ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

ಬೆಂಗಳೂರು; ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೇ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡಿ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿರುವ ನಾಲ್ಕು ಪ್ರಕರಣಗಳನ್ನು ‘ದಿ ಫೈಲ್‌’ ಇದೀಗ ದಾಖಲೆ ಸಹಿತ ಹೊರಗೆಡವುತ್ತಿದೆ.

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕ ಪರಿಶೋಧನೆ ವಿಭಾಗದಲ್ಲಿದ್ದ ಒಂದೇ ಹುದ್ದೆಗೆ ನಾಲ್ಕು ಮಂದಿ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರ ಬೆನ್ನಲ್ಲೇ ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಎಎಸ್‌ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಗಳನ್ನು ಅವಧಿಪೂರ್ವವಾಗಿ ವರ್ಗಾವಣೆ ಮಾಡಿರುವ ಸಂಬಂಧ ‘ದಿ ಫೈಲ್‌’ಗೆ ಮಹತ್ವದ ಟಿಪ್ಪಣಿ ಹಾಳೆಗಳು ಲಭ್ಯವಾಗಿದೆ.

 

ಒಂದು ಹುದ್ದೆಗೆ ವರ್ಗಾವಣೆ ಆದ ಮೇಲೆ ಕನಿಷ್ಟ ಎರಡು ವರ್ಷಗಳವರೆಗೆ ಆ ಅಧಿಕಾರಿಯು ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ನಂತರದ ವರ್ಷಗಳಲ್ಲಿ ಇದನ್ನು ಬದಲಾಯಿಸಿ ಒಂದು ಆ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದ್ದರು. ಈ ಸಂಬಂಧ ಯಾವುದೇ ನಿಯಮಗಳು ಇಲ್ಲದಿದ್ದರೂ ಮಾರ್ಗಸೂಚಿಗಳಿವೆ. ಎಲ್ಲಾ ಎ ಮತ್ತು ಬಿ ಗುಂಪಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ 3 ವರ್ಷ, ಸಿ ಗುಂಪಿನ ಹುದ್ದೆಗಳಿಗೆ 4 ವರ್ಷ, ಡಿ ಗುಂಪಿನ ಹುದ್ದೆಗಳಿಗೆ 7 ವರ್ಷ ಎಂದು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಅತಿ ವಿಶೇಷ ಪ್ರಕರಣಗಳಲ್ಲಿ ಮಾತ್ರ ಅವಧಿಪೂರ್ವವಾಗಿ ವರ್ಗಾವಣೆ ಮಾಡಲು ಮುಖ್ಯಮಂತ್ರಿಗೆ ಅಧಿಕಾರವಿದೆ.

 

ಆದರೆ 2023ರ ಜೂನ್‌ 23ರಂದು ಹೊರಡಿಸಿರುವ ವರ್ಗಾವಣೆ ಅಧಿಸೂಚನೆಯ ಪ್ರಕಾರ ನಾಲ್ಕು ಕೆಎಎಸ್‌ ಅಧಿಕಾರಿಗಳ ವರ್ಗಾವಣೆಗೆ ಸಕಾರಣಗಳಾಗಲೀ, ಈ ಸಂಬಂಧ ತೆರೆದಿರುವ ಕಡತದಲ್ಲಿಯೂ ಸಕಾರಣಗಳು, ವರ್ಗಾವಣೆಗೆ ಯಾವುದೇ ಸಮರ್ಥನೀಯ ಅಂಶಗಳಾಗಲೀ ಇಲ್ಲ. ಮತ್ತು ಅತಿ ವಿಶೇಷ ಸಂದರ್ಭವಿದೆ ಎಂಬ ಅಂಶವನ್ನೂ ಉಲ್ಲೇಖಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಮಮತ ಹೊಸಗೌಡರ (2022 ಮೇ 9), ಪ್ರಮೋದ್‌ ಹೆಚ್‌ ಪಿ  (2023ರ ಮಾರ್ಚ್‌ 4), ಸೋಮಪ್ಪ ಕಡಕೋಳ (2023ರ ಮಾರ್ಚ್‌ 8), ಅಪೂರ್ವ ಬಿದರಿ (2023ರ ಮಾರ್ಚ್‌ 23) ರಂದು ಕ್ರಮವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ, ಬಿಡಿಎ ಉಪ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿತ್ತು.

 

ಮತ್ತೊಂದು ವಿಶೇಷವೆಂದರೇ ಮಮತಾ ಹೊಸಗೌಡರ ಅವರು ಕಾರ್ಯನಿರ್ವಹಿಸುತ್ತಿದ್ದ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ (ಧಾರವಾಡ) ಹುದ್ದೆಯನ್ನು ಕೆಎಎಸ್‌ ಹಿರಿಯ  ಶ್ರೇಣಿಯ ವೃಂದಕ್ಕೆ ಉನ್ನತೀಕರಿಸಿ ಹಾಗೇ ಮುಂದುವರೆಸಿ 2023ರ ಜೂನ್‌ 20ರಂದು ಸಿಆಸುಇ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆ ಹೊರಬಿದ್ದ ಮೂರೇ ಮೂರು ದಿನದಲ್ಲಿ ಮಮತಾ ಹೊಸಗೌಡರ ಅವರನ್ನು ಉನ್ನತೀಕರಿಸಿದ  ಹುದ್ದೆಯಿಂದಲೇ ಎತ್ತಂಗಡಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಆದರೆ ವರ್ಗಾವಣೆಗೊಂಡ ನಾಲ್ಕೇ ನಾಲ್ಕು ತಿಂಗಳಲ್ಲಿ ಈ ಅಧಿಕಾರಿಗಳನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ನವಲಗುಂದ ಶಾಸಕರ ಶಿಫಾರಸ್ಸಿನಂತೆ ಎತ್ತಂಗಡಿ ಮಾಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು 4 ಮಂದಿ ಕೆಎಎಸ್‌ ಅಧಿಕಾರಿಗಳನ್ನು ಅವಧಿಪೂರ್ವವಾಗಿ ವರ್ಗಾವಣೆಗೊಳಿಸಿ 2023ರ ಜೂನ್‌ 23ರಂದು ಆದೇಶ ಹೊರಡಿಸಿದ್ದಾರೆ.

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಧಾರವಾಡ) ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಮತಾ ಹೊಸಗೌಡರ ಜಾಗಕ್ಕೆ ನವೀನ ಹೆಚ್ ವಿ ಅವರನ್ನು ವರ್ಗಾಯಿಸಬೇಕು ಎಂದು ನವಲಗುಂದ ಶಾಸಕರು ಶಿಫಾರಸ್ಸು ಮಾಡಿದ್ದರು.  ಅದೇ ರೀತಿ ಬಿಡಿಎ ಉಪ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಸೋಮಪ್ಪ ಕಡಕೋಳ ಅವರ ಜಾಗಕ್ಕೆ ಉಮೇಶ್‌ ಡಿ ಎಸ್‌ ಎಂಬುವರನ್ನು ವರ್ಗಾವಣೆ ಮಾಡಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಮತ್ತು ಕೆಐಎಡಿಬಿ (ಬೆಂಗಳೂರು) ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದ ಅಪೂರ್ವ ಬಿದರಿ ಅವರ ಜಾಗಕ್ಕೆ ಕಿಶನ್‌ ಕಲಾಲ್‌ ಅವರನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

 

 

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೆಎಡಿಬಿ (ಬೆಂಗಳೂರು) ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ನಾಲ್ವರು ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳು ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿಯೇ ಈ ನಾಲ್ಕು ಕೆಎಎಸ್ ಅಧಿಕಾರಿಗಳ ವರ್ಗಾವಣೆಯು ಅವಧಿಪೂರ್ವವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

 

ಅವಧಿಪೂರ್ವ ಎಂದಿದ್ದ ಡಿಪಿಎಆರ್‍‌ ಕಾರ್ಯದರ್ಶಿ

 

ಈ ನಾಲ್ಕು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಜೂನ್‌ 14ರಂದು ಮುಖ್ಯಮಂತ್ರಿಗಳ ಅನುಮೋದನೆಗೆ ಕಡತ ಮಂಡಿಸಿತ್ತು. ಈ ಕಡತವನ್ನು ಪರಿಶೀಲಿಸಿದ್ದ ಡಿಪಿಎಆರ್‍‌ ಕಾರ್ಯದರ್ಶಿ ಎಂ ಎಸ್‌ ಶ್ರೀಕರ್‍‌ ಅವರು ‘ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಡಿಸುವ ಕಡತ ಮಂಡಿಸಲಾಗಿದೆ. ಆದರೆ ಬಹುತೇಕ ಪ್ರಕರಣಗಳು ಅವಧಿಪೂರ್ವವಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿದ್ದರು. ಆದರೆ ಇದನ್ನು ಬದಿಗಿರಿಸಿ ಅವಧಿಪೂರ್ವ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

‘ಅಧಿಕಾರಿಯನ್ನು ಸಕಾರಣವಿಲ್ಲದೇ ಎರಡು ತಿಂಗಳುಗಳಲ್ಲಿ ವರ್ಗಾಯಿಸಿದ್ದರೆ ಇದು ನಿಸ್ಸಂದೇಹವಾಗಿ ಉಲ್ಲಂಘನೆ. ಅತಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾರ್ಗದರ್ಶಿ ಸೂತ್ರ ಮೀರಿ ಮುಖ್ಯಮಂತ್ರಿಗಳು ವರ್ಗಾವಣೆ ಮಾಡಬೇಕು. ಆದರೆ ಈ ಸಂದರ್ಭದಲ್ಲಿ ಹಿಂದಿನ ಸರ್ಕಾರ ಮಾರ್ಚ್ 23ರ ವರ್ಗಾವಣೆ ಮಾಡಿತ್ತು. ಈ ಕಾರಣಕ್ಕಾಗಿ ನೂತನ ಸರ್ಕಾರ ಅಧಿಕಾರ ಚಲಾಯಿಸಿದಂತಿದೆ. ಸಾಮಾನ್ಯವಾಗಿ ಸರ್ಕಾರಗಳು ಬದಲಾಗುವ ಹಂತದಲ್ಲಿ ಮತ್ತು ಸಾಮಾನ್ಯ ವರ್ಗಾವಣೆಯ ಅತಿ ನಿಕಟ ಪೂರ್ವದಲ್ಲಿ ಆಗುವ ವರ್ಗಾವಣೆಗಳು (ನಿರೀಕ್ಷಣಾ ಅವಧಿಯ ಸ್ಥಳನಿಯುಕ್ತಿ ಹೊರತುಪಡೀಸಿ) ಸಂಶಯದ ದೃಷ್ಟಿಯಲ್ಲಿಯೇ ನೋಡಬೇಕು,’ ಎನ್ನುತ್ತಾರೆ ಹಿರಿಯ ಕೆಎಎಸ್‌ ಅಧಿಕಾರಿಯೊಬ್ಬರು.

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದರು.

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರು. ವರ್ಗಾವಣೆ ಹಿಂದೆ ಇರುವವರು ಯಾರು ಆ ಅತೀಂದ್ರ ಎಂದು ಟ್ವೀಟ್‌ ಕೂಡ ಮಾಡಿದ್ದರು.

‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಜೂನ್‌ 30 ಕಡೇ ದಿನ ಎಂದು ಹೇಳಿದ್ದ ಸರ್ಕಾರವು ಕಡೇ ಗಳಿಗೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಇದೇ ಜುಲೈ 3ರವರೆಗೂ ವಿಸ್ತರಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts