ಬೆಂಗಳೂರು; ಅರ್ಕಾವತಿ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಅಗತ್ಯ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರವು ಹಲವು ಮಾಹಿತಿ ಕೋರಿ ಪತ್ರ ಬರೆದಿದೆ. ಅಲ್ಲದೇ ಬಿಡಿಎಯು ಈ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆ ಕುರಿತು ಸ್ಪಷ್ಟ ಶಿಫಾರಸ್ಸಿನೊಂದಿಗೆ ಮರು ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ನಡೆದಿದೆ ಎನ್ನಲಾದ ಅರ್ಕಾವತಿ ಬಡಾವಣೆಯ ರೀಡೂ ಹಗರಣದಲ್ಲಿ ಫಲಾನುಭವಿಗಳಾದ ಜಮೀನುಗಳ ಮಾಲೀಕರು ಇದೀಗ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಅಸಹಕಾರ ತೋರುತ್ತಿದ್ದಾರೆ. ರೀಡೂ ಮೂಲಕ ತಮ್ಮ ಜಮೀನುಗಳನ್ನು ಉಳಿಸಿಕೊಂಡಿರುವ ಫಲಾನುಭವಿ ಜಮೀನುಗಳ ಮಾಲೀಕರು ತಂತಿಬೇಲಿ ನಿರ್ಮಾಣ ಮಾಡಿರುವ ಕಾರಣ ಬಡಾವಣೆಗೆ ಸಂಪರ್ಕ ರಸ್ತೆಯೇ ನಿರ್ಮಾಣವಾಗಿಲ್ಲ. ಹೀಗಾಗಿ ಅಗತ್ಯ ಜಮೀನುಗಳನ್ನು ಭೂ ಸ್ವಾಧೀನಕ್ಕೊಳಪಡಿಸಬೇಕು ಎಂದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಇದನ್ನ ಪರಿಶೀಲಿಸಿರುವ ನಗರಾಭಿವೃದ್ದಿ ಇಲಾಖೆಯು ಬಿಡಿಎನಿಂದಲೇ ಮತ್ತಷ್ಟು ಮಾಹಿತಿ ಕೋರಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2026ರ ಜುಲೈ 1ರಂದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ (ಸಂಖ್ಯೆ; UDD/178/MNX/2026) ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಸರ್ಕಾರದ ಪತ್ರದಲ್ಲೇನಿದೆ?
ಅರ್ಕಾವತಿ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಿಸುವ ಉದ್ದೇಶಕ್ಕಾಗಿ ಉದ್ದೇಶಿತ ಯೋಜನೆಯ ಪ್ರಾತಮಿಕ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನಿನ ಒಟ್ಟು 20 ಎಕರೆ 16.5 ಗುಮಟೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಕೋರಿದೆ.
ಪ್ರಸ್ತಾಪಿತ ರಸ್ತೆಗಳನ್ನು ನಿರ್ಮಿಸಲು ಅಗತ್ಯವಿರುವ ಜಮೀನುಗಳ ಗ್ರಾಮ ಹಾಗೂ ಸರ್ವೆ ನಂಬರ್‍ಗಳು ಈಗಾಗಲೇ ಹೊರಡಿಸಲಾಗಿರು ಪ್ರಾಥಮಿಕ ಅಧಿಸೂಚನೆಯಲ್ಲಿ ಒಳಗೊಂಡಿರುವ ಮಾಹಿತಿ ನೀಡಬೇಕು. ಪ್ರಸ್ತಾಪಿತ ಗ್ರಾಮಗಳ ಸರ್ವೆ ನಂಬರ್‍ಗಳ ಕುರಿತು ನಕ್ಷೆಯೊಂದಿಗೆ ಜೆಎಂಸಿ ವರದಿ ಸಲ್ಲಿಸಬೇಕು. ಈ ಪ್ರಸ್ತಾನವೆಯ ಕುರಿತು ಪ್ರಾಧಿಕಾರವು 2017ರ ಜೂನ್ 9ರಂದು ನಿರ್ಣಯ ಕೈಗೊಂಡಿದೆ. ಆದರೆ ಉಚ್ಛ ನ್ಯಾಯಾಲಯವು ಅರ್ಕಾವತಿ ಬಡಾವಣೆ ರಚನೆಗಾಗಿ ಹೊರಡಿಸಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು 2022ರ ಸೆ.12ರಂದೇ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್ ಕೇಶವನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಪ್ರಸ್ತಾಪಿತ ಗ್ರಾಮಗಳ ಸರ್ವೆ ನಂಬರ್‍ಗಳ ಜಮೀನುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವ ಬಗ್ಗೆ ಮಾಹಿತಿ ಹಾಗೂ ಕೇಶವನಾರಾಯಣ ಸಮಿತಿಯಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಮಾಹಿತಿ ಒದಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಬಿಡಿಎ ಪ್ರಸ್ತಾವನೆಯಲ್ಲೇನಿತ್ತು?
ಜಕ್ಕೂರು, ಸಂಪಿಗೆಹಳ್ಳಿ, ದಾಸರಹಳ್ಳಿ, ಥಣಿಸಂದ್ರ, ಕೆ ನಾರಾಯಣಪುರ, ಅಮೃತಹಳ್ಳಿ, ಚಳ್ಳಕೆರೆ, ಹೆಣ್ಣೂರು, ಗೆದ್ದಲಹಳ್ಳಿಯುದ್ದಕ್ಕೂ ರಚಿಸಿರುವ ಬಡಾವಣೆ ಮಧ್ಯೆಯೇ ರೀ ಡೂ ಫಲಾನುಭವಿ ಜಮೀನುಗಳ ಮಾಲೀಕರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ. ಹೀಗಾಗಿ ರೀಡೂ, ಡಿ ನೋಟಿಫಿಕೇಷನ್ ಆದ ಜಮೀನುಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಮಾಡಲು 20 ಎಕರೆ 16.5 ಗುಂಟೆ ಜಮೀನಿಗೆ ಹೊಸ ಭೂ ಸ್ವಾಧೀನ ಕಾಯ್ದೆಯಂತೆ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನಪಡಿಸಿಕೊಳ್ಳಬೇಕಾದ ಅನಿವಾರ್ಯತೆಯು ಬಿಡಿಎಗೆ ಎದುರಾಗಿದೆ.
ಒಂದೊಮ್ಮೆ ಸರ್ಕಾರವು ಏನಾದರೂ ಭೂ ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿದ್ದೇ ಆದಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದ ಪ್ರಕಾರ 20 ಎಕರೆ 16.5 ಗುಂಟೆ ಅಂದಾಜು 217.80 ಕೋಟಿಗೂ ಹೆಚ್ಚು ಮೊತ್ತದ ಪರಿಹಾರ ನೀಡಬೇಕಿದೆ. ಬಿಡಿಎನ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಪ್ರಕಾರ ಮತ್ತೊಂದು ಆರ್ಥಿಕ ಹೊರೆ ಹೊರುವ ಸಾಧ್ಯತೆಗಳಿವೆ.
ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯಕ್ತ ಮೇಜರ್ ಮಣಿವಣ್ಣನ್ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿನ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರೀಸ್ ಅವರ ಜೊತೆ ಬಿಡಿಎ ಅಧಿಕಾರಿಗಳು ಚರ್ಚಿಸಿದ್ದರು.
ಸಂಪರ್ಕ ರಸ್ತೆ ರಚಿಸಲು ಕಷ್ಟಕರ- ನಡುಗಡ್ಡೆಯಂತಾದ ನಿವೇಶನಗಳು
ಅರ್ಕಾವತಿ ಬಡಾವಣೆಯಲ್ಲಿ 2014ರಲ್ಲಿ ಪ್ರಕಟಗೊಂಡ ಪರಿಷ್ಕೃತ ಅಂತಿಮ ಅಧಿಸೂಚನೆಯಂತೆ ಈಗಾಗಲೇ ಒಟ್ಟು 983 ಎಕರೆ 33 ಗುಂಟೆ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಿದೆ. ಈ ಜಮೀನುಗಳು ಅರ್ಕಾವತಿ ಬಡಾವಣೆ ರಚನೆಯಾಗಿರುವ ಅಕ್ಕಪಕ್ಕದ ಜಮೀನುಗಳಿಗೆ ಹೊಂದಿಕೊಂಡಿದೆ. ಪ್ರಸ್ತುತ ಬಡಾವಣೆಗೆ ಸಂಪರ್ಕ ರಸ್ತೆಯನ್ನು ರಚಿಸಲು ಕಷ್ಟವಾಗಿದೆ. ಹಾಗೂ ಕೆಲವು ಕಡೆ ಪ್ರಾಧಿಕಾರದಿಂದ ರಚಿಸಿರುವ ನಿವೇಶನಗಳಿಗೆ ಪೂರ್ಣ ಸಂಪರ್ಕ ಇಲ್ಲದಂತಾಗಿದೆ. ನಡುಗಡ್ಡೆಯ ನಿವೇಶನಗಳಾಗಿವೆ ಎಂದು ಪತ್ರದಲ್ಲಿ ವಿವರಿಸಿತ್ತು.

ಪ್ರಸ್ತುತ ರೀ ಡೂ/ಡಿ ನೋಟಫೈ ಆದ ಜಮೀನುಗಳ ಅಕ್ಕಪಕ್ಕದ ಪ್ರಾಧಿಕಾರದಿಂದ ನಿರ್ಮಾಣವಾದ ಬಡಾವಣೆಯ ಜಮೀನುಗಳಿಗೆ ಸಂಪರ್ಕ ರಸ್ತೆ ಇಲ್ಲದೇ ಇರುವುದರಿಂದ ಬಡಾವಣೆ ರಚನೆಗೆ ತುಂಬಾ ಅನಾನುಕೂಲವಾಗಿದೆ. ಅಲ್ಲದೇ ರೀಡೂ ಡಿ ನೋಟಿಫೈ ಆದ ಜಮೀನಿನ ಮಾಲೀಕರು ತಮ್ಮ ಅನುಭವದಲ್ಲಿರುವ ಜಮೀನುಗಳಿಗೆ ತಂತಿಬೇಲಿ ನಿರ್ಮಿಸಿರುವುದರಿಂದ ಸಂಪರ್ಕ ರಸ್ತೆ ಹೊಂದಲು ಆಗಿರುವುದಿಲ್ಲ. ಆದ್ದರಿಂದ ಈ ಹಿಂದೆ ಭೂಸ್ವಾಧೀನಗೊಂಡ ಪ್ರಸ್ತುತ ರೀಡೂ ಡಿ ನೋಟಿಫೈ ಆದ ಜಮೀನುಗಳಲ್ಲಿನ ಸಂಪರ್ಕ ರಸ್ತೆಗೆ ಬೇಕಾದ ವಿಸ್ತೀರ್ಣವನ್ನು ಅಭಿಯಂತರ ವಿಭಾಗದವರು ಸಲ್ಲಿಸಿರುವ ಮೇರೆಗೆ ಹೊಸ ಭೂಸ್ವಾಧೀನ ಕಾಯ್ದೆಯಂತೆ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನಪಡಿಸಿಬೇಕಾಗಿರುತ್ತದೆ ಎಂದು ಸರ್ಕಾರದ ಗಮನಸೆಳೆದಿತ್ತು.
ಅಂತಿಮ ಅಧಿಸೂಚನೆಗೆ ಬೇಕಾಗಿರುವ ವಿವಿಧ ಗ್ರಾಮಗಳ ವಿವಿಧ ಸರ್ವೆ ನಂಬರ್‍ಗಳಲ್ಲಿ ಸಂಪರ್ಕ ರಸ್ತೆಯು ಬೇಕಾಗಿರುವುದರಿಂದ ಈ ಜಮೀನುಗಳನ್ನು ಸರ್ಕಾರದ 2011ರ ಸುತ್ತೋಲೆಯಂತೆ 40;60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡುವ ಬಗ್ಗೆ ನಿರ್ಣಯ ಕೈಗೊಂಡಿದೆ. ಹಾಗೂ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಅಭಿಯಂತರ ವಿಭಾಗದಿಂದ ಇನ್ನು ಮುಂದೆ ರಸ್ತೆ ಸಂಪರ್ಕಕ್ಕಾಗಿ ಪ್ರಸ್ತಾವನೆ ಬಂದಲ್ಲಿ ಈ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕ್ರಮವಹಿಸುವ ಬಗ್ಗೆಯೂ ನಿರ್ಣಯವಾಗಿರುತ್ತದೆ ಎಂದು ವಿವರಿಸಿತ್ತು.

ಉದ್ದೇಶಿತ ಈ ಯೋಜನೆಯ ಪ್ರಾಥಮಿಕ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನಿನ ಒಟ್ಟು 20 ಎಕರೆ 16.5 ಗುಂಟೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಸಂಬಂಧ ಕರಡು ಅಂತಿಮ ಅಧಿಸೂಚನೆಯೊಂದಿಗೆ ಪ್ರಸ್ತಾವ ಸಲ್ಲಿಸಿತ್ತು.
ಹೆಣ್ಣೂರಿನಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಅಪಾರ ಬೆಲೆಬಾಳುವ 26 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಬಿಡಿಎಗೆ ಆದೇಶಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಈಚೆಗಷ್ಟೇ ವಜಾಗೊಳಿಸಿತ್ತು. ಇದರಿಂದಾಗಿ ನೂರಾರು ಕೋಟಿ ರೂ. ಮೌಲ್ಯದ ಜಮೀನು ಬಿಡಿಎ ಸುಪರ್ದಿಯಲ್ಲಿ ಉಳಿದಂತಾಗಿತ್ತು. ಭೂ ಮಾಲೀಕರಾದ ಪ್ರೇಮ್ ಸಿಂಗ್, ಅವರ ಪುತ್ರಿ ಬೀಜಾಕ್ಷರಿ ವರ್ಮನ್ ಮತ್ತು ಪುತ್ರ ಶಾಹಿಲ್ ವರ್ಮನ್ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿತ್ತು.
ಅರ್ಕಾವತಿ ಲೇಔಟ್ ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಸರಕಾರ 2003 ರ ಫೆ.3 ರಂದು ಪ್ರಾಥಮಿಕ ಮತ್ತು 2004ರ ಫೆ.23ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಂತೆ ಬಿಡಿಎ, ಅರ್ಜಿದಾರರ ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗೆ ತಮ್ಮದೇನೂ ಆಕ್ಷೇಪಣೆ ಇಲ್ಲಹಾಗೂ ಜಮೀನಿಗೆ ಪರಿಹಾರ ಕಲ್ಪಿಸುವಂತೆ ಪ್ರೇಮ್‌ಸಿಂಗ್ ಅವರ ಪತ್ನಿಯೇ ಬಿಡಿಎಗೆ ತಿಳಿಸಿದ್ದರು.
ಭೂ ಸ್ವಾಧೀನದಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲ
ನ್ಯಾ.ಕೆ.ಎನ್.ಕೇಶವ ನಾರಾಯಣ ಸಮಿತಿ, ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಬೇಕೆಂಬ ಅರ್ಜಿದಾರರ ಮನವಿ ಪರಿಶೀಲಿಸಿ ತಿರಸ್ಕರಿಸಿದೆ. ಈ ಹಂತದಲ್ಲಿ ಅರ್ಜಿದಾರರ ಜಮೀನನ್ನು ಭೂ ಸ್ವಾಧೀನದಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿತ್ತು.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ
ಹೆಣ್ಣೂರು ಗ್ರಾಮದ ಸರ್ವೆ ನಂಬರ್ 17/1, 18, 19, 20 ಮತ್ತು 26 ರಲ್ಲಿನ ತಮ್ಮ ಮಾಲೀಕತ್ವದ ಒಟ್ಟು 26 ಎಕರೆ 12 ಗುಂಟೆ ಜಮೀನನ್ನು ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಬಿಡಿಎಗೆ ಆದೇಶಿಸಬೇಕು. ಈ ಕುರಿತ ತಮ್ಮ ಮನವಿ ತಿರಸ್ಕರಿಸಿರುವ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಸಮಿತಿಯ ಕ್ರಮ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಥಣಿಸಂದ್ರದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವು ಮಾಡಿ ಜಾಗವನ್ನು ವಶಕ್ಕೆ ಪಡೆದಿತ್ತು ಇದನ್ನು ಅರ್ಕಾವತಿ ಬಡಾವಣೆಗಾಗಿ ಭೂ ಸ್ವಾಧೀನಪಡಿಸಿಕೊಂಡಿತ್ತು. 2023ರಲ್ಇ ಪ್ರಾಥಮಿಕ ಅಧಿಸೂಚನೆ ಮತ್ತು 2024ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಬಿಡಿಎಯು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿತ್ತು.
2024ರಲ್ಲಿ ಒಂದು ಸುತ್ತಿನ ಒತ್ತುವರಿ ತೆರವುಗೊಳಿಸಿ ಆಸ್ತಿ ಒಡೆತನವನ್ನು ಪಡೆದುಕೊಂಡಿದೆ. ಈ ಸಂಬಂಧ ಭೂ ಮಾಲೀಕರು ಪರಿಹಾರ ಪಡೆದುಕೊಂಡಿದ್ದಾರೆ. 2014ರಲ್ಲಿ ಈ ಬಗ್ಗೆ ಹೈಕೋರ್ಟ್ ಕೂಡ ಆದೇಶ ಹೊರಡಿಸಿದೆ. 2021ರಲ್ಲಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರ ಹೊರತಾಗಿಯೂ ಭೂಮಾಲೀಕರು ಅಕ್ಮರವಾಗಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
ನಿವೇಶನ ಖರೀದಿಸಿದ 33 ಮಂದಿ ನ್ಯಾಯಾಲಯ ನೇಮಿಸಿದ್ದ ಕೇಶವನಾರಾಯಣ ಸಮಿತಿಯಲ್ಲಿ ಪ್ರಕರಣ ದಾಖಲಿಸಿದರು. ಸಮಿತಿಯು ನೋಟೀಸ್ ನೀಡಿ ವಿಚಾರಣೆ ನಡೆಸಿ ಅವುಗಳನ್ನು ಅಕ್ರಮ ಎಂದು 2023ರಲ್ಲಿ ಘೋಷಿಸಿ ಪ್ರಾಧಿಕಾರದ ಸುಪರ್ದಿಗೆ ಪಡೆದುಕೊಳ್ಳುವಂತೆ ನಿರ್ದೇಶನನೀಡಿತು ಎಂದು ತಿಳಿಸಿದ್ದರು.
ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಿದೆ. ನ್ಯಾಯಾಲಯ ಮತ್ತು ಪರಿಶೀಲನಾ ಸಮಿತಿಯಲ್ಲಿ ಬಿಡಿಎ ಪರವಾಗಿ ನಿರ್ಧಾರವಾಗಿದೆ. ನಿವೇಶನ ಮಾಲೀಕರಿಗೆ ನೋಟೀಸ್ ನೀಡಿ ವಿಚಾರಣೆ ಮಾಡಲಾಇದೆ. ಭೂ ಮಾಲೀಕರು ಬಿಡಿಎಗೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆ ಸಂಗ್ರಹಿಸುತ್ತಿದ್ದರು.
2004ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 3,339 ಎಕರೆ 12 ಗುಂಟೆ ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಪ್ರಾಥಮಿಕ ಅಧಿಸೂಚನೆಯಂತೆ 2,750 ಎಕರೆ ಜಮೀನುನ್ನು ಸ್ವಾಧೀನಪಡಿಸಿಕೊಂಡಿತ್ತು. ಅದರಲ್ಲಿ 1,766 ಎಕರೆ ಜಮೀನಿನಲ್ಲಿ ಬಡಾವಣೆ ರಚಿಸಿದೆ. ಆರಂಭದಲ್ಲಿ 13,689 ನಿವೇಶನ ರಚಿಸಲು ಉದ್ದೇಶಿಸಿತ್ತು. ಸದ್ಯ 8,212ರಲ್ಲಿ ನಿವೇಶನ ರಚನೆ ಮಾಡಿ ಹಂಚಿಕೆ ಮಾಡಿದೆ. ಭೂ ಸ್ವಾಧೀನ ತಕರಾರಿನಿಂದ 5,477 ನಿವೇಶನಗಳನ್ನು ರಚಿಸಿಲ್ಲ.
ಅರ್ಕಾವತಿ ಲೇಔಟ್ ರಚನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂಸ್ವಾಧೀನಪಡಿಸಿಕೊಂಡ ಕ್ರಮವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್, 983.12 ಎಕರೆ ಭೂಮಿಯನ್ನು ರಾಜ್ಯ ಸರ್ಕಾರವು ಕೈಬಿಟ್ಟಿರುವುದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಕಾನೂನಿಗೆ ಅನುಸಾರವಾಗಿದೆಯೇ ಎಂದು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು. 2004 ರಲ್ಲಿ ಹೊರಡಿಸಲಾದ ಅಂತಿಮ ಅಧಿಸೂಚನೆಯ ನಂತರ ಮತ್ತು 2014 ರಲ್ಲಿ ವಿನ್ಯಾಸದ ಮರು-ಮಾರ್ಪಾಡುಗಾಗಿ ಅಧಿಸೂಚನೆಯನ್ನು ಹೊರಡಿಸುವ ಮೊದಲು ಹೊರಗಿಡಲಾಗಿತ್ತು.
“ಬಿಡಿಎ ಅಥವಾ ಸರ್ಕಾರ ಶಿಫಾರಸು ಮಾಡಿದ ಅಥವಾ ಸಿದ್ಧಪಡಿಸಿದ ಎಲ್ಲಾ ಅಳಿಸುವಿಕೆಗಳು ಅಥವಾ ಡಿ-ನೋಟಿಫಿಕೇಶನ್‌ಗಳು ಸಮಿತಿಯ ಪ್ರಮಾಣೀಕರಣ ಅಥವಾ ಅನುಮೋದನೆಗೆ ಒಳಪಟ್ಟಿರುತ್ತವೆ. ಅಂತಹ ಭೂಮಿ ಅಳಿಸುವಿಕೆಯು ಹೈಕೋರ್ಟ್‌ನ ವಿಭಾಗೀಯ ಪೀಠವು ನಿಗದಿಪಡಿಸಿದ ಕಾನೂನು ಮತ್ತು ಸುಪ್ರೀಂ ಕೋರ್ಟ್ ಹೊರಡಿಸಿದ ನಿರ್ದೇಶನಗಳಿಗೆ ಅನುಗುಣವಾಗಿದೆ” ಎಂದು ಭೂಸ್ವಾಧೀನವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ವಿಲೇವಾರಿ ಮಾಡಿದ್ದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದರು.
ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ, ಮಾಜಿ ಐಎಎಸ್ ಅಧಿಕಾರಿ ಸಂದೀಪ್ ದಾವೆ ಮತ್ತು ಐಪಿಎಸ್ ಅಧಿಕಾರಿ ಎನ್.ಎಸ್. ಮೇಘರಿಖ್ ಅವರನ್ನೊಳಗೊಂಡ ಸಮಿತಿಯು ಬಿಡಿಎಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಅರ್ಕಾವತಿ ಲೇಔಟ್‌ಗಾಗಿ ಭೂಮಿ ಸ್ವಾಧೀನಪಡಿಸಿಕೊಂಡಿರುವ 16 ಹಳ್ಳಿಗಳ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಸಮಿತಿಗೆ ಸೂಚಿಸಿತ್ತು.
ಸಮಿತಿಯಿಂದ ಪರಿಶೀಲನೆಯ ನಂತರ ವರದಿಯನ್ನು ಸ್ವೀಕರಿಸಿದ ನ್ಯಾಯಾಲಯ, ಬಿಡಿಎಗೆ ಒಂದು ತಿಂಗಳೊಳಗೆ ಗುತ್ತಿಗೆ-ಕಮ್-ಮಾರಾಟ ಒಪ್ಪಂದ ಅಥವಾ ಸಂಪೂರ್ಣ ಮಾರಾಟ ಪತ್ರವನ್ನು ತ್ವರಿತವಾಗಿ ಕಾರ್ಯಗತಗೊಳಿಸಲು, ಅಂತಹ ನಿವೇಶನಗಳನ್ನು ಹಂಚಿಕೆದಾರರಿಗೆ ಹಸ್ತಾಂತರಿಸಲಾಗಿದೆ ಅಥವಾ ವಿತರಿಸಲಾಗಿದೆ ಎಂದು ದೃಢೀಕರಿಸಲು ಕೇಳಿತ್ತು.
“ವಸತಿ ಸಹಕಾರ ಸಂಘಗಳು ಅಥವಾ ಗೃಹ ನಿರ್ಮಾಣ ಸಹಕಾರ ಸಂಘಗಳು ರಚಿಸಿದ ವಿನ್ಯಾಸಗಳು, ಅಥವಾ ನೋಂದಾಯಿತ ಒಕ್ಕೂಟ ಅಥವಾ ಸಂಘಗಳು ರಚಿಸಿದ ನಿವೇಶನಗಳನ್ನು ರಚಿಸಿ ಅದರ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆಯೇ, ಸ್ಥಳ ಪರಿಶೀಲನೆ ನಡೆಸುವ ಮೂಲಕ ಕಟ್ಟಡಗಳು ತಲೆ ಎತ್ತಿವೆಯೇ ಎಂಬುದನ್ನು ಸಮಿತಿಯು ಪರಿಶೀಲಿಸಬೇಕು. ಸಮಿತಿಯು ಇದು ಸ್ವಯಂಪೂರ್ಣ ವಿನ್ಯಾಸ ಎಂದು ಅಭಿಪ್ರಾಯಪಟ್ಟರೆ, ಸದರಿ ಪರಿಣಾಮಕ್ಕೆ ಸಂಬಂಧಿಸಿದ ವರದಿಯನ್ನು ಬಿಡಿಎಗೆ ಸಲ್ಲಿಸಬೇಕು, ಅದರ ಮೇಲೆ ಬಿಡಿಎ ಸದರಿ ಭೂಮಿಯನ್ನು ಸ್ವಾಧೀನದಿಂದ ತೆಗೆದುಹಾಕಬೇಕು” ಎಂದು ನ್ಯಾಯಾಲಯ ಹೇಳಿತ್ತು.
ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್ ಎಸ್ ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಕಡತಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ವರ್ಷ ಕಳೆದರೂ ರಾಜ್ಯಪಾಲರಿಗೆ ಸಲ್ಲಿಸಿರಲಿಲ್ಲ. ಅಲ್ಲದೇ ರಾಜ್ಯಪಾಲರು ಬರೆದಿದ್ದ ಪತ್ರದ ಆಧಾರದ ಮೇಲೆ ಕೈಗೊಂಡಿರುವ ಕ್ರಮಗಳ ಕುರಿತಾದ ಕಡತವನ್ನು ಸರ್ಕಾರವು ಆರ್‍ಟಿಐ ಅಡಿಯಲ್ಲಿಯೂ ಒದಗಿಸಿರಲಿಲ್ಲ.
ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರು ಅನುಮತಿ ನೀಡಿದ್ದ ಹೊತ್ತಿನಲ್ಲೇ ಅರ್ಕಾವತಿ ಬಡಾವಣೆಯ ವಿಚಾರಣೆ ಆಯೋಗದ ವರದಿಗೆ ಕೈ ಹಾಕಿದ್ದರು. ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ ಟಿ ರವಿ ಅವರು ಬರೆದಿದ್ದ ಪತ್ರವನ್ನಾಧರಿಸಿ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಡತ ಮತ್ತು ವರದಿಯ ಸಂಪುಟಗಳನ್ನು ನಗರಾಭಿವೃದ್ಧಿ ಇಲಾಖೆಯು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ 2024ರಲ್ಲೇ ಸಲ್ಲಿಸಿತ್ತು.
ಈ ಪತ್ರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು ಈಚೆಗಷ್ಟೇ ರಾಜ್ಯಪಾಲರಿಗೆ ವರದಿ ನೀಡಿದೆ. ಕೆಂಪಣ್ಣ ಆಯೋಗದ ವರದಿ ಕುರಿತು ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದಷ್ಟೇ ರಾಜ್ಯಪಾಲರಿಗೆ ಮಾಹಿತಿ ಒದಗಿಸಿದೆ ಎಂದು ತಿಳಿದು ಬಂದಿದೆ.
‘ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಹೆಚ್ ಎಸ್ ಕೆಂಪಣ್ಣ ವಿಚಾರಣೆ ಆಯೋಗದ ವರದಿ ಹಾಗೂ ಸಂಬಂಧಪಟ್ಟ ಕಡತ (ಸಂಖ್ಯೆ ನಅಇ 480 ಬೆಂಭೂಸ್ವಾ 2017) ವನ್ನು ಉಪ ಮುಖ್ಯಮಂತ್ರಿ ಅವರಿಗೆ 2024ರ ಸೆ.11ರಂದು ಸಲ್ಲಿಸಲಾಗಿದೆ. ಈ ವರದಿಯ ಸಂಪುಟಗಳನ್ನೊಳಗೊಂಡ ಮೂಲ ವರದಿಯನ್ನೂ ಸಹ ಕಳಿಸಲಾಗಿದೆ,’ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ್ ಎಸ್ ಸೂಳಿಕೇರಿ ಅವರು 2024ರ ಸೆ. 20ರಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿದ್ದರು.

ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಅರ್ಕಾವತಿ ಡಿ ನೋಟಿಫಿಕೇಷನ್; ಕೆಂಪಣ್ಣ ವರದಿಗೆ ಕೈ ಹಾಕಿದ ರಾಜ್ಯಪಾಲ, ಡಿಸಿಎಂಗೆ ದಾಖಲೆ ಸಲ್ಲಿಸಿದ ಇಲಾಖೆ
ಆದರೆ ಈ ಕಡತವು ವರ್ಷದಿಂದಲೂ ಚಲನವಲನದಲ್ಲೇ ಇದೆ. ಹೀಗಾಗಿ ಇದರ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ಆರ್‍ಟಿಐ ಅಡಿಯಲ್ಲಿ ಹಿಂಬರಹ ನೀಡಿತ್ತು.

ಅರ್ಕಾವತಿ ಬಡಾವಣೆಗಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದ ಒಟ್ಟು ಜಮೀನಿನ ಪೈಕಿ 541 ಎಕರೆಯನ್ನು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಡಿ ನೋಟಿಫಿಕೇಷನ್ ಮಾಡಿದ್ದರು. ಈ ಕುರಿತು ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಯು ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಒತ್ತಾಯಿಸಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಈ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶ ಹೆಚ್ ಎಸ್ ಕೆಂಪಣ್ಣ ಅವರ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿದ್ದರು.
ಕೆಂಪಣ್ಣ ನೇತೃತ್ವದ ವಿಚಾರಣೆ ಆಯೋಗವು ಸಲ್ಲಿಸಿದ್ದ ವರದಿಯಲ್ಲಿ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳ ಲೋಪವನ್ನು ವರದಿಯಲ್ಲಿ ಉಲ್ಲೇಖಿಸಿತ್ತು. ವರದಿಯನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಸುಮಾರು 1,861 ಪುಟಗಳ ವರದಿಯಲ್ಲಿ ಆಯೋಗ ಹೇಳಿತ್ತು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ ಮಾತಿನ ಚಕಮಕಿ ನಡೆದಿತ್ತು. 8,000 ಕೋಟಿ ರೂ.ಗಳ ಹಗರಣದ ಕುರಿತು ರಾಜ್ಯ ಸರ್ಕಾರ ತನಿಖೆಯನ್ನು ಪ್ರಾರಂಭಿಸಲಿದೆ ಎಂದು ಸುಳಿವು ಕೂಡ ನೀಡಿದ್ದರು. ಆದರೆ ಯಾವುದೇ ತನಿಖೆಯನ್ನು ನಡೆಸಿರಲಿಲ್ಲ.
ಅಲ್ಲದೇ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯ ಅಂತಿಮ ಭಾಗವನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗಪಡಿಸಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಸದನದಲ್ಲೇ ಸಿಟ್ಟಿಗೆದ್ದಿದ್ದರು.
‘ಸಿದ್ದರಾಮಯ್ಯ ಅವರು ಡಿನೋಟಿಫಿಕೇಶನ್‌ನಲ್ಲಿ ಭಾಗಿಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ, ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದನ್ನು ಮಾತ್ರ ಅನುಮೋದಿಸಿದ್ದಾರೆ ಎಂದು ಹೇಳಿದರೆ, ಇದರ ಅರ್ಥವೇನು? ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಇದಕ್ಕಿಂತ ದೊಡ್ಡ ಸಾಕ್ಷ್ಯದ ಅಗತ್ಯವಿಲ್ಲ,’ ಎಂದು ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದರು. ಅಲ್ಲದೇ ಸಾವಿರಾರು ಪುಟಗಳ ದಾಖಲೆಗಳನ್ನು ಒಟ್ಟುಗೂಡಿಸಿ ಇಡೀ ಹಗರಣದಲ್ಲಿ ಅಡಗಿರುವ ಆಯೋಗದ ಸಂಶೋಧನೆಗಳನ್ನು ಓದಿದ್ದೇನೆ. ಹಾಗಾಗಿ ನನ್ನ ಪ್ರಶ್ನೆಯೇ ಇಲ್ಲ. ಸುಳ್ಳು ಹೇಳುತ್ತಿದ್ದು, ಅವರೇ (ಸಿದ್ದರಾಮಯ್ಯ) ಸುಳ್ಳು ಹೇಳುತ್ತಿದ್ದಾರೆ,” ಎಂದು ಆರೋಪಿಸಿದ್ದರು.
“ಕಾಂಗ್ರೆಸ್ ಸರ್ಕಾರವು ಯಾವ ಕ್ರಮ ಕೈಗೊಂಡಿದೆ ಎಂದು ನಾವು ಈಗಾಗಲೇ ನೋಡಿದ್ದೇವೆ. ಈಗ ನಾವು ಸೂಕ್ತ ಕ್ರಮವನ್ನು ಪ್ರಾರಂಭಿಸುತ್ತೇವೆ. ಸೂಕ್ತ ಕ್ರಮ ಎಂದರೆ ಏನು, ಅದು ನಿಮಗೆ ಚೆನ್ನಾಗಿ ತಿಳಿದಿದೆ” ಎಂದು ಅವರು ಹೇಳಿದರು. ಅರ್ಕಾವತಿ ಲೇಔಟ್ ಹಗರಣದ ತನಿಖಾ ವರದಿಯು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಮಹಾದ್ವಾರವನ್ನು ತೆರೆದಿದೆ ಎಂದೂ ಹೇಳಿದ್ದರು.
40 ಪರ್ಸೆಂಟ್ ಕಮಿಷನ್ ಕುರಿತಂತೆ ಆಡಳಿತ ಪಕ್ಷವಾಗಿದ್ದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೊರಟಿದ್ದ ಕಾಂಗ್ರೆಸ್‌ನ್ನು ಎದುರಿಸಲು ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣವನ್ನು ಮುಂದಿರಿಸಿ ಬೆದರಿಸಲು ನೋಡಿತ್ತು. ಆದರೆ ಆ ನಂತರ ಈ ಆಯೋಗವು ನೀಡಿರುವ ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಅರ್ಕಾವತಿ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಅವರು ನೀಡಿರುವ ವರದಿಯನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪತ್ರದ ಮೂಲಕ ಒತ್ತಾಯಿಸಿದ್ದರು.
‘ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ಜನಪ್ರತಿನಿಧಿಯಾಗಿ ಈ ಮೂಲಕ ತಮ್ಮ ಗಮನ ಸೆಳೆಯಬಯಸುವುದೇನೆಂದರೆ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಮಾರು 852 ಎಕರೆಯಷ್ಟು ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದು, ಇದು ಸುಮಾರು 8,000 ಕೋಟಿ ರೂ. ಮೊತ್ತದ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ,’ ಎಂದು ಹೇಳಿದ್ದರು.
2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದ ವಿಚಾರಣಾ ಆಯೋಗವನ್ನು ಕಮಿಷನ್ ಆಫ್ ಎನ್ಕ್ವೆರಿ ಆಕ್ಟ್ 1952 ರಂತೆ ರಚಿಸಿದ್ದರು. ಅದರಂತೆ ಈ ಆಯೋಗವು ವಿಚಾರಣಾ ವರದಿಯನ್ನು ಸಹ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳು. ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸಿ ಟಿ ರವಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
‘ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ,’ ಎಂದು ಪತ್ರದಲ್ಲಿ ಹೇಳಿರುವುದನ್ನು ಸ್ಮರಿಸಬಹುದು.
ಅರ್ಕಾವತಿ ರೀಡೂ; ಮಾರ್ಗಸೂಚಿ, ಆದೇಶಕ್ಕೆ ವಿರುದ್ಧವಾಗಿ 325.62 ಎಕರೆ ಕೈಬಿಟ್ಟಿದ್ದ ಸರ್ಕಾರ, ಜೈನ್ ಟಿಪ್ಪಣಿ ಬಹಿರಂಗ
ಅರ್ಕಾವತಿ ರೀ ಡೂ ಸಂಬಂಧಿಸಿದಂತೆ ಮಾರ್ಗಸೂಚಿ ಮತ್ತು ಆದೇಶಕ್ಕೆ ವಿರುದ್ಧವಾಗಿ 325 ಎಕರೆ 62 ಗುಂಟೆ ವಿಸ್ತೀರ್ಣದ ಜಮೀನನ್ನು ಕೈ ಬಿಟ್ಟಿತ್ತು. ಈ ಕುರಿತು ‘ದಿ ಫೈಲ್‘, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




