ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನೂ ಸೇರಿಸಿ ನೋಂದಾಯಿಸಿದ್ದ ಅಧಿಕಾರಿಗೆ ಭೂಸ್ವಾಧೀನಾಧಿಕಾರಿ ಹುದ್ದೆ

ಬೆಂಗಳೂರು; ಅಧಿಕಾರ ದುರುಪಯೋಗಪಡಿಸಿಕೊಂಡು ಕಚೇರಿಯಲ್ಲಿ ಸೃಷ್ಟಿಸಿದ್ದ ಸುಳ್ಳು ದಾಖಲಾತಿಗಳನ್ನೇ ನೈಜವೆಂದು ನಂಬಿಸಿ ಸರ್ಕಾರಿ ಜಮೀನನ್ನು ಸೇರಿಸಿ 11.38 ಎಕರೆಗೂ ಅಧಿಕ ವಿಸ್ತೀರ್ಣದ ಜಮೀನನ್ನು ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ  ಬಿ ಶ್ರೀರಾಮುಲು ಅವರಿಗೆ ಹೆಸರಿಗೆ ನೋಂದಾಯಿಸಿದ್ದ ಪ್ರಕರಣದಲ್ಲಿ  ಮೂರನೇ  ಆರೋಪಿಯಾಗಿದ್ದ ಕೆಎಎಸ್‌ ಕಿರಿಯ ಶ್ರೇಣಿ  ಅಧಿಕಾರಿ ಶಶಿಧರ ಬಗಲಿ ಅವರನ್ನುಈಗಿನ ಕಾಂಗ್ರೆಸ್‌ ಸರ್ಕಾರವು ಬಳ್ಳಾರಿಯಲ್ಲಿನ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿ ಆಯಕಟ್ಟಿನ ಹುದ್ದೆಗೆ ವರ್ಗಾವಣೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಹಿಂದಿನ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದ ತಹಶೀಲ್ದಾರ್‌ ಶಶಿಧರ ಬಗಲಿ ಮತ್ತಿತರರ ಅಕ್ರಮಕೂಟವು ಭೂ ಹಿಡುವಳಿದಾರರನ್ನೇ ಬದಲಿಸಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯೂ ಸಲ್ಲಿಕೆಯಾಗಿದೆ. ಹೀಗಿದ್ದರೂ ಶಶಿಧರ ಬಗಲಿ ಎಂಬುವರಿಗೆ ಆಯಕಟ್ಟಿನ ಜಾಗವನ್ನು ನೀಡಿರುವುದು ಅಧಿಕಾರಿಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿದೆ.

 

ಎಸಿಬಿ, ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳನ್ನು  ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಯಕಟ್ಟಿನ ಹುದ್ದೆಗೆ ವರ್ಗಾಯಿಸುತ್ತಿರುವುದು ಮತ್ತು ವರ್ಗಾವಣೆ ಪ್ರಕ್ರಿಯೆಗಳಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ  ಸರ್ಕಾರಿ ಜಮೀನನ್ನೂ ಸೇರಿಸಿ 11 ಎಕರೆಯನ್ನು ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಬಿ ಶ್ರೀರಾಮುಲು ಅವರಿಗೆ ಅಕ್ರಮವಾಗಿ ನೋಂದಾಯಿಸಿದ್ದ ಅಧಿಕಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವು ಮುನ್ನೆಲೆಗೆ ಬಂದಿದೆ.

 

ಈ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಹೀಗಿದ್ದರೂ ಬಳ್ಳಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಂತಹ ಹುದ್ದೆಗೆ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಶಿಧರ ಬಗಲಿ ಅವರನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿನ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಯಿಸಿ  2023ರ ಜುಲೈ 12ರಂದು ಆದೇಶಕ್ಕೆ ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ಹಿಡುವಳಿದಾರರನ್ನೆ ಬದಲಿಸಿತ್ತು  ಅಕ್ರಮಕೂಟ

 

ಬಳ್ಳಾರಿಯ ಕೌಲ್‌ ಬಜಾರ್ ಬಳಿಯ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ಸರ್ವೆ ನಂಬರ್‌ 597/ಬಿ2ಎ1ರ ಪೈಕಿ 3.50 ಎಕರೆ ಜಮೀನು ಹಂಪಮ್ಮ ಎಂಬುವರು ಹಿಡುವಳಿ ಮಾಲೀಕರಾಗಿದ್ದರು. ಅದೇ ರೀತಿ ಸರ್ವೆ ನಂಬರ್‌ 597/ಬಿ2ಎ3 ರ ಪೈಕಿ 4.00 ಎಕರೆ ವಿಸ್ತೀರ್ಣ ಜಮೀನಿಗೆ ದ್ರಾಕ್ಷಾಯಣಮ್ಮ ಅವರು ಮಾಲೀಕರಾಗಿದ್ದರೆ, ಸರ್ವೆ ನಂಬರ್‌ 597/ಬಿ2ಎ1ಎ1ರ ಪೈಕಿ 0-50 ಸೆಂಟ್ಸ್‌ ಜಮೀನಿಗೆ ಖಂಡೋಜಿರಾವ್‌ ಎಂಬುವರು ಮಾಲೀಕರಾಗಿದ್ದರು. ಹಾಗೆಯೇ ಸರ್ವೇ ನಂಬರ್‌ 597/ಬಿ2ಎ1ಎ1ರ ಪೈಕಿ 2.88 ಎಕರೆ ಜಮೀನು ಬಾಪಟ್ಲ ಬಾಪುರಾವ್‌ ಅವರ ಹೆಸರಿನಲ್ಲಿತ್ತು. ಸರ್ವೆ ನಂಬರ್‌ 597/ಬಿ2ಎ1ಎ2ರ ಪೈಕಿ 0.50 ಸೆಂಟ್ಸ್‌ ಜಮೀನು ಡಿ ಲಕ್ಷ್ಮಿದೇವಿ, ಎಂ ರುಕ್ಮೀಣಮ್ಮ, ಎ ಪಿ ಮೋಹನ ವೇಲು ಮೊದಲಿಯಾರ್‌ ಎಂಬುವರ ಹೆಸರಿನಲ್ಲಿತ್ತು.

 

ಮ್ಯುಟೇಷನ್‌, ಪಹಣಿಯೇ ಅಕ್ರಮ

 

ಈ ಜಮೀನುಗಳನ್ನು ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳಾದ ಕೃಷ್ಣಮೂರ್ತಿ, ಪುರಂದರ, ಭಾಗ್ಯಲಕ್ಷ್ಮಿ, ಪರಿಮಳದೇವಿ, ದಿವಂಗತ ಎ ದಿವಾಕರ್‌ ಅವರ ಪತ್ನಿ ಎ ಆಶಾಲತಾ, ಇವರ ಮಕ್ಕಳಾದ ಎ ವಿ ಎಸ್‌ ಪ್ರಸಾದ್‌, ಎ ಬಿ ಎಸ್‌ ಚಕ್ರವರ್ತಿ, ಎ ಹಿಮಬಿಂದು, ಎ ಕುಮುದಿನಿ ಅವರ ಹೆಸರಿಗೆ ಅಂದಿನ ಸಹಾಯಕ ಆಯುಕ್ತ ಆರ್‌ ವೆಂಕಟೇಶಲು (ಆಪಾದಿತ 2) ಎಂಬವರು ಕಾನೂನು ರೀತಿ ಸಕಾರಾತ್ಮಕವಲ್ಲದ ಮ್ಯುಟೇಷನ್‌ ಮಾಡಿ ಪಹಣಿಗಳನ್ನು ಹೊರಡಿಸಿದ್ದರು ಎಂಬುದು ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಇದನ್ನಾಧರಿಸಿಯೇ ಅಂದಿನ ತಹಶೀಲ್ದಾರ್‌ ಆಗಿದ್ದ ಶಶಿಧರ ಬಗಲಿ ಅವರು (ಆಪಾದಿತ -3) ಕಂದಾಯ ನಿರೀಕ್ಷಕ ವೀರೇಶ್‌ ಬಾಬು (ಆಪಾದಿತ -4) ಅವರ ಜತೆ ಸೇರಿಕೊಂಡು ಮತ್ತು ತಮ್ಮ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡು ಅಂದಿನ ಶಾಸಕರೂ ಆಗಿದ್ದ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದಲೇ ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳ ಹೆಸರಿನಲ್ಲಿ ಹಕ್ಕು ಬದಲಾವಣೆ ಮಾಡಿ ಪಹಣಿಗಳನ್ನು ಮಾಡಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿತ್ತು.

 

ಹಕ್ಕು ಬದಲಾವಣೆ ಪರಿಶೀಲಿಸದ ಬಗಲಿ

 

ಈ ಪಹಣಿಗಳನ್ನುಮಾಡುವ ಪೂರ್ವದಲ್ಲಿ ಈ ಐದು ಸರ್ವೆ ನಂಬರ್‌ಗಳಲ್ಲಿದ್ದ ದೊಟ್ಟು 11-38-05 ಎಕರೆ ವಿವಿಧ ಚೆಕ್‌ ಬಂದಿಗಳುಳ್ಳ ಜಮೀನುಗಳು ಈ ಹಿಂದೆ ಎ ಲಕ್ಷ್ಮಮ್ಮ ಮತ್ತು ಇತರರ ಹೆಸರುಗಳಲ್ಲಿ ಹಕ್ಕು ಬದಲಾವಣೆಗಳು ಮತ್ತು ಪಹಣಿಗಳು ಇದ್ದವೇ ಅಥವಾ ಇಲ್ಲವೇ ಎಂಬುದನ್ನು ಶಶಿಧರ ಬಗಲಿ ಅವರು ಪರಿಶೀಲಿಸಿಕೊಂಡಿರಲಿಲ್ಲ. ಬದಲಿಗೆ ಸಹಾಯಕ ಆಯುಕ್ತ ವೆಂಕಟೇಶಲು ಅವರ ಕಚೇರಿ ಆದೇಶಗಳನ್ನು ಜಾರಿಗೆ ತರುವ ತರಾತುರಿಯಲ್ಲಿ ಇಲಾಖಾ ನಿಯಮಗಳನ್ನು ಅನುಸರಿಸದೇ ಎ ಲಕ್ಷ್ಮಮ್ಮ ಮತ್ತು ಅವರ ಮಕ್ಕಳು, ಹಾಗೂ ಮೃತ ಮಗನ ಹೆಂಡತಿ, ಅವರ ಮೊಮ್ಮಕ್ಕಳ ಹೆಸರಿಗೆ ಈ 5 ಸರ್ವೇ ನಂಬರ್‌ಗಳಲ್ಲಿನ ಒಟ್ಟು 11-38 ಎಕರೆ ವಿವಿಧ ಚೆಕ್‌ಬಂದಿಗಳುಳ್ಳ ಜಮೀನಿನುಗಳಿಗೆ ಮ್ಯುಟೇಷನ್‌ ಮತ್ತು ಪಹಣಿಗಳನ್ನು ಮಾಡಿದ್ದರು.

 

ಸಚಿವ ಬಿ ಶ್ರೀರಾಮುಲು ಅಧಿಕಾರ ದುರುಪಯೋಗ?

 

ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ಕಚೇರಿಯಲ್ಲಿ ಈ ಬೆಳವಣಿಗೆಗಳು ನಡೆಯುತ್ತಿದ್ದ ಹೊತ್ತಿನಲ್ಲಿ ಬಿ ಶ್ರೀರಾಮುಲು ಅವರು (2010) ಶಾಸಕರಾಗಿದ್ದರು. ‘ಇವರು ತಮ್ಮ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಿನ್ಸಿಪಲ್‌ ಸಿವಿಲ್‌ ಜಡ್ಜ್‌ ಮತ್ತು ಸಿಜೆಎಂ ಬಳ್ಳಾರಿ ನ್ಯಾಯಾಲಯದಲ್ಲಿ (ಒ ಎಸ್‌ ನಂ 69/2003) 27.25 ಎಕರೆ ಜಮೀನಿಗೆ ಡಿಕ್ರಿ ತನ್ನ ಪರವಾಗಿದೆ, ಇದರಲ್ಲಿ ಬಳ್ಳಾರಿ ಗ್ರಾಮದ ಸರ್ವೆ ನಂಬರ್‌ 597/ಬಿ231ಎ1ಎ1 ಮತ್ತು ಸರ್ವೆ ನಂ 597/ಬಿ2ಎ3ರ ಜಮೀನುಗಳು ನಕಾಶೆಗಳಂತೆ ಮತ್ತು ತನ್ನ ಅನುಭವದಂತೆ ಹೊಂದಾಣಿಕೆಯಾಗದೇ ಇರುವುದರಿಂದ ತಾನು ಎ ಲಕ್ಷ್ಮಮ್ಮ ಮತ್ತು ಇತರರ ಕಡೆಯಿಂದ ಭೂಮಿ ಮೇಲೆ ಅನುಭವವಿದ್ದಾಗ್ಯೂ ಸರ್ವೆ ಲೆಕ್ಕ ದಾಖಲೆಗಳಲ್ಲಿ ಹಾಗೂ ಆರ್‌ಟಿಸಿಗಳಿಗೆ ತಕ್ಕಂತೆ ವಿಸ್ತೀರ್ಣ ಸರಿ ಇರುವುದಿಲ್ಲ. ಹೀಗಾಗಿ ಮೇಲ್ಕಂಡ ಜಮೀನುಗಳ ಸ್ಥಳ ಪರಿಶೀಲಿಸಿ ಅದರಂತೆ ಉಳಿದ ವಿಸ್ತೀರ್ಣವನ್ನು ತನ್ನ ಹೆಸರಿನಲ್ಲಿ ಪಟ್ಟಾ ಬದಲಾವಣೆ ಮತ್ತು ನಕಾಶೆಗಳನ್ನು ತಯಾರಿಸಿಕೊಡಬೇಕು ಎಂದು ತಹಶೀಲ್ದಾರ್‌ ಶಶಿಧರ ಬಗಲಿ’ ಅವರಿಗೆ ಮನವಿ ಸಲ್ಲಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಶ್ರೀರಾಮುಲು ಅವರಿಗೆ ಬಗಲಿ ಸಹಕರಿಸಿದ್ಹೇಗೆ?

 

ಶ್ರೀರಾಮುಲು ಅವರು ಸಲ್ಲಿಸಿದ್ದ ಮನವಿಯನ್ನು ತಹಶೀಲ್ದಾರ್‌ ಶಶಿಧರ ಬಗಲಿ ಅವರು ಪುರಸ್ಕರಿಸಿದ್ದರು. ಅಂದಿನ ಸರ್ವೆ ಸೂಪರ್‌ವೈಸರ್‌ ಜಿ ಎಸ್‌ ಗಡಕೇಶ್ವರ್‌ ಮತ್ತಿತರರೊಂದಿಗೆ ಅಕ್ರಮಕೂಟ ರಚಿಸಿಕೊಂಡು ದುರುದ್ದೇಶದಿಂದಲೇ ಜಮೀನುಗಳ ವಿಸ್ತೀರ್ಣವನ್ನು ಹೆಚ್ಚಿಸಲಾಗಿತ್ತು.

 

ಸರ್ವೆ ನಂಬರ್‌ 57ಬಿ 2 ಎ1ಎ1ಎ1ಕೆ ರಲ್ಲಿ ಬಾಪಟ್ಲ ಬಾಪರಾವ್‌ ಹೆಸರಿನಲ್ಲಿದ್ದ 2.88.05 ಎಕರೆ ಜಮೀನಿನಲ್ಲಿ ಭೌತಿಕವಾಗಿ ಯಾವುದೇ ಹೆಚ್ಚಿಗೆ ಜಮೀನು ಇರದಿದ್ದರೂ ಇದೇ ಜಮೀನಿನ ಪಕ್ಕದಲ್ಲಿದ್ದ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ಅರುಣ ಅವರ (ಸರ್ವೆ ನಂಬರ್‌ 597ಬಿ2ಎ1ಎ1ಸಿ ) 17.25 ಎಕರೆ ಜಮೀನಿನಲ್ಲಿನ 5.69 ಎಕರೆ ಜಮೀನನ್ನು ತೆಗೆದುಕೊಳ್ಳಲಾಗಿತ್ತು.

 

‘ಅಂದರೆ ಸದರಿ ಜಮೀನಿನ ನಕ್ಷೆ ಮೇಲೆ ಓವರ್‌ ಲ್ಯಾಪಿಂಗ್‌ ಮಾಡಿ ಸರ್ವೆ ನಂಬರ್‌ 597ಬಿ2ಎ1ಎ1ಎ1ಕೆ ರ ಜಮೀನಿನ ನಕ್ಷೆಯಲ್ಲಿ 2.88.05ಕ್ಕಿಂತ 8.57 ಎಕರೆ ಜಮೀನು ಹೆಚ್ಚಿಗೆ ಇದೆ ಎಂದು ಅಂದರೆ 5.69 ಎಕರೆ ಜಮೀನು ಹೆಚ್ಚಾಗಿದೆ ಎಂದು ವಿಸ್ತೀರ್ಣ ಹೆಚ್ಚಿಸಿರುತ್ತಾರೆ,’ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

 

 

ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿದ್ದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 6 ವರ್ಷಗಳ ಬಳಿಕ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

 

ಆದರೆ ಸಿದ್ದರಾಮಯ್ಯ ಅವರ 5ವರ್ಷಗಳ ಅಧಿಕಾರವಾಧಿಯಲ್ಲಿ ಬಿ ಶ್ರೀರಾಮುಲು ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ವಿಧಾನಸಭೆಯ ಅಂದಿನ ಸ್ಪೀಕರ್‌ಗಳು ಅನುಮತಿ ನೀಡಲು ವಿಳಂಬವೆಸಗಿದ್ದರು.  ಈ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಅಧಿಕಾರ ದುರುಪಯೋಗಪಡಿಸಿಕೊಂಡು ಕಚೇರಿಯಲ್ಲಿ ಸೃಷ್ಟಿಸಿದ್ದ ಸುಳ್ಳು ದಾಖಲಾತಿಗಳನ್ನೇ ನೈಜವೆಂದು ನಂಬಿಸಿ ಸರ್ಕಾರಿ ಜಮೀನನ್ನು ಸೇರಿಸಿ 11.38 ಎಕರೆಗೂ ಅಧಿಕ ವಿಸ್ತೀರ್ಣದ ಜಮೀನನ್ನು ಹಾಲಿ ಸಚಿವ ಬಿ ಶ್ರೀರಾಮುಲು ಅವರಿಗೆ ಹೆಸರಿಗೆ ನೋಂದಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ಶ್ರೀರಾಮುಲು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ ಶಿವಪ್ಪ (ಆಪಾದಿತ-1) ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು 6 ವರ್ಷದ ಬಳಿಕ ಕಡೆಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಕುರಿತು 2022ರ ಆಗಸ್ಟ್‌ 22ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

 

ಸಚಿವ ಶ್ರೀರಾಮುಲುವಿಗೆ ಸರ್ಕಾರಿ ಜಮೀನು ನೋಂದಣಿ ಪ್ರಕರಣ; 6 ವರ್ಷದ ನಂತರ ಚಾರ್ಜ್‌ಶೀಟ್ ಸಲ್ಲಿಕೆ

 

ಬಳ್ಳಾರಿಯ ಕೌಲ್‌ ಬಜಾರ್ ಬಳಿಯ ಟಿ ಬಿ ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿದ್ದ ಸರ್ಕಾರಿ ಜಮೀನು ಸೇರಿದಂತೆ ಇತರೆ ವ್ಯಕ್ತಿಗಳ ಹೆಸರಿನಲ್ಲಿದ್ದ ಜಮೀನುಗಳಿಗೂ ಸುಳ್ಳು ದಾಖಲೆ ಸೃಷ್ಟಿಸಿದ್ದ ಅಧಿಕಾರಿಗಳ ಅಕ್ರಮಕೂಟವು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರು ಹೊಂದಿದ್ದ ಜಮೀನಿನ ವಿಸ್ತೀರ್ಣವನ್ನು ಓವರ್‌ ಲ್ಯಾಪಿಂಗ್‌ ಮಾಡುವ ಮೂಲಕ ಹೆಚ್ಚಿಸಿತ್ತು ಎಂದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು ಈ ಕುರಿತು 2022ರ ಆಗಸ್ಟ್‌ 23ರಂದು ವರದಿ ಪ್ರಕಟಿಸಿತ್ತು.

ರೆಡ್ಡಿ ಪತ್ನಿ ಲಕ್ಷ್ಮಿಅರುಣ ಹೆಸರಿನಲ್ಲಿ ಜಮೀನು ವಿಸ್ತೀರ್ಣ ಹೆಚ್ಚಿಸಲು ಸರ್ಕಾರಿ ಜಮೀನು ಅತಿಕ್ರಮಣ?

 

ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದ ತಹಶೀಲ್ದಾರ್‌ ಶಶಿಧರ ಬಗಲಿ ಮತ್ತಿತರರ ಅಕ್ರಮಕೂಟವು ಭೂ ಹಿಡುವಳಿದಾರರನ್ನೇ ಬದಲಿಸಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು. ಈ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಅಂತಿಮ ತನಿಖಾ ವರದಿಯು ಬಳ್ಳಾರಿ ಭೂ ಹಗರಣದ ಮತ್ತೊಂದು ಮುಖವನ್ನು ಅನಾವರಣಗೊಳಿಸಿತ್ತು. ಈ ಕುರಿತು 2022ರ ಆಗಸ್ಟ್‌ 25ರಂದು ವರದಿ ಪ್ರಕಟಿಸಿತ್ತು.

 

ಭೂ ಹಗರಣ; ಶ್ರೀರಾಮುಲುಗೆ ಸಹಕರಿಸಲು ಹಿಡುವಳಿದಾರರನ್ನೇ ಬದಲಿಸಿದ ಅಕ್ರಮ ಕೂಟ

 

ಪ್ರಕರಣದ ಕುರಿತು ಜಿ.ಕೃಷ್ಣಮೂರ್ತಿ ಎಂಬುವರು 2013 ರ ಏಪ್ರಿಲ್ 29ರಂದು ಖಾಸಗಿ ದೂರು ಸಲ್ಲಿಸಿದ್ದರು. (ಪಿಸಿಆರ್ ನಂ 01/2013) ಇದನ್ನಾಧರಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿ 2016ರ ಜೂನ್‌ 29ರಂದು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು. ಈ ವರದಿ ಆಧರಿಸಿ ಪ್ರಕರಣದಲ್ಲಿ 6 ನೇ ಆರೋಪಿಯಾಗಿರುವ ಶ್ರೀರಾಮುಲು ಅವರನ್ನು ವಿಚಾರಣೆ ನಡೆಸಲು ಅನುಮತಿ ಕೋರಿ 2016ರ ಆಗಸ್ಟ್‌ ನಲ್ಲಿ ಲೋಕಾಯುಕ್ತ ಎಡಿಜಿಪಿ ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿದ್ದರು.

 

‘ಶ್ರೀರಾಮುಲು ಅವರು ಶಾಸಕರಾಗಿದ್ದಾಗ ನಡೆದ ಪ್ರಕರಣವಾಗಿರುವ ಕಾರಣ ವಿಧಾನಸಭೆ ಸ್ಪೀಕರ್‌ರಿಂದ ಅನುಮತಿ ಪಡೆಯಿರಿ’ ಎಂದು ಲೋಕಸಭೆ ಜಂಟಿ ಕಾರ್ಯದರ್ಶಿ ಒಂದು ವರ್ಷದ ನಂತರ(2017 ಜುಲೈ) ಉತ್ತರಿಸಿದ್ದರು. ಇದಾದ ನಂತರ ಲೋಕಾಯುಕ್ತ ಸಂಸ್ಥೆ ವಿಧಾನಸಭೆ ಸಚಿವಾಲಯಕ್ಕೆ 2017ರ ಅಕ್ಟೋಬರ್‌ನಲ್ಲಿ ಅನುಮತಿ ಕೋರಿ ಪತ್ರ ಬರೆದಿತ್ತು. ‘ಶ್ರೀರಾಮುಲು ಅವರು ಈಗ ಸಂಸತ್‌ ಸದಸ್ಯರಾಗಿರುವ ಕಾರಣ ಲೋಕಸಭೆ ಸ್ಪೀಕರ್‌ ಅವರಿಂದಲೇ ಅನುಮತಿ ಪಡೆಯಬೇಕು’ ಎಂದು ವಿಧಾನಸಭೆ ಸಚಿವಾಲಯ 2018ರ ಜನವರಿ 24ರಂದು ಉತ್ತರಿಸಿತ್ತು.

the fil favicon

SUPPORT THE FILE

Latest News

Related Posts