನ್ನು ಒಮ್ಮೆಲೆ ಹಿಂದಿನ ರಾಜ್ಯ ಸರ್ಕಾರ ಅಮಾನುತಗೊಳಿಸಿ ಆದೇಶಿಸಿತ್ತು. ಅಲ್ಲದೆ ಈ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ.

 

 

ಅಲ್ಲದೇ ಈ ಅಕ್ರಮ ಕುರಿತಂತೆ ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ ಎರಡನೇ ಆರೋಪಿಯಾಗಿರುವ ನಾರಾಯಣಸ್ವಾಮಿ ಅವರನ್ನು ಪುನಃ ಅದೇ ಇಲಾಖೆಯ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವುದು ಸಾಕ್ಷ್ಯಾಧಾರಗಳ ನಾಶಕ್ಕೆ ಕಾರಣವಾಗಬಹುದು ಎಂಬ ಅನುಮಾನಗಳೂ ವ್ಯಕ್ತವಾಗಿವೆ.

 

 

 

 

ಉತ್ತರಪತ್ರಿಕೆಗಳಲ್ಲಿ ಮೌಲ್ಯಮಾಪಕರು ನೈಜವಾಗಿ ನೀಡಿದ್ದ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಿ ಅಂಕಗಳನ್ನು ತಿದ್ದುವ ಮೂಲಕ ಹಾಗೂ ಮೌಲ್ಯಮಾಪಕರು ಮೌಲ್ಯಮಾಪನ ಮಾಡದೇ ಇದ್ದರೂ ಕೆಲವು ಉತ್ತರಪತ್ರಿಕೆಗಳಲ್ಲಿ ಅಭ್ಯರ್ಥಿಗಳಿಂದ ಬದಲಿ ಉತ್ತರಗಳನ್ನು ಬರೆಯಿಸಿ ನಕಲು ಮೌಲ್ಯಮಾಪನ ಸೇರಿದಂತೆ ಇನ್ನಿತರೆ  ಅಕ್ರಮಗಳು ನಡೆದಿದ್ದವು.

 

ನಾರಾಯಣಸ್ವಾಮಿ ವಿರುದ್ಧದ ಆರೋಪ ಪಟ್ಟಿ

 

2ನೇ ಆರೋಪಿಯಾಗಿದ್ದ ನಾರಾಯಣಸ್ವಾಮಿ ಅವರು ಒಂದನೇ ಆರೋಪಿಯ ಅಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ 1ನೇ ಆರೋಪಿಯ ನಿಯಂತ್ರಣದಲ್ಲಿದ್ದ ಉತ್ತರ  ಪತ್ರಿಕೆಗಳಲ್ಲಿ ಕೆಲ ನಿರ್ದಿಷ್ಟ ಅಭ್ಯರ್ಥಿಗಳಿಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳಲ್ಲಿ 1ನೇ ಆರೋಪಿಯ ಜತೆಗೋಡು ಸಮಾನ ಉದ್ಧೇಶದಿಂದ ತಾನು ಅಂಕಗಳನ್ನು ತಿದ್ದು, ಮೌಲ್ಯಮಾಪಕರ ಬರವಣಿಗೆಗಳನ್ನು ಮತ್ತು ಸಹಿಗಳನ್ನು ನಕಲು ಮಾಡಿರುವ ಆರೋಪವಿದೆ.

 

ಮೌಲ್ಯಮಾಪಕರು ಆಂಗ್ಲಭಾಷೆಯಲ್ಲಿ ಬರೆದಿರುವ ಅಂಕಗಳನ್ನು ತಿದ್ದಿ ಹೊಡೆದು ಹಾಕಿ ಬೇರೆ ಬರೆದು ಪರೀಕ್ಷಾ ಕೊಠಡಿಯ ಕೆಲವು ಮೇಲ್ವಿಚಾರಕರ ಸಹಿಗಳನ್ನು ನಕಲು ಮಾಡಿ ಕೆಲವು ಉತ್ತರ ಪತ್ರಿಕೆಗಳನ್ನು ಬದಲಾಯಿಸಿದ್ದರು. ಕೆಲವು ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದಂತೆ ನಕಲು ಮಾಡಿ ಉತ್ತರ ಪತ್ರಿಕೆಗಳ ಮೂಲ ಬುಕ್‌ಲೆಟ್‌ನ ಸ್ಟ್ರೆಪ್ಲರ್‍‌ ಪಿನ್‌ಗಳನ್ನು ಬದಲಾಯಿಸಿ ಉತ್ತರ ಪತ್ರಿಕೆಗಳ ಮುಖಪುಟವನ್ನು ಬದಲಾಯಿಸಿ ನಿಗದಿಪಡಿಸಿದ್ದ ಅಂಕಗಳಿಗಿಂತ ಹೆಚ್ಚಾಗಿ ಅಂಕಗಳನ್ನು ಬರೆದು ಕೆಲವು ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರು ನೀಡಿರುವ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಬರೆದು ಮೌಲ್ಯಮಾಪಕರು ಒಳಪುಟಗಳಲ್ಲಿ ನೀಡಿರುವ ಅಂಕಗಳನ್ನು ಮುಖಪುಟದಲ್ಲಿ ಅಂಕಗಳನ್ನು ಹೆಚ್ಚು ಕಡಿಮೆ ಮಾಡಿ ಬರೆದಿರುತ್ತಾರೆ ಎಂದು ಲೋಕಾಯುಕ್ತ ತನಿಖೆಯಿಂದ ತಿಳಿದು ಬಂದಿದೆ.

 

ಅಲ್ಲದೇ ‘ಈ ರೀತಿ ತಮಗೆ ಬೇಕಿದ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಕೂಲವಾಗುವಂತೆ ಅಪ್ರಮಾಣಿಕವಾಗಿ ಮತ್ತು ಮೋಸದಿಂದ ಉತ್ತರ ಪತ್ರಿಕೆಗಳನ್ನು ಆರೋಪಿಯ ಸಹಕಾರದೊಂದಿಗೆ ದುರುಪಯೋಗಪಡಿಸಿಕೊಂಡು ಅವರ ಸ್ವಂತ ಉಪಯೋಗಕ್ಕಾಗಿ ಪರಿವರ್ತಿಸಿಕೊಂಡು ಉತ್ತರ ಪತ್ರಿಕೆಗಳನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಿಂದ ಕಂಡು ಬಂದಿದೆ,’ ಎಂದು ಲೋಕಾಯುಕ್ತ ವರದಿಯಲ್ಲಿ ವಿವರಿಸಲಾಗಿದೆ.

 

 

ಪ್ರಾಮಾಣಿಕವಾಗಿ ಆಯ್ಕೆಯಾಗಬೇಕಿದ್ದ ಅಭ್ಯರ್ಥಿಗಳು ಆಯ್ಕೆಯಾಗದಿರುವಂತೆ ಅವರಿಗೆ ಹಾನಿಯನ್ನುಂಟು ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ತಮಗೆ ಬೇಕಾದ ನಿರ್ದಿಷ್ಟ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ತಿದ್ದುಪಡಿ ಮಾಡಲಾದ ಉತ್ತರ ಪತ್ರಿಕೆಗಳನ್ನು ನೈಜ ಉತ್ತರ ಪತ್ರಿಕೆಗಳೆಂದು ನಂಬಿಸುವ ಉದ್ದೇಶದಿಂದ ಕೆಲ ಉತ್ತರ ಪತ್ರಿಕೆಗಳನ್ನು ಸುಳ್ಳು ಸ್ಪಷ್ಟನೆ  ಮಾಡಲಾಗಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

 

ಸಾಮಾನ್ಯ ಕಾನೂನುಬದ್ಧ ಪ್ರಕ್ರಿಯೆಯಲ್ಲಿ ಜೇಷ್ಠತೆಯಲ್ಲಿ ಆಯ್ಕೆಯಾಗಬೇಕಿದ್ದ ಅಭ್ಯರ್ಥಿಗಳಿಗೆ ಮೋಸ ಮಾಡ ಕಾನೂನುಬಾಹಿರ ಮಾರ್ಗದಿಂದ ನಿರ್ದಿಷ್ಟ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ಮಾಡಿ ಆಯ್ಕೆಯಾಗುವಂತೆ ಮಾಡುವ ಮೂಲಕ ವಂಚನೆ ಮಾಡಲಾಗಿತ್ತು.

 

2ನೇ ಆರೋಪಿಯು ಲೋಕ ನೌಕರರಿದ್ದು ಉತ್ತರ ಪತ್ರಿಕೆಗಳನ್ನು ಅಪ್ರಾಮಾಣಿಕವಾಗಿ ದುರ್ವಿನಿಯೋಗಪಡಿಸಿಕೊಂಡು ಅದನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸಿ ಕೊಂಡು ಅಪರಾಧಿಕ ನಂಬಿಕೆ ದ್ರೋಹ ಎಸಗಿರುವುದು ತನಿಖೆ ವೇಳೆ ಕಂಡು ಬಂದಿತ್ತು.

 

ಆಯ್ಕೆ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕಾಗಿದ್ದ ಕೋಡಿಂಗ್ ಮತ್ತು ಡಿ-ಕೋಡಿಂಗ್‌ ರಿಜಿಸ್ಟರ್‍‌ ಮತ್ತು ಮೌಲ್ಯಮಾಪಕರುಗಳಿಗೆ ಉತ್ತರ ಪತ್ರಿಕೆಗಳನ್ನು ಹಂಚಿಕೆ ಮಾಡಿದ್ದ ಬಗ್ಗೆ ನಮೂದಿಸಿದ್ದ ರಿಜಿಸ್ಟರ್‍‌ಗಳನ್ನು ಸಾಕ್ಷ್ಯ ನಾಶ ಮಾಡುವ ಉದ್ಧೇಶದಿಂದ ರಿಜಿಸ್ಟರ್‍‌ಗಳನ್ನು ನಾಶ ಮಾಡಿದ್ದಾರೆ. ತಿದ್ದುಪಡಿ ಮಾಡುವ ಪೂರ್ವದಲ್ಲಿ ಇದ್ದಂತಹ ಕೆಲವು ಮೂಲ ಉತ್ತರ ಪತ್ರಿಕೆಗಳನ್ನು ಅಪರಾಧವನ್ನು ಮರೆಮಾಚುವ ಉದ್ದೇಶದಿಂದ ನಾಶಪಡಿಸಿರುತ್ತಾರೆ. ಮುಖ್ಯ ಪರೀಕ್ಷೆಯ ನಂತರ ಉಳಿದಿದ್ದ ಖಾಲಿ ಮೂಲ ಉತ್ತರ ಪತ್ರಿಕೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪಡೆದು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಿಂದ ಕಂಡು ಬಂದಿತ್ತು ಎಂದು ತನಿಖಾ ವರದಿಯಿಂದ ಗೊತ್ತಾಗಿದೆ.

 

59 ಎಪಿಪಿಗಳ ಅಮಾನತು; ವಕೀಲ ರವಿ, ಎಸ್‌ ಆರ್‌ ಹಿರೇಮಠ್‌ ಕಾನೂನು ಹೋರಾಟ ಫಲಪ್ರದ

‘ಅಕ್ರಮದಲ್ಲಿ ಭಾಗಿ ಆಗಿದ್ದ ಎಲ್ಲಾ ಆರೋಪಿತರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಗಳನ್ನು ಸಮರ್ಥಿಸುವ ಮೇಲ್ನೋಟದ ಸಾಕ್ಷ್ಯಗಳು ಇದೆ ಎಂಬುದನ್ನು ಮನದಟ್ಟಾಗಿರುವುದರಿಂದ ಇವರನ್ನು ಸೇವೆಯಲ್ಲಿ ಮುಂದುವರೆಸುವುದು ಸಮಂಜಸವಲ್ಲವೆಂದು ಸರ್ಕಾರವು ಭಾವಿಸಿದೆ,’ ಎಂದು 2020ರ ಮಾರ್ಚ್‌ 20ರಂದು  ಒಳಾಡಳಿತ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿತ್ತು.

 

 

 

 

ಈ ಅಕ್ರಮಗಳನ್ನು ಪತ್ತೆ ಹಚ್ಚಿದ್ದ ತೀರ್ಥಹಳ್ಳಿ ಮೂಲದ ಎಚ್‌ ಟಿ ರವಿ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಗೆ ಸೆಷನ್ಸ್‌ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟಸ್ವಾಮಿ ನೇತೃತ್ವದ ತಂಡ  ತನಿಖೆ ನಡೆಸಿತ್ತಲ್ಲದೆ ಅಕ್ರಮಗಳನ್ನು ದಾಖಲೆಗಳ ಮೂಲಕ  ದೃಢಪಡಿಸಿತ್ತು. ಅಲ್ಲದೇ ಅಮಾನತಾಗಿದ್ದ ಎಪಿಪಿಗಳ ಪರವಾಗಿ ಅಧಿಕಾರಿಗಳ ಸಂಘವು ಸಮರ್ಥನೆಗಿಳಿದಿತ್ತು.

 

 

ಅಮಾನತಾಗಿರುವ ಎಪಿಪಿಗಳ ಬೆನ್ನಿಗೆ ನಿಂತ ಅಧಿಕಾರಿಗಳ ಸಂಘ ಪ್ರಭಾವ ಬೀರಲಿದೆಯೇ?

ನ್ಯಾಯಾಂಗ ಇಲಾಖೆ ನಾಲ್ಕು ವರ್ಷಗಳ ಹಿಂದೆ 191 ಎಪಿಪಿ ಮತ್ತು ಎಜಿಪಿಗಳ ನೇಮಕಕ್ಕೆ ಪರೀಕ್ಷೆ ನಡೆಸಿತ್ತು. ‍ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಈ ಸಂಬಂಧ ತೀರ್ಥಹಳ್ಳಿಯ ವಕೀಲ ಎಚ್.ಟಿ.ರವಿ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರ ಪರ ಮತ್ತೊಬ್ಬ ವಕೀಲ ರವೀಂದ್ರ ಅವರು ವಾದಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts