Thursday | May 7, 2026 |

7.20 ಕೋಟಿ ಮೊತ್ತದ ಗುತ್ತಿಗೆ; ಪಾಲಿಸಿ ಫ್ರಂಟ್‌ ಪ್ರಕರಣದಲ್ಲಿ ತಪ್ಪು ಮಾಹಿತಿ, ಹಕ್ಕುಬಾಧ್ಯತೆ ಸಮಿತಿಯನ್ನೂ ತಪ್ಪುದಾರಿಗೆ ಎಳೆಯಿತೇ ಸರ್ಕಾರ?

ಬೆಂಗಳೂರು;  ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು   7.20 ಕೋಟಿ ರು ಮೊತ್ತದಲ್ಲಿ ಕಳೆದೆರಡು ವರ್ಷಗಳಿಂದ  ಪ್ರಚಾರ ಮಾಡುತ್ತಿರುವ ದ ಪಾಲಿಸಿ ಫ್ರಂಟ್ ಹೆಸರಿನ ಕಂಪನಿ ಪ್ರಕರಣದಲ್ಲಿ   ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪದೇ ಪದೇ ತಪ್ಪು ಉತ್ತರ ಮತ್ತು,  ತಪ್ಪು ಮಾಹಿತಿ ನೀಡುವ ಮೂಲಕ ಸದನವನ್ನು  ತಪ್ಪುದಾರಿಗೆ ಎಳೆಯುತ್ತಿದೆ ಎಂದು  ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಹಕ್ಕು ಚ್ಯುತಿ ಮಂಡಿಸಿರುವುದು ಇದೀಗ ಬಹಿರಂಗವಾಗಿದೆ.

ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಮಂಡಿಸಿದ್ದ  ಹಕ್ಕುಚ್ಯುತಿ ಪ್ರಸ್ತಾವದ ಕುರಿತು ಸಮಿತಿಯ ಅಧ್ಯಕ್ಷ ಮಂಜುನಾಥ್ ಭಂಡಾರಿ ಅವರ ನೇತೃತ್ವದ ಹಕ್ಕುಬಾಧ್ಯತಾ  ಸಮಿತಿಯು ಚರ್ಚಿಸಿತ್ತು.  2026ರ ಏಪ್ರಿಲ್‌ 16ರಂದು ನಡೆದ ಸಭೆಗೆ ಮಂಜುನಾಥ್ ಭಂಡಾರಿ ಅವರು ಗೈರು ಹಾಜರಾಗಿದ್ದರು. ಹೀಗಾಗಿ ಸಮಿತಿಯ ಮತ್ತೊಬ್ಬ ಸದಸ್ಯ ಎಸ್‌ ವಿ ಸಂಕನೂರು ಅಧ್ಯಕ್ಷತೆಯಲ್ಲಿ ಸಮಿತಿಯು ಸಭೆ  ನಡೆಸಿದೆ ಎಂದು ತಿಳಿದು ಬಂದಿದೆ.

 

 

 

 

ಈ ಸಭೆ ವೇಳೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದ ಮಾಹಿತಿ ಮತ್ತು ವರದಿಯನ್ನು ಸಮಿತಿಯು ಒಪ್ಪಲಿಲ್ಲ ಎಂದು ಗೊತ್ತಾಗಿದೆ.

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ.

ಗುತ್ತಿಗೆಯ ಅವಧಿ ಪೂರ್ಣಗೊಂಡಿದ್ದರೂ ಸಹ ಯಾವುದೇ ಟೆಂಡರ್‍‌ ಆಹ್ವಾನಿಸದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ಸೂಚನೆ ಮೇರೆಗೆ ಈ ಗುತ್ತಿಗೆಯನ್ನು  ‘ದ ಪಾಲಿಸಿ ಫ್ರಂಟ್‌’ ಹೆಸರಿನಲ್ಲಿ ಮುಂದುವರೆಸಿರುವುದು ಈಗಾಗಲೇ ವಿಧಾನಮಂಡಲದ ಉಭಯ ಸದನಗಳಲ್ಲಿಯೂ ಮೂರ್ನಾಲ್ಕು ಬಾರಿ ಚರ್ಚೆಯಾಗಿದೆ. ಈ ಬೆಳವಣಿಗೆ ನಡುವೆಯೂ ದ ಪಾಲಿಸಿ ಫ್ರಂಟ್ ಸಂಸ್ಥೆಗೆ ಎರಡು ಬಾರಿ ಟೆಂಡರ್‍‌ ಇಲ್ಲದೆಯೇ ಗುತ್ತಿಗೆ ನೀಡಲಾಗಿದೆ.

ಈ ಮಧ್ಯೆ ದ ಪಾಲಿಸಿ ಫ್ರಂಟ್‌ ಗೆ ಗುತ್ತಿಗೆ ನೀಡಿರುವ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು 152ನೇ ಅಧಿವೇಶನದಲ್ಲಿ  ಚುಕ್ಕೆ ರಹಿತ ಕೇಳಿದ್ದ ಪ್ರಶ್ನೆಗೂ (ಪ್ರಶ್ನೆ ಸಂಖ್ಯೆ; 830)  ಇಲಾಖೆಯು ಸರಿಯಾದ ಉತ್ತರ ನೀಡಿರಲಿಲ್ಲ.

 

 

ಹೀಗಾಗಿ ರವಿಕುಮಾರ್ ಅವರು ಹಕ್ಕು ಬಾಧ್ಯತಾ ಸಮಿತಿ ಮುಂದೆ ಹಕ್ಯು ಚ್ಯುತಿ ಮಂಡಿಸಿದ್ದರು.

ಹಕ್ಕು ಚ್ಯುತಿ ಸೂಚನೆಯಲ್ಲೇನಿತ್ತು?

ದ ಪಾಲಿಸಿ ಫ್ರಂಟ್‌ ಕಂಪನಿಯು 2023ರ ಮೇ 21ರಂದು ಪ್ರಾರಂಭಗೊಂಡಿದೆ. 2023ರ ಜುಲೈ 18ರಂದು ಜಿಎಸ್‌ಟಿಗೆ ನೋಂದಣಿಯಾಗಿದೆ. 2023ರ ಡಿಸೆಂಬರ್‍‌ 21ರಂದು ಜಿಎಸ್‌ಟಿ ನೋಂದಣಿಯಾಗುವ ಮೊದಲೇ ಅಂದರೇ 2023ರ ಸೆ.11ರಂದು ಸರ್ಕಾರದಿಂದ ಟೆಂಡರ್ ಪಡೆದಿರುವುದು ಅಚ್ಚರಿ. ಯಾವುದೇ ಅನುಭವ ಇಲ್ಲ, ಇದರ ಮೊದಲು ಈ ರೀತಿ ಕೆಲಸ ಮಾಡಿದ ಯಾವುದೇ ದಾಖಲೆಗಳೂ ಇಲ್ಲ. ಆದರೂ ಈ ಟೆಂಡರ್ ನೀಡುವ ಮೂಲಕ ಜನರ ತೆರಿಗೆ ಹಣ ಪೋಲು ಮಾಡಿರುವುದಲ್ಲದೇ ತೆರಿಗೆ ಹಣವನ್ನು  ಪರೋಕ್ಷವಾಗಿ ಲಂಚದ ರೂಪದಲ್ಲಿ ಹಿಂಬಾಗಿಲ ಮೂಲಕ ಸಂಗ್ರಹಿಸುವ ಪ್ರಯತ್ನವು ಸ್ಪಷ್ಟವಾಗಿದೆ. ಇದು ಅಸಮರ್ಥನೀಯ ಹಾಗೂ ಸದನಕ್ಕೆ ಮಾಡಿದ ವಂಚನೆಯಾಗಿದೆ ಎಂದು ಹಕ್ಕು ಚ್ಯುತಿಯಲ್ಲಿ ವಿವರಿಸಿದ್ದರು.

 

 

 

ಅಲ್ಲದೆ ಈ ಕಂಪನಿಯು 2023ರ ಜೂನ್‌ 20ರಂದು ರಾಜಾಜಿನಗರದಲ್ಲಿರುವ ಕಂಪನಿ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಸಹಭಾಗಿತ್ವದ ಡೀಡ್‌ನಲ್ಲಿ ಬಂಡವಾಳ ಮೊತ್ತವನ್ನು ಒಂದು ಲಕ್ಷವೆಂದೂ ಅಕ್ಷರದಲ್ಲಿ ನಲವತ್ತು ಲಕ್ಷವೆಂದೂ ನಮೂದಿಸಿರುವುದನ್ನು ಗಮನಿಸಿದಾಗ ದೊಡ್ಡ ಹಗರಣ ನಡೆದಿರುವುದು  ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ರವಿಕುಮಾರ್ ಅವರು ಹಕ್ಕುಚ್ಯುತಿ ಸೂಚನೆಯಲ್ಲಿ ಗಮನಸೆಳೆದಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು 2024ರ ಏಪ್ರಿಲ್‌ 20ರಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

 

 

ಇಲಾಖೆಯು 2024ರ ಆಗಸ್ಟ್‌ 1ರಂದು ಸಮಿತಿಗೆ ಉತ್ತರ ನೀಡಿತ್ತು.

 

 

ಈ ಉತ್ತರದ ಪ್ರತಿಯನ್ನು ಸಮಿತಿಯು  ಎನ್ ರವಿಕುಮಾರ್ ಅವರಿಗೆ  2024ರ ಆಗಸ್ಟ್‌ 5ರಂದು ನೀಡಿತ್ತು.

 

 

ಇಲಾಖೆಯ ಉತ್ತರದಲ್ಲೇನಿದೆ?

ದಿ ಪಾಲಿಸಿ ಫ್ರಂಟ್‌ ಕಂಪನಿಯು 2023ರ ಮೇ 21ರಂದು ಪ್ರಾರಂಭಗೊಂಡಿದೆ. 2023ರ ಜುಲೈ 18ರಂದು ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರ ಪಡೆದಿದೆ. ಕಂಪನಿಯ ಕಚೇರಿ ವಿಳಾಸ ಬದಲಾವಣೆಗೆ ಸಲ್ಲಿಸಿದ್ದರಿಂದ ಪರಿಷ್ಕೃತ ಜಿಎಸ್‌ಟಿ ಪ್ರಮಾಣ ಪತ್ರವನ್ನು 2023ರ ಡಿಸೆಂಬರ್‍‌ 21ರಂದು ಪಡೆದಿದೆ.

 

ಪಾಲುದಾರಿಕೆ ಡೀಡ್‌ನಲ್ಲಿ ಷರತ್ತು ಮತ್ತು ನಿಬಂಧನೆಗಳ 6ನೇ ಷರತ್ತಿನಲ್ಲಿ ಬಂಡವಾಳ ಮೊತ್ತವನ್ನು ಸಂಖ್ಯೆಯಲ್ಲಿ ಒಂದು ಲಕ್ಷವೆಂದೂ ಮತ್ತು ಅಕ್ಷರದಲ್ಲಿ ನಲವತ್ತು ಲಕ್ಷವೆಂದು ನಮೂದಿಸಿರುವುದು ಮುದ್ರಣ ದೋಷದಿಂದ ಆಗಿರುವ ತೊಡಕಾಗಿದೆ. ಈ ಷರತ್ತಿನ ಅಡಿಯಲ್ಲಿ ಫಸ್ಟ್‌ ಪಾರ್ಟಿ 50,000 ಮತ್ತು ಸೆಕೆಂಡ್‌ ಪಾರ್ಟಿ 50,000 ರು ಪಾವತಿಸಬೇಕು ಎಂದು ನಮೂದಿಸಲಾಗಿದೆ. ಅದರಂತೆ ಬಂಡವಾಳವು ಒಂದು ಲಕ್ಷವಾಗಿರುತ್ತದೆ ಎಂದು ಸಮಜಾಯಿಷಿ ನೀಡಿತ್ತು.

 

 

ಕೆಎಸ್ಎಂಸಿಎ ಸಂಸ್ಥೆಯು ನೀಡಿದ್ದ ವರದಿ ಮತ್ತು ಸ್ಪಷ್ಟೀಕರಣವನ್ನು ಒಪ್ಪಲು ಕೋರಿದ್ದ ಇಲಾಖೆಯು, ಹಕ್ಕುಚ್ಯುತಿಗೆ ಪ್ರಸ್ತಾವಿಸಿರುವ ಪ್ರಕರಣವನ್ನು ಮುಕ್ತಾಯ ಮಾಡಬೇಕು ಎಂದು ಕೋರಿತ್ತು. ಸಮಿತಿಗೆ ಇಲಾಖೆಯು ನೀಡಿದ್ದ ಉತ್ತರವನ್ನು ಕೈಗಾರಿಕೆ ವಾಣಿಜ್ಯ ಇಲಾಖೆ ಮತ್ತು ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ್ ಅವರು ಅನುಮೋದಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಆದರೆ ಈ ಉತ್ತರದೊಂದಿಗೆ ನೀಡಿರುವ ವಿವರಣೆಯಲ್ಲಿ ಕಂಪನಿಯ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಕುರಿತಾದ ಮಾಹಿತಿಯನ್ನು 4 ಪುಟಗಳನ್ನೊಳಗೊಂಡಿರುವ ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರ ಮತ್ತು ಅಂಡರ್‍‌ ಟೇಕಿಂಗ್‌ ಪತ್ರ ಮಾತ್ರ ಇದೆ. ಇದನ್ನು  ಹೊರತುಪಡಿಸಿದರೇ ಬೇರೆ ಇನ್ಯಾವ ದಾಖಲೆಗಳನ್ನು ಒದಗಿಸದೇ ಇರುವುದು ಕಂಡು ಬಂದಿದೆ.

 

 

 

 

 

ಈ ಉತ್ತರವನ್ನು ಒಪ್ಪದ ಎನ್ ರವಿಕುಮಾರ್ ಅವರು ವಿಧಾನ ಪರಿಷತ್ತಿನ ಕಾರ್ಯದರ್ಶಿಗೆ 2025ರ ಸೆ.22ರಂದು ಪತ್ರ ಬರೆದಿದ್ದರು.

 

 

ಈ ಪತ್ರದಲ್ಲೇನಿದೆ?

ದಾಖಲೆಗಳನ್ನು ಪರಿಶೀಲಿಸಿರುವ ಎನ್ ರವಿಕುಮಾರ್ ಅವರು ಇಲಾಖೆಯು  ಪುನಃ ತಪ್ಪು ಉತ್ತರವನ್ನೇ ನೀಡಿದೆ ಎಂದು ವಿವರಿಸಿದ್ದಾರೆ.  ಪಾಲಿಸಿ ಫ್ರಂಟ್ ಸಂಸ್ಥೆಯು 2023ರ ಜುಲೈ 18ರಂದು ಜಿಎಸ್‌ಟಿ ನೋಂದಣಿಗಾಗಿ ಮನವಿ ಸಲ್ಲಿಸಿತ್ತು. 2023ರ ಡಿಸೆಂಬರ್‍‌ 21ರಂದು ಆಧಾರ್ ನೋಂದಣಿ ಮೂಲಕ ಈ ನೋಂದಣಿಯನ್ನು ದೃಢೀಕರಿಸಿರುವ ಕುರಿತು ಜಿಎಸ್‌ಟಿ ಕೌನ್ಸಿಲ್ ವೆಬ್‌ಸೈಟ್‌ನಲ್ಲಿ ಸ್ಪಷ್ಟ ದಾಖಲೆಗಳಿವೆ. ಆದರೂ 2023ರ ಜುಲೈ 18ರಂದೇ ನೋಂದಣಿ ಪ್ರಮಾಣ ಪತ್ರ ಪಡೆಯಲಾಗಿದೆ ಎಂದು ಇಲಾಖೆಯು ಸದನಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಗಮನ ಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

ಸಮಿತಿ ಗಂಭೀರತೆಯನ್ನೇ ನಗೆಪಾಟಲಿಗೀಡು ಮಾಡಿತೇ ಇಲಾಖೆ?

ಇಲಾಖೆಯು ಸದನಕ್ಕೆ ತಪ್ಪು ಮಾಹಿತಿ ನೀಡಿರುವುದಲ್ಲದೇ ಹಕ್ಕುಚ್ಯುತಿ ಸಮಿತಿಯನ್ನೂ ತಪ್ಪು ದಾರಿಗೆ ಎಳೆಯುವ ಮೂಲಕ ಹಕ್ಕುಚ್ಯುತಿ ಸಮಿತಿಯ ಅಸ್ತಿತ್ವ ಮತ್ತು  ಸಮಿತಿಯ ಗಂಭೀರತೆಯನ್ನೇ ನಗೆಪಾಟಲು ಮಾಡುವ ಪ್ರಯತ್ನ ಮಾಡಿದೆ. ಇದು ಖಂಡನೀಯ. ಅಲ್ಲದೇ 2023ರ ಮೇ 21ರಂದು ಪ್ರಾರಂಭವಾದ ಕಂಪನಿಗೆ ಯಾವುದೇ ಅನುಭವ ಇಲ್ಲ ಎಂಬುದಕ್ಕೆ ಕಂಪನಿಯವರು ನೀಡಿರುವ ಲೆಟರ್ ಆಫ್‌ ಅಂಡರ್‍‌ಟೇಕಿಂಗ್‌ ಪತ್ರವನ್ನೇ ದಾಖಲೆ ಎಂಬುದಾಗಿ ದಾಖಲೆ ಸಲ್ಲಿಸಿದೆ ಎಂದು ವಿವರಿಸಿದ್ದಾರೆ.

 

 

ಅಲ್ಲದೇ ಇಲಾಖೆಯು ಯಾವುದೇ ಪೂರ್ವಾಪರ ವಿಚಾರಣೆ ನಡೆಸದೆಯೇ ಈ ಸಂಸ್ಥೆಗೆ ಸಹಾಯ ಮಾಡಲೇಬೇಕು ಎಂಬ ಒತ್ತಡದೊಂದಿಗೆ ಹಕ್ಕುಚ್ಯುತಿ ಸಮಿತಿಯ ವಿಚಾರಣೆ ವ್ಯವಸ್ಥೆಯನ್ನೇ ಅವಹೇಳನ ಮಾಡಿದೆ. ಈ ಮೂಲಕ ಹಕ್ಕುಚ್ಯುತಿ ಸಮಿತಿಯ ಅಗತ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದಂತಾಗಿದೆ. ಈ ಎಲ್ಲಾ ವಿಷಯಗಳ ಕುರಿತು ಸಮಗ್ರ ವಿಚಾರಣೆ ಅವಶ್ಯಕತೆ ಇದೆ. ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೀಡಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಈ ಕುರಿತು ಸಮಗ್ರ ವಿಚಾರಣೆ ನಡೆಸಬೇಕು ಎಂದು ವಿಧಾನ ಪರಿಷತ್‌ನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದರು.

 

 

ದ ಪಾಲಿಸಿ ಫ್ರಂಟ್‌ ಗೆ ಗುತ್ತಿಗೆಯನ್ನು ಮುಂದುವರೆಸಲು ಚಿರತೆ ವೇಗದಲ್ಲಿ ಸರ್ಕಾರ ಮತ್ತು ʻಕರ್ನಾಟಕ ಸ್ಟೇಟ್‌ ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ʼ (ಎಂಸಿ ಅಂಡ್‌ ಎ) ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನಡೆಸಿವೆ. ಸರ್ಕಾರವು ಕಚೇರಿ ಆದೇಶ ಹೊರಡಿಸಿದ ದಿನದಂದೇ ಎಂಸಿ ಅಂಡ್‌ ಎ ಯು ಸಹ ಫಟಾಫಟ್‌ ಎಂದು  ಕಾರ್ಯದೇಶ ನೀಡಿತ್ತು.

ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು  ‘ದ ಪಾಲಿಸಿ ಫ್ರಂಟ್‌’ಗೆ ನೀಡಿದ್ದ  7.20 ಕೋಟಿ ರು ಮೊತ್ತದ ಗುತ್ತಿಗೆ ಅವಧಿಯು 2024ರ ಸೆ.12ಕ್ಕೆ ಪೂರ್ಣಗೊಂಡಿತ್ತು. ನಿಯಮದ ಪ್ರಕಾರ ಈ ಸೇವೆ ಮುಂದುವರೆಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊಸದಾಗಿ ಟೆಂಡರ್‍‌ ಆಹ್ವಾನಿಸಬೇಕಿತ್ತು. ಆದರೆ ಇದಕ್ಕೆ ಯಾವುದೇ ಅವಕಾಶಗಳನ್ನೂ ನೀಡದೆಯೇ ಗುತ್ತಿಗೆ ಅವಧಿಯನ್ನು ದ ಪಾಲಿಸಿ ಫ್ರಂಟ್‌ಗೆ ವಿಸ್ತರಿಸಿ ಕಾರ್ಯಾದೇಶ ನೀಡಿರುವುದು  ಆರ್‍‌ಟಿಐ ಮೂಲಕ ಪಡೆದ ದಾಖಲೆಗಳು ಬಹಿರಂಗಪಡಿಸಿದ್ದವು.

ಮಂಗಳೂರು ಮೂಲದ ರಮೇಶ್‌ ಎಸ್‌ ಪೆರ್ಲ ಎಂಬುವರು ಸಲ್ಲಿಸಿದ್ದ ಆರ್‍‌ಟಿಐ ಅರ್ಜಿಗೆ ಕರ್ನಾಟಕ ಸ್ಟೇಟ್‌ ಮಾರ್ಕೆಂಟಿಂಗ್‌ ಕಮ್ಯೂನಿಕೇಷನ್ ಮತ್ತು ಅಡ್ವೈರ್ಟೈಸಿಂಗ್ ಲಿಮಿಟೆಡ್ 2025ರ ಜೂನ್‌ 12ರಂದು ಮಾಹಿತಿ ಒದಗಿಸಿತ್ತು.

7.20 ಕೋಟಿ ಮೊತ್ತದ ಗುತ್ತಿಗೆ ಮುಂದುವರಿಕೆ; ಟೆಂಡರ್ ಇಲ್ಲದೇ ‘ದ ಪಾಲಿಸಿ ಫ್ರಂಟ್‌’ಗೆ ಫಟಾಫಟ್‌ ಕಾರ್ಯಾದೇಶ

 

ವಿಶೇಷವೆಂದರೇ 7.20 ಕೋಟಿ ರು ಮೊತ್ತದ ಈ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರವೂ ದ ಪಾಲಿಸಿ ಫ್ರಂಟ್‌ ಅನಧಿಕೃತವಾಗಿ ಸೇವೆ ನೀಡಿತ್ತು. ಹೊಸದಾಗಿ ಕಾರ್ಯಾದೇಶ ನೀಡುವ ಮುನ್ನ  ಟೆಂಡರ್ ಆಹ್ವಾನಿಸಬೇಕಿತ್ತು. ಆದರೆ ಎಂ ಸಿ ಅಂಡ್‌ ಎ ಯು ಆರ್‍‌ಟಿಐ ಅಡಿಯಲ್ಲಿ ನೀಡಿರುವ ಸಮಗ್ರ ದಾಖಲೆಗಳಲ್ಲಿ ಟೆಂಡರ್‍‌ ಆಹ್ವಾನಿಸಿರುವ ಕುರಿತು ಯಾವುದೇ ಮಾಹಿತಿ, ದಾಖಲೆ, ಹಾಳೆಯೂ ಸಹ ಕಂಡು ಬಂದಿಲ್ಲ.

ರಾಜ್ಯ ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆ ಮತ್ತು ಕಾರ್ಯಾದೇಶದಲ್ಲಿದ್ದ ಇತರೆ ಸೇವೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಸಲುವಾಗಿ ಈ ಸೇವೆಯನ್ನು ಒಂದು ವರ್ಷದ ಅವಧಿಗೆ ಮುಂದುವರೆಸಬೇಕು ಎಂದು ಎಂ ಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‍‌ ಅವರು 2024ರ ಸೆ.11ರಂದು ಟಿಪ್ಪಣಿ ಹೊರಡಿಸಿದ್ದರು.

 

 

 

ಈ ಟಿಪ್ಪಣಿ ಹೊರಬಿದ್ದ ಒಂದೇ ಒಂದು ದಿನ ಅಂತರದಲ್ಲಿ    ಸೇವೆಯನ್ನು ಮುಂದುದವರೆಸಬೇಕು ಎಂದು ದ ಪಾಲಿಸಿ ಫ್ರಂಟ್‌ನ ಪಾಲುದಾರರು,  ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರಿಗೆ   2024ರ 12ರಂದು ಕೋರಿದ್ದರು.

 

 

ಇದನ್ನು ಪರಿಗಣಿಸಿದ್ದ  ಕೆಎಸ್‌ಎಂಸಿಎಯು 2024ರ ಸೆ.13ಕ್ಕೆ ಪೂರ್ವಾನ್ವಯ ಅಗುವಂತೆ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರವನ್ನು 2025ರ ಫೆ.21ರಂದು  ಕೋರಿದ್ದರು ಎಂಬುದು ಅರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

 

 

 

ಮುಂಗಡವಾಗಿಯೇ ಆದೇಶ

 

ಎಂಸಿ ಅಂಡ್‌ ಎ ನ ವ್ಯವಸ್ಥಾಪಕ ನಿರ್ದೇಶಕರು ಈ ಕೋರಿಕೆ ಸಲ್ಲಿಸುವ ಮುನ್ನವೇ ಮುಂಗಡವಾಗಿಯೇ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯು 2025ರ ಜನವರಿ 1ರಿಂದಲೇ ಅನ್ವಯವಾಗುವಂತೆ ಕಚೇರಿ ಆದೇಶ ಹೊರಡಿಸಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

 

ಫಟಾಫಟ್‌ ಕಾರ್ಯಾದೇಶ

ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯು ಕಚೇರಿ ಆದೇಶ ಹೊರಡಿಸಿದ ದಿನದಂದೇ ಅಂದರೇ 2025ರ ಫೆ.12ರಂದೇ ಎಂಸಿ ಅಂಡ್‌ ಎ ಯು ದ ಪಾಲಿಸಿ ಫ್ರಂಟ್‌ಗೆ ಕಾರ್ಯಾದೇಶವನ್ನೂ ನೀಡಿರುವುದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

 

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವೇ ತಿಂಗಳಲ್ಲಿ  ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಮುಂದಾಗಿತ್ತು. ಈ ಸೇವೆಗಳನ್ನು ಪಡೆಯಲು ಯಾವುದೇ  ಸ್ಪರ್ಧಾತ್ಮಕ ಟೆಂಡರ್ ಕರೆದಿರಲಿಲ್ಲ. ಬದಲಿಗೆ ದರ ಪಟ್ಟಿಯನ್ನು ಪಡೆದು 7.20 ಕೋಟಿ ರು ವೆಚ್ಚದಲ್ಲಿ  ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಿತ್ತು.

ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ  ಪ್ರಚಾರ ಮಾಡುವ ಸಂಬಂಧ ‘ದ ಪಾಲಿಸಿ ಫ್ರಂಟ್‌’ ಗೆ ಒಂದು ವರ್ಷದ ಹಿಂದೆ ನೀಡಿದ್ದ ಹೊರಗುತ್ತಿಗೆಯನ್ನು ನವೀಕರಿಸಲು ಎಂಸಿಅಂಡ್‌ಎ ಕಂಪನಿಯು ಮುಂದಾಗಿದೆ. ಇದಕ್ಕೆ ಅನುಮೋದನೆ ಕೋರಿ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆಯಾಗಿತ್ತು.

 

‘ದ ಪಾಲಿಸಿ ಫ್ರಂಟ್‌’ ಗೆ ಗುತ್ತಿಗೆ ನವೀಕರಣಕ್ಕೆ ಸಿಎಂಗೆ ಕಡತ ಸಲ್ಲಿಕೆ!; ಈ ಬಾರಿಯೂ ಟೆಂಡರ್‍‌ನಿಂದ ವಿನಾಯಿತಿ?

 

ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಇದೇ ಸೇವೆಗಳ ಪಡೆಯುವ ತುರ್ತು ಮತ್ತು ಅಗತ್ಯತೆಗಳಿದ್ದರೆ ಹೊಸದಾಗಿ ಸ್ಪರ್ಧಾತ್ಮಕ ಟೆಂಡರ್ ಆಹ್ವಾನಿಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಯನ್ನೂ ನಡೆಸದೆಯೇ ನೇರವಾಗಿ ಗುತ್ತಿಗೆಯನ್ನೇ ನವೀಕರಿಸಲು ಕಡತ ಸಲ್ಲಿಸಿರುವುದಕ್ಕೆ ಅಧಿಕಾರಿಗಳ ವಲಯದಲ್ಲೇ ವಿರೋಧ ವ್ಯಕ್ತವಾಗಿತ್ತು.

ವಾಟ್ಸಾಪ್‌ ಸಂಭಾಷಣೆಗೆ 1.45 ಕೋಟಿ ರು. ಸೇರಿದಂತೆ ಒಟ್ಟಾರೆ 1.71 ಕೋಟಿ ರು. ವೆಚ್ಚವಾಗಲಿದೆ ಎಂದು ‘ದ ಪಾಲಿಸಿ ಫ್ರಂಟ್‌’  ಸಲ್ಲಿಸಿದ್ದ ವಾಣಿಜ್ಯ ಪ್ರಸ್ತಾವನೆಯು ಬಹಿರಂಗವಾಗಿತ್ತು.

ಈ ಸಂಬಂಧ ‘ದಿ ಫೈಲ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಆರ್ಥಿಕ ಇಲಾಖೆಯು ಒದಗಿಸಿದ್ದ  42 ಪುಟಗಳ ದಾಖಲೆಗಳಲ್ಲಿ ‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಮತ್ತು ಮನವಿ ಮಾತ್ರ ಇತ್ತು. ಇದನ್ನು ಹೊರತುಪಡಿಸಿದರೆ ಈ ಸೇವೆಗಳ ಕುರಿತಾಗಿ ಪೂರ್ವಾನುಭವ ಹೊಂದಿರುವ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಮತ್ತು ಆರ್ಥಿಕ ಇಲಾಖೆಯ (ವೆಚ್ಚ-7) ಅಧಿಕಾರಿಗಳೂ ಸಹ ಇದರ ಬಗ್ಗೆ ಎಲ್ಲಿಯೂ ಚಕಾರ ಎತ್ತಿರಲಿಲ್ಲ.

 

‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಬಹಿರಂಗ; ವಾಟ್ಸಾಪ್‌ ಸಂಭಾಷಣೆ ಸೇರಿ 1.45 ಕೋಟಿ ವೆಚ್ಚ

 

ಈ ಕಂಪನಿಗೆ ನೀಡಿದ್ದ ಹೊರಗುತ್ತಿಗೆ ವಿಚಾರವು ಸದನದಲ್ಲಿಯೂ ಪ್ರತಿಧ್ವನಿಸಿತ್ತು.

 

‘ಪಟ್ಟು, ಮಟ್ಟು, ಗುಟ್ಟು ರಟ್ಟಾಗ್ಬೇಕು, ಮಟ್ಟು ಯಾರಂತ ನೋಡ್ಬೇಕು’; ಸದನದಲ್ಲಿ ಪ್ರತಿಧ್ವನಿಸಿದ ‘ದಿ ಫೈಲ್‌’ ವರದಿ

 

ಸುಳ್ಳು ಸುದ್ದಿಗಳ  ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್‌ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್‌’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿತ್ತು.

 

7.20 ಕೋಟಿ ರು ಗುತ್ತಿಗೆ; ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ‘ದ ಪಾಲಿಸಿ ಫ್ರಂಟ್‌’ ಕಚೇರಿಯೇ ಇಲ್ಲ

 

ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್‌’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು  ಚರ್ಚೆಗೆ ಗ್ರಾಸವಾಗಿತ್ತು.  ಈ ಕುರಿತು ಟ್ವೀಟ್‌ ಮಾಡಿದ್ದ  ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.

ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ  4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್‌’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.

 

‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

 

ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು.  ಆದರೆ ಕೆಎಸ್‌ಎಂಸಿ ಅಂಡ್‌ ಎ ಕಂಪನಿಯು ತನ್ನ ಹಂತದಲ್ಲಿ ಇದೇ  ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು.  ಅದಷ್ಟೇ ಅಲ್ಲ,  ಕಡತವನ್ನು ಒದಗಿಸಲು ನಿರಾಕರಿಸುವ  ಮೂಲಕ ‘ದ ಪಾಲಿಸಿ ಫ್ರಂಟ್‌’  ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್‌ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು.  ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

Hot this week

ಶೌಚಾಲಯ, ಸ್ನಾನದ ಗೃಹ, ಮೂತ್ರಾಲಯ ಶುಲ್ಕ ವಸೂಲಿ; ಸುಲಭ್‌ ಇಂಟರ್ ನ್ಯಾಷನಲ್‌, ಬಿಬಿಎಂಪಿ ಖಾತೆಗೆ ಹಣ ಜಮೆ ಮಾಡಿದೆಯೇ, ನುಂಗಿದೆಯೇ?

ಬೆಂಗಳೂರು;  ಸುಲಭ್ ಶೌಚಾಲಯ ಮತ್ತು ಸಾರ್ವಜನಿಕ ಮೂತ್ರಾಲಯ  ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು...

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ...

ಒಂದೇ ಜಾಗದಲ್ಲಿ ಎರಡು ಫ್ಲೈ ಓವರ್, ಶೇ.50ರಷ್ಟು ಕಾಮಗಾರಿಯಾಗಿದ್ದರೂ ಪೂರ್ಣ ಪಾವತಿ; ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲಿಲ್ಲ, ಗುತ್ತಿಗೆದಾರರಿಗೆ ಲಾಭ, ಬಿಬಿಎಂಪಿ ನಿಧಿಗೆ ನಷ್ಟ

ಬೆಂಗಳೂರು;  ಈಜಿಪುರ ಮೇಲ್ಸೇತುವೆ ಎಲಿವೇಟೆಡ್‌ ಕಾರಿಡಾರ್  ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ  ಪೂರ್ಣಗೊಳಿಸದ...
Please Scan to make Your Contribution

Topics

ಶೌಚಾಲಯ, ಸ್ನಾನದ ಗೃಹ, ಮೂತ್ರಾಲಯ ಶುಲ್ಕ ವಸೂಲಿ; ಸುಲಭ್‌ ಇಂಟರ್ ನ್ಯಾಷನಲ್‌, ಬಿಬಿಎಂಪಿ ಖಾತೆಗೆ ಹಣ ಜಮೆ ಮಾಡಿದೆಯೇ, ನುಂಗಿದೆಯೇ?

ಬೆಂಗಳೂರು;  ಸುಲಭ್ ಶೌಚಾಲಯ ಮತ್ತು ಸಾರ್ವಜನಿಕ ಮೂತ್ರಾಲಯ  ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು...

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ...

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ,...

Related Articles

Popular Categories

error: Content is protected !!