ಬೆಂಗಳೂರು; ಸುಳ್ಳು ಸುದ್ದಿಗಳ ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ದ ಪಾಲಿಸಿ ಫ್ರಂಟ್ ಗೆ ನೀಡಿರುವ ಕಾರ್ಯಾದೇಶ ಮತ್ತು ಈ ಸಂಬಂಧ ಸಮಗ್ರ ಕಡತವನ್ನು ಎಂಸಿ ಅಂಡ್ ಎ ಯು ನಿರಾಕರಿಸಿದ್ದರ ಬೆನ್ನಲ್ಲೇ ಇದೀಗ ಈ ಕಂಪನಿಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ತಿಂಗಳಿಗೆ 60 ಲಕ್ಷ ರು. ನಂತೆ ವಾರ್ಷಿಕ 7.20 ಕೋಟಿ ರು. ಲೆಕ್ಕದಲ್ಲಿ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿತ್ತು. ಇದನ್ನಾಧರಿಸಿ ತಿಂಗಳಿಗೆ 57.14 ಲಕ್ಷ ರು.ನಂತೆ ಕೆಎಸ್‌ಎಂಸಿ ಅಂಡ್ ಎಯು ‘ದ ಪಾಲಿಸಿ ಫ್ರಂಟ್’ಗೆ 2023ರ ಅಕ್ಟೋಬರ್ 3ರಂದು ಕಾರ್ಯಾದೇಶ ನೀಡಿತ್ತು.
The Poicy Front, no 62, 1 D Cross, Remco Layout, Hampinagar, Bangalore 5601014 ಈ ವಿಳಾಸಕ್ಕೆ ಕಾರ್ಯಾದೇಶ ಪ್ರತಿಯನ್ನು ರವಾನಿಸಿತ್ತು. ಆದರೆ ವಾಸ್ತವದಲ್ಲಿ ಈ ವಿಳಾಸದಲ್ಲಿ ದ ಪಾಲಿಸಿ ಫ್ರಂಟ್’ನ ಕಚೇರಿಯೇ ಇಲ್ಲ ಎಂಬುದು ತಿಳಿದು ಬಂದಿದೆ.
ಕಾರ್ಯಾದೇಶದಲ್ಲಿ ನಮೂದಿಸಿರುವ ವಿಳಾಸದಲ್ಲಿ ಕಂಪನಿಯೂ ಇಲ್ಲವೆಂದಾದ ಮೇಲೆ ಕಂಪನಿಯ ಅಸ್ತಿತ್ವದ ಬಗ್ಗೆ ಈಗಾಗಲೇ ಎದ್ದಿರುವ ಅನುಮಾನಗಳು ಮತ್ತಷ್ಟು ಬಲಗೊಂಡಿದೆ.
ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.
ಸುಳ್ಳು ಸುದ್ದಿಗಳನ್ನು ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್ ಎ ಮೂಲಕ ‘ದ ಪಾಲಿಸಿ ಫ್ರಂಟ್’ ಗೆ ತಿಂಗಳಿಗೆ 60 ಲಕ್ಷ ರು.ನಂತೆ ಒಂದು ವರ್ಷಕ್ಕೆ 7.20 ಕೋಟಿ ರು. ಗುತ್ತಿಗೆ ನೀಡಲಾಗಿತ್ತು. ಈ ಸಂಬಂಧ ‘ದಿ ಫೈಲ್’ ಆರ್‍ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಕೆಎಸ್‌ಎಂಸಿ ಅಂಡ್ ಎ ಯು ಕಡತವನ್ನು ಒದಗಿಸಿರಲಿಲ್ಲ. ಬದಲಿಗೆ ಕೇವಲ ಕಾರ್ಯಾದೇಶ ನೀಡಿ ಕೈತೊಳೆದುಕೊಂಡಿತ್ತು.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಈ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ಪಾಲಿಸಿ ಫ್ರಂಟ್ ಹೆಸರಿನ ಸಂಸ್ಥೆಯೊಂದಿಗೆ ಸರ್ಕಾರವು ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ. ವಾರ್ಷಿಕ ಏಳು ಕೋಟಿ ರೂಪಾಯಿಗೂ ಮೀರಿದ ಈ ಗಣನೀಯ ಒಪ್ಪಂದವನ್ನು ಪಾರದರ್ಶಕವಾಗಿ ಬಹಿರಂಗಪಡಿಸದೆ ನೀಡಲಾಗಿದೆ. ಆರ್‌ಟಿಐ ಕಾಯ್ದೆಯಡಿ ಈ ಬಗ್ಗೆ ಪ್ರಶ್ನಿಸಿದಾಗ ಉತ್ತರ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಪಾರದರ್ಶಕತೆ ಇಲ್ಲದೇ ಖಜಾನೆ ನಿಧಿಯನ್ನು ಹಂಚಿಕೆ ಮಾಡಿದ್ದರೂ ಹೊಣೆಗಾರಿಕೆಯಿಂದ ಏಕೆ ತಪ್ಪಿಸಿಕೊಳ್ಳುತ್ತಿದ್ದಾರೆ, ಇದು ಸರ್ಕಾರದ ನೀತಿಯೇ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.
ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?
ಪಾರದರ್ಶಕತೆಯ ಕೊರತೆಯಿಂದಾಗಿ ಸಾರ್ವಜನಿಕ ನಿಧಿಯ ಜವಾಬ್ದಾರಿಯುತ ಬಳಕೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಷಯದಲ್ಲಿ ಸರ್ಕಾರವು ಜವಾಬ್ದಾರಿಯುತ ಉತ್ತರಗಳನ್ನು ನೀಡಬೇಕು ಮತ್ತು ಇಂತಹ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದರು.
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ 4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.
‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ
ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು. ಆದರೆ ಕೆಎಸ್‌ಎಂಸಿ ಅಂಡ್ ಎ ಕಂಪನಿಯು ತನ್ನ ಹಂತದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು. ಅದಷ್ಟೇ ಅಲ್ಲ, ಕಡತವನ್ನು ಒದಗಿಸಲು ನಿರಾಕರಿಸುವ ಮೂಲಕ ‘ದ ಪಾಲಿಸಿ ಫ್ರಂಟ್’ ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಕಡತ ನಿರಾಕರಿಸಲು ನೀಡಿರುವ ಕಾರಣಗಳಿವು
‘ತಾವು ಕೋರಿರುವ ಮಾಹಿತಿಗಳು ರಾಜ್ಯದ ಆಡಳಿತ ಕಾರ್ಯತಂತ್ರದ ಮತ್ತು ಆರ್ಥಿಕ ಹಿತಾಸಕ್ತಿಯ ವಿಷಯಗಳನ್ನು ಹಾಗೂ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ತಾವು ಕೋರಿರುವ ಮಾಹಿತಿಗಳು ಸಂಸ್ಥೆಯ ಹಾಗೂ ಸರಬರಾಜುದಾರರ/ಟೆಂಡರ್‌ದಾರರ ನಡುವಿನ ಖರೀದಿ ನಿರ್ವಹಣೆಯ ವ್ಯವಹಾರ ಕುರಿತ ಷರತ್ತು ಮತ್ತು ನಿಬಂಧನೆಗಳ ಮಾಹಿತಿಯಾಗಿರುತ್ತದೆ.ಈ ಹಿನ್ನೆಲೆಯಲ್ಲಿ ಸಮಗ್ರ ಕಡತವನ್ನು ಒದಗಿಸಲು ಬರುವುದಿಲ್ಲ,’ ಎಂದು ಕೆಎಸ್‌ಎಂಸಿ ಅಂಡ್ ಎ ಯು ಉತ್ತರ ಒದಗಿಸಿತ್ತು.
‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ನಿಗೂಢ
ವಿಶೇಷವೆಂದರೇ ಆಡಳಿತ ಇಲಾಖೆಯಾದ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸ್ತಾಪಿಸಿರುವ ‘ದ ಪಾಲಿಸಿ ಫ್ರಂಟ್’ ಹೆಸರು ಕೂಡ ನಿಗೂಢವಾಗಿದೆ. ‘ದ ಪಾಲಿಸಿ ಫ್ರಂಟ್’ ಎಂಬುದು ಪ್ರೈವೈಟ್ ಲಿಮಿಟೆಡ್ಡೋ, ಸಾರ್ವಜನಿಕ ಸ್ವಾಮ್ಯದ ಕಂಪನಿಯೋ, ಪಾಲುದಾರಿಕೆ ಕಂಪನಿಯೋ, ಎಲ್‌ಎಲ್‌ಪಿಯೋ, ಸರ್ಕಾರೇತರ ಸಂಸ್ಥೆಯೋ, ಇದು ಯಾರಿಗೆ ಸೇರಿದೆ, ಇದರ ಯೋಜನಾ ನಿರ್ದೇಶಕರು ಯಾರು, ಕಂಪನಿಯೇ ಆಗಿದ್ದಲ್ಲಿ ಇದರ ಮಾಲೀಕರು ಯಾರು, ನಿರ್ದಿಷ್ಟವಾಗಿ ಇದಕ್ಕೇ ಗುತ್ತಿಗೆ ನೀಡಬೇಕು ಎಂದು ಶಿಫಾರಸ್ಸು ಮಾಡಿದವರು ಯಾರು, ಇದರ ಪೂರ್ವಾಪರವೇನು, ಈ ಹಿಂದೆ ಸರ್ಕಾರದ ಯೋಜನೆಗಳು, ಸಾಧನೆಗಳ ಪ್ರಚಾರ, ಸುಳ್ಳು ಸುದ್ದಿಗಳನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸಿತ್ತೇ ಎಂಬುದನ್ನು ಟಿಪ್ಪಣಿ ಹಾಳೆಯಲ್ಲಿ ಎಲ್ಲಿಯೂ ಉಲ್ಲೇಖಿಸದೇ ರಹಸ್ಯವಾಗಿರಿಸಿರುವುದನ್ನು ಸ್ಮರಿಸಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ಕೊಟ್ಟ ಸರ್ಕಾರ
ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು. ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.