ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ ಸದಸ್ಯರ ಹೆಸರನ್ನು ಒಟ್ಟು 10 ಕಂಪನಿಗಳಿಗೆ ನಿರ್ದೇಶಕರನ್ನಾಗಿ ಮಾಡಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ಎರಡು ಕಂಪನಿಗಳಿಂದ ಒಂದು ವರ್ಷದ ಅವಧಿಯಲ್ಲಿ 400 ಕೋಟಿ ರು ಮೊತ್ತದ ವಹಿವಾಟು ಮಾಡಿದ್ದಾರೆ ಎಂಬ ಮತ್ತೊಂದು ಆಪಾದನೆ ಕೇಳಿ ಬಂದಿದೆ. ಈ ಕುರಿತು ಜರೂರಾಗಿ ವರದಿ ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಡಿಜಿಪಿಯವರಿಗೆ ಸೂಚಿಸಿದೆ.
ಜಾತ್ಯತೀತ ಜನತಾದಳದ ಶಾಸಕರು ಐಪಿಎಸ್ ಚಂದ್ರಶೇಖರ್ ಅವರ ವಿರುದ್ದ ದಾಖಲೆ ಸಹಿತ ಮುಖ್ಯಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ವರದಿ ನೀಡಬೇಕು ಎಂದು ಡಿಪಿಎಆರ್ ಸೂಚಿಸಿದ್ದರೂ ಸಹ ಸಂಬಂಧಿಸಿದ ಸಕ್ಷಮ ಪ್ರಾಧಿಕಾರವು ಯಾವುದೇ ವರದಿ ನೀಡಿರಲಿಲ್ಲ.
ಹೀಗಾಗಿ ಜಾತ್ಯತೀತ ಜನತಾದಳದ ಶಾಸಕ ಹಾಗೂ ಶಾಸಕಾಂಗ ಸಭೆ ನಾಯಕ ಸಿ ಬಿ ಸುರೇಶ್ ಬಾಬು ಮತ್ತು ಸಿ ಎನ್ ಬಾಲಕೃಷ್ಣ ಅವರು ವಿಧಾನಸಭೆ ಅಧಿವೇಶನದಲ್ಲಿ ನಿಯಮ 351ರ ಮೇರೆಗೆ ಸೂಚನೆ ನೀಡಿದ್ದರು. ಈ ಎರಡೂ ಸೂಚನೆಗಳಿಗೆ ಉತ್ತರಿಸಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವರದಿ ನೀಡಬೇಕು ಎಂದು ಡಿಜಿಐಜಿಪಿ ಅವರಿಗೆ ಸೂಚಿಸಿರುವ ಮಾಹಿತಿಯನ್ನು ಸದನಕ್ಕೆ ಲಿಖಿತವಾಗಿ ಒದಗಿಸಿದ್ದಾರೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಐಜಿಪಿ ಚಂದ್ರಶೇಖರ್ ಮಧ್ಯೆ ರಾಜಿ ಸಂಧಾನ ಮಾತುಕತೆಯು ವಿಫಲವಾಗಿದೆ. ಈ ನಡುವೆಯೇ ಚಂದ್ರಶೇಖರ್ ಅವರ ಪ್ರಕರಣದಲ್ಲಿ ವರದಿ ಸಲ್ಲಿಸಬೇಕು ಎಂದು ಸರ್ಕಾರವು ಡಿಜಿಪಿಗೆ ನೀಡಿರುವ ನಿರ್ದೇಶನವು ಮುನ್ನೆಲೆಗೆ ಬಂದಿದೆ.
ಶಾಸಕಾಂಗ ಸಭೆ ನಾಯಕ ಸಿ ಬಿ ಸುರೇಶ್ ಬಾಬು ನೀಡಿದ್ದ ಸೂಚನೆಯಲ್ಲೇನಿದೆ?
ಸರ್ಕಾರದ ಪೂರ್ವಾನುಮತಿಯಿಲ್ಲದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಮಾಡದೇ ಕರ್ನಾಟಕ ರಾಜ್ಯದ ಸಾರ್ವಜನಿಕರಿಗೆ ಸಿಗಬೇಕಾದಂತಹ ಸವಲತ್ತು ಮತ್ತು ಸೌಲಭ್ಯಗಳನ್ನು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಧರ್ಮಪತ್ನಿ ಹೆಸರಿನಲ್ಲಿ ಸರ್ಕಾರಿ ಸ್ವಾಮ್ಯದೊಂದಿಗೆ ನೇರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾಮಗಾರಿ ಗುತ್ತಿಗೆ ನಿರ್ವಹಿಸಲಾಗಿದೆ. ಹಾಗೂ ಸರ್ಕಾರಿ ಸಂಸ್ಥೆಯೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನೇರವಾಗಿ ಗುತ್ತಿಗೆಯಲ್ಲಿ ಭಾಗಿಯಾಗಿರುವ ಬಗ್ಗೆ ರಾಜ್ಯದ ಗರಹ ಸಚಿವರು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ದಾಖಲೆಗಳ ಸಮೇತ ಮಾಹಿತಿ ನೀಡಿದ್ದಾರೆ. ಈ ಅಧಾರದ ಮೇಲೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿತ್ತು ಎಂದು ಗಮನಸೆಳೆದಿರುವುದು ಗೊತ್ತಾಗಿದೆ.

ದೂರಿನ ಅಧಾರದ ಮೇಲೆ 2026ರ ಜುಲೈ 2 ರಂದು (ಡಿಪಿಎಆರ್ 122 ಎಎಸ್‌ಪಿಎಸ್ 2026) ವಿಧಾನ ಪರಿಷತ್ತಿನ ಸದಸ್ಯರೂ ಸಹ ದೂರು ನೀಡಿದ್ದರು. ಈ ದೂರನ್ನು ಪರಿಶೀಲಿಸಿದಾಗ ಕಾಮಘಾರಿ ವಹಿಸಿಕೊಂಡಿರುವ ಅಧಿಕಾರಿಯಿಂದ ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿತ್ತು. ಈ ಅಧಿಕಾರಿಯು ಇಲ್ಲಿಯವರೆಗೆ ವರದಿಯನ್ನು ನೀಡದೇ ನಿರ್ಲಕ್ಷ್ಯ ವಹಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿ ಮೇಲೆ ಕಠಿಣ ಕ್ರಮ ಹಾಗೂ ವಜಾಗೊಳಿಸುವಂತಹ ಕ್ರಮ ಕೈಗೊಳ್ಳದೇ ವರದಿ ಹೆಸರಿನಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ನಿರ್ಲಕ್ಷ್ಯ ಮತ್ತು ಅಸಡ್ಡೆ ತೋರುತ್ತಿದೆ ಎಂದು ದೂರಿರುವುದು ತಿಳಿದು ಬಂದಿದೆ.
ಸರ್ಕಾರ ನೀಡಿರುವ ಉತ್ತರದಲ್ಲೇನಿದೆ?
ಸರ್ಕಾರದ ಪೂರ್ವಾನುಮತಿಯಿಲ್ಲದೇ ಹಾಗೂ ಸರ್ಕಾರಕ್ಕೆ ವರದಿ ಮಾಡದೇ ಕರ್ನಾಟಕ ರಾಜ್ಯದ ಸಾರ್ವಜನಿಕರಿಗೆ ಸಿಗಬೇಕಾದಂತಹ ಸವಲತ್ತು ಮತ್ತು ಸೌಲಭ್ಯಗಳನ್ನು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಧರ್ಮಪತ್ನಿ ಹೆಸರಿನಲ್ಲಿ ಸರ್ಕಾರಿ ಸ್ವಾಮ್ಯದೊಂದಿಗೆ ನೇರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದು ನಿರ್ವಹಿಸಿದ್ದು, ಹಾಗೂ ಸರ್ಕಾರಿ ಸಂಸ್ಥೆಯೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನೇರವಾಗಿ ಗುತ್ತಿಗೆಯಲ್ಲಿ ಭಾಗಿಯಾಗಿರುವ ಬಗ್ಗೆ ವಿಧಾನಪರಿಷತ್ತಿನ ಮತ್ತು ವಿಧಾನಸಭೆಯ ಶಾಸಕರುಗಳು, ಮಾಜಿ ಶಾಸಕರುಗಳಿಂದ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ 2026ರ ಜುಲೈ 10ರಂದು ದೂರನ್ನು ಪರಿಶೀಲಿಸಿದೆ ಎಂದು ಸೂಚನೆಗೆ ನೀಡಿರುವ ಉತ್ತರದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಒದಗಿಸಿರುವುದು ಗೊತ್ತಾಗಿದೆ.
ಸರ್ಕಾರವು (ಪತ್ರ ಸಂಖ್ಯೆ; ಡಿಪಿಎಆರ್ 122 ಎಸ್‌ಪಿಎಸ್ 2026 ದಿನಾಂಕ; 20-07-2026) ಅಗತ್ಯ ಮಾಹಿತಿ ತ್ತು ದಾಖಲೆಗಳೊಂದಿಗೆ ಈ ಕೂಡಲೇ ಸರ್ಕಾರಕ್ಕೆ ಸ್ಪಷ್ಟೀಕರಣ, ವಿವರಣೆ ಸಲ್ಲಿಸಬೇಕು ಎಂದು ಸೂಚಿಸಿತ್ತು.
ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಕಂಪನಿಗಳು ಸರ್ಕಾರದೊಂದಿಗೆ ಅಧಿಕೃತ ವ್ಯವಹಾರ ಹೊಂದುವ ಮುನ್ನ ಅಖಿಲ ಭಾರತ ಸೇವೆಗಳು (ನಡತೆ) ನಿಯಮಗಳ ನಿಯಮ 4(2)(ಎ) ರಲ್ಲಿ ಕಡ್ಡಾಯಗೊಳಿಸಿರುವಂತೆ ಸರ್ಕಾರದ ಪೂರ್ವಾನುಮತಿ ಪಡೆಯದೇ ಇರುವ ಬಗ್ಗೆ, ಅಖಿಲ ಭಾರತ ಸೇವೆಗಳು (ನಡತೆ) ನಿಯಮಗಳು ನಿಯಮ 13(3)ರಲ್ಲಿ ಕಡ್ಡಾಯಗೊಳಿಸಿದ್ದರೂ ಸಹ ತಮ್ಮ ಕುಟುಂಬದ ಸದಸ್ಯರು ಖಾಸಗಿ ಕಂಪನಿಗಳನ್ನು ಹೊಂದಿರುವ, ನಿರ್ವಹಿಸುತ್ತಿರುವ ಬಗ್ಗೆ ತಡವಾಗಿ ಸರ್ಕಾರಕ್ಕೆ ವರದಿ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

ಅಖಿಲ ಭಾರತ ಸೇವೆ ನಡತೆ ನಿಯಮಗಳ ಅಥವಾ ಇನ್ನಾವುದೇ ನಿಬಂಧನೆಗಳನ್ನು ತಾವು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಸರ್ಕಾರವು ತಮ್ಮ ವಿರುದ್ಧ ಏಕೆ ಸೂಕ್ತ ಕ್ರಮ ಕೈಗೊಳ್ಳಲು ಪರಿಗಣಿಸಬಾರದು ಎಂಬುದರ ಬಗ್ಗೆ ಸಮಜಾಯಿಷಿ, ವಿವರಣೆ ನೀಡಬೇಕು ಎಂದು ಸೂಚನೆಯಲ್ಲಿ ಕೋರಿದ್ದರು.
ಅಧಿಕಾರಿಯಿಂದ ಯಾವುದೇ ಪ್ರತ್ಯುತ್ತರ ಸ್ವೀಕೃತಗೊಳ್ಳದ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರಕ್ಕೆ ವಿವರಣೆ ಸಲ್ಲಿಸಬೇಕು ಎಂದು 2026ರ ಆಗಸ್ಟ್ 7ರಂದು ಮತ್ತೊಂದು ನೆನಪೋಲೆಯನ್ನು ಹೊರಡಿಸಿದೆ. ಅಧಿಕಾರಿಯವರ ವಿವರಣೆ, ಸಮಜಾಯಿಷಿ ಸ್ವೀಕೃತವಾದ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉತ್ತರಿಸಿದ್ದಾರೆ.
ಸಿ ಎನ್ ಬಾಲಕೃಷ್ಣ ಅವರ ಸೂಚನೆಯಲ್ಲೇನಿತ್ತು?
ಹಿರಿಯ ಐಪಿಎಸ್ ಅಧಿಕಾರಿಯು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯಲ್ಲಿ ಗುತ್ತಿಗೆಯಲ್ಲಿ ಭಾಗಿಯಾಗಿರುವುದು ಹಾಗೂ ಅನೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ನೇರವಾಗಿ ಗುತ್ತಿಗೆ ಪಡೆದಿರುವುದು ಹಾಗೂ ಹಲವು ಕಂಪನಿಗಳಲ್ಲಿ ಕುಟುಂಬ ಸದಸ್ಯರನ್ನೇ ನಿರ್ದೇಶಕರನ್ನಾಗಿ ನೇಮಿಸಿ ಈ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆ ಮಾಡಿರುವುದು ಹಾಗೂ ಹಲವು ಕಂಪನಿಗಳಿಗೆ ಎಲ್‌ಎಲ್‌ಪಿ ಹೊಂದಿರುವ ಬಗ್ಗೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ಹೆಸರು ಬದಲಾವಣೆ ಮಾಡಿಕೊಂಡಿರುವುದು ಇಷ್ಟೆಲ್ಲಾ ಅಕ್ರಮಗಳಲ್ಲಿ ಭಾಗಿಯಾಗಿದ್ದರೂ ಕೂಡ ಕಳೆದ 9ವರ್ಷಗಳಲ್ಲಿ ಐಪಿಎಆರ್‍ನಲ್ಲಿ ಮಾಹಿತಿ ಸಲ್ಲಿಸದೇ ಕರ್ತವ್ಯಲೋಪ ಮತ್ತು ದುರ್ನಡತೆ ತೋರಿರುವ ಬಗ್ಗೆ ದೂರುಗಳು ದಾಖಲಾದ ನಂತರ ಸರ್ಕಾರದಿಂದ ಸದರಿ ಅಧಿಕಾರಿ ಮೇಲೆ ಕೈಗೊಂಡ ಕ್ರಮಗಳ ಸಂಪೂರ್ಣ ಮಾಹಿತಿ ನೀಡುವುದು ಎಂದು ಕೋರಿದ್ದರು.

ಸರ್ಕಾರದ ಉತ್ತರದಲ್ಲೇನಿದೆ?
2026ರ ಜೂನ್ 6ರ ನಂತರದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯ ವಿರುದ್ಧ ಸದರಿ ಅಧಿಕಾರಿಯವರ ಪತ್ನಿಯವರ ಹೆಸರಿನಲ್ಲಿ ಖಾಸಗಿ ಸಂಸ್ಥೆಯನ್ನು ರಚಿಸುವ ಮೂಲಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಿಂದ ಕಾಮಗಾರಿ ವಹಿಸಿಕೊಂಡಿರುತ್ತಾರೆ. ಹಾಗೂ ರಾಜ್ಯ ಅಲ್ಪಸಂಖ್ಯಾತರ ವಸತಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸ್ಕಿಲ್ ಮ್ಯಾನೇಜ್‌ಮೆಂಟ್ ತಂತ್ರಾಂಶವನ್ನು ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್‍ನಲ್ಲಿ ಅಧಿಕಾರಿಯವರ ಪತ್ನಿಯವರು ಭಾಗಿಯಾಗಿ ಇ ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಪಡೆದು ಅಖಿಲಭಾರತ ಸೇವೆಗಳ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ.

ಅಲ್ಲದೇ ಅಧಿಕಾರಿಯವರ ಪತ್ನಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ 7 ಸಂಸ್ಥೆಗಳನ್ನು ನೋಂದಣಿ ಮಾಡಿ ಸದರಿ ಕಂಪನಿಗಳಲ್ಲಿ ಕುಟುಂಬ ಸದಸ್ಯರನ್ನೇ ನಿರ್ದೇಶಕರನ್ನಾಗಿ ನೇಮಿಸಿ ಈ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆ ಮಾಡಿ ಬಂಡವಾಳ ಹಣಕಾಸಿನ ಮೂಲದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಮಾಡದೇ ಹಾಗೂ ಕೇಂದ್ರ ಸರ್ಕಾರದ ಸ್ಥಿರ ಆಸ್ತಿ ರಿಟರ್ನ್ (ಐಪಿಆರ್) ನಲ್ಲಿ ವರದಿ ಸಲ್ಲಿಸದೇ ಅಖಿಲ ಭಾರತ ಸೇವೆಯಲ್ಲಿರುವ ಐಪಿಎಸ್ ಅಧಿಕಾರಿಯು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆದೇಶಗಳು, ಅಧಿಸೂಚನೆಗಳು ಸಿಸಿಎಸ್ ನಡವಳಿಕೆ ನಿಯಮ ಪಾಲನೆ ಮಾಡದೇ ಕರ್ತವ್ಯ ಲೋಪ ಎಸಗಿರುತ್ತಾರೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ಹೆಸರು ಬದಲಾವಣೆ ಮಾಡಿಕೊಂಡಿರುತ್ತಾರೆ ಎಂಬ ಆರೋಪಗಳ ಕುರಿತು ದೂರುಗಳು ವಿಧಾನ ಪರಿಷತ್ ಮತ್ತು ವಿಧಾನಸಭೆ ಶಾಸಕರು, ಮಾಜಿ ಶಾಸಕರುಗಳಿಂದ ಸರ್ಕಾರದಲ್ಲಿ ಸ್ವೀಕೃತಗೊಂಡಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿರುವುದು ಗೊತ್ತಾಗಿದೆ.
ಅಧಿಕಾರಿಯವರ ಮಗ, ಮಗಳು ಹಾಗೂ ಪತ್ನಿ ಇವರುಗಳು ಹಲವಾರು ಕಂಪನಿಗಳಲ್ಲಿ ನಿರ್ದೇಶಕರಾಗಿರುವ ಮಾಹಿತಿಯನ್ನು ಚಂದ್ರಶೇಖರ್ ಅವರು 2026ರ ಜೂನ್ 29 ಮತ್ತು 2926ರ4 ಜುಲೈ 3ರಂದು ಪತ್ರಗಳ ಮೂಲಕ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದ್ದಾರೆ.
400 ಕೋಟಿ ವಹಿವಾಟು
ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ ಸದಸ್ಯರ ಹೆಸರಿನಲ್ಲಿ ಒಟ್ಟು 10 ಕಂಪನಿಗಳಿಗೆ ನಿರ್ದೇಶಕರನ್ನಾಗಿ ಮಾಡಿ ಹಾಗೂ ಹಲವು ಕಂಪನಿಗಳಿಗೆ ಎಲ್‌ಎಲ್‌ಪಿ ಮಾಡಿ ಆರ್ಥಿಕ ತೆರಿಗೆ ವಂಚನೆ ಮಾಡುವ ದುರುದ್ದೇಶದಿಂದ ಸದರಿ ಕಂಪನಿಗಳ ಮೇಲೆ ಅಧಿಕ ಮೊತ್ತದ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಹಾಗೂ ಅಂತಹ ಎರಡು ಕಂಪನಿಗಳಿಂದ ಒಂದು ವರ್ಷದ ಅವಧಿಯಲ್ಲಿ 400 ಕೋಟಿ ಮೊತ್ತದ ವಹಿವಾಟು ಮಾಡಿರುವ ಆರೋಪದ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಕೂಡಲೇ ಕೇಂದ್ರದ ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ಸಂಸ್ಥೆಯಿಂದ ತನಿಖೆ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿಕೆ ಸಲ್ಲಿಸಲಾಗಿದೆ.

ಈ ಕೋರಿಕೆಗೆ ಸಂಬಂಧಿಸಿದಂತೆ ತನಿಖೆ ಡೆಸಿ ಸರ್ಕಾರಕ್ಕೆ ಜರೂರಾಗಿ ಒಂದು ವರದಿ ಸಲ್ಲಿಸಬೇಕು ಎಂದು ಡಿಜಿಪಿಯವರಿಗೆ 2026 ಆಗಸ್ಟ್ 10ರಂದು ಪತ್ರ ಬರೆದಿದೆ. ವರದಿ ನಿರೀಕ್ಷಿಸಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಐಪಿಎಸ್ ಚಂದ್ರಶೇಖರ್ ಅವರಿಗೆ ಸಂಬಂಧಿಸಿದಂತೆ ನಿಯಮ 351ರ ಅಡಿಯಲ್ಲಿ ಸೂಚನೆ ನೀಡಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಅದೇ ರೀತಿ ಪತ್ನಿ ಹೆಸರಿನಲ್ಲಿ ಕಿಯೋನಿಕ್ಸ್‌ನಿಂದ ಗುತ್ತಿಗೆ ಪಡೆಯಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಿಧಾನಪರಿಷತ್‌ನ ಸದಸ್ಯ ಬೋಜೇಗೌಡ ಮತ್ತಿತರರು ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




