ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ 1,248 ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಅದರಲ್ಲೂ ವಿಶೇಷವಾಗಿ ಕಳೆದ 3 ವರ್ಷಗಳಲ್ಲಿ 887 ಪ್ರಕರಣಗಳು ಲಂಚಕ್ಕೆ ಸಂಬಂಧಿಸಿದ್ದಾಗಿವೆ.
ದೇಶದಾದ್ಯಂತ ಸರ್ಕಾರ ಸಂಸ್ಥೆಗಳ ವಿರುದ್ಧ 2025ರಲ್ಲಿ 70,584 ಭ್ರಷ್ಟಾಚಾರ ಸಂಬಂಧಿತ ದೂರುಗಳು ದಾಖಲಾಗಿವೆ ಎಂದು ಕೇಂದ್ರ ಜಾಗೃತ ಆಯೋಗವು ತನ್ನ ವರದಿ ನೀಡಿತ್ತು. ಈ ವರದಿಯ ಬೆನ್ನಲ್ಲೇ ಕರ್ನಾಟಕ ಲೋಕಾಯುಕ್ತದಲ್ಲಿಯೂ ಸಹ ಕಳೆದ ನಾಲ್ಕು ವರ್ಷಗಳಳ್ಲಿ 1,248 ಪ್ರಕರಣಗಳು ಮತ್ತು ಲಂಚಕ್ಕೆ ಸಂಬಂಧಿಸಿದಂತೆ 887 ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಲಂಚ ಪಡೆಯುತ್ತಿದ್ದ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ, ನೌಕರರ ವಿವರಗಳ ಕುರಿತು ವಿಧಾನ ಪರಿಷತ್ನಲ್ಲಿ ಸದಸ್ಯ ಮಧು ಜಿ ಮಾದೇಗೌಡ ಮತ್ತು ಡಾ ಧನಂಜಯ ಸರ್ಜಿ ಅವರು 2026ರ ಆಗಸ್ಟ್ 20ರಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಲಂಚ ಮತ್ತು ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಗಳು ದಾಖಲಾಗಿರುವ ಕುರಿತು ಸುದೀರ್ಘವಾದ ಉತ್ತರ ನೀಡಿದ್ದಾರೆ.
ಈ ಉತ್ತರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
2022ರ ಸೆಪ್ಟಂಬರ್ 10ರಿಂದ 2026ರ ಆಗಸ್ಟ್ 13ರವರೆಗೆ ನೀಡಿರುವ ಮಾಹಿತಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ (ದಾಳಿ) ಪ್ರಕರಣಗಳ ಸಂಖ್ಯೆ 939 ರಷ್ಟಿರುವುದು ಗೊತ್ತಾಗಿದೆ.
ಮತ್ತೊಂದು ವಿಶೇಷವೆಂದರೇ ಐಎಎಸ್ ಮತ್ತು ಐಪಿಎಸ್ ವರ್ಗದಲ್ಲಿ ತಲಾ ಒಂದು ಪ್ರಕರಣ ಮಾತ್ರ ಇದೆ. ಕೆಎಎಸ್ ವರ್ಗದಲ್ಲಿ 27, ಗ್ರೂಪ್ ಎ ವರ್ಗದಲ್ಲಿ 12, ಗ್ರೂಪ್ ಬಿ ನಲ್ಲಿ 376, ಗ್ರೂಪ್ ಸಿ ನಲ್ಲಿ 733 ಮತ್ತು ಡಿ ಗ್ರೂಪ್ನಲ್ಲಿ 28, 49 ಮಂದಿ ಹೊರಗುತ್ತಿಗೆ ನೌಕರರ ವಿರುದ್ಧವೂ ಲೋಕಾಯಕ್ತದಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.

2022ರ ಸೆಪ್ಟಂಬರ್ 10ರಿಂದ 2026ರ ಆಗಸ್ಟ್ 13ರವರೆಗಿನ ಒಟ್ಟಾರೆ 1,248 ಪ್ರಕರಣಗಳಲ್ಲಿ 218 ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇವೆ. 18 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. 364 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಉಳಿದ 648 ಪ್ರಕರಣಗಳು ತನಿಖೆಯಲ್ಲಿವೆ ಎಂದು ಡಿ ಕೆ ಶಿವಕುಮಾರ್ ಅವರು ಉತ್ತರಿಸಿರುವುದು ಗೊತ್ತಾಗಿದೆ.
2023ರ ಜನವರಿ 1ರಿಂದ 2026ರ ಆಗಸ್ಟ್ 13ರವರೆಗೆ ಭ್ರಷ್ಟಾಚಾರ ನಿಗ್ರಹ 1988ರ ಅಡಿಯಲ್ಲಿ 887 ಲಂಚ ಪ್ರಕರಣಗಳ ಪೈಕಿ 126 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಎಂದು ಮಾಹಿತಿ ಒದಗಿಸಿದ್ದಾರೆ.
ಅದೇ ರೀತಿ ಈ 1,248 ಪ್ರಕರಣಗಳಲ್ಲಿ ಕೆಲವು ಪ್ರಕರಣಗಳು ತನಿಖಾ/ನ್ಯಾಯಾಲಯಗಳ ತಡೆಯಾಜ್ಞೆ , ನ್ಯಾಯಾಲಯಗಳಲ್ಲಿ ವಿಚಾರಣೆ, ಅಪೀಲು ಹಂತಗಳಲ್ಲಿವೆ. ಇಲ್ಲಿಯವರೆಗೆ ನ್ಯಾಯಾಲಯಗಳಿಂದ ಯಾವುದೇ ಸರ್ಕಾರಿ ನೌಕರರನ್ನು ತಪ್ಪಿತಸ್ಥರು ಎಂದು ನಿರ್ಣಯಿಸಿಲ್ಲ ಎಂದು ಉತ್ತರದಲ್ಲಿ ಮಾಹಿತಿ ನೀಡಿರುವುದು ತಿಳಿದು ಬಂದಿದೆ.

2023ನೇ ಸಾಲಿನಿಂದ ಇಲ್ಲಿಯವರೆಗೆ ನ್ಯಾಯಾಲಯದ ವಿಚಾರಣೆಯಲ್ಲಿರುವ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿಯಲ್ಲಿ ಸಂಬಂಧಪಟ್ಟ ಪ್ರಕರಣಗಳಲ್ಲಿ ನ್ಯಾಯಾಲಯಗಳು ವಿಚಾರಣೆ ಮುಗಿಸಿವೆ. ಒಟ್ಟು 148 ಪ್ರಕರಣಗಳಲ್ಲಿ ಶಿಕ್ಷೆಯನ್ನು ಪ್ರಕಟಿಸಿವೆ ಎಂದು ವಿವರಿಸಿರುವುದು ಗೊತ್ತಾಗಿದೆ.

ಆರೋಗ್ಯಾಧಿಕಾರಿ, ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟಂಟ್ ಇಂಜಿನಿಯರ್, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪೊಲೀಸ್ ಇನ್ಸ್ಪೆಕ್ಟರ್ಗಳು, ಹೆಡ್ ಕಾನ್ಸ್ಟೇಬಲ್, ಸಹಾಯಕ ಲೆಕ್ಕ ಪರಿಶೋಧಕರು, ಮುಖ್ಯ ಇಂಜಿನಿಯರ್, ಸರ್ಕಾರಿ ಅಭಿಯೋಜಕ, ಎಪಿಪಿಗಳು, ಪಿಎಸ್ಐಗಳು, ಕಚೇರಿ ಅಧೀಕ್ಷಕರು, ಶಾಖಾಧಿಕಾರಿಗಳು, ಎಸಿಪಿ, ಸರ್ವೇಯರ್ಗಳು, ಆಹಾರ ನಿರೀಕ್ಷಕರು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ನಗರದಲ್ಲಿ ಒಟ್ಟು 149 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 30 ಮಂದಿ ಎ ಗ್ರೂಪ್ ಅಧಿಕಾರಿಗಳಿದ್ದಾರೆ. ಇನ್ನುಳಿದವರು ಬಿ ಗ್ರೂಪ್ ಅಧಿಕಾರಿಗಳಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಒಟ್ಟು 42 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈ ಜಿಲ್ಲೆಯಲ್ಲಿ ಎ ಗ್ರೂಪ್ ವೃಂದದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿಲ್ಲ.
ಬಾಗಲಕೋಟೆ ಜಿಲ್ಲೆಯಲ್ಲಿ 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿವೆ. ಈ ಪೈಕಿ ಇಬ್ಬರು ಮಾತ್ರ ಎ ವೃಂದದ ಅಧಿಕಾರಿಗಳಿದ್ದಾರೆ. ಉಳಿದವರು ಬಿ ಮತ್ತು ಸಿ ಗುಂಪಿನ ಅಧಿಕಾರಿ, ನೌಕರರಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 39 ಮಂದಿ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿವೆ. ಈ ಪೈಕಿ ಬಿ ವೃಂದದ ತಹಶೀಲ್ದಾರ್ಗಳಿದ್ದಾರೆ. ಉಳಿದಂತೆ ತೆರಿಗೆ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಪಿಡಿಒ, ಎಇಇಗಳಿದ್ದಾರೆ. ಆದರೆ ಒಬ್ಬೇ ಒಬ್ಬ ಎ ಗುಂಪಿನ ಅಧಿಕಾರಿ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಬೆಳಗಾವಿಯಲ್ಲಿ 35 ಮಂದಿ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿವೆ. ಇದರಲ್ಲಿ 14 ಮಂದಿ ಎ ಗುಂಪಿನ ಅಧಿಕಾರಿಗಳಿದ್ದಾರೆ. ಉಳಿದವರು ಬಿ ಮತ್ತು ಸಿ ಗುಂಪಿಗೆ ಸೇರಿದ ಅಧಿಕಾರಿಗಳಿರುವುದು ತಿಳಿದು ಬಂದಿದೆ.
ಬಳ್ಳಾರಿ ಜಿಲ್ಲೆಯಲ್ಲಿ 28 ಮಂದಿ ಅಧಿಕಾರಿಗಳ ವಿರುದ್ಧ ಲಂಚ ಪಡೆದ/ಭ್ರಷ್ಟಾಚಾರದ ಪ್ರಕರಣಗಳಿವೆ. ಈ ಪೈಕಿ ಒಬ್ಬ ಅಧಿಕಾರಿ ಎ ಗುಂಪಿಗೆ ಸೇರಿದ್ದರೇ ಉಳಿದ 27 ಮಂದಿ ಅಧಿಕಾರಿ, ನೌಕರರು ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ಬೀದರ್ ಜಿಲ್ಲೆಯಲ್ಲಿ 23 ಮಂದಿ ಅಧಿಕಾರಿ, ನೌಕರರ ವಿರುದ್ಧ ಪ್ರಕರಣ ದಾಖಲಾಗಿವೆ. ಈ ಪೈಕಿ 4 ಮಂದಿ ಎ ಗುಂಪಿಗೆ ಸೇರಿದ್ದರೇ ಉಳಿದವರ ಪೈಕಿ ಬಹುತೇಕರು ಸಿ ಗುಂಪಿಗೆ ಸೇರಿದ ನೌಕರರಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 26 ಮಂದಿ ಅಧಿಕಾರಿ, ನೌಕರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಒಬ್ಬ ಅಧಿಕಾರಿ ಮಾತ್ರ ಎ ಗುಂಪಿಗೆ ಸೇರಿದ್ದರೆ ಉಳಿದವರು ಸಿ ಗುಂಪಿಗೆ ಸೇರಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ 18 ಮಂದಿ ಅಧಿಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ಈ ಜಿಲ್ಲೆಯಲ್ಲಿ ಒಬ್ಬೇ ಒಬ್ಬ ಎ ಗುಂಪಿನ ಅಧಿಕಾರಿ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಾಗಿಲ್ಲ. 18 ಮಂದಿಯಲ್ಲಿ ಬೆರಳಣಿಕೆಯಷ್ಟು ಬಿ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲ ಸಿ ಗುಂಪಿಗೆ ಸೇರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 21 ಮಂದಿ ಅಧಿಕಾರಿ ನೌಕರರ ವಿರುದ್ಧ ಲಂಚ ಪಡೆದ/ಭ್ರಷ್ಟಾಚಾರ ಎಸಗಿರುವ ಪ್ರಕರಣಗಳಿವೆ. ಇವರೆಲ್ಲರೂ ಬಿ ಮತ್ತು ಸಿ ಗುಂಪಿನಕ ಅಧಿಕಾರಿ ನೌಕರರಿರುವುದು ಗೊತ್ತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 43 ಅಧಿಕಾರಿ ನೌಕರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಬ್ಬೇ ಒಬ್ಬ ಎ ಗುಂಪಿನ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಬಿ ಮತ್ತು ಸಿ ಗುಂಪಿನ ಅಧಿಕಾರಿ, ನೌಕರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 26 ಮಂದಿ ಅಧಿಕಾರಿ, ನೌಕರರ ವಿರುದ್ಧ ಪ್ರಕರಣಗಳಿವೆ. ಈ ಪೈಕಿ ಒಬ್ಬೇ ಒಬ್ಬ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 56 ಮಂದಿ ಅಧಿಕಾರಿಗಳ ವಿರುದ್ಧ ಪ್ರಕರಣಗಳಿವೆ. ಈ ಪೈಕಿ 6 ಮಂದಿ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 18 ಮಂದಿ ವಿರುದ್ಧ ಪ್ರಕರಣಗಳಿವೆ. ಈ ಜಿಲ್ಲೆಯಲ್ಲಿಯೂ ಸಹ ಇಬ್ಬರು ಅಧಿಕಾರಿಗಳು ಎ ಗುಂಪಿಗೆ ಸೇರಿದ್ದಾರೆ. ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ಗದಗ್ ಜಿಲ್ಲೆಯಲ್ಲಿ 27 ಮಂದಿ ಅಧಿಕಾರಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿವೆ. ಬಿಜೆಪಿ ಶಾಸಕ ಚಂದ್ರು ಲಮಾಣಿ ಮತ್ತು ಅವರ ಆಪ್ತ ಸಹಾಯಕನ ವಿರುದ್ಧವೂ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣಗಳಿವೆ. ಅಧಿಕಾರಿ ನೌಕರರ ಪೈಕಿ ಬಿ ಮತ್ತು ಸಿ ಗುಂಪಿಗೆ ಸೇರಿದವರಿದ್ದರೇ ಎ ಗುಂಪಿಗೆ ಸೇರಿದ ಒಬ್ಬೇ ಒಬ್ಬ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಕಲ್ಬುರ್ಗಿ ಜಿಲ್ಲೆಯಲ್ಲಿ 69 ಅಧಿಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ಇವರೆಲ್ಲರೂ ಬಿ ಮತ್ತು ಸಿ ಗುಂಪಿನ ಅಧಿಕಾರಿ ನೌಕರರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ 27 ಮಂದಿ ಅಧಿಕಾರಿ ನೌಕರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಬ್ಬೇ ಒಬ್ಬ ಅಧಿಕಾರಿ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದವರಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 65 ಮಂದಿ ವಿರುದ್ಧ ಪ್ರಕರಣಗಳಿವೆ. ಈ ಜಿಲ್ಲೆಯಲ್ಲಿಯೂ ಸಹ 4 ಮಂದಿ ಅಧಿಕಾರಿಗಳಷ್ಟೇ ಎ ಗುಂಪಿಗೆ ಸೇರಿದ್ದರೇ ಉಳಿದವರು ಬಿ ಮತ್ತು ಸಿ ಗುಂಪಿಗೆ ಸೇರಿದವರಿದ್ದಾರೆ. ಹೊಸಪೇಟೆ (ವಿಜಯನಗರ )ಯಲ್ಲಿ 18 ಮಂದಿ ಅಧಿಕಾರಿ ನೌಕರರಿದ್ದಾರೆ. ಈ ಪೈಕಿ ನಾಲ್ಕು ಮಂದಿ ಮಾತ್ರ ಎ ಗುಂಪಿಗೆ ಸೇರಿದ್ದಾರೆ. ಉಳಿದ ಅಧಿಕಾರಿ ನೌಕರರು ಬಿ ಮತ್ತು ಸಿ ಗುಂಪಿಗೆ ಸೇರಿರುವುದು ಗೊತ್ತಾಗಿದೆ.
ಕಾರವಾರ (ಉತ್ತರ ಕನ್ನಡ)ದಲ್ಲಿ 20 ಮಂದಿ ಅಧಿಕಾರಿ, ನೌಕರರ ವಿರುದ್ಧ ಪ್ರಕರಣಗಳಿವೆ. ಇವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದವರಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 42 ಮಂದಿ ಅಧಿಕಾರಿ, ನೌಕರರ ವಿರುದ್ಧ ಭ್ರಷ್ಟಾಚಾರ ನಡೆಸಿದ ಪ್ರಕರಣಗಳಿವೆ. ಈ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿ ಮಾತ್ ಎ ಗುಂಪಿಗೆ ಸೇರಿದ್ದರೇ ಉಳಿದ ಅಧಿಕಾರಿ, ನೌಕರರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 21 ಮಂದಿ ಅಧಿಕಾರಿ ನೌಕರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೂವರು ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿರುವುದು ತಿಳಿದು ಬಂದಿದೆ.
ಮಡಿಕೇರಿ (ಕೊಡಗು)ಯಲ್ಲಿ 19 ಮಂದಿ ಅಧಿಕಾರಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ 8 ಮಂದಿ ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದವರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 74 ಮಂದಿ ಅಧಿಕಾರಿ ನೌಕರರ ವಿರುದ್ಧ ಪ್ರಕರಣಗಳಿವೆ. 5 ಮಂದಿ ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿರುವುದು ಗೊತ್ತಾಗಿದೆ. ಮಂಗಳೂರಿನಲ್ಲಿ 35 ಮಂದಿ ಅಧಿಕಾರಿ, ನೌಕರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಬ್ಬ ಅಧಿಕಾರಿ ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದವರು.
ಮೈಸೂರು ಜಿಲ್ಲೆಯಲ್ಲಿ 41 ಮಂದಿ ಅಧಿಕಾರಿ, ನೌಕರರ ವಿರುದ್ಧ ಪ್ರಕರಣಗಳಿವೆ. 9 ಮಂದಿ ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 16 ಮಂದಿ ಅಧಿಕಾರಿ ನೌಕರರಿದ್ದಾರೆ. ಇವರೆಲ್ಲರೂ ಸಿ ಮತ್ತು ಡಿ ಗುಂಪಿಗೆ ಸೇರಿದ ನೌಕರರಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 18 ಮಂದಿ ಅಧಿಕಾರಿ ನೌಕರರಿದ್ದಾರೆ. ಈ ಪೈಕಿ ಒಬ್ಬ ಅಧಿಕಾರಿ ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಸಿ ಮತ್ತು ಡಿ ಗುಂಪಿಗೆ ಸೇರಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 41 ಮಂದಿ ಅಧಿಕಾರಿ ನೌಕರರಿದ್ದಾರೆ. ಈ ಜಿಲ್ಲೆಯಲ್ಲಿ 6 ಮಂದಿ ಅಧಿಕಾರಿಗಳು ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ 37 ಮಂದಿ ಅಧಿಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ಈ ಪೈಕಿ ನಾಲ್ವರು ಮಾತ್ರ ಎ ಗುಂಪಿಗೆ ಸೇರಿದ್ದರೇ ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 11 ಮಂದಿ ಅಧಿಕಾರಿ ನೌಕರರಿದ್ದಾರೆ. ಈ ಪೈಕಿ ಒಬ್ಬ ಅಧಿಕಾರಿ ಮಾತ್ರ ಎ ಗುಂಪಿಗೆ ಸೇರಿದ್ದಾರೆ. ಉಳಿದವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ 22 ಮಂದಿ ಅಧಿಕಾರಿ ನೌಕರರ ವಿರುದ್ಧ ಪ್ರಕರಣಗಳಿವೆ. ಇವರೆಲ್ಲರೂ ಬಿ ಮತ್ತು ಸಿ ಗುಂಪಿಗೆ ಸೇರಿದವರು ಎಂದು ಗೊತ್ತಾಗಿದೆ.




