Friday | July 31, 2026 |

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ ಸರ್ಕಾರಕ್ಕೆ ₹62.10 ಕೋಟಿ ನಷ್ಟವಾಗಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ  ತನ್ನ 49ನೇ ವರದಿಯಲ್ಲಿ ಬಹಿರಂಗಪಡಿಸಿದೆ.

ಈ ವರದಿಯನ್ನು 2026ರ ಜುಲೈ 23ರಂದು ಲೋಕಸಭೆಗೆ ಮಂಡಿಸಲಾಗಿದೆ.  ರಕ್ಷಣಾ ಸಚಿವಾಲಯದ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಹಾಗೂ ಶಸ್ತ್ರಾಸ್ತ್ರ ತಯಾರಿಕಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳನ್ನು ಸಮಿತಿ ತೀವ್ರವಾಗಿ ಪ್ರಶ್ನಿಸಿದೆ. ಅಲ್ಲದೇ  ಗುಣಮಟ್ಟ ಕಾಪಾಡುವಂತೆ ಸಮಗ್ರ ಸುಧಾರಣೆಗೆ ಶಿಫಾರಸು ಮಾಡಿದೆ.

ಸಿಎಜಿ ಎತ್ತಿರುವ ಆಕ್ಷೇಪಗಳ ಮೇರೆಗೆ ಪರಿಶೋಧನೆ ನಡೆಸಿರುವ ಲೋಕಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್ ಅವರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಈ  ವರದಿ ತಯಾರಿಸಿದೆ. ಈ ಪ್ರಕರಣವು ಭಾರತದ ಮಹಾಲೆಕ್ಕಪರಿಶೋಧಕರ 2019ರ ವರದಿ (ಸಂಖ್ಯೆ 15ರ ಪ್ಯಾರಾ 3.5ರ ಆಧಾರದ ಮೇಲೆ)  ಪರಿಶೀಲನೆ ಮಾಡಿದೆ.

 

 

ಒಡಿಶಾ ರಾಜ್ಯದಲ್ಲಿರುವ ಸರಕಾರದ ಯುದ್ಧೋಪಕರಣ ಕಾರ್ಖಾನೆ,  2009 ಮತ್ತು 2010ರಲ್ಲಿ ಭಾರತೀಯ ಸೇನೆಗೆ ಎರಡು ಬಗೆಯ 155 ಮಿ.ಮೀ. ಮದ್ದು ಗುಂಡುಗಳನ್ನು ಪೂರೈಸಿತ್ತು. ಆದರೆ, ಅವುಗಳ ಶೇಖರಣಾ ಅವಧಿ (Shelf Life) (15 ವರ್ಷ) ಮುಗಿಯುವ ಮುನ್ನವೇ ಸ್ಫೋಟಕ ವಸ್ತುವಾದ ಟಿಎನ್‌ಟಿ (TNT) ಗುಂಡುಗಳಿಂದ ಹೊರ ಸೋರಿಕೆ (Exudation) ಆಗುತ್ತಿರುವುದನ್ನು ಸೇನೆ ಪತ್ತೆಹಚ್ಚಿತ್ತು. ಇದರಿಂದ ಮದ್ದು ಗುಂಡುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿದ್ದವು.

ಪರಿಶೋಧನೆಯ ವೇಳೆ, ಮದ್ದು ಗುಂಡುಗಳಲ್ಲಿ ಬಳಸಲಾದ ಟಿಎನ್‌ಟಿ ಮಿಶ್ರಣದ ಕರಗುವ ಬಿಂದು (Set Point / Melting Point) ನಿಗದಿತ ಮಾನದಂಡಕ್ಕಿಂತ ಕಡಿಮೆಯಿತ್ತು ಎಂಬುದಾಗಿ ಮಿಲಿಟರಿ ಸ್ಪೋಟಕಗಳ ಗುಣಮಟ್ಟ ಪರಿಶೋಧಕರಿಗೆ ಗೊತ್ತಾಯಿತು.

 

 

ಮಿಲಿಟರಿ ಸ್ಪೋಟಕಗಳ ಗುಣಮಟ್ಟ ಪರಿಶೋಧಕರು ಒಟ್ಟು 21,259 ಸಂಖ್ಯೆಯ ಎರಡೂ ಬಗೆಯ ಮದ್ದುಗುಂಡುಗಳು ಉಪಯೋಗ ಆಗುವುದಿಲ್ಲ ಬದಿಗಿರಿಸಿದರು. ಸ್ಫೋಟಕ ವಸ್ತುವಾದ ಟಿಎನ್‌ಟಿ. ಶೇಖರಣಾ ಅವಧಿ (Shelf Life)(15 ವರ್ಷ) ಮುಗಿಯುವ ಮುನ್ನವೇ ಅನುಪಯುಕ್ತವಾದರೆ ಹೊಸದಾಗಿ ಬದಲಿಸಿಕೊಡಬೇಕಾಗಿ ಸೇನೆಯು ಖರೀದಿ ಒಪ್ಪಂದದಲ್ಲಿ ಷರತ್ತು ವಿಧಿಸಿತ್ತು.

 

 

14,159 ಮದ್ದು ಗುಂಡುಗಳ ಬದಲಾವಣೆ

ದೋಷ ದೃಢಪಟ್ಟ ನಂತರ ಆಗಿನ Ordnance Factory Board ಭಾರತೀಯ ಸೇನೆಗೆ 14,159 ಮದ್ದು ಗುಂಡುಗಳ ಉಚಿತವಾಗಿ ಬದಲಾಯಿಸಿ ನೀಡಬೇಕಾಯಿತು. ಇದರ ಒಟ್ಟು ವೆಚ್ಚವನ್ನು 62.10 ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಬೇಕಾಯಿತು. ಮಂದ್ದುಗುಂಡುಗಳಲ್ಲಿ ಬಳಸಲಾದ ಸ್ಪೋಟಕ ಸಾಮಾಗ್ರಿ ಟಿಎನ್‌ಟಿ (TNT) ಯ ಗುಣಮಟ್ಟದ ಪರಿಶೀಲನೆಯೇ ಆಗಿರಲಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

ಟಿಎನ್‌ಟಿಯ ಗುಣಮಟ್ಟದ ಪರಿಶೀಲನೆಯ ವ್ಯವಸ್ಛೆಯನ್ನು ಯುದ್ದೋಪಕರಣ ಕಾರ್ಖಾನೆ ಹೊಂದಿರಲಿಲ್ಲ ಎಂದು ಸಿಎಜಿ ಪತ್ತೆ ಮಾಡಿದ್ದನ್ನು  ಲೆಕ್ಕಪತ್ರ ಸಮಿತಿ ಕಳವಳ ವ್ಯಕ್ತಪಡಿಸಿದೆ. ಗುಣಮಟ್ಟ ನಿಯಂತ್ರಣ ಮಹಾನಿರ್ದೇಶಕರಿಂದ ಟಿಎನ್‌ಟಿ ಮಿಶ್ರಣದ ಕರಗುವ ಬಿಂದು ಖಾತರಿಪಡಿಸಿದ ನಂತರ ಯುದ್ದೋಪಕರಣ ಕಾರ್ಖಾನೆಯಲ್ಲಿ ಮರುಪರಿಶೀಲನೆ ಅಗತ್ಯ ಎಂದು ರಕ್ಷಣಾ ಸಚಿವಾಲಯವು ಸಮಿತಿಗೆ ಸಲ್ಲಿಸಿದ ಹಿನ್ನಲೆ ಟಿಪ್ಪಣಿಯಲ್ಲಿ ತಿಳಿಸಿದೆ

ಮದ್ದುಗುಂಡುಗಳಿಗೆ ಗಳಿಗೆ ಟಿಎನ್‌ಟಿ ತುಂಬುವ ಮೊದಲು ಅಗತ್ಯ ಗುಣಮಟ್ಟ ಪರೀಕ್ಷೆ ನಡೆಸಿರಲಿಲ್ಲ.  ಉತ್ಪಾದನೆ ಹಾಗೂ ಪರಿಶೀಲನೆ ಎರಡರಲ್ಲೂ ಪ್ರಮುಖ ಲೋಪ ಉಂಟಾಯಿತು. ಈಗ ಇವುಗಳನ್ನು ಸರಿಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಸಲ್ಲಿಸಿದ ಟಿಪ್ಪಣಿಯಲ್ಲಿ ಹೇಳಿದೆ. ಪುಣೆಯ ಉನ್ನತ ಸ್ಪೋಟಕ ಕಾರ್ಖಾನೆ (HEF) ಯಲ್ಲಿ ಟಿಎನ್‌ಟಿ ಯ ಕಠಿಣ ಪರೀಕ್ಷೆ ನಡೆಸಲಾಗುತ್ತದೆ.  ಮತ್ತು ಯುದ್ಧೋಪಕರಣ ಕಾರ್ಖಾನೆ ಬದ್ಮಾಲ್ ನಲ್ಲಿ ಕೂಡ ಪರೀಕ್ಷೆ ನಡೆಸಲಾಗುತ್ತಿದೆ ಎಂದಿದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಘಟನೆ ಕೇವಲ ಆರ್ಥಿಕ ನಷ್ಟವಲ್ಲ, ರಾಷ್ಟ್ರದ ಭದ್ರತೆಯ ಮೇಲೆಯೂ ಪರಿಣಾಮ ಬೀರುವ ಗಂಭೀರ ವಿಷಯ ಎಂದು ಹೇಳುವ ಮೂಲಕ ಕಟುವಾಗಿ ಟೀಕಿಸಿದೆ.

ಸಮಿತಿಯ ಶಿಫಾರಸುಗಳು

ಶಸ್ತ್ರಾಸ್ತ್ರ ಪರೀಕ್ಷಾ ವಿಧಾನಗಳ ಸಂಪೂರ್ಣ ಮರುಪರಿಶೀಲನೆ.ಟಿಎನ್‌ಟಿ ಸೇರಿದಂತೆ ಎಲ್ಲ ಸ್ಫೋಟಕ ವಸ್ತುಗಳ ವೈಜ್ಞಾನಿಕ ಪರೀಕ್ಷೆ ಕಡ್ಡಾಯ. ಉತ್ಪಾದನಾ ಹಂತದಲ್ಲೇ ಬಹುಮಟ್ಟದ ಗುಣಮಟ್ಟ ಪರಿಶೀಲನೆ. ಸ್ವತಂತ್ರ ಗುಣಮಟ್ಟ ಪರಿಶೀಲನಾ ವ್ಯವಸ್ಥೆಯನ್ನು ಮತ್ತಷ್ಟು  ಬಲಪಡಿಸುವುದು. ಭವಿಷ್ಯದಲ್ಲಿ ಇಂತಹ ಆರ್ಥಿಕ ನಷ್ಟ ತಪ್ಪಿಸಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು ಎಂಬ ನಾಲ್ಕು ಶಿಫಾರಸುಗಳನ್ನು ಪಿಎಸಿ ತನ್ನ ವರದಿಯಲ್ಲಿ ರಕ್ಷಣಾ ಸಚಿವಾಲಯಕ್ಕೆ ಮಾಡಿದೆ.

₹62.10 ಕೋಟಿ ನಷ್ಟ ಕೇವಲ ಲೆಕ್ಕಪತ್ರದ ವಿಷಯವಲ್ಲ

ದೋಷಪೂರಿತ ಗೋಳಿಗಳ ಬದಲಿಯಿಂದ ಸಂಭವಿಸಿದ ₹62.10 ಕೋಟಿ ನಷ್ಟ ಕೇವಲ ಲೆಕ್ಕಪತ್ರದ ವಿಷಯವಲ್ಲ.  ಇದು ಭಾರತದ ರಕ್ಷಣಾ ಉತ್ಪಾದನಾ ವ್ಯವಸ್ಥೆಯ ಗುಣಮಟ್ಟ ನಿಯಂತ್ರಣದಲ್ಲಿರುವ ದುರ್ಬಲತೆಗಳನ್ನು ಬಯಲಿಗೆ ತಂದಿದೆ. ಉತ್ಪಾದನೆ, ಪರೀಕ್ಷೆ ಮತ್ತು ಗುಣಮಟ್ಟ ಭರವಸೆಯ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಮರುಕಳಿಸುವ ಅಪಾಯವಿದೆ ಎಂದು ಪಿಎಸಿ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯವು ಪರೀಕ್ಷಾ ಮಾನದಂಡಗಳನ್ನು ಮರುಪರಿಶೀಲಿಸಿ, ಶಸ್ತ್ರಾಸ್ತ್ರಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.

 

 

ಈ ಪ್ರಕರಣವು 2009-10ರಲ್ಲಿ ಸೇನೆಗೆ ಪೂರೈಸಲಾದ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ್ದಾಗಿದೆ. ಆದರೂ  ಅದರ ಪರಿಣಾಮ ಹಲವು ವರ್ಷಗಳ ನಂತರ ಸಂಪೂರ್ಣವಾಗಿ ಬಹಿರಂಗವಾಯಿತು. ಮದ್ದುಗುಂಡುಗಳ ಶೇಖರಣಾ ಅವಧಿಯೊಳಗೆ ದೋಷಗಳು ಕಂಡುಬಂದಿರುವುದು ಉತ್ಪಾದನಾ ಹಂತದಲ್ಲಿನ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸಣ್ಣ ಲೋಪವೂ ರಾಷ್ಟ್ರದ ಭದ್ರತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಪ್ರಕರಣಕ್ಕೆ ವಿಶೇಷ ಮಹತ್ವ ದೊರೆತಿದೆ ಎಂದು ವಿಶ್ಲೇಷಿಸಿರುವುದು ತಿಳಿದು ಬಂದಿದೆ.

ಸಿಎಜಿಯ ಆಕ್ಷೇಪಣೆ ಗಂಭೀರವಾಗಿ ಪರಿಗಣಿಸಿದ ಪಿಎಸಿ

ಮಹಾಲೆಕ್ಕಪರಿಶೋಧಕರ (CAG) ವರದಿಯಲ್ಲಿ ಉಲ್ಲೇಖಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅವುಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಕೇವಲ ಲೆಕ್ಕಪತ್ರದ ದೋಷವೆಂದು ಪರಿಗಣಿಸದೆ, ರಕ್ಷಣಾ ಉತ್ಪಾದನಾ ವ್ಯವಸ್ಥೆಯಲ್ಲಿನ ಮೂಲಭೂತ ಸಮಸ್ಯೆಯಾಗಿ ಸಮಿತಿ ಇದನ್ನು ಗುರುತಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಉತ್ಪಾದನಾ ಸಂಸ್ಥೆಗಳು ಜವಾಬ್ದಾರಿಯನ್ನು ಮತ್ತಷ್ಟು ಗಂಭೀರವಾಗಿ ನಿರ್ವಹಿಸಬೇಕೆಂದು ಸಮಿತಿ ಅಭಿಪ್ರಾಯಪಟ್ಟಿದೆ.

ಹಲವು ಸುತ್ತಿನ ಪರಿಶೀಲನೆ ಗುಣಮಟ್ಟ ನಿಯಂತ್ರಣದ ಬಳಿಕವೂ ಕಾರ್ಖಾನೆಯಿಂದ ಪೂರೈಸಲಾದ ಅಂತಿಮ ಉತ್ಪನ್ನ ತಿರಸ್ಕೃತ ಆಗುವುದು ಕಳವಳಕಾರಿ ಎಂದು ಲೆಕ್ಕಪತ್ರ ಸಮಿತಿ ಹೇಳಿದೆ.  ಯುದ್ಧೋಪಕರಣಗಳ ಪರೀಕ್ಷಾರ್ಹ ಪ್ರಯೋಗ ಮತ್ತು ಪರೀಕ್ಷಾ ಮಾರ್ಗಸೂಚಿಗಳ ನಡುವೆ ಹಾಗೂ ಯುದ್ಧಭೂಮಿಯಲ್ಲಿ ನೈಡ ಪ್ರಯೋಗಗಳ ನಡುವೆ ವ್ಯತ್ಯಾಸ ಇದೆ ಎಂದಿದೆ.

 

ಇಂತಹ ಸಂದರ್ಭದಲ್ಲಿ, ವಿವಿಧ ಗಣ ಮಟ್ಟ ನಿಯಂತ್ರಣ ಸಂಸ್ಠೆಗಳಿಂದ ಮಾಡಲಾಗುವ ಗುಣಮಟ್ಟ ನಿಯಂತ್ರಣ ಸಂಪೂರ್ಣ ಪದ್ಧತಿಯನ್ನು ಮರು ವಿಮರ್ಶೆ ಮಾಡಬೇಕು. ಗುಣಮಟ್ಟ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡಲು ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ಪರಿಗಣಿಸಬೇಕು ಮತ್ತು ಶಸ್ತ್ರ ತಯಾರಿಕ ಕಚ್ಛ ವಸ್ತುಗಳನ್ನು ಕೂಡ ಕಠಿಣವಾಗಿ ಗುಣಮಟ್ಟ ಪರಿಶೀಲನೆ ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ದೋಷಪೂರಿತ ಫಿರಂಗಿ ಗುಂಡುಗಳು ಯುದ್ಧಭೂಮಿಯಲ್ಲಿ ಅಥವಾ ತರಬೇತಿ ಸಂದರ್ಭಗಳಲ್ಲಿ ಬಳಸಲ್ಪಟ್ಟಿದ್ದರೆ ಸೈನಿಕರ ಜೀವಕ್ಕೆ ಅಪಾಯ ಉಂಟಾಗಬಹುದಿತ್ತು. ರಾಷ್ಟ್ರೀಯ ಹಿತದಿಂದ ಸ್ಫೋಟಕ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಹೀಗಾಗಿ ಪ್ರತಿಯೊಂದು ಬ್ಯಾಚ್ ಉತ್ಪಾದನೆಯ ಬಳಿಕ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷೆ ನಡೆಸುವುದು ಅತ್ಯಗತ್ಯ. ಜಾಗತಿಕ ಗುಣಮಟ್ಟ ಪರೀಕ್ಷಾ ಪದ್ಧತಿಗಳನ್ನು ಬಳಸಿಕೊಳ್ಳುವುದು ಉತ್ತಮವಾಗಿದೆ ಎಂದು ಸಚಿವಾಲಯ ನೀಡಿದ ಉತ್ತರವನ್ನು ನಕರಾತ್ಮಕವಾಗಿ ಪರಿಗಣಿಸಿದೆ.

 

ಗುಣಮಟ್ಟ ನಿಯಂತ್ರಕರ (DGCA) ಕಚೇರಿಗಳಲ್ಲಿ ಶೇಕಟ 62ಕ್ಕಿಂತ ಹೆಚ್ಚು ಹುದ್ದೆಗಳಉ ಖಾಲಿ ಇರುವುದನ್ನು ಸಮಿತಿ ಗಮನಿಸಿದ್ದು, ಯುದ್ಧ ಸಾಮಾಗ್ರಿಗಳ ಗುಣಮಟ್ಟ ಪರಿಶೀಲನೆ ಮಾಡುವ ಸಂಸ್ಥೆ ಅತೀ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಮಿತಿ ಆಶ್ಚರ್ಯ ವ್ಯಕ್ತ ಪಡಿಸಿದೆ.

 

ಸಾಕಷ್ಟು ಮಾನವ ಸಂಪನ್ಮೂಲ ಇಲ್ಲದೆ ಸಂಸ್ಥ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಅಸಾಧ್ಯ. ಆದುದರಿಂದ ಸರಕಾರವು ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕಾಗಿ ತಾಕೀತು ಮಾಡಿದೆ. ರಕ್ಷಣಾ ಸಚಿವಾಲಯವು ಸಮಯ ನಿಗದಿಯ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯ ರೋಡೋ ಮ್ಯಾಪ್ ಮತ್ತು ಸಂಸ್ಥೆಯ ಸಂಘಟನಾತ್ಮಕ ಬದಲಾವಣೆಯನ್ನು ಸಲ್ಲಿಸುವಂತೆ ಸೂಚಿಸಿದೆ.

Hot this week

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...
Please Scan to make Your Contribution

Topics

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

Related Articles

Popular Categories

error: Content is protected !!