Saturday | September 12, 2026 |

ಪಿಲಿಕುಳ ನಿಸರ್ಗಧಾಮದ 356.20 ಎಕರೆ ಜಮೀನು, ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಮಂಜೂರು ಪ್ರಸ್ತಾವ; ಮಂಗಳೂರಿನಲ್ಲಿ ಘೋಷಣೆಯೊಂದೇ ಬಾಕಿ, ಆರ್ಥಿಕ ಇಲಾಖೆ ನಿಲುವೇನು?

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮ ಮತ್ತು ತಿರುವೈಲು ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ ಪಿಲಿಕುಳ ನಿಸರ್ಗ ಧಾಮಕ್ಕೆ  ಗುತ್ತಿಗೆ ಆಧಾರದ ಮೇರೆಗೆ ನೀಡಿರುವ 356.20 ಎಕರೆ ವಿಸ್ತೀರ್ಣದ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಸರಿಗೆ ಮಂಜೂರು ಮಾಡುವ ಪ್ರಕ್ರಿಯೆಗಳಿಗೆ ಬಿರುಸಿನ ಚಾಲನೆ ದೊರೆತಿವೆ.

ಇದೇ 2026ರ ಸೆಪ್ಟಂಬರ್‍‌ 18ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ  ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ಚರ್ಚಿಸಿ ಅಂದೇ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ಸಂಬಂಧ ಕಂದಾಯ ಇಲಾಖೆಯು ಸಚಿವ ಸಂಪುಟ ಶಾಖೆಗೆ ಈಗಾಗಲೇ ಕಡತ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಟಿಪ್ಪಣಿಯ ರಹಸ್ಯ ಹಾಳೆಗಳು ದಿ ಫೈಲ್‌ ಗೆ ಲಭ್ಯವಾಗಿವೆ.

356 ಎಕರೆಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಪಿಲಿಕುಳ ನಿಸರ್ಗಧಾಮವನ್ನು ವಾಣಿಜ್ಯ, ಪರಿಸರ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿಪಡಿಸುವ ಸಲುವಾಗಿ ಕೂಡಲೇ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿಯು ಈಚೆಗಷ್ಟೇ  ನಿರ್ದೇಶನ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಈ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸುವ ಸಂಬಂಧ ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತವು ಮುನ್ನೆಲೆಗೆ ಬಂದಿದೆ.

ಆದರೆ ಈ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಬೇಕು ಎಂಬ ಬಗ್ಗೆ ಕಂದಾಯ ಇಲಾಖೆಯು ಕಡತದಲ್ಲಿ ಪ್ರಸ್ತಾವಿಸಿಲ್ಲ. ಈ ಜಮೀನನ್ನು ಯಾವ ಉದ್ದೇಶಕ್ಕಾಗಿ ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಬೇಕು ಅಥವಾ ಮಂಜೂರು ಮಾಡಬೇಕು ಎಂದು ಆರ್ಥಿಕ ಇಲಾಖೆಯು  ಪ್ರಶ್ನಿಸಿರುವುದು ಗೊತ್ತಾಗಿದೆ.

ಈ ಜಮೀನನ್ನು  ಹಸ್ತಾಂತರಿಸುವ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮತ್ತು ಡಾ ಜಿ ಪರಮೇಶ್ವರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿಯೇ ನಿಸರ್ಗ ಧಾಮ ಪುನರುಜ್ಜೀವನಕ್ಕೆ   ಬಜೆಟ್‌ನಲ್ಲಿ ಸೂಕ್ತ ಅನುದಾನಕ್ಕೆ ಒತ್ತಾಯಿಸಲಿದೆ ಮತ್ತು  ಮುಂದಿನ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯಲಿದೆ. ಅದಕ್ಕೂ ಮೊದಲೇ ಸಿಎಂಗೆ ವರದಿ ಸಲ್ಲಿಕೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೀಗ 356 ಎಕರೆ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

 

 

ಹಸ್ತಾಂತರವಾಗಲಿದೆ ಎನ್ನಲಾಗಿರುವ ಜಮೀನಿನಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆಯು ಐಟಿಬಿಟಿ ಪಾರ್ಕ್‌ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.

ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮ ಮತ್ತು ತಿರುವೈಲು ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ವಿವಿಧ ಆದೇಶಗಳ ಮೂಲಕ 30 ವ‍ರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಸರಿಗೆ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಕೆಯಾಗಿದೆ. 356 ಎಕರೆ 2 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ 3 (i) ಪ್ರಕಾರ ಹಸ್ತಾಂತರಿಸುವ ಸಂಬಂಧ ಕಡತ ಮಂಡಿಸಲು ಉಪ ಮುಖ್ಯಮಂತ್ರಿಯೂ ಆಗಿರುವ ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರು ಸೂಚನೆ ನೀಡಿರುವುದು ಗೊತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮದ ಸರ್ವೆ ನಂಬರ್‍‌ 80ರಲ್ಲಿ 15 ಎಕರೆ ಜಮೀನನ್ನು ಎಕರೆಯೊಂದಕ್ಕೆ ವಾರ್ಷಿಕ 100 ರು ನಂತೆ 30 ವರ್ಷಗಳ ಅವಧಿಗೆ ಪಿಲಿಕುಳ ನಿಸರ್ಗ ಧಾಮಕ್ಕೆ ನೀಡಲಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಯೋಜನೆಗಳಿಗಾಗಿ ಗುತ್ತಿಗೆ ನೀಡಲು ಸರ್ಕಾರವು ಪೂರ್ವಾನುಮೋದನೆ ನೀಡಿತ್ತು. ಈ ಗುತ್ತಿಗೆ ಅವಧಿಯು 2030ಕ್ಕೆ ಮುಕ್ತಾಯಗೊಳ್ಳಲಿದೆ. ಅದೇ ರೀತಿ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ 341.46 ಎಕರೆ ವಿಸ್ತೀರ್ಣದ ಜಮೀನನ್ನು ಎಕರೆಯೊಂದಕ್ಕೆ 100 ರು ಗಳ ವಾರ್ಷಿಕ ಶುಲ್ಕದಂತೆ 30 ವರ್ಷಗಳ ಅವಧಿಗೆ ಪಿಲಿಕುಳ ನಿಸರ್ಗಧಾಮಕ್ಕೆ ಗುತ್ತಿಗೆ ನೀಡಿದೆ. ಈ ಗುತ್ತಿಗೆ ಅವಧಿಯು 2036ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಡತದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಪಿಲಿಕುಳ ನಿಸರ್ಗಧಾಮಕ್ಕೆ ಗೇಣಿಗೆ ನೀಡಿರುವ ಮೂಡುಶೆಡ್ಡೆ ಗ್ರಾಮದ ಸರ್ವೇ ನಂಬರ್‍‌ 93ರಲ್ಲಿ 118.83 ಎಕರೆ ಜಮೀನಿನ ಪೈಕಿ 0.25 ಎಕರೆ ವಿಸ್ತೀರ್ಣ ಕಡತಗೊಳಿಸಿ ಈ ಸರ್ವೆ ನಂಬರ್‍‌ನಲ್ಲಿ 118.57 ಎಕರೆ ಜಮೀನನ್ನು ಸೀಮಿತಗೊಳಿಸಿ ಆದೇಶಿಸಿದೆ. ಇದರ ಪ್ರಕಾರ ಪಿಲಿಕುಳ ನಿಸರ್ಗಧಾಮಕ್ಕೆ ಒಟ್ಟು 356 ಎಕರೆ 20 ಎಕರೆ ವಿಸ್ತೀರ್ಣದ ಜಮೀನನ್ನು ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಯೋಜನೆಗಳಿಗಾಗಿ ಗೇಣಿ ಆಧಾರದಲ್ಲಿ ನೀಡಲಾಗಿದೆ ಎಂದು ವಿವರಿಸಿದೆ.

ಗುತ್ತಿಗೆ ನೀಡಲಾದ ಮೂಡುಶೆಡ್ಡೆ ಗ್ರಾಮದ ಸರ್ವೆ ನಂಬರ್‍‌ 83/2ರಲ್ಲಿ 2.79 ಎಕರೆ ಜಮೀನು ಪ್ರಸ್ತುತ ಸರ್ವೆ ನಂಬರ್‍‌ 83/2ರಲ್ಲಿ 1.40 ಎಕರೆ ಹಾಗೂ 83/3ರಲ್ಲಿ 1.43 ಎಕರೆ, 84/4ರಲ್ಲಿ 1.65 ಎಕರೆ ಎಂದು ದುರಸ್ತಿಯಾಗಿದೆ. ಸರ್ವೆ ನಂಬರ್‍‌ 83/1ರ 1.39 ಎಕರೆ ಜಮೀನು ಪಿಲಿಕುಳ ಆವರಣದ ಗೋಡೆ ಹೊರಗಿದೆ. ಈ ಜಮೀನು ನಿಸರ್ಗ ಧಾಮದ ಸ್ವಾಧೀನದಲ್ಲಿಲ್ಲ. ಬದಲಿಗೆ ರಸ್ತೆ ಇದೆ. 13.93 ಎಕರೆ ಜಮೀನು ಸಾರ್ವಜನಿಕ ರಸ್ತೆ (11.01 ಎಕರೆ) ಮತ್ತು ಮನೆ ನಿವೇಶನ (94 ಸಿಸಿ, ಆಶ್ರಯ ಯೋಜನೆಗೆ 2.90 ಎಕರೆ) ಸರ್ವೆ ನಂಬರ್‍‌ 76, 97/1, 102/1 ಮತ್ತು 100 ರಲ್ಲಿನ ಜಮೀನು ಸಾರ್ವಜನಿಕ ರಸ್ತೆ ಉದ್ದೇಶಕ್ಕೆ ಊರ್ಜಿತವಾಗಿರುವುದು ಗೊತ್ತಾಗಿದೆ.

 

 

ಸರ್ಕಾರದಿಂದ ಗುತ್ತಿಗೆ ನೀಡಲಾದ ಮೂಡುಶೆಡ್ಡೆ ಮತ್ತು ತಿರುವೈಲು ಗ್ರಾಮದ 9.13 ಎಕರೆ ನವ ಮಂಗಳೂರು ಬಂದು ಪ್ರಾಧಿಕಾರದ ಹೆಸರಿನಲ್ಲಿ ಪಹಣಿ ದಾಖಲಾಗಿದೆ. ಸಾರ್ವಜನಿಕ ರಸ್ತೆ ಉದ್ದೇಶಕ್ಕೆ ಬಳಕೆಯಾಗುತ್ತಿರುವ 0.32 ಎಕರೆ ಹೊರತುಪಡಿಸಿ ಉಳಿಕೆ ಜಮೀನಿನ ಸ್ವಾಧೀನತೆ ಪಿಲಿಕುಳ ನಿಸರ್ಗಧಾಮಕ್ಕೆ ಒಳಪಟ್ಟಿರುವುದು ತಿಳಿದು ಬಂದಿದೆ.

ಹಾಗೆಯೇ ಗುತ್ತಿಗೆ ನೀಡದ ಮೂಡುಶೆಡ್ಡೆ ಗ್ರಾಮದ ಸರ್ವೆ ನಂಬರ್‍‌ 98/2ರಲ್ಲಿ 2.12 ಎಕರೆ ಮತ್ತು ತಿರುವೈಲು ಗ್ರಾಮದ ಸರ್ವೆ ನಂಬರ್ 96/1ರಲ್ಲಿ 0.20 ಎಕರೆ ಒಟ್ಟು 2.32 ಎಕರೆ ಜಮೀನು ನವ ಮಂಗಳೂರು ಬಂದರು ಪ್ರಾಧಿಕಾರದ ಹೆಸರಿನಲ್ಲಿ ಪಹಣಿ ದಾಖಲಾಗಿದೆ.

‘ಪ್ರಸ್ತುತ ಜಮೀನಿನ ಪ್ರತೀ ಸರ್ವೇ ನಂಬರ್‍‌ಗಳಲ್ಲಿನ ಸರ್ವೆ ದಾಖಲೆಗಳನ್ನು ಪರಿಶೀಲಿಸಿ ಈ ಜಂಇಮುಗಳು ಡೀಮ್ಡ್‌ ಫಾರೆಸ್ಟ್‌ ಆಗಿಲ್ಲವೆಂಬ ಬಗ್ಗೆ ಮತ್ತು ಹೊಳೆ ಪೊರಂಬೋಕು ಇತರೆ ಜಲಕಾಯ, ಜಲಮೂಲ ವರ್ಗೀಕರಣ ಜಮೀನಾಗಿರುವುದಿಲ್ಲವೆಂಬ ಕುರಿತು  ಸರ್ವೋಚ್ಛ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ನೀಡಿರುವ ಆದೇಶಗಳ ಹಿನ್ನೆಲೆಯಲ್ಲಿ ಮಂಜೂರಾತಿಗೆ ಅರ್ಹವಾಗಿದೆಯೇ ಎಂಬ ಬಗ್ಗೆ ಪರಿಶೀಲನಾತ್ಮಕ ವರದಿಯನ್ನೂ ನೀಡಿದೆ.

ಪ್ರಸ್ತಾವಿತ ಜಮೀನುಗಳು ಸರ್ಕಾರಿ ಅನಾಧೀನ ಜಮೀನಾಗಿವೆ. ಇವು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ವಾಧೀನತೆಯಲ್ಲಿದೆ. ನಮೂನೆ 50, 53, 57, 94 ಸಿ ಮತ್ತು 94 ಸಿಸಿ ಅಡಿ ಅರ್ಜಿ ತನಿಖೆಗೆ ಬಾಕಿ ಇಲ್ಲ. ಹೀಗಾಗಿ ಈ ಜಮೀನುಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ 3 (i) ಪ್ರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಸರಿಗೆ ಮಂಜೂರು ಮಾಡಬಹುದು ಎಂದು ಅಭಿಪ್ರಾಯಿಸಿದೆ.

 

 

 

 

 

 

 

 

ಕಂದಾಯ ಇಲಾಖೆಗೊಳಪಟ್ಟಿರುವ ಪಿಲಿಕುಳ ಭೂಮಿಯನ್ನು ಲೀಸ್‌ನಡಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಬಳಕೆ ಮಾಡುತ್ತಿದೆ.  ಮೃಗಾಲಯವನ್ನು ಅರಣ್ಯ ಇಲಾಖೆಯಡಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಈ ಹಿಂದೆಯೇ ಸಮಿತಿ ಸಲಹೆ ನೀಡಲಾಗಿತ್ತು. ಆ ಪ್ರಕ್ರಿಯೆ ನಡೆಯುತ್ತಿದ್ದು, ಕಾಯಂ ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ನೇಮಕವಾಗಿದೆ. ಮೃಗಾಲಯ ಪ್ರಾಧಿಕಾರ ನಿರ್ವಹಣೆಗೆ ಒಪ್ಪಿಕೊಂಡಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.

Hot this week

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...
Please Scan to make Your Contribution

Topics

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...

Related Articles

Popular Categories

error: Content is protected !!