Thursday | September 10, 2026 |

ಹೆಚ್‌ಡಿಕೆ ವಿರುದ್ಧ ಅಸಭ್ಯ, ಅವಾಚ್ಯ, ಅವಹೇಳನಕಾರಿ ಶಬ್ದಗಳಿಂದ ನಿಂದನೆ ಆರೋಪ; ಎಡಿಜಿಪಿ ಚಂದ್ರಶೇಖರ್ ವಿರುದ್ಧದ ದೂರರ್ಜಿ ವಿಚಾರಣೆಗೆ ಹಾಜರಾಗದ ಸುರೇಶ್‌ ಬಾಬು, ಪ್ರಕರಣ ಮುಕ್ತಾಯಕ್ಕೆ ಸಿಐಡಿ ವರದಿ ಸಲ್ಲಿಕೆ

ಬೆಂಗಳೂರು; ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಅವರು  ಅಸಭ್ಯ, ಅವಾಚ್ಯ  ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷ ನಾಯಕ ಸಿ ಬಿ ಸುರೇಶ್‌ ಬಾಬು ಅವರು ನೀಡಿದ್ದ  ದೂರರ್ಜಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಸಿಐಡಿ ವಿಶೇಷ ವಿಚಾರಣೆ ವಿಭಾಗವು ವಿಚಾರಣೆ ವರದಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

ಮತ್ತೊಂದು ವಿಶೇಷವೆಂದರೇ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ದೂರರ್ಜಿ ನೀಡಿದ್ದ ಸಿ ಬಿ ಸುರೇಶ್‌ ಬಾಬು ಅವರು ವಿಚಾರಣೆಗೆ ಒಮ್ಮೆಯೂ  ಹಾಜರಾಗಿಲ್ಲ. ಅರ್ಜಿಯಲ್ಲಿ ಆರೋಪಿಸಿರುವಂತೆ ಚಂದ್ರಶೇಖರ್‍‌ ಅವರ ವಿರುದ್ಧ ದೂರಿನ ಅಂಶಗಳಿಗೆ ಸಂಬಂಧಿಸಿದಂತೆ  ಯಾವುದೇ ಸಾಕ್ಷ್ಯಾಧಾರಗಳೂ ಲಭ್ಯವಾಗಿಲ್ಲ ಎಂದು ವಿಚಾರಣೆ ವರದಿಯು ಹೇಳಿದೆ.

ಎಡಿಜಿಪಿ ಚಂದ್ರಶೇಖರ್ ಅವರು ಸರ್ಕಾರದ ಪೂರ್ವಾನುಮೋದನೆಯಿಲ್ಲದೇ  ತಮ್ಮ ಪತ್ನಿ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ಕೋಟ್ಯಂತರ ರುಪಾಯಿ ವಹಿವಾಟು ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ಪಕ್ಷದ ವಿಧಾನ ಪರಿಷತ್‌ ಸದಸ್ಯರು ಮಾಡಿದ್ದ ಆರೋಪ ಆಧರಿಸಿ ತನಿಖೆಗೆ ಮುಂದಾಗಿರುವ ಹೊತ್ತಿನಲ್ಲೇ  ಸಿಐಡಿ ವಿಶೇಷ ವಿಚಾರಣೆ ವಿಭಾಗವು ಸಲ್ಲಿಸಿರುವ ವಿಚಾರಣೆ ವರದಿಯು ಮುನ್ನೆಲೆಗೆ ಬಂದಿದೆ.

ಸಿಐಡಿ ವಿಶೇಷ ವಿಚಾರಣೆ ವಿಭಾಗದ ಡಿವೈಎಸ್ಪಿ ಮುರುಗೇಂದ್ರಯ್ಯ ಎಂ ಅವರು 2026ರ ಆಗಸ್ಟ್‌  27ರಂದೇ 64 ಪುಟಗಳ  ವಿಚಾರಣೆ ವರದಿ ಸಲ್ಲಿಸಿದ್ದಾರೆ.

ಈ ವರದಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಸಿ ಬಿ  ಸುರೇಶ್‌ ಬಾಬು ಅವರು ಸಲ್ಲಿಸಿದ್ದ ದೂರರ್ಜಿಯ ವಿಚಾರಣೆ ನಡೆಸಲು ಸಿಐಡಿಯ ಡಿವೈಎಸ್ಪಿ ಪ್ರಭಾವತಿ ಪಾಂಡುರಂಗ ಅವರನ್ನು  ವಿಚಾರಣಾಧಿಕಾರಿಯನ್ನಾಗಿ 2025ರ ಫೆ.1ರಂದು  ಮುರುಗೇಂದ್ರಯ್ಯ ಅವರನ್ನು  ವಿಚಾರಣಾಧಿಕಾರಿಯನ್ನಾಗಿ ನಿಯೋಜಿಸಿತ್ತು. ನಂತರ ಇದೇ  ದೂರರ್ಜಿ ಕುರಿತು ವಿಚಾರಣೆ ನಡೆಸಲು 2026ರ ಜುಲೈ 6ರಂದು   ಮುರುಗೇಂದ್ರಯ್ಯ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನಿಯೋಜಿಸಿ ಆದೇಶಿಸಿತ್ತು.

 

 

ಸುರೇಶ್‌ ಬಾಬು ಅವರ ದೂರರ್ಜಿಯಲ್ಲೇನಿತ್ತು?

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಹಿಮಾಚಲ ಪ್ರದೇಶದ ಐಪಿಎಸ್‌ ಕೇಡರ್‍‌ನ ಎಂ ಚಂದ್ರಶೇಖರ್‍‌ ಅವರು ತಮ್ಮ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶದ ಹವಾಗುಣಕ್ಕೆ ಹೊಂದುವುದಿಲ್ಲ ಎನ್ನುವ ಕುಂಟು ನೆಪ ಹೇಳಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ,. ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. ನಂತರ ಕರ್ನಾಟಕ ಐಪಿಎಸ್‌ ಕೇಡರ್‍‌ನಲ್ಲಿ ವಿಲೀನಗೊಂಡಿದ್ದಾರೆ. ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ, ಡೆಪ್ಯುಟಿ ಕಮಿಷನರ್‍‌ ಆಗಿ, ಬೆಂಗಳೂರು ವಲಯದ ಐಜಿಪಿಯಾಗಿ ಕೆಲಸ ನಿರ್ವಹಿಸಿದ್ದಾರೆ.

ಈ ಅವಧಿಯಲ್ಲಿ ಆಯಕಟ್ಟಿನ ಜಾಗದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಹಲವಾರು ಭೂಗಳ್ಳರು, ವ್ಯಾಪಾರಸ್ಥರು, ಉದ್ಯಮಿಗಳು, ಸಮಾಜ ಘಾತುಕರು ಹಾಗೂ ಇತರರೊಂದಿಗೆ ಒಡನಾಟ ಬೆಳೆಸಿಕೊಂಡು ಶಾಮೀಲಾಗಿ ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಅಧಿಕಾರಿ ಸುಲಿಗೆಕೋರನಾಗಿದ್ದು ಸರಣಿ ಅಪರಾಧಗಳನ್ನು ಎಸಗಿರುವ ಭ್ರಷ್ಟ ಅಧಿಕಾರಿಯಾಗಿದ್ದಾರೆ ಎಂದು ಸುರೇಶ್‌ ಬಾಬು ಅವರು ದೂರಿನಲ್ಲಿ ವಿವರಿಸಿದ್ದರು. ಈ ದೂರಿನ ಅಂಶಗಳನ್ನೇ ಸಿಐಡಿ ವಿಶೇಷ ವಿಚಾರಣೆ ವಿಭಾಗದ ವಿಚಾರಣಾಧಿಕಾರಿ ಸಲ್ಲಿಸಿರುವ ವರದಿಯಲ್ಲಿಯೂ ಉಲ್ಲೇಖಿಸಿರುವುದು ಗೊತ್ತಾಗಿದೆ.

ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ಅವರು 2024ರ ಸೆ.28ರಂದು ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯಪಾಲರು ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಮಾಹಿತಿ ಮತ್ತು ವಿಚಾರಣೆ ವಿವರಗಳನ್ನು ಬಯಸಿದ್ದಾರೆ. ಮತ್ತು ಈ ಸಂಗತಿ ಬಯಲಾಗಿದ್ದ ಬಗ್ಗೆ ರಾಜ್ಯದ ಸರ್ಕಾರದಿಂದ ವಿವರಣೆ ಕೇಳಿದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾಹಿತಿ ರಾಜಭವನದಿಂದ ಸೋರಿಕೆಯಾಗಿದೆ ಎನ್ನುವ ಆರೋಪವನ್ನು ಹೇರಿ ರಾಜ್ಯಪಾಲರ ಕಚೇರಿ ಮೇಲೆ ತನಿಖೆ ನಡೆಸುವ ದರ್ಪ ಮೆರೆದಿದ್ದ ಎಂದು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಮಾತನಾಡಿದ್ದರು. ಭ್ರಷ್ಟಾಚಾರ ಮತ್ತು ಲಂಚ ನಿರ್ಮೂಲನೆ ಬಗ್ಗೆ ತನಿಖೆ ನಡೆಸುವ ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲ ಸುಲಿಗೆಕೋರ ಮತ್ತು ಭ್ರಷ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಸುರೇಶ್‌ ಬಾಬು ಅವರು  ದೂರಿನಲ್ಲಿ ವಿವರಿಸಿರುವುದನ್ನು  ವಿಚಾರಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಬಗ್ಗೆ ಎಚ್‌ ಡಿ ಕುಮಾರಸ್ವಾಮಿ ಅವರ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಎಂ ಚಂದ್ರಶೇಖರ್‍‌ ಅವರು ಎಸ್‌ಐಟಿ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಭ್ಯ, ಅವಾಚ್ಯ ಶಬ್ದಗಳಾದ ಹಂದಿಗಳ ಜೊತೆ ಗುದ್ದಾಡಬೇಡಿ, ಏಕೆಂದರೇ ಹಂದಿಗಳಂತೆ ನೀವು ಕೊಳಕಾಗುತ್ತೀರಿ ಎಂಬ ನುಡಿಗಳನ್ನು ಬಳಸಿದ್ದಾರೆ ಎಂದು ಸುರೇಶ್‌ ಬಾಬು ಅವರು ತಮ್ಮ ದೂರಿನಲ್ಲಿ ಹೇಳಿದ್ದರು.

 

 

ರಾಜಕೀಯದಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ಮುಖಂಡರು ಮತ್ತು ನಾಯಕರು ಸರ್ಕಾರಗಳ ವಿರುದ್ಧ ಹಾಗೂ ಪರಸ್ಪರ ಆರೋಪಗಳನ್ನು ಮಾಡುವುದು ಸಹಜ. ಪ್ರಸ್ತುತ ರಾಜ್ಯ ಸರ್ಕಾರ, ರಾಜ್ಯಪಾಲರು ಕೈಗೊಳ್ಳುವ ನಿರ್ಧಾರಗಳ ವಿರುದ್ಧ ಸಾರ್ವಜನಿಕವಾಗಿ ಅವಹ/ಎಳನ ಮಾಡುತ್ತಿದ್ದು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಮತ್ತು ವಿಶೇಷ ತನಿಖಾ ತಂಡಗಳ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ನಾಯಕರ ವಿರುದ್ಧ ದಾಖಲಾಗಿರುವ ಸುಳ್ಳು ಕ್ರಿಮಿನಲ್‌ ಕೇಸ್‌ಗಳಲ್ಲಿ ಅವರುಗಳನ್ನು ಸಿಲುಕಿಸಲು ಪ್ರಯತ್ನ ಮಾಡುತ್ತಿರುವ ಬಗ್ಗೆ ಆರೋಪಿಸುವುದು ಕೂಡ ಸಹಜ ಎಂದು ದೂರಿನಲ್ಲಿ ವಿವರಿಸಿದ್ದರು.

ಒಂದು ವೇಳೆ ಹೆಚ್‌ ಡಿ ಕುಮಾರಸ್ವಾಮಿ ಅವರು ತಪ್ಪು ಅಥವಾ ಅವಹೇಳನಕಾರಿ ಹೇಳಿಕೆಯನ್ನು ಚಂದ್ರಶೇಖರ್ ಅವರ ವಿರುದ್ಧ ನೀಡಿದ್ದರೇ ಭಾರತೀಯ ಆಡಳಿತ ಸೇವೆ ನಿಯಮಗಳ ಪ್ರಕಾರ ಕೇಡರ್ ಪ್ರಾಧಿಕಾರದ ಅನುಮತಿ ಪಡೆದು ಕಾನೂನು ಕ್ರಮ ಜರುಗಿಸಬಹುದು. ಆದರೆ ಭಾರತೀಯ ಆಡಳಿತ ಸೇವಾ ನಿಯಮಗಳ ವಿರುದ್ಧವಾಗಿ ತನ್ನ ಕೈಕೆಳಗಿನ ಅಧಿಕಾರಿಗಳಿಗೆ ಕೇಂದ್ರ ಸಚಿವರು ಮತ್ತು ಚುನಾಯಿತ ಜನಪ್ರತಿನಿಧಿ ಹೆಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಅವಾಚ್ಯ ಮತ್ತು ಅಸಭ್ಯ ಪದಗಳನ್ನು ಬಳಸಿ ಪತ್ರಗಳನ್ನು ಕಳಿಸಿರುವುದು ಮತ್ತು ಈ ಪತ್ರವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಭಾರತೀಯ ಆಡಳಿತ ಸೇವಾ ನಿಯಮಗಳ ಪ್ರಕಾರ ದುರ್ನಡತೆಯಾಗಿದೆ ಎಂದು ಸುರೇಶ್‌ ಬಾಬು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಅಲ್ಲದೇ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿ ತಾನು ಬರೆದಿರುವ ಪತ್ರದಲ್ಲಿನ ಅಂಶಗಳನ್ನು ದೃಢೀಕರಿಸಿ ಮಾತನಾಡಿದ್ದರು. ಇದಲ್ಲದೇ ಹಲವಾರು ಎಫ್‌ಐಆರ್‍‌ಗಳಲ್ಲಿ ಚಂದ್ರಶೇಖರ್ ಅವರ ಹೆಸರು ನಮೂದಾಗಿ ದಾಖಲಾಗಿದೆ. ಅಲ್ಲದೇ ಹಲವಾರು ಕೋರ್ಟ್‌ ಪ್ರಕರಣಗಳಲ್ಲಿ ಇವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಸುರೇಶ್ ಬಾಬು ಅವರು ಆಪಾದಿಸಿದ್ದರು ಎಂಬ ಅಂಶವನ್ನು ಸಿಐಡಿ ವಿಶೇಷ ವಿಚಾರಣೆ ವಿಭಾಗವು ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ.

 

ಚಂದ್ರಶೇಖರ್ ಅವರು 2024ರ ಆಗಸ್ಟ್‌ 21ರಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಶ್ರೀಧರ್‍‌ ಎಂಬುವರ ವಿರುದ್ಧ  ಕೇಸು (ಸಿಆರ್  ಎಲ್‌ಪಿ/0006125/2024)  ದಾಖಲಿಸಿ ಮಧ್ಯಂತರ ಆದೇಶ ಪಡೆದಿದ್ದಾರೆ. ರಾಜ್ಯದ ಪೊಲೀಸ್ ಅಧಿಕಾರಿಯ ವಿರುದ್ಧ  ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಮತ್ತು ಈ ಬಗ್ಗೆ ಕೇಂದ್ರ ಗೃಹ ಮಂತ್ರಾಲಯಕ್ಕೆ ಯಾವ ವರದಿಯನ್ನು ಸಲ್ಲಿಸಿದೆ ಎನ್ನುವುದು ಇದುವರೆಗೆ ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದರು.

‘ಆದ್ದರಿಂದ ಎಂ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ದೂರುಗಳು, ಎಫ್‌ಐಆರ್, ಕೋರ್ಟ್‌ ಪ್ರಕರಣಗಳು ಹಾಗೂ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಅವಾಚ್ಯ ಮತ್ತು ಅಸಭ್ಯ ಮತ್ತು ಅವಹೇಳನಕಾರಿ ಪದಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಪೊಲೀಸ್‌ ಸೇವೆಯಿಂದ ಅಮಾನತುಗೊಳಿಸಿ ಇವರ ವಿರುದ್ಧ ಉನ್ನತ ಮಟ್ಟದ ತನಿಕೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್‌ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕಳಿಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಿದ್ದರು.

ಈ ದೂರರ್ಜಿಯ ವಿಚಾರಣಾಧಿಕಾರಿ ಎಂ ಮುರುಗೇಂದ್ರಯ್ಯ ಅವರು ಸುರೇಶ್‌ ಬಾಬು ಮತ್ತು ಚಂದ್ರಶೇಖರ್  ಅವರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು  ನೋಟೀಸ್‌ ನೀಡಿದ್ದರು. ಸುರೇಶ್‌ ಬಾಬು ಅವರಿಗೆ 5 ಬಾರಿ ವಿಚಾರಣೆ ನೋಟೀಸ್‌ ನೀಡಿದ್ದರು. ಆದದರೂ ಸುರೇಶ್‌ ಬಾಬು ಅವರು ಒಮ್ಮೆಯೂ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ವಿಚಾರಣೆ ವರದಿಯಲ್ಲಿ ಎಂ ಮುರುಗೇಂದ್ರಯ್ಯ ಅವರು  ಉಲ್ಲೇಖಿಸಿದ್ದಾರೆ.

ವಿಶೇಷ ವಿಚಾರಣೆ ವರದಿಯ ಒಟ್ಟಾರೆ ತೀರ್ಮಾನವೇನು?

ಅರ್ಜಿದಾರರಾದ ಸುರೇಶ್‌ ಬಾಬು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿರುವ ಅಂಶಗಳಿಗೆ ಸಂಬಂಧಪಟ್ಟಂತೆ ಸಾಕ್ಷಿ ಮತ್ತು ದಾಖಲಾತಿಗಳನ್ನು ಹಾಜರುಪಡಿಸುವಂತೆ 05 ಬಾರಿ ಪೊಲೀಸ್‌ ವಿಚಾರಣೆ ನೊಟೀಸ್‌ನ್ನು ಜಾರಿ ಮಾಡಿದ್ದರೂ ಕೂಡ ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಮತ್ತು ಅರ್ಜಿಯಲ್ಲಿ ಆರೋಪಿಸಿರುವಂತೆ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣ ಹಾಗೂ ಅಧಿಕಾರಿಯು ಯಾವುದೇ ಪತ್ರಿಕಾಗೋಷ್ಠಿ ಅಥವಾ ಪ್ರಕಟಣೆ ಮಾಡಿರುವುದು ಕಂಡು ಬಾರದೇ ಇರದ ಕಾರಣ ಈ ದೂರು ಅರ್ಜಿಯನ್ನು ಮುಕ್ತಾಯ ಮಾಡಬೇಕು ಎಂದು ಎಂ ಮುರುಗೇಂದ್ರಯ್ಯ ಅವರು ವಿಚಾರಣೆ ವರದಿಯಲ್ಲಿ ಕೋರಿರುವುದು ಗೊತ್ತಾಗಿದೆ.

 

 

ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರು  ದೂರು ದಾಖಲಿಸಿದ್ದರು.  ಈ ಸಂಬಂಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದ  ಅವರು, ತಾನು ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 16/2014 ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರ ಅನುಮತಿ ಕೋರಿರುತ್ತೇನೆ ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಸೆ.28 ಹಾಗೂ ಸೆ.29ರಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದರು.  ನನ್ನನ್ನು ಕರ್ನಾಟಕ ಕೇಡರ್ ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕ ಬೆದರಿಕೆ ಹಾಕಿದ್ದಾರೆ ಹಾಗೂ ನಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು ವೈದ್ಯಕೀಯ ದಾಖಲಾತಿಯನ್ನು ಪಡೆದು ಕರ್ನಾಟಕ ಕೇಡರ್ ನಲ್ಲಿ ಮುಂದುವರೆಯುತ್ತಿರುವುದಾಗಿಯೂ ಆರೋಪ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

‘ನಾನು ಲಂಚ ತೆಗೆದುಕೊಂಡಿರುವುದಾಗಿಯೂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿದ್ದಾರೆ. ಸೆ.29ರಂದು ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಮಾಡಿ, ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ನಂತರ ಕುಮಾರಸ್ವಾಮಿ ಆಪ್ತ ಸುರೇಶ್ ಬಾಬು ನನ್ನ ಮೇಲೆ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ನೀಡಿದ್ದಾರೆ. ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ್ದಾರೆ,’ ಎಂದು ಚಂದ್ರಶೇಖರ್ ದೂರಿದ್ದರು.

ಚಂದ್ರಶೇಖರ್ ನೀಡಿರುವ ದೂರನ್ನು ಸ್ವೀಕರಿಸಿದ್ದ ಸಂಜಯ ನಗರ ಪೊಲೀಸರು, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ಬಿ.ಎನ್.ಎಸ್.ಎಸ್.ಕಲಂ 174(1)ರ ಮೇರೆಗೆ ಠಾಣಾ ಎನ್.ಸಿ.ಆರ್. ಸಂಖ್ಯೆ 207/2024 ರಲ್ಲಿ ದೂರು ದಾಖಲಿಸಿಕೊಂಡಿದ್ದರು.

ಸಂಡೂರು ಗಣಿ ಹಗರಣದಲ್ಲಿ ಲೋಕಾಯುಕ್ತದೆದುರು ಹಾಜರಾಗಿ ವಿಚಾರಣೆ ಎದುರಿಸಿದ ಬೆನ್ನಿಗೇ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿ ಮಾಡಿ ಲೋಕಾಯುಕ್ತ ಎಸ್ ಐ ಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರು ಭ್ರಷ್ಟ, ಬ್ಲ್ಯಾಕ್ ಮೇಲರ್ ಇತ್ಯಾದಿ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಚಂದ್ರಶೇಖರ್ ನಾವು ಇದರಿಂದ ವಿಚಲಿತರಾಗುವುದಿಲ್ಲ, ಆರೋಪಿ ಯಾವುದೇ ಸ್ಥಾನದಲ್ಲಿದ್ದರೂ ಆತ ಆರೋಪಿಯೇ ಎಂದು ಹೇಳಿದ್ದರು. ಅದಕ್ಕೆ ಮತ್ತೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಆತ ಕ್ರಿಮಿನಲ್ ಎಂದೇ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದನ್ನು ಸ್ಮರಿಸಬಹುದು.

 

10 ಕಂಪನಿಗಳಲ್ಲಿ ಕುಟುಂಬ ಸದಸ್ಯರು ನಿರ್ದೇಶಕರು, 2 ಕಂಪನಿಗಳಿಂದ 400 ಕೋಟಿ ವಹಿವಾಟು ಆರೋಪ ಪ್ರಕರಣ; ಎಡಿಜಿಪಿ ಚಂದ್ರಶೇಖರ್ ವಿರುದ್ಧ ತನಿಖೆಗೆ ನಿರ್ದೇಶನ

 

ಎಡಿಜಿಪಿ ಚಂದ್ರಶೇಖರ್‍‌ ಅವರು ಸರ್ಕಾರದ ಪೂರ್ವಾನುಮೋದನೆಯಿಲ್ಲದೆಯೇ 10 ಕಂಪನಿಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನು ನಿರ್ದೇಶಕರನ್ನಾಗಿಸಿ 400 ಕೋಟಿ ವಹಿವಾಟು ನಡೆಸಿದ್ದಾರೆ ಎಂದು ಜೆಡಿಎಸ್‌ ಸದಸ್ಯರು ದೂರಿದ್ದರು. ಈ ಸಂಬಂಧ ತನಿಖೆ ನಡೆಸಬೇಕು ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತ್ತು. ಈ ಕುರಿತು ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿತ್ತು.

Hot this week

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...
Please Scan to make Your Contribution

Topics

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

Related Articles

Popular Categories

error: Content is protected !!