Wednesday | September 2, 2026 |

ಹೆಣ್ಣುಮಕ್ಕಳ ಮಾರಾಟ ಜಾಲದ ವಿರುದ್ಧ ಪ್ರಕರಣ ದಾಖಲು, ಆದರೂ ಹೆಣ್ಣು ಮಕ್ಕಳ ಮಾರಾಟ ಜಾಲವಿಲ್ಲವೆಂದ ಸಚಿವ; 3 ವರ್ಷವಾದರೂ ಪತ್ತೆಯಾಗಿಲ್ಲ 3,509 ಮಂದಿ ಮಹಿಳೆ, ಅಪ್ರಾಪ್ತರು

ಬೆಂಗಳೂರು; ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದರೂ ಸಹ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲ ಇರುವುದಿಲ್ಲ ಎಂದು ಗೃಹ ಇಲಾಖೆಯು ಲಿಖಿತ ಉತ್ತರ ನೀಡಿದೆ.

ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲ ಏನಾದರೂ ಇರಬಹುದೇ ಎಂದು ವಿಧಾನ ಪರಿಷತ್‌ ಸದಸ್ಯೆ ಹಾಗೂ ಉಪ ಸಭಾಪತಿ ಡಾ ಉಮಾಶ್ರಿ ಅವರು ಚುಕ್ಕೆ ಗುರುತಿಲ್ಲದ 2026ರ ಆಗಸ್ಟ್‌ 20ರಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲ ಇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಇದೇ ಉತ್ತರದಲ್ಲಿ ಒದಗಿಸಿರುವ ಅನುಬಂಧ (ಎ) ನಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯನ್ನು ಒದಗಿಸಿದ್ದಾರೆ.

ಒಂದೇ ಉತ್ತರದಲ್ಲಿ ವಿಭಿನ್ನ ಉತ್ತರಗಳನ್ನು ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಿಯಾಂಕ್ ಖರ್ಗೆ ನೀಡಿರುವ ಉತ್ತರದಲ್ಲೇನಿದೆ?

ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲ ಇರುವುದಿಲ್ಲ. ಮಕ್ಕಳ ಮಾರಾಟಕ್ಕೆ ಸಂಬಂಧಿಸಿದಂತೆ 2024ರಿಂದ 2026 ಜುಲೈವರೆಗೆ ಒಟ್ಟು 8 ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು 35 ಆರೋಪಿತರನ್ನು ಬಂಧಿಸಲಾಗಿದೆ. ಅವರಿಂದ 08 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಉತ್ತರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಅನುಬಂಧವನ್ನು ಒದಗಿಸಿದ್ದಾರೆ.

 

 

ಪ್ರಿಯಾಂಕ್‌ ಖರ್ಗೆ ಅವರು  ಅನುಬಂಧದಲ್ಲಿಯೂ ಹೆಣ್ಣು ಮಕ್ಕಳ ಮಾರಾಟ ಜಾಲಕ್ಕೆ ಸಂಬಂಧಪಟ್ಟಂತೆ ದಾಖಲಾದ ಪ್ರಕರಣಗಳ ಸಂಖ್ಯೆ, ಮಾರಾಟ ಜಾಲಕ್ಕೆ ಒಳಪಟ್ಟ ಹೆಣ್ಣು ಮಕ್ಕಳ ಸಂಖ್ಯೆ, ಮಾರಾಟ ಜಾಲದಿಂದ ರಕ್ಷಿಸಲ್ಪಟ್ಟ ಹೆಣ್ಣು ಮಕ್ಕಳ ಸಂಖ್ಯೆ ಒದಗಿಸಿದ್ದಾರೆ. ಆದರೆ ಮಾರಾಟ ಜಾಲಗಳ ಸಂಖ್ಯೆಯನ್ನು ಶೂನ್ಯ ಎಂದು ತೋರಿಸಿದ್ದಾರೆ. 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ಮಾಹಿತಿ ಒದಗಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

 

ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟವಾಗಿ ಹೆಣ್ಣು ಮಕ್ಕಳ ಮಾರಾಟ ಜಾಲ ಮತ್ತು ಅದರ ವಿವರಗಳನ್ನು ಅನುಬಂಧದಲ್ಲಿ  ಒದಗಿಸಿದ್ದರೂ ಸಹ ಉತ್ತರದಲ್ಲಿ  ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಗಳು ಇರುವುದಿಲ್ಲ ಎಂದು ನೀಡಿರುವ ಉತ್ತರವೇ ವಿರೋಧಾಭಾಸದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅದೇ ರೀತಿ ರಾಜ್ಯದಲ್ಲಿ 2024ರಿಂದ 2026ರ ಜುಲೈವರೆಗೆ ಕಾಣೆಯಾದ, ಅಪಹರಣವಾದ ಯುವತಿಯರು ಮತ್ತು ಅಪ್ರಾಪ್ತರ ಸಂಖ್ಯೆಯನ್ನು ಇದೇ ಉತ್ತರದಲ್ಲಿ ಮಾಹಿತಿ ಒದಗಿಸಿದ್ದಾರೆ.

 

 

ಈ ಉತ್ತರದ ಪ್ರಕಾರ 2024ರಲ್ಲಿ ಒಟ್ಟು 2,500 ಮಂದಿ ಅಪ್ರಾಪ್ತರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 2,433 ಮಂದಿ ಪತ್ತೆಯಾಗಿದ್ದರು. ಇನ್ನೂ 67 ಮಂದಿ ನಾಪತ್ತೆಯಾಗಿದ್ದಾರೆ. 2025ರಲ್ಲಿ 2,645 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 2,505 ಮಂದಿ ಪತ್ತೆಯಾಗಿದ್ದರೇ ಇನ್ನು 140 ಮಂದಿ ನಾಪತ್ತೆಯಾಗಿದ್ದಾರೆ. 2026ರಲ್ಲಿ 1,731 ನಾಪತ್ತೆ ಪ್ರಕರಣಗಳು ವರದಿಯಾಗಿದ್ದರೇ ಈ ಪೈಕಿ 900 ಮಂದಿ ಪತ್ತೆಯಾಗಿದ್ದರು. ಇನ್ನೂ 831 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

ಇನ್ನು 18 ವರ್ಷ ಮತ್ತು ಮೇಲ್ಪಟ್ಟ ಮಹಿಳೆಯರು ನಾಪತ್ತೆಯಾಗಿ ವರದಿಯಾಗಿರುವ ಪ್ರಕರಣಗಳ ವಿವರಗಳನ್ನು ಒದಗಿಸಿದ್ದಾರೆ. ಈ ಪಟ್ಟಿಯ ಪ್ರಕಾರ 2024ರಲ್ಲಿ ಒಟ್ಟು 14,413 ಮಂದಿ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 14,096 ಮಹಿಳೆಯರು ಪತ್ತೆಯಾಗಿದ್ದಾರೆ. ಇನ್ನೂ 317 ಮಂದಿ ಪತ್ತೆಯೇ ಆಗಿಲ್ಲ. 2025ರಲ್ಲಿ  15,159 ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದ ಪ್ರಕರಣಗಳಲ್ಲಿ 14,763 ಮಹಿಳೆಯರನ್ನು ಪತ್ತೆ ಹಚ್ಚಲಾಗಿತ್ತು. ಇನ್ನು 396 ಮಂದಿ ನಾಪತ್ತೆಯಾಗಿದ್ದಾರೆ. 2026ರಲ್ಲಿ 9,909 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 8,150 ಮಹಿಳೆಯರನ್ನು ಪತ್ತೆ ಹಚ್ಚಲಾಗಿತ್ತು. ಇನ್ನೂ 1,759 ಮಂದಿಯನ್ನು ಪತ್ತೆ ಹಚ್ಚುವಲ್ಲಿ ಇಲಾಖೆಯು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

 

ಒಟ್ಟಾರೆ ಕಳೆದ ಮೂರು ವರ್ಷದಲ್ಲಿ 1,038 ಅಪ್ರಾಪ್ತರು, 2,471 ಮಂದಿ ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

ಕಾಣೆಯಾಗಲು ಪ್ರಮುಖ ಕಾರಣಗಳೇನು?

ಅನೇಕ ಸಂದರ್ಭಗಳಲ್ಲಿ ಪ್ರೀತಿ-ಪ್ರೇಮ, ಇಷ್ಟದ ಜೀವನಕ್ಕೆ ಯುವತಿಯರ ಮನೆಯವರ ವಿರೋಧ, ಸಾಮಾಜಿಕ ಕಟ್ಟುಪಾಡುಗಳಿಗೆ ಹೆದರಿ, ತಮಗಿಷ್ಟವಾದ ವ್ಯಕ್ತಿಯಿಂದ ಮನೆ ತೊರೆಯುತ್ತಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವ, ಅತಿಯಾದ ಬಳಕೆ,  ಮತ್ತು ಸೈಬರ್ ಮೋಸಗಳೂ ಸಹ ಕಾರಣಗಳಾಗಿವೆ. ಗ್ರಾಮೀಣ ಮತ್ತು ಬಡಕುಟುಂಬಗಳ ಯುವತಿಯರನ್ನು ಉದ್ಯೋಗ, ಮಾಡೆಲಿಂಗ್‌ ಅಥವಾ ಉತ್ತಮ ಜೀವನ ಶೈಲಿಯ ಆಮಿಷ ಒಡ್ಡುವುದು ಸಹ ಇದಕ್ಕೆ ಕಾರಣವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಉತ್ತರದಲ್ಲಿ ವಿವರಿಸಿದ್ದಾರೆ.

ಹಾಗೆಯೇ ಪರೀಕ್ಷೆಗಳ ಫಲಿತಾಂಶ, ಶೈಕ್ಷಣಿಕ ಒತ್ತಡ, ಪೋಷಕರ ಕಟ್ಟುನಿಟ್ಟಿನ ನಿಯಮಗಳು ಅಥವಾ ಪೋಷಕರ ಬೈಗುಳಕ್ಕೆ ನಿಂದನೆಗೆ ಹೆದರಿ ಕೆಲ ವಿದ್ಯಾರ್ಥಿನಿಯರು ಹಠಾತ್ತಾಗಿ ಮನೆ ತೊರೆಯುತ್ತಾರೆ ಎಂದು ಕಾರಣಗಳ ಪಟ್ಟಿಯನ್ನು ವಿಸ್ತರಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

 

8 ತಿಂಗಳಾದರೂ ಪತ್ತೆಯಾಗದ ತನಿಷ್ಕಾ 

ಬೆಂಗಳೂರಿನ ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರು 8 ತಿಂಗಳಾದರೂ ಇನ್ನೂ ಪತ್ತೆ ಹಚ್ಚಿಲ್ಲ. ಈ ಪ್ರಕರಣದಲ್ಲಿ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. 8 ತಿಂಗಳಾದರೂ ತನಿಷ್ಕಾ ಮತ್ತು ಯಲಹಂಕದ ಅಪ್ರಾಪ್ತ ಬಾಲಕಿಯನ್ನು ಪತ್ತೆ ಹಚ್ಚಿಲ್ಲ ಎಂಬುದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

 

ಈ ಇಬ್ಬರ ಪತ್ತೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿತ್ತು. ಈ ಪ್ರಕರಣಗಳಲ್ಲಿ ಜಂಟಿ ತನಿಖೆ ಕೈಗೊಂಡಿತ್ತು. ತನಿಷ್ಕಾಳ ಸ್ನೇಹಿತ ಅಭಿಲಾಷ್, ಯಶಸ್ವಿನಿ, ಹೇಮಂತ್‌, ಅರುಣ್ ರೆಡ್ಡಿ ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಕಾಣೆಯಾದ ಇಬ್ಬರೂ ಯುವತಿಯರ ಪೋಷಕರ ಹಾಗೂ ಆಪ್ತ ಸ್ನೇಹಿತರ ಮೊಬೈಲ್‌ ನಂಬರ್ ಸಿಡಿಆರ್‍‌ ಪಡೆದು ಪರಿಶೀಲಿಸಿದೆ. ನಂತರ ಇವರ ಪತ್ತೆಗಾಗಿ ಆಧಾರ್ ಕಾರ್ಡ್‌ ಉಪಯೋಗಿಸಿಕೊಂಡು ಸಿಮ್‌ ಕಾರ್ಡ್‌ಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಸೇವಾದಾರರಗಳ ಮಾಹಿತಿ ಪಡೆದು ಪರಿಶೀಲಿಸಿದೆ ಎಂದು ವಿವರವಾದ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

ಮೈಸೂರು, ಚಾಮರಾಜನಗರ, ಕೊಳ್ಳೆಗಾಲ, ಮಲೈ ಮಹದೇಶ್ವರ ಬೆಟ್ಟದಲ್ಲಿ ಪತ್ತೆ ಹಚ್ಚಲು ತಂಡವನ್ನು ನಿಯೋಜಿಸಿದೆ. ಅದೇ ರೀತಿ ಯಲಹಂಕ ಉಪ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅಪ್ತಾಪ್ತೆ ಬಾಲಕಿ ಪ್ರಕರಣದಲ್ಲಿಯೂ ಪತ್ತೆ ಕಾರ್ಯ ಇನ್ನೂ ಮುಂದುವರೆದಿದೆ. ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕ್ರಿಶ್ಚಿಯನ್ ಮಿಷಿನರಿಗಳಿಗೆ ಭೇಟಿ ಕೊಟ್ಟು ಕಾಣೆಯಾದ ಯುವತಿಯರ ಬಗ್ಗೆ ಮಾಹಿತಿ ಪಡೆದಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿನ ಮಹಿಳಾ ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಸೀಲನೆ ಮಾಡಿದೆ ಎಂದು ವಿವರಿಸಿದ್ದಾರೆ.

ಕೊಯಮತ್ತೂರು, ಮೆಟ್ಟೂರು, ಕೊಳತ್ತುರು ಪೊಲೀಸ್‌ ಠಾಣೆಗಳಲ್ಲೂ  ದಾಖಲಾಗಿರುವ ಯುಡಿಆರ್ ಪ್ರಕರಣಗಳನ್ದಾನು ಪರಿಶೀಲಿಸಿದೆ. ಕೊಳ್ಳೆಗಾಲದ ಉಪ ವಿಭಾಗದಲ್ಲಿನ ಪೊಲೀಸ್‌ ಠಾಣೆಗಳಲ್ಲಿ ನಮೂದಾಗಿರುವ ಯುಡಿಆರ್‍‌ ಪ್ರಕರಣಗಳ ಬಗ್ಗೆ ಈ ವ್ಯಾಪ್ತಿಯಲ್ಲಿನ ಮಹಿಳಾ ವಸತಿ ನಿಲಯಗಳು, ಆಶ್ರಮಗಳು, ಕ್ರಿಶ್ಚಿಯನ್ ಮಿಷನರಿಗಳಲ್ಲಿ ಸಹ ಮಾಹಿತಿ ಪಡೆದಿದೆ. ಅಲ್ಲದೇ ನಕ್ಸಲ್ ಚಟುವಟಿಕೆಗಳ ಸಕ್ರೀಯತೆ ಬಗ್ಗೆಯೂ ಮಾಹಿತಿ ಪಡೆದುಕೊಂಡಿದೆ ಎಂದು ಮಾಹಿತಿ ಒದಗಿಸಿದ್ದಾರೆ.

 

 

ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ರಾಮನಗರ, ಚನ್ನಪಟ್ಟಣ, ಕೊಳ್ಳೆಗಾಲ, ಟಿ ನರಸೀಪುರ, ಮೈಸೂರು ಬಸ್‌ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿನ ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ.

 

 

ಇದಕ್ಕಾಗಿ ಆ ರಾಜ್ಯಗಳಲ್ಲಿನ ಯುಡಿಆರ್ ಮಾಹಿತಿ ಪಡೆಯಲು ಈಗಾಗಲೇ ಒಂದು ತಂಡ ಭೇಟಿ ನೀಡಲು ತೆರಳಿದೆ ಎಂದು ಉತ್ತರಿಸಿರುವುದು ಗೊತ್ತಾಗಿದೆ.

Hot this week

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...
Please Scan to make Your Contribution

Topics

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

Related Articles

Popular Categories

error: Content is protected !!