Saturday | August 1, 2026 |

ಪತ್ನಿ ಹೆಸರಿನಲ್ಲಿ ಕಿಯೋನಿಕ್ಸ್‌ನಿಂದ ಗುತ್ತಿಗೆ, ಅಧಿಕಾರ ದುರುಪಯೋಗ ಆರೋಪ; ಸೂಕ್ತ ವಿವರಣೆ ನೀಡಲು ಐಪಿಎಸ್‌ ಚಂದ್ರಶೇಖರ್‍‌ಗೆ ಮುಖ್ಯ ಕಾರ್ಯದರ್ಶಿ ನಿರ್ದೇಶನ

ಬೆಂಗಳೂರು; ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್‌ ಅವರ ಮಧ್ಯೆ ಜಟಾಪಟಿ ನಡೆಯುತ್ತಿರುವ ಮಧ್ಯೆಯೇ ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಕಿಯೋನಿಕ್ಸ್ ನಿಂದ ಕಾಮಗಾರಿ ವಹಿಸಿಕೊಂಡಿರುವ ಪ್ರಕರಣದ ಬಗ್ಗೆ ಸೂಕ್ತ ವಿವರಣೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.

ಇವರಿಬ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಪ್ರತಿಷ್ಠೆಗೆ ಅಂಟಿಕೊಳ್ಳದೆ, ಪರಸ್ಪರ ಚರ್ಚಿಸುವ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್‌ ಈಚೆಗಷ್ಟೇ ಸಲಹೆ ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕಿಯೋನಿಕ್ಸ್ ನಿಂದ ವಹಿಸಿಕೊಂಡಿರುವ ಕಾಮಗಾರಿ ಕುರಿತಾಗಿ ವಿವರಣೆ ಕೇಳಿರುವುದು ಮುನ್ನೆಲೆಗೆ ಬಂದಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು 2026ರ ಜುಲೈ 2ರಂದು ಎಂ ಚಂದ್ರಶೇಖರ್ ಅವರಿಗೆ ಬರೆದಿರುವ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಮುಖ್ಯ ಕಾರ್ಯದರ್ಶಿಯ ಪತ್ರದಲ್ಲೇನಿದೆ?

ತಮ್ಮ ಪತ್ನಿ ಪ್ರೀತಿ ಸೇಲಿಹ ಅವರು edvangate point techonologies limited ಎಂಬ ಖಾಸಗಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯಿಂದ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಿಂದ ಕಾಮಗಾರಿ ವಹಿಸಿಕೊಂಡಿರುವ ಮಾಹಿತಿಯನ್ನು ಅಖಿಲ ಭಾರತ ಸೇವೆಗಳ ನಿಯಮ 1968ರ ನಿಯಮ 4(2)ಎ) ಮತ್ತು ನಿಯಮ 13(3) ಅನ್ವಯ ಸರ್ಕಾರಕ್ಕೆ ವರದಿ ಮಾಡದೇ ಇರುವುದು ಕಂಡುಬರುತ್ತದೆ. ಹೀಗಾಗಿ ಅಖಿಲ ಭಾರತ ಸೇವೆಗಳು ನಿಯಮ 1968ರ ನಿಯಮ 4(2)(ಎ) ಮತ್ತು ನಿಯಮ 13 (3)ರ ಅನ್ವಯ ಸರ್ಕಾರಕ್ಕೆ ವರದಿ ಮಾಡದೇ ಇರುವ ಬಗ್ಗೆ ಸೂಕ್ತ ವಿವರಣೆಯನ್ನು ಈ ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಈ ಕಂಪನಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ಸದಸ್ಯ ಎಸ್‌ ಎಲ್ ಭೋಜೇಗೌಡ, ಟಿ ಎ ಶರವಣ, ಟಿ ಎನ್ ಜವರಾಯಿಗೌಡ, ಗೋವಿಂದರಾಜು, ಸಿ ಎನ್ ಮಂಜೇಗೌಡ, ಕೆ ವಿವೇಕಾನಂದ ಅವರು 2026ರ ಜೂನ್‌ 6ರಂದು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ಪ್ರೀತಿ ಸೇಲಿಹ ಅವರು edvangate point techonologies limited ಎಂಬ ಖಾಸಗಿ ಸಂಸ್ಥೆಯ ನಿರ್ದೇಶಕರಾಗಿರುವ ಹಾಗೂ ಈ ಸಂಸ್ಥೆಯಿಂದ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮದಿಂದ ಕಾಮಗಾರಿ ವಹಿಸಿಕೊಂಡಿರುವ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿಲ್ಲ ಎಂದು ದೂರಿದ್ದರು.

ಅಲ್ಲದೇ ಅಖಿಲ ಭಾರತ ಸೇವೆಗಳು ನಿಯಮ 1968ರ (4(2)(ಎ) ತ್ತು 13 (3) ರೀತಿ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಇವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಈ ಕೋರಿಕೆಯನ್ನಾಧರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು 2026ರ ಜುಲೈ 2ರಂದು ನಿರ್ದೇಶನ ನೀಡಿ ಪತ್ರ ಬರೆದಿರುವುದು ಗೊತ್ತಾಗಿದೆ.

 

 

ವಿಧಾನ ಪರಿಷತ್‌ ಸದಸ್ಯರ ಪತ್ರದಲ್ಲೇನಿತ್ತು?

ವಿಧಾನ ಪರಿಷತ್‌ನ ಸದಸ್ಯ ಎಸ್‌ ಎಲ್ ಭೋಜೇಗೌಡ ಮತ್ತಿತರರ ಜೆಡಿಎಸ್‌ ಸದಸ್ಯರು 4 ಪುಟಗಳ ಪತ್ರವನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬರೆದಿದ್ದರು. ಅಖಿಲ ಭಾರತ ಸೇವೆಗಳ (ನಡವಳಿಕೆ) ನಿಯಮಗಳು 1968ರ ಸಾಮಾನ್ಯ 3 ರಲ್ಲಿ ತನ್ನ ಅಧಿಕೃತ ಕರ್ತವ್ಯಗಳ ನಿರ್ವಹಣೆಯಲ್ಲಿ ಪ್ರಭಾವ ಬೀರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಯಾವುದೇ ಆರ್ಥಿಕ ಅಥವಾ ಇತರೆ ಬಾಧ್ಯತೆಗಳ ಅಡಿಯಲ್ಲಿ ತನ್ನನ್ನು ಒಳಪಡಿಸಿಕೊಳ್ಳಬಾರದು ಎಂದಿದೆ. ನಾಗರಿಕ ಸೇವಕನಾಗಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳಬಾರದು ಮತ್ತು ತನಗೆ ತನ್ನ ಕುಟುಂಬಕ್ಕೆ ಅಥವಾ ತನ್ನ ಸ್ನೇಹಿತರಿಗೆ ಆರ್ಥಿಕ, ಭೌತಿಕ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಎಂದು ಪತ್ರದಲ್ಲಿ ವಿವರಿಸಿದ್ದರು.

ನಿಯಮದ ಸಾಮಾನ್ಯ 4 ರಲ್ಲಿ ಯಾವುದೇ ಸೇವೆಯ ಸದಸ್ಯರು ತಮ್ಮ ಕುಟುಂಬದ ಯಾಔಉದೇ ಸದಸ್ಯರಿಗೆ ಯಾವುದೇ ಖಾಸಗಿ ಉದ್ಯಮದ್ಲಿ ಉದ್ಯೋಗ ಪಡೆಯಲು ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಸ್ಥಾನ ಅಥವಾ ಪ್ರಭಾವವನ್ನು ಬಳಸಬಾರದು. ಸರ್ಕಾರದ ಪೂರ್ವಾನುಮೋದನೆ ಇಲ್ಲದೇ ಸೇವೆಯ ಯಾವುದೇ ಸದಸ್ಯರು ತಮ್ಮ ಕುಟುಂಬ ಸದ್ಯರು ಸರ್ಕಾರದೊಂದಿಗೆ ಅಧಿಕೃತ ವ್ಯವಹಾರ ಹೊಂದಿರುವ ಯಾವುದೇ (ಖಾಸಗಿ ಉದ್ಯಮ) ಉದ್ಯೋಗ ಸ್ವೀಕರಿಸಲು ಅನುಮತಿಸಬಾರದು.

 

 

ಸೇವೆಯ ಸದಸ್ಯರು, ತಮ್ಮ ಕುಟುಂಬದ ಸದಸ್ಯರು ಯಾವುದೇ ಖಾಸಗಿ ಉದ್ಯಮದಲ್ಲಿ ಉದ್ಯೋಗ ಸ್ವೀಕರಿಸಿದ್ದಾರೆಂದು ತಿಳಿದ ತಕ್ಷಣ ಅಂತಹ ಸ್ವೀಕಾರದ ಸಂಗತಿಯನ್ನು ಮತ್ತು ಖಾಸಗಿ ಉದ್ಯಮದೊಂದಿಗೆ ಅವರು ಯಾವುದೇ ಅಧಿಕೃತ ವ್ಯವಹಾರಗಳನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸರ್ಕಾರಕ್ಕೆ ವರದಿ ಮಾಡಬೇಕು. ಸೇವೆಯ ಯಾವುದೇ ಸದಸ್ಯರು ಆ ಖಾಸಗಿ ಉದ್ಯಮದಲ್ಲಿ ಅಥವಾ ಆ ವ್ಯಕ್ತಿಯ ಅಡಿಯಲ್ಲಿ ಉದ್ಯೋಗದಲ್ಲಿದ್ದರೇ ಅಥವಾ ಅವರು ಅಥವಾ ಅವರ ಕುಟುಂಬ ಯಾವುದೇ ಸದಸ್ಯರು ಅಂತಹ ಖಾಸಗಿ ಉದ್ಯಮ ಅಥವಾ ಇತರೆ ವ್ಯಕ್ತಿಯಲ್ಲಿ ಯಾವುದೇ ರೀತಿಯಲ್ಲಿ ಆಸಕ್ತಿ ಹೊಂದಿದ್ದರೇ ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ನಿಭಾಯಿಸಬಾರದು. ಅಥವಾ ಅವರ ಪರವಾಗಿ ಯಾವುದೇ ಒಪ್ಪಂದವನ್ನು ನೀಡಬಾರದು ಎಂದು ಸ್ಪಷ್ಟವಾಗಿ ಅಖಿಲ ಭಾರತ ಸೇವೆಗಳ (ನಡವಳಿಕೆ) ನಿಯಮಗಳಲ್ಲಿ ತಿಳಿಸಿದೆ.

ಅದೇ ರೀತಿ ಅಖಿಲ ಭಾರತ ಸೇವೆಗಳು (ವರ್ತನೆ) ನಿಯಮಗಳು 1968ರಲ್ಲಿ ಉಪ ನಿಯಮ (2) ಅಥವಾ 13 ಅಥವಾ ಅಖಿಲ ಭಾರತ ಸೇವೆಗಳು (ನಡವಳಿಕೆ) ನಿಯಮಗಳು ಅಡಿಯಲ್ಲಿ ಸೇವೆಯ ಪ್ರತಿಯೊಬ್ಬ ಸದಸ್ಯರು ಅವರ ಕುಟುಂಬದ ಯಾವುದೇ ಸದಸ್ಯರು ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ವಿಮಾ ಸಂಸ್ಥೆ ಅಥವಾ ಆಯೋಗ ಏಜೆನ್ಸಿ ಹೊಂದಿದ್ದರೇ ಅಥವಾ ನಿರ್ವಹಿಸುತ್ತಿದ್ದರೇ ಆ ಸಂಗತಿಯನ್ನು ಸರ್ಕಾರಕ್ಕೆ ವರದಿ ಮಾಡಬೇಕು.

 

 

ಆದರೂ ಹಿಂದೆ ಹಲವಾರು ಸಂದರ್ಭಗಳಲ್ಲಿ ಅಖಿಲ ಭಾರತ ಸೇವೆಗಳ ಸದಸ್ಯರು ಉಪ ನಿಯಮದ ಅಡಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಾಗ ತಮ್ಮ ಕುಟುಂಬ ಸದಸ್ಯರು ಪ್ರಾರಂಭಿಸಿದ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಒದಗಿಸಿಲ್ಲ. ಹೀಗಾಗಿ ಸರ್ಕಾರದ ಬಳಿಯೂ ಈ ವಿಷಯದಲ್ಲಿ ಯಾವುದೇ ಮಾಹಿತಿಯೂ ಇರಲಿಲ್ಲ ಎಂದು ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.

 

 

ಭಾರತ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಆದೇಶ, ನಿರ್ದೇಶನ ಮತ್ತು ಅಖಿಲ ಭಾರತ ಸೇವೆಗಳ (ನಡವಳಿಕೆ/ವರ್ತನೆ) ನಿಯಮವಿದ್ದರೂ ಸಹ ನಿಯಮಗಳು ಮತ್ತು ಸೂಚನೆಗಳನ್ನು ಪಾಲನೆ ಮಾಡಿಲ್ಲ. ಅಧಿಕಾರ ದುರ್ಬಳಕೆ, ದುರುಪಯೋಗಪಡಿಸಿಕೊಂಡು ಪ್ರೀತಿ ಸೇಲಿಹ ಮುವ್ವ ಅವರ ಹೆಸರಿನಲ್ಲಿ Edvangate Point Techonologies Limited ಸಂಸ್ಥೆ ರಚಿಸಿದ್ದಾರೆ. ಈ ಸಂಸ್ಥೆಯೊಂದಿಗೆ ಪ್ರೀ ಕ್ವಾಲಿಫೈಡ್ ಬ್ಯುಸಿನೆಸ್‌ ಅಸೋಸಿಯೇಟ್ ಅಗಿ ಕಿಯೋನಿಕ್ಸ್‌ ಸಂಸ್ಥೆಯೊಂದಿಗೆ ಕರಾರು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವರು ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್‌ ಗೆ ಲಿಖಿತ ಉತ್ತರದ ಮೂಲಕ ತಿಳಿಸಿತ್ತು.

ಈ ಅಧಿಕಾರಿಯು ತಮ್ಮ ಧರ್ಮಪತ್ನಿ ಹೆಸರಿನಲ್ಲಿ ಗುತ್ತಿಗೆ ಪಡೆದಿರುವ ಬಗ್ಗೆ ರಾಜ್ಯದ ಹಾಲಿ ಗೃಹ ಸಚಿವರು ಸದನಕ್ಕೆ ನೀಡಿರುವ ಲಿಖಿತ ಉತ್ತರದ ಪ್ರತಿಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗೂ ನೂತನ ಮುಖ್ಯಮಂತ್ರಿಗಳು ರಾಜ್ಯದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಪಾರದರ್ಶಕ, ಭ್ರಷ್ಟಾಚಾರ ಮುಕ್ತ, ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

 

 

ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಧರ್ಮಪತ್ನಿ ಹೆಸರಿನಲ್ಲಿ ಗುತ್ತಿಗೆ ಪಡೆದು ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನು ನೀಡದೇ ಮತ್ತು ಕೇಂದ್ರ ಸರ್ಕಾರದ ಸ್ಥಿರ ಮತ್ತು ಆಸ್ತಿ ರಿಟರ್ನ್‌ (ಐಪಿಆರ್) ವರದಿ ನೀಡಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಈ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

ಈ ಸಂಬಂಧ ದಿ ಫೈಲ್ ಕೂಡ 2018ರಿಂದ 2026ರ ಜನವರಿ 1ರವರೆಗೆ ಕೇಂದ್ರ ಸರ್ಕಾರದ ಅಧಿಕೃತ ಡಿಒಪಿಟಿ ಜಾಲತಾಣವನ್ನು ಪರಿಶೀಲಿಸಿತು.

 

 

 

 

 

 

 

 

ಈ ಜಾಲತಾಣದಲ್ಲಿ ಅಪ್‌ ಲೋಡ್‌ ಮಾಡಿರುವ ದಾಖಲೆ ಪ್ರಕಾರ ಎಂ ಚಂದ್ರಶೇಖರ್ ಅವರು 2018ರಿಂದ 2026ರವರೆಗೆ NIL ಎಂದು ತೋರಿಸಿರುವುದು ಕಂಡು ಬಂದಿದೆ.

ಜಟಾಪಟಿಗೆ ಕಾರಣವೇನು?

ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್‌ 2024ರಲ್ಲಿ ದೂರು ದಾಖಲಿಸಿದ್ದರು.

ಈ ದೂರು ಆಧರಿಸಿ ಬೆಂಗಳೂರಿನ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿಗಳು, ಅರ್ಜಿದಾರರು ಮತ್ತು ದೂರುದಾರರ ಹಿತದೃಷ್ಟಿಯಿಂದ ಒಂದು ಸಲಹೆ ನೀಡುತ್ತೇನೆ. ಕುಮಾರಸ್ವಾಮಿ ಮತ್ತು ಚಂದ್ರಶೇಖರ್‌ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರು. ಸಾರ್ವಜನಿಕ ಜೀವನದಲ್ಲಿ ಇಂಥ ಪ್ರಕರಣಗಳು ಎದುರಾಗುವುದು ಸಹಜ. ಮುಂದೆ ಎಲ್ಲಿಯಾದರೂ ಈ ಇಬ್ಬರು ಮುಖಾಮುಖಿ ಭೇಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ, ಇಬ್ಬರೂ ಸ್ವ-ಪ್ರತಿಷ್ಠೆ ಬಿಟ್ಟು, ಪರಸ್ಪರ ಚರ್ಚಿಸಿ, ರಾಜಿ ಸಂಧಾನ ಮಾಡಿಕೊಂಡು ಪ್ರಕರಣವನ್ನು ಹಿಂಪಡೆಯುವುದು ಸೂಕ್ತ ಎಂದು ತಿಳಿಸಿದ್ದರು.

ಚರ್ಚೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ದೂರುದಾರರು ಮತ್ತು ಅರ್ಜಿದಾರರು ಮುಕ್ತ ಮನಸ್ಸಿನಿಂದ ಮಾತನಾಡಲಿ. ಈ ಪ್ರಕರಣ ಮುಂದುವರಿಸುವುದರಿಂದ ಇಬ್ಬರಿಗೂ ಯಾವುದೇ ಲಾಭವಿಲ್ಲ. ಕೇವಲ ಮಾಧ್ಯಮಗಳಿಗೆ ಸುದ್ದಿಯಾಗುತ್ತದೆ ಅಷ್ಟೇ ಎಂದು ಹೇಳಿದ್ದನ್ನು ಸ್ಮರಿಸಬಹುದು.

Hot this week

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ...

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...
Please Scan to make Your Contribution

Topics

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

Related Articles

Popular Categories

error: Content is protected !!