ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ ಅದಾನಿ ಎಂಟರ್ ಪ್ರೈಸೆಸ್‌ಗೆ ಅನುಕೂಲವಾಗಲು ಒಟ್ಟು ರಿಯಾಯಿತಿ ಮೌಲ್ಯವನ್ನು ಪರಿಚಯಿಸಿರುವ ಬಿ ಸ್ಮೈಲ್ ಸಂಸ್ಥೆಯು, ಈ ಯೋಜನೆಯಿಂದ ಅದಾನಿ ಎಂಟರ್ ಪ್ರೈಸೆಸ್ ರಿಯಲ್ ಎಸ್ಟೇಟ್ ನಿಂದ ಗಳಿಸಲಿರುವ ಆದಾಯದ ಅಂಶವನ್ನೇ ಮುಚ್ಚಿಟ್ಟಿದೆ! ಅಲ್ಲದೇ ಈ ಯೋಜನೆಯನ್ನು ಬೂಟ್ ಮಾದರಿಯಲ್ಲಿ ಮಾರ್ಪಡಿಸಿದೆಯಾದರೂ ಇದರಲ್ಲಿಯೂ ಒಳ ಸಂಚು ಅಡಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಾಗರೀಕರು, ಪರಿಸರವಾದಿಗಳ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದರೂ ಸಹ ಸರ್ಕಾರವು ಹಠಕ್ಕೆ ಬಿದ್ದಂತೆ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವ ಬೆನ್ನಲ್ಲೇ ಒಟ್ಟು ರಿಯಾಯಿತಿ ಮೌಲ್ಯ (ಟಿಸಿವಿ) ಹೆಸರಿನಲ್ಲಿ ಅದಾನಿ ಎಂಟರ್ ಪ್ರೈಸೆಸ್‌ನ ಜೇಬಿಗೆ ರಿಯಲ್ ಎಸ್ಟೇಟ್ ಆದಾಯ ಸೇರಲಿದೆ ಎಂಬ ವಾಸ್ತವಾಂಶವನ್ನೇ ಮುಚ್ಚಿಡಲಾಗಿದೆ ಎಂಬ ಮಾತುಗಳೂ ಸಹ ನಗರ ತಜ್ಞರ ವಲಯದಿಂದ ಕೇಳಿ ಬಂದಿವೆ.
ಈ ಯೋಜನೆ ಅನುಷ್ಠಾನಕ್ಕೆ ಎಲ್ 1 ಬಿಡ್‌ದಾರನಾಗಿ ಹೊರಹೊಮ್ಮಿರುವ ಅದಾನಿ ಎಂಟರ್ ಪ್ರೈಸೆಸ್ 30 ವರ್ಷಗಳ ಬದಲಿಗೆ ಇನ್ನೂ 10 ವರ್ಷ ಅಂದರೇ ಒಟ್ಟಾರೆ 40 ವರ್ಷದ ಗುತ್ತಿಗೆ ಅವಧಿ ವಿಸ್ತರಿಸಿದೆ. ಇದರ ಪ್ರಕಾರ ರಿಯಲ್ ಎಸ್ಟೇಟ್ ಮೂಲಕವೇ ಅದಾನಿ ಎಂಟರ್ ಪ್ರೈಸೆಸ್ 30,000 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಬಹುದು ಎಂದು ನಗರ ತಜ್ಞರು ಅಂದಾಜಿಸಿದ್ದಾರೆ. ವಿಶೇಷವೆಂದರೇ ರಿಯಲ್ ಎಸ್ಟೇಟ್ ಮೂಲಕ ಗಳಿಸುವ ಆದಾಯವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಮಾರ್ಪಡಿಸಿರುವ ಬೂಟ್ ಮಾದರಿ ಹಿಂದಿರುವ ಕರಾಮತ್ತೇನು?
ರಿಯಾಯಿತಿ ಅವಧಿಯು ನಿಗದಿತ ಅವಧಿಯಲ್ಲ. 30 ವರ್ಷಗಳ ಆರಂಭಿಕ ರಿಯಾಯಿತಿ ಅವಧಿಯನ್ನು 40 ವರ್ಷಗಳವರೆಗೆ ವಿಸ್ತರಿಸಲಿದೆ. ರಿಯಾಯಿತಿದಾರನು ತನ್ನ ಉಲ್ಲೇಖಿತ ಒಟ್ಟು ರಿಯಾಯಿತಿ ಮೌಲ್ಯ (ಟಿಸಿವಿ)ಯನ್ನು ಮರು ಪಡೆಯಲು ಇದು ಸಹಾಯ ಮಾಡಲಿದೆ. ಇದೊಂದು ಡೈನಾಮಿಕ್ ರಿಯಾಯಿತಿ ಅವಧಿ ಕಲ್ಪನೆ ಒಳಗೊಂಡಿದೆ. ಹೀಗಾಗಿಯೇ ರಿಯಾಯಿತಿದಾರನಿಗೆ ಸಂಚಾರ ದಟ್ಟಣೆಗೆ ಸಂಬಂಧಿಸಿದ ರಿಸ್ಕ್ ಇರುವುದಿಲ್ಲ. ತುಂಬಾ ಮುಖ್ಯವಾಗಿ ರಿಯಾಯಿತಿದಾರನಾದ ಅದಾನಿ ಎಂಟರ್ ಪ್ರೈಸೆಸ್‌ಗೆ 40 ವರ್ಷಗಳ ಕಾಲ ಬಿಟ್ಟಿಯಾಗಿ ರಿಯಲ್ ಎಸ್ಟೇಟ್ ಭಾಗ್ಯ ಕರುಣಿಸಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವಾಸ್ತವದಲ್ಲಿ ಟಿಸಿವಿ ಅಥವಾ ರಿಯಾಯಿತಿ ಮೌಲ್ಯವೆಂದರೇನು?
ಒಟ್ಟು ರಿಯಾಯಿತಿ ಮೌಲ್ಯ ಎಂದರೇ ಭವಿಷ್ಯದ ಟೋಲ್ ಆದಾಯದ ಪ್ರಸ್ತುತ ಮೌಲ್ಯ ಎಂದೇ ಪರಿಗಣಿಸಬೇಕು. ಮಾರ್ಪಡಿಸಿದ ಬೂಟ್ ಮಾದರಿಯಲ್ಲಿ ನಡೆಸಿರುವ ಟೆಂಡರ್ ಪ್ರಕ್ರಿಯೆ ಪ್ರಕಾರ ಕನಿಷ್ಟ ಒಟ್ಟು ರಿಯಾಯಿತಿ ಮೌಲ್ಯವನ್ನು ಉಲ್ಲೇಖಿಸಿರುವ ಬಿಡ್‌ದಾರನಿಗೆ ಈ ಯೋಜನೆ ನೀಡಲಿದೆ. ಬಿಡ್‌ದಾರರು ಸರ್ಕಾರದಿಂದಲೇ ಶೇ.40ರಷ್ಟು ವಿಜಿಎಫ್ ಪಡೆಯಲಿದ್ದಾರೆ. ಉಳಿದ ಹೂಡಿಕೆ ತಂದು ಸುರಂಗ ರಸ್ತೆ ನಿರ್ಮಾಣ ಮಾಡಬೇಕು. ಸುರಂಗ ರಸ್ತೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ರಿಯಾಯಿತಿ ಅವಧಿಯಲ್ಲಿ ಭರಿಸಬೇಕು. ಮತ್ತು ಅದರ ಈಕ್ವಿಟಿ ಕೊಡುಗೆ ಮೇಲೆ ಶೇ. 14ರಷ್ಟು ಲಾಭವನ್ನು ಒದಗಿಸುವ ಒಟ್ಟು ರಿಯಾಯಿತಿ ಮೌಲ್ಯವನ್ನು ಉಲ್ಲೇಖಿಸಬೇಕು.
ಒಟ್ಟು ರಿಯಾಯಿತಿ ಮೌಲ್ಯ ಎಷ್ಟು ಸಮಂಜಸ?
ಅದಾನಿ ಎಂಟರ್ ಪ್ರೈಸೆಸ್‌ಗೆ ನೀಡಲಿರುವ ಒಟ್ಟು ರಿಯಾಯಿತಿ ಮೌಲ್ಯವು ಎಷ್ಟರಮಟ್ಟಿಗೆ ಸಮಂಜಸವಾಗಿವೆ ಎಂಬ ಬಗ್ಗೆಯೂ ಹಲವು ಪ್ರಶ್ನೆಗಳು ಉದ್ಭವವಾಗಿವೆ. ಅದೇ ರೀತಿಯ ಈ ಒಟ್ಟು ರಿಯಾಯಿತಿ ಮೌಲ್ಯದ ಮಾದರಿಯಲ್ಲಿರುವ ರಿಯಲ್ ಎಸ್ಟೇಟ್ ಆದಾಯ ಯಾರ ಜೇಬಿಗೆ ಸೇರಲಿದೆ ಎಂಬ ಪ್ರಶ್ನೆಯೂ ಇದೆ. ಆದರೆ ಇಂತಹ ಮುಖ್ಯ ಪ್ರಶ್ನೆಯನ್ನೇ ನಗರಾಭಿವೃದ್ಧಿ ಮತ್ತು ಬಿ ಸ್ಮೈಲ್ ಸಂಸ್ಥೆಯು ಟಿಸಿವಿ ಲೆಕ್ಕಚಾರದಿಂದಲೇ ಹೊರಗಿಟ್ಟಿದೆ. ಈ ಎರಡೂ ಸಂಸ್ಥೆಗಳ ನಡೆಯೇ ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಹಾಗೆಯೇ ರಿಯಲ್ ಎಸ್ಟೇಟ್ ಆದಾಯವನ್ನು ಟೋಲ್ ಆದಾಯವೆಂದು ಪರಿಗಣಿಸುವುದಿಲ್ಲ. ಮತ್ತು ರಿಯಾಯಿತಿದಾರನು ರಿಯಲ್ ಎಸ್ಟೇಟ್‌ನ ಸಂಪೂರ್ಣ ಆದಾಯದ ಹಕ್ಕನ್ನು ಪಡೆಯಲಿದ್ದಾನೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿನ 5 ಸುರಂಗ ನಿಲ್ದಾಣಗಳನ್ನು 5 ಎಫ್‌ಎಸ್‌ಐನಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಹೀಗಾಗಿ ಅದಾನಿ ಎಂಟರ್ ಪ್ರೈಸೆಸ್‌ಗೆ ಟೋಲ್ ಆದಾಯಕ್ಕಿಂತಲೂ ಹೆಚ್ಚಿನ ಆದಾಯವು ರಿಯಲ್ ಎಸ್ಟೇಟ್ ತಂದುಕೊಡಲಿದೆ. ಆದರೆ ಬಿ ಸ್ಮೈಲ್ ಮತ್ತು ನಗರಾಭಿವೃದ್ಧಿ ಇಲಾಖೆಯು ಎಲ್ಲಿಯೂ ತಮ್ಮ ಸಭೆಗಳ ನಡವಳಿ ಹಾಗೂ ಸಚಿವ ಸಂಪುಟದ ಪ್ರಸ್ತಾವನೆಯಲ್ಲಿನ ಆರ್ಥಿಕ ಪರಿಣಾಮಗಳಲ್ಲಿ ಉಲ್ಲೇಖಿಸಿಯೇ ಇಲ್ಲ.
ಬಿಡ್ಡರ್‍ಗಳು 30 ವರ್ಷಗಳ ಅವಧಿಯ ಮೌಲ್ಯದ ಟೋಲ್ ಆದಾಯವನ್ನು ಉಲ್ಲೇಖಿಸಲಿದ್ದಾರೆ ಎಂದು ನಿರೀಕ್ಷಿಸಿತ್ತು. ಆದರೆ ಬಿಡ್‌ದಾರ ಅದಾನಿ ಎಂಟರ್ ಪ್ರೈಸೆಸ್ ತನ್ನ ಖಾಸಗಿ ಲಾಭ ಹೆಚ್ಚಿಸಿಕೊಳ್ಳಲು ಈ ಒಟ್ಟು ರಿಯಾಯಿತಿ ಮೌಲ್ಯವನ್ನು ಬಳಸಿಕೊಂಡಿದೆ. ಬಿಡ್ಡರ್‍ಗಳು ತುಸು ಹೆಚ್ಚೇ ಒಟ್ಟು ರಿಯಾಯಿತಿ ಮೌಲ್ಯವನ್ನು ನಮೂದಿಸಿದ್ದಾರೆ. ಇದು ರಿಯಾಯಿತಿಯನ್ನು 40 ವರ್ಷಗಳವರೆಗೆ ವಿಸ್ತರಿಸುವ ತಂತ್ರಗಾರಿಕೆಯೇ ಹೊರತು ಬೇರೇನಲ್ಲ. ಮೂಲತಃ ಬಿಡ್‌ದಾರರು ಲಾಭದಾಯಕ ಮತ್ತು ಟಿಸಿವಿ ಗಣನೆಗೆ ಬಾರದ ರಿಯಲ್ ಎಸ್ಟೇಟ್ ಆದಾಯವನ್ನು 40 ವರ್ಷಗಳವರೆಗೆ ಪಡೆಯಲು ಸಂಚು ಹೂಡಿದ್ದಾರೆ ಎನ್ನುತ್ತಾರೆ ನಗರ ತಜ್ಞ ಸತ್ಯ ಅವರು.
ಹೈಜಾಕ್‌ಗೆ ಅವಕಾಶ ಮಾಡಿಕೊಟ್ಟಿದೆಯೇ ಸರ್ಕಾರ?
ಅದೇ ರೀತಿ ಈ ರಿಯಾಯಿತಿ ಒಪ್ಪಂದವನ್ನು 40 ವರ್ಷಗಳವರೆಗೆ ಖಚಿತಪಡಿಸಿಕೊಳ್ಳಲು ಟಿಸಿವಿಯನ್ನೇ ಹೈಜಾಕ್ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಸಲಿಗೆ ಬಿಡ್ಡರ್ ಡಿಪಿಆರ್‍ನ ಶೇ. 2-3ಕ್ಕೆ ವಿರುದ್ಧವಾಗಿ ಶೇ. 6-7ರಷ್ಟು ವಾರ್ಷಿಕ ಸಂಚಾರ ದಟ್ಟಣೆಯನ್ನು ಊಹಿಸಿದ್ದಾರೆ. ಬಿಡ್‌ದಾರ ಅಂದಾಜಿಸಿರುವ ಸಂಚಾರ ದಟ್ಟಣೆಯು ಕಾರ್ಯ ಸಾಧ್ಯತೆ ವರದಿ (ಡಿಪಿಆರ್)ಗಿಂತಲೂ ಸುಮಾರು ಶೇ. 96ರಷ್ಟು ಹೆಚ್ಚಾಗಿದೆ. ಅಂದರೇ 30 ವರ್ಷಗಳಲ್ಲಿ ಒಟ್ಟು ರಿಯಾಯಿತಿ ಮೌಲ್ಯವನ್ನು ರಿಯಾಯಿತಿದಾರ ಮರು ಪಡೆಯುವುದು ಅಸಾಧ್ಯ ಎನ್ನುತ್ತಾರೆ ಸತ್ಯ ಅವರು.
ಒಟ್ಟು ರಿಯಾಯಿತಿ ಮೌಲ್ಯ ಸಮರ್ಥನೀಯವೇ?
ಬಂಡವಾಳ ವೆಚ್ಚ,, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳರೆಡನ್ನೂ ಹೆಚ್ಚಿಸುವ ಮೂಲಕ ಒಟ್ಟು ರಿಯಾಯಿತಿ ಮೌಲ್ಯದಲ್ಲಿನ ಹೆಚ್ಚಳವನ್ನೂ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ. ವಿಪರ್ಯಾಸವೆಂದರೇ ಬಂಡವಾಳ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚದ ಏರಿಕೆಯನ್ನು ಪ್ರಶ್ನಿಸಬೇಕಿದ್ದ ಬಿ ಸ್ಮೈಲ್, ತನ್ನದೇ ಟೆಂಡರ್/ಡಿಪಿಆರ್ ಅಂದಾಜನ್ನು ಬಿಡ್ಡರ್‍ನ ಅಂದಾಜಿಗೆ ಹೊಂದಿಸಿದೆ. ಮತ್ತು ವೆಚ್ಚವನ್ನು ಹೆಚ್ಚಿಸಲು ನೀಡಿರುವ ಕಾರಣಗಳೂ ಸಹ ಸಮರ್ಥನೀಯವಾಗಿಲ್ಲ. ಬಂಡವಾಳ ವೆಚ್ಚಗಳನ್ನು ಶೇ.40ರಷ್ಟು ಹೆಚ್ಚಿಸಲಾಗಿದೆ. ರೂಪಾಯಿ ಅಪಮೌಲ್ಯೀಕರಣ ಮತ್ತು ಸುರಂಗ ಕೊರೆಯುವ ಯಂತ್ರದ ಸವಕಳಿಕೆ ಮೌಲ್ಯವನ್ನ ಶೇ.50ರಿಂದ 30ಕ್ಕಿಳಿಸಿರುವುದೇ ಹಾಸ್ಯಾಸ್ಪದವಾಗಿದೆ.
ಮೆಟ್ರೋ ವಿದ್ಯುತ್ ವೆಚ್ಚಕ್ಕಿಂತಲೂ ಹೆಚ್ಚಿದ ಸುರಂಗ ರಸ್ತೆ ವಿದ್ಯುತ್ ವೆಚ್ಚ?
ಇದಲ್ಲದೇ ಕಾರ್ಯಾಚರಣೆ, ನಿರ್ವಹಣೆ ವೆಚ್ಚಗಳನ್ನು ಸುಮಾರು ಶೇ. 300ರಷ್ಟನ್ನು ಸರ್ಕಾರವೇ ಹೆಚ್ಚಿಸಿದೆ. ಮತ್ತು ಇದನ್ನು ವಿದ್ಯುತ್ ವೆಚ್ಚದಲ್ಲಿಯೂ ಶೇ.6ರಷ್ಟು ಏರಿಸಿದೆ. ಮತ್ತೊಂದು ಹಾಸ್ಯಾಸ್ಪದ ಸಂಗತಿ ಎಂದರೇ ಸುರಂಗ ರಸ್ತೆ ವಿದ್ಯುತ್ ವೆಚ್ಚಗಳು ಮೆಟ್ರೋದ ವಿದ್ಯುತ್ ವೆಚ್ಚಕ್ಕಿಂತಲೂ ಹೆಚ್ಚಿದೆ. ಇದೊಂದು ಅವೈಜ್ಞಾನಿಕವಾದ ಲೆಕ್ಕಾಚಾರವಾಗಿದೆ ಎಂದು ನಗರ ತಜ್ಞರು ಆರೋಪಿಸುತ್ತಾರೆ.
ಮೆಟ್ರೋದ 2024-25ನೇ ಸಾಲಿನಲ್ಲಿ ವಿದ್ಯುತ್ ವೆಚ್ಚವೆಂದು 121 ಕೋಟಿ ರು ಖರ್ಚಾಗಿದೆ. ಆದರೆ ಬಿ ಸ್ಮೈಲ್ ಪ್ರಕಾರ ಸುರಂಗ ರಸ್ತೆಯಲ್ಲಿನ ವಿದ್ಯುತ್ ಖರ್ಚು 2031ರಲ್ಲಿ 164 ಕೋಟಿ ರು ಎಂದಿದೆ. ಬಿ ಸ್ಮೈಲ್ ಹಠಾತ್ತಾಗಿ ವಿದ್ಯುತ್ ಖರ್ಚನ್ನು ತನ್ನ ಡಿಪಿಆರ್‍ನಲ್ಲಿ ಏರಿಸಿದ್ದಕ್ಕೆ ಕಾರಣಗಳೇನು ಎಂಬ ಬಗ್ಗೆ ಯಾವುದೇ ಸೂಕ್ತ ಸಮರ್ಥನೆಯನ್ನೂ ನೀಡಿಲ್ಲ. ಈ ಸಂಗತಿಯು ಸಹ ನಗರ ತಜ್ಞರ ಆಕ್ಷೇಪಕ್ಕೆ ಮೂಲ ಕಾರಣವಾಗಿದೆ.
ಈ ಟೆಂಡರ್‍ನಲ್ಲಿ ಅದಾನಿ ಎಂಟರ್ ಪ್ರೈಸೆಸ್ ಎಲ್ 1 ಬಿಡ್‌ದಾರನಾಗಿ ಹೊರಹೊಮ್ಮಿತ್ತು. ಪ್ಯಾಕೇಜ್-1ಮತ್ತು ಪ್ಯಾಕೇಜ್-2 ಕಾಮಗಾರಿಗಳ ಎಲ್-1ಬಿಡ್ಡುದಾರರಾದ ಅದಾನಿ ಎಂಟರ್ ಪ್ರೈಸೆಸ್ ಕ್ರಮವಾಗಿ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” ರೂ 10867.50 ಕೋಟಿಗಳು ಮತ್ತು ರೂ 11400.40 ಕೋಟಿಗಳನ್ನು ನಮೂದಿಸಿತ್ತು. ಈ ಮೊತ್ತವು ಟೆಂಡರ್‌ಗಿಟ್ಟ ಒಟ್ಟು ರಿಯಾಯಿತಿ ಮೌಲ್ಯಕ್ಕೆ ಹೋಲಿಸಿದಾಗ ಕ್ರಮವಾಗಿ ಶೇ 98.16 ಮತ್ತು ಶೇ 74.33 ರಷ್ಟಿತ್ತು.
ಮತ್ತೊಂದು ವಿಶೇಷವೆಂದರೇ ಅದಾನಿ ಎಂಟರ್ ಪ್ರೈಸೆಸ್‌ಗೆ ರಿಯಲ್ ಎಸ್ಟೇಟ್ ವಿನಾಯಿತಿಯಷ್ಟನ್ನೇ ನೀಡುತ್ತಿಲ್ಲ. ಬದಲಿಗೆ ಯಾವುದೇ ಪಕ್ಕದ ರಸ್ತೆಗಳನ್ನೂ ಮುಂದಿನ ಟನಲ್ ರಸ್ತೆಗೆ ಸಂಪರ್ಕ ಮಾಡುವ ಸಾಧ್ಯತೆ ಕುರಿತೂ ಪ್ರಸ್ತಾಪಿಸಿದೆ.
ರಿಯಾಯಿತಿ ಮೌಲ್ಯ ಹೆಚ್ಚಳ ಮಾಡಿದ್ದ ಅದಾನಿ ಎಂಟರ್ ಪ್ರೈಸೆಸ್
ಅದಾನಿ ಎಂಟರ್ ಪ್ರೈಸೆಸ್ ಸಲ್ಲಿಸಿದ್ದ ಒಟ್ಟು ರಿಯಾಯಿತಿ ಮೌಲ್ಯವು ಹೆಚ್ಚಾಗಿತ್ತು. ಇದನ್ನು ಮರು ವಿಶ್ಲೇಷಣೆ ಮಾಡಲು ಕೋರಿತ್ತು. ಈಗಾಗಲೇ ತಯಾರಿಸಲಾದ ಅಂದಾಜು ಪಟ್ಟಿಯಲ್ಲಿ “ಸುರಂಗ ಮಾರ್ಗ ಕೊರೆಯುವ ಯಂತ್ರ (Tunnel Boring Machine)” ದರದ ಸವಕಳಿ ಮೊತ್ತವನ್ನು (Salvage Value) ಅನ್ನು ಶೇ.50ರಷ್ಟು ಮೀಸಲಿರಿಸಿದೆ. ಇದು ಮಾರುಕಟ್ಟೆಯ ಅನುಭವಕ್ಕೆ ವಾಸ್ತವಿಕವಲ್ಲವೆಂದು ಅಂದಾಜು ಪಟ್ಟಿಯನ್ನು ಐಆರ್‍ಸಿ 136 ರಂತೆ ತಯಾರಿಸಿದೆ.
ಈ ಐಆರ್‍ಸಿ 136 ರಂತೆ ತಯಾರಿಸಿರುವ ಅಂದಾಜು ಪಟ್ಟಿಯು ಮೇಲ್ಮೈ ರಸ್ತೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ (At-grade National Highways) ಗೆ ಸಂಬಂಧಿಸಿತ್ತು. ಈ ಅಂದಾಜು ಪಟ್ಟಿಯು “ಸುರಂಗ ಮಾರ್ಗದ ಧೀರ್ಘಾವಧಿ ಕಾರ್ಯಚರಣೆ ಮತ್ತು ನಿರ್ವಹಣೆಗೆ ಅನ್ವಯಿಸುವುದಿಲ್ಲ” ಎಂದು ತಿಳಿಸಿತ್ತು. ಡಿ.ಪಿ.ಆರ್ ಅಂದಾಜು ಪಟ್ಟಿ ಮತ್ತು ರಿಯಾಯಿತದಾರರು ನಮೂದಿಸಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ದರಗಳಲ್ಲಿ ಶೇ.277.26ರಷ್ಟು ವ್ಯತ್ಯಾಸವಿದೆ ಎಂದು ಸಮರ್ಥಿಸಿಕೊಂಡಿತ್ತು. ಅಲ್ಲದೇ ಅದಾನಿ ಎಂಟರ್ ಪ್ರೈಸೆಸ್ ಈ ಬಗ್ಗೆ ಸವಿವರವಾದ ವಿಶ್ಲೇಷಣೆಗಳನ್ನು ಒದಗಿಸಿತ್ತು.
ಉತ್ತರ-ದಕ್ಷಿಣ ವಾಹನ ಸುರಂಗ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿಯೊಂದಿಗೆ ಆರ್ಥಿಕ ಬಿಡ್ಡಿನ ಪರಿಶೀಲನೆ ನಡೆಸಲು ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲು ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ (ಸರ್ಕಾರದ ಪತ್ರ ಸಂಖ್ಯೆ: ನಅಇ 34 ಎಂಎನ್‌ವೈ 2024 (ಇ) ದಿ:26.02.2026) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿವೃತ್ತ ಮುಖ್ಯ ಅಭಿಯಂತರರುಗಳು, ನಮ್ಮ ಮೆಟ್ರೋ ಸಂಸ್ಥೆಯ ಮುಖ್ಯ ಅಭಿಯಂತರರು ಅಥವಾ ಕೊಂಕಣ್ ರೈಲ್ವೆಯ ನಿವೃತ್ತ ಮುಖ್ಯ ಅಭಿಯಂತರರು ಹಾಗೂ ಹಣಕಾಸು ತಜ್ಞರನ್ನೊಳಗೊಂಡ, ಒಂದು ತಾಂತ್ರಿಕ ಮತ್ತು ಆರ್ಥಿಕ ಸಮಿತಿಯನ್ನು ಬಿ ಸ್ಮೈಲ್ ಹಂತದಲ್ಲಿ ರಚಿಸಲಾಗಿತ್ತು.
ಈ ಸಮಿತಿಯ ಶಿಫಾರಸ್ಸಿನ ಪ್ರಕಾರ ಅದಾನಿ ಎಂಟರ್ ಪ್ರೈಸೆಸ್‌ನೊಂದಿಗೆ ದರ ಸಂಧಾನ ನಡೆಸಿತ್ತು. ಪ್ಯಾಕೇಜ್-1ಮತ್ತು ಪ್ಯಾಕೇಜ್-2ಕಾಮಗಾರಿಗಳಿಗೆ ಅಂತಿಮ “ಒಟ್ಟು ರಿಯಾಯಿತಿ ಮೌಲ್ಯ (Total Concession Value (TCV))” ಅನ್ನು ಕ್ರಮವಾಗಿ ರೂ 10, 737.00 ಕೋಟಿಗಳು ಮತ್ತು ರೂ 11, 263.50 ಕೋಟಿಗಳನ್ನು ಸಲ್ಲಿಸಿತ್ತು. ಟೆಂಡರ್‌ಗಿಟ್ಟ ಒಟ್ಟು ರಿಯಾಯಿತಿ ಮೌಲ್ಯಕ್ಕೆ ಹೋಲಿಸಿದಾಗ ಕ್ರಮವಾಗಿ ಶೇ 95.77 ಮತ್ತು ಶೇ 72.24 ಆಗಿತ್ತು.
ಯೋಜನೆ ಸಮಾಲೋಚಕರಗಳ ಹಾಗೂ ತಜ್ಞರ ಸಮಿತಿ ವರದಿ ಮತ್ತು ಬಿ-ಸ್ಮೈಲ್5 ನೇ ಮಂಡಳಿ ಸಭೆಯ ತೀರ್ಮಾನದ ಅನುಸಾರ ಈ ಎರಡು ಪ್ಯಾಕೇಜುಗಳಿಗೆ ಸದ್ಯದ ದರಗಳು ಹಾಗೂ ಅಂದಾಜು ಪಟ್ಟಿಯನ್ನು ಸರಿಪಡಿಸಿಕೊಂಡು ದರಗಳನ್ನು ವಿಶ್ಲೇಷಿಸಿತ್ತು. 2026ರ ಮೇ 4ರಂದು ಚಾಲ್ತಿಯಲ್ಲಿದ್ದ ಮಾರುಕಟ್ಟೆ ದರಗಳ ಅನ್ವಯ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿತ್ತು.
10, 737.00 ಕೋಟಿಗಳ ಒಟ್ಟು ರಿಯಾಯಿತಿ ಮೌಲ್ಯ ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಹೋಲಿಸಿತ್ತು. ಇದರ ಪ್ರಕಾರ ಶೇ 95.77 ಹೆಚ್ಚು, ಪರಿಷ್ಕೃತ ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಶೇ 40 ಮತ್ತು ಶೇ 16 ರಷ್ಟು ಇಐಆರ್‍ಆರ್ ರಂತೆ ಶೇ 24 ಹೆಚ್ಚು ಇತ್ತು.
ಅದೇ ರೀತಿ 11,263. 50 ಕೋಟಿಗಳ ಒಟ್ಟು ರಿಯಾಯಿತಿ ಮೌಲ್ಯ, ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಹೋಲಿಸಿತ್ತು. ಇದು 2026ರ ಮೇ 4ರ ಮಾರುಕಟ್ಟೆ ದರಗಳಿಗೆ ಶೇ 72.24 ಹೆಚ್ಚು ಮತ್ತು ಪರಿಷ್ಕೃತ ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಶೇ 34.82 ಮತ್ತು ಶೇ 16 ರಷ್ಟು EIRR ರಂತೆ ಶೇ 24 ಹೆಚ್ಚು ಇತ್ತು. ಈ ಮೊತ್ತವನ್ನು ನಮೂದಿಸಿದ್ದ ಟೆಂಡರ್‍ಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು.
ಈ ಯೋಜನೆ ಕಾಮಗಾರಿ ಪಡೆದುಕೊಂಡಿರುವ ಎಲ್ 1 ಬಿಡ್‌ದಾರರಾದ ಅದಾನಿ ಎಂಟರ್ ಪ್ರೈಸೆಸ್‌ಗೆ ಗುತ್ತಿಗೆ ಅವಧಿಯನ್ನೇ 10 ವರ್ಷಕ್ಕೆ ವಿಸ್ತರಿಸಲು ಪ್ರಸ್ತಾವಿಸಿದೆ. ವಾಹನ ಸಂಚಾರ ದಟ್ಟಣೆಯು ಹೆಚ್ಚುವರಿಯಾದ್ದಲ್ಲಿ 30 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಇನ್ನೂ 10 ವರ್ಷ ಅವಧಿಗೆ ವಿಸ್ತರಣೆಗೆ ಪ್ರಸ್ತಾಪಿಸಿದೆ. ಅದು ಹೇಗೆಂದರೇ ಒಂದು ವೇಳೆ ಸಂಚಾರ ದಟ್ಟಣೆಯು ಕಡಿಮೆ ಆದರೂ ಸಹ ಗರಿಷ್ಠ 40 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಸಿಮೀತಗೊಳಿಸುವ ಮಾದರಿ ಪರಿಚಯಿಸಲಿದೆ.
ಅಲ್ಲದೇ ಪ್ರಸ್ತುತ ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿ ಮತ್ತು ಜಾಗತಿಕ ಮಟ್ಟದಲ್ಲಿನ ಪ್ರೈಸ್ ಇಂಡೆಕ್ಸ್‌ನಲ್ಲಿ ಏರಿಕೆ, ಯುರೋ ದರ ಏರಿಕೆ ಹಾಗೂ ಇತರೆ ಬೆಲೆಗಳು ಏರಿಕೆಯಾಗಿರುವ ಕಾರಣ ಮರು ಟೆಂಡರ್ ಕರೆಯದಿರಲು ಇಲಾಖೆಯು ನಿರ್ಧರಿಸಿದೆ. ಮರು ಟೆಂಡರ್ ಕರೆದಲ್ಲಿ ಅಂದಾಜು ಮೊತ್ತವು ಪುನಃ ಪರಿಷ್ಕರಣೆಯಾಗಲಿದೆ. ಇದರಿಂದ ಯೋಜನಾ ಮೊತ್ತವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರತಿಪಾದಿಸಲು ಮುಂದಾಗಿದೆ.
ಹಾಗೆಯೇ ದರಗಳನ್ನು ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಪರಿಷ್ಕರಣೆ ಮತ್ತು ಕೆಲವು ಅಂಶಗಳನ್ನು ಮಾರ್ಪಾಟು ಮಾಡಬೇಕಾಗಿದೆ. ಹೀಗಾಗಿ ಅಂದಾಜು ವೆಚ್ಚವು ಸುಮಾರು ಶೇ.40ರಿಂದ 45ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಂತದಲ್ಲಿ ಮರು ಟೆಂಡರ್ ಆಗುವ ಸಂದರ್ಭದಲ್ಲಿ ವಿಜಿಎಫ್ ಮೊತ್ತವೂ ಸಹ ಅನುಗುಣವಾಗಿ ಹೆಚ್ಚಾಗಲಿದೆ. ಇದು ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬ ಕಾರಣವನ್ನು ಮುಂದಿರಿಸಿರುವ ಇಲಾಖೆಯು ಮರು ಟೆಂಡರ್ ಕರೆಯದೇ ಇರುವುದಕ್ಕೆ ಸಮರ್ಥನೆ ನೀಡಿದೆ. ಹೀಗಾಗಿ ವಿಜಿಎಫ್ ಮೊತ್ತದ ಹೆಚ್ಚಳ ಮತ್ತು ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಲು ಒಟ್ಟು ರಿಯಾಯಿತಿ ಮೌಲ್ಯದ ಹೆಚ್ಚಳವನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಗ್ರೇಟರ್‌ಬೆಂಗಳೂರು ಪ್ರದೇಶ(ಹಿಂದಿನ ಬಿಬಿಎಂಪಿ) ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್.ಎಸ್.ಆರ್‌ಲೇಔಟ್‌ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಪಿಪಿಪಿ ಯೋಜನೆಗಳ 34ನೇ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿಯ ಸಭೆಯು 2025ರ ಆಗಸ್ಟ್ 6ರಂದೇ ಅನುಮೋದನೆ ನೀಡಿದೆ.
ಈ ಯೋಜನೆಗೆ ತಯಾರಿಸಲಾಗಿದ್ದ ಡಿಪಿಆರ್‌ಹಾಗೂ ಅಂದಾಜು ಪಟ್ಟಿಗಳಿಗೆ ಅನುಮೋದನೆ ಕೋರಿ (ಪ್ರಕರಣ ಸಂಖ್ಯೆ: ಸಿ:357/2025) ಸಚಿವ ಸಂಪುಟದ ಮುಂದೆ ಮಂಡಿಸಿತ್ತು. 2025ರ ಜೂನ್ 5ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು.
ಈ ನಿರ್ಣಯದ ಪ್ರಕಾರ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್.ಎಸ್.ಆರ್ ಲೇಔಟ್ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ತ್ರಿಪಥದ ಸುರಂಗ ಮಾರ್ಗ ಯೋಜನೆಗೆ ಅಂದಾಜು ಮೊತ್ತ ರೂ.17,780.13 ಕೋಟಿಗಳಿಗೆ (ಸರ್ಕಾರದ ಆದೇಶ ಸಂಖ್ಯೆ: ನಅಇ 82 ಎಂಎನ್‌ವೈ 2025 (ಇ), ದಿನಾಂಕ: 09-06-2025) ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದರಲ್ಲಿ ಪ್ಯಾಕೇಜ್-1 (ಉತ್ತರ) ರೂ 8814.78 ಕೋಟಿ ರು (ಉದ್ದ 8.75km) ಮತ್ತು ಪ್ಯಾಕೇಜ್-2 (ದಕ್ಷಿಣ) ರೂ 8, 965.35 ಕೋಟಿಗಳು (ಉದ್ದ 8.00km) ಎಂದು ಎರಡು ಪ್ಯಾಕೇಜ್‌ಗಳ ಅಡಿಯಲ್ಲಿ ಪ್ರತ್ಯೇಕವಾಗಿಸಿತ್ತು. ಇದು ಶೇ.40ರಷ್ಟರ ವಿ.ಜಿ.ಎಫ್ ಆಧಾರದಲ್ಲಿ ಸುಧಾರಿತ ಬಿ.ಓ.ಓ.ಟಿ (BOOT) ಮಾದರಿಯಲ್ಲಿ Global Tender ಆಹ್ವಾನಿಸಿ ಅನುಷ್ಠಾನಗೊಳಿಸಲು ಆದೇಶಿಸಿತ್ತು.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್‌ನ ವ್ಯವಸ್ಥಾಪಕ ನಿರ್ದೇಶಕರು, ವಾಹನ ಸುರಂಗ ಮಾರ್ಗ ನಿರ್ಮಿಸುವ ಸಂಬಂಧ ನೂತನ ಸೇರ್ಪಡೆ/ ಮಾರ್ಪಾಟು ಹೊಂದಿದ ಟೆಂಡರ್ ದಸ್ತಾವೇಜುಗಳಾದ ಆರ್.ಎಫ್.ಪಿ. ದಸ್ತಾವೇಜು, ರಿಯಾಯತಿ ಕರಾರು ಒಪ್ಪಂದ ಮತ್ತು ಷೆಡ್ಯೂಲ್ ದಸ್ತಾವೇಜುಗಳನ್ನು 2025ರ ಜುಲೈ 11ರಂದು ಪ್ರಸ್ತಾಪಿಸಿದ್ದರು.
ಈ ಮಾರ್ಪಾಡುಗಳನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಟಿಬಿಎಂ ಕಾರ್ಯಾಚರಣೆಗೆ ತಾಂತ್ರಿಕವಾಗಿ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಭೂ ಸ್ವಾಧೀನವನ್ನು ಇಂಟರ್ ಮೋಡಲ್ ಹಬ್‌ಗಳಲ್ಲಿ ಕೈಗೊಳ್ಳಲಾಗಿಲ್ಲ. ಜೊತೆಗೆ ಸ್ಪರ್ಧಾತ್ಮಕ ಹಾಗೂ ಅರ್ಹ ಬಿಡ್‌ಗಳನ್ನು ಉತ್ತೇಜಿಸುವ ಉದ್ದೇಶದಿಂದ ಘೋಷಿತೆಲ್ಲಾ ಸಹಭಾಗಿಗಳು, ಒಕ್ಕೂಟ (ಕನ್ಸೊರ್ಟಿಯಂ) ಸದಸ್ಯರ ಹಣಕಾಸು ಸಾಮರ್ಥ್ಯ ಮತ್ತು ತಾಂತ್ರಿಕ ಅರ್ಹತೆಗಳ ಕಟ್ಟುನಿಟ್ಟಿನ ಪರಿಶೀಲನೆಗೆ ರೂಪಿಸಿರುವ ವಿಶೇಷ ವ್ಯವಸ್ಥೆಯ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು,’ ಎಂದು ತಿಳಿಸಿ ಅನುಮೋದನೆ ನೀಡಿತ್ತು.
ಇದರ ಅನ್ವಯ ಸುಧಾರಿತ ಬಿ.ಓ.ಓ.ಟಿ (BOOT) ಮಾದರಿಯಂತೆ ಕಾಮಗಾರಿಗಳಿಗೆ ಶೇ 40 ರಷ್ಟು ಮೊತ್ತದ ವಿ.ಜಿ.ಎಫ್‌ಅನ್ನು ನಿಗದಿಪಡಿಸಿತ್ತು. ಉಳಿಕೆ ಮೊತ್ತವನ್ನು ರಿಯಾಯಿತಿದಾರರಿಂದ ಭರಿಸಬೇಕಾಗಿತ್ತು. “ರಿಯಾಯಿತಿ ಮೌಲ್ಯ(TCV)” ಯನ್ನು ನಿಗಧಿಪಡಿಸಿತ್ತಲ್ಲದೇ ರಿಯಾಯಿತಿದಾರರಿಗೆ ಸಂಧಾನಿತ ಒಟ್ಟು ರಿಯಾಯಿತಿ ಮೌಲ್ಯವನ್ನು ಮಾತ್ರ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು. ವಾಹನ ಸಂಚಾರ ದಟ್ಟಣೆಯು ಹೆಚ್ಚುವರಿಯಾದ್ದಲ್ಲಿ 30 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮುಂಚಿತವಾಗಿಯೇ ಗುತ್ತಿಗೆ ಮುಕ್ತಾಯಗೊಳ್ಳುವ ಹಾಗೂ ಒಂದು ವೇಳೆ ಸಂಚಾರ ದಟ್ಟಣೆಯು ಕಡಿಮೆ ಆದರೂ ಸಹ ಗರಿಷ್ಠ 40 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಸಿಮೀತಗೊಳಿಸುವ ಮಾದರಿಯಲ್ಲಿ ಪ್ಯಾಕೇಜ್-1ನ್ನು ರೂಪಿಸಿತ್ತು.
ಈ ಪ್ಯಾಕೇಜ್ 1ರ ಕಾಮಗಾರಿಯಾದ ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ರೇಸ್ ಕೋರ್ಸ್ ರಸ್ತೆಯ ಶೇಷಾದ್ರಿ ರಸ್ತೆಯವರೆಗೆ (Hebbal near Esteem mall junction (Km 0+000) to Sheshadri road, Race Course road junction (Km 8+748) ಹಾಗೆಯೇ ಪ್ಯಾಕೇಜ್2 ರ ಕಾಮಗಾರಿಯಾದ ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್‌ವರೆಗೆ (-Seshadri Road (Km 8+748) to Silk Board (Km 16+745) ಕೈಗೊಳ್ಳಲಾಗಿರುವ ಟೆಂಡರ್‌ಗೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟಕ್ಚರ್ ಲಿಮಿಟೆಡ್ ಅನುಮೋದನೆ ಕೋರಿತ್ತು. ಇದನ್ನಾಧರಿಸಿ ಸರ್ಕಾರದ ಅನುಮೋದನೆಗೆ ಇಲಾಖೆಯು ಪ್ರಸ್ತಾವವನ್ನು ಮಂಡಿಸಿತ್ತು.
ಈ ಎರಡೂ ಕಾಮಗಾರಿಗಳ ಅಂದಾಜು ಪಟ್ಟಿಯ ಮೊತ್ತವನ್ನು ಸುಧಾರಿತ-ಬಿ.ಓ.ಓ.ಟಿ ಆಧಾರದಲ್ಲಿ ದರ ವಿಶ್ಲೇಷಣೆಯಂತೆ ಮತ್ತು ವಾರ್ಷಿಕ ಹೆಚ್ಚುವರಿ 5% ಮತ್ತು ವಾರ್ಷಿಕ ಬಡ್ಡಿದರ ಒಳಗೊಂಡಂತೆ ಲೆಕ್ಕಚಾರ ಮಾಡಲಾಗಿದೆ. ಟೆಂಡರ್ ಮೊತ್ತವು ಪ್ಯಾಕೇಜ್-1ಕಾಮಗಾರಿಗೆ ರೂ.8, 870.06 ಕೋಟಿಗಳು ಮತ್ತು ಪ್ಯಾಕೇಜ್-2ಕಾಮಗಾರಿಗೆ ರೂ.8, 928.00 ಕೋಟಿ ರು ಎಂದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಪ್ಯಾಕೇಜ್ 1 ರ ಕಾಮಗಾರಿಗೆ ವಿಜಿಎಫ್ ಮೊತ್ತ ರೂ 3,508.01 ಕೋಟಿಗಳು ಮತ್ತು ಪ್ಯಾಕೇಜ್-2ಕಾಮಗಾರಿಗೆ ರೂ 3, 571.37 ಕೋಟಿಗಳನ್ನು ನಿಗದಿಪಡಿಸಿರುವ ಇಲಾಖೆಯು 2025ರ ಜುಲೈ 14ರಂದೇ ಟೆಂಡರ್ ಆಹ್ವಾನಿಸಿದೆ. ಇದಾದ ನಂತರ ಪ್ಯಾಕೇಜ್-1 ರ ಕಾಮಗಾರಿಯ ವ್ಯಾಪ್ತಿಗೆ ಬರುವ ಮೇಖ್ರಿ ವೃತ್ತದ ಪ್ರದೇಶದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಸುರಂಗ ಮಾರ್ಗದ ಅಂಶಗಳಲ್ಲಿ ಕೆಲವೊಂದು ಮಾರ್ಪಾಟು ಮಾಡಿಕೊಂಡಿತ್ತು.
ಟೆಂಡರ್‌ಗಿಟ್ಟ ಮೊತ್ತವಾದ 8, 770.06 ಕೋಟಿಗಳನ್ನು ಕಡಿಮೆಗೊಳಿಸಿ ರೂ.8294.00 ಕೋಟಿಗಳಿಗೆ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿತ್ತು. “ಒಟ್ಟು ರಿಯಾಯಿತಿ ಮೌಲ್ಯ (Total Concession Value)” ವು ನೀಡಲಾಗುವ ವಿ.ಜಿ.ಎಫ್‌ಮೊತ್ತದ ಮೇಲೆ ಅವಲಂಬಿತವಾಗಿತ್ತು.
ಈಗಾಗಲೇ ಸರ್ಕಾರದ ಆದೇಶದಲ್ಲಿ ಅನುಮೋದನೆಯಾಗಿದ್ದ ವಿ.ಜಿ.ಎಫ್‌ಮೊತ್ತವನ್ನೇ ನಿಗಧಿಪಡಿಸಿ ಪ್ಯಾಕೇಜ್-1ಕಾಮಗಾರಿಗೆ ನ್ಯಾಯಯುತ ಆಂತರಿಕ ಲಾಭದ ದರ (Equity Internal Rate of Return (EIRR)) ರಂತೆ ಬಂದಂತಹ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” ರೂ.5, 484.32 ಕೋಟಿಗಳು ಮತ್ತು ಪ್ಯಾಕೇಜ್-2ರ ಕಾಮಗಾರಿಗೆ ನ್ಯಾಯಯುತ ಆಂತರಿಕ ಲಾಭದ ದರ (Equity Internal Rate of Return (EIRR)) ರಂತೆ ಬಂದಂತಹ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” 6, 539.40 ಕೋಟಿ ರು ಆಗಿದೆ ಎಂದು ವಿವರಿಸಿದೆ.
ಈ ಟೆಂಡರ್‍ನಲ್ಲಿ ಅದಾನಿ ಎಂಟರ್ ಪ್ರೈಸೆಸ್ ಎಲ್ 1 ಬಿಡ್‌ದಾರನಾಗಿ ಹೊರಹೊಮ್ಮಿತ್ತು. ಪ್ಯಾಕೇಜ್-1ಮತ್ತು ಪ್ಯಾಕೇಜ್-2 ಕಾಮಗಾರಿಗಳ ಎಲ್-1ಬಿಡ್ಡುದಾರರಾದ ಅದಾನಿ ಎಂಟರ್ ಪ್ರೈಸೆಸ್ ಕ್ರಮವಾಗಿ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” ರೂ 10867.50 ಕೋಟಿಗಳು ಮತ್ತು ರೂ 11400.40 ಕೋಟಿಗಳನ್ನು ನಮೂದಿಸಿತ್ತು. ಈ ಮೊತ್ತವು ಟೆಂಡರ್‌ಗಿಟ್ಟ ಒಟ್ಟು ರಿಯಾಯಿತಿ ಮೌಲ್ಯಕ್ಕೆ ಹೋಲಿಸಿದಾಗ ಕ್ರಮವಾಗಿ ಶೇ 98.16 ಮತ್ತು ಶೇ 74.33 ರಷ್ಟಿತ್ತು.
ರಿಯಾಯಿತಿ ಮೌಲ್ಯ ಹೆಚ್ಚಳ ಮಾಡಿದ್ದ ಅದಾನಿ ಎಂಟರ್ ಪ್ರೈಸೆಸ್
ಅದಾನಿ ಎಂಟರ್ ಪ್ರೈಸೆಸ್ ಸಲ್ಲಿಸಿದ್ದ ಒಟ್ಟು ರಿಯಾಯಿತಿ ಮೌಲ್ಯವು ಹೆಚ್ಚಾಗಿತ್ತು. ಇದನ್ನು ಮರು ವಿಶ್ಲೇಷಣೆ ಮಾಡಲು ಕೋರಿತ್ತು. ಈಗಾಗಲೇ ತಯಾರಿಸಲಾದ ಅಂದಾಜು ಪಟ್ಟಿಯಲ್ಲಿ “ಸುರಂಗ ಮಾರ್ಗ ಕೊರೆಯುವ ಯಂತ್ರ (Tunnel Boring Machine)” ದರದ ಸವಕಳಿ ಮೊತ್ತವನ್ನು (Salvage Value) ಅನ್ನು ಶೇ.50ರಷ್ಟು ಮೀಸಲಿರಿಸಿದೆ. ಇದು ಮಾರುಕಟ್ಟೆಯ ಅನುಭವಕ್ಕೆ ವಾಸ್ತವಿಕವಲ್ಲವೆಂದು ಅಂದಾಜು ಪಟ್ಟಿಯನ್ನು ಐಆರ್‍ಸಿ 136 ರಂತೆ ತಯಾರಿಸಿದೆ.
ಈ ಐಆರ್‍ಸಿ 136 ರಂತೆ ತಯಾರಿಸಿರುವ ಅಂದಾಜು ಪಟ್ಟಿಯು ಮೇಲ್ಮೈ ರಸ್ತೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ (At-grade National Highways) ಗೆ ಸಂಬಂಧಿಸಿತ್ತು. ಈ ಅಂದಾಜು ಪಟ್ಟಿಯು “ಸುರಂಗ ಮಾರ್ಗದ ಧೀರ್ಘಾವಧಿ ಕಾರ್ಯಚರಣೆ ಮತ್ತು ನಿರ್ವಹಣೆಗೆ ಅನ್ವಯಿಸುವುದಿಲ್ಲ” ಎಂದು ತಿಳಿಸಿತ್ತು. ಡಿ.ಪಿ.ಆರ್ ಅಂದಾಜು ಪಟ್ಟಿ ಮತ್ತು ರಿಯಾಯಿತದಾರರು ನಮೂದಿಸಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ದರಗಳಲ್ಲಿ ಶೇ.277.26ರಷ್ಟು ವ್ಯತ್ಯಾಸವಿದೆ ಎಂದು ಸಮರ್ಥಿಸಿಕೊಂಡಿತ್ತು. ಅಲ್ಲದೇ ಅದಾನಿ ಎಂಟರ್ ಪ್ರೈಸೆಸ್ ಈ ಬಗ್ಗೆ ಸವಿವರವಾದ ವಿಶ್ಲೇಷಣೆಗಳನ್ನು ಒದಗಿಸಿತ್ತು.
ಈ ಕುರಿತು ದಿ ಫೈಲ್ 2026ರ ಜೂನ್ 23ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




