Thursday | August 27, 2026 |

ಅಧಿಕಾರ ದುರುಪಯೋಗ, ಜೀವ ಬೆದರಿಕೆ, ನಿಯಮ ಉಲ್ಲಂಘನೆ, ಸುಲಿಗೆ, ಒಳಸಂಚು, ಅಕ್ರಮ ಸಂಪಾದನೆ, ಅಕ್ರಮ ಡೇಟಾ ವರ್ಗಾವಣೆ; 30 ಐಪಿಎಸ್‌ ಅಧಿಕಾರಿಗಳ ವಿರುದ್ಧದ ದೂರರ್ಜಿಗಳ ಪಟ್ಟಿ ಬಿಡುಗಡೆ

ಬೆಂಗಳೂರು;  ಸಿದ್ದರಾಮಯ್ಯ ಮತ್ತು  ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ  ಅಧಿಕಾರ ದುರುಪಯೋಗ,  ಜೀವ ಬೆದರಿಕೆ,  ನಿಯಮ ಉಲ್ಲಂಘನೆ,  ಸುಲಿಗೆ, ಸರ್ಕಾರಿ ವಾಹನ ದುರ್ಬಳಕೆ,  ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆ ಮಾಡಿಸಿರುವುದು, ಅಧಿಕಾರಿಗಳ ಮೂಲಕ ಭ್ರಷ್ಟಾಚಾರ ಮಾಡಿಸಿರುವುದು, ನಕಲಿ ಸಹಿ, ಒಳಸಂಚು,  ಅಕ್ರಮ ಸಂಪಾದನೆ,  ನಿರಂತರ ಗೈರು ಹಾಜರಿ, ಅಕ್ರಮ ಡೇಟಾ ವರ್ಗಾವಣೆ ಸೇರಿದಂತೆ ಇನ್ನಿತರೆ ಗಂಭೀರ ಮತ್ತು ಗುರುತರವಾದ ಆರೋಪಳಿಗೆ 30ಕ್ಕೂ ಹೆಚ್ಚು ಹಿರಿಯ ಐಪಿಎಸ್‌ ಅಧಿಕಾರಿಗಳು ಗುರಿಯಾಗಿದ್ದಾರೆ.

ವಿಶೇಷವೆಂದರೇ ಇದರಲ್ಲಿ ಡಿಜಿಪಿ ಡಾ ಎಂ ಎ ಸಲೀಂ, ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ ಕುಮಾರ್ ಸಿಂಗ್‌, ಡಿ ರೂಪ, ಎಂ ಚಂದ್ರಶೇಖರ್‍‌ ಅವರು ಕೂಡ ಸೇರಿದ್ದಾರೆ. 2023ರ ಮೇ 20ರಿಂದ ಇಲ್ಲಿಯವರೆಗೆ ವಿವಿಧ ಪ್ರಕರಣ ಮತ್ತು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ ಎಂದು ಸ್ವತಃ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸದನಕ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಕುರಿತು ವಿಧಾನಸಭೆ ಸದಸ್ಯ ಹೆಚ್‌ ಟಿ ಮಂಜು ಅವರು ಕೇಳಿದ್ದ  ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 2023ರ ಮೇ 20ರಿಂದ ಇದುವರೆಗೆ ಐಪಿಎಸ್‌ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗಿರುವ ಭ್ರಷ್ಟಾಚರ, ಅಕ್ರಮ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಸಲ್ಲಿಕೆಯಾಗಿರುವ ದೂರರ್ಜಿಗಳು, ದಾಖಲಾಗಿರುವ ಪ್ರಕರಣಗಳು, ಅಧಿಕಾರಿಗಳ ವಿವರ, ಬಾಕಿ ಇರುವ ಪ್ರಕರಣಗಳ ವಿವರ, ಈ ಸಂಬಂಧ ಎಷ್ಟು ಸಂಖ್ಯೆಯ ಕಡತಗಳನ್ನು ತೆರೆಯಲಾಗಿದೆ, ಎಷ್ಟು ಕಡತಗಳನ್ನು ವಿಲೇವಾರಿ ಮಾಡಲಾಗಿದೆ, ಎಷ್ಟು ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ವಿವರ ಕೋರಿದ್ದರು.

 

 

ಈ ಸಂಬಂಧ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪಟ್ಟಿ ಬಿಡುಗಡೆ ಮಾಡಿದ್ದಾರೆ.  ಅದೇ ರೀತಿ ನೋಟೀಸ್‌ಗಳಿಗೆ ಅನುಗುಣವಾಗಿ ಸರ್ಕಾರಕ್ಕೆ ಅಧಿಕಾರಿಯು ಸಲ್ಲಿಸಿರುವ ವಿವರ ಮತ್ತು ಸರ್ಕಾರಕ್ಕೆ ಇನ್ನೂ ವರದಿ ಸಲ್ಲಿಸಲು ಬಾಕಿ ಇರುವ ವಿವರ, ಸರ್ಕಾರಕ್ಕೆ ಸ್ವೀಕೃತಗೊಂಡ ವರದಿ ಹಾಗೂ ವಿವರಗಳಿಗೆ ಅನುಗುಣವಾಗಿ ಸರ್ಕಾರವು ಕೈಗೊಂಡ ಕ್ರಮದ ಮಾಹಿತಿಯನ್ನೂ ಒದಗಿಸಿರುವುದು ತಿಳಿದು ಬಂದಿದೆ.

 

ಡಿ ಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿರುವ ಆರೋಪಿತ ಹಿರಿಯ ಐಪಿಎಸ್‌ ಅಧಿಕಾರಿಗಳ ಪಟ್ಟಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು  ನೀಡಿರುವ ಪಟ್ಟಿಯ ಪ್ರಕಾರ ಹಲವು ಹಿರಿಯ ಐಪಿಎಸ್‌ ಅಧಿಕಾರಿಗಳ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಡಿಜಿ ಮತ್ತು ಐಜಿಪಿ ಅವರಿಂದ ವರದಿ ಇನ್ನೂ ಬಂದಿಲ್ಲ. ಕೆಲವು ದೂರುಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸಿದೆ, ವಿಲೇ ಮಾಡಿದೆ. ಇನ್ನೂ ಕೆಲವು ದೂರುಗಳು ಒಳಾಡಳಿತ ಇಲಾಖೆಯಲ್ಲಿ ಪರಿಶೀಲನೆ ಹಂತದಲ್ಲಿದೆ.  ರಾಜ್ಯ ಮಾನವ ಹಕ್ಕುಗಳ ಆಯೋಗದ ಅಂತಿಮ ತೀರ್ಪು ಹೊರಡಿಸುವುದು ಬಾಕಿ ಇರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಗುರುತರ ಆರೋಪಕ್ಕೆ ಗುರಿಯಾದ ಅಧಿಕಾರಿಗಳ ಪಟ್ಟಿ

ಎ ಎನ್ ಪ್ರಕಾಶ್‌ ಗೌಡ ಅವರ ವಿರುದ್ಧ ಅಧಿಕಾರ ದುರುಪಯೋಗ, ಜೀವ ಬೆದರಿಕೆ ಕುರಿತಾದ ಆರೋಪ ಸಂಬಂಧ ದೂರು ಸಲ್ಲಿಕೆಯಾಗಿತ್ತು. ಈ ದೂರನ್ನು ಪರಿಶೀಲಿಸಿರುವ ಸಂಬಂಧಿತ ಇಲಾಖೆಯು ಮುಕ್ತಾಯಗೊಳಿಸಿದೆ. ಅಧಿಕಾರ ದುರುಪಯೋಗ, ಕಾನೂನು ಉಲ್ಲಂಘನೆ, ಮಾನಹಾನಿ ಮತ್ತು ಇತ್ಯಾದಿ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌, ಉಮಾ ಪ್ರಶಾಂತ್ ಅವರ ವಿರುದ್ಧದ ದೂರುಗಳನ್ನು ಪರಿಶೀಲಿಸಿರುವ ಇಲಾಖೆಯು ಅವುಗಳನ್ನು ವಿಲೇ ಮಾಡಿರುವುದು ಪಟ್ಟಿಯಿಂದ ಗೊತ್ತಾಗಿದೆ.

ಪರಿಶಿಷ್ಟ ಜಾತಿಯ ಪತ್ರಿಕಾ ಸಂಪಾದಕರಿಗೆ ಮುದ್ರಣ, ಯಂತ್ರೋಪಕರಣಗಳನ್ನು ಖರೀದಿಸಲು ಅನುದಾನ ಬಿಡುಗಡೆಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗುರುತರವಾಗಿ ಆರೋಪಕ್ಕೆ ಗುರಿಯಾಗಿದ್ದ  ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಹಿಂದಿನ ಅಯುಕ್ತ ಡಾ ಪಿ ಎಸ್ ಹರ್ಷ ಅವರ ವಿರುದ್ಧದ ದೂರನ್ನೂ ವಿಲೇ ಮಾಡಿದೆ. ರಾಹುಲ್‌ ಕುಮಾರ್ ಶಹಪುರ್ವಾದ್ ಅವರ ವಿರುದ್ಧ ಕರ್ತವ್ಯಲೋಪ ಎಸಗಿರುವುದು ಮತ್ತು ತನಿಖಾಧಿಕಾರಿಯಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸದೇ ಇರುವ ಸಂಬಂಧ ಸಲ್ಲಿಕೆಯಾಗಿದ್ದ ದೂರಿನ ಕುರಿತು ಡಿಜಿ ಮತ್ತು ಐಜಪಿ ಅವರಿಂದ ವರದಿ ನಿರೀಕ್ಷಿಸಿದೆ.

ಟೆಂಡರ್ ಪ್ರಕ್ರಿಯೆಯಲ್ಲಿ ಕೆಟಿಪಿಪಿ  ಕಾಯ್ದೆ ನಿಯಮಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರಕ್ಕೆ ಗುರಿಯಾಗಿದ್ದ ಸಿರಿಗೌರಿ, ಅರ್ಜಿದಾರರಿಗೆ ಬೆದರಿಕೆ ಹಾಕಿರುವುದು, ಕಿರುಕುಳ ನೀಡಿರುವುದು, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿದ್ದ  ಐಪಿಎಸ್ ಸಿರಿಗೌರಿ,  ಅಶೋಕ್‌ ಕೆ ವಿ ಅವರ ವಿರುದ್ಧದ ದೂರಿನ ಕುರಿತು ಡಿಜಿ ಮತ್ತು ಐಜಿಪಿ ಅವರಿಂದ ವರದಿ ನಿರೀಕ್ಷಿಸಲಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

ಮೊಹಮದ್‌ ಸಜಿತಾ ಎಂ ಎಸ್‌ ಅವರ ವಿರುದ್ಧ ಸರ್ಕಾರಿ ವಾಹನ ದುರ್ಬಳಕೆ ಆರೋಪ, ಶಿಷ್ಟಾಚಾರದ ಉಲ್ಲಂಘನೆ, ಜನಪ್ರತಿನಿಧಿಗಳೂ ಹಾಗೂ ಸಂಘ ಸಂಸ್ಥೆ ಮುಖಂಡರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಕನ್ನಿಕ ಸಿಕ್ರಿವಾಲ್ ಅವರ ವಿರುದ್ಧದ ಆರೋಪ,

 

 

ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆ ಮಾಡಿಸಿರುವ ಎಂಬ ಆಪಾದನೆಗೆ ಗುರಿಯಾಗಿರುವ ರವೀಂದ್ರ ಕಾಶೀನಾಥ್‌ ಗಡಾದಿ ಅವರ ಪ್ರಕರಣದಲ್ಲಿಯೂ ಡಿಜಿ ಮತ್ತು ಐಜಿಪಿ ಅವರಿಂದ ಸರ್ಕಾರವು ವರದಿ ನಿರೀಕ್ಷಿಸಿದೆ.

ಕಾನೂನುಬಾಹಿರವಾಗಿ ಅಕ್ರಮ, ಅನಧಿಕೃತ, ಪೋರ್ಜರಿ ಮಾಡಿ ಮಸೀದಿ, ಮದರಸ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ದಾಖಲೆ ಸಮೇತ ದೂರುಗಳನ್ನು ನೀಡಿದ್ದರೂ ಸಹ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಮಿಥುನ್ ಕುಮಾರ್ ಅವರ ವಿರುದ್ಧದ ದೂರು, ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸದೇ ಎಫ್‌ಐಆರ್‍‌ ದಾಖಲಿಸದೇ ಪ್ರಕರಣಗಳನ್ನು ಮುಕ್ತಾಯಗೊಳಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಅಮಾತೆ ವಿಕ್ರಮ್ ಅವರ ವಿರುದ್ಧದ ದೂರು, ಇದೇ ದೂರರ್ಜಿ ಪ್ರಕರಣದಲ್ಲಿ ಸೀಮಾ ಲಾಟ್ಕರ್‍‌, ರಮೇಶ್‌ ಬಿ, ಮುತ್ತುರಾಜ್‌ ಅವರ ವಿರುದ್ಧದ ದೂರುಗಳ ಸಂಬಂಧ ಡಿಜಿ ಮತ್ತು ಐಜಿಪಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸದೇ ಇರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಅಧಿಕಾರ ದುರುಪಯೋಗ, ದುರ್ಬಳಕೆ ಮಾಡಿಕೊಂಡು ತನ್ನ ಅಧಿಕಾರದಡಿಯಲ್ಲಿ ಬರುವ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಡಾ ಶ್ರೀನಿವಾಸ ಗೌಡ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರರ್ಜಿ, ಬಿಟ್‌ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಗಳಿಗೆ ಗುರಿಯಾಗಿರುವ ಸಂದೀಪ್‌ ಪಾಟೀಲ್‌ ಅವರ ವಿರುದ್ಧದ ದೂರರ್ಜಿಗೆ ಸಂಬಂಧಿಸಿದಂತೆ ಡಿಜಿ ಮತ್ತು ಐಜಿಪಿ ಅವರಿಂದ ವರದಿ ನಿರೀಕ್ಷಿಸಿದೆ ಎಂದು ಪಟ್ಟಿಯಲ್ಲಿ ಹೇಳಲಾಗಿದೆ.

 

 

ಲೋಕಸಭಾ ಸದಸ್ಯರನ್ನು ತಪ್ಪಾಗಿ ನಡೆಸಿಕೊಂಡು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಎಂ  ನಾರಾಯಣ ಅವರ ವಿರುದ್ಧದ ದೂರು, ವಿ ಜೆ ಸಜೀತ್‌ ಅವರು ಗಾಲ್ಫ್‌ ಸ್ಟಿಕ್‌ನಿಂದ ಗಾಲ್ಫ್‌ ಕ್ಲಬ್‌ ಕಾರ್ಮಿಕ ಬಾಲಕನ ಮೇಲೆ ಹಲ್ಲೆ  ನಡೆಸಿ ನಂತರ ಆ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿತ ಪ್ರಕರಣದಲ್ಲಿ ಅದನ್ನು ಅಪಘಾತ ಎಂಬಂತೆ ಬಿಂಬಿಸಿದ್ದಾರೆ ಎಂದು ಗುರುತರವಾದ ಆರೋಪಕ್ಕೆ ಗುರಿಯಾಗಿದ್ಧಾರೆ. ಈ ದೂರರ್ಜಿ ಕುರಿತು ಡಿಜಿ ಐಜಿಪಿ ಅವರಿಂದ ವರದಿ ನಿರೀಕ್ಷಿಸಿದೆ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಮತ್ತೊಬ್ಬ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್ ಅವರ ವಿರುದ್ಧ ವಾರ್ಷಿಕ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ವರದಿ ಮಾಡದೇ ಕರ್ತವ್ಯಲೋಪ ಎಸಗಿದ್ದಾರೆ, ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೂರರ್ಜಿ ಮೇಲೆ ಡಿಜಿ ಮತ್ತು ಐಜಿಪಿ ಅವರು ವರದಿ ನೀಡಿಲ್ಲ. ಎಸ್ಸಿ, ಎಸ್‌ಟಿ ದೌರ್ಜನ್ಯ ಪ್ರಕರಣದಡಿಯಲ್ಲಿ ಪ್ರಕರಣಖ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳದೇ ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಅಶೋಕ್‌ ಕೆ ವಿ, ಡಾ ಧರಣಿದೇವಿ ಅರುಣ್ ಚಕ್ರವರ್ತಿ ಅವರ ವಿರುದ್ಧದ ದೂರರ್ಜಿಗೆ ಸಂಬಂಧಿಸಿದಂತೆ ಡಿಜಿ ಮತ್ತು ಐಜಿಪಿ ಅವರಿಂದ ಸರ್ಕಾರವು ವರದಿ ನಿರೀಕ್ಷಿಸಿರುವುದು ಗೊತ್ತಾಗಿದೆ.

ನಕಲಿ ಸಹಿ, ಭ್ರಷ್ಟಾಚಾರ ಮತ್ತು ಪಿಡಿಒಗಳ ಒಳ ಸಂಚು ಎಂದು ಹೇಳಲಾದ ಭೂಮಿ ಹಗರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಪಾದನೆಗೆ ಒಳಗಾಗಿರುವ ಸಿದ್ದಾರ್ಥ್ ಗೋಯಲ್‌ ಅವರ ವಿರುದ್ಧದ ದೂರರ್ಜಿ, ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರರ್ಜಿ ಕುರಿತಾಗಿ ಡಿಜಿ ಮತ್ತು ಐಜಿಪಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ.

ಬಿ ದಯಾನಂದ ಮತ್ತು ಸಜೀತ್‌ ವಿ ಜೆ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪ, ಅಲೋಕ್‌ ಮೋಹನ್‌, ಕೆ ರಾಮರಾಜನ್ ಅವರ ವಿರುದ್ಧದ ಅಧಿಕಾರ ದುರುಪಯೋಗ ಆರೋಪ, ಅಧಿಕೃತ ಕಚೇರಿ ಸಮಯದಲ್ಲಿ ನಿರಂತರವಾಗಿ ಕಚೇರಿಯಲ್ಲಿ ಗೈರು ಹಾಜರಾಗುತ್ತಿದ್ದಾರೆ ಎಂದು ಸೀಮಂತ್‌ ಕುಮಾರ್‍‌ ಸಿಂಗ್ ಅವರ ವಿರುದ್ಧದ ದೂರರ್ಜಿ ಸಂಬಂಧ ಡಿಜಿ ಮತ್ತು ಐಜಿಪಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ.  ಆಪಾದಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು  ಸುಧೀರ್ ಕುಮಾರ್‍‌ ರೆಡ್ಡಿ ಅವರ ವಿರುದ್ಧದ ದೂರರ್ಜಿಯ ಕುರಿತು ಡಿಜಿ ಮತ್ತು ಐಜಿಪಿ ಅವರಿಂದ ವರದಿ ನಿರೀಕ್ಷಿಸಿದೆ.

 

 

ಅದೇ ರೀತಿ ಸಿದ್ಧಾರ್ಥ ಗೋಯಲ್ ಅವರು 2026ರ ಮಾರ್ಚ್‌ 8ರಂದು ಹೋಳಿ ಹಬ್ಬದ ನೆಪದಲ್ಲಿ ಆಶ್ಲೀಲ, ಅಸಭ್ಯ ಗೀತೆಗಳಿಗೆ ನೃತ್ಯ ಮಾಡಿ ಸಾಮಾಜಿಕ ಸ್ವಾಸ್ಥ್ಯಹಾಳು ಮಾಡಿರುವ ಹಾಗೂ ಸರ್ಕಾರಿ ನೌಕರರರಿಗೆ ತರವಲ್ಲದ ರೀತಿ ವರ್ತಿಸಿದ್ದಾರೆ ಎಂಬ ದೂರರ್ಜಿ ಕುರಿತು ಡಿಜಿ ಮತ್ತು ಐಜಿಪಿ ಅವರು ಸರ್ಕಾರಕ್ಕೆ ವರದಿಯನ್ನೇ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

ಪೊಲೀಸ್‌ ಮಹಾನಿರ್ದೇಶಕರಾದ ಡಾ ಎಂ ಎ ಸಲೀಂ ಅವರ ವಿರುದ್ಧದ ಕರ್ತವ್ಯ ಲೋಪ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರರ್ಜಿ ಕುರಿತು ಡಿಜಿ ಐಜಿಪಿ ಅವರಿಂದ ವರದಿ ನಿರೀಕ್ಷಿಸಿದೆ. ಅರ್ಜಿದಾರರು ಮನವಿ ನೀಡಿ ತಿಂಗಳು ಕಳೆದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಎನ್‌ ಶಶಿಕುಮಾರ್ ಅವರ ವಿರುದ್ಧದ ದೂರರ್ಜಿಗೂ ಸಹ ಡಿಜಿ ಮತ್ತು ಐಜಿಪಿ ಅವರು ಸರ್ಕಾರಕ್ಕೆ ವರದಿ ನೀಡಿಲ್ಲ.

ಎಸ್‌ ಜಾಹ್ನವಿ ಅವರ ವಿರುದ್ಧದ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪವಿದೆ. ಈ ಸಂಬಂಧದ ದೂರರ್ಜಿಯು ಒಳಾಡಳಿತ ಇಲಾಖೆಯ ಪರಿಶೀಲನೆಯಲ್ಲಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ದೂರರ್ಜಿದಾರರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಾಗುವಂತೆ ಮಾಡಿ ಚನ್ನಪಟ್ಟಣ ಪೂರ್ವ ಪೊಲೀಸ್‌ ಠಾಣೆಯಲ್ಲಿ ಬಂಧನಕ್ಕೆ ಒಳಗಾಗುವಂತೆ ಮಾಡಿದ್ದು ಮತ್ತು ಬಂಧನದ ಅವಧಿಯಲ್ಲಿ ದೂರರ್ಜಿದಾರರ ಮೊಬೈಲ್‌, ಲ್ಯಾಪ್‌ ಟಾಪ್‌ ಕಸಿದುಕೊಂಡು ಅಕ್ರಮ ಡೇಟಾ ವರ್ಗಾವಣೆ ಮಾಡಿದ್ದಾರೆ ಎಂದು ಎಸ್‌ ಗಿರೀಶ್‌ ಅವರ ವಿರುದ್ಧದ ದೂರರ್ಜಿಯೂ ಸಹ ಒಳಾಡಳಿತ ಇಲಾಖೆಯ ಪರಿಶೀಲನೆಯಲ್ಲಿರುವುದು ಪಟ್ಟಿಯಿಂದ ಗೊತ್ತಾಗಿದೆ.

 

 

ಬಳ್ಳಾರಿ ಜಿಲ್ಲೆಯ ಸಂಸದರ ಮತ್ತು ಸಂಡೂರು ತಾಲೂಕಿನ ಶಾಸಕರ ವಿರುದ್ಧ ಅನಾವಶ್ಯಕವಾಗಿ ಆಧಾರ ರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಪ್ರಚಾರ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ವರ್ತಿಕಾ ಕಟಿಯಾರ್ ಅವರ ವಿರುದ್ಧದ ದೂರರ್ಜಿಯೂ ಸಹ ಒಳಾಡಳಿತ ಇಲಾಖೆಯ ಪರಿಶೀಲನೆಯಲ್ಲಿದೆ. ಎಂ ವಿ ಚಂದ್ರಕಾಂತ್‌ ಅವರ ವಿರುದ್ಧದ ಅಧಿಕಾರ ದರ್ಪ, ಸಾರ್ವಜನಿಕರೊಂದಿಗೆ ಅಗೌರವದಿಂದ ನಡೆದುಕೊಂಡಿರುವುದು ದೂರುದಾರರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಸೇರಿದಂತೆ ಮತ್ತಿತರೆ ಆರೋಪಗಳ ಕುರಿತಾದ ದೂರರ್ಜಿಯೂ ಸಹ ಒಳಾಡಳಿತ ಇಲಾಖೆಯ ಪರಿಶೀಲನೆಯಲ್ಲಿರುವುದು ತಿಳಿದು ಬಂದಿದೆ.

 

 

ಆಡಿಟ್‌ ಮಾಡಲು ಸೂಕ್ತ ದಾಖಲೆಗಳನ್ನು ಸಕಾಲದಲ್ಲಿ ಒದಗಿಸದೇ ಕಂಪನಿ ಕಾಯ್ದೆ 2013ನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಡಿ ರೂಪ ಅವರ ವಿರುದ್ಧದ ದೂರರ್ಜಿಯು ತೋಟಗಾರಿಕೆ ಮತ್ತ ರೇಷ್ಮೆ ಇಲಾಖೆಯ ಪರಿಶೀಲನೆಯಲ್ಲಿದೆ. ನಂಜುಂಡಸ್ವಾಮಿ ಅವರ ವಿರುದ್ಧ ನಂಬಿಕೆ ದ್ರೋಹ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಂತಿಮ ತೀರ್ಪನ್ನು ಸರ್ಕಾರವು ನಿರೀಕ್ಷಿಸಿದೆ.

 

 

ಹಾಗೆಯೇ ಎಡಿಜಿಪಿ ಎಂ ಚಂದ್ರಶೇಖರ್ ಅವರ ವಿರುದ್ಧ ಒಟ್ಟು 8 ದೂರರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಆ ಪೈಕಿ ಸುಲಿಗೆ, ಖಾಸಗಿ ಕಂಪನಿಯ ಫ್ಲಾಟ್‌ಗಳನ್ನು ಮತ್ತೊಬ್ಬರ ಹೆಸರಿನಲ್ಲಿ ಬೇರೆಯವರಿಗೆ ಮಾರಲು ಸಹಕರಿಸಿ ವಂಚನೆ ಎಸಗಿದ್ದಾರೆ, ತಮ್ಮ ಅಧಿಕಾರ ಬಳಸಿಕೊಂಡು ದೂರರ್ಜಿದಾರರ ವಿರುದ್ಧ ಸುಳ್ಳು ಎಫ್‌ಐಆರ್‍‌ ದಾಖಲಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು, ಭ್ರಷ್ಟಾಚಾರ, ದುರ್ನಡತೆ, ಸುಲಿಗೆಯಲ್ಲಿ ಭಾಗಿಯಾಗಿರುವುದು, ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವುದು, ಸರ್ಕಾರದ ಅನುಮೋದನೆ ಪಡೆಯದೇ ಸುದ್ದಿಗೋಷ್ಠಿ ನಡೆಸಿರುವುದು, ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಅವಾಚ್ಯ ಮತ್ತು ಅಸಭ್ಯ ಪದಗಳನ್ನು ಬಳಸಿ ಭಾರತೀಯ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು, ಅಧಿಕಾರ ದುರುಪಯೋಗ, ಸರ್ಕಾರದ ಪೂರ್ವಾನುಮತಿ ಪಡೆಯದೇ ತಮ್ಮ ಪತ್ನಿ ಅವರ ಹೆಸರಿನಲ್ಲಿ ಖಾಸಗಿ ಸಂಸ್ಥೆ ರಚಿಸಿ, ಕಿಯೋನಿಕ್ಸ್‌ ಸಂಸ್ಥೆಯಿಂದ ಕಾಮಗಾರಿ ವಹಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರರ್ಜಿಗಳು ಸಲ್ಲಿಕೆಯಾಗಿವೆ.

ಅದೇ ರೀತಿ ಇದೇ ಚಂದ್ರಶೇಖರ್ ಅವರ ವಿರುದ್ಧ ಸರ್ಕಾರಿ ಸ್ವಾಮ್ಯದ ಹಲವು  ಇಲಾಖೆಗಳಿಂದ ಲಾಭ ಪಡೆಯಲು ಹಾಗೂ ಸಾರ್ವಜನಿಕರಿಗೆ ದೊರೆಯಬೇಕಾದ ಸವಲತ್ತುಗಳನ್ನು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ದೊರಕಿಸಿಕೊಡುವ ದುರುದ್ದೇಶದಿಂದ ತಮ್ಮ ಹೆಸರನ್ನು ಅನಧಿಕೃತವಾಗಿ ಬದಲಾಯಿಸಿಕೊಂಡಿರುವುದು, ಕಳೆದ 9 ವರ್ಷಗಳಿಂದ ಸ್ಥಿರಾಸ್ತಿ ರಿಟರ್ನ್‌ ನಲ್ಲಿ ದುರುದ್ದೇಶಪೂರಿತವಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದಾರೆ ಎಂಬ ದೂರರ್ಜಿಗಳು ಸಹ ಸರ್ಕಾರದಲ್ಲಿವೆ. ಈ ಎಲ್ಲಾ ದೂರರ್ಜಿಗಳ ಕುರಿತು ಒಳಾಡಳಿತ ಇಲಾಖೆಯು ಪರಿಶೀಲಿಸುತ್ತಿರುವುದು ತಿಳಿದು ಬಂದಿದೆ.

Hot this week

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...
Please Scan to make Your Contribution

Topics

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

Related Articles

Popular Categories

error: Content is protected !!