ಕೆಎಎಸ್‌, ಐಎಎಸ್‌, ಐಪಿಎಸ್‌, ಐಎಫ್ಎಸ್‌ ವೃಂದ; ಐದು ತಿಂಗಳಲ್ಲಿ 553 ವರ್ಗಾವಣೆ ಆದೇಶ

photo credit;indiatoday

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು  5 ತಿಂಗಳಲ್ಲಿ ಕೆಎಎಸ್‌, ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ವೃಂದದಲ್ಲಿ ಒಟ್ಟು  546 ವರ್ಗಾವಣೆ ಆದೇಶಗಳನ್ನು ಹೊರಡಿಸಿದೆ.

 

ಕೆಎಎಸ್‌ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದದ ಅಧಿಕಾರಿಗಳ  ವರ್ಗಾವಣೆ ಆದೇಶಗಳು   ವೈಯಕ್ತಿಕ ಮಾಹಿತಿಯಾಗಿವೆ ಎಂದು  ಆರ್‍‌ಟಿಐ ಅಡಿಯಲ್ಲಿ ಒದಗಿಸಲು ಕಾಂಗ್ರೆಸ್‌ ಸರ್ಕಾರವು  ನಿರಾಕರಿಸಿದ್ದರ ಬೆನ್ನಲ್ಲೇ ಕೆಎಎಸ್‌, ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ವೃಂದದಲ್ಲಿ 546 ಅಧಿಕಾರಿಗಳ ವರ್ಗಾವಣೆ ಮಾಡಿರುವ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ. 553   ವರ್ಗಾವಣೆ ಆದೇಶಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದರಲ್ಲೇ ಸರಿ ಸುಮಾರು 2,000ಕ್ಕೂ ಅಧಿಕ ವರ್ಗಾವಣೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

 

ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವ್ಯಾಪ್ತಿಯಲ್ಲಿನ ಇಂಜಿನಿಯರ್‍‌, ಪಿಡಿಓ, ಅರಣ್ಯ ಇಲಾಖೆಯ ಆರ್‍‌ಎಫ್‌ಓ, ಸಬ್‌ ಇನ್ಸ್‌ಪೆಕ್ಟರ್‍‌, ಪೊಲೀಸ್‌ ಇನ್ಸ್‌ಪೆಕ್ಟರ್‍‌, ಡಿವೈಎಸ್ಪಿ, ಪೊಲೀಸ್‌ ಪೇದೆಗಳು, ಕಂದಾಯ ಇಲಾಖೆಯ ತಹಶೀಲ್ದಾರ್‍‌ ವೃಂದವೂ ಸೇರಿದಂತೆ ಸಚಿವಾಲಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ನೌಕರರ ವರ್ಗಾವಣೆಗಳ ಸಂಖ್ಯೆಯೂ ಐದಾರು ಪಟ್ಟಿ ಹೆಚ್ಚಿದೆ ಎಂದು ಗೊತ್ತಾಗಿದೆ.

 

‘ದಿ ಫೈಲ್‌’ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ 2023ರ  ಜೂನ್‌ 1ರಿಂದ ಅಕ್ಟೋಬರ್‍‌ 31  ರವರೆಗೆ ಒಟ್ಟು 179 ಐಎಎಸ್  , ಜೂನ್‌ನಿಂದ ಸೆಪ್ಟಂಬರ್‍‌ ವರೆಗೆ 107 ಐಪಿಎಸ್‌, 61 ಐಎಫ್‌ಎಸ್‌, ಜೂನ್‌ 1ರಿಂದ ಅಕ್ಟೋಬರ್‍‌ 21ರವರೆಗೆ 206 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವಿಶೇಷವೆಂದರೆ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ, ಆದೇಶಗಳು ಹೊರಬಿದ್ದ ಒಂದೆರಡು ಗಂಟೆ, ಒಂದೆರಡು ದಿನದಲ್ಲಿ ಆದೇಶಗಳನ್ನೇ ಬದಲಾಯಿಸಲಾಗಿದೆ. ಹಾಗೆಯೇ ಸ್ಥಳ ನಿಯುಕ್ತಿ ಆದೇಶಗಳನ್ನೂ ಕೆಲವೇ ಗಂಟೆಗಳಲ್ಲಿ ಬದಲಾಯಿಸಿ ಮಾರ್ಪಡಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಿರುವುದು ತಿಳಿದು ಬಂದಿದೆ.

 

ಕೆಎಎಸ್‌ ವೃಂದಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಹತ್ತಾರು ಆದೇಶಗಳು, ಅಧಿಸೂಚನೆಗಳು ಹೊರಬಿದ್ದಿವೆ. ಅದೇ ವೇಗದಲ್ಲಿ ಆದೇಶಗಳು, ಅಧಿಸೂಚನೆಗಳು ಮಾರ್ಪಾಡಾಗಿವೆ. ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರೂ ತಮಗೆ ಅನುಕೂಲಕರವಾದ ಹುದ್ದೆ ತೋರಿಸಿಲ್ಲ ಎಂಬ ಕಾರಣಕ್ಕೆ ಹಲವು ಅಧಿಕಾರಿಗಳು ಕಾರ್ಯಭಾರ ವಹಿಸಿಕೊಂಡಿಲ್ಲ. ತಮಗಿರುವ ರಾಜಕೀಯ ಸಂಪರ್ಕ ಬಳಸಿಕೊಂಡು ಆಯಕಟ್ಟಿನ ಹುದ್ದೆಗಳಿಗೆ ಅಥವಾ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಯಲ್ಲಿಯೇ ಮರು ಸ್ಥಾಪಿತಗೊಂಡಿರುವುದು ಆದೇಶಗಳಿಂದ ಗೊತ್ತಾಗಿದೆ.

 

ಮತ್ತೊಂದು ವಿಶೇಷವೆಂದರೆ ಲೋಕಾಯುಕ್ತ, ಇಲಾಖೆ ವಿಚಾರಣೆಗಳನ್ನು ಎದುರಿಸುತ್ತಿರುವ ಕೆಎಎಸ್‌ ಅಧಿಕಾರಿಗಳನ್ನು  ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಜೂನ್‌ 1ರಿಂದ ಈವರೆವಿಗೂ ನಿರಂತರವಾಗಿ ಒಂದು ದಿನವೂ ವಿರಾಮವಿಲ್ಲದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ವರ್ಗಾವಣೆ ಆದೇಶ, ಅಧಿಸೂಚನೆ, ಸ್ಥಳ ನಿಯುಕ್ತಿ ಆದೇಶಗಳನ್ನು ಹೊರಡಿಸುತ್ತಲೇ ಇದೆ. ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಪೈಕಿ ಅವಧಿಪೂರ್ವ ವರ್ಗಾವಣೆಗಳದ್ದೇ ಸಿಂಹಪಾಲು ಇದೆ.

 

ಸಾರ್ವತ್ರಿಕ ವರ್ಗಾವಣೆ ಕಾಲಮಿತಿಯ ಸುತ್ತೋಲೆ ಅವಧಿಯು ಪೂರ್ಣಗೊಂಡಿದ್ದರೂ ಮುಖ್ಯಮಂತ್ರಿಯಿಂದ ಅನುಮೋದಿಸಲ್ಪಟ್ಟಿದೆ ಎಂಬ ಷರಾದೊಂದಿಗೆ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶಗಳು ಹೊರಬೀಳುತ್ತಲೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ರಾಜಮ್ಮ ಎ ಚೌಡರೆಡ್ಡಿ ಅವರನ್ನು 2023ರ ಆಗಸ್ಟ್‌ 25ರಂದು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶ ಹೊರಬಿದ್ದ ಒಂದೇ ದಿನದಲ್ಲಿ ಅಂದರೆ 2023ರ ಆಗಸ್ಟ್‌ 26ರಂದು ಹಿಂಪಡೆದು ಆದೇಶ ಹೊರಡಿಸಲಾಗಿತ್ತು. ಇದೇ ರಾಜಮ್ಮ ಎ ಚೌಡರೆಡ್ಡಿ ಎಂಬುವರನ್ನು  ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿತ್ತು.

 

ಆದರೆ ಇದೇ ಹುದ್ದೆಯನ್ನು ಜಂಟಿ ಆಯುಕ್ತರು ಎಂದು ಮೇಲ್ದರ್ಜೆಗೇರಿಸಿ 2023ರ ಅಕ್ಟೋಬರ್‍‌ 16ರಂದು ಅಧಿಸೂಚನೆ ಹೊರಡಿಸಿದೆ. ರಾಜಮ್ಮ ಎ ಚೌಡರೆಡ್ಡಿ ಅವರ ವಿರುದ್ಧ ಹಲವು ಆರೋಪಗಳು ಇರುವುದನ್ನು ಸ್ಮರಿಸಬಹುದು. ಹೀಗೆ ಹಲವು ಪ್ರಕರಣಗಳಲ್ಲಿ ವಿಚಾರಣೆಗೆ ಗುರಿಯಾಗಿರುವ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗೆ ವರ್ಗಾವಣೆ ಮಾಡಿರುವುದು ತಿಳಿದು ಬಂದಿದೆ.

 

ಜೂನ್‌ 1ರಿಂದ ಸೆಪ್ಟಂಬರ್‍‌ 25ರವರೆಗೆ ಹೊರಡಿಸಿರುವ ಕೆಎಎಸ್‌ ಗ್ರೂಪ್ ಎ ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶಗಳು ‘ವೈಯಕ್ತಿಕ ಮಾಹಿತಿ’ ಎಂದು ಹೇಳಿರುವ ಕಾಂಗ್ರೆಸ್‌ ಸರ್ಕಾರವು ಆ ಎಲ್ಲಾ ಆದೇಶಗಳನ್ನು  ರಹಸ್ಯವಾಗಿರಿಸಿತ್ತು.

 

2023ರ ಜೂನ್‌ 1ರಿಂದ ಸೆಪ್ಟಂಬರ್‍‌ 25ರವರೆಗೆ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ವೃಂದದ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿದ್ದ ಎಲ್ಲಾ ಆದೇಶಗಳಿಗಾಗಿ ‘ದಿ ಫೈಲ್‌’ 2023ರ ಸೆ.25ರಂದು ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಆಕ್ಟೋಬರ್‍‌ 7ರಂದು ಉತ್ತರ ಒದಗಿಸಿತ್ತು.

 

ವಿಶೇಷವೆಂದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಭಾಯಿಸುತ್ತಿದ್ದಾರೆ. ಹಾಗೆಯೇ ಕೆಎಎಸ್‌ ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳೂ ವಾಗ್ದಾಳಿ ನಡೆಸಿದ್ದವು.

 

ಉತ್ತರದಲ್ಲೇನಿದೆ?

 

ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ 2023ರ ಜೂನ್‌ 1ರಿಂದ 2023ರ ಸೆಪ್ಟಂಬರ್‍‌ 25ರವರೆಗೆ ಗ್ರೂಪ್‌ ಎ, ಬಿ ವೃಂದದ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಒದಗಿಸುವಂತೆ ಕೋರಿರುತ್ತೀರಿ.

 

ಪ್ರಸ್ತುತ ಶಾಖೆಯಲ್ಲಿ ಕರ್ನಾಟಕ ಆಡಳಿತ ಸೇವೆಗೆ ಸಂಬಂಧಿಸಿದ ಗ್ರೂಪ್‌ ಎ ಅಧಿಕಾರಿಗಳ ಸೇವಾ ವಿಷಯವನ್ನು ಮಾತ್ರ ಪ್ರಸ್ತುತ ಶಾಖೆಯಲ್ಲಿ ನಿರ್ವಹಿಸಲಾಗುತ್ತಿದೆ. ತಾವು ಕೋರಿರುವ ಮಾಹಿತಿಯು ಅಧಿಕಾರಿಗಳ ವೈಯಕ್ತಿಕ ಮಾಹಿತಿಯಾಗಿರುತ್ತದೆ.

 

ಮಾಹಿತಿ ಆಯೋಗದ ಪ್ರಕರಣ ಸಂಖ್ಯೆ ಕಮಾಅ 10338 ಎಪಿಎಲ್‌ 2016, ದಿನಾಂಕ 3 0-10-2017ರ ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ 34085/2011, 08-07-2015 ಮತ್ತು ಸುಪ್ರೀಂ ಕೋರ್ಟ್‌ನ ಸಿವಿಲ್‌ ಅಪೀಲ್‌ ಸಂಖ್ಯೆ 22/2009 ಕೆನರಾ ಬ್ಯಾಂಕ್‌/ ಶ್ಯಾಮ್‌ ಮತ್ತಿತರರ ಪ್ರಕರಣದಲ್ಲಿ ಎಸ್‌ಎಲ್‌ಪಿ ಸಂಖ್ಯೆ 27734/2012ನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶಗಳು, ವೈಯಕ್ತಿಕ ಮಾಹಿತಿಯೆಂದು ರಹಸ್ಯವಾಗಿರಿಸಿದ ಸರ್ಕಾರ

 

ನೇಮಕಾತಿ ಆದೇಶ, ಬಡ್ತಿ, ಎಲ್ಲಾ ವರ್ಗಾವಣೆಯ ಆದೇಶಗಳು, ವೇತನ ವಿವರಗಳೂ, ಮೆಮೋ, ಇಪಿಎಫ್‌, ಹೂಡಿಕೆ ವಿವರಗಳು, ಕೊಡುಗೆಗಳ ವಿವರ, ಸ್ಥಿರ ಮತ್ತು ಚರಾಸ್ತಿ ವಿವರಗಳು, ದೋಷಾರೋಪಣೆ ಪಟ್ಟಿಯ ಪ್ರತಿ, ವಿಚಾರಣೆಯ ನಡವಳಿಗಳು ಇತ್ಯಾದಿಗಳು ಖಾಸಗಿಯದ್ದಾಗಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ ಎಂದು 2012ರಲ್ಲಿ ಹೊರಡಿಸಿದ್ದ ಆದೇಶವನ್ನು ಮುಂದಿರಿಸಿತ್ತು.

 

 

ಮಾಹಿತಿ ಹಕ್ಕು ಅಧಿನಿಯಮ 8(1)(ಜೆ)ಯಲ್ಲೇನಿದೆ?

 

ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಯ ಗೌಪ್ಯತೆಯನ್ನು ಅನಗತ್ಯವಾಗಿ ಆಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭಾನುಸಾರ ರಾಜ್ಯ ಸಾರ್ವಜನಿಕ  ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಿಗೆ ಅಂತ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾದ ಹೊರತು ಅಂಥ ಮಾಹಿತಿಯನ್ನು ಒದಗಿಸಲು ಯಾವುದೇ ಬಾಧ್ಯತೆ ಇರತಕ್ಕದ್ದಲ್ಲ ಎಂದು ಹೇಳಿದೆ.

SUPPORT THE FILE

Latest News

Related Posts