Wednesday | July 15, 2026 |

ಟೆಂಡರ್ ನಿಯಮಗಳ ಭಾರೀ ಉಲ್ಲಂಘನೆ, ಅಕ್ರಮ; ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ಸ್ವೇಚ್ಛೆ ಅಧಿಕಾರ, ಆರ್ಥಿಕ ಇಲಾಖೆ ಆಕ್ಷೇಪ, ಮುಖ್ಯಮಂತ್ರಿಯನ್ನೂ ಕತ್ತಲಲ್ಲಿಟ್ಟರೇ?

ಬೆಂಗಳೂರು; ಲೋಕೋಪಯೋಗಿ ಇಲಾಖೆಯು ಕೈಗೆತ್ತಿಕೊಂಡಿರುವ ನೂರಾರು ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ, ಆರ್ಥಿಕ ಮತ್ತು ತಾಂತ್ರಿಕ ಬಿಡ್‌ ತೆರೆಯುವುದು ಮತ್ತು ಬಿಡ್‌ದಾರರ ಆಯ್ಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲದೇ ಟೆಂಡರ್ ಪ್ರಕ್ರಿಯೆಗಳ ನಿಯಮಗಳನ್ನು ನೇರಾನೇರ ಉಲ್ಲಂಘನೆ ಆಗುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬರುತ್ತಿವೆ.

ಟೆಂಡರ್‍‌ನಲ್ಲಿ ಎಲ್‌ 1 ಅನರ್ಹಗೊಂಡ ಪಕ್ಷದಲ್ಲಿ ಹೊಸದಾಗಿ ಟೆಂಡರ್‍‌ ಕರೆಯಬೇಕಿದ್ದ ಲೋಕೋಪಯೋಗಿ ಇಲಾಖೆಯು ಎಲ್‌ 2 ಗೆ ಟೆಂಡರ್ ಅವಾರ್ಡ್‌ ನೀಡಲು ಮುಂದಾಗಿದೆ. ಹಾಗೆಯೇ ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ಸ್ವೇಚ್ಛೆ ಅಧಿಕಾರ ನೀಡಲು ಲೋಕೋಪಯೋಗಿ ಇಲಾಖೆಯು ಮುಂದಾಗಿದೆ. ಇಲಾಖೆಯ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಇದಷ್ಟೇ ಅಲ್ಲ, ಲೋಕೋಪಯೋಗಿ ಇಲಾಖೆಯು ಮುಖ್ಯಮಂತ್ರಿಗಳ ಇಲಾಖೆಯಾಗಿರುವ ಆರ್ಥಿಕ ಇಲಾಖೆಯನ್ನೇ ಬದಿಗೊತ್ತಿ ನೇರವಾಗಿ ಕಾನೂನು ಇಲಾಖೆಯ ಮೊರೆ ಹೊಕ್ಕಿದೆ. ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು 2026ರ ಮಾರ್ಚ್‌ 31ರಂದು ನೀಡಿರುವ ಅಭಿಪ್ರಾಯವು, ಇಲಾಖೆ ವಿರುದ್ಧ ಕೇಳಿ ಬಂದಿರುವ ಆರೋಪ ಮತ್ತು ಸಂಶಯಗಳನ್ನು ಬಲಪಡಿಸಿದೆ.

ಈಚೆಗಷ್ಟೇ ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್‌ ಪ್ರೈ ಲಿ. (ಬಿವಿಪಿಎಲ್) ಗೆ 10,000 ಕೋಟಿ ರುಪಾಯಿ ಮೊತ್ತದ ಕಾಮಗಾರಿ ನೀಡಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆಪಾದನೆಗಳ ನಡುವೆಯೇ ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯವು ಚರ್ಚೆಗೆ ಗ್ರಾಸವಾಗಿದೆ.

ಆರ್ಥಿಕ ಇಲಾಖೆಯು 2026ರ ಮಾರ್ಚ್‌ 31ರಂದು ಲೋಕೋಪಯೋಗಿ ಇಲಾಖೆಗೆ ನೀಡಿರುವ ಅಭಿಪ್ರಾಯದ ಪ್ರತಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ.

ಪಿಡಬ್ಲ್ಯೂಡಿ ಇಲಾಖೆಯು ಹಣಕಾಸು ಟೆಂಡರ್‍‌ಗಳನ್ನು ತೆರೆಯುವುದು, ಬೆಲೆ ನಿಗದಿಪಡಿಸುವುದು ಮತ್ತು ಟೆಂಡರ್‍‌ದಾರರ ಸ್ಥಿತಿಯನ್ನು ಬದಲಾಯಿಸುತ್ತಿರುವುದು, ಟೆಂಡರ್ ಮೌಲ್ಯಮಾಪನ ಮತ್ತು ಟೆಂಡರ್ ಹಂಚಿಕೆ ಪ್ರಕ್ರಿಯೆಯಲ್ಲಿ ದೊಡ್ಡಮಟ್ಟದ ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಕಳವಳ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

ಹಣಕಾಸು ಟೆಂಡರ್ ತೆರೆದ ನಂತರ ಟೆಂಡರ್ ಆಹ್ವಾನ ಪ್ರಾಧಿಕಾರ ಮತ್ತು ಟೆಂಡರ್ ಅಂಗೀಕಾರ ಪ್ರಾಧಿಕಾರವು ಸಣ್ಣ ಕಾರಣಗಳನ್ನು ಉಲ್ಲೇಖಿಸಿ L1 ಅನ್ನು ರದ್ದುಪಡಿಸುತ್ತಿದೆ. ಇದರಿಂದಾಗಿ ಟೆಂಡರ್‌ಗಳನ್ನು ಮರುಮೌಲ್ಯಮಾಪನ ಮಾಡಿ, ನಂತರ ಎಲ್ 2, ಎಲ್‌ 3 ಇತ್ಯಾದಿಗಳಿಗೆ ಟೆಂಡರ್ ನೀಡುವ ಸಾಧ್ಯತೆ ಇದೆ. ಇಂತಹ ವಿಶಾಲ ಸ್ವೇಚ್ಛೆ ಅಧಿಕಾರವನ್ನು ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ನೀಡಲು ಲೋಕೋಪಯೋಗಿ ಇಲಾಖೆಯು ಮುಂದಾಗಿದೆ. ಇದನ್ನು ಆರ್ಥಿಕ ಇಲಾಖೆಯು ತೀವ್ರವಾಗಿ ವಿರೋಧಿಸಿದೆ. ಅಲ್ಲದೇ ಒಂದೊಮ್ಮೆ ವಿಶಾಲವಾದ ಸ್ವೇಚ್ಛೆ ಅಧಿಕಾರ ನೀಡಿದಲ್ಲಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿದೆ.

ಕೆಟಿಪಿಪಿ ಕಾಯ್ದೆಯ ಸೆಕ್ಷನ್ 13 ಪ್ರಕಾರ, ಸೆಕ್ಷನ್ 9 ಅಡಿಯಲ್ಲಿ ನೇಮಕಗೊಂಡ ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ಟೆಂಡರ್‌ಗಳ ಮೌಲ್ಯಮಾಪನ ಮತ್ತು ಅಂಗೀಕಾರದ ಬಗ್ಗೆ ತೀರ್ಮಾನಿಸಲು ಅಧಿಕಾರವಿದೆ. ಟೆಂಡರ್ ಪ್ರಕ್ರಿಯೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಟೆಂಡರ್ ಅಂಗೀಕಾರ ಪ್ರಾಧಿಕಾರವೇ ನಿರ್ವಹಿಸಬೇಕು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ, ಇಂತಹ ವಿಷಯಗಳಲ್ಲಿ ರಾಜ್ಯ ಸಚಿವ ಸಂಪುಟದ ಮುಂದೆ ಇವುಗಳನ್ನು ಮಂಡಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

 

 

ಇದಕ್ಕೂ ಮೊದಲು, ಆಡಳಿತ ವಿಭಾಗವು ಕರ್ನಾಟಕ ಸಾರ್ವಜನಿಕ ಖರೀದಿ ಪೋರ್ಟಲ್‌ನಲ್ಲಿ (ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್) ಎಲ್ 2 ಗೆ ಟೆಂಡರ್‌ಗೆ ಅನುಮೋದನೆ ನೀಡುವ ಕುರಿತು ಇ-ಗವರ್ನನ್ಸ್ ಇಲಾಖೆಗೆ ವಿಚಾರಣೆ ಕಳುಹಿಸಿದಾಗಲೇ ಹಣಕಾಸು ಇಲಾಖೆ ತನ್ನ ಅಭಿಪ್ರಾಯವನ್ನು ನೀಡಿತ್ತು. ಕಾಯ್ದೆ, ನಿಯಮಗಳು ಮತ್ತು ಸಂಬಂಧಿತ ಸೂಚನೆಗಳ ಪ್ರಕಾರ, ಎಲ್ 1, ಟೆಂಡರ್ ನಲ್ಲಿ ಯಾವುದೇ ಕಾರಣದಿಂದ ಅನರ್ಹಗೊಳ್ಳುವ ಪರಿಸ್ಥಿತಿ ಉಂಟಾದರೆ, ಇಲಾಖೆ ನಿಯಮಾನುಸಾರ ಹೊಸ ಟೆಂಡರ್‌ಗೆ ಹೋಗಬೇಕು ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಆಡಳಿತ ಇಲಾಖೆಯು ಎಲ್ 2 ಅನ್ನು ಅನುಮೋದಿಸಲು ಮುಂದಾಗಿದೆಯಲ್ಲದೇ ಅದನ್ನು ಮುಂದುವರಿಸುತ್ತಿದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯದಲ್ಲಿ ವಿವರಿಸಿದೆ.

ಕೆಟಿಪಿಪಿ ಕಾಯ್ದೆಯ ಸೆಕ್ಷನ್ 13 ಮತ್ತು ನಿಯಮ 25 ಅಡಿಯಲ್ಲಿ ನೀಡಿರುವ ನಿಯಮಾವಳಿಗಳ ಪ್ರಕಾರ, ಹಣಕಾಸು ಟೆಂಡರ್‌ಗಳನ್ನು ತೆರೆಯುವ ಬಳಿಕ, ಟೆಂಡರ್‌ನಲ್ಲಿ ನೀಡಲಾದ ಕನಿಷ್ಠ ಮೌಲ್ಯ (lowest evaluated price) ಆಧಾರವಾಗಿ L1 ಟೆಂಡರ್ ಆಯ್ಕೆ ಮಾಡಲಾಗುತ್ತದೆ. ಮತ್ತು ಟೆಂಡರ್ ಅಂತಿಮಗೊಳ್ಳುತ್ತದೆ. ಆ ಟೆಂಡರ್ ಅನ್ನು ಎಲ್ 1 ಟೆಂಡರ್‌ದಾರನಿಗೆ ನೀಡಬೇಕು. ಟೆಂಡರ್ ತೆರೆದ ನಂತರ ಯಾವುದಾದರೂ ಕಾರಣದಿಂದ ಟೆಂಡರ್ ಅನರ್ಹಗೊಂಡರೆ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸಬೇಕಾಗುತ್ತದೆ ಎಂದು ವಿವರಿಸಿದೆ.

ಹಣಕಾಸು ಟೆಂಡರ್‌ಗಳನ್ನು ತೆರೆಯುವ ಮತ್ತು ಬೆಲೆ ನಿಗದಿಪಡಿಸುವ ನಂತರ ಟೆಂಡರ್‌ದಾರರ ಸ್ಥಿತಿಯನ್ನು ಬದಲಾಯಿಸುವುದು ಟೆಂಡರ್ ಮೌಲ್ಯಮಾಪನ ಮತ್ತು ಟೆಂಡರ್ ಹಂಚಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ದುರುಪಯೋಗ (manipulation) ಸಾಧ್ಯತೆಯನ್ನುಂಟುಮಾಡುತ್ತದೆ. ಹಣಕಾಸು ಟೆಂಡರ್ ತೆರೆಯಲ್ಪಟ್ಟ ನಂತರ ಟೆಂಡರ್ ಆಹ್ವಾನ ಪ್ರಾಧಿಕಾರ ಮತ್ತು ಟೆಂಡರ್ ಅಂಗೀಕಾರ ಪ್ರಾಧಿಕಾರವು ಸಣ್ಣ ಕಾರಣಗಳನ್ನು ಉಲ್ಲೇಖಿಸಿ ಎಲ್ 1, ಅನ್ನು ರದ್ದುಪಡಿಸಿ, ಟೆಂಡರ್‌ಗಳನ್ನು ಮರುಮೌಲ್ಯಮಾಪನ ಮಾಡಿ, ನಂತರ ಎಲ್ 2, ಎಲ್ 3 ಇತ್ಯಾದಿಗಳಿಗೆ ಟೆಂಡರ್ ನೀಡುವ ಸಾಧ್ಯತೆ ಇದೆ.

‘ಇಂತಹ ವಿಶಾಲ ಸ್ವೈಚ್ಛಿಕ ಅಧಿಕಾರವನ್ನು ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ನೀಡುವುದನ್ನು ಹಣಕಾಸು ಇಲಾಖೆ ತೀವ್ರವಾಗಿ ವಿರೋಧಿಸುತ್ತದೆ, ಏಕೆಂದರೆ ಅದು ದುರುಪಯೋಗಕ್ಕೆ ಒಳಪಡುವ ಸಾಧ್ಯತೆ ಇದೆ,’ ಎಂದು ಆರ್ಥಿಕ ಇಲಾಖೆಯು ತನ್ನ ಕಳವಳ ವ್ಯಕ್ತಪಡಿಸಿರುವುದು ಅಭಿಪ್ರಾಯದಿಂದ ತಿಳಿದು ಬಂದಿದೆ.

ವ್ಯವಹಾರ ಹಂಚಿಕೆ ನಿಯಮಗಳ ಪ್ರಕಾರ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಿಗೆ ಆಡಳಿತ ಇಲಾಖೆಯಾಗಿ ಹಣಕಾಸು ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಕೆಟಿಪಿಪಿ ಕಾಯ್ದೆಯ ಸೆಕ್ಷನ್ 15 ಅಡಿಯಲ್ಲಿ ಖರೀದಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲು ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿದೆ. ಕರ್ನಾಟಕ ಸರ್ಕಾರ (ವ್ಯವಹಾರ ವ್ಯವಹಾರ) ನಿಯಮಗಳು, 1977 ರ ನಿಯಮ 41 ಪ್ರಕಾರ ಹಣಕಾಸು ಇಲಾಖೆಗೆ ಹಣಕಾಸು ನಿಯಮಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಅಭಿಪ್ರಾಯವನ್ನು ನೀಡುವ ಅಧಿಕಾರವಿದೆ.

ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯಿಂದ ಹೊರಡಿಸಲಾದ ಸುತ್ತೋಲೆಗಳು, ಕೆಟಿಪಿಪಿ ಕಾಯ್ದೆಯ ಸೆಕ್ಷನ್ 13, ನಿಯಮ 25, 26 ಮತ್ತು 28 ಗಳ ತಾತ್ವಿಕ ಅಂಶಗಳನ್ನು ಮೀರಿ ಹೋಗುತ್ತವೆಯೇ ಎಂಬ ವಿಷಯದಲ್ಲಿ ಆಡಳಿತ ಇಲಾಖೆ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿರುವುದನ್ನು ಹಣಕಾಸು ಇಲಾಖೆಯು ತೀವ್ರವಾಗಿ ವಿರೋಧಿಸಿರುವುದು ಅಭಿಪ್ರಾಯದಿಂದ ತಿಳಿದು ಬಂದಿದೆ.

ಹಣಕಾಸು ಇಲಾಖೆಯಿಂದ ಹೊರಡಿಸಲಾದ ನಿಯಮಗಳು ಮತ್ತು ಸುತ್ತೋಲೆಗಳ ಬಗ್ಗೆ ತೀರ್ಪು ನೀಡುವ ಅಧಿಕಾರವನ್ನು ಪಿಡಬ್ಲ್ಯೂಡಿಯು ಕಾನೂನು ಇಲಾಖೆಗೆ ನೀಡಲು ಸಾಧ್ಯವಿಲ್ಲ. ಏಕೆಂದರೇ ಹಣಕಾಸು ಇಲಾಖೆಯು ಮುಖ್ಯಮಂತ್ರಿ ಅವರ ನೇತೃತ್ವದಲ್ಲಿದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿರುವುದು ಗೊತ್ತಾಗಿದೆ.

‘ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕಾನೂನು ಇಲಾಖೆಗೆ ಅಭಿಪ್ರಾಯಕ್ಕಾಗಿ ಕಳುಹಿಸಿದಾಗ, ಉಳಿದಿರುವ ಟೆಂಡರ್‌ಗಳ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಬಹುದು ಎಂದು ಅಭಿಪ್ರಾಯ ನೀಡಲಾಗಿದೆ. ಆದರೆ, ಇದು ಕಾನೂನಿನ ಆಧಾರದ ಮೇಲೆ ನೀಡಿದ ಅಭಿಪ್ರಾಯವಲ್ಲ ಎಂದು ಹಣಕಾಸು ಇಲಾಖೆ ಪರಿಗಣಿಸಿದೆ ಮತ್ತು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯು ಕಟ್ಟುನಿಟ್ಟಾಗಿ ಹೇಳಿದೆ.

 

 

ಎಲ್ 2 ಗೆ ಟೆಂಡರ್ ನೀಡುವುದರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಸಾಧನೆಯಾಗುವುದಿಲ್ಲ. ಜೊತೆಗೆ, ಇದು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ನೀಡಿರುವ ಸುತ್ತೋಲೆಗಳ ಉಲ್ಲಂಘನೆಯಾಗುತ್ತದೆ. ಸರ್ಕಾರದ ನಿಯಮಗಳು ಮತ್ತು ಸೂಚನೆಗಳು ಸ್ಪಷ್ಟವಾಗಿದ್ದರೂ, ಆಡಳಿತ ಇಲಾಖೆ ಈ ವಿಷಯವನ್ನು ಅನಗತ್ಯವಾಗಿ ಕಳಿಸಿ ಕಳೆದ ಆರು ತಿಂಗಳಿನಿಂದ ವಿಳಂಬ ಮಾಡಿದೆ,’ ಎಂದು ವಿವರಿಸಿದೆ.

 

‘ಈ ಮೇಲಿನ ವಿಷಯಗಳ ಹಿನ್ನೆಲೆಗಳಲ್ಲಿ, ಆಡಳಿತ ಇಲಾಖೆಗೆ ಪ್ರಸ್ತುತ ಜಾರಿಯಲ್ಲಿರುವ ಸೂಚನೆಗಳ ಪ್ರಕಾರ ಯಾವುದೇ ಹೆಚ್ಚಿನ ವಿಳಂಬ ಮಾಡದೆ ಟೆಂಡರ್‌ಗಳನ್ನು ಮರು ಆಹ್ವಾನಿಸಲು ಸೂಚಿಸಲಾಗಿದೆ. ಜೊತೆಗೆ, ಇದು ಯಾವುದೇ ರೀತಿಯಲ್ಲೂ ಸಚಿವ ಸಂಪುಟದ ವಿಷಯವಾಗಿಲ್ಲದ ಕಾರಣ, ಸಚಿವ ಸಂಪುಟದ ಟಿಪ್ಪಣಿಯನ್ನು ಕೈಬಿಡಬೇಕು,’ ಎಂದು ಆರ್ಥಿಕ ಇಲಾಖೆಯು ಸೂಚಿಸಿರುವುದು ತಿಳಿದು ಬಂದಿದೆ.

ಸಿಬಿಐ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಕಂಪನಿಗೆ 10,000 ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆ; ಪ್ರಭಾವಿ ಸಚಿವರಿಗೆ ಹೆಲಿಕಾಪ್ಟರ್ ಉಡುಗೊರೆ?

 

ಸಿಬಿಐ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ಮೂಲದ ಕಂಪನಿಗೆ 10,000 ಕೋಟಿ ರು ಮೊತ್ತದ ಕಾಮಗಾರಿಯನ್ನು ನೀಡಿರುವ ಕುರಿತು ದಿ ಫೈಲ್‌ 2026ರ ಏಪ್ರಿಲ್‌ 13ರಂದೇ ಪ್ರಕಟಿಸಿತ್ತು.

Hot this week

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...
Please Scan to make Your Contribution

Topics

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

Related Articles

Popular Categories

error: Content is protected !!