ಬೆಂಗಳೂರು; ಕಲಬುರಗಿ ಜಿಲ್ಲೆಯ ಇಂಗಳಗಿ ಮತ್ತು ರಾವೂರ್ ಗ್ರಾಮಗಳಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಅದಾನಿ ಸಮೂಹದ ಎಸಿಸಿ ಪ್ರೈ ಲಿಮಿಟೆಡ್‌ಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಧಿಸಿದ್ದ ₹ 482.69 ಕೋಟಿ ದಂಡದ ಬೇಡಿಕೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಅದೇ ರೀತಿ ರಾಯಲ್ಟಿ ಬಾಕಿ ಮೊತ್ತವನ್ನು ಲೆಕ್ಕ ಹಾಕುವ ಸಂದರ್ಭದಲ್ಲಿ ಕಾಲ್ಪನಿಕ (Notional) ಸುಣ್ಣದ ಕಲ್ಲು ಬಳಕೆ ಅನುಪಾತವನ್ನು ಬಳಸುವುದನ್ನು ತಿರಸ್ಕರಿಸಿದ್ದ ಪರಿಷ್ಕರಣಾ ಪ್ರಾಧಿಕಾರದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿದೆ.
ಎಸಿಸಿ ಲಿಮಿಟೆಡ್ v. ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಸಲ್ಲಿಸಿದ್ದ ರಿಟ್ ಅರ್ಜಿ [WP ಸಂಖ್ಯೆ 25298 of 2024 c/w WP ಸಂಖ್ಯೆ 18655 of 2025 ಮತ್ತು WP ಸಂಖ್ಯೆ 36850 of 2025] ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.




ದಂಡ ವಸೂಲಾತಿ ಮತ್ತು ಲೆಟರ್ ಆಫ್ ಇಂಟೆಂಟ್‌ನ್ನು ಕಾರ್ಯಗತಗೊಳಿಸುವ ಸಂಬಂಧ ಮತ್ತು ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಗಣಿ) ರೋಹಿಣಿ ಸಿಂಧೂರಿ ಅವರು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು. ಈ ಅಭಿಪ್ರಾಯದ ಬೆನ್ನಲ್ಲೇ ಹೈಕೋರ್ಟ್ ನೀಡಿರುವ ಆದೇಶವು ಮುನ್ನೆಲೆಗೆ ಬಂದಿದೆ.
2015 ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ತಿದ್ದುಪಡಿಯ ಶಾಸನಬದ್ಧ ಉದ್ದೇಶವನ್ನು ರಾಜ್ಯ ಸರ್ಕಾರದ ಈ ದಂಡದ ಆದೇಶವು ಬದಿಗೊತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್ ಕಂಪನಿಯಿಂದ ದಂಡ ವಸೂಲಾತಿಯನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆದೇಶಿಸಿತ್ತು. ಅಲ್ಲದೇ ರಾಜ್ಯ ಸರ್ಕಾರವು ವಿಧಿಸಿದ್ದ ದಂಡವನ್ನು ಹೈಕೋರ್ಟ್ ರದ್ದುಗೊಳಿಸಿರುವುದು ವಸೂಲಾತಿ ಕ್ರಮಕ್ಕೆ ಹಿನ್ನಡೆಯುಂಟಾಗಿದೆ.
ಎಸಿಸಿ ಕಂಪೆನಿಯು ಸಿಮೆಂಟ್ ತಯಾರಿಕೆಗಾಗಿ ಸುಣ್ಣದಕಲ್ಲು ಗಣಿಗಾರಿಕೆಗೆ 1963 ರಲ್ಲಿ ಗುತ್ತಿಗೆ ಪಡೆದಿತ್ತು. 2015 ರ ತಿದ್ದುಪಡಿ ಕಾಯ್ದೆಯನ್ವಯ ಗುತ್ತಿಗೆ ಅವಧಿಯು ಮಾರ್ಚ್ 31, 2030 ರವರೆಗೆ ಸ್ವಯಂಚಾಲಿತವಾಗಿ ವಿಸ್ತರಣೆಯಾಗಿದೆ. ಪೂರಕ ಗುತ್ತಿಗೆ ಪತ್ರ ಸಹಿ ಮಾಡಿಲ್ಲ ಎಂಬ ಕಾರಣಕ್ಕೆ 2023 ರ ನಂತರ ಕಂಪೆನಿ ನಡೆಸಿದ ಗಣಿಗಾರಿಕೆಯನ್ನು ‘ಅಕ್ರಮ’ ಎಂದು ಪರಿಗಣಿಸಿ ಗಣಿ ಇಲಾಖೆಯು ₹482 ಕೋಟಿ ದಂಡ ವಿಧಿಸಿತ್ತು.
ಆದರೆ, ಶಾಸನಬದ್ಧವಾಗಿ ಅವಧಿ ವಿಸ್ತರಣೆಯಾಗಿರುವಾಗ ಪೂರಕ ಪತ್ರ ಸಹಿಯಾಗದಿದ್ದರೂ ಕಂಪೆನಿಯ ಗಣಿಗಾರಿಕೆ ಹಕ್ಕು ಇಲ್ಲದಂತಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಲ್ಲದೆ, ರಾಯಧನ ಪಾವತಿ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೈಜ ಪ್ರಮಾಣದ ಬದಲು ತನ್ನದೇ ಆದ Notional Formula ಬಳಸಿರುವುದನ್ನು ಹೈಕೋರ್ಟ್ ತಳ್ಳಿಹಾಕಿದೆ. ಕೇಂದ್ರ ಸರ್ಕಾರದ ಪರಿಶೀಲನಾ ಪ್ರಾಧಿಕಾರವು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ನ್ಯಾಯಾಲಯ, ಸಿಮೆಂಟ್ ಮತ್ತು ಕಟ್ಟಡ ಸಾಮಗ್ರಿಗಳ ರಾಷ್ಟ್ರೀಯ ಮಂಡಳಿ ನೀಡಿದ ವರದಿಯನ್ನೇ ರಾಯಧನಕ್ಕೆ ಆಧಾರವಾಗಿ ಪರಿಗಣಿಸಬೇಕು ಎಂದು ಆದೇಶಿಸಿದೆ.
ಎಸಿಸಿ ಲಿಮಿಟೆಡ್‌ಗೆ ವಿಧಿಸಲಾಗಿದ್ದ ₹482.69 ಕೋಟಿ ದಂಡ ರದ್ದು, ಕಂಪೆನಿಯು ಮಧ್ಯಂತರ ಆದೇಶದಂತೆ ಜಮೆ ಮಾಡಿದ್ದ ₹125 ಕೋಟಿ ಹಣವನ್ನು ತಕ್ಷಣವೇ ಮರುಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಗಣಿಗಾರಿಕೆ ಸಾಗಣೆ ಇ-ಪರ್ಮಿಟ್ ಪಡೆಯಲು ಅಗತ್ಯವಿರುವ ಐಎಲ್‌ಎಂಎಸ್ ಪೋರ್ಟಲ್ ಪ್ರವೇಶವನ್ನು ಎಸಿಸಿಗೆ ತಕ್ಷಣವೇ ಮರುಸಂಪರ್ಕ ಕಲ್ಪಿಸಬೇಕು. ಎಸಿಸಿ ಕಂಪೆನಿಯ ಪರವಾಗಿ ತಕ್ಷಣವೇ ಪೂರಕ ಗುತ್ತಿಗೆ ಪತ್ರವನ್ನು (Supplementary Lease Deed) ನೋಂದಾಯಿಸಿಕೊಡಬೇಕು ಎಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ
ಸಿಮೆಂಟ್ ತಯಾರಿಕಾ ಕಂಪನಿಯಾದ ಎಸಿಸಿ ಲಿಮಿಟೆಡ್, ತನ್ನದೇ ಬಳಕೆಗಾಗಿ ಸುಣ್ಣದ ಕಲ್ಲು ಮತ್ತು ಗಣಿಗಾರಿಕೆ ನಡೆಸಲು ಕರ್ನಾಟಕದಲ್ಲಿ ಗಣಿಗಾರಿಕೆ ಗುತ್ತಿಗೆಯನ್ನು ಹೊಂದಿದೆ. ಈ ಗುತ್ತಿಗೆಯನ್ನು ಕಾಲಕಾಲಕ್ಕೆ ನವೀಕರಿಸಲಾಗಿತ್ತು. ಈ ಗುತ್ತಿಗೆಯು 18 ಫೆಬ್ರವರಿ 2023ರವರೆಗೆ ಮಾನ್ಯವಾಗಿತ್ತು.
ರಾಯಲ್ಟಿ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಎಸಿಸಿ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ (DMG) ನಡುವೆ ವಿವಾದ ಉಂಟಾಗಿತ್ತು. ಎಸಿಸಿ, ವಾಸ್ತವವಾಗಿ ಹೊರತೆಗೆಯಲಾದ ಅಥವಾ ಬಳಕೆ ಮಾಡಿದ ಖನಿಜದ ಪ್ರಮಾಣದ ಆಧಾರದ ಮೇಲೆ ರಾಯಲ್ಟಿ ಪಾವತಿಸಬೇಕೆಂದು ವಾದಿಸಿತು. ಆದರೆ ರಾಜ್ಯ ಸರ್ಕಾರವು ಕಾಲ್ಪನಿಕ ಸುಣ್ಣದ ಕಲ್ಲು ಅನುಪಾತವನ್ನು ಆಧರಿಸಿ ರಾಯಲ್ಟಿ ಲೆಕ್ಕಾಚಾರ ಮಾಡಿತು.

2022ರ ಆಗಸ್ಟ್ 25ರಂದು ರಾಜ್ಯ ಸರ್ಕಾರವು ಗುತ್ತಿಗೆಯನ್ನು 31 ಮಾರ್ಚ್ 2030ರವರೆಗೆ ವಿಸ್ತರಿಸುವ ಆದೇಶ ಹೊರಡಿಸಿತ್ತು. ಆದರೆ ಪೂರಕ ಗಣಿಗಾರಿಕೆ ಗುತ್ತಿಗೆ ಪತ್ರ (Supplementary Lease Deed) ಜಾರಿಗೊಳಿಸುವುದನ್ನು ಕಾನೂನುಬದ್ಧ ಅನುಮತಿಗಳು ಪಡೆಯುವುದು ಮತ್ತು ಬಾಕಿ ಇರುವ ಮೊತ್ತಗಳನ್ನು ಪಾವತಿಸುವುದಕ್ಕೆ ಒಳಪಡಿಸಿತ್ತು.
ಎಸಿಸಿ ರಾಯಲ್ಟಿ ಬಾಕಿ ಮೊತ್ತವನ್ನು ವಿವಾದಿಸಿದ್ದರಿಂದ ಮತ್ತು ‘No Due Certificate’ ಪಡೆಯಲು ಸಾಧ್ಯವಾಗದ ಕಾರಣ ಪೂರಕ ಗುತ್ತಿಗೆ ಪತ್ರವನ್ನು ಜಾರಿಗೊಳಿಸಲಾಗಲಿಲ್ಲ. 18 ಫೆಬ್ರವರಿ 2023ರ ನಂತರವೂ ಗಣಿಗಾರಿಕೆ ಗಣಿಗಾರಿಕೆ ಗುತ್ತಿಗೆಯ ಔಪಚಾರಿಕ ಅವಧಿ ಮುಗಿದ ನಂತರವೂ, ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 8A(5)ರ ಕಾರಣದಿಂದ ಎಸಿಸಿ ಗಣಿಗಾರಿಕೆಯನ್ನು ಮುಂದುವರಿಸಿತ್ತು.
ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಎಸಿಸಿಗೆ ಸಂಬಂಧಿಸಿದ Integrated Lease Management System (ILMS) Portal ಪ್ರವೇಶವನ್ನು ನಿರ್ಬಂಧಿಸಿತ್ತು. ಇದರಿಂದ ಎಸಿಸಿಗೆ ಇ-ಪರ್ಮಿಟ್‌ಗಳನ್ನು ಪಡೆಯಲು ಮತ್ತು ರಾಯಲ್ಟಿ ಪಾವತಿಸಲು ಸಾಧ್ಯವಾಗಲಿಲ್ಲ. 5 ಜೂನ್ 2025ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 21(5)ರ ಅಡಿಯಲ್ಲಿ ₹482.69 ಕೋಟಿ ದಂಡದ ಬೇಡಿಕೆ ನೋಟಿಸ್ ಜಾರಿಗೊಳಿಸಿತ್ತು. 19 ಫೆಬ್ರವರಿ 2023ರಿಂದ 14 ಆಗಸ್ಟ್ 2024ರವರೆಗೆ ಎಸಿಸಿ 78,33,415 ಮೆಟ್ರಿಕ್ ಟನ್ ಸುಣ್ಣದ ಕಲ್ಲನ್ನು ಕಾನೂನುಬದ್ಧ ಅನುಮತಿಯಿಲ್ಲದೆ ಹೊರತೆಗೆದಿದೆ ಎಂದು ಇಲಾಖೆಯು ಆರೋಪಿಸಿತ್ತು.
ಪರಿಷ್ಕರಣಾ ಪ್ರಾಧಿಕಾರದ ಆದೇಶದಲ್ಲೇನಿತ್ತು?
ಈ ನಡುವೆ, 9 ಸೆಪ್ಟೆಂಬರ್ 2025ರಂದು ಪರಿಷ್ಕರಣಾ ಪ್ರಾಧಿಕಾರವು ರಾಯಲ್ಟಿಯನ್ನು ಕಾಲ್ಪನಿಕ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ ಎಂದು ತೀರ್ಮಾನಿಸಿತ್ತು. ಎಸಿಸಿ ಸಲ್ಲಿಸಿದ್ದ ವಾಸ್ತವಿಕ ತೂಕಮಾಪನ (Actual Weighment) ಮಾಹಿತಿಯನ್ನು ಸಮರ್ಪಕವಾಗಿ ತಪ್ಪೆಂದು ಸಾಬೀತುಪಡಿಸಲಾಗಿಲ್ಲ ಎಂದು ಪ್ರಾಧಿಕಾರ ಗಮನಿಸಿತ್ತು.
ಹೀಗಾಗಿ, ಸೂಕ್ತ ಕ್ರಮ ಕೈಗೊಳ್ಳುವಂತೆ ವಿಷಯವನ್ನು ರಾಜ್ಯ ಸರ್ಕಾರಕ್ಕೆ ಮರುಕಳುಹಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸತ್ತು. 18 ಫೆಬ್ರವರಿ 2023ರ ನಂತರ ಎಸಿಸಿ ನಡೆಸಿದ ಗಣಿಗಾರಿಕೆ ಕಾನೂನುಬದ್ಧವಾಗಿತ್ತೇ, ಪೂರಕ ಗಣಿಗಾರಿಕೆ ಗುತ್ತಿಗೆ ಪತ್ರವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಿತ್ತೇ, ರಾಯಲ್ಟಿ ಲೆಕ್ಕಾಚಾರಕ್ಕೆ ಕಾಲ್ಪನಿಕ ಸುಣ್ಣದ ಕಲ್ಲು ಬಳಕೆ ಅನುಪಾತವನ್ನು ಬಳಸುವುದು ಕಾನೂನುಬದ್ಧವೇ ಎಂಬ ಪ್ರಮುಖ ಪ್ರಶ್ನೆಗಳು ಇದ್ದವು.
ಎಸಿಸಿಯ ವಾದದಲ್ಲೇನಿತ್ತು?
ಎಂಎಂಡಿಆರ್ ಕಾಯ್ದೆ ಮತ್ತು ಅನ್ವಯವಾಗುವ ನಿಯಮಗಳಲ್ಲಿ, ಗಣಿಗಾರಿಕೆ ಗುತ್ತಿಗೆಯ ಕಾನೂನುಬದ್ಧ ವಿಸ್ತರಣೆಗೆ ಪೂರಕ ಗುತ್ತಿಗೆ ಪತ್ರವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಯಾವುದೇ ನಿಯಮವಿಲ್ಲ ಎಂದು ಎಸಿಸಿ ವಾದಿಸಿತ್ತು. ಇದಲ್ಲದೆ, ಸೆಕ್ಷನ್ 9ರ ಅಡಿಯಲ್ಲಿ ವಾಸ್ತವವಾಗಿ ಹೊರತೆಗೆಯಲಾದ ಅಥವಾ ಬಳಕೆ ಮಾಡಿದ ಖನಿಜದ ಪ್ರಮಾಣದ ಆಧಾರದ ಮೇಲೆ ರಾಯಲ್ಟಿ ಲೆಕ್ಕ ಹಾಕಬೇಕು ಎಂದು ಅದು ವಾದಿಸಿತ್ತು.
ವಾಸ್ತವಿಕ ತೂಕಮಾಪನದ ಮಾಹಿತಿ ವಿಶ್ವಾಸಾರ್ಹವಲ್ಲ ಎಂದು ಸಾಬೀತುಪಡಿಸದೆ, ರಾಜ್ಯ ಸರ್ಕಾರವು ಕಾಲ್ಪನಿಕ ಪರಿವರ್ತನಾ ಅನುಪಾತವನ್ನು ಆಧರಿಸಿ ರಾಯಲ್ಟಿ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ ಎಂದು ಎಸಿಸಿ ತಿಳಿಸಿತ್ತು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ರಾಜ್ಯ ಸರ್ಕಾರದ ವಾದವೇನು?
ಪೂರಕ ಗುತ್ತಿಗೆ ಪತ್ರವಿಲ್ಲದೆ ಗಣಿಗಾರಿಕೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ವಾದವನ್ನು ಮಂಡಿಸಿತ್ತು. ಗುತ್ತಿಗೆಯ ವಿಸ್ತರಣೆಯು ಬಾಕಿ ಇರುವ ರಾಯಲ್ಟಿ ಸೇರಿದಂತೆ ಬಾಕಿ ಮೊತ್ತಗಳ ಪಾವತಿಗೆ ಒಳಪಟ್ಟಿತ್ತು. ಆದರೆ ಎಸಿಸಿ ಆ ಮೊತ್ತವನ್ನು ಪಾವತಿಸಿರಲಿಲ್ಲ ಎಂದು ಇಲಾಖೆ ತಿಳಿಸಿತ್ತು.
ಕಾಲ್ಪನಿಕ ರಾಯಲ್ಟಿ ಲೆಕ್ಕಾಚಾರವನ್ನು ಸಮರ್ಥಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2009ರಲ್ಲಿ ಬೆಲ್ಟೋಮೀಟರ್ (Beltometer) ಅಳವಡಿಸುವ ಮೊದಲು ವಿಶ್ವಾಸಾರ್ಹ ಸುಣ್ಣದ ಕಲ್ಲು ಬಳಕೆ ಮಾಹಿತಿಯು ಲಭ್ಯವಿರಲಿಲ್ಲ ಎಂದು ವಾದಿಸಿತ್ತು. ಹಿಂದಿನ ತೂಕ ಸೇತುವೆ (Weighbridge) ಮಾಹಿತಿಯೂ ಅನುಮಾನಾಸ್ಪದವಾಗಿತ್ತು ಎಂದು ಇಲಾಖೆ ಹೇಳಿತ್ತು.
ಹೈಕೋರ್ಟ್‌ನ ತೀರ್ಪು
ಎಸಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಅಂಗೀಕರಿಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 8A(5)ರ ಪರಿಣಾಮವಾಗಿ ಎಸಿಸಿಯ ಗಣಿಗಾರಿಕೆ ಗುತ್ತಿಗೆ 31 ಮಾರ್ಚ್ 2030ರವರೆಗೆ ಕಾನೂನುಬದ್ಧವಾಗಿ ವಿಸ್ತರಿಸಲ್ಪಟ್ಟಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
2015ರ Mines and Minerals (Development and Regulation) Amendment Billನ Statement of Objects and Reasons ಅನ್ನು ನ್ಯಾಯಾಲಯ ಉಲ್ಲೇಖಿಸಿತು. ಗಣಿಗಾರಿಕೆ ಗುತ್ತಿಗೆಗಳ ನವೀಕರಣದಲ್ಲಿ ಉಂಟಾಗುತ್ತಿದ್ದ ದೀರ್ಘ ವಿಳಂಬದಿಂದ ಗಣಿಗಾರಿಕೆ ಉದ್ಯಮಕ್ಕೆ ತೊಂದರೆ ಉಂಟಾಗುತ್ತಿದ್ದುದನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.
‘ಮುಂದುವರಿದ ಗುತ್ತಿಗೆ ಪತ್ರಗಳನ್ನು ಜಾರಿಗೊಳಿಸುವುದು ಮತ್ತು ಅವುಗಳಲ್ಲಿರುವ ಷರತ್ತುಗಳನ್ನು ಪೂರೈಸುವುದಕ್ಕೆ ಕಾನೂನುಬದ್ಧವಾಗಿ ನೀಡಿರುವ ಗಣಿಗಾರಿಕೆ ಗುತ್ತಿಗೆಯ ವಿಸ್ತರಣೆಯನ್ನು ಅವಲಂಬಿತಗೊಳಿಸಿದರೆ, ಗಣಿಗಾರಿಕೆ ಗುತ್ತಿಗೆಗಳ ಅವಧಿಯನ್ನು ಕಾನೂನಿನ ಮೂಲಕ ವಿಸ್ತರಿಸುವ ಶಾಸನಾತ್ಮಕ ಉದ್ದೇಶವೇ ವಿಫಲವಾಗುತ್ತದೆ,’ ಎಂದು ಹೈಕೋರ್ಟ್ ಹೇಳಿದೆ.
ಹೀಗಾಗಿ, ಪೂರಕ ಗುತ್ತಿಗೆ ಪತ್ರದ ಕೊರತೆಯಿಂದ ವಿಸ್ತರಿಸಲ್ಪಟ್ಟ ಅವಧಿಯಲ್ಲಿನ ಗಣಿಗಾರಿಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿರುವುದು ಆದೇಶದಿಂದ ತಿಳಿದು ಬಂದಿದೆ.
ಪೂರಕ ಗುತ್ತಿಗೆ ಪತ್ರದ ಅಗತ್ಯತೆ
ಪೂರಕ ಗುತ್ತಿಗೆ ಪತ್ರವನ್ನು ಜಾರಿಗೊಳಿಸುವುದು ಅಪೇಕ್ಷಣೀಯವಾಗಿರಬಹುದು. ಆದರೆ ಅದು ಜಾರಿಯಾಗದಿರುವುದರಿಂದ, ಸೆಕ್ಷನ್ 8A(5)ರ ಅಡಿಯಲ್ಲಿ ದೊರೆತ ಕಾನೂನುಬದ್ಧ ವಿಸ್ತರಣೆಯ ಅವಧಿಯಲ್ಲಿ ಎಸಿಸಿ ಗಣಿಗಾರಿಕೆ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಖನಿಜ ರಿಯಾಯಿತಿ ನಿಯಮಗಳು, 1960ರ ರ ನಿಯಮ 24A ಕೂಡ ನವೀಕರಣದ ಅರ್ಜಿ ಬಾಕಿ ಇರುವ ಅವಧಿಯಲ್ಲಿ ಗಣಿಗಾರಿಕೆ ಗುತ್ತಿಗೆಗಳನ್ನು ಕಾನೂನುಬದ್ಧವಾಗಿ ಮುಂದುವರಿಸುವ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದು ನ್ಯಾಯಾಲಯ ಗಮನಿಸಿದೆ. ಆದ್ದರಿಂದ, ವಿಸ್ತರಿಸಲ್ಪಟ್ಟ ಅವಧಿಯನ್ನು ಒಳಗೊಂಡ ಅಧಿಕೃತ ಗುತ್ತಿಗೆ ಪತ್ರ ಇಲ್ಲದಿದ್ದರೂ ಆ ಅವಧಿಯಲ್ಲಿ ನಡೆಸಿದ ಗಣಿಗಾರಿಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಕೇಂದ್ರ ಸರ್ಕಾರದ ನಿಲುವೇನು?
ಎಸಿಸಿಯ ವಾದವನ್ನು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೂಡ ಬೆಂಬಲಿಸಿದ್ದರು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ. ವಿಸ್ತರಿಸಲ್ಪಟ್ಟ ಗುತ್ತಿಗೆ ಅವಧಿಯಲ್ಲಿ ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸಲು ಪೂರಕ ಗುತ್ತಿಗೆ ಪತ್ರವನ್ನು ಜಾರಿಗೊಳಿಸುವುದು ಅಗತ್ಯವಿಲ್ಲ ಎಂಬ ನಿಲುವನ್ನು ಅವರು 2015ರ ಫೆ.5ರ ಗಣಿ ಸಚಿವಾಲಯದ ಪತ್ರವನ್ನು ಆಧರಿಸಿ ಸಮರ್ಥಿಸಿದ್ದರು.
ನ್ಯಾಯಾಲಯದ ಅವಲೋಕನವೇನು?
ವಿಸ್ತರಿಸಲ್ಪಟ್ಟ ಗುತ್ತಿಗೆ ಅವಧಿಯಲ್ಲಿ ಕಾನೂನುಬದ್ಧ ಗಣಿಗಾರಿಕೆ ಚಟುವಟಿಕೆಯನ್ನು ನಡೆಸಲು ಪೂರಕ ಗುತ್ತಿಗೆ ಪತ್ರವನ್ನು ಜಾರಿಗೊಳಿಸುವುದು ಅತ್ಯಗತ್ಯ ಷರತ್ತು ಅಲ್ಲ ಎಂಬುದನ್ನು ಕೇಂದ್ರ ಸರ್ಕಾರವೂ ಸ್ಪಷ್ಟವಾಗಿ ಅರ್ಥೈಸಿಕೊಂಡಿದೆ.” ಗಣಿಗಾರಿಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅವಲೋಕಿಸಿದೆ.

ಪೂರಕ ಗುತ್ತಿಗೆ ಪತ್ರವನ್ನು ಜಾರಿಗೊಳಿಸಲು ಮತ್ತು ಅಗತ್ಯ ಸ್ಟಾಂಪ್ ಡ್ಯೂಟಿ ಪಾವತಿಸಲು ಎಸಿಸಿ ಸಿದ್ಧವಿತ್ತು ಎಂಬುದನ್ನು ನ್ಯಾಯಾಲಯ ದಾಖಲಿಸಿದೆ. ಆದರೆ ಮಧ್ಯಂತರ ಅವಧಿಯಲ್ಲಿ ನಡೆಸಿದ ಗಣಿಗಾರಿಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲು ಅಥವಾ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 21ರ ಅಡಿಯಲ್ಲಿ ದಂಡ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ, ಎಸಿಸಿಯ ಐಎಲ್‌ಎಂಎಸ್ ಪೋರ್ಟಲ್ ಪ್ರವೇಶವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ನಿರ್ಬಂಧಿಸಿರುವ ನಿರ್ಧಾರವೂ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಕಾಲ್ಪನಿಕ ರಾಯಲ್ಟಿ ಲೆಕ್ಕಾಚಾರದ ಬಗ್ಗೆಯೂ ಹೈಕೋರ್ಟ್ ತೀರ್ಪು ನೀಡಿದೆ. ಎಸಿಸಿ ಸಲ್ಲಿಸಿದ್ದ ವಾಸ್ತವಿಕ ತೂಕಮಾಪನ ಮಾಹಿತಿಯನ್ನು ತಿರಸ್ಕರಿಸಿ ಕಾಲ್ಪನಿಕ ಬಳಕೆ ಅನುಪಾತವನ್ನು ಬಳಸಲು ರಾಜ್ಯ ಸರ್ಕಾರವು ಸಾಕಷ್ಟು ಕಾರಣಗಳನ್ನು ನೀಡಿಲ್ಲ ಎಂಬ ಪರಿಷ್ಕರಣಾ ಪ್ರಾಧಿಕಾರದ ತೀರ್ಮಾನವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
“ವರದಿಯಾಗಿರುವ ಬಳಕೆಯ ಮಾದರಿ ಅಸಾಧ್ಯವಾಗಿದೆ ಎಂಬುದನ್ನಾಗಲಿ ಅಥವಾ ಕಾಲ್ಪನಿಕ ಆಧಾರದ ಮೇಲೆ ಸುಣ್ಣದ ಕಲ್ಲಿನ ಬಳಕೆಯನ್ನು ಲೆಕ್ಕ ಹಾಕುವುದು ವಾಸ್ತವಿಕ ಬಳಕೆಯನ್ನು ನಿರ್ಧರಿಸುವ ಹೆಚ್ಚು ನಿಖರವಾದ ವಿಧಾನವಾಗಿದೆ ಎಂಬುದನ್ನಾಗಲಿ ರಾಜ್ಯ ಸರ್ಕಾರವು ಸ್ಥಾಪಿಸಿಲ್ಲ. ಮುಂದುವರಿದು, ತೂಕಮಾಪನ ಉಪಕರಣಗಳು ನಿಖರವಾಗಿರಲಿಲ್ಲ ಎಂಬ ಯಾವುದೇ ನಿರ್ಣಯವಿಲ್ಲದ ಸಂದರ್ಭದಲ್ಲಿ, ಕಾಲ್ಪನಿಕ ಆಧಾರದ ಮೇಲೆ ರಾಯಲ್ಟಿ ನಿರ್ಧರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿರುವುದು ಆದೇಶದಿಂದ ಗೊತ್ತಾಗಿದೆ.

ವಾದ ಮತ್ತು ಪ್ರತಿವಾದವನ್ನು ಆಲಿಸಿದ ನಂತರ ಹೈಕೋರ್ಟ್, ₹482.69 ಕೋಟಿ ಮೊತ್ತದ ದಂಡದ ಬೇಡಿಕೆ ನೋಟಿಸ್ ಅನ್ನು ರದ್ದುಗೊಳಿಸಿತು. ಎಸಿಸಿಯ ಗಣಿಗಾರಿಕೆ ಗುತ್ತಿಗೆ 31 ಮಾರ್ಚ್ 2030ರವರೆಗೆ ಕಾನೂನುಬದ್ಧವಾಗಿ ವಿಸ್ತರಿಸಲ್ಪಟ್ಟಿದೆ ಎಂದು ತೀರ್ಮಾನಿಸಿತು. ಎಸಿಸಿಗೆ ಐಎಲ್‌ಎಂಎಸ್ ಪೋರ್ಟಲ್‌ಗೆ ಸಂಪೂರ್ಣ ಪ್ರವೇಶವನ್ನು ಮರುಸ್ಥಾಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಗತ್ಯವಿರುವ ಪೂರಕ ಗುತ್ತಿಗೆ ಒಪ್ಪಂದವನ್ನು ಜಾರಿಗೊಳಿಸಬೇಕು ಎಂಧು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿತು. ಹೈಕೋರ್ಟ್‌ನ ಮಧ್ಯಂತರ ಆದೇಶದಂತೆ ಎಸಿಸಿ ಠೇವಣಿ ಮಾಡಿದ್ದ ಮೊತ್ತವನ್ನು ಮರುಪಾವತಿಸಬೇಕು ಎಂದು ನಿರ್ದೇಶಿಸಿದೆಯಲ್ಲದೇ ಪರಿಷ್ಕರಣಾ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಸೆಕ್ಷನ್ 8A(5)ರ ಅಡಿಯಲ್ಲಿ ಕಾನೂನುಬದ್ಧವಾಗಿ ವಿಸ್ತರಿಸಲ್ಪಟ್ಟ ಗಣಿಗಾರಿಕೆ ಗುತ್ತಿಗೆ ಅವಧಿಯಲ್ಲಿ, ಕೇವಲ ಪೂರಕ ಒಪ್ಪಂದ ಗುತ್ತಿಗೆ ಜಾರಿಯಾಗಿಲ್ಲ ಎಂಬ ಕಾರಣಕ್ಕೆ ಗಣಿಗಾರಿಕೆಯನ್ನು “ಕಾನೂನುಬಾಹಿರ ಗಣಿಗಾರಿಕೆ” ಎಂದು ಪರಿಗಣಿಸಿ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 21(5)ರ ಅಡಿಯಲ್ಲಿ ದಂಡ ವಿಧಿಸಲು ಸಾಧ್ಯವಿಲ್ಲ ಎಂಬುದು ಈ ತೀರ್ಪಿನ ಪ್ರಮುಖ ಕಾನೂನು ತತ್ವವಾಗಿರುವುದು ಕಂಡು ಬಂದಿದೆ.
ಕಂಪೆನಿಯ ಪರವಾಗಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಮತ್ತು ವಕೀಲೆ ವೈಶಾಲಿ ಹೆಗಡೆ ವಾದ ಮಂಡಿಸಿದ್ದರು.
ರಾಯಲ್ಟಿ ಬಾಕಿ ಮೊತ್ತ ಪಾವತಿಸುವ ಸಂಬಂಧ ಅದಾನಿ ಕಂಪನಿಯೇ ವಿವಾದ ಸೃಷ್ಟಿಸುತ್ತಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಆರ್ಥಿಕ ಇಲಾಖೆಗೆ ತಿಳಿಸಿತ್ತು. ಅದಾನಿ ಎಸಿಸಿ ಕಂಪನಿ ಕುರಿತಾಗಿ ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿತ್ತು.




