‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

ಬೆಂಗಳೂರು; ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಶಿಫಾರಸ್ಸಿನ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್‌ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

 

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು “ಪಂಚಗ್ಯಾರಂಟಿಗಳ ಕಾಂಗ್ರೆಸ್‌ ಸರ್ಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು; ʼಕಾಸಿಗಾಗಿ ಪೋಸ್ಟಿಂಗ್ʼ ಹೆಸರಿನಲ್ಲಿ ‘ದಿ ಫೈಲ್‌’ ವರದಿಯನ್ನು ತಮ್ಮ ಟ್ವಿಟರ್‍‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತರಾಟೆಗೆ ತೆಗೆದುಕೊಂಡು ಸರಣಿ ಟ್ವೀಟ್‌ ಮಾಡಿದ್ದಾರೆ.

 

‘ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ”. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ವಿರುದ್ಧವೂ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಎಂದು ಎಚ್‌ ಡಿ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

 

“ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ದಂಧೆಗೆ ʼಹುಂಡಿʼ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಟಾಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? ಸಿಎಂಒ ಎಂದರೆ ಸಿಎಂ ಆಫ್‌ ಕರ್ನಾಟಕವೋ ಅಥವಾ ಕರಪ್ಷನ್‌ ಆಫ್‌ ಕರ್ನಾಟಕವೋ” ಎಂದೂ ಪ್ರಶ್ನಿಸಿದ್ದಾರೆ.

 

“ನಾಲ್ಕು ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು? ಮೂರೊಪ್ಪತ್ತೂ ಶಿಫಾರಸು ಪತ್ರಗಳನ್ನು ಟೈಪಿಸಿ, ಸಿಎಂ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಧಿಕಾರಿಗಳು ತಲ್ಲೀನರಾಗಿದ್ದಾರೆನ್ನುವುದು ಖಾತ್ರಿ. ವರ್ಗಾವರ್ಗಿಯ ಪೇಮೆಂಟ್‌ ಕೋಟಾ ನಿಯಂತ್ರಣ ಮಾಡುತ್ತಿರುವ ಆ ʼರಿಮೋಟ್‌ ಕಂಟ್ರೋಲ್‌ʼ ಬಗ್ಗೆ ಜನಕ್ಕೆ ಅರ್ಥವಾಗುತ್ತಿದೆ” ಎಂದು ಟ್ವೀಟ್‌ ಮಾಡುವ ಮೂಲಕ ಆರೋಪಿಸಿದ್ದಾರೆ.

 

“ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ʼಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ ಶುರುವಾಗಿದೆ. ʼಸರ್ಕಾರದ ಕೆಲಸ ದೇವರ ಕೆಲಸʼ ಎನ್ನುವುದರ ಬದಲು ʼಬಂದಿದ್ದನ್ನು ಬಿಡದೇ ಬಾಚಿಕೋ..ʼ ಎಂಬುದು ಈ ಸರ್ಕಾರದ ಧ್ಯೇಯನೀತಿ ಆಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ, ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ” ಎಂದು ಕಿಡಿಕಾರಿದ್ದಾರೆ.

 

ಅದೇ ರೀತಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೂ ಸಹ ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿರುವ ಮುಖ್ಯಮಂತ್ರಿಗಳು! ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಸಿದ್ದರಾಮಯ್ಯನವರು ನಾಲ್ಕು ಅಧಿಕಾರಿಗಳನ್ನು ವರ್ಗಾಯಿಸಲು ಶಿಫಾರಸ್ಸು ಮಾಡಿದ್ದಾರೆ. ಯಾರ ಒತ್ತಡ? ಯಾವ ಕಾಣದ “ಕೈ” ಸಿದ್ದರಾಮಯ್ಯನವರ ಸಹಿ ಮಾಡಿಸುತ್ತಿದೆ ಎಂದು ‘ದಿ ಫೈಲ್‌’ ಪ್ರಕಟಿಸಿರುವ ದಾಖಲೆಗಳನ್ನು ಟ್ವೀಟ್‌ ಮಾಡಿದ್ದಾರೆ.

 

ಈ ಎಟಿಎಂ ಸರ್ಕಾರದಲ್ಲಿ ಸ್ವತಃ ಮುಖ್ಯಮಂತ್ರಿರವರೇ ವ್ಯವಹಾರಕ್ಕೆ ಇಳಿದುಬಿಟ್ಟಿದ್ದಾರೆ. ಮೋಸ ಮಾಡುವುದಕ್ಕೇ ನಿಂತ ಏಜೆಂಟರು ಒಂದೇ ಸೈಟನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡುವಂತೆ, ಸಿಎಂ ಸಿದ್ದರಾಮಯ್ಯ ಹಾಗೂ #ShadowCM ಯತೀಂದ್ರ ಅವರು ಒಂದೇ ಹುದ್ದೆಗೆ ನಾಲ್ಕು ಮಂದಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ. ಶಿಫಾರಸ್ಸು ಪತ್ರಗಳ ಹೊಸ ದಂಧೆ ಆರಂಭಿಸಿದೆ ಎಂದು ಬಿಜೆಪಿ ಕರ್ನಾಟಕವು ಸಹ ‘ದಿ ಫೈಲ್‌’ ವರದಿಯನ್ನು ಹಂಚಿಕೊಳ್ಳುವ ಮೂಲಕ  ಟ್ವೀಟ್‌ ಮಾಡಿದೆ.

 

ಏನದು ಪ್ರಕರಣ?

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದ್ದರು.

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿ ಒಂದು ವರ್ಷ 4 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯೋಜನಾ ಮುಖ್ಯಸ್ಥರು, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದರು ಸಹ ಇವರ ಹುದ್ದೆಗೆ ನಾಲ್ವರು ಲೆಕ್ಕಪರಿಶೋಧನಾಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿರುವುದು ನಾಲ್ವರು ಅಧಿಕಾರಿಗಳ ಮಧ್ಯೆಯೇ ಪೈಪೋಟಿ ಸೃಷ್ಟಿಸಿದಂತಾಗಿತ್ತು.

 

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದಲೇ ಅಧಿಕಾರಿ ನೌಕರರ ವರ್ಗಾವಣೆಗೆ ಶಿಫಾರಸ್ಸು ಪತ್ರಗಳು ಹೊರಬೀಳುತ್ತಿವೆ ಮತ್ತು ಗೃಹ ಕಚೇರಿಯನ್ನು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರು ನಿಯಂತ್ರಿಸುತ್ತಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅಧಿಕಾರಿಗಳ ಪೈಪೋಟಿಗೆ ಕಾರಣವಾಗಿರುವ ಮುಖ್ಯಮಂತ್ರಿಗಳ ಟಿಪ್ಪಣಿ ಪತ್ರಗಳು ಮುನ್ನೆಲೆಗೆ ಬಂದಿದ್ದವು.

 

ಇರುವ ಒಂದು ಹುದ್ದೆಗೆ ನಾಲ್ವರ ವರ್ಗಾವಣೆಗೆ ಶಿಫಾರಸ್ಸು

 

ಬಿಬಿಎಂಪಿಯಲ್ಲಿ ಲೆಕ್ಕ ಪರಿಶೋಧನಾಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ ಕೆ ಜಗದೀಶ್‌ ಅವರನ್ನು ರಾಜ್ಯ ರಸ್ತೆ ಅಭಿವೃದ್ದಿ ನಿಗಮದಲ್ಲಿ ಎಂ ಜಿ ಮಂಜುನಾಥ್ ಇವರ ಸ್ಥಳಕ್ಕೆ ವರ್ಗಾಯಿಸಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಿಂದ ಟಿಪ್ಪಣಿ ಹೊರಡಿಸಲಾಗಿತ್ತು.

 

ಇದೇ ಹುದ್ದೆಗೆ ಬಿಬಿಎಂಪಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಲೆಕ್ಕಪರಿಶೋಧನಾಕಾರಿ ಕೆ ಎಚ್‌ ಶ್ರೀನಿವಾಸ್‌ ಅವರನ್ನು ಎಂ ಜಿ ಮಂಜುನಾಥ್‌ ಅವರ ಹುದ್ದೆಯ ಜಾಗಕ್ಕೆ ವರ್ಗಾಯಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಇದನ್ನು ಪರಿಗಣಿಸಿ ಎಂದು ಷರಾ ಬರೆದಿರುವುದು ಗೊತ್ತಾಗಿದೆ.

 

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಅದೇ ರೀತಿ ಪೊಲೀಸ್‌ ಮಹಾನಿರ್ದೇಶಕರ ಕಚೇರಿಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ ನಾಗರಾಜು ಅವರು ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಮಂಜುನಾಥ್‌ ಅವರ ಜಾಗಕ್ಕೆ ಪರಿಗಣಿಸಿ ಎಂದು 2023ರ ಜೂನ್‌ 8ರಂದು ಷರಾ ಬರೆದಿದ್ದರು.

 

ಅದೇ ರೀತಿ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಎಸ್‌ ಪ್ರತಿಭ ಅವರನ್ನೂ ಮಂಜುನಾಥ ಜಿ ಇವರ ಸ್ಥಳಕ್ಕೆ ನಿಯುಕ್ತಿಗೊಳಿಸಲು ಸಿದ್ದರಾಮಯ್ಯ ಅವರು ಟಿಪ್ಪಣಿಯಲ್ಲಿ ಸೂಚಿಸಿರುವುದು ಟಿಪ್ಪಣಿ ಪ್ರತಿಯಿಂದ ಗೊತ್ತಾಗಿದೆ.

 

ಆದರೆ ಮಂಜುನಾಥ್‌ ಅವರ ಕಾರ್ಯಕ್ಷಮತೆ ಬಗ್ಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಯೋಜನಾ ಮುಖ್ಯಸ್ಥರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಇವರ ವರ್ಗಾವಣೆ ಸುಳಿವು ಹಿಡಿದ ಯೋಜನಾ ಮುಖ್ಯಸ್ಥರು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ 2023ರ ಜೂನ್‌ 23ರಂದು ಪತ್ರವನ್ನೂ ಬರೆದಿದ್ದರು.

 

ಪತ್ರದಲ್ಲೇನಿದೆ?

 

ಇಲಾಖೆಯಲ್ಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ ಅವರನ್ನು ಇದೇ ಹುದ್ದೆ ಮತ್ತು ಇದೇ ಕಚೇರಿಯಲ್ಲಿಯೇ ಮುಂದುವರೆಸಬೇಕು. ಇವರು ಕಳೆದ 1 ವರ್ಷ 4 ತಿಂಗಳಿನಿಂದ ಲೆಕ್ಕಾಧಿಕಾರಿಯಾಗಿ ಈ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

 

ಇವರು ಯೋಜನೆಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಪರಿಣಿತಿ ಹೊಂದಿರುವದುರಿಂದ ಹಾಗೂ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ ಅಡಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಕಾ:ಲಬದ್ಧ ಯೋಜನೆಯ ಕಾಮಗಾರಿಗಳನ್ನು ಪರಿಣಾಮಕಗಾರಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗಿರುತ್ತದೆ.

 

ಈ ಕಚೇರಿ ವ್ಯಾಪ್ತಿಯ ಹಂತ 1,ಹಂತ 2 ಮತ್ತು ಹಂತ 3ರ ಕಾಮಗಾರಿಗಳ ಅಂತಿಮ ಬಿಲ್‌ಗಳನ್ನು ತೀರುವಳಿಗೊಳಿಸಲು ಹಂತ 4 ಘಟ್ಟ 1 ಮತ್ತು ಘಟ್ಟ 2 ರ ಗುತ್ತಿಗೆ ಬಿಲ್‌ಗಳನ್ನು ಪಾವತಿಸಲು ಇವರ ಸೇವೆಯು ಈ ಕಚೇರಿಗೆ ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಮುಖ್ಯ ಯೋಜನಾಧಿಕಾರಿಯವರ ಅವರನ್ನು ಯೋಜನಾ ಅನುಷ್ಠಾನ ಘಟಕದಲ್ಲಿಯೇ ಮುಂದುವರೆಸಲು ಈ ಮೂಲಕ ತಮ್ಮಲ್ಲಿ ಕೋರಿದೆ ಎಂದು ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts