ಬೆಂಗಳೂರು; ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ 3 ವರ್ಷಗಳನ್ನು ಪೂರೈಸಿರಬೇಕು ಎಂಬ ಷರತ್ತನ್ನು ಬುಕ್ ಬ್ರಹ್ಮ ಫೌಂಡೇಷನ್ ಪ್ರಕರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒಂದು ಬಾರಿ ವಿನಾಯಿತಿ ನೀಡಿತ್ತು. ಅಲ್ಲದೇ ಇದೇ ವಿನಾಯಿತಿಯಡಿಯಲ್ಲಿ 2025ರಲ್ಲಿ ಬುಕ್ ಬ್ರಹ್ಮ ಫೌಂಡೇಷನ್ ಆಯೋಜಿಸಿದ್ದ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ ನೀಡಿರುವುದು ಇದೀಗ ಬಹಿರಂಗವಾಗಿದೆ.
ವಿಧಾನಸಭೆ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಚುನಾಯಿತರಾಗಿರುವ ಸದಸ್ಯ ರಘು ಆರ್ ಅವರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
2023-24ರಿಂದ 2025-26ನೇ ಸಾಲಿನವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರುವ ಸಂಘ ಸಂಸ್ಥೆಗಳಿಗೆ ಮಂಜೂರಾಗಿರುವ ಅನುದಾನದ ಪಟ್ಟಿಯಲ್ಲಿ ಬುಕ್ ಬ್ರಹ್ಮ ಫೌಂಡೇಷನ್ ಕೂಡ ಇರುವುದು ಗೊತ್ತಾಗಿದೆ.
ಬುಕ್ ಬ್ರಹ್ಮ ಫೌಂಡೇಷನ್, ಬೆಂಗಳೂರು ನಗರದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ 2025ರ ಆಗಸ್ಟ್ 8ರಿಂದ 10 ರವರೆಗೆ ಸಾಹಿತ್ಯ ಉತ್ಸವ ಆಯೋಜಿಸಿತ್ತು. ಈ ಉತ್ಸವಕ್ಕೆ ಸೂಕ್ತ ಅನುದಾನ ಒದಗಿಸಲು ಫೌಂಡೇಷನ್ನ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಅನುದಾನ ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.
ಪ್ರಸ್ತಾವನೆಯಲ್ಲೇನಿದೆ?
ಬುಕ್ ಬ್ರಹ್ಮ ಸಾಹಿತ್ಯ ಉತ್ಸವವು ಮೂಲತಃ ದಾನಿಗಳ ಪ್ರಾಯೋಜಕರ ನೆರವಿನಿಂದ ನಡೆಯುವ ಒಂದು ಆರ್ಥಪೂರ್ಣ ಬಹುಭಾಷಾ ಸಾಹಿತ್ಯ ಉತ್ಸವವಾಗಿದೆ. ಭಾರತೀಯ ಭಾಷೆಗಳನ್ನು ಒಗ್ಗೂಡಿಸುವಂತಹ ಕಾರ್ಯಕ್ರಮವಾಗಿದೆ. ಇದು ದೇಶದ ಅತಿ ದೊಡ್ಡ ಭಾರತೀಯ ಭಾಷೆಗಳ ಸಾಹಿತ್ಯ ಉತ್ಸವವಾಗಿದೆ. ಈ ಮೂರು ದಿನಗಳ ಅವಧಿಯಲ್ಲಿ 60,000 ಸಾಹಿತ್ಯ ಆಸಕ್ತರನ್ನು ಡಿಜಿಟಲ್ ಮಾಧ್ಯಮದ ಮೂಲಕ 50,00,000 ಜನರನ್ನು ತಲುಪುವ ಗುರಿ ಹೊಂದಿದೆ. ಹೀಗಾಗಿ ಈ ಸಾಹಿತ್ಯ ಉತ್ಸವಕ್ಕೆ ಸರ್ಕಾರದ ಪರವಾಗಿ ಸೂಕ್ತ ಅನುದಾನ ನೀಡಬೇಕು ಎಂದು ಕೋರಿರುವುದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ನೋಂದಣಿಯಾಗಿ 3 ವರ್ಷ ಪೂರೈಸಿಲ್ಲ
ಆದರೆ ಸಂಸ್ಥೆಯು ನೋಂದಣಿಯಾಗಿ 3 ವರ್ಷಗಳನ್ನು ಪೂರೈಸಿರುವುದಿಲ್ಲ. ಸಂಸ್ಥೆಯು ಸಾಹಿತ್ಯಾತ್ಮಕವಾಗಿ ನಿರಂತರ ಅರ್ಥಪೂರ್ಣ ಸಮಗ್ರವಾದ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಕಂಡು ಬರುತ್ತಿದೆ. ಕಾರ್ಯಕ್ರಮಗಳಲ್ಲಿ ನಾಡಿನ ಹೆಸರಾಂತ ಸಾಹಿತಿ, ಕಲಾವಿದರುಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಇದೇ ಮೊದಲ ಬಾರಿಗೆ ಧನಸಹಾಯ ಕೋರಿ ಮನವಿ ಸಲ್ಲಿಸುತ್ತಿದೆ ಎಂದು ಪ್ರಸ್ತಾವನೆಯಲ್ಲಿ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

‘ಇದೇ ಮೊದಲ ಬಾರಿಗೆ ಧನಸಹಾಯ ಕೋರಿ ಮನವಿ ಸಲ್ಲಿಸುತ್ತಿರುವುದರಿಂದ ಎಲ್ಲಾ ವೆಚ್ಚ ಪಾವತಿಗಳನ್ನು ಆರ್ಟಿಜಿಎಸ್ ಮೂಲಕ ಪಾವತಿಸುವಂತೆ, ಆಡಿಟ್ ವರದಿ, ಕಾರ್ಯಕ್ರಮದ ಛಾಯಾಚಿತ್ರ, ಪತ್ರಿಕಾ ವರದಿ ಮತ್ತು ದಾಖಲೆಗಳನ್ನು ಸಲ್ಲಿಸುವ ಷರತ್ತುಗಳೊಂದಿಗೆ ನೋಂದಣಿಯಾಗಿ 3 ವರ್ಷ ಆಗಿರಬೇಕು. ಹಾಗೂ ಈ ಸಂಬಂಧಿತ ಅಂಶಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಧರಿಸಬೇಕು. ಅಲ್ಲದೇ ಲೆಕ್ಕ ಶೀರ್ಷಿಕೆ (2205-00-102-1-64-059 ) ಅಡಿ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಿ ಸರ್ಕಾರವು ಆದೇಶ ಹೊರಡಿಸಬೇಕು,’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಕೋರಿರುವುದು ಪ್ರಸ್ತಾವನೆಯಿಂದ ಗೊತ್ತಾಗಿದೆ.
ಸರ್ಕಾರದಿಂದ ವಿನಾಯಿತಿ
ಈ ಪ್ರಸ್ತಾವನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವಾಲಯವು ಪರಿಶೀಲಿಸಿತ್ತಲ್ಲದೇ 5 ಲಕ್ಷ ರುಪಾಯಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಷರತ್ತಿಗೆ ಒಳಪಟ್ಟು ಬಿಡುಗಡೆ ಮಾಡಲು 2025ರ ಆಗಸ್ಟ್ 18ರಂದು ಆದೇಶ ಹೊರಡಿಸಿತ್ತು. ಅಲ್ಲದೇ ಈ ಆದೇಶವನ್ನು ಈ ಪ್ರಸ್ತಾವನೆಗಷ್ಟೇ ಸೀಮಿತಗೊಳಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ಬಿಡುಗಡೆ ಮಾಡುವ ಸಂಬಂಧ 2022ರ ಜೂನ್ 23ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಈ ಮಾರ್ಗಸೂಚಿ ಪ್ರಕಾರ ಅರ್ಜಿ ಆಹ್ವಾನಿಸಿದ ದಿನಾಂಕಕ್ಕೆ ಸಾಮಾನ್ಯ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಸಂಘ ಸಂಸ್ಥೆಗಳು ನೋಂದಣಿಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಮತ್ತು ಧನ ಸಹಾಯ ಪಡೆಯಲಿಚ್ಛಿಸುವ ಸಂಘ ಸಂಸ್ಥೆಗಳು ಜಿಲ್ಲಾ ಸಹಕಾರ ಸಂಘಗಳ/ಜಿಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸಲ್ಲಿಸುವ ಚಾರ್ಟೆಡ್ ಅಕೌಂಟೆಂಟ್ ಅವರಿಂದ ಪಡೆದ ಹಿಂದಿನ ಒಂದು ವರ್ಷದ ಲೆಕ್ಕ ಪರಿಶೋಧಿತ ಮತ್ತು ದೃಢೀಕೃತ ಲೆಕ್ಕಪತ್ರಗಳನ್ನು ನೀಡಬೇಕು. ಅಲ್ಲದೇ ಆದಾಯ ತೆರಿಗೆ ವಿವರಗಳನ್ನು ಸಂಘ ಸಂಸ್ಥೆಯ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ ಬುಕ್ ಸ್ಟೇಟ್ಮೆಂಟ್ನೊಂದಿಗೆ ಸಲ್ಲಿಸಬೇಕು ಎಂದಿದೆ.
ಆದರೆ ಈ ಎಲ್ಲಾ ಷರತ್ತುಗಳನ್ನು ಬುಕ್ ಬ್ರಹ್ಮ ಫೌಂಡೇಷನ್ ಪ್ರಕರಣದಲ್ಲಿ ಒಂದು ಬಾರಿಗೆ ವಿನಾಯಿತಿ ನೀಡಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅವರು ಬುಕ್ ಬ್ರಹ್ಮ ಪ್ರತಿಷ್ಠಾನದ ಸಂಸ್ಥಾಪಕರಾಗಿದ್ದಾರೆ.
ಜಾತ್ಯತೀತ ಸಂಸ್ಥೆ ಎಂದು ಹೇಳಿಕೊಂಡು ಪರಿಶಿಷ್ಟ ಜಾತಿ (ಎಸ್ಸಿ) ಕೋಟಾದಡಿ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ ಮತ್ತೊಂದು ವಿವಾದಕ್ಕೆ ಗುರಿಯಾಗಿತ್ತು.
ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿಯೇ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ, ಕನ್ನಡ ಸಂಸ್ಕೃತಿ ಇಲಾಖೆಯಿಂದ 2 ಲಕ್ಷ ರು ಅನುದಾನ ಮಂಜೂರು ಮಾಡಿತ್ತು ಎಂದು ಸರ್ಕಾರವು ಸದನಕ್ಕೆ ಉತ್ತರ ಒದಗಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೇ ಕನ್ನಡ ಸಂಸ್ಕೃತಿ ಇಲಾಖೆಯು 2025ರ ಸೆ.30ರಂದು ಮೊದಲು ಹೊರಡಿಸಿದ್ದ ಆದೇಶವನ್ನು ಎರಡೇ ಎರಡು ತಿಂಗಳಲ್ಲಿ ತಿದ್ದುಪಡಿ ಮಾಡಿ ಆದೇಶ ಹೊರಡಿಸಿತ್ತು. 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ ಎಂಬ ಪದವನ್ನು ಬದಲಿಸಿ, ಸಾಮಾನ್ಯ ಧನಸಹಾಯ ಯೋಜನೆ ಅಡಿ ಎಂದು ಸೇರಿಸಿ ಆದೇಶವನ್ನೇ ತಿದ್ದುಪಡಿ ಮಾಡಿತ್ತು.
ಸಿದ್ದಾರ್ಥ ವಿಹಾರ ಟ್ರಸ್ಟ್, ಪರಿಶಿಷ್ಟ ಜಾತಿ (SC) ಕೋಟಾದಡಿ ಸುಳ್ಳು ಮಾಹಿತಿ ನೀಡಿ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಸುಮಾರು ₹130 ಕೋಟಿ ಮೌಲ್ಯದ 2 ಎಕರೆ ಸಿಎ (CA) ನಿವೇಶನವನ್ನು ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಲಾಗಿದೆ ಎಂದು ದೂರಿನ ಕುರಿತು ತನಿಖೆ ನಡೆಸಬೇಕು ಎಂಬ ದೂರರ್ಜಿಯು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಕೂಡ ಲೋಕಾಯುಕ್ತಕ್ಕೆ ನೋಟೀಸ್ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಅನುದಾನ ಮಂಜೂರು ಮಾಡಿ, ನಂತರ ಅದನ್ನು ಸಾಮಾನ್ಯ ಧನಸಹಾಯ ಯೋಜನೆಯಡಿಯಲ್ಲಿ ಸೇರಿಸಿ ಹೊರಡಿಸಿದ್ದ ಆದೇಶವು ಚರ್ಚೆಗೆ ಗ್ರಾಸವಾಗಿತ್ತು.

ಸೆಪ್ಟಂಬರ್ನಲ್ಲಿ ಹೊರಡಿಸಿದ್ದ ಆದೇಶದಲ್ಲೇನಿತ್ತು?
ಕಲ್ಬುರ್ಗಿ ವಿಶ್ವವಿದ್ಯಾಲಯದ ಸಮೀಪ ಇರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಬುದ್ಧ ವಿಹಾರದಲ್ಲಿ ಪ್ರತಿ ವರ್ಷ ಆಚರಣೆ ಮಾಡುತ್ತಿರುವ ರೀತಿಯಲ್ಲಿಯೇ ಈ ವರ್ಷವೂ 2025ರ ಅಕ್ಟೋಬರ್ 2ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕಾಗಿ ವೆಚ್ಚವಾಗಲಿರುವ 2 ಲಕ್ಷ ರು.ಗಳನ್ನು 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಲೆಕ್ಕ ಶೀರ್ಷಿಕೆ 2205-00-102-1-44-422 ಧನಸಹಾಯ ಯೋಜನೆ)ಹಂಚಿಕೆ ಮಾಡಿಕೊಂಡಿರುವ ಅನುದಾನದಿಂದ ಭರಿಸಿ ಸರ್ಕಾರದ ಧನಸಹಾಯ ಮಾರ್ಗಸೂಚಿ ಅನುಸಾರ ಕಾರ್ಯಕ್ರಮದ ನಂತರ ಎಲ್ಲಾ ದಾಖಲೆಗಳನ್ನು ಸಲ್ಲಿಸುವ ಷರತ್ತಿಗೆ ಒಳಪಟ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಇಲಾಖೆಯ ನಿರ್ದೇಶಕರು ಪ್ರಸ್ತಾವ ಸಲ್ಲಿಸಿದ್ದರು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕನ್ನಡ ಸಂಸ್ಕೃತಿ ಇಲಾಖೆಯು ಸಿದ್ದಾರ್ಥ ವಿಹಾರ ಟ್ರಸ್ಟ್ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 2 ಲಕ್ಷ ರು. ಅನುದಾನವನ್ನು ಪರಿಶಿಷ್ಟ ಜಾತಿ ಉಪಯೋಜನೆಯ ಲೆಕ್ಕ ಶೀರ್ಷಿಕೆಯಿಂದ ಭರಿಸಲು ಮಂಜೂರು ಮಾಡಿತ್ತು.




